Tag: ಪಾಲಿಟಿಕ್ಸ್

  • ನಮ್ಮದು ಆಪರೇಷನ್ ಅಲ್ಲ ಕೋ ಅಪರೇಷನ್ ಸ್ನೇಹದ ಹಸ್ತ: ಡಿಕೆಶಿ

    ನಮ್ಮದು ಆಪರೇಷನ್ ಅಲ್ಲ ಕೋ ಅಪರೇಷನ್ ಸ್ನೇಹದ ಹಸ್ತ: ಡಿಕೆಶಿ

    ಬೆಂಗಳೂರು: ಆಪರೇಷನ್ ಹಸ್ತ, ಆಪರೇಷನ್ ಕಮಲ ಎರಡರ ವಿರೋಧಿ. ಯಾವುದೇ ಕಾರಣಕ್ಕೂ ಈ ಕೆಲಸಕ್ಕೆ ಮುಂದಾಗುವುದಿಲ್ಲ. ನಮ್ಮದೇನಿದ್ದರೂ ಕೋ-ಆಪರೇಷನ್ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (Dk shivakumar) ಹೇಳಿದ್ದಾರೆ.

    ಸದಾಶಿವನಗರದ ನಿವಾಸದ ಬಳಿ ಮಾತನಾಡಿದ ಅವರು ಸುಕುಮಾರ್ ಶೆಟ್ಟಿ (Sukumar Shetty) ಆಗಲಿ ಯಾರೇ ಆಗಲಿ ನಾವು ಸ್ನೇಹದ ಹಸ್ತ ಚಾಚುತ್ತೇವೆ. ನಮ್ಮ ಪಕ್ಷದ ತತ್ವ ಸಿದ್ದಾಂತ, ಭಾರತ್ ಜೋಡೋ ಬಗ್ಗೆ ಯಾರಿಗೆ ಒಲವಿದೆ ಅವರನ್ನು ತಬ್ಬಿಕೊಳ್ಳುತ್ತೇವೆ. ಅವರ ಹೆಗಲ ಮೇಲೆ ಕೈಹಾಕಿಕೊಂಡು ಹೆಜ್ಜೆ ಹಾಕುತ್ತೇವೆ. ಹಾಲಿ- ಮಾಜಿಗಳನ್ನ ಯಾರಾದರೂ ತಬ್ಬಿಕೊಳ್ಳುತ್ತೇವೆ ಎಷ್ಟು ಜನ ಸೇರಲಿದ್ದಾರೆ ಎನ್ನುವ ಪಟ್ಟಿ ಹೇಳಲು ಆಗಲ್ಲ. ಅವರವರೇ ಹೇಳಿರುವಂತೆ ಒಳ್ಳೆಯ ಮುಹೂರ್ತ, ಲಗ್ನ ಕೂಡಿ ಬಂದಾಗ ನಡೆಯಲಿದೆ. ಇದನ್ನೂ ಓದಿ:ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ, ಜೆಡಿಎಸ್ ಕಾರ್ಯಕರ್ತರಿಗೆ ವೀರ ಸಂದೇಶ ಕೊಟ್ಟ ಹೆಚ್‍ಡಿಕೆ

     
    ರಾಜಕೀಯದಲ್ಲಿ (Politics) ಯಾರೂ ಮಿತ್ರರಲ್ಲ, ಶತ್ರುಗಳಲ್ಲ. ರಾಜಕೀಯ ಎನ್ನುವುದು ಸಾಧ್ಯತೆಗಳ ಕಲೆ. ನಾವು ಯಾರನ್ನು ಕರೆಯುವುದಿಲ್ಲ. ರಾಜಕೀಯದಲ್ಲಿ ಯಾರೂ ದಡ್ಡರಲ್ಲ. ಎಲ್ಲರೂ ಅವರವರ ಭವಿಷ್ಯ ನೋಡಿಕೊಳ್ಳಬೇಕು. ಮಹಾರಾಷ್ಟ್ರದಲ್ಲಿ ಎಲ್ಲಾ ವಾಷಿಂಗ್ ಮೆಷಿನ್ ಸೇರಿಕೊಂಡು ಬಿಡಲಿಲ್ಲವೇ ಎಂದಿದ್ದಾರೆ.

    ಇನ್ನು ಕಾವೇರಿ ನೀರನ್ನು ನಿಲ್ಲಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಮಗೆ ಸಾಕಷ್ಟು ಒಳಹರಿವು ಬರುತ್ತಿಲ್ಲ. ಸುಪ್ರೀಂ ಕೋರ್ಟ್ ಹೇಳಿದ ಪ್ರಮಾಣದಷ್ಟು ನೀರನ್ನು ಬಿಡಲು ಆಗುತ್ತಿಲ್ಲ. ಮಳೆಯ ನಿರೀಕ್ಷೆಯಲ್ಲಿದ್ದೇವೆ. ಜೊತೆಗೆ ನಮ್ಮ ರೈತರ ಹಿತ ಕಾಯುವುದು ಮುಖ್ಯ ಅದಕ್ಕೆ ನಾವು ಬದ್ಧ. ನೀರು ಬಿಡುಗಡೆ ಮಾಡಬಾರದು ಎಂದು ಪ್ರತಿಭಟನೆಗಳು ನಡೆಯುತ್ತಿವೆ, ಬೆಂಗಳೂರು, ರಾಮನಗರ ಭಾಗಗಳಲ್ಲಿ ಮಳೆ ಬೀಳುತ್ತಿರುವ ಕಾರಣ ಸ್ವಲ್ಪ ಮಟ್ಟಿಗೆ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ರೈತರ ಬೆಳೆ ಹಾಗೂ ಕುಡಿಯುವ ನೀರು ನಮ್ಮ ಆದ್ಯತೆ. ನಿಗದಿ ಮಾಡಿದಷ್ಟು ನೀರು ಬಿಡುಗಡೆ ಮಾಡಲು ಬಿಡುಗಡೆ ಮಾಡಲು ನೀರೇ ಇಲ್ಲ ಎಂದಿದ್ದಾರೆ.

    ಯಡಿಯೂರಪ್ಪ ಅವರ ನೇತೃತ್ವದಲ್ಲಿ ಜನವಿರೋಧಿ ಸರ್ಕಾರ ಎಂದು ಪ್ರತಿಭಟನೆ ಮಾಡಲಾಗುತ್ತಿದೆ ಮೊದಲು ಮೇಕೆದಾಟು ಮತ್ತು ಮಹದಾಯಿಗೆ ಬಿಜೆಪಿಯವರು ಕೇಂದ್ರದಿಂದ ಒಪ್ಪಿಗೆ ಕೊಡಿಸಲಿ ಎಂದು ಸವಾಲು ಹಾಕಿದ್ದಾರೆ. ಜನವಿರೋಧಿ ಎಂದರೆ ಏನು? ಜನ ಬಿಜೆಪಿಯವರನ್ನು ವಿರೋಧಿಸಿಯೇ ಮನೆಯಲ್ಲಿ ಕೂರಿಸಿದ್ದಾರೆ. ನಂತರ ಅವರಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳುವಷ್ಟು ಅರ್ಹತೆ ಇಲ್ಲ. ಹೆಣ್ಣು ಮಕ್ಕಳು ಉಚಿತವಾಗಿ ಬಸ್ ಅಲ್ಲಿ ಓಡಾಡುತ್ತಿರುವುದು, 2 ಸಾವಿರ ಖಾತೆಗೆ ಬರುತ್ತಿರುವುದು ನೋಡಿ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಗ್ಯಾರಂಟಿ ಯೋಜನೆಗಳು ಅವರ ಹೊಟ್ಟೆಯನ್ನು ಉರಿಸುತ್ತಿದೆ.

