Tag: ಪಾಸ್

  • ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್- ಬಸ್ ಪಾಸ್ ಅವಧಿ ವಿಸ್ತರಣೆ

    ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್- ಬಸ್ ಪಾಸ್ ಅವಧಿ ವಿಸ್ತರಣೆ

    ಬೆಂಗಳೂರು: ಪರೀಕ್ಷೆಗಳು ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಬಸ್ ಪಾಸ್ ಅವಧಿಯನ್ನು ಕೆಎಸ್‍ಆರ್ ಟಿಸಿ ವಿಸ್ತರಿಸಿದ್ದು, ಸೆಪ್ಟೆಂಬರ್ ಅಂತ್ಯದ ವರೆಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

    ಕೆಎಸ್‍ಆರ್ ಟಿಸಿ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ಪರೀಕ್ಷೆಗಳು ನಡೆಯುವ ಉದ್ದೇಶದಿಂದ ಬಸ್ ಪಾಸ್ ಅವಧಿ ವಿಸ್ತರಣೆ ಮಾಡಲಾಗಿದೆ. ವೃತ್ತಿಪರ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕಳೆದ ವರ್ಷ ವಿತರಣೆಯಾಗಿರುವ ಪಾಸ್ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

    ಸೆಪ್ಟೆಂಬರ್ ತಿಂಗಳಲ್ಲಿ ವೃತ್ತಿಪರ ಹಾಗೂ ಸ್ನಾತಕೋತ್ತರ ಪರೀಕ್ಷೆಗಳು ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ವರ್ಷದ ಹೊಸ ಪಾಸ್ ವಿತರಣೆಯಾಗಿಲ್ಲ. ಈ ಹಿನ್ನೆಲೆ ಸೆಪ್ಟೆಂಬರ್ ತಿಂಗಳು ಪೂರ್ತಿ ಎಲ್ಲ ಜಿಲ್ಲೆಗಳ ನಗರ ಸಾರಿಗೆಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.

  • ಇನ್ಮುಂದೆ ಅಂತರ್‌ಜಿಲ್ಲಾ ಓಡಾಟಕ್ಕೆ ಪಾಸ್ ಅಗತ್ಯವಿಲ್ಲ

    ಇನ್ಮುಂದೆ ಅಂತರ್‌ಜಿಲ್ಲಾ ಓಡಾಟಕ್ಕೆ ಪಾಸ್ ಅಗತ್ಯವಿಲ್ಲ

    ಬೆಂಗಳೂರು: ಇನ್ಮುಂದೆ ಅಂತರ್‌ಜಿಲ್ಲೆಗಳ ಮಧ್ಯೆ ಬಸ್ಸಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಹೇಗೆ ಪಾಸ್ ಅಗತ್ಯವಿಲ್ಲವೋ, ಅದೇ ರೀತಿ ಅಂತರ್‌ಜಿಲ್ಲೆಗಳ ನಡುವೆ ಖಾಸಗಿ ವಾಹನದಲ್ಲಿ ಸಂಚರಿಸುವ ವ್ಯಕ್ತಿಗಳಿಗೆ ಪಾಸ್ ಅಗತ್ಯವಿಲ್ಲ ಎಂದು ಡಿಜಿಪಿ ಕರ್ನಾಟಕ ಟ್ವೀಟ್ ಮಾಡಿದೆ.

    ಲಾಕ್‍ಡೌನ್ 3 ಜಾರಿಯಾದಾಗ ಯಾವೆಲ್ಲ ಷರತ್ತುಗಳು ಇತ್ತೋ ಆ ಎಲ್ಲ ಷರತ್ತುಗಳು ಅನ್ವಯವಾಗುತ್ತದೆ. ಅಂದರೆ ಖಾಸಗಿ ವ್ಯಕ್ತಿಗಳು ಸೇವಾ ಸಿಂಧು ವೆಬ್‍ಸೈಟ್ ಮೂಲಕ ದಾಖಲೆಗಳನ್ನು ಸಲ್ಲಿಸಿ ಪಾಸ್ ಪಡೆದು ತೆರಳಬೇಕಾಗುತ್ತದೆ ಎಂಬ ನಿಯಮ ಈ ಹಿಂದೆ ಇತ್ತು. ಆದರೆ ಈ ನಿಯಮವನ್ನು ಈಗ ಕೈಬಿಡಲಾಗಿದ್ದು, ಅಂತರ್‌ಜಿಲ್ಲೆಗೆ ಖಾಸಗಿ ವಾಹನದಲ್ಲಿ ಸಂಚರಿಸುವ ವ್ಯಕ್ತಿಗಳಿಗೆ ಪಾಸ್ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

    ಈ ಹಿಂದಿನ ನಿಯಮದ ಪ್ರಕಾರ, ಸರ್ಕಾರಿ ನೌಕರರು, ಸಿಬ್ಬಂದಿಗೆ, ಕಂಪನಿಗಳ ಉದ್ಯೋಗಿಗಳಿಗೆ ಅಂತರ್‌ಜಿಲ್ಲಾ ಪಾಸ್ ಅಗತ್ಯವಿಲ್ಲ. ಈ ವ್ಯಕ್ತಿಗಳು ಪೊಲೀಸರಿಗೆ ಐಡಿ ಕಾರ್ಡ್ ತೋರಿಸಿದರೆ ಅನುಮತಿ ನೀಡಲಾಗುತ್ತದೆ. ಹಾಗೆಯೇ ಟ್ಯಾಕ್ಸಿ ಯಲ್ಲಿ ಚಾಲಕರೊಂದಿಗೆ ಇಬ್ಬರು, ಮ್ಯಾಕ್ಸಿ ಕ್ಯಾಬ್ ನಲ್ಲಿ ಮೂರು ಜನ ಮತ್ತು ಚಾಲಕರು ಪ್ರಯಾಣಿಸಲು ಅನುಮತಿ ನೀಡಲಾಗುತ್ತದೆ. ಆದರೆ ಪ್ರಯಾಣಿಕರಿಗೆ ಪಾಸ್ ಕಡ್ಡಾಯ ಎಂದು ಸೂಚಿಸಲಾಗಿತ್ತು. ಆದರೆ ಈಗ ಖಾಸಗಿ ವಾಹನದಲ್ಲಿ ಹೋಗುವವರಿಗೂ ಪಾಸ್ ಅಗತ್ಯವಿಲ್ಲ. ಆದರೆ ಲಾಕ್‍ಡೌನ್ ನಿಯಮವನ್ನು ಪಾಲಿಸಬೇಕು, ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಯಾವುದೇ ಖಾಸಗಿ ವಾಹನಗಳು ಸಂಚರಿಸುವಂತಿಲ್ಲ ಎಂದು ತಿಳಿಸಿದೆ.

