Tag: ಪಾದರಾಯನಪುರ ಪ್ರಕರಣ

  • ನನ್ನ ಮೇಲಿರೋ ಸಿಟ್ಟಿಗೆ ರಾಮನಗರ ಜನರ ಜೀವದ ಜೊತೆ ಚೆಲ್ಲಾಟ: ಎಡಿಜಿಪಿ ವಿರುದ್ಧ ಎಚ್‍ಡಿಕೆ ಆರೋಪ

    ನನ್ನ ಮೇಲಿರೋ ಸಿಟ್ಟಿಗೆ ರಾಮನಗರ ಜನರ ಜೀವದ ಜೊತೆ ಚೆಲ್ಲಾಟ: ಎಡಿಜಿಪಿ ವಿರುದ್ಧ ಎಚ್‍ಡಿಕೆ ಆರೋಪ

    ಬೆಂಗಳೂರು: ಪಾದರಾಯನಪುರ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್ ಮಾಡುವ ಮೂಲಕ ನನ್ನ ಮೇಲಿರುವ ಸಿಟ್ಟಿಗೆ ರಾಮನಗರ ಜನತೆ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಎಡಿಜಿಪಿ ಅಲೋಕ್ ಮೋಹನ್ ವಿರುದ್ಧ ಆರೋಪ ಮಾಡಿದ್ದಾರೆ.

    ಪಬ್ಲಿಕ್ ಟವಿ ಜೊತೆ ಮಾತನಾಡಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಸಿಎಂ ಬಿ.ಎಸ್ ಯಡಿಯೂರಪ್ಪ ಜೊತೆಗೆ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಜೊತೆಗೆ ಎರಡೆರಡು ಬಾರಿ ಮಾತನಾಡಿದ್ದೇನೆ. ಯಾವುದೇ ಕಾರಣಕ್ಕೂ ಈ ಅಧಿಕಾರಿಗಳ ಮಾತು ಕೇಳಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತ ನಿರ್ಧಾರ ಮಾಡ್ಕೊಬೇಡಿ ಎಂದು ಹೇಳಿದ್ದೆ. ನನಗೆ ಪ್ರಾರಂಭಿಕ ಹಂತದಲ್ಲೇ ಬಂದ ಮಾಹಿತಿ ಪ್ರಕಾರ, ಸರ್ಕಾರಿ ಅಧಿಕಾರಿ ಪ್ರಸ್ತುತ ಇರುವ ಎಡಿಜಿಪಿ ಅವರೇ ಖುದ್ದು ಪಾದರಾಯನಪುರದ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್ ಮಾಡಬೇಕು ಎಂದು ಸರ್ಕಾರದ ಗಮನ ಸೆಳೆದಿದ್ದಾರೆ. ಈ ಬಗ್ಗೆ ಕೂಡ ನಾನು ಸಿಎಂ ಹಾಗೂ ಗೃಹ ಸಚಿವರ ಬಳಿ ಮಾತನಾಡಿದ್ದೆ. ಅವರೂ ನನ್ನ ಮಾತಿಗೆ ಸ್ಪಂದಿಸಿದ್ದರು. ರಾಮನಗರಕ್ಕೆ ಆರೋಪಿಗಳನ್ನು ಶಿಫ್ಟ್ ಮಾಡುವ ಬಗ್ಗೆ ಮರು ಚಿಂತನೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು ಎಂದರು.