    ಯಡಿಯೂರಪ್ಪ ಅವರು ತಮ್ಮ ರಾಜಕೀಯ ಉಳಿವಿಗಾಗಿ ಮಾಡುತ್ತಿದ್ದಾರೆ ಮಾಡಲಿ. ಪ್ರತಿಭಟನೆಗಳು ಇರಬೇಕು ಆಗ ನಾವು ನಮ್ಮ ಶಾಸಕರು ಎಚ್ಚರಿಕೆಯಿಂದ ಕೆಲಸ ಮಾಡುತ್ತೇವೆ. ನಮಗೂ ಹುಮ್ಮಸ್ಸು ಬರುತ್ತದೆ. 100 ದಿನಗಳಲ್ಲಿ ಇಷ್ಟೊಂದು ಸಾಧನೆ ಮಾಡಿದ ಸರ್ಕಾರ ಭಾರತದಲ್ಲೇ ಇಲ್ಲ. ಯಾರೋ 100 ದಿನಗಳಲ್ಲಿ 15 ಲಕ್ಷ ಹಣ ಕೊಡುತ್ತೇನೆ ಎಂದಿದ್ದರು? ಅವರ ಪ್ರಣಾಳಿಕೆಯ ಬಗ್ಗೆ ಮೊದಲು ಯೋಚಿಸಲಿ ತಿರುಗೇಟು ನೀಡಿದರು.

    ಜೆಡಿಎಸ್- ಬಿಜೆಪಿ ಹೊಂದಾಣಿಕೆಗೆ ಆಲ್ ದಿ ಬೆಸ್ಟ್ ಎಂದ ಅವರು ದೇವೇಗೌಡರು ಹಾಗೂ ಅಮಿತ್ ಶಾ ಭೇಟಿಯಾಗಿ ಹೊಂದಾಣಿಕೆಯ ಮಾತುಗಳನ್ನಾಡಿದ್ದರೆ, ಅವರ ಪಕ್ಷದ ಬಗ್ಗೆ ನಾನ್ಯಾಕೆ ಮಾತನಾಡಲಿ, ಒಂದಾಗಲಿ ಬಿಡಿ. ಅವರಿಗೆ ಒಳ್ಳೆಯದಾಗಲಿ, ಆಲ್ ದಿ ಬೆಸ್ಟ್. ಕುಮಾರಸ್ವಾಮಿ- ಅಶೋಕ್ ಅವರು ಒಂದಾಗಿದ್ದರು, ಈಗ ಯೋಗೇಶ್ವರ್ ಮತ್ತು ಕುಮಾರಸ್ವಾಮಿ ಅವರು ಒಂದಾಗುತ್ತಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಯಾರೇ ಒಂದಾದರೂ ನಮಗೆ ಸಂತೋಷ. ಅವರವರ ಉಳಿವಿಗಾಗಿ, ಭವಿಷ್ಯಕ್ಕಾಗಿ ಏನು ಬೇಕಾದರೂ ಮಾಡಲಿ. ಆದರೆ ಅವರುಗಳ ಸಿದ್ಧಾಂತ ಏನಾಗುತ್ತದೆ ಎಂಬುದು ಕುತೂಹಲ. ಹಿರಿಯರಾದ ದೇವೇಗೌಡರು ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೋಗುವುದಿಲ್ಲ ಎಂದಿದ್ದರು. ಒಂದು ಸಿದ್ದಾಂತ ಇಟ್ಟುಕೊಂಡು ಪಕ್ಷ ಕಟ್ಟಿರುತ್ತಾರೆ, ಈಗ ಆ ಪಕ್ಷ ಉಳಿಯುತ್ತದೋ ಏನಾಗುತ್ತದೋ ಗೊತ್ತಿಲ್ಲ? ಹಾಲಿ ಶಾಸಕರು, ಮಾಜಿ ಶಾಸಕರು ಏನಾಗುತ್ತಾರೊ ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ.

    ರಾಮನಗರ ಬಂದ್ ರಾಜಕೀಯ ಪ್ರೇರಿತ. ಮೆಡಿಕಲ್ ಕಾಲೇಜು ವಿಚಾರವಾಗಿ ನಡೆದ ಬಂದ್ ಮತ್ತು ಪ್ರತಿಭಟನೆ ರಾಜಕೀಯ ಪ್ರೇರಿತ. ಕುಮಾರಸ್ವಾಮಿ(Kumarswamy) ಸಿಎಂ ಆಗಿದ್ದಾಗ ಮೆಡಿಕಲ್ ಕಾಲೇಜು ನೀಡಿದ್ದರು. ಅದರ ಟೆಂಡರ್ ಕೂಡ ರದ್ದಾಗಿಲ್ಲ. ಅಷ್ಟರಲ್ಲಿ ಚಿಕ್ಕಬಳ್ಳಾಪುರಕ್ಕೆ ಬಿಜೆಪಿ ಸರ್ಕಾರ ಮತ್ತೊಂದು ಮೆಡಿಕಲ್ ಕಾಲೇಜು ನೀಡಿತು. ಈಗ ರಾಮನಗರದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಹಾಗೂ ಮೆಡಿಕಲ್ ಕಾಲೇಜು ಎರಡೂ ಆಗುತ್ತಿದೆ. ಜಿಲ್ಲೆಯಲ್ಲಿ ಎರಡು ಇರಬಾರದು ಎಂದು ನಿಯಮ ಇಲ್ಲವಲ್ಲ ಎಂದಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Exclusive: ರಾಜಕೀಯ ಅಖಾಡಕ್ಕೆ ನಿರ್ಮಾಪಕ ಕೆ.ಮಂಜು

    Exclusive: ರಾಜಕೀಯ ಅಖಾಡಕ್ಕೆ ನಿರ್ಮಾಪಕ ಕೆ.ಮಂಜು

    ರಾಜ್ಯದ ರಾಜಕಾರಣಕ್ಕೆ ನಿರ್ಮಾಪಕ ಕೆ.ಮಂಜು (Producer K.Manju) ಅವರು ಎಂಟ್ರಿ ಕೊಡಲಿದ್ದಾರೆ. ಪಧ್ಮನಾಭ ನಗರ ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗುವ ಬಗ್ಗೆ ಇದೀಗ ನಿರ್ಮಾಪಕ ಕೆ.ಮಂಜು ಮಾತನಾಡಿದ್ದಾರೆ. ಇದನ್ನೂ ಓದಿ: ಐಟಂ ಸಾಂಗ್ ಒಪ್ಪಿಕೊಂಡಿದ್ದಕ್ಕೆ ಕಾರಣವಿದೆ : ಸಮಂತಾ ಸಿಡಿಸಿಸ ಹೊಸ ಬಾಂಬ್