  • ಹೊರ ರಾಜ್ಯದಲ್ಲಿರುವ ಕನ್ನಡಿಗರು ರಾಜ್ಯಕ್ಕೆ ಬರಬಹುದು – ಷರತ್ತುಗಳು ಅನ್ವಯ

    ಹೊರ ರಾಜ್ಯದಲ್ಲಿರುವ ಕನ್ನಡಿಗರು ರಾಜ್ಯಕ್ಕೆ ಬರಬಹುದು – ಷರತ್ತುಗಳು ಅನ್ವಯ

    ಬೆಂಗಳೂರು: ಹೊರ ರಾಜ್ಯದಲ್ಲಿರುವ ಕನ್ನಡಿಗರು ಇನ್ನು ಮುಂದೆ ಕರ್ನಾಟಕಕ್ಕೆ ಬರಬಹುದು. ಲಾಕ್‍ಡೌನ್ ಘೋಷಣೆಗೂ ಮುನ್ನ ನೆರೆ ರಾಜ್ಯಕ್ಕೆ ಹೋಗಿರುವ ಕನ್ನಡಿಗರು ಪಾಸ್ ಪಡೆಯುವ ಮೂಲಕ ಮರಳಿ ಕರ್ನಾಟಕಕ್ಕೆ ಬರಬಹುದು.

    ರಾಜ್ಯಕ್ಕೆ ಬರುವ ಕನ್ನಡಿಗರು ಸೇವಾ ಸಿಂಧು ವೆಬ್‍ಸೈಟ್‍ಗೆ ತೆರಳಿ ವಿವರಗಳನ್ನು ನೀಡಬೇಕಾಗುತ್ತದೆ. ಈ ಎಲ್ಲ ವಿವರಗಳು ಸರಿಯಾಗಿದ್ದರೆ ಇ ಪಾಸ್ ಡೌನ್‍ಲೋಡ್ ಮಾಡಬಹುದು.

    ಇ ಪಾಸ್ ಸಿಕ್ಕಿದ ದಿನದಿಂದ ಒಂದು ವಾರದ ವರೆಗೆ ಮಾತ್ರ ಈ ಪಾಸ್ ಉರ್ಜಿತದಲ್ಲಿರುತ್ತದೆ. ಸ್ವಂತ ವಾಹನ, ಬಾಡಿಗೆ ವಾಹನ ಅಥವಾ ಬಸ್ ಇವುಗಳ ಮೂಲಕ ಬರಬಹುದು.

    ವಾಹನದಲ್ಲಿ ಬರಬೇಕಾದರೆ ಸಾಮಾಜಿಕ ಅಂತರ ಕಾಪಾಡಿಕೊಂಡು ಕುಳಿತುಕೊಳ್ಳಬೇಕು. ಒಂದು ಕಾರಿನಲ್ಲಿ ಗರಿಷ್ಟ 3 ಮಂದಿ, ಎಸ್‍ಯುವಿ ವಾಹನದಲ್ಲಿ 5, ವ್ಯಾನ್ ನಲ್ಲಿ 10 ಮಂದಿ, ಬಸ್ ನಲ್ಲಿ ಗರಿಷ್ಟ 25 ಮಂದಿ ಪ್ರಯಾಣಿಸಬಹುದು.

    ಯಾವ ಚೆಕ್ ಪೋಸ್ಟ್ ಮೂಲಕ ಅನುಮತಿ ನೀಡಲಾಗಿದೆಯೋ ಆ ಚೆಕ್ ಪೋಸ್ಟ್ ಮೂಲಕ ಮಾತ್ರ ಪ್ರವೇಶ ನೀಡಲಾಗುತ್ತದೆ.

    ವೆಬ್‍ಸೈಟಿಗ್ ಭೇಟಿ ನೀಡಲು ಕ್ಲಿಕ್ ಮಾಡಿ:  www.sevasindhu.karnataka.gov.in/

  • ಈಗ ಒನ್ ವೇಯಲ್ಲ, ಊರಿಗೆ ಹೋಗಿ ಮರಳಿ ಬರೋ ಪಾಸ್ ಸಿಗುತ್ತೆ

    ಈಗ ಒನ್ ವೇಯಲ್ಲ, ಊರಿಗೆ ಹೋಗಿ ಮರಳಿ ಬರೋ ಪಾಸ್ ಸಿಗುತ್ತೆ

    ಬೆಂಗಳೂರು: ಇನ್ನು ಮುಂದೆ ಕರ್ನಾಟಕದ ಜಿಲ್ಲೆಗಳಿಗೆ ಹೋಗಿ ಮರಳಿ ಬರಬಹುದು. ಇಲ್ಲಿಯವರೆಗೆ ಒಂದು ಬಾರಿ ಹೋಗಲು ಮಾತ್ರ ಪಾಸ್ ನೀಡಲಾಗುತ್ತಿತ್ತು. ಆದರೆ ಈಗ ಹೋಗಿ ಬರಲು ಪಾಸ್ ನೀಡಲಾಗುತ್ತಿದೆ.

    “ಬೆಂಗಳೂರಿನಿಂದ ಕಾರ್ಮಿಕರಿಗೆ ಅವರ ಊರಿಗೆ ತೆರಳಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ನಾವು ಕಳೆದ ಒಂದೂವರೆ ತಿಂಗಳಿನಿಂದ ಹಳ್ಳಿಯಲ್ಲಿದ್ದೇವೆ. ಬೆಂಗಳೂರಿಗೆ ಬರಲು ಬಸ್ ವ್ಯವಸ್ಥೆಯಿಲ್ಲ. ಖಾಸಗಿ ವಾಹನದ ವ್ಯವಸ್ಥೆ ಮಾಡಬೇಕಾದರೆ ಬೆಂಗಳೂರಿನಿಂದಲೇ ಮಾಡಬೇಕು. ಆದರೆ ಆ ವಾಹನ ಮರಳಿ ಬೆಂಗಳೂರಿಗೆ ಬರಲು ಸಾಧ್ಯವಿಲ್ಲ. ಹೀಗಾಗಿ ಖಾಸಗಿ ವಾಹನದಲ್ಲಿ ಒಂದು ಬಾರಿ ಹೋಗಲು ಮತ್ತು ಬರಲು ಪಾಸ್ ನೀಡಬೇಕು” ಎಂದು ಹಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ನೋವನ್ನು ತೋಡಿಕೊಂಡಿದ್ದರು. ಈ ಮನವಿಗೆ ಸರ್ಕಾರ ಸ್ಪಂದಿಸಿ ಹೋಗಿ, ಬರುವ ಪಾಸ್ ವಿತರಿಸಲು ತೀರ್ಮಾನಿಸಿದೆ.

