Tag: ಪಾಲಿಕೆ ಅಧಿಕಾರಿಗಳು

  • ಕೋವಿಡ್ ನಿಯಮ ಉಲ್ಲಂಘನೆ- ಅಂಗಡಿಗಳ ಪರವಾನಗಿ ರದ್ದು, ಬೀಗ ಜಡಿದ ಪಾಲಿಕೆ ಅಧಿಕಾರಿಗಳು

    ಕೋವಿಡ್ ನಿಯಮ ಉಲ್ಲಂಘನೆ- ಅಂಗಡಿಗಳ ಪರವಾನಗಿ ರದ್ದು, ಬೀಗ ಜಡಿದ ಪಾಲಿಕೆ ಅಧಿಕಾರಿಗಳು

    ಮಂಗಳೂರು: ಕೊರೊನಾ ನಿಯಮ ಉಲ್ಲಂಘನೆ ಮಾಡಿದ ಹಲವು ಅಂಗಡಿಗಳ ಪರವಾನಗಿ ರದ್ದು ಮಾಡಿ ಬೀಗ ಜಡಿಯಲಾಗಿದ್ದು, ಸಾವಿರಾರು ರೂಪಾಯಿ ದಂಡ ವಿಧಿಸಲಾಗಿದೆ.

    ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಅನುಮತಿಸದೆ ಇರುವ ವಸ್ತುಗಳ ಅಂಗಡಿಗಳನ್ನು ಅನಧಿಕೃತವಾಗಿ ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನಲೆಯಲ್ಲಿ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ, ಹಲವು ಅಂಗಡಿಗಳ ಪರವಾನಿಗೆ ರದ್ದುಗೊಳಿಸಿದ್ದು, ಇನ್ನೂ ಹಲವು ಅಂಗಡಿಗಳಿಗೆ ದಂಡ ವಿಧಿಸಿದ್ದಾರೆ.

    ಇಂದು ಪಾಲಿಕೆಯಿಂದ ವಿವಿಧ ತಂಡಗಳ ಮೂಲಕ ನಡೆಸಲಾದ ಕಾರ್ಯಾಚರಣೆಯ ವೇಳೆ ಕೋವಿಡ್-19 ಮಾರ್ಗಸೂಚಿ ಉಲ್ಲಂಘಿಸಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ 78 ಅಂಗಡಿಗಳಿಗೆ 68,350 ರೂ. ದಂಡ ವಿಧಿಸಿ, ಈ ಪೈಕಿ 30 ಅಂಗಡಿಗಳ ಉದ್ದಿಮೆ ಪರವಾನಿಗೆಯನ್ನು ರದ್ದುಗೊಳಿಸಿ ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಮುಚ್ಚಲಾಗಿದೆ. ಬೆಳಗ್ಗೆ 10 ಗಂಟೆಯ ಬಳಿಕ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಸಾರ್ವಜನಿಕರು ಅನಗತ್ಯ ಓಡಾಟ ಮಾಡಿದ 19 ಪ್ರಕರಣಗಳಿಗೆ 8,050 ರೂ. ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.

  • ಕಟ್ಟಿಗೆಯ ಚಿತೆ ಮೇಲೆ ಶವಗಳನ್ನ ಎಸೆದು ಕೊರೊನಾ ಸೋಂಕಿತರ ಅಂತ್ಯಕ್ರಿಯೆ

    ಕಟ್ಟಿಗೆಯ ಚಿತೆ ಮೇಲೆ ಶವಗಳನ್ನ ಎಸೆದು ಕೊರೊನಾ ಸೋಂಕಿತರ ಅಂತ್ಯಕ್ರಿಯೆ

    ಬೆಳಗಾವಿ: ಈಗಾಗಲೇ ಕೊರೊನಾದಿಂದ ಮೃತಪಟ್ಟವರನ್ನು ಗುಂಡಿಯಲ್ಲಿ ಎಸೆದು, ಜೆಸಿಬಿಯಿಂದ ತಂದು ಅಂತ್ಯಸಂಸ್ಕಾರ ಮಾಡಲಾಗಿದೆ. ಇದೀಗ ಬೆಳಗಾವಿಯಲ್ಲಿ ಚಿತೆ ಮೇಲೆ ಶವವನ್ನು ಎಸೆದು ಅಮಾನವೀಯವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ.