    ಸ್ಯಾಂಡಲ್‌ವುಡ್ (Sandalwood)ಸಾಕಷ್ಟು ಸಿನಿಮಾಗಳಿಗೆ ಕೆ.ಮಂಜು ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೆ.ಮಂಜು ಅವರ ಕೊಡುಗೆ ಅಪಾರ. ಇದೀಗ ರಾಜಕೀಯ (Politics) ಅಖಾಡಕ್ಕೆ ಇಳಿಯುವ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

    ಪಧ್ಮನಾಭ ನಗರ (Padmanabhnagara) ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗ್ತಿನಿ ಎಂದು ಕೆ.ಮಂಜು ಹೇಳಿದ್ದಾರೆ. ಶೀಘ್ರದಲ್ಲೇ ಅಧಿಕೃತವಾಗಿ ಅನೌನ್ಸ್ ಮಾಡ್ತಿನಿ. ನಮ್ಮ ಕೆಲವು ನಾಯಕರನ್ನ ಭೇಟಿ ಮಾಡ್ತಿನಿ. ಸದ್ಯದಲ್ಲಿಯೇ ಎಲ್ಲಾ ಫೈನಲ್ ಆಗುತ್ತದೆ. ಪದ್ಮನಾಭ ನಗರದಲ್ಲಿ ಒಕ್ಕಲಿಗರ ಓಟ್ ಜಾಸ್ತಿ ಇವೆ. ನನಗೆ ಹಲವು ನಾಯಕರ ಬೆಂಬಲ ಸಿಗೋ ಸಾಧ್ಯತೆ ಇದೆ. ಹೀಗಾಗಿ ಹಿರಿಯರ ಆಶೀರ್ವಾದ ಪಡೆದು ಚುನಾವಣೆಗೆ ಸ್ಪರ್ಧಿಸುತ್ತೀನಿ. ಹಲವು ವರ್ಷಗಳಿಂದ ಸಾಮಾಜಿಕ ಸೇವೆ ಮಾಡ್ತಿದ್ದೀನಿ ಎಂದು ಕೆ.ಮಂಜು ಮಾತನಾಡಿದ್ದಾರೆ.

    ರಾಜಕೀಯ ಅಖಾಡಕ್ಕೆ ಕೆ.ಮಂಜು ಅವರ ಎಂಟ್ರಿಯಾಗುತ್ತಾ? ಮುಂದಿನ ದಿನಗಳಲ್ಲಿ ಕೆ.ಮಂಜು ಅವರ ನಡೆ ಏನಾಗಲಿದೆ ಎಂಬುದನ್ನ ಕಾದುನೋಡಬೇಕಿದೆ.

  • ಜಮೀರ್ ಬಡಾಯಿ, ಕಾಂಗ್ರೆಸ್‍ನಲ್ಲಿ ಲಡಾಯಿ

    ಜಮೀರ್ ಬಡಾಯಿ, ಕಾಂಗ್ರೆಸ್‍ನಲ್ಲಿ ಲಡಾಯಿ

    – ಸುಕೇಶ್ ಡಿ.ಎಚ್
    ಎರಡು ವರ್ಷದ ನಂತರ ಕಾಂಗ್ರೆಸ್‍ನಲ್ಲಿ ಶುರುವಾಗಬಹುದಾಗಿದ್ದ ಸಂಭವನೀಯ ಅಂತಃಕಲಹ ಈಗಲೇ ಆರಂಭವಾದಂತೆ ಕಾಣುತ್ತಿದೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಲು ಮುಂದಾದ ಕಾಂಗ್ರೆಸ್ ನಾಯಕರು ಈಗ ಹಾದಿ ರಂಪ, ಬೀದಿ ರಂಪ ಮಾಡಿಕೊಳ್ಳಲು ವೇದಿಕೆ ಸಿದ್ಧವಾದಂತಿದೆ. ನಾನಾ…?ನೀನಾ..? ಫೈಟ್ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಆರಂಭವಾಗಿದೆ. ಆದರೆ ಬಹಿರಂಗ ಕದನಕ್ಕೆ ಇನ್ನೂ ಎರಡು ವರ್ಷದ ಸಮಯವಂತೂ ಇದ್ದೇ ಇತ್ತು. ಆದರೆ ಸಿದ್ದರಾಮಯ್ಯ ಅವರ ಆಸ್ಥಾನ ವಿದೂಷಕನಂತಾಡುವ ಜಮೀರ್ ಅಹಮ್ಮದ್ ಖಾನ್ ವಿವಾದದ ಕಿಡಿ ಹಚ್ಚಿದಂತೆ ಕಾಣುತ್ತಿದೆ. ಅಹಿಂದ ಕನವರಿಕೆಯಲ್ಲಿ ಜಮೀರ್ ಅಹಮ್ಮದ್‍ರನ್ನು ಅಗತ್ಯಕ್ಕಿಂತ ಜಾಸ್ತಿ ಹತ್ತಿರ ಬಿಟ್ಟುಕೊಂಡ ಸಿದ್ದರಾಮಯ್ಯ ಈಗ ಒಂದು ಹಂತದಲ್ಲಿ ಟವೆಲ್ ಕೊಡವಿ ಮುಸಿ ಮುಸಿ ನಗತೊಡತ್ತಿದ್ದಾರೆ. ಆದರೆ ಜಮೀರ್ ಅಹಮ್ಮದ್ ಮಾತುಗಳು ಕಾಂಗ್ರೆಸ್ ಅಂಗಳದ ಬೂದಿ ಮುಚ್ಚಿದ ಕೆಂಡದಲ್ಲಿ ನಿಧಾನವಾಗಿ ಹೊಗೆ ಏಳಲು ಕಾರಣವಾಗಿದೆ. ಅದೇ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಕೊತ ಕೊತ ಕುದಿಯತೊಡಗಿದ್ದಾರೆ.