    ಏನು ಮಾಹಿತಿ ನೀಡಬೇಕು?
    ಈ ಪಾಸ್ ಮೂಲಕ ನಿರ್ಬಂಧ ಇಲ್ಲದ ರಾಜ್ಯದ ಯಾವುದೇ ಭಾಗಗಳಿಗೆ ಹೋಗಿ ಬರಬಹುದಾಗಿದೆ. ವಾಹನದ ದಾಖಲೆ, ಈಗ ಇರುವ ಸ್ಥಳ, ತೆರಳುವ ಸ್ಥಳ, ಮೊಬೈಲ್ ಸಂಖ್ಯೆ, ವಾಹನ ಸಂಖ್ಯೆ, ವಾಹನದಲ್ಲಿ ಪ್ರಯಾಣಿಸುವ ವ್ಯಕ್ತಿಗಳ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿದ ಬಳಿಕ ಒಂದು ಕ್ಯೂಆರ್ ಕೋಡ್ ಬರುತ್ತದೆ. ಈ ಕ್ಯೂಆರ್ ಕೋಡ್ ಜೊತೆಗೆ ನೀವು ಸಲ್ಲಿಕೆ ಮಾಡಿದ ವಿವರಗಳಿರುವ ಇ-ಪಾಸ್ ಲಭ್ಯವಾಗುತ್ತದೆ. ಇದರ ಜೊತೆ ಯಾವ ಪೊಲೀಸರು ಈ ಪಾಸ್ ನೀಡಿದ್ದಾರೆ ಎಂಬ ವಿವರ ಇರುತ್ತದೆ.

    ಪಾಸ್ ಪಡೆಯಲು ಕ್ಲಿಕ್ ಮಾಡಿ: www://kspclearpass.idp.mygate.com/otp

  • ಖಾಸಗಿ ವಾಹನದಲ್ಲಿ ಊರಿಗೆ ತೆರಳುವ ಜನರಿಗೆ ಶಾಕ್ – ಪಾಸ್‍ಗೆ ಸರ್ಕಾರದಿಂದ ಬ್ರೇಕ್

    ಖಾಸಗಿ ವಾಹನದಲ್ಲಿ ಊರಿಗೆ ತೆರಳುವ ಜನರಿಗೆ ಶಾಕ್ – ಪಾಸ್‍ಗೆ ಸರ್ಕಾರದಿಂದ ಬ್ರೇಕ್

    ಬೆಂಗಳೂರು: ಲಾಕ್‍ಡೌನ್‍ನಿಂದ ತಮ್ಮ ಊರಿಗೆ ತೆರೆಳಲು ಒದ್ದಾಡುತ್ತಿರುವ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಿಕರು ಮತ್ತಿತರರಿಗೆ ಸರ್ಕಾರ ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ಆದರೆ ಈಗ ಖಾಸಗಿ ವಾಹನಗಳಲ್ಲಿ ಊರಿಗೆ ತೆರೆಳಲು ಹೊರಟಿದ್ದ ಮಂದಿಗೆ ಸರ್ಕಾರ ಶಾಕ್ ನೀಡಿದ್ದು, ಖಾಸಗಿ ವಾಹನಗಳಿಗೆ ಪಾಸ್ ನೀಡದಂತೆ ಆದೇಶಿಸಿದೆ.

    ಖಾಸಗಿ ವಾಹನದಲ್ಲಿ ಊರಿಗೆ ತೆರಳಲು ಬಯಸುವವರು ಪಾಸ್ ಪಡೆದು ಹೋಗಬಹುದು ಎಂದು ಶನಿವಾರ ಆದೇಶ ಮಾಡಿದ್ದ ಸರ್ಕಾರ ತನ್ನ ಆದೇಶವನ್ನು ವಾಪಸ್ ಪಡೆದಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಉಚಿತ ಬಸ್ ವ್ಯವಸ್ಥೆ ಮಾಡಿರುವ ಕಾರಣಕ್ಕೆ ಖಾಸಗಿ ವಾಹನಗಳಿಗೆ ಅವಕಾಶ ಇಲ್ಲ. ಖಾಸಗಿ ವಾಹನಕ್ಕೆ ಯಾವುದೇ ರೀತಿಯ ಪಾಸ್ ನೀಡದಂತೆ ಸರ್ಕಾರದಿಂದ ಪೊಲೀಸರಿಗೆ ಮೌಖಿಕ ಆದೇಶ ರವಾನಿಸಲಾಗಿದೆ.

    ಇಂದಿನಿಂದ ಯಾವುದೇ ಪಾಸ್ ವಿತರಣೆ ಇಲ್ಲ, ಖಾಸಗಿ ವಾಹನದಲ್ಲಿಯೇ ತೆರಳಬೇಕು ಎಂದರೆ ಸ್ವಲ್ಪ ದಿನ ಕಾಯಬೇಕಾಗುತ್ತದೆ. ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವ್ಯಕ್ತಿಯೊಬ್ಬರು ನಾವು ಪಾಸ್ ಪಡೆಯಲೆಂದು ನಾವು ಡಿಸಿಪಿ ಕಚೇರಿಗೆ ತೆರಳಿದಾಗ ನಮಗೆ ಯಾವುದೇ ಆದೇಶ ಬಂದಿಲ್ಲ ಎಂದು ತಿಳಿಸಿದ್ದಾರೆ. ಈಗ ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

    ಈ ಹಿಂದೆ ಸರ್ಕಾರ ಹೊರಡಿಸಿದ ಆದೇಶದಲ್ಲಿ, ಒಂದು ದಿನ, ಒಂದು ಕಡೆಗೆ ಹೋಗಲು ಮಾತ್ರ ಈ ಪಾಸ್ ಬಳಸಬಹುದು. ಅಂತರ್ ಜಿಲ್ಲೆಗಳಿಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ತಮ್ಮ ಆದೇಶದಲ್ಲಿ ಪ್ರಕಟಿಸಿದ್ದರು. ಪಾಸ್ ಬೇಕಾದವರು ತಮ್ಮ ದಾಖಲೆಗಳನ್ನು ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಥವಾ ಕಮಿಷನರೇಟ್‍ಗಳಲ್ಲಿ ಉಪ ಪೊಲೀಸ್ ಕಮಿಷನರ್ ಗೆ ನೀಡಿ ಅವರಿಂದ ಪಾಸ್‍ಗಳನ್ನು ಪಡೆಯಲು ಅವಕಾಶ ನೀಡಲಾಗಿತ್ತು.

