Tag: ಪಾಸಿಟಿವಿ ಪ್ರಮಾಣ

  • ಶಿವಮೊಗ್ಗ ಜಿಲ್ಲೆಯಲ್ಲಿ ಜೂ.21 ರವರೆಗೆ ಲಾಕ್‍ಡೌನ್ ಮುಂದುವರಿಕೆ: ಸಚಿವ ಕೆ.ಎಸ್.ಈಶ್ವರಪ್ಪ

    ಶಿವಮೊಗ್ಗ ಜಿಲ್ಲೆಯಲ್ಲಿ ಜೂ.21 ರವರೆಗೆ ಲಾಕ್‍ಡೌನ್ ಮುಂದುವರಿಕೆ: ಸಚಿವ ಕೆ.ಎಸ್.ಈಶ್ವರಪ್ಪ

    ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಲಾಕ್‍ಡೌನ್ ಈಗಿರುವಂತೆ ಜೂ.21ರವರೆಗೆ ಒಂದು ವಾರಗಳ ಕಾಲ ಮುಂದುವರಿಯಲಿದ್ದು, ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ 9 ರವರೆಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಲಾಕ್‍ಡೌನ್ ಮುಂದುವರಿಕೆ ಕುರಿತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ನಿಧಾನವಾಗಿ ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.7 ರಷ್ಟಿದೆ. ಆದರೆ ಶಿವಮೊಗ್ಗ ನಗರದಲ್ಲಿ ಈಗಲೂ ಶೇ.13ರ ಆಸುಪಾಸಿನಲ್ಲಿದ್ದು, ಭದ್ರಾವತಿಯಲ್ಲಿ ಸುಮಾರು ಶೇ.10ರಷ್ಟು ಪಾಸಿಟಿವಿಟಿ ಪ್ರಮಾಣ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ ಒಂದು ವಾರಗಳ ಕಾಲ ಲಾಕ್‍ಡೌನ್ ಇದೇ ರೀತಿ ಮುಂದುವರೆಸಲು ಎಲ್ಲಾ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಒಪ್ಪಿಗೆ ಸೂಚಿಸಿದ್ದಾರೆ.

    ಲಾಕ್‍ಡೌನ್ ಜಾರಿಯಲ್ಲಿರುವ ಜಿಲ್ಲೆಗಳಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಅನುಮತಿ ನೀಡಲಾಗಿರುವ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಮಾತ್ರ ಅವಕಾಶವಿದೆ. ಪ್ರಸ್ತುತ ತರಕಾರಿ, ದಿನಸಿಯಂತಹ ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಗ್ಗೆ 6 ರಿಂದ 8 ರವರೆಗೆ ಅವಕಾಶವಿದ್ದು, ಅದನ್ನು ಒಂದು ಗಂಟೆ ವಿಸ್ತರಿಸಲಾಗಿದೆ. ಇನ್ನುಳಿದಂತೆ ಅಗತ್ಯವಿರುವ ಕೈಗಾರಿಕಾ ಚಟುವಟಿಕೆಗಳಿಗೆ ಈಗಿರುವಂತೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಸಗಟು ದಿನಸಿ ವ್ಯಾಪಾರಕ್ಕೆ ಬುಧವಾರ ಮತ್ತು ಶನಿವಾರ ಬೆಳಗ್ಗೆ 6 ರಿಂದ 9 ರವರೆಗೆ ಅವಕಾಶವಿದೆ. ಅಡಿಕೆ ಮಂಡಿಯಲ್ಲಿ ಸಗಟು ವ್ಯಾಪಾರಕ್ಕೆ ಹಾಗೂ ಟೆಂಡರ್‍ನಲ್ಲಿ ಭಾಗವಹಿಸುವವರಿಗೆ ಪಾಸು ನೀಡಲಾಗುವುದು. ಎಪಿಎಂಸಿಯಲ್ಲಿ ಬೆಳಗ್ಗೆ 6 ರಿಂದ 8 ರವರೆಗೆ ವ್ಯವಹಾರಕ್ಕೆ ಅವಕಾಶವಿದೆ ಎಂದು ಹೇಳಿದ್ದಾರೆ.

    ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಆದ್ಯತಾ ವಲಯದ ಫಲಾನುಭವಿಗಳಿಗೆ ಹಂತ ಹಂತವಾಗಿ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ವ್ಯವಸ್ಥಿತಗೊಳಿಸಿ ಪ್ರತಿಯೊಬ್ಬರಿಗೂ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

    ಸಭೆಯಲ್ಲಿ ಶಾಸಕರಾದ ಅರಗ ಜ್ಞಾನೇಂದ್ರ, ಅಶೋಕ ನಾಯ್ಕ್, ಆಯನೂರು ಮಂಜುನಾಥ್, ಪ್ರಸನ್ನ ಕುಮಾರ್, ರುದ್ರೇಗೌಡ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಸ್ಪಿ ಲಕ್ಷ್ಮೀ ಪ್ರಸಾದ್, ಸಿಇಒ ವೈಶಾಲಿ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಜೂ.30ರವರೆಗೆ ಮದುವೆ ಸೇರಿ ಎಲ್ಲ ಸಭೆ, ಸಮಾರಂಭಗಳಿಗೆ ನಿರ್ಬಂಧ