    ರಾಜ್ಯ ಬಿಜೆಪಿಯಲ್ಲಿ ಸಿಎಂ ಕುರ್ಚಿ ಕದನ ಜೋರಾದ ಬೆನ್ನಲ್ಲೇ ವಿಪಕ್ಷ ಕಾಂಗ್ರೆಸ್ ರಾಜಕೀಯ ಲೆಕ್ಕಾಚಾರದಲ್ಲಿ ಅಖಾಡಕ್ಕೆ ಇಳಿದು ಒಂದಷ್ಟು ರಾಜಕೀಯ ಲಾಭಕ್ಕೆ ಮುಂದಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಸಿಎಂ ಯಡಿಯೂರಪ್ಪರನ್ನು ಕಂಡರೆ ಏನೋ ಒಂಥರಾ ರೋಮಾಂಚನ ಆದವರಂತೆ ವರ್ತಿಸುತ್ತಿದ್ದಾರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್. ಇಬ್ಬರಿಗು ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮುಂದುವರಿಯಲಿ ಎಂಬ ಭಾವನೆಯೇ ಇದ್ದಂತಿದೆ. ಬಿಜೆಪಿಯ ಸದ್ಯದ ಬೆಳವಣಿಗೆ ಬಗ್ಗೆ ಎಲ್ಲೂ ಗಟ್ಟಿ ಧ್ವನಿ ಎತ್ತದ ಡಿ.ಕೆ.ಶಿವಕುಮಾರ್ ಅವರ ತತ್ವ ಅವರಿಗೆ, ನಮ್ಮ ಪಕ್ಷ ನಮಗೆ ಅಂತ ವೇದಾಂತ ಮಾತನಾಡತೊಡಗಿದ್ದಾರೆ. ಸಿದ್ದರಾಮಯ್ಯ ಟ್ವೀಟ್ ಮಾಡಲು ಸೀಮಿತರಾಗಿ ಟ್ವೀಟ್ ರಾಮಯ್ಯರಾಗಿ ಉಳಿದಿದ್ದಾರೆ. ಅಲ್ಲಿಗೆ ಒಂದಂತೂ ಸ್ಪಷ್ಟ ಬಿಜೆಪಿ ನಾಯಕರೇ ಆರೋಪಿಸಿದಂತೆ ಇದು ಕಾಂಗ್ರೆಸ್ ಬಿಜೆಪಿ ಸಮ್ಮಿಶ್ರ ಸರ್ಕಾರವೇನೋ ಎಂಬಂತಿದೆ ಕಾಂಗ್ರೆಸ್ ನಾಯಕರ ವರ್ತನೆ.

    ಕಾಂಗ್ರೆಸ್ ನಾಯಕರ ಜಾಣ ಕಿವುಡು, ಜಾಣ ಕುರುಡು, ಜಾಣ ಮರೆವು ಎಲ್ಲವೂ ಬಿಜೆಪಿಗೆ ಬಲ ತುಂಬಿದರೆ ಇನ್ನೊಂದು ಕಡೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪರಸ್ಪರ ಕಾದಾಡಲು ವೇದಿಕೆ ಸಿದ್ಧಪಡಿಸತೊಡಗಿದ್ದಾರೆ ಶಾಸಕ ಜಮೀರ್ ಅಹಮ್ಮದ್ ಖಾನ್. ಅವರ ಗುರಿ ಸ್ಪಷ್ಟ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು. ಬಿಜೆಪಿಯಲ್ಲಿನ ರಾಜಕೀಯ ಅಶಾಂತಿಯ ಲಾಭ ಪಡೆಯುವ ಯೋಚನೆಯೂ ಮಾಡದ ಕೈ ಪಾಳಯದಲ್ಲಿ ಸೂಸೈಡ್ ಬಾಂಬರ್ ರೀತಿ ಜಮೀರ್ ಅಹಮ್ಮದ್ ಖಾನ್ ಕಾರ್ಯ ನಿರ್ವಹಿಸತೊಡಗಿದ್ದಾರೆ. ಅಷ್ಟಕ್ಕೂ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋದನ್ನು ಈಗಲೇ ಮಾತನಾಡಬೇಕಾದ ಅಗತ್ಯ ಅಥವಾ ಅನಿವಾರ್ಯತೆ ಕಾಂಗ್ರೆಸ್ ಪಾಳಯದಲ್ಲಿ ಖಂಡಿತ ಇಲ್ಲ. ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಚುನಾವಣೆಯ ನಂತರ ಅಧಿಕಾರ ಯಾರಿಗೆ ಅನ್ನೋದು ತೀರ್ಮಾನ ಆಗಲಿದೆ. ಇದನ್ನೂ ಓದಿ: ಅವರಿಗೆ ಮನಸ್ಸಿದೆ ಇವರಿಗೆ ಕನಸಿದೆ ಆದರೆ…?

    ಅಷ್ಟಕ್ಕೂ ಆಗಿದ್ದೇನು ಅಂತ ನೋಡುವುದಾದರೆ ಚಾಮರಾಜಪೇಟೆಯ ಶಾಸಕ ಸಾಮಾನ್ಯ ಜನರ ಪಾಲಿಗೆ ಜೋಕರ್‌ನಂತೆ ಕಾಣುವ ಮುಸ್ಲಿಂ ಸಮುದಾಯದ ಪಾಲಿಗೆ ನಾನೇ ನಾಯಕ ಎಂಬಂತೆ ಬಿಂಬಿಸಿಕೊಳ್ಳುವ ಜಮೀರ್ ಅಹಮ್ಮದ್ ಖಾನ್ ಕಂಡ ಕಂಡ ವೇದಿಕೆಯಲ್ಲಿ ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಅಂತ ಘಂಟಾಘೋಷವಾಗಿ ಹೇಳತೊಡಗಿದ್ದಾರೆ. ಅದರಲ್ಲೂ ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳಲ್ಲಿ ಪದೇ ಪದೇ ಅದನ್ನೇ ಹೇಳಿ ಉಳಿದ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗುವಂತೆ ಮಾಡುತ್ತಿದ್ದಾರೆ. ಇದು ಕೆಪಿಸಿಸಿ ಅಧ್ಯಕ್ಷರಾದ ನಾನೇ ಮುಂದಿನ ಸಿಎಂ ಎಂದು ಜಾತಕ, ಜ್ಯೋತಿಷ್ಯ, ಪೂಜೆ-ಪುನಸ್ಕಾರ ಅಂತ ನಂಬಿಕೊಂಡಿರುವ ಡಿ.ಕೆ.ಶಿವಕುಮಾರ್‍ಗೆ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಕುಮಾರಸ್ವಾಮಿ ಹಾಗೂ ಜಮೀರ್ ನಡುವಿನ ಗಲಾಟೆಯಲ್ಲಿ ಜಮೀರ್‍ಗೆ ಎಚ್ಚರಿಕೆಯಿಂದ ಮಾತನಾಡು ಎಂದ ಡಿಕೆಶಿ ಸಿಎಂ ಹೇಳಿಕೆಗೂ ಬ್ರೇಕ್ ಹಾಕಬೇಕು ಎಂದಿದ್ದಾರೆ. ಆದರೆ ಮತ್ತೆ ಹಠಕ್ಕೆ ಬಿದ್ದವರಂತೆ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದಿರುವ ಜಮೀರ್ ಅಹಮ್ಮದ್ ಖಾನ್, ರಾಜ್ಯದ ಜನ ಒಪ್ಪಿದ ಮೇಲೆ ಕಾಂಗ್ರೆಸ್ ಹೈಕಮಾಂಡ್ ಸಹಾ ಒಪ್ಪಬೇಕು ಎಂದು ಕಾಂಗ್ರೆಸ್ ಹೈಕಮಾಂಡ್‍ಗೂ ಸಲಹೆ ನೀಡಿ ಹೈಕಮಾಂಡ್ ಕೂಡ ಸಿದ್ದರಾಮಯ್ಯಗೆ ಜೀ ಹುಜೂರ್ ಅನ್ನಲೇಬೇಕು ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ. ಈ ಬೆಳವಣಿಗೆಯ ನಂತರ ತಮ್ಮ ಎಚ್ಚರಿಕೆಗೂ ಜಮೀರ್ ಬಗ್ಗುತ್ತಿಲ್ಲ ಎಂಬುದನ್ನ ಅರಿತ ಡಿಕೆಶಿ ಜಮೀರ್ ಹಾಗೆಲ್ಲಾ ಮಾತನಾಡಬಾರದು, ಅವರಿಗೆ ಈಗಾಗಲೇ ಎಚ್ಚರಿಕೆ ಕೊಟ್ಟಿದ್ದೇನೆ ಎಂದಿದ್ದಾರೆ. ಅದಕ್ಕೂ ಸೆಡ್ಡು ಹೊಡೆದ ಜಮೀರ್ ನನಗೆ ಯಾರೂ ಎಚ್ಚರಿಕೆ ಕೊಟ್ಟಿಲ್ಲ. ನಾನು ಅಥವಾ ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಆಯ್ಕೆ ಮಾಡಲ್ಲ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್‍ಗೆ ನೇರವಾಗಿ ಸೆಡ್ಡು ಹೊಡೆದಿದ್ದಾರೆ. ಅಲ್ಲಿಗೆ ಒಂದಂತೂ ಸ್ಪಷ್ಟವಾಗಿದೆ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವಿನ ಬೂದಿ ಮುಚ್ಚಿದ ಕೆಂಡಕ್ಕೆ ಜಮೀರ್ ಅಹಮ್ಮದ್ ಕೆರಾಸಿನ್ ಹಾಕುವ ಕೆಲಸವನ್ನಂತೂ ಮಾಡಿ ಮುಗಿಸಿದ್ದಾರೆ.