    ಊರುಗಳಿಗೆ ಹಿಂತಿರುಗುವ ಜನರ ಪ್ರಯಾಣದ ಸಮಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶ, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಪಾಸ್ ಪಡೆದವರು ಪ್ರಯಾಣಿಸುವ ಜಿಲ್ಲೆಗಳಲ್ಲಿ ಅಧಿಕಾರಿಗಳು ಆರೋಗ್ಯ ತಪಾಸಣೆ ನಡೆಸಬೇಕು. ಒಂದ ವೇಳೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ ಕೂಡಲೇ ಅವರನ್ನು ಕೋವಿಡ್ ಆಸ್ಪತ್ರೆಗೆ ಕಳುಹಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.

  • ಪಾಸ್ ಪಡೆದು ಊರಿಗೆ ತೆರಳಿ – ಷರತ್ತುಗಳು ಅನ್ವಯ

    ಪಾಸ್ ಪಡೆದು ಊರಿಗೆ ತೆರಳಿ – ಷರತ್ತುಗಳು ಅನ್ವಯ

    ಬೆಂಗಳೂರು: ಲಾಕ್‍ಡೌನ್3 ಘೋಷಣೆಯಾಗಿರುವುರಿಂದ ವಿವಿಧ ಸ್ಥಳಗಳಲ್ಲಿ ಸಿಕ್ಕಿಹಾಕಿಕೊಂಡು ಊರಿಗೆ ಹೋಗಲು ಪರದಾಡುತ್ತಿರುವ ಕಾರ್ಮಿಕರು, ಯಾತ್ರಿಕರು, ವಿದ್ಯಾರ್ಥಿಗಳು ಮತ್ತಿತರರಿಗೆ ಅನುಕೂಲವಾಗುವಂತೆ ಒಂದು ದಿನ ಅಥವಾ ಒಂದು ಕಡೆಗೆ ಹೋಗಲು ಪಾಸ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

    ಒಂದು ದಿನ, ಒಂದು ಕಡೆಗೆ ಹೋಗಲು ಮಾತ್ರ ಈ ಪಾಸ್ ಬಳಸಬಹುದು. ಅಂತರ್ ಜಿಲ್ಲೆಗಳಿಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ತಮ್ಮ ಆದೇಶದಲ್ಲಿ ಪ್ರಕಟಿಸಿದ್ದಾರೆ.

    ಪಾಸ್ ಬೇಕಾದವರು ತಮ್ಮ ದಾಖಲೆಗಳನ್ನು ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಥವಾ ಕಮಿಷನರೇಟ್‍ಗಳಲ್ಲಿ ಉಪ ಪೊಲೀಸ್ ಕಮಿಷನರ್ ಗೆ  ಪಾಸ್‍ಗಳನ್ನು ವಿತರಿಸಲು ಅಧಿಕಾರ ನೀಡಲಾಗಿದೆ.

    ಊರುಗಳಿಗೆ ಹಿಂತಿರುಗುವ ಜನರ ಪ್ರಯಾಣದ ಸಮಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶ, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

    ಪಾಸ್ ಪಡೆದವರು ಪ್ರಯಾಣಿಸುವ ಜಿಲ್ಲೆಗಳಲ್ಲಿ ಅಧಿಕಾರಿಗಳು ಆರೋಗ್ಯ ತಪಾಸಣೆ ನಡೆಸಬೇಕು. ಒಂದ ವೇಳೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ ಕೂಡಲೇ ಅವರನ್ನು ಕೋವಿಡ್ ಆಸ್ಪತ್ರೆಗೆ ಕಳುಹಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

  • ಮಗುವಿನ ರೀತಿ ಪತಿಯನ್ನ ಕಾಳಜಿ ಮಾಡಿದ್ರೂ ಪತ್ನಿ ಕಣ್ಣೀರು

    ಮಗುವಿನ ರೀತಿ ಪತಿಯನ್ನ ಕಾಳಜಿ ಮಾಡಿದ್ರೂ ಪತ್ನಿ ಕಣ್ಣೀರು

    – ದಿನದ 24 ಗಂಟೆಯೂ ಗಂಡನ ಕಾವಲು
    – ಮಂಗಳೂರು ವೃದ್ಧನ ಪತ್ನಿಯ ನೋವು ಕೇಳಿದ್ರೆ ಮನಕಲುಕುತ್ತೆ

    ಮಂಗಳೂರು: ಸಾಮಾನ್ಯವಾಗಿ ಪತ್ನಿ, ಪತಿಯ ಯಶಸ್ಸು, ನೋವು, ಬೇಸರ ಮತ್ತು ಕಣ್ಣೀರಿನಲ್ಲಿಯೂ ಜೊತೆಯಲ್ಲಿಯೇ ಇರುತ್ತಾರೆ. ಪತಿಗೆ ಹುಷಾರಿಲ್ಲ ಎಂದರೆ ಒಂದು ಮಗುವನ್ನು ನೋಡಿಕೊಳ್ಳುವ ರೀತಿಯಲ್ಲಿ ಗಂಡನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇದೇ ರೀತಿ ಮಂಗಳೂರಿನಲ್ಲಿ ಪತ್ನಿಯೊಬ್ಬರು ತಮ್ಮ ಪತಿಯನ್ನು ದಿನದ 24 ಗಂಟೆಗಳ ಕಾಲ ಕಾಯುತ್ತಾ ಅವರನ್ನು ಕಣ್ಣಿನ ರೆಪ್ಪೆ ತರ ನೋಡಿಕೊಳ್ಳುತ್ತಿದ್ದಾರೆ. ಆ ಪತ್ನಿಯ ಕಷ್ಟ, ನೋವು ನೋಡಿದರೆ ಪ್ರತಿಯೊಬ್ಬರ ಮನಕಲುಕುತ್ತದೆ.

