Tag: ಪಾಲಿಗೆ

  • 2 ಲಕ್ಷ ಟನ್ ಕಸದ ಮುಕ್ತಿಗೆ ಶೀಘ್ರವೇ ಮೂಹರ್ತ

    2 ಲಕ್ಷ ಟನ್ ಕಸದ ಮುಕ್ತಿಗೆ ಶೀಘ್ರವೇ ಮೂಹರ್ತ

    ಮೈಸೂರು: ಮೈಸೂರಿನ ಕೃಷ್ಣರಾಜನಗರ ಕ್ಷೇತ್ರದ ಜನರ ಪಾಲಿಗೆ ಕಂಟಕವಾಗಿರುವ ಸೂಯೇಜ್ ಫಾರಂ ಕಸಕ್ಕೆ ಕೊನೆಗೂ ವೈಜ್ಞಾನಿಕವಾಗಿ ಮುಕ್ತಿ ಸಿಗುವ ದಿನಗಳು ಹತ್ತಿರವಾಗಿವೆ.

    ಈ ಸೂಯೆಜ್ ಫಾರಂನಲ್ಲಿ ಸುಮಾರು ಎರಡು ಲಕ್ಷ ಟನ್ ಕಸ ಸಂಗ್ರಹವಾಗಿದೆ. ಇದರಿಂದ ಕೆ.ಆರ್.ಕ್ಷೇತ್ರದ ಹಲವು ಬಡಾವಣೆಗಳ ನಿವಾಸಿಗಳು ದುರ್ವಾಸನೆ ನರಕದಲ್ಲಿ ಬದುಕುತ್ತಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಈ ಕಸವನ್ನು ವೈಜ್ಞಾನಿಕವಾಗಿ ನಾಶ ಮಾಡಲು ಮುಂದಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಒಂದು ತಂಡ ರಚಿಸಿದ್ದರು.

    ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಶಂಕರ್ ನೇತೃತ್ವದಲ್ಲಿ ಮೈಸೂರು ಮಹಾನಗರ ಪಾಲಿಕೆ ಮೇಯರ್, ಪಾಲಿಕೆ ಕಮಿಷನರ್ ಹಾಗೂ ಇತರ ಅಧಿಕಾರಿಗಳ ನಿಯೋಗ ಮಹಾರಾಷ್ಟ್ರದ ನಾಗಪುರ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಅತ್ಯಂತ ವೈಜ್ಞಾನಿಕವಾಗಿ ಈ ಕೇಂದ್ರದಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಹೀಗಾಗಿ ಇದೇ ವಿಧಾನವನ್ನು ಮೈಸೂರಿನಲ್ಲಿ ಅಳವಡಿಸಬೇಕು ಎಂದು ತಂಡವು ಜಿಲ್ಲಾ ಉಸ್ತುವಾರಿ ಸಚಿವರಿಗೆ ಶಿಫಾರಸ್ಸು ಮಾಡಿದೆ. ಜನವರಿ 3 ರಂದು ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಮೈಸೂರಿನಲ್ಲಿ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

    ಈ ವಿಚಾರದ ಬಗ್ಗೆ ಸಂಸದ ಪ್ರತಾಪ್ ಸಿಂಹ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮೈಸೂರಿನ ವಿದ್ಯಾರಣ್ಯಪುರ ಪ್ಲಾಂಟ್‍ನಲ್ಲಿ ಬಿದ್ದಿರುವ 2 ಲಕ್ಷ ಟನ್ ಕಸಕ್ಕೆ ಸದ್ಯದಲ್ಲೇ ಸದ್ಗತಿ ಕಾಣಿಸುವ ನಿಟ್ಟಿನಲ್ಲಿ ನಮ್ಮ ಜಿಲ್ಲಾಧಿಕಾರಿ, ಮೇಯರ್, ಪಾಲಿಕೆ ಕಮಿಷನರ್ ನೇತೃತ್ವದ ನಿಯೋಗವನ್ನು ಮಹಾರಾಷ್ಟ್ರದ ನಾಗಪುರ ಕಸ ವಿಲೇವಾರಿ ಘಟಕಕ್ಕೆ ಕಳುಹಿಸಿದ್ದೆವು. ಜನವರಿ 3ರಂದು ಅಂತಿಮ ನಿರ್ಧಾರ ಪ್ರಕಟಿಸಲಾಗುತ್ತದೆ. ಸಚಿವ ಸೋಮಣ್ಣ ಮತ್ತು ನನ್ನ ಮೇಲೆ ನೀವಿಟ್ಟಿರುವ ವಿಶ್ವಾಸ ಉಳಿಸಿಕೊಳ್ಳುತ್ತೇವೆ ಎಂದು ಬರೆದು ಕೊಂಡಿದ್ದಾರೆ.