    ಇನ್ನು ಶಾಸಕರ ಆಟಾಟೋಪಕ್ಕೆ ಬ್ರೇಕ್ ಹಾಕಲು ನನ್ನಿಂದ ಸಾಧ್ಯವಿಲ್ಲ ಎಂಬುದನ್ನು ಅರಿತ ಡಿ.ಕೆ.ಶಿವಕುಮಾರ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಮೂಲಕ ಎಚ್ಚರಿಕೆ ಕೊಡಿಸುವ ಕೆಲಸ ಮಾಡಿದ್ದಾರೆ. ಆದರೆ ಸುರ್ಜೆವಾಲ ಎಚ್ಚರಿಕೆ ಪಕ್ಷದಲ್ಲಿ ಶಿಸ್ತು ಮೂಡಿಸುವ ಬದಲು ಶಿಸ್ತು ಹಳಿ ತಪ್ಪುವಂತೆ ಮಾಡಿದೆ. ಜಮೀರ್ ಮಾತಿಗೆ ಶಾಸಕರಾದ ಭೀಮಾ ನಾಯಕ್, ಕಂಪ್ಲಿ ಗಣೇಶ, ತುಕಾರಾಂ, ಹರಿಹರ ಶಾಸಕ ರಾಮಪ್ಪ, ಅಖಂಡ ಶ್ರೀನಿವಾಸ ಮೂರ್ತಿ ಹೀಗೆ ಸಾಲು ಸಾಲು ಶಾಸಕರು ಧ್ವನಿಗೂಡಿಸಿ ಸಿದ್ದರಾಮಯ್ಯ ಮುಂದಿನ ಸಿಎಂ ಎನ್ನುವ ಮೂಲಕ ವಿವಾದದ ಬೆಂಕಿ ಮತ್ತಷ್ಟು ಹೆಚ್ಚುವಂತೆ ಮಾಡಿದ್ದಾರೆ. ಯಾರು ಏನೇ ಹೇಳಿದರೂ ಈ ಬೆಳವಣಿಗೆಯ ಹಿಂದೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರ ಪ್ರತಿಷ್ಟೆಯೇ ಈ ಬೆಳವಣಿಗೆಯ ಮೂಲ ಅನ್ನೋದರಲ್ಲಿ ಅನುಮಾನವೇ ಇಲ್ಲ. ಕೆಪಿಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಡಿ.ಕೆ.ಶಿವಕುಮಾರ್ ನಾನೇ ಮುಂದಿನ ಮುಖ್ಯಮಂತ್ರಿ ಅನ್ನೋ ಭ್ರಮೆಗೆ ಬಿದ್ದಂತೆ ಕಾಣುತ್ತಿದೆ. ಪಕ್ಷದ ಮಟ್ಟದ ಕೆಲವು ನಿರ್ಧಾರದ ಜೊತೆಗೆ ತಮ್ಮ ಬೆಂಬಲಿಗರ ಮೂಲಕ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಸಿಕೊಂಡು ಖುಷಿ ಪಡತೊಡಗಿದ್ದಾರೆ. ಅವರ ಹಾವ-ಭಾವ ಪಕ್ಷದ ವೇದಿಕೆಯಲ್ಲಿನ ವರ್ತನೆ ಎಲ್ಲವು ಅಂತದೊಂದು ಸಂದೇಶ ರವಾನಿಸುವ ಶೈಲಿಯಲ್ಲೇ ಇರುವುದಂತೂ ಸುಳ್ಳಲ್ಲ. ಇಷ್ಟು ದಿನ ಮೌನವಾಗಿದ್ದ ಸಿದ್ದರಾಮಯ್ಯ ತಮ್ಮ ಬೆಂಬಲಿಗರ ಮೂಲಕ ಡಿ.ಕೆ.ಶಿವಕುಮಾರ್ ಸಿಎಂ ಕನಸಿನ ಸುಖ ನಿದ್ರೆಗೆ ತಣ್ಣೀರೆರಚಿ ನಗತೊಡಗಿದ್ದಾರೆ. ಕನಕಪುರದ ಬಂಡೆ, ಆನೆ ಅಂತೆಲ್ಲಾ ಬೆಂಬಲಿಗರಿಂದ ಬಹುಪರಾಕ್ ಹಾಕಿಸಿಕೊಳ್ಳುತ್ತಿರುವ ಡಿ.ಕೆ.ಶಿವಕುಮಾರ್‍ಗೆ ಬಂಡೆ ಬುಡದಲ್ಲಿ ಡೈನಾಮೈಟ್, ಆನೆ ಕಣ್ಮುಂದೆ ಖೆಡ್ಡಾ ಎರಡೂ ಒಟ್ಟೊಟ್ಟಿಗೆ ಕಂಡಂತಾಗಿದೆ ಈ ಬೆಳವಣಿಗೆ.