    ಕಳೆದ ದಿನ ಮಂಗಳೂರಿನಲ್ಲಿ ಪೊಲೀಸರು ವೃದ್ಧರೊಬ್ಬರ ಬಳಿ ಪಾಸ್ ತೋರಿಸುವಂತೆ ಕೇಳಿದ್ದರು. ಆದರೆ ಆ ವೃದ್ಧ ಪೊಲೀಸರಿಗೆ ಅವಾಚ್ಯ ಪದಗಳಿಂದ ಬೈದಿದ್ದರು. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲದೇ ಅನೇಕರು ವೃದ್ಧರನ್ನು ಟೀಕಿಸುತ್ತಿದ್ದರು. ಆದರೆ ನಾವು ಒಂದು ಘಟನೆಯನ್ನು ಒಂದೇ ದೃಷ್ಟಿಕೋನದಿಂದ ನೋಡದೇ ಬೇರೆ ರೀತಿಯಲ್ಲಿ ಯೋಚನೆ ಮಾಡಿದಾಗ ಮಾತ್ರ ನಮಗೆ ನಿಜವಾದ ಪರಿಸ್ಥಿತಿ ಅರ್ಥವಾಗುತ್ತದೆ.

    ಮಂಗಳೂರಿನಲ್ಲಿ ನಡೆದ ಪೊಲೀಸ್ ಮತ್ತು ವೃದ್ಧರ ಮಾತಿನ ಚಕಮಕಿಯ ಸಂಪೂರ್ಣ ವಿವರವನ್ನು ಮಂಗಳೂರು ನಿವಾಸಿ ಗೋಪಿ ಭಟ್ ವಿವರಿಸಿದ್ದಾರೆ. ಈ ಬಗ್ಗೆ ಫೇಸ್‍ಬುಕ್‍ಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ವೃದ್ಧರ ಬಗ್ಗೆ ತಿಳಿಸಿದ್ದಾರೆ.

    ವಿಡಿಯೋದಲ್ಲಿ ಹೇಳಿದ್ದೇನು?
    ಮಂಗಳೂರಿನಲ್ಲಿ ಹಿರಿಯ ವ್ಯಕ್ತಿಯ ಬಳಿ ಪೊಲೀಸ್ ಪಾಸ್ ಕೇಳಿದ್ದರು. ನಂತರ ಏನೆಲ್ಲಾ ಆಯಿತು ಎಂಬುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ವ್ಯಕ್ತಿಯ ಕುಟುಂಬದರು, ಸಂಬಂಧಿಕರು, ನೆರೆಹೊರೆಯವರಿಗೆ ಆ ವ್ಯಕ್ತಿಯ ಪರಿಸ್ಥಿತಿಯ ಬಗ್ಗೆ ಗೊತ್ತಿದೆ. ಆದರೆ ಪೊಲೀಸರ ಜೊತೆ ಆ ವ್ಯಕ್ತಿ ನಡೆದುಕೊಂಡು ರೀತಿ ಎಲ್ಲರಿಗೂ ಆಕ್ರೋಶ ತರಿಸುತ್ತದೆ. ಆದರೆ ನಾವು ಆ ವ್ಯಕ್ತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದರು.

    ಆ ವ್ಯಕ್ತಿಗೆ 79 ವರ್ಷ. ಅವರಿಗೆ ಡಿಮೆನ್ಷಿಯಾ ಕಾಯಿಲೆ ಇದೆ. ಅಂದರೆ ಈ ಕಾಯಿಲೆ ಇರುವವರು ಆ ಸಂದರ್ಭದಲ್ಲಿ ಏನು ಮಾಡುತ್ತಿದ್ದೇನೆ ಎಂಬುದೇ ಗೊತ್ತಿರಲ್ಲ. ಒಂದು ಕಡೆಯಿಂದ ಎಲ್ಲರೂ ಆ ವ್ಯಕ್ತಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಆದರೆ ಅವರಿಗೆ 79 ವರ್ಷವಾದರೂ ಕೂಡ ಅವರ ಪತ್ನಿ ದಿನದ 24 ಗಂಟೆಯೂ ಅವರ ಮೇಲೆ ಗಮನ ಹಿಡುತ್ತಿದ್ದಾರೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಇಬ್ಬರು ಮದುವೆಯಾಗಿ ಹೊರದೇಶದಲ್ಲಿದ್ದಾರೆ. ಇಲ್ಲಿ ಹೆಂಡತಿ ಮತ್ತು ಗಂಡ ಇಬ್ಬರೇ ಇರುವುದು. ಹೆಂಡತಿಗೂ ಕೂಡ 60ರ ಮೇಲೆ ವಯಸ್ಸಾಗಿದೆ ಎಂದು ತಿಳಿಸಿದರು.

    ಪತಿಗೆ ಇಂತಹ ಕಾಯಿಲೆ ಬಂದರೆ ಹಿರಿಯ ಹೆಂಗಸು ಹೇಗೆ ನೋಡಿಕೊಳ್ಳುವುದು, ಎಷ್ಟು ಕಷ್ಟವಾಗುತ್ತದೆ ಎಂಬುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಒಂದು ಮಗು ಯಾವಾಗ ಸಿಟ್ಟು ಮಾಡಿಕೊಳ್ಳುತ್ತದೋ, ಯಾವಾಗ ಹೇಳಿದ ಮಾತು ಕೇಳುವುದಿಲ್ಲವೂ, ಅದೇ ರೀತಿ ಈ ಹಿರಿಯ ವ್ಯಕ್ತಿ ಇದ್ದಾರೆ. ಒಂದು ಮಗುವಿನ ರೀತಿ ಗಂಡನನ್ನು ನೋಡಿಕೊಳ್ಳುತ್ತಿದ್ದಾರೆ. ಆ ವ್ಯಕ್ತಿಗೆ ಹಿಂದಿನ ಚಟುವಟಿಕೆಗಳು ಮಾತ್ರ ನೆನಪಿದೆ. ಅಂದರೆ ಡ್ರೆಸ್ ಮಾಡಿಕೊಳ್ಳುವುದು, ಹೊರಗೆ ಹೋಗುವುದು. ಆದರೆ ಅವರಿಗೆ ವಾಸ್ತವವಾಗಿ ಏನು ಆಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಆ ಕಾಯಿಲೆ ಹೆಸರನ್ನು ಡಿಮೆನ್ಷಿಯಾ ಎಂದು ವೈದ್ಯರು ಹೇಳುತ್ತಾರೆ.