    ಆದರೆ 4 ಗಂಟೆ ಬಳಿಕ ಮೊದಲ ಬ್ಯಾಚ್ 49 ಮಂದಿಯನ್ನು ರಾಮನಗರ ಕಾರಾಗೃಹಕ್ಕೆ ಕಳುಹಿಸಿದರು. ಮರುದಿನ ಇನ್ನೂ 72 ಮಂದಿಯನ್ನು ಕರೆದುಕೊಂಡು ಬಂದರು. ಈಗ ಮೊದಲ ಬ್ಯಾಚ್‍ನಲ್ಲಿದ್ದ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಅವರನ್ನು ಮಧ್ಯರಾತ್ರಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. 2ನೇ ಬ್ಯಾಚ್‍ನಲ್ಲಿದ್ದ 72 ಮಂದಿಯಲ್ಲಿ 3 ಜನಕ್ಕೆ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಕೂಡ ನನ್ನ ಬಳಿ ಮಾಹಿತಿ ಇದೆ. ಈ ಮೂವರನ್ನೂ ಕೂಡ ಜೈಲಿನಿಂದ ಆಸ್ಪತ್ರೆಗೆ ಪ್ರಚಾರ ಆಗದಂತೆ ಶಿಫ್ಟ್ ಮಾಡಬೇಕು ಎಂದು ನೋಡುತ್ತಿದ್ದಾರೆ. ಹೀಗಾಗಿ ನಾನು ಸರ್ಕಾರಕ್ಕೆ ಹೇಳುತ್ತಿದ್ದೇನೆ, ಇಂತಹ ಸನ್ನಿವೇಷವನ್ನ ರಾಜಕಾರಣಕ್ಕೆ ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಹೇಳಿದರು.

    ಇಂದು ಕೂಡ ನಾನು ಸಿಎಂ ಹಾಗೂ ಗೃಹ ಸಚಿವರ ಜೊತೆ ಮಾತನಾಡಿದ್ದೇನೆ. ಈ ಆರೋಪಿಗಳನ್ನು ರಾಮನಗರದಿಂದ ಮತ್ತೆ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತೆ, ಅಲ್ಲಿ ಹಜ್ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡುತ್ತಿದ್ದೇವೆ ಎಂದಿದ್ದಾರೆ. ಅಧಿಕಾರಿಗಳು ಆರೋಪಿಗಳನ್ನು ಕರೆತರುವಾಗ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ಕರೆದುಕೊಂಡು ಬಂದಿದ್ದಾರೆ. ಇದರಲ್ಲಿ ಅಧಿಕಾರಿಗಳ ಲೋಪವಿದೆ. ಹೀಗಾಗಿ ರಾಮನಗರದಿಂದ ಬೆಂಗಳೂರಿಗೆ ಶಿಫ್ಟ್ ಮಾಡುವಾಗಲಾದರೂ ವೈದ್ಯರ ಸಲಹೆಗಳನ್ನು ಪಡೆದು ಸಿಬ್ಬಂದಿ, ಅಧಿಕಾರಿಗಳಿಗೆ ಸೋಂಕು ತಗುಲದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಮನವಿ ಮಾಡಿಕೊಂಡರು.