    ಇನ್ನು ರಾಜ್ಯ ರಾಜಕಾರಣದ ಸದ್ಯದ ಸ್ಥಿತಿ ಬಿಜೆಪಿಯ ಅಂತಃಕಲಹ ಕಾಂಗ್ರೆಸ್ ದೋಣಿಯನ್ನು 2023ರಲ್ಲಿ ಸುಲಭವಾಗಿ ದಡ ತಲುಪಿಸಬಹುದು ಎಂಬ ನಿರೀಕ್ಷೆಯಲ್ಲಿ ಸಿದ್ದರಾಮಯ್ಯ ಇದ್ದಂತಿದೆ. ಜೊತೆಗೆ ತಮ್ಮ ಹಳೆಯ ಅಸ್ತ್ರವಾದ ಅಹಿಂದಕ್ಕೆ ಸ್ವಲ್ಪ ಸಾಣೆ ಹಿಡಿದು ಸರಿಪಡಿಸಿಕೊಂಡರೆ ನಾನೇ ಮತ್ತೊಮ್ಮೆ ಮುಖ್ಯಮಂತ್ರಿ ಅನ್ನೋ ಕಲರ್ ಫುಲ್ ಕನಸು ಸಿದ್ದರಾಮಯ್ಯರನ್ನು ಬಿಟ್ಟೂಬಿಡದೇ ಕಾಡುತ್ತಿರಬಹುದು.

    ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯರ ರಾಜಕೀಯ ಲೆಕ್ಕಾಚಾರ ಏನೇ ಇರಬಹುದು. ಆದರೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ 2 ವರ್ಷ ಸಮಯಾವಕಾಶ ಇದೆ. ಈಗಿನ ರಾಜಕೀಯ ಪರಿಸ್ಥಿತಿ ಆಗಲೂ ಇರುತ್ತೆ ಎನ್ನಲು ಸಾಧ್ಯವಿಲ್ಲ. ಸಿಎಂ ಕುರ್ಚಿಯ ಆಸೆ ಇಬ್ಬರಿಗೂ ಇರಬಹುದು. ಆದರೆ ಕಾಂಗ್ರೆಸ್ ಕಣ್ಣು ಮುಚ್ಚಿಕೊಂಡು ಅಧಿಕಾರಕ್ಕೆ ಬರುತ್ತೆ ಎನ್ನಲು ಬಿಜೆಪಿ ಹಾಗೂ ಜೆಡಿಎಸ್ ನಾಯಕರೇನೂ ಸನ್ಯಾಸ ಸ್ವೀಕರಿಸಿ ಕಾಡಿಗೆ ಹೊರಟಿಲ್ಲ. ದಿನ ದಿನಕ್ಕೂ ಬದಲಾಗುವ ರಾಜಕೀಯ ಲೆಕ್ಕಾಚಾರದಲ್ಲಿ ಎರಡು ವರ್ಷದ ನಂತರದ ಸ್ಥಿತಿ ಏನೋ..? ಹೇಗೋ..? ಬಲ್ಲವರಾರು..?

    ಮೇಲ್ನೋಟಕ್ಕೆ ಇದು ಡಿ.ಕೆ.ಶಿವಕುಮಾರ್ ಏಕಚಕ್ರಾಧಿಪತ್ಯ ವರ್ತನೆಗೆ ಸಿದ್ದರಾಮಯ್ಯ ಕೊಟ್ಟ ಸಾಲಿಡ್ ಟಕ್ಕರ್ ಎಂಬಂತೆ ಕಾಣುತ್ತಿದೆ. ಇದರ ಮಧ್ಯೆ ಕಳೆದ ಕೆಲವು ದಶಕಗಳಿಂದ ಸೂಟು ಬೂಟು ಹೊಲಿಸಿಕೊಂಡು ಸಿಎಂ ಸ್ಥಾನದ ಕನವರಿಕೆಯಲ್ಲಿರುವ ಡಜನ್‍ಗೂ ಹೆಚ್ಚು ನಾಯಕರು ಕಾಂಗ್ರೆಸ್ ಪಾಳಯದಲ್ಲಿದ್ದಾರೆ. ಯಾವಾಗ ಯಾರ ಮಾತು ಯಾವ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತೆ ಅನ್ನೋದು ಸ್ವತಃ ಕಾಂಗ್ರೆಸ್ ಹೈಕಮಾಂಡ್‍ಗೇ ಗೊತ್ತಿದ್ದಂತಿಲ್ಲ. ಇಷ್ಟೆಲ್ಲಾ ಗೊತ್ತಿದ್ದರೂ ಸಿದ್ದರಾಮಯ್ಯ ಹಾಗೂ ಡಿಕೆಶಿ ಸಿಎಂ ಕುರ್ಚಿಯ ಹಗಲು ಕನಸಿನ ಬೆನ್ನು ಬಿದ್ದಂತೆ ಕಾಣುತ್ತಿದೆ. 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಸಿಎಂ ಸ್ಥಾನಕ್ಕೆ ಪೈಪೋಟಿ ಆರಂಭವಾದರೆ, ಬೇರೆಯವರ ಹೆಸರು ರೇಸ್‍ಗೆ ಬರದಿದ್ದರೆ, ಕಾಂಗ್ರೆಸ್ ಹೈಕಮಾಂಡ್ ಲಕೋಟೆಯಿಂದ ಬೇರೆ ಹೆಸರು ಬರದಿದ್ದರೆ ಹೀಗೆ ಹಲವಾರು ರೆ.. ಗಳನ್ನ ದಾಟಿಕೊಂಡು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಕುರ್ಚಿ ಸಮೀಪ ಬರಬೇಕು. ಆದರೂ ಯಾವುದಕ್ಕೂ ಇರಲಿ ಎಂದು ತಮ್ಮ ತಮ್ಮ ಹಕ್ಕು ಪ್ರತಿಪಾದಿಸುವ ಮೇಲಾಟ ನಡೆಸಿದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸಲು ಜಗಳ ಆಡಿಕೊಂಡು ರಾಜ್ಯದ ಜನರಿಗೆ ಭರ್ತಿ ಮನೋರಂಜನೆಯಂತೂ ನೀಡಿದ್ದಾರೆ. ಕಾಂಗ್ರೆಸ್‍ನ ವೀಕ್ ಹೈಕಮಾಂಡ್ ಮುಂದಿನ ದಿನಗಳಲ್ಲಿ ಇದನ್ನು ಹೇಗೆ ನಿಭಾಯಿಸುತ್ತೆ ಎಂಬುದರ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ಭವಿಷ್ಯ ನಿರ್ಧಾರ ಆಗಲಿದೆ.