    ಇಡೀ ರಾತ್ರಿ ಅವರ ಪತಿ ಹೊರಗೆ ಹೋಗದಂತೆ ನೋಡಿಕೊಳ್ಳುತ್ತಾರೆ. ಆದರೆ ಶುಕ್ರವಾರ ಮಧ್ಯಾಹ್ನ ಅಕಸ್ಮಾತ್ ಆಗಿ ಮನೆಯವರಿಗೆ ಗೊತ್ತಿಲ್ಲದಂತೆ ಕಾರಿನಲ್ಲಿ ಹೊರಗೆ ಹೋಗಿದ್ದಾರೆ. ಪತಿ ಮನೆಯಲ್ಲಿ ಇಲ್ಲದಿರುವುದನ್ನು ತಿಳಿದು ತಕ್ಷಣ ವೈದ್ಯರಿಗೆ, ಸಂಬಂಧಿಕರಿಗೆ ಮತ್ತು ಪೊಲೀಸರಿಗೆ ಫೋನ್ ಮಾಡಿ ಕೇಳುತ್ತಾರೆ. ಆದರೆ ಮಂಗಳೂರಿನ ಲಾಲ್‍ಬಾಗ್‍ನಲ್ಲಿ ಪೊಲೀಸರು ತಮ್ಮ ಕರ್ತವ್ಯ ಮಾಡಿದ್ದಾರೆ. ಆದರೆ ಆ ವ್ಯಕ್ತಿಗೆ ಪ್ರಸ್ತುತ ಏನು ಆಗುತ್ತಿದೆ ಗೊತ್ತಿಲ್ಲ. ಪಾಸ್ ಕೇಳುವಾಗ ಯಾವ ಪಾಸ್ ಎಂದು ಕೇಳಿದ್ದಾರೆ. ಅವರಿಗೆ ಕಿವಿ ಕೂಡ ಕೇಳುವುದಿಲ್ಲ. ಇದರಿಂದ ಆ ವ್ಯಕ್ತಿಗೆ ಕೋಪ ಬಂದು ಪೊಲೀಸರಿಗೆ ಅವಾಚ್ಯ ಪದದಿಂದ ಬೈದಿದ್ದಾರೆ, ಅದು ಖಂಡನಿಯಾ. ಆದರೆ ಅವರು ಪ್ರಜ್ಞಾ ಸ್ಥಿತಿಯಲ್ಲಿದ್ದು ಬೈದಿದ್ದಾರಾ ಎಂಬುದು ಮುಖ್ಯವಾಗುತ್ತದೆ.

    ಕೆಲವೇ ಕ್ಷಣಗಳಲ್ಲಿ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ. ಆದರೆ ನಮಗೆ ಅವರ ಪರಿಸ್ಥಿತಿ ಬಗ್ಗೆ ಗೊತ್ತಿದೆ. ಹೀಗಾಗಿ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ. ಅವರ ಪತ್ನಿ ಇಂದಿಗೂ ಕಣ್ಣೀರು ಹಾಕುತ್ತಿದ್ದಾರೆ. ಆದರೂ ಪೊಲೀಸರು ಅವರ ಕರ್ತವ್ಯ ಮಾಡಿದ್ದಾರೆ ಎಂದು ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

    ಅವರು ಒಬ್ಬರೇ ಪೊಲೀಸ್ ಠಾಣೆಗೆ ಹೋಗಿ ಜಾಮೀನಿನ ಮೂಲಕ ಬಿಡಿಸಿಕೊಂಡು ಬಂದಿದ್ದಾರೆ. ಹೀಗಾಗಿ ನಾವು ಮಾನವೀಯತೆ ದೃಷ್ಟಿಯಿಂದ ನೋಡಬೇಕು. ಆದ್ದರಿಂದ ನಾವು ಒಂದೇ ದೃಷ್ಟಿಕೋನದಿಂದ ನೋಡುವುದು ಬೇಡ, ಆ ವ್ಯಕ್ತಿಯ ಪರಿಸ್ಥಿತಿ, ಪತ್ನಿಯ ಕಷ್ಟವನ್ನು ನೋಡಬೇಕು. ಈ ರೀತಿಯ ವಿಡಿಯೋ ಶೇರ್ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.

  • ಬೆಂಗ್ಳೂರಿಗೆ ಹೋಗಲು ಸತ್ತ ಅಪ್ಪನನ್ನೇ ಮತ್ತೆ ಸಾಯಿಸಿದ

    ಬೆಂಗ್ಳೂರಿಗೆ ಹೋಗಲು ಸತ್ತ ಅಪ್ಪನನ್ನೇ ಮತ್ತೆ ಸಾಯಿಸಿದ

    – ‘ಕೈ’ ಮುಖಂಡನ ‘ಪಾಸ್’ ನಾಟಕ

    ಹುಬ್ಬಳ್ಳಿ: ಕೊರೊನಾದಿಂದ ಮದುವೆ, ಸಭೆ-ಸಮಾರಂಭ ಎಲ್ಲ ಕ್ಯಾನ್ಸಲ್ ಆಗಿದೆ. ಸಂಬಂಧಿಕರು ಸತ್ತರೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ಹೀಗಾಗಿ ಕೆಲವೆಡೆ ಮಾನವೀಯ ದೃಷ್ಟಿಯಿಂದ ಪೊಲೀಸರು ಬಿಟ್ಟುಕಳಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡನೊಬ್ಬ ಐದು ವರ್ಷದ ಹಿಂದೆಯೇ ಸತ್ತ ತಂದೆಯನ್ನೇ ಮತ್ತೊಮ್ಮೆ ಸತ್ತಿರುವುದಾಗಿ ಸುಳ್ಳು ಹೇಳಿ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಜಿಲ್ಲಾಡಳಿತದಿಂದ ಪಾಸ್ ಪಡೆದು ದುರ್ಬಳಕೆ ಮಾಡಿಕೊಂಡಿರುವುದು ಬಯಲಿದೆ ಬಂದಿದೆ.

    ಹುಬ್ಬಳ್ಳಿಯ ಕೈ ಮುಖಂಡ, ಕರ್ನಾಟಕ ರಕ್ಷಣಾ ದಳದ ರಾಜಾದ್ಯಕ್ಷ ಸೋಮಲಿಂಗ್ ಯಲಿಗಾರ ಜಿಲ್ಲಾಡಳಿತದ ಪಾಸ್ ದುರ್ಬಳಕೆ ಮಾಡಿಕೊಂಡಿರುವುದು ಇದೀಗ ದಾಖಲೆ ಸಮೇತ ಬಯಲಾಗಿದೆ. ಕೈ ಮುಖಂಡ ಸೋಮಲಿಂಗ್ ಯಲಿಗಾರ ತಮ್ಮ ತಂದೆ ಬೆಂಗಳೂರಿನಲ್ಲಿ ಮೃತಪಟ್ಟಿರುವುದಾಗಿ ಹೇಳಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಧಾರವಾಡ ಜಿಲ್ಲಾಡಳಿತದಿಂದ ಪಾಸ್ ಪಡೆದಿದ್ದರು. ಆದರೆ 5 ವರ್ಷದ ಹಿಂದೆಯೇ ಇವರ ತಂದೆ ಮೃತಪಟ್ಟಿದ್ದಾರೆ.