    ಬೆಳಗಾವಿ ನಗರದಲ್ಲಿ ಕೊರೊನಾ ಸೋಂಕಿತರ ಅಂತ್ಯಕ್ರಿಯೆಯನ್ನು ಬೇಕಾಬಿಟ್ಟಿ ಮಾಡಲಾಗಿದೆ. ಮಹಾನಗರ ಪಾಲಿಕೆಯ ಸದಾಶಿವ ನಗರ ಸ್ಮಶಾನದಲ್ಲಿ ಸೋಂಕಿತರ ಅಂತ್ಯಸಂಸ್ಕಾರ ಮಾಡಲಾಗಿದೆ. ಒಂದೇ ಅಂಬುಲೆನ್ಸ್‌ನಲ್ಲಿ ಎರಡು ಮೃತದೇಹವನ್ನು ತಂದಿದ್ದಾರೆ. ನಂತರ ಆ ಶವಗಳನ್ನ ಚಿತೆಯ ಮೇಲೆ ಸಿಬ್ಬಂದಿ ಅಮಾನವೀಯವಾಗಿ ಎಸೆದು ಅಂತ್ಯಕ್ರಿಯೆ ಮಾಡಿದ್ದಾರೆ.

    ಚಿತೆಯ ಮೇಲೆ ಎಸೆದು ಅಂತ್ಯಕ್ರಿಯೆ ಮಾಡುತ್ತಿರುವ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ. ಸ್ಮಶಾನದ ಅಕ್ಕಪಕ್ಕದಲ್ಲಿ ಮನೆಗಳಿದ್ದರೂ ಹೊರ ಭಾಗದಲ್ಲೇ ಅಂತ್ಯಕ್ರಿಯೆ ಮಾಡಲಾಗಿದೆ. ಅಲ್ಲದೇ ಸ್ಮಶಾನ ಕಾವಲುಗಾರರು ಮತ್ತು ವಾಹನ ಚಾಲಕರ ಬಗ್ಗೆಯೂ ಪಾಲಿಕೆ ನಿರ್ಲಕ್ಷ್ಯವಹಿಸಿದೆ.

    ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸದಾಶಿವನಗರ ಸ್ಮಶಾನ ಇದೆ. ಆದರೆ ಪಾಲಿಕೆ ಅಧಿಕಾರಿಗಳು ಕೊರೊನಾ ಸೋಂಕಿತರ ಅಂತ್ಯಕ್ರಿಯೆ ವೇಳೆ ಸ್ಮಶಾನ ಸಿಬ್ಬಂದಿಗೆ ಪಿಪಿಇ ಕಿಟ್ ನೀಡದೆ ಬೇಜವಾಬ್ದಾರಿ ತೋರಿಸಿದ್ದಾರೆ. ಸ್ಮಶಾನ ಸಿಬ್ಬಂದಿಗೆ ಪಿಪಿಇ ಕಿಟ್ ನೀಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೂ ಪಾಲಿಕೆ ಅಧಿಕಾರಿಗಳು ರಾಜ್ಯ ಸರ್ಕಾರದ ಆದೇಶ ಪಾಲಿಸುತ್ತಿಲ್ಲ. ಸೋಂಕಿತರ ಅಂತ್ಯಕ್ರಿಯೆ ವೇಳೆ ಪಿಪಿಇ ಕಿಟ್ ಧರಿಸದ ಸ್ಮಶಾನ ಸಿಬ್ಬಂದಿಯ ಫೋಟೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಮತ್ತೊಂದೆಡೆ ನಮಗೆ ಸುರಕ್ಷತೆಯೇ ಇಲ್ಲ ಎಂದು ಶವ ಸಾಗಣೆ ವಾಹನದ ಚಾಲಕ ಹೇಳುತ್ತಿದ್ದಾರೆ. 12 ವರ್ಷಗಳಿಂದ ಅಂಬುಲೆನ್ಸ್ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಕಳೆದ ನಾಲ್ಕು ತಿಂಗಳಿಂದ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ನಾಲ್ಕು ತಿಂಗಳಲ್ಲಿ ಅನೇಕ ಶವವನ್ನು ಸಾಗಿಸಿದ್ದೇವೆ. ದಿನಕ್ಕೆ ನಾಲ್ಕೈದು ಜನರು ಮೃತಪಟ್ಟ ಬಗ್ಗೆ ಫೋನ್ ಬರುತ್ತದೆ. ಆದರೆ ಶವ ಸಾಗಿಸುವ ವಾಹನದ ಚಾಲಕರಿಗೆ ಸುರಕ್ಷತೆಯೇ ಇಲ್ಲ. ಮಾಸ್ಕ್ ಆಗಲಿ, ಪಿಪಿಇ ಕಿಟ್ ಆಗಲಿ ನಮಗೆ ನೀಡುತ್ತಿಲ್ಲ. ಸರಿಯಾಗಿ ಸಂಬಳವನ್ನು ಕೂಡ ನೀಡುತ್ತಿಲ್ಲ ಎದು ಶವ ಸಾಗಿಸುವ ವಾಹನ ಚಾಲಕ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