    [ಈ ಬರಹದಲ್ಲಿ ಪ್ರಕಟವಾಗಿರುವ ಅಭಿಪ್ರಾಯಗಳು ಲೇಖಕರದ್ದು]

  • ಸರ್ಕಾರದ ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ – ದೆಹಲಿಯಲ್ಲಿ ನಡೆಯಿತು ದಿಢೀರ್‌ ಸಭೆ

    ಸರ್ಕಾರದ ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ – ದೆಹಲಿಯಲ್ಲಿ ನಡೆಯಿತು ದಿಢೀರ್‌ ಸಭೆ

    – ನಮ್ಮದೇ ಸರ್ಕಾರವಿದ್ದರೂ ಅನುದಾನ ಸಿಗುತ್ತಿಲ್ಲ
    – ವಿರೋಧ ಪಕ್ಷಗಳಿಗೆ ಭರ್ಜರಿ ಅನುದಾನ
    – ಸಂಸದರು, ಶಾಸಕರಿಂದ ಕಟೀಲ್‌ಗೆ ದೂರು
    – ಹೈಕಮಾಂಡ್‌ ಗಮನಕ್ಕೆ ತರುವಂತೆ ಒತ್ತಡ

    ಬೆಂಗಳೂರು: ಕರ್ನಾಟಕದ ಹೊಂದಾಣಿಕೆ ರಾಜಕೀಯದ ಬಗ್ಗೆ ದೆಹಲಿಯಲ್ಲಿ ಮಂಗಳವಾರ ಮಹತ್ವದ ದಿಢೀರ್‌ ಸಭೆ ನಡೆದಿದೆ.

    ಹೌದು. ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ್, ಅಶ್ವಥ್ ನಾರಾಯಣ್, ಮಹೇಶ್ ಟೆಂಗಿನಕಾಯಿ, ಸಿದ್ದರಾಜು ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಶಾಸಕರು, ಸಂಸದರು ಸಿಎಂ ಯಡಿಯೂರಪ್ಪ ಸರ್ಕಾರದ ವಿರುದ್ಧ ನೀಡಿದ ದೂರಿನ ಬಗ್ಗೆ ಕಟೀಲ್ ಪ್ರಸ್ತಾಪ ಮಾಡಿದ್ದಾರೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ಸಿಕ್ಕಿದೆ.

    ಸಭೆ ನಡೆದಿದ್ದು ಯಾಕೆ?
    ನಮ್ಮದೇ ಸರ್ಕಾರ ಇದ್ದರೂ ನಮ್ಮ ಕ್ಷೇತ್ರಗಳಲ್ಲಿ ಕೆಲಸಗಳು ಆಗುತ್ತಿಲ್ಲ. ಹಲವು ಕಡೆಗಳಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳಲಾಗುತ್ತಿದೆ. ಹೊಂದಾಣಿಕೆ ರಾಜಕಾರಣ ಬೇಡ ಎಂದು ಸಿಎಂ, ಸಚಿವರಿಗೆ ಸೂಚಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಬಿಜೆಪಿಯ ಕೆಲ ಸಂಸದರು, ಶಾಸಕರು ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮಹತ್ವದ ಸಭೆ ನಡೆದಿದೆ.

    ಶಾಸಕರ ಆರೋಪ ಏನು?
    ಸರ್ಕಾರ ನಮ್ಮದೇ ಇದ್ದರೂ ವಿರೋಧ ಪಕ್ಷಗಳ ಕೆಲಸ ನಡೆಯುತ್ತಿದೆ. ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಕ್ಷೇತ್ರಕ್ಕೆ ನಮ್ಮದೇ ಸರ್ಕಾರದಿಂದ ಅತೀ ಹೆಚ್ಚು ಅನುದಾನ ಸಿಕ್ಕಿದೆ. ಆದರೆ ನಮ್ಮ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡಲು ಕೋವಿಡ್‌ 19 ಆರ್ಥಿಕ ಕಾರಣ ಹೇಳಿ ಹಿಂದೇಟು ಹಾಕಲಾಗುತ್ತಿದೆ. ಆದರೆ ವಿಪಕ್ಷಗಳ ನಾಯಕರ ಕ್ಷೇತ್ರಗಳಿಗೆ ಭರಪೂರ ಅನುದಾನ ಸಿಗುತ್ತಿದೆ. ಹಲವು ಕಡೆಗಳಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳಲಾಗುತ್ತಿದೆ. ಹೊದಾಣಿಕೆ ರಾಜಕಾರಣ ಬೇಡ ಎಂದು ಸಿಎಂ, ಸಚಿವರಿಗೆ ಸೂಚಿಸಬೇಕು.

    ಬಿಜೆಪಿ ಶಾಸಕರ ಚಾರ್ಜ್‌ಶೀಟ್‌ ಏನು?
    ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರ ಬಾದಾಮಿಗೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಡಿಸಿಎಂ, ಸಚಿವರು ಆ ಕ್ಷೇತ್ರಕ್ಕೆ ಹೋಗಿ ಕೆಲಸಗಳಿಗೆ ಚಾಲನೆ ಕೊಡುತ್ತಿದ್ದಾರೆ. ಎಷ್ಟು ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಹೀಗೆ ಕೆಲಸಗಳು ನಡೆಯುತ್ತಿದೆ? ಸಚಿವ ಶ್ರೀರಾಮುಲು ಹೆಚ್‌ಡಿಕೆ ಜೊತೆ ಹೋಗಿ ಆಗಿರುವ ಕೆಲಸಗಳನ್ನು ಉದ್ಘಾಟನೆ ಮಾಡುತ್ತಾರೆ. ಸಚಿವ ಯೋಗೇಶ್ವರ್ ಇದ್ದರೂ ಕ್ಯಾರೇ ಅಂದಿಲ್ಲ. ಹೀಗೆ ಮಾಡಿದರೆ ಬಿಜೆಪಿ ಕಾರ್ಯಕರ್ತರ ಗತಿ ಏನು ಎಂದು ಪ್ರಶ್ನಿಸಿದ್ದಾರೆ.

    ನಮ್ಮ ಕ್ಷೇತ್ರಗಳಲ್ಲಿ ಕೆಲಸಗಳೇ ಮಂಜೂರಾತಿ ಆಗುತ್ತಿಲ್ಲ. ಸಣ್ಣಪುಟ್ಟ ಕೆಲಸಗಳಿಗೆ ಮಂಜೂರಾಗಿದ್ದರೂ ಆ ಕ್ಷೇತ್ರಗಳಿಗೆ ಬನ್ನಿ ಎಂದು ಕರೆದರೂ ಬರುತ್ತಿಲ್ಲ. ಸರ್ಕಾರ ನಮ್ಮದು, ಆದ್ರೆ ಅವರದ್ದೇ ಸರ್ಕಾರ ಎನ್ನುವಂತಿದೆ. ಈಗ ಏನು ಮಾಡಬೇಕು ಹೇಳಿ. ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಮಾತನಾಡಬಾರದು ಸರಿ. ಈಗ ಆಂತರಿಕವಾಗಿಯಾದರೂ ಸರಿ ಮಾಡಿ. ಈ ವಿಚಾರವನ್ನು ಹೈಕಮಾಂಡ್‌ ನಾಯಕರ ಗಮನಕ್ಕೆ ತನ್ನಿ ಎಂದು ಶಾಸಕರು ಬಿಎಸ್‌ವೈ ಸರ್ಕಾರದ ವಿರುದ್ಧ ದೂರು ನೀಡಿದ್ದಾರೆ.