    ಅಲ್ಲದೇ ಪಾಸ್ ವಿತರಣೆ ವೇಳೆ ಜಿಲ್ಲಾಡಳಿತ ಬೆಂಗಳೂರಿನಿಂದ ಮರಳಿ ಹುಬ್ಬಳ್ಳಿಗೆ ಬಾರದಂತೆ ಪ್ರಯಾಣಕ್ಕೆ ನಿರ್ಬಂಧ ವಿಧಿಸಿ ಪಾಸ್ ವಿತರಣೆ ಮಾಡಿದೆ. ಆದರೆ ಸ್ವತಃ ಕಾರಿನಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಸೋಮಲಿಂಗ್ ಯಲಿಗಾರ ಜಿಲ್ಲಾಡಳಿತದ ಪಾಸ್ ದುರ್ಬಳಕೆ ಮಾಡಿಕೊಂಡು ಮರಳಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಈ ಮಧ್ಯೆ ಬೆಂಗಳೂರಿನಿಂದ ಮರಳಿ ಹುಬ್ಬಳ್ಳಿಗೆ ಆಗಮಿಸಿರೋ ಸೋಮಲಿಂಗ್ ಯಲಿಗಾರನನ್ನ ಡಾವಣಗೇರೆ ಪೊಲೀಸರು ತಡೆದು ನಿಲ್ಲಿಸಿ ವಿಚಾರಣೆ ಮಾಡಿದ್ದಾರೆ. ಈ ವೇಳೆ ಪೊಲೀಸರಿಗೂ ಸಹ ಸುಳ್ಳು ಹೇಳಿ ಕೈ ಮುಖಂಡ ಮರಳಿ ಮನೆಗೆ ಆಗಮಿಸಿದ್ದಾರೆ.

    ಈಗಾಗಲೇ ಸತ್ತ ತಂದೆಯ ಹೆಸರಿನಲ್ಲಿ ಪಾಸ್ ಪಡೆದು ಬೆಂಗಳೂರಿಗೆ ಹೋಗಿದ್ದ ಕೈ ಮುಖಂಡ ತನ್ನ ಕಾರಿನಲ್ಲಿ ಹುಡುಗಿಯೊಬ್ಬಳನ್ನ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದಾರೆ. ಆದರೆ ಲಾಕ್‍ಡೌನ್ ಮಧ್ಯೆ ರೋಡಿಗಿಳಿಯೋ ವಾಹನಗಳನ್ನ ಸೀಜ್ ಮಾಡೋ ಪೊಲೀಸರು ಕೈ ಮುಖಂಡನ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುತ್ತಾರ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

  • ಶಾಸಕರ ಹೆಸರಲ್ಲಿ ನಕಲಿ ಪಾಸ್- ಎಡಿಸಿಗೆ ಸಿಕ್ಕಿಬಿದ್ದ ಕಾರು ಚಾಲಕ

    ಶಾಸಕರ ಹೆಸರಲ್ಲಿ ನಕಲಿ ಪಾಸ್- ಎಡಿಸಿಗೆ ಸಿಕ್ಕಿಬಿದ್ದ ಕಾರು ಚಾಲಕ

    ಹಾವೇರಿ: ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕರ ಹೆಸರಿನಲ್ಲಿ ನಕಲಿ ಪಾಸ್ ಸೃಷ್ಟಿಸಿ ಗದಗ ಜಿಲ್ಲೆಯಿಂದ ಹಾವೇರಿಗೆ ಪ್ರವೇಶ ಮಾಡುತ್ತಿದ್ದ ಕಾರು ಚಾಲಕ ಅಪರ ಜಿಲ್ಲಾಧಿಕಾರಿ(ಎಡಿಸಿ) ಯೋಗೇಶ್ವರ ಅವರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಕಲಿ ಪಾಸ್ ಸೃಷ್ಟಿಕರ್ತನ ಮೇಲೆ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ.

    ಕೊರೊನಾ ವೈರಸ್ ಹಿನ್ನೆಲೆ ಲಾಕ್‍ಡೌನ್ ಮಾಡಲಾಗಿದ್ದು, ವೈದ್ಯಕೀಯ ಹಾಗೂ ತುರ್ತು ಸೇವೆ ಹೊರತುಪಡಿಸಿ ಇತರ ವಾಹನಗಳ ಓಡಾಟಕ್ಕೆ ನಿರ್ಬಂಧ ಹೆರಲಾಗಿದೆ. ವೈದ್ಯಕೀಯ ಹಾಗೂ ತುರ್ತು ಕಾರಣಗಳಿದ್ದರೆ ಅಧಿಕೃತ ಪಾಸ್ ಪಡೆದು ಪ್ರಯಾಣಿಸಬಹುದು. ಆದರೆ ಚಾಲಕ ದಿಲೀಪ್ ಬಂಕಾಪುರ ಮಾರುತಿ ಸುಜುಕಿ ಬ್ರೆಜ್ಜಾ (ಕೆಎ-27 ಎನ್ 4122) ಕಾರಿಗೆ ಬ್ಯಾಡಗಿ ಶಾಸಕರು ಎಂಬಂತೆ ನಕಲಿ ಪಾಸ್ ಅಂಟಿಸಿಕೊಂಡು ಕುಟುಂಬದೊಂದಿಗೆ ಲಕ್ಷ್ಮೇಶ್ವರದಿಂದ ರಾಣೇಬೆನ್ನೂರಿಗೆ ತೆರಳುತ್ತಿದ್ದ.

    ಚೆಕ್ ಪೋಸ್ಟ್ ಗಳ ತಪಾಸಣೆ ವೇಳೆ ಈ ಕಾರು ಗಮನಿಸಿದ ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಕಾರು ತಡೆದು ವಿಚಾರಣೆ ನಡೆಸಿದ್ದಾರೆ. ಕಾರಿನ ಮೇಲಿದ್ದ ಶಾಸಕರ ಹೆಸರಿನ ಪಾಸ್ ಕುರಿತು ಸಹ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸಿಕ್ಕಿಬಿದ್ದಿದ್ದಾನೆ.

    ಕಾರಿನ ಮೇಲಿದ್ದ ಶಾಸಕರ ಹೆಸರಿನ ಬಣ್ಣದ ಪಾಸ್ ಕುರಿತು ಸಂಶಯಗೊಂಡು ಸ್ಥಳದಲ್ಲೇ ಶಾಸಕರಿಗೆ ಕರೆಮಾಡಿ ಮಾಹಿತಿ ಪಡೆದಿದ್ದಾರೆ. ಈ ವೇಳೆಯಲ್ಲಿ ಶಾಸಕರು ಯಾರಿಗೂ ಪಾಸ್ ನೀಡಿಲ್ಲ ಎಂಬ ಮಾಹಿತಿ ನೀಡಿದ್ದಾರೆ. ಆಗ ನಕಲಿ ಪಾಸ್ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಮೊಕದ್ದಮೆ ದಾಖಲಿಸಿ ಕಾರು ವಶಪಡಿಸಿಕೊಳ್ಳಲು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

  • ವೈದ್ಯಕೀಯ ಪಾಸ್ ಪಡೆದು ಮದ್ವೆಗೆ ತೆರಳಿದ್ದವರು ಕ್ವಾರಂಟೈನ್‍

    ವೈದ್ಯಕೀಯ ಪಾಸ್ ಪಡೆದು ಮದ್ವೆಗೆ ತೆರಳಿದ್ದವರು ಕ್ವಾರಂಟೈನ್‍

    – ಕಾರು ವಶಕ್ಕೆ ಪಡೆದ ಡಿವೈಎಸ್‍ಪಿ

    ಧಾರವಾಡ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರೋಗ್ಯ, ತುರ್ತು ವೈದ್ಯಕೀಯ ತಪಾಸಣೆಗಾಗಿ ಮಾನವೀಯತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯವಿರುವವರಿಗೆ ಪಾಸ್ ನೀಡುವ ಸೌಲಭ್ಯ ಕಲ್ಪಿಸಿದೆ. ಆದರೆ ನರೇಂದ್ರ ಗ್ರಾಮದಲ್ಲಿ ಡಿವೈಎಸ್‍ಪಿ ರವಿನಾಯಕ್ ರೌಂಡ್ಸ್ ನಲ್ಲಿದ್ದಾಗ ವೈದ್ಯಕೀಯ ಪಾಸ್ ಪಡೆದು ಮದುವೆ ಕಾರ್ಯ ಮುಗಿಸಿ ಬಂದ ಕಾರನ್ನು ಜಪ್ತಿ ಮಾಡಿರುವ ಘಟನೆ ನಡೆದಿದೆ.

    ಪಾಸ್ ದುರುಪಯೋಗ ಪಡಿಸಿಕೊಂಡಿರುವರು ವಧುವಿನ ಕಡೆಯವರಾಗಿದ್ದು, ಉಪ್ಪಿನ ಬೇಟಗೇರಿ ಗ್ರಾಮದವರು ಎಂದು ತಿಳಿದು ಬಂದಿದೆ. ಮಂಗಳವಾರ ಹುಬ್ಬಳ್ಳಿಯಲ್ಲಿ ಮದುವೆ ಕಾರ್ಯ ಮುಗಿಸಿಕೊಂಡು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸ್ಥಾಪಿಸಿರುವ ಚೆಕ್ ಪೋಸ್ಟ್ ಗಳನ್ನು ತಪ್ಪಿಸಿ, ಹುಬ್ಬಳ್ಳಿಯಿಂದ ಕಾರಿನಲ್ಲಿ ಒಂದು ಮಗು ಸೇರಿದಂತೆ ಒಟ್ಟು 9 ಜನ ಹೋಗಿದ್ದರು. ಇಂದು ಮದುವೆ ಮುಗಿಸಿ ವಾಪಸ್ ಬರುವಾಗ ಡಿವೈಎಸ್‍ಪಿ ಕಾರು ನಿಲ್ಲಿಸಿ ಪರಿಶೀಲಿಸಿದಾಗ ತುರ್ತು ವೈದ್ಯಕೀಯ ಅಗತ್ಯಕ್ಕಾಗಿ ನೀಡಿದ್ದ ಪಾಸ್ ದುರುಪಯೋಗ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ.

    ಎಸ್‍ಪಿ ವರ್ತಿಕಾ ಕಟಿಯಾರ್ ಅವರ ಮಾರ್ಗದರ್ಶನದಲ್ಲಿ ತಕ್ಷಣ ಕಾರ್ಯಪ್ರವೃತರಾದ ಡಿವೈಎಸ್‍ಪಿ ರವಿ ನಾಯಕ್ 9 ಜನರನ್ನು ವೈದ್ಯಕೀಯ ತಪಾಸಣೆಗಾಗಿ ಪೊಲೀಸ್ ವಾಹನದಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ನಂತರ ಕಾರನ್ನು ಜಪ್ತಿ ಮಾಡಿದ್ದಾರೆ. ಅಲ್ಲದೇ ತಪಾಸಣೆ ನಂತರ ಎಲ್ಲರನ್ನೂ ಹೋಮ್ ಕ್ವಾರಂಟೈನ್ ಕಡ್ಡಾಯಗೊಳ್ಳಿಸಿ, ಸಂಬಂಧಿಸಿದವರಿಗೆ ನಿರ್ದೇಶನ ನೀಡಿದ್ದಾರೆ.

    ಮಾನವೀಯ ಹಿನ್ನೆಲೆಯಲ್ಲಿ ಅಗತ್ಯ ಮತ್ತು ತುರ್ತು ನೇರವಿಗಾಗಿ ಜಿಲ್ಲಾಡಳಿತ ನೀಡುವ ಪಾಸ್‍ಗಳನ್ನು ದುರುಪಯೋಗಪಡಿಸಿಕೊಂಡರೆ ಅಂತಹವರ ವಾಹನಗಳನ್ನು ಜಪ್ತಿ ಮಾಡಲಾಗುತ್ತದೆ. ಅಲ್ಲದೇ ಅಧಿಕ ದಂಡ ವಿಧಿಸಲಾಗುವುದು. ಒಂದು ವೇಳೆ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಡಿವೈಎಸ್‍ಪಿ ಎಚ್ಚರಿಸಿದ್ದಾರೆ.