Tag: ಪಾರ್ಟಿ

  • ಪ್ರವಾಸಿ ಮಂದಿರದಲ್ಲಿ ಗುಂಡು, ತುಂಡು ಪಾರ್ಟಿ – ಕಣ್ಮುಚ್ಚಿ ಕುಳಿತಿದ್ಯಾ ಲೋಕೋಪಯೋಗಿ ಇಲಾಖೆ..?

    ಪ್ರವಾಸಿ ಮಂದಿರದಲ್ಲಿ ಗುಂಡು, ತುಂಡು ಪಾರ್ಟಿ – ಕಣ್ಮುಚ್ಚಿ ಕುಳಿತಿದ್ಯಾ ಲೋಕೋಪಯೋಗಿ ಇಲಾಖೆ..?

    ವಿಜಯಪುರ: ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಗುಂಡು, ತುಂಡು ಪಾರ್ಟಿ ನಡೆದ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮುಳವಾಡ ಗ್ರಾಮದಲ್ಲಿ ನಡೆದಿದೆ.

    ಕಳೆದ ರಾತ್ರಿ ಕ್ಲಾಸ್ 1 ಗುತ್ತಿಗೆದಾರನೊಬ್ಬ ಮುಳವಾಡ ಪ್ರವಾಸಿ ಮಂದಿರದಲ್ಲಿ ಪೆಂಡಾಲ್ ಹಾಕಿಸಿ ಭರ್ಜರಿಯಾಗಿ ಗುಂಡು ತುಂಡು ಪಾರ್ಟಿ ನಡೆಸಿದ್ದಾನೆ. ಈ ಪಾರ್ಟಿಯಲ್ಲಿ ಅನೇಕ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ 200ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಪಾರ್ಟಿಯಲ್ಲಿ ಎಣ್ಣೆ, ಮಾಂಸದೂಟ ಎಲ್ಲವೂ ರಾಜಾರೋಷವಾಗಿ ನಡೆದಿದೆ.

    ಪ್ರವಾಸಿ ಮಂದಿರದಲ್ಲೇ ಅಡುಗೆ ಮಾಡಲಾಗಿದ್ದು, ಉಳ್ಳವರು ಇಲ್ಲಿ ಏನು ಮಾಡಿದರೂ ಹೇಳೋರಿಲ್ಲ, ಕೇಳೋರಿಲ್ಲದಂತಾಗಿದೆ. ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218ರ ಪಕ್ಕದಲ್ಲಿರುವ ಐಬಿಯಲ್ಲೇ ಇಷ್ಟೊಂದು ರಾಜಾರೋಷವಾಗಿ ದರ್ಬಾರ್ ನಡೆಸಿದರೂ ಸರ್ಕಾರಿ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

    ಪ್ರಥಮ ದರ್ಜೆಯ ಗುತ್ತಿಗೆದಾರನಿಗೆ ಐಬಿಯನ್ನೇ ಅಧಿಕಾರಿಗಳು ಬರೆದು ಕೊಟ್ರಾ..? ಸರ್ಕಾರಿ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ ಗುತ್ತಿಗೆದಾರ ವಿರುದ್ಧ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದೆ ಲೋಕೋಪಯೋಗಿ ಇಲಾಖೆ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.

  • ಬೆಂಗಳೂರಲ್ಲಿ ಮದ್ಯದಂಗಡಿಗಳಿಗೆ ಮುಗಿಬಿದ್ದ ಪಾರ್ಟಿಪ್ರಿಯರು!

    ಬೆಂಗಳೂರಲ್ಲಿ ಮದ್ಯದಂಗಡಿಗಳಿಗೆ ಮುಗಿಬಿದ್ದ ಪಾರ್ಟಿಪ್ರಿಯರು!

    ಬೆಂಗಳೂರು: ಕೊರೊನಾ ವೈರಸ್ ಈ ಬಾರಿಯ ಹೊಸ ವರ್ಷಾಚರಣೆರಗೆ ಬ್ರೇಕ್ ಹಾಕಿದೆ. ಬಾರ್, ಪಬ್ ಗಳನ್ನು ಬಂದ್ ಮಾಡುವಂತೆ ಆದೇಶ ಹೊರ ಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಜನ ಮದ್ಯ ಖರೀದಿಸಲು ಅಂಗಡಿಗಳ ಮುಂದೆ ಮುಗಿಬಿದ್ದಿದ್ದಾರೆ.

    ಹೌದು. ಚಿಕ್ಕ ಪೇಟೆಯಲ್ಲಿ ಸಾಮಾಜಿಕ ಅಂತರವಿಲ್ಲದೆ ಹಾಗೂ ಸರಿಯಾಗಿ ಮಾಸ್ಕ್ ಹಾಕದೇ ಜನ ಓಡಾಟ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರ್ಷಲ್ ಗಳು ಫೀಲ್ಡ್ ಗೆ ಇಳಿದಿದ್ದಾರೆ. ಪಾರ್ಟಿ ಮಾಡಲು ಜನ ಮದ್ಯ ಖರೀದಿಸುವಲ್ಲಿ ನಿರತರಾಗಿದ್ದಾರೆ. ಕೊರೊನಾ ನಿಯಮಕ್ಕೆ ಬ್ರೇಕ್ ಹಾಕಿ ಜನ ಮದ್ಯ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಮದ್ಯದಂಗಡಿಗಳ ಮುಂದೆ ಗ್ರಾಹಕರ ಸಂಖ್ಯೆ ಹೆಚ್ಚಳವಾಗಿದೆ. ನಿಷೇಧಾಜ್ಞೆ ಬೆನ್ನಲ್ಲೇ ಸಾಕಷ್ಟು ಮದ್ಯ ಖರೀದಿಸುವಲ್ಲಿ ಬ್ಯುಸಿಯಾಗಿದ್ದಾರೆ.

    ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಯಾಗಿದ್ದು, ನಾಳೆ ಬೆಳಗ್ಗೆವರೆಗೆ ಮುಂದುವರಿಯಲಿದೆ. ಈ ಹಿಂದೆ ಇಂದು ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಹೇರಲು ನಿರ್ಧರಿಸಲಾಗಿತ್ತು. ಆದರೆ ಬೆಂಗಳೂರಿನಲ್ಲಿ ರೂಪಾಂತರ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಬೆಂಗಳೂರಿನಲ್ಲಿ ಹೊಸ ಮಾದರಿಯ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸುರಕ್ಷತಾ ದೃಷ್ಟಿಯಿಂದ ಇಂದು ಮಧ್ಯಾಹ್ನದಿಂದಲೇ 144 ಸೆಕ್ಷನ್ ಜಾರಿಗೊಳಿಸಿ ಪೊಲೀಸ್ ಕಮಿಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

  • ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಬರುತ್ತಿದ್ದವಳಿಗೆ ಸ್ನೇಹಿತರಿಂದ ಕಿರುಕುಳ

    ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಬರುತ್ತಿದ್ದವಳಿಗೆ ಸ್ನೇಹಿತರಿಂದ ಕಿರುಕುಳ

    – ಚಲಿಸುತ್ತಿರುವ ಕಾರಿನಲ್ಲಿ ಲೈಂಗಿಕ ದೌರ್ಜನ್ಯ

    ಕೋಲ್ಕತ್ತಾ: ಹುಟ್ಟುಹಬ್ಬದ ಪಾರ್ಟಿಯನ್ನು ಮುಗಿಸಿಕೊಂಡು ಸ್ನೇಹಿತರ ಜೊತೆಗೆ ಕಾರಿನಲ್ಲಿ ಹಿಂದಿರುಗುತ್ತಿದ್ದ ಯುವತಿಗೆ ಇಬ್ಬರು ಸ್ನೇಹಿತರು ಕಿರುಕುಳ ನೀಡಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

    ಕಿರುಕುಳಕ್ಕೊಳಗಾದ 21ರ ಯುವತಿ ಮಾಸ್ತೇಲಾ ನಿವಾಸಿಯಾಗಿದ್ದಾಳೆ. ಜಾದವ್‍ಪುರದ ಬಿಕ್ರಮ್‍ಘರ್ ಪ್ರದೇಶದಲ್ಲಿ ತನ್ನ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಯುವತಿ, ರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ಮರಳುತ್ತಿದ್ದಳು. ಅಂತೆಯೇ ಆಕೆ ತನ್ನ ಸ್ನೇಹಿತರ ಜೊತೆ ಕಾರಿನಲ್ಲಿ ಹೊರಟ್ಟಿದ್ದಾಳೆ. ಆಗ ಇಬ್ಬರು ಸ್ನೇಹಿತರು ಚಲಿಸುವ ಕಾರಿನಲ್ಲೇ ಲೈಂಗಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಸಂತ್ರಸ್ತೆ ಸಹಾಯಕ್ಕಾಗಿ ಕಿರುಚುತ್ತಲೇ ಇದ್ದಳು. ಯುವತಿಗೆ ಲೈಂಗಿಕ ಕಿರುಕುಳ ನೀಡಿ ನಂತರ ಅವಳನ್ನು ವಾಹನದಿಂದ ಭೋವಾನಿಪುರ ಪೊಲೀಸ್ ಠಾಣೆ ಬಳಿ ಎಸೆದು ಹೋಗಿದ್ದಾರೆ.

     

    ಆಕೆಯ ಸ್ನೇಹಿತರೇ ಅವಳಿಗೆ ಕಾರಿನಲ್ಲಿ ಕಿರುಕುಳ ನೀಡಿದ್ದಾರೆ. ಈ ಪ್ರಕರಣ ಜಾದವ್‍ಪುರ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಯುವತಿಗೆ ಕಿರುಕುಳ ನೀಡಿದ ಇಬ್ಬರು ಸ್ನೇಹಿತರಿಗಾಗಿ ಹುಡುಕುತ್ತಿದ್ದೇವೆ. ಮೊಬೈಲ್ ಟವರ್ ಸ್ಥಳದ ಮೂಲಕ ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮನೆಯಲ್ಲಿ ಬೈದಿದ್ದಕ್ಕೆ 1.5 ಲಕ್ಷದೊಂದಿಗೆ ಗೋವಾಗೆ ತೆರಳಿ ಪಾರ್ಟಿ ಮಾಡಿದ ಬಾಲಕ!

    ಮನೆಯಲ್ಲಿ ಬೈದಿದ್ದಕ್ಕೆ 1.5 ಲಕ್ಷದೊಂದಿಗೆ ಗೋವಾಗೆ ತೆರಳಿ ಪಾರ್ಟಿ ಮಾಡಿದ ಬಾಲಕ!

    – ಓದು ಅಂತ ಬುದ್ಧಿ ಹೇಳಿದ್ದಕ್ಕೆ ಹಣದೊಂದಿಗೆ ಪರಾರಿ

    ಗಾಂಧಿನಗರ: ಮಕ್ಕಳನ್ನು ಓದುವಂತೆ ಪೋಷಕರು ಬೈಯುವುದು ಸಾಮಾನ್ಯ. ಈ ಬೈಗುಳ ಕೆಲವೊಮ್ಮೆ ನೋವುಂಟು ಮಾಡುತ್ತದೆ. ಆದರೆ ಪೋಷಕರು ನಮಗೆ ಬುದ್ಧಿ ಹೇಳುವುದು ನಮ್ಮ ಒಳಿತಿಗಾಗಿಯೇ ಆಗಿರುತ್ತದೆ. ಅದೇ ರೀತಿ ಗುಜರಾತ್ ನ ವಡೋದರಾದ ಹುಡುಗನೊಬ್ಬ ಹೆತ್ತವರು ಬೈದರೆಂದು ಸಿಟ್ಟಿನಿಂದ ಮನೆಯಿಂದ ಎಸ್ಕೇಪ್ ಆಗಿ ಗೋವಾದಲ್ಲಿ ಪಾರ್ಟಿ ಮಾಡಿರುವ ಅಚ್ಚರಿಯ ಘಟನೆಯೊಂದು ನಡೆದಿದೆ.

    ಹೌದು. ಈ ಘಟನೆ ನಡೆದು ಕೆಲ ದಿನಗಳಾದರೂ ಇದೀಗ ಭಾರೀ ಸುದ್ದಿಯಲ್ಲಿದೆ. ಕಳೆದ ವಾರ ಪೋಷಕರು ಹಾಗೂ ಅಜ್ಜ-ಅಜ್ಜಿ 14 ವರ್ಷದ ಬಾಲಕನಿಗೆ ಓದುವಂತೆ ಬುದ್ಧಿ ಹೇಳಿದ್ದಾರೆ. ಆದರೆ ಇದರಿಂದ ನೊಂದ 10ನೇ ತರಗತಿ ಬಾಲಕ ರೈಲು ಹತ್ತಿ ಗೋವಾಗೆ ತೆರಳಲಲು ಪ್ಲಾನ್ ಮಾಡಿದ್ದಾನೆ. ಅಂತೆಯೇ ವಡೋದರಾ ರೈಲ್ವೇ ನಿಲ್ದಾಣಕ್ಕೂ ಬಂದಿದ್ದಾನೆ. ಆದರೆ ಬಾಲಕನಲ್ಲಿ ಆಧಾರ್ ಕಾರ್ಡ್ ಇಲ್ಲದಿದ್ದರಿಂದ ಆತನಿಗೆ ಟಿಕೆಟ್ ಸಿಕ್ಕಿರಲಿಲ್ಲ. ನಂತರ ಆತ ಪುಣೆಗೆ ಬಸ್ಸಿನಲ್ಲಿ ತೆರಳಲು ನಿರ್ಧರಿಸಿದ್ದಾನೆ. ಅಲ್ಲಿಂದ ಗೋವಾಕ್ಕೆ ಮತ್ತೊಂದು ಬಸ್ ಹತ್ತಿದ್ದಾನೆ.

    ಗೋವಾಕ್ಕೆ ತಲುಪಿದ ಬಾಲಕ ಅಲ್ಲಿ ಕ್ಲಬ್, ರೆಸ್ಟೋರೆಂಟ್ ನಲ್ಲಿ ಸುತ್ತಾಡಿಕೊಂಡು ಎಂಜಾಯ್ ಮಾಡಿದ್ದಾನೆ. ತನ್ನ ಕೈಯಲ್ಲಿದ್ದ ಹಣವೆಲ್ಲ ಮುಗಿಯುತ್ತಿದ್ದಂತೆಯೇ ಆತ ಮತ್ತೆ ಪುಣೆಯತ್ತ ಬರಲು ತಿರ್ಮಾನಿಸಿದ್ದಾನೆ. ಅಲ್ಲದೆ ಹೊಸ ಸಿಮ್ ಕಾರ್ಡ್ ತೆಗೆದುಕೊಂಡಿದ್ದಾನೆ.

    ಇತ್ತ ಮಗನನ್ನು ಹುಡುಕಾಡಿ ಬೇಸತ್ತ ಪೋಷಕರು ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬೆನ್ನಲ್ಲೇ ಪೋಷಕರಿಗೆ ಮತ್ತೊಂದು ಶಾಕ್ ಕಾದಿದ್ದು, ಮನೆಯಲ್ಲಿದ್ದ 1.5 ಲಕ್ಷ ರೂ. ನಗದು ಕೂಡ ಕಾಣೆಯಾಗಿತ್ತು. ಪೋಷಕರ ದೂರು ದಾಖಲಿಸಿಕೊಂಡ ಪೊಲೀಸರು ಬಾಲಕನ ಪತ್ತೆಗೆ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಬಾಲಕನ ಮೊಬೈಲ್ ಫೋನ್ ಸ್ವಿಚ್ಛ್ ಆಫ್ ಎಂದು ಬರುತ್ತಿದ್ದರಿಂದ ಪೊಲೀಸರಿಗೆ ಆತನ ಪತ್ತೆ ಮಾಡಲು ಅಸಾಧ್ಯವಾಗಿತ್ತು.

    ಇನ್ನು ಬಾಲಕ ಫೋನ್ ಸ್ವಿಚ್ಛ್ ಆಫ್ ಮಾಡಿಕೊಂಡು ಹೊಸ ಸಿಮ್ ತೆಗೆದುಕೊಳ್ಳುತ್ತಿದ್ದಂತೆಯೇ ಟ್ರೇಸ್ ಮಾಡಿದ್ದ ಪೊಲೀಸರು, ಪುಣೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಹೀಗಾಗಿ ಕೂಡಲೇ ಪೊಲೀಸರು ಬಾಲಕನ ಪತ್ತೆ ಮಾಡಿದ್ದಾರೆ. ಅಲ್ಲದೆ ವಡೋದರ ಪೊಲೀಸರಿಗೆ ಬಾಲಕನನ್ನು ಒಪ್ಪಿಸಿದ್ದಾರೆ.

  • ಮದ್ವೆ ಪಾರ್ಟಿ ನೀಡದ ಗೆಳೆಯನನ್ನ ಕೊಂದೇ ಬಿಟ್ರು!

    ಮದ್ವೆ ಪಾರ್ಟಿ ನೀಡದ ಗೆಳೆಯನನ್ನ ಕೊಂದೇ ಬಿಟ್ರು!

    – ಹಿಂದಿನ ದಿನವೇ ಪತ್ನಿಯನ್ನ ಕರೆ ತಂದಿದ್ದ
    – ಎಣ್ಣೆ ಪಾರ್ಟಿ ಬೇಕೆಂದು ಹಠ ಹಿಡಿದಿದ್ದ ನಾಲ್ವರು!

    ಲಕ್ನೋ: ಮದುವೆ ಆಗಿದ್ದ ಖುಷಿಗೆ ಪಾರ್ಟಿ ನೀಡದ ಗೆಳೆಯನನ್ನ ಆತನ ಕುಚುಕುಗಳೇ ಕೊಂದಿರುವ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಪಾಲಿಮುಕಿಮ್ಪುರ ಗ್ರಾಮದಲ್ಲಿ ನಡೆದಿದೆ.

    ಬಬ್ಲು ಸೂರ್ಯವಂಶಿ ಕೊಲೆಯಾದ ನವ ವಿವಾಹಿತ. ಪಶು ವ್ಯಾಪಾರಿಯಾಗಿದ್ದ ಬಬ್ಲು ಹಿಂದಿನ ದಿನವೇ ಪತ್ನಿಯನ್ನ ಮನೆಗೆ ಕರೆ ತಂದಿದ್ದನು. ಪತ್ನಿ ಆಗಮನದ ಹಿನ್ನೆಲೆ ಬಬ್ಲು ಸಗ ಖುಷಿಯಲ್ಲಿದ್ದನು. ವಧು ಬಂದ ಮರುದಿನ ಬಬ್ಲು ಗೆಳೆಯನ ಮನೆಗೆ ಹೋಗಿದ್ದಾನೆ. ನಾಲ್ವರು ಗೆಳೆಯರು ಮದುವೆಯಾದ ಖುಷಿಗೆ ಮದ್ಯದ ಪಾರ್ಟಿ ನೀಡಬೇಕೆಂದು ಒತ್ತಾಯಿಸಿದ್ದಾರೆ. ಆದ್ರೆ ಬಬ್ಲು ಮದ್ಯದ ಪಾರ್ಟಿ ನೀಡಲು ಒಪ್ಪಿಲ್ಲ.

    ಬಬ್ಲು ಪಾರ್ಟಿ ನೀಡಲು ಒಪ್ಪದಿದ್ದಾಗ ಗೆಳೆಯರ ನಡುವೆ ಗಲಾಟೆ ನಡೆದಿದೆ. ಕೊನೆಗೆ ಗೆಳೆಯರೆಲ್ಲರೂ ಸೇರಿ ಚಾಕುವಿನಿಂದ ಬಬ್ಲುವಿನ ಕತ್ತು ಕೊಯ್ದು ಎಸ್ಕೇಪ್ ಆಗಿದ್ದಾರೆ. ತದನಂತರ ಬಬ್ಲು ಕುಟುಂಬಸ್ಥರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಕುಟುಂಬಸ್ಥರು ಬಬ್ಲುನನ್ನು ಅಲಿಗಢ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಬಬ್ಲುನನ್ನು ಪರೀಕ್ಷಿಸಿ ಮೃತಪಟ್ಟಿರೋದನ್ನ ಖಚಿತ ಪಡಿಸಿದ್ದಾರೆ.

    ಎರಡನೇ ಮದುವೆ: ಬಬ್ಲುಗೆ ಏಳು ವರ್ಷಗಳ ಹಿಂದೆ ಪಾಲಿ ಗ್ರಾಮದ ನಾಗಿಣಿ ಎಂಬವರನ್ನ ಮದುವೆಯಾಗಿದ್ದನು. ದಂಪತಿಗೆ ಎರಡು ಮಕ್ಕಳಿವೆ. ಆದ್ರೆ ಕಳೆದ ಎರಡ್ಮೂರು ವರ್ಷಗಳಿಂದ ನಾಗಿಣಿ ಆನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ನಾಗಿಣಿಯೇ ತನ್ನ ಸ್ವಂತ ತಂಗಿ ಜೊತೆ ಪತಿಗೆ ಎರಡನೇ ಮದುವೆ ಮಾಡಿಸಿ ಮನೆಗೆ ಕರೆ ತಂದಿದ್ದರು.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕಿ, ಮೃತದೇಹವನ್ನ ಮರಣೋತ್ತರ ಶವ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇತ್ತ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದರು. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ನಾವು ಬಹಳ ಕೇರ್ ಫುಲ್ ಆಗಿರ್ಬೇಕು – ಡ್ರಗ್ಸ್ ಮಾಫಿಯಾ ಬಗ್ಗೆ ಹರಿಪ್ರಿಯಾ ಮಾತು

    ನಾವು ಬಹಳ ಕೇರ್ ಫುಲ್ ಆಗಿರ್ಬೇಕು – ಡ್ರಗ್ಸ್ ಮಾಫಿಯಾ ಬಗ್ಗೆ ಹರಿಪ್ರಿಯಾ ಮಾತು

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಬಗ್ಗೆ ನೀರ್ ದೋಸೆ ಬೆಡಗಿ ನಟಿ ಹರಿಪ್ರಿಯಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಇಂದು ಹರಿಪ್ರಿಯ ಮತ್ತು ದಿಗಂತ್ ನಟನೆಯ ತೆಲುಗು ಸಿನಿಮಾದ ರಿಮೇಕ್ ಚಿತ್ರವೊಂದು ಸೆಟ್ಟೇರಿದೆ. ಈ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನನಗೆ ಡ್ರಗ್ಸ್ ಬಗ್ಗೆ ಮಾಹಿತಿ ಇಲ್ಲ. ನಿಮ್ಮ ಮಾಧ್ಯಮಗಳಿಂದಾನೇ ಆ ವಿಷಯ ಎಲ್ಲ ಗೊತ್ತಾಯ್ತು ಎಂದಿದ್ದಾರೆ.

    ನಾನು ಯಾವ ಪಾರ್ಟಿನಲ್ಲೂ ಇದುವರೆಗೂ ಭಾಗಿಯಾಗಿಲ್ಲ. ಡ್ರಗ್ಸ್ ವಿಚಾರದಲ್ಲಿ ತಪ್ಪು ಮಾಡಿರೋರ ಹೆಸರೆಲ್ಲ ಹೊರಗೆ ಬರಬೇಕು. ನಾವು ಎಷ್ಟೋ ಜನಕ್ಕೆ ಸ್ಫೂರ್ತಿಯಾಗಿರುತ್ತೇವೆ. ಹಾಗಾಗಿ ನಾವು ಬಹಳ ಕೇರ್ ಫುಲ್ ಆಗಿ ಇರಬೇಕು. ಈ ವಿಚಾರದಲ್ಲಿ ತಾರತಮ್ಯ ಆಗಬಾರದು ಎಂದರು. ಜೊತೆಗೆ ಕೊರೊನಾ ಸಮಯದಲ್ಲಿ ಎಲ್ಲರಿಗೂ ಕಷ್ಟವಾಗಿತ್ತು. ಈಗ ಶೂಟಿಂಗ್ ಆರಂಭವಾಗಿರುವುದು ಖುಷಿಯಾಗಿದೆ ಎಂದು ಹೇಳಿದ್ದಾರೆ.

    ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ಸದ್ಯ ಸಿಸಿಬಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈಗಾಗಲೇ ಈ ವಿಚಾರದಲ್ಲಿ ನಟಿಮಣಿಯರಾದ ಸಂಜನಾ ಗಲ್ರಾನಿ ಮತ್ತು ತುಪ್ಪದ ಬೆಡಗಿ ರಾಗಿಣಿ ಆರೆಸ್ಟ್ ಆಗಿ ಜೈಲು ಹಕ್ಕಿಗಳಾಗಿದ್ದಾರೆ.

  • ಪರಪ್ಪನ ಅಗ್ರಹಾರ ಜೈಲಲ್ಲೇ ಸಂಜನಾ ಹುಟ್ಟುಹಬ್ಬ

    ಪರಪ್ಪನ ಅಗ್ರಹಾರ ಜೈಲಲ್ಲೇ ಸಂಜನಾ ಹುಟ್ಟುಹಬ್ಬ

    ಬೆಂಗಳೂರು: ಇಂದು ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾ ಹುಟ್ಟುಹಬ್ಬ. ಆದರೆ ಈ ಬಾರಿ ಸಂಜನಾ ಪರಪ್ಪನ ಅಗ್ರಹಾರ ಜೈಲಿನಲ್ಲೇ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳಬೇಕಾಗಿದೆ. ಇದನ್ನೂ ಓದಿ: ನಟಿ ಸಂಜನಾ ಹೆಸರಲ್ಲಿದೆ ಬರೋಬ್ಬರಿ 11 ಬ್ಯಾಂಕ್ ಅಕೌಂಟ್!

    ‘ಗಂಡ ಹೆಂಡತಿ’ ಬೆಡಗಿಯ ವಿಶೇಷ ದಿನಕ್ಕೆ ಡ್ರಗ್ಸ್ ಮಾಫಿಯಾ ಕಾವು ತಟ್ಟಿದೆ. ಜೈಲಿನಲ್ಲಿರುವ ಸಂಜನಾಗೆ ಈ ಬಾರಿಯ ಹುಟ್ಟುಹಬ್ಬದ ಸಂಭ್ರಮವಿಲ್ಲ. ಇಂದು ಸಂಜನಾ 31ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಸಂಜನಾ ಮನೆಯವರ ಜೊತೆಗಿಲ್ಲ.  ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಲ್ಲಿ ರಾಗಿಣಿ, ಸಂಜನಾಗೆ ರಾಜಾತಿಥ್ಯ

    ಸಾಮಾನ್ಯವಾಗಿ ಸಂಜನಾ ತಮ್ಮ ಹುಟ್ಟುಹಬ್ಬಕ್ಕೂ ಎರಡು ದಿನದ ಮುಂಚೆಯೇ ಬರ್ತ್ ಡೇ ಸೆಲೆಬ್ರೇಷನ್‍ನಲ್ಲಿ ಬ್ಯುಸಿಯಾಗುತ್ತಿದ್ದರು. ಪ್ರತಿವರ್ಷ ಸಂಜನಾ ಹುಟ್ಟುಹಬ್ಬಕ್ಕಾಗಿ ನಟಿಯ ಆಪ್ತ ರಾಹುಲ್ ಅದ್ಧೂರಿಯಾಗಿ ಪಾರ್ಟಿಯನ್ನು ಏರ್ಪಡಿಸುತ್ತಿದ್ದ. ಆದರೆ ಇಂದು ರಾಹುಲ್ ಕೂಡ ಜೈಲಿನಲ್ಲಿದ್ದು, ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಲು ಕೂಡ ಸಾಧ್ಯವಾಗಿಲ್ಲ.

    ಕಳೆದ ವರ್ಷ ಬೆಂಗಳೂರು ಹಾಗೂ ಮುಂಬೈನಲ್ಲಿ ಸಂಜನಾ ಹುಟ್ಟುಹಬ್ಬದ ಪಾರ್ಟಿ ಮಾಡಿದ್ದರು. ಅಲ್ಲದೇ ಕಳೆದ ಬಾರಿಯ ಸಂಜನಾ ಬರ್ತ್ ಡೇ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಆದರೆ ಈ ಬಾರಿ ಪರಪ್ಪನ ಅಗ್ರಹಾರ ಜೈಲಿನಲ್ಲೇ ಸಂಜನಾ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಬೇಕಾಗಿದೆ.

    ಕಳೆದ ಒಂದೂವರೆ ತಿಂಗಳಿಂದ ಜೈಲಿನಲ್ಲಿರುವ ನಟಿಯರಾದ ಸಂಜನಾ ಮತ್ತು ರಾಗಿಣಿಗೆ ಶುಕ್ರವಾರ ಕೂಡ ಜಾಮೀನು ಸಿಗಲಿಲ್ಲ. ಬದಲಿಗೆ ಇಬ್ಬರು ನಟಿಯರ ನ್ಯಾಯಾಂಗ ಬಂಧನದ ಅವಧಿ ಮತ್ತೆ ವಿಸ್ತರಣೆ ಆಗಿದೆ. ಅಕ್ಟೋಬರ್ 23ರವರೆಗೆ ರಾಗಿಣಿ, ಸಂಜನಾ ನ್ಯಾಯಾಂಗ ಬಂಧನ ವಿಸ್ತರಿಸಿ ಎನ್‍ಡಿಪಿಎಸ್ ವಿಶೇಷ ಕೋರ್ಟ್ ಆದೇಶ ನೀಡಿದೆ.

  • ಮದುವೆಯ ಬಳಿಕ ನಾನು ಯಾವುದೇ ಪಾರ್ಟಿಗಳನ್ನು ಮಾಡಿಲ್ಲ: ಅಯ್ಯಪ್ಪ

    ಮದುವೆಯ ಬಳಿಕ ನಾನು ಯಾವುದೇ ಪಾರ್ಟಿಗಳನ್ನು ಮಾಡಿಲ್ಲ: ಅಯ್ಯಪ್ಪ

    ಬೆಂಗಳೂರು: ಮದುವೆಯ ಬಳಿಕ ನಾನು ಯಾವುದೇ ಪಾರ್ಟಿ ಮಾಡಿಲ್ಲ ಎಂದು ಬಿಗ್ ಬಾಸ್ ಸ್ಪರ್ಧಿ ಮತ್ತು ಕ್ರಿಕೆಟಿಗ ಅಯ್ಯಪ್ಪ ಹೇಳಿದ್ದಾರೆ.

    ಡ್ರಗ್ಸ್ ವಿಚಾರವಾಗಿ ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಳೆದ ಮೂರು ದಿನಗಳ ಹಿಂದೆ ನನಗೆ ನೋಟಿಸ್ ಬಂದಿತ್ತು. ಹೀಗಾಗಿ ಕರೆದಾಗ ಹೋಗುವುದು ನನ್ನ ಕರ್ತವ್ಯ ಹೋಗಿದ್ದೇನೆ. ಕೆಲ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ನನಗೆ ಗೊತ್ತಿದ್ದ ಉತ್ತರವನ್ನು ಹೇಳಿ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

    ನನ್ನ ವೃತ್ತಿ ಜೀವನವೇ ಬೇರೆ, ಇದಕ್ಕೂ ನನಗೂ ಸಂಬಂಧವಿಲ್ಲ. ನಾವು ಪಾರ್ಟಿಗಳನ್ನು ನೋಡಿದ್ದೇವೆ. ಆದರೆ ಡ್ರಗ್ ಪಾರ್ಟಿಗಳನ್ನು ನಾನು ಕಂಡಿಲ್ಲ. ನಾವು ಪಾರ್ಟಿಯಲ್ಲಿ ಸಂಗೀತ ಕೇಳಿಸಿಕೊಂಡು ಬರುತ್ತಿದ್ದೆವು. ಸಾಮಾನ್ಯ ಪ್ರಶ್ನೆಗಳನ್ನು ಅಧಿಕಾರಿಗಳು ನನಗೆ ಕೇಳಿದರು. ನನ್ನ ವೃತ್ತಿಯ ಬಗ್ಗೆ ಕೇಳಿದರು. ಜಾಸ್ತಿ ಸಮಯ ಯಾರ ಜೊತೆ ಕಳೆಯುತ್ತಿರಾ ಎಂದು ಪ್ರಶ್ನೆ ಮಾಡಿದರು. ಅದಕ್ಕೆಲ್ಲ ಸಮರ್ಪಕ ಉತ್ತರ ನೀಡಿ ವಾಪಸ್ ಬಂದೆ ಎಂದು ಅಯ್ಯಪ್ಪ ಹೇಳಿದ್ದಾರೆ.

    ನನಗೆ ಯಾರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಗೊತ್ತಿಲ್ಲ. ನಮ್ಮ ವೃತ್ತಿಯಲ್ಲಿ ಇದೆಲ್ಲ ಇಲ್ಲ. ನಾವು ಬ್ಯಾನ್ ಆದ ಯಾವುದೇ ವಸ್ತುಗಳನ್ನು ಸೇವಿಸುವುದಿಲ್ಲ. ಇದರ ಬಗ್ಗೆ ನಮ್ಮ ವೃತ್ತಿಯಲ್ಲಿ ಹೇಳಿಕೊಡುತ್ತಾರೆ. ನಾನು ಪಾರ್ಟಿಗಳಿಗೆ ಮದುವೆಗೂ ಮುಂಚೆ ಹೋಗುತ್ತಿದೆ. ಮದುವೆಯ ನಂತರ ಯಾವುದೇ ಪಾರ್ಟಿ ಮಾಡಿಲ್ಲ. ಕೋಚಿಂಗ್ ಮಾಡಿಕೊಂಡು ಸುಮ್ಮನಿದ್ದೇನೆ. ನೋಟಿಸ್ ಬಂದಾಗ ಶಾಕ್ ಆಯ್ತು, ಆದರೆ ವಿಚಾರಣೆ ನಂತರ ಸರಿ ಹೋಯ್ತು ಎಂದು ಅಯ್ಯಪ್ಪ ತಿಳಿಸಿದ್ದಾರೆ.

  • ಸಾರಾ, ರಿಯಾ, ಸುಶಾಂತ್ ಸೇರಿ ತೋಟದ ಮನೆಯಲ್ಲಿ ಪಾರ್ಟಿ ಮಾಡ್ತಿದ್ರು: ಮ್ಯಾನೇಜರ್

    ಸಾರಾ, ರಿಯಾ, ಸುಶಾಂತ್ ಸೇರಿ ತೋಟದ ಮನೆಯಲ್ಲಿ ಪಾರ್ಟಿ ಮಾಡ್ತಿದ್ರು: ಮ್ಯಾನೇಜರ್

    – ಗಾಂಜಾ, ಡ್ರಿಂಕ್ಸ್ ಎಲ್ಲ ಬರುತ್ತಿತ್ತು

    ಮುಂಬೈ: ನಟಿ ಸಾರಾ ಅಲಿ ಖಾನ್ ಮತ್ತು ರಿಯಾ ಚಕ್ರವರ್ತಿ ಮತ್ತು ಮೃತ ನಟ ಸುಶಾಂತ್ ಸಿಂಗ್ ರಜಪೂತ್ ಎಲ್ಲ ಸೇರಿ ಸುಶಾಂತ್ ಅವರ ತೋಟದ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದರು ಎಂದು ಫಾರ್ಮ್‍ಹೌಸ್ ಮ್ಯಾನೇಜರ್ ಆಗಿದ್ದ ರಯೀಸ್ ಹೇಳಿದ್ದಾರೆ.