  • ಮೋದಿ ಏಟಿಗೆ ತಿರುಗೇಟು ನೀಡಿದ ಪಿ. ಚಿದಂಬರಂ

    ಮೋದಿ ಏಟಿಗೆ ತಿರುಗೇಟು ನೀಡಿದ ಪಿ. ಚಿದಂಬರಂ

    ನವದೆಹಲಿ: ಕಾಂಗ್ರೆಸ್ ವಿರುದ್ಧ ಗುಡುಗಿದ್ದ ಪ್ರಧಾನಿ ಮೋದಿಗೆ ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಟ್ವೀಟ್ ಗಳ ಸುರಿಮಳೆಯಲ್ಲಿ ತಿರುಗೇಟು ನೀಡಿದ್ದಾರೆ.

    ಚತ್ತೀಸ್‍ಗಢದಲ್ಲಿ ಶುಕ್ರವಾರದಂದು ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‍ನಲ್ಲಿ ನೆಹರು-ಗಾಂಧಿ ಕುಟುಂಬದವರನ್ನ ಹೊರತುಪಡಿಸಿ ಹೊರಗಿನವರನ್ನ ಐದು ವರ್ಷಗಳ ಕಾಲ ಅಧ್ಯಕ್ಷರನ್ನಾಗಿ ಮಾಡಿ ಎಂದು ಸವಾಲನ್ನ ಹಾಕಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿದ ಪಿ. ಚಿದಂಬರಂ, ನೆಹರು-ಗಾಂಧಿ ಕುಟುಂಬದಲ್ಲದವರ ಹೆಸರುಗಳ ಪಟ್ಟಿಯನ್ನ ಬಿಡುಗಡೆ ಮಾಡುವ ಮೂಲಕ ಮೋದಿಗೆ ಟಾಂಗ್ ನೀಡಿದ್ದಾರೆ.

    ಸರಣಿ ಟ್ವೀಟ್‍ಗಳನ್ನ ಮಾಡಿರುವ ಚಿದಂಬರಂ ಅವರು, ಮೋದಿಯವರು ನಮ್ಮ ಕಾಂಗ್ರೆಸ್ ಅಧ್ಯಕ್ಷರ ಬಗ್ಗೆ ಹೆಚ್ಚು ಆಸಕ್ತಿಯನ್ನ ಹೊಂದಿದ್ದು, ಅದಕ್ಕಾಗಿ ಅವರು ಬಹಳ ಸಮಯವನ್ನ ತೆಗೆದುಕೊಂಡಿದ್ದಾರೆ. ಇದಕ್ಕೆ ಅವರಿಗೆ ಧನ್ಯವಾದಗಳು. ಮೋದಿಯವರು ನೋಟು ಅಮಾನ್ಯೀಕರಣ, ಜಿಎಸ್‍ಟಿ, ರಫೇಲ್, ಸಿಬಿಐ ಮತ್ತು ಆರ್‍ಬಿಯ ವಿಷಯಗಳಿಗೆ ಅರ್ಧದಷ್ಟು ಸಮಯವನ್ನಾದರು ಕೊಟ್ಟಿದ್ದರೆ ಇಂದು ಯಾವುದೇ ಸಮಸ್ಯೆಯನ್ನ ಎದುರಿಸಬೇಕಾಗುತ್ತಿರಲಿಲ್ಲ ಎಂದು ಹೇಳುವ ಮೂಲಕ ಕುಟುಕಿದ್ದಾರೆ.

    ಕಾಂಗ್ರೆಸ್‍ನ ಸ್ವಾತಂತ್ರ್ಯ ನಂತರದಲ್ಲಿದ್ದ ಹೆಮ್ಮೆಯ ನಾಯಕರ ಹೆಸರುಗಳ ಪಟ್ಟಿ ಮಾಡಿದ ಚಿದಂಬರಂ ಅವರು, ಆಚಾರ್ಯ ಕೃಪಲಾನಿ, ಪಟ್ಟಾಭಿ ಸೀತಾರಾಮಯ್ಯ, ಪುರುಶೋತ್ತಮದಾಸ್ ಟಂಡನ್, ಯು.ಎನ್. ದೇಬರ್, ಸಂಜೀವ್ ರೆಡ್ಡಿ, ಸಂಜೀವಯ್ಯ, ಕಾಮರಾಜ್ ನಿಜಲಿಂಗಪ್ಪ, ಸಿ. ಸುಬ್ರಮಣಿಯನ್ ಮತ್ತು ಜಗಜೀವನ್ ರಾಮ್, ಶಂಕರ್ ದಯಾಳ್ ಶರ್ಮಾ, ಡಿ.ಕೆ. ಬರೂಹ್, ಬ್ರಹ್ಮಾನಂದ ರೆಡ್ಡಿ, ಪಿ.ವಿ. ನರಸಿಂಹರಾವ್ ಮತ್ತು ಸೀತಾರಾಮ್ ಕೇಸರಿ ಅವರ ಹೆಸರುಗಳನ್ನ ಟ್ವೀಟ್ ಮಾಡಿದ್ದಾರೆ.

    ಪ್ರಧಾನಿ ಮೋದಿಯವರು ರೈತರ ಆತ್ಮಹತ್ಯೆ, ನಿರುದ್ಯೋಗ, ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅತ್ಯಾಚಾರ ಪ್ರಕರಣ, ನೈತಿಕ ಪೊಲೀಸ್ ಗಿರಿ, ಗೋ ರಕ್ಷಕರ ಜಾಗರೂಕತೆ ಮತ್ತು ಹೆಚ್ಚಾಗುತ್ತಿರುವ ಭಯೋತ್ಪಾದನೆ ಕುರಿತಾಗಿಯೂ ಮಾತನಾಡಬಲ್ಲರೇ ಎಂದು ಪ್ರಶ್ನಿಸಿದ್ದಾರೆ.

    ಉತ್ತರ ಭಾಗದ ಚತ್ತೀಸ್‍ಗಢದ ಅಂಬಿಕಾಪುರದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಅವರನ್ನ ನಾಲ್ಕು ಶತಮಾನಗಳಲ್ಲಿ ನೆಹರೂ-ಗಾಂಧಿ ಕುಟುಂಬವನ್ನು ಹೊರತುಪಡಿಸಿ ಬೇರೊಬ್ಬರಿಗೆ ಸ್ಥಾನ ನೀಡಬಲ್ಲರೇ ಎಂದು ಪ್ರಶ್ನಿಸಿದ್ದರು. ಇದು ಎಷ್ಟರ ಮಟ್ಟಿಗೆ ಸರಿ, ಮೊದಲು ನಿಮ್ಮ ಅಧಿಕಾರದಲ್ಲಿ ಎದುರಾಗಿರುವ ಪ್ರಶ್ನೆಗಳಿಗೆ ಉತ್ತರಿಸಿರಿ ಎಂದು ಸವಾಲು ಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews