Tag: ಪಾಲ್ಗಾರ್

  • ಪೊಲೀಸರ ಮುಂದೆಯೇ ಎಳೆದಾಡಿ ಸಾಧುಗಳ ಹತ್ಯೆ – ವರದಿ ಕೇಳಿದ ಕೇಂದ್ರ

    ಪೊಲೀಸರ ಮುಂದೆಯೇ ಎಳೆದಾಡಿ ಸಾಧುಗಳ ಹತ್ಯೆ – ವರದಿ ಕೇಳಿದ ಕೇಂದ್ರ

    – ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
    – ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯಲ್ಲಿ ಘಟನೆ

    ನವದೆಹಲಿ: ಪೊಲೀಸರ ಎದುರೇ ಇಬ್ಬರು ಸಾಧು ಸೇರಿದಂತೆ ಮೂವರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಮಹಾರಾಷ್ಟ್ರ ಸರ್ಕಾರದಿಂದ ವರದಿ ಕೇಳಿದೆ.

    ಪಾಲ್ಗಾರ್ ಜಿಲ್ಲೆಯ ಗಡ್ಚಿಂಚಾಲೆ ಗ್ರಾಮದಲ್ಲಿ ಗುರುವಾರ ರಾತ್ರಿ ಮಕ್ಕಳ ಕಳ್ಳರೆಂದು ಭಾವಿಸಿ ಇಬ್ಬರು ಸಾಧು ಸೇರಿದಂತೆ ಕಾರು ಚಾಲಕನನ್ನು ಗ್ರಾಮಸ್ಥರು ದೊಣ್ಣೆಗಳಿಂದ ಬಡಿದು ಹತ್ಯೆ ಮಾಡಿದ್ದರು. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿದ್ದು, ಈ ಸಂಬಂಧ ಮಹಾರಾಷ್ಟ್ರ ಪೊಲೀಸರು ಇಲ್ಲಿಯವರೆಗೆ 110 ಮಂದಿಯನ್ನು ಬಂಧಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಸಾಧುಗಳನ್ನು ಎಳೆದಾಡಿ ದೊಣ್ಣೆ, ಕಲ್ಲುಗಳಿಂದ ಹೊಡೆದಿದ್ದಾರೆ. ಈ ವೇಳೆ ಪೊಲೀಸರು ತಮ್ಮನ್ನು ರಕ್ಷಿಸಿ ಎಂದು ಪೊಲೀಸರ ಬಳಿ ಬೇಡಿಕೊಂಡಿದ್ದಾರೆ. ಪೊಲೀಸರು ಇದ್ದರೂ ಗ್ರಾಮಸ್ಥರು ಸಾಧುಗಳು ಪ್ರಯಾಣಿಸುತ್ತಿದ್ದ ಕಾರು ಮತ್ತು ಪೊಲೀಸರ ಗಸ್ತು ವಾಹನವನ್ನು ಧ್ವಂಸಗೊಳಿಸಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದಾರೆ. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.

    ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಟ್ವೀಟ್ ಮಾಡಿದ್ದು, ಈ ಕೃತ್ಯ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾದವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲರಿಗೂ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದಾರೆ.

    ಈ ಕೃತ್ಯ ಎಸಗಿದ 110 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ 9 ಮಂದಿ ಬಾಲಾರೋಪಿಗಳಾಗಿದ್ದು, 101 ಮಂದಿಯನ್ನು ಏ.30ರ ವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಪಾಲ್ಗಾರ್ ಪೊಲೀಸರು ಟ್ವೀಟ್ ಮಾಡಿ ತಿಳಿಸಿದ್ದಾರೆ.