  • ಇತಿಹಾಸ ಪ್ರಸಿದ್ಧ ಗಂಗೈಯಮ್ಮ ದೇವಸ್ಥಾನ ಡೆಮಾಲಿಷನ್

    ಇತಿಹಾಸ ಪ್ರಸಿದ್ಧ ಗಂಗೈಯಮ್ಮ ದೇವಸ್ಥಾನ ಡೆಮಾಲಿಷನ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿದ್ದ ಇತಿಹಾಸ ಪ್ರಸಿದ್ಧ ಗಂಗೈಯಮ್ಮ ದೇವಸ್ಥಾನವನ್ನ ಪಾಲಿಕೆ ಅಧಿಕಾರಿಗಳು ತೆರವುಗೊಳಿದ್ದಾರೆ.

    ಬೆಂಗಳೂರಿನ ಶ್ರೀರಾಂಪುರಲ್ಲಿ ಗಂಗೈಯಮ್ಮ ದೇವಸ್ಥಾನವಿದ್ದು, ಪೊಲೀಸ್ ಸರ್ಪಗಾವಲಿನ ನಡುವೆ ಇಂದು ಬೆಳಗ್ಗೆ ನಾಲ್ಕು ಗಂಟೆಗೆ ಪಾಲಿಕೆ ಅಧಿಕಾರಿಗಳು ದೇವಸ್ಥಾನವನ್ನ ಹಾಗೂ ಅದರೊಳಗೆ ಇದ್ದ ಗಂಗೈಯಮ್ಮ ದೇವಿಯ ವಿಗ್ರಹವನ್ನ ತರೆವುಗೊಳಿಸಿ, ಅರಳಿ ಮರದ ಕೆಳಗಡೆ ಇಟ್ಟು ದೇವಸ್ಥಾನವನ್ನ ಒಡೆದು ಹಾಕಲಾಯ್ತು.

    ಗಂಗೈಯಮ್ಮ ದೇವಸ್ಥಾನ ಅನಧಿಕೃತವಾಗಿ ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡಿದ್ದಾರೆಂದು ಆರೋಪಿಸಿ ವಿಜಯಾ ಎಂಬ ಮಹಿಳೆ ಹೈಕೋರ್ಟ್ ಮೇಟ್ಟಿಲೇರಿದ್ದರು. ನ್ಯಾಯಾಲಯ ದೇವಸ್ಥಾನದ ಜಾಗವನ್ನ ಪರಿಶೀಲನೆ ಮಾಡಿ ತೆರವುಗೊಳಿಸಲು ಆದೇಶ ಮಾಡಿತ್ತು. ಅಧಿಕಾರಿಗಳು ದೇವಸ್ಥಾನವನ್ನ ಒಡೆದು ಹಾಕಲು ಎರಡು ಮೂರು ಬಾರಿ ಪ್ರಯತ್ನ ಮಾಡಿದ್ದರು. ಆದರೆ ಭಕ್ತಾದಿಗಳು ಯಾವುದೇ ಕಾರಣಕ್ಕೂ ದೇವಸ್ಥಾನವನ್ನ ಒಡೆದು ಹಾಕಲು ಬಿಡೋದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದರಿಂದ ದೇವಸ್ಥಾನ ತೆರವುಗೊಳಿಸಲು ಆಗಿರಲಿಲ್ಲ.

    ಹೈಕೋರ್ಟ್ ಇದೇ ತಿಂಗಳ 20ರ ಒಳಗಾಗಿ ದೇವಸ್ಥಾನ ತೆರವು ಮಾಡಿ ವರದಿ ನೀಡಲು ಪಾಲಿಕೆಗೆ ಗಡವು ನೀಡಿತ್ತು. ಹೀಗಾಗಿ ಭಕ್ತಾದಿಗಳನ್ನ ಮಂಗಳವಾರ ಸಂಪರ್ಕ ಮಾಡಿ, ದೇವಸ್ಥಾನ ತೆರವುಗೊಳಿಸಲೇ ಬೇಕು ನ್ಯಾಯಾಲಯ 20ನೇ ತಾರೀಖಿನ ಒಳಗಾಗಿ ತೆರವುಗೊಳಿಸಿ ವರದಿಕೊಡುವಂತೆ ಸೂಚಿಸಿದೆ. ಭಕ್ತಾದಿಗಳೆಲ್ಲರು ಸಹಕರಿಸುವಂತೆ ಪಾಲಿಕೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು. ಆದರೂ ಭಕ್ತಾದಿಗಳು ಗಲಾಟೆ ಮಾಡುವ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಪೊಲೀಸ್ ಭದ್ರತೆಯ ನಡುವೆ ದೇವಸ್ಥಾನ ತೆರವು ಮಾಡಲಾಯ್ತು.