    ಸದ್ಯ ಡ್ರಗ್ ಪ್ರಕರಣ ಇಡೀ ಬಾಲಿವುಡ್ ಚಿತ್ರರಂಗವನ್ನೇ ಕಾಡುತ್ತಿದೆ. ನಟ ಸುಶಾಂತ್ ಸಿಂಗ್ ಸಾವಿನ ನಂತರ ಹಲವಾರು ವಿಚಾರಗಳು ಬೆಳಕಿಗೆ ಬರುತ್ತಿವೆ. ಡ್ರಗ್ ಮಾಫಿಯಾದ ವಿಚಾರವಾಗಿ ಸುಶಾಂತ್ ಗೆಳತಿ ನಟಿ ರಿಯಾ ಚಕ್ರವರ್ತಿ ಅರೆಸ್ಟ್ ಆಗಿದ್ದಾರೆ. ಸದ್ಯ ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಹಲವಾರು ಬಾಲಿವುಡ್ ಮಂದಿ ಹೆಸರು ಕೂಡ ಇದರಲ್ಲಿ ಕೇಳಿ ಬಂದಿದೆ. ಇದನ್ನೂ ಓದಿ: ರಿಯಾ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕೆ ಸೂಕ್ತ ಆಧಾರಗಳಿಲ್ಲ- ಮುಂಬೈ ಕೋರ್ಟ್

    ಈಗ ಇದೇ ವಿಚಾರವಾಗಿ 2018ರಿಂದ ಸುಶಾಂತ್ ಲೋನವಾಲಾ ತೋಟದ ಮನೆಯ ಮ್ಯಾನೇಜರ್ ಆಗಿರುವ ರಯೀಸ್ ಮಾತನಾಡಿದ್ದು, ಈ ತೋಟದ ಮನೆಗೆ ಸುಶಾಂತ್ ಅವರ ಜೊತೆ ಸಾರಾ ಅಲಿ ಖಾನ್ ಮತ್ತು ರಿಯಾ ಚಕ್ರವರ್ತಿಯವರು ಕೂಡ ಬರುತ್ತಿದ್ದರು. ಇಲ್ಲಿಯೇ ಪಾರ್ಟಿ ಮಾಡುತ್ತಿದ್ದರು. ಜೊತೆಗೆ ಪಾರ್ಟಿಗೆ ಸ್ಮೋಕಿಂಗ್ ಪೆಪರ್ ಕೂಡ ಬರುತ್ತಿತ್ತು. ಆದರೆ ಅದನ್ನು ಅವರು ಯಾವುದಕ್ಕೆ ಬಳಸುತ್ತಿದ್ದರು ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ಲಾಕ್‍ಡೌನ್ ಆರಂಭ ಆಗುವ ಎರಡು ವಾರದ ಮುಂಚೆ ಸುಶಾಂತ್ ಸಿಂಗ್ ಇಲ್ಲಿಗೆ ಬಂದಿದ್ದರು. ಅವರ ಜೊತೆಗೆ ಸಾರಾ ಮತ್ತು ರಿಯಾ ಕೂಡ ಆಗಮಿಸಿದ್ದರು ಎಂದು ರಯೀಸ್ ತಿಳಿಸಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ರಿಯಾ ಸಹೋದರ ಶೌವಿಕ್ ಇಲ್ಲಿಯೇ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದರು. ಲಾಕ್‍ಡೌನ್ ಆದ ನಂತರ ಏಪ್ರಿಲ್ 17ರಂದು ಸುಶಾಂತ್ ತೋಟದ ಮನೆಗೆ ಬರುತ್ತೇವೆ ಎಂದು ಹೇಳಿದ್ದರು. ಆದರೆ ನಂತರ ಅವರ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಕರೆ ಮಾಡಿ ಪ್ಲಾನ್ ಕ್ಯಾನ್ಸಲ್ ಆಗಿದೆ ಎಂದರು ಅಂತಾ ರಯೀಸ್ ತಿಳಿಸಿದ್ದಾರೆ. ಇದನ್ನೂ ಓದಿ: ಜಾಮೀನು ಅರ್ಜಿ ವಜಾ – ರಿಯಾ ಚಕ್ರವರ್ತಿಗೆ ಜೈಲೇ ಗತಿ

    ಜೊತೆಗೆ ಲೋನವಾಲಾ ತೋಟದ ಮನೆ ದ್ವೀಪದಲ್ಲಿದ್ದು, ಇಲ್ಲಿನ ಬೋಟ್ ಮ್ಯಾನ್ ಜಗದೀಶ್ ದಾಸ್ ಎನ್‍ಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಈ ತೋಟದ ಮನೆ ಸುಶಾಂತ್ ಅವರ ಪಾರ್ಟಿ ಮನೆಯಾಗಿತ್ತು. ಸುಶಾಂತ್ ಅವರ ಸ್ನೇಹಿತರ ಮತ್ತು ಬಾಲಿವುಡ್ ತಾರೆಯರಾದ ರಿಯಾ ಚಕ್ರವರ್ತಿ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಮತ್ತು ಅರೆಸ್ಟ್ ಆಗಿರುವ ಶಂಕಿತ ಡ್ರಗ್ ಪೆಡ್ಲರ್ ಜೈದ್ ವಿಲಾತ್ರಾ ಕೂಡ ಇಲ್ಲಿಗೆ ಬರುತ್ತಿದ್ದರು ಎಂದು ಮಾಹಿತಿ ನೀಡಿದ್ದಾನೆ.

    ನಟ-ನಟಿಯರು ಮಾಡುತ್ತಿದ್ದ ಪಾರ್ಟಿಯಲ್ಲಿ ಗಾಂಜಾ ಮತ್ತು ಡ್ರಿಂಕ್ಸ್ ಕಾಮಾನ್ ಆಗಿತ್ತು. ಇದು ದ್ವೀಪವಾದ ಕಾರಣ ಇಲ್ಲಿನ ಗುಹೆ, ಕಲ್ಲು ಬಂಡೆ ಮತ್ತು ನದಿ ತೀರದಲ್ಲಿ ಪಾರ್ಟಿ ಮಾಡುತ್ತಿದ್ದರು. ಅವರ ಪಾರ್ಟಿಯಲ್ಲಿ ದುಬಾರಿ ವೊಡ್ಕಾ ಮದ್ಯವನ್ನು ಬಳಸುತ್ತಿದ್ದರು ಎಂದು ಜಗದೀಶ್ ದಾಸ್ ಹೇಳಿದ್ದಾರೆ. ಈಗ ಲೋನವಾಲಾ ತೋಟದ ಮನೆಯನ್ನೇ ಆಧಾರವಾಗಿ ಇಟ್ಟುಕೊಂಡು ಎನ್‍ಸಿಬಿ ತನಿಖೆ ಮಾಡುತ್ತಿದೆ. ಇದನ್ನೂ ಓದಿ: ಸಾರಾ, ರಾಕುಲ್ ಡ್ರಗ್ ಸೇವಿಸ್ತಿದ್ದಾರೆ – ಬಾಲಿವುಡ್‍ನಲ್ಲಿ ಬಿರುಗಾಳಿ ಎಬ್ಬಿಸಿದ ರಿಯಾ

    ಕಳೆದ ಜೂನ್ 14ರಂದು ಮುಂಬೈನ ತನ್ನ ನಿವಾಸದಲ್ಲಿ ಸುಶಾಂತ್ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ನಂತರ ಕೆಲವರು ಕೊಲೆ ಎಂದು ಆರೋಪ ಮಾಡಿದ್ದರು. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸಿಬಿಐ ಇದರ ಬಗ್ಗೆ ತನಿಖೆ ಮಾಡುತ್ತಿದೆ. ಜೊತೆಗೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಡ್ರಗ್ ಕೇಸಿನಲ್ಲಿ ಅರೆಸ್ಟ್ ಕೂಡ ಆಗಿದ್ದಾರೆ.

  • ನಶೆ‌ ನಟಿಯರು ಅರೆಸ್ಟ್‌ – ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದ ನಟ – ನಟಿಯರು ಸೈಲೆಂಟ್‌

    ನಶೆ‌ ನಟಿಯರು ಅರೆಸ್ಟ್‌ – ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದ ನಟ – ನಟಿಯರು ಸೈಲೆಂಟ್‌

    ಬೆಂಗಳೂರು: ನಟಿಯರಾದ ರಾಗಿಣಿ, ಸಂಜನಾ ಬಂಧನದ ಬಳಿಕ ಇವರ ಜೊತೆ ಸದಾ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದ ಯುವ ನಟ, ನಟಿಯರು ಮೌನಕ್ಕೆ ಶರಣಾಗಿದ್ದಾರೆ.

    ಹೌದು. ಸ್ಯಾಂಡಲ್‌ವುಡ್‌ನ ಮೂರನೇ ತಲೆಮಾರಿನ ನಟ, ನಟಿಯರು ರಾಗಿಣಿ, ಸಂಜನಾ ಬಂಧನ ಬಳಿಕ ಡ್ರಗ್ಸ್‌ ವಿಚಾರಕ್ಕೆ ಸಂಬಂಧಿಸಿದಂತೆ ಅಂತರ ಕಾಯ್ದುಕೊಂಡಿದ್ದಾರೆ. ವಿಶೇಷ ಏನೆಂದರೆ ಇಬ್ಬರು ನಟಿಯರ ಜೊತೆ ಮೂರನೇ ತಲೆಮಾರಿನ ಹಲವು ನಟ, ನಟಿಯರಿಗೆ ಹೆಚ್ಚಿನ ಸಂಪರ್ಕವಿತ್ತು. ಅವರೆಲ್ಲರೂ ಈಗ ಡ್ರಗ್ಸ್‌ ಮಾಫಿಯಾಯದಲ್ಲಿ ನಮ್ಮ ಹೆಸರು ಬರಬಹುದು ಎಂಬ ಭಯಕ್ಕೆ ಬಿದ್ದು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

    ಈ ಪ್ರಕರಣ ಬಯಲಿಗೆ ಬರುವ ಮೊದಲು ಇವರೆಲ್ಲ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರು. ಯಾವಾಗ ಇಂದ್ರಜಿತ್‌ ಲಂಕೇಶ್‌ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಅವರು ಹೊಸ ತಲೆಮಾರಿನ ಯುವ ಕಲಾವಿದರು ಡ್ರಗ್ಸ್‌ ದಂಧೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರೋ ಅಲ್ಲಿಂದ ಇವರೆಲ್ಲರಿಗೂ ಭಯ ಮೂಡಲಾರಂಭಿಸಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಮಾಜಿ ಪರಿಷತ್‌ ಸದಸ್ಯರೊಬ್ಬರಿಗೆ ಲಂಕಾ ಕ್ಯಾಸಿನೋ ನಂಟು

    ಒಂದು ವೇಳೆ ಪ್ರತಿಕ್ರಿಯೆ ನೀಡಿದರೆ ಸುದ್ದಿಯಾಗುತ್ತದೆ. ಸುದ್ದಿಯಾದ ಕೂಡಲೇ ಪಾರ್ಟಿಯಲ್ಲಿ ಯಾರೋ ತೆಗೆದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ. ಹೀಗಾಗಿ ಈ ವಿಚಾರಕ್ಕೆ ಹೋಗಿ ಕೈ ಸುಟ್ಟು ಕೊಳ್ಳುವುದು ಯಾಕೆ ಎಂದು ಭಾವಿಸಿ ತೆಪ್ಪಗಿದ್ದಾರೆ ಎನ್ನಲಾಗುತ್ತಿದೆ.

    ಈ ನಟ, ನಟಿಯರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಆದರೆ ಡ್ರಗ್ಸ್‌ ಪ್ರಕರಣ ಬೆಳಕಿಗೆ ಬಂದ ನಂತರ ಅಂತರ ಕಾಯ್ದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ನಟಿಯರ ವಿಚಾರಣೆ ಸಂದರ್ಭದಲ್ಲಿ ನಮ್ಮ ಹೆಸರನ್ನು ಬಾಯಿಬಿಟ್ಟರೆ ಏನು ಮಾಡುವುದು ಎಂಬ ಚಿಂತೆಯೂ ಇವರನ್ನು ಕಾಡುತ್ತಿದೆ.