    ಸಿಟ್ಟು ಯಾಕೆ..?
    ನಾನು ಸಿಎಂ ಆಗಿದ್ದಾಗ ಎಡಿಜಿಪಿ ಅಲೋಕ್ ಮೋಹನ್ ಅವರು ಬೆಂಗಳೂರಿನ ಸಿಟಿ ಕಮಿಷನರ್ ಆಗಬೇಕೆಂದು ಎರಡು ಮೂರು ಬಾರಿ ನನ್ನ ಬಳಿ ಬಂದಿದ್ದರು. ಆಗ ನಾನು ಅವರಿಗೆ ಸ್ಪಂದನೆ ಮಾಡಿರಲಿಲ್ಲ. ಹೀಗಾಗಿ ಅವರಿಗೆ ನನ್ನ ಮೇಲಿದ್ದ ಸಿಟ್ಟನ್ನು ನನ್ನ ಜಿಲ್ಲೆಯ ಜನರ ಮೇಲೆ ತೋರಿಸಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಯಾಕೆ ಅವರು ರಾಮನಗರ ಜೈಲನ್ನೇ ಆರಿಸಿ, ಆರೋಪಿಗಳನ್ನು ಅಲ್ಲಿಗೇ ಶಿಫ್ಟ್ ಮಾಡಿ ಎಂದರು? ನಾನು ಸರ್ಕಾರಕ್ಕೆ ಮನವಿ ಮಾಡಿದ್ದರೂ ಅವರು ಮಾತ್ರ ಒತ್ತಡ ಹಾಕಿ ರಾಮನಗರ ಜೈಲಿಗೇ ಆರೋಪಿಗಳನ್ನು ಶಿಫ್ಟ್ ಮಾಡಿದರು. ಇದೆಲ್ಲಾ ಕಾಕತಾಳಿಯ ಇರಬಹುದು. ಆದರೆ ಇಂದು ಬೆಳಗ್ಗೆ ಅವರು ನಡೆದುಕೊಂಡ ರೀತಿ ನೋಡಿದರೆ ಅನುಮಾನ ಹೆಚ್ಚಾಗುತ್ತಿದೆ. ಗೃಹ ಸಚಿವರು ಗುರುವಾರ ರಾತ್ರಿಯೇ ಆರೋಪಿಗಳನ್ನು ಶಿಫ್ಟ್ ಮಾಡುತ್ತೇವೆ ಎಂದಿದ್ದರು. ಇತ್ತ ಬೆಳಗ್ಗೆ ಸ್ಥಳೀಯ ಅಧಿಕಾರಿಗಳು ಜೈಲಿನ ಮುಂದೆ ಬಸ್ಸುಗಳನ್ನು ತಂದು ಆರೋಪಿಗಳನ್ನು ಶಿಫ್ಟ್ ಮಾಡಲು ಮುಂದಾದಾಗ, ಎಡಿಜಿಪಿ ಅವರು ಅವರ ಮೇಲೆ ತಮ್ಮ ಅಧಿಕಾರ ಪ್ರಯೋಗ ಮಾಡಿದ್ದಾರೆ. ಶಿಫ್ಟ್ ಮಾಡಲು ನಾನು ಅನುಮತಿ ಕೊಡಬೇಕು. ಯಾರ ಅನುಮತಿ ಪಡೆದು ಶಿಫ್ಟ್ ಮಾಡಲು ನಿರ್ಧಾರ ತೆಗೆದುಕೊಂಡಿರಿ ಎಂದು ಎಡಿಜಿಪಿ ರೇಗಾಡಿದ್ದಾರೆ ಎಂದು ಆರೋಪಿಸಿದರು.

    ಅಧಿಕಾರಿಯೇ ನೇರ ಹೊಣೆ:
    ನನ್ನ ಮೇಲಿನ ಸಿಟ್ಟಿಗೆ ಎಡಿಜಿಪಿ ರಾಮನಗರ ಜನತೆಯ ಜೀವದ ಜೊತೆ ಚೆಲ್ಲಾಟ ಆಡಿದ್ದು ಸರಿಯಲ್ಲ. ಅಧಿಕಾರಿಯ ಉದ್ಧಟತನಕ್ಕೆ ಜೈಲಿನ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಸ್ಥಿತಿ ಏನಾಗಬೇಡ? ನನ್ನ ಮೇಲಿನ ಸಿಟ್ಟಿಗೆ ಹೀಗೆ ಮಾಡಿದ್ದಾರೆ ಎನಿಸುತ್ತಿದೆ. ಪಾದರಾಯನಪುರ ಆರೋಪಿಗಳನ್ನು ರಾಮನಗಕ್ಕೆ ಶಿಫ್ಟ್ ಮಾಡಿದಾಗಲೇ ನಾನು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದೆ. ನನ್ನ ಜಿಲ್ಲೆಯ ಜನರಿಗೆ ಏನಾದರೂ ಆದರೆ ಅದಕ್ಕೆ ಸರ್ಕಾರ ಹಾಗೂ ಈ ಸಲಹೆ ಕೊಟ್ಟ ಅಧಿಕಾರಿಯೇ ನೇರ ಹೊಣೆ ಹೊರಬೇಕು ಎಂದಿದ್ದೆ. ನನ್ನ ಪ್ರಕಾರ ಈ ವಿಚಾರದಲ್ಲಿ ಸರ್ಕಾರದ ದಾರಿ ತಪ್ಪಿಸಲಾಗಿದೆ. ಅಧಿಕಾರಿ ಹೇಳಿದ ತಕ್ಷಣ ಸರ್ಕಾರ ಇದಕ್ಕೆ ಒಪ್ಪಿಗೆ ಕೊಡಬಾರದಾಗಿತ್ತು. ನಾವು ಹೇಳಿದ ರೀತಿ ಕೆಲಸ ಮಾಡಿ ಎಂದು ಸರ್ಕಾರ ಎಚ್ಚರಿಕೆ ಕೊಟ್ಟು ಕೆಲಸ ಮಾಡಿಸಬೇಕಿತ್ತು. ಹೀಗಾಗಿ ಸರ್ಕಾರದಿಂದಲೂ ಲೋಪ ಆಗಿದೆ ಎಂದು ಕಿಡಿಕಾಡಿದರು.

    ರಾಮನಗರಕ್ಕೆ ಆರೋಪಿಗಳನ್ನು ಶಿಫ್ಟ್ ಮಾಡುತ್ತಾರೆ ಎಂದಾಗಲೇ ರಾಮನಗರದ ಹಲವು ಮಂದಿ ನನಗೆ ಬೆಳಗ್ಗೆಯಿಂದಲೇ ಕರೆ ಮಾಡುತ್ತಾ ಹೆದ್ದಾರಿಯಲ್ಲೇ ವಾಹನಗಳನ್ನು ತಡೆಯುತ್ತೇವೆ ಅನುಮತಿ ಕೊಡಿ ಎಂದು ಕೇಳಿಕೊಂಡಿದ್ದರು. ಆಗ ನಾನು ಕಾರ್ಯಕರ್ತರಿಗೆ ಹಾಗೂ ಜನರಿಗೆ ಹಾಗೆ ಮಾಡಬೇಡಿ ಎಂದಿದ್ದೆ. ನಾನು ಸಿಎಂ ಜೊತೆ ಮಾತನಾಡಿದ್ದೇನೆ. ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ, ರಸ್ತೆಯಲ್ಲಿ ಗಲಾಟೆ ಮಾಡಿಕೊಳ್ಳಲು ಹೋಗಬೇಡಿ ಎಂದು ಮನವಿ ಮಾಡಿದ್ದೆ. ಇಷ್ಟೆಲ್ಲ ಆದ ನಂತರವೂ ಈ ಘಟನೆ ನಡೆದು ಹೋಗಿದೆ ಎಂದು ಎಚ್‍ಡಿಕೆ ಅಸಮಾಧಾನ ಹೊರಹಾಕಿದರು.

    ಇಲ್ಲಿಯವರೆಗೆ ನಾನೆಂದೂ ಸರ್ಕಾರಕ್ಕೆ ಮುಜುಗರ ತರುವಂತೆ ರಾಜಕೀಯ ಮಾಡಿಲ್ಲ. ಸರ್ಕಾರಕ್ಕೆ ಬೆಂಬಲ ಕೊಟ್ಟಿದೆ. ಕೊರೊನಾ ಸೋಂಕಿತರು ಇದ್ದಾರೆ ಎಂದು ಗೊತ್ತಿದ್ದರೂ ಯಾಕೆ ಅವರು ರಾಮನಗರಕ್ಕೆ ಆರೋಪಿಗಳನ್ನು ಶಿಫ್ಟ್ ಮಾಡಿದರು? ಸಲಹೆ ಕೊಟ್ಟವರು ಯಾರು? ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದ 1,500 ಬೆಡ್‍ಗಳಲ್ಲಿ ಈ 120 ಆರೋಪಿಗಳನ್ನು ಇರಿಸಲು ಆಗುತ್ತಿರಲಿಲ್ಲವಾ? ರಾಮನಗರಕ್ಕೇ ಯಾಕೆ ಕರೆತಂದಿರಿ? ಸೋಂಕು ಇಲ್ಲದೇ ರಾಮನಗರದ ಜನ ಶಾಂತ ರೀತಿಯಿಂದ ಇದ್ದಾರೆ. ಆದರೆ ಇಂದು ಈ ಘಟನೆಯಿಂದ ಜನರನ್ನು ಆತಂಕಕ್ಕೀಡು ಮಾಡಿದ್ದೀರಿ. ಜನರ ಜೊತೆಗೆ ಅಧಿಕಾರಿಗಳೇ ಹೆದರಿ ಹೋಗಿದ್ದಾರೆ. ಈ ಪರಿಸ್ಥಿತಿಗೆ ಕಾರಣ ನೀವೇ ತಾನೆ? ಹೀಗೆ ಮಾಡೋದಾಗಿದ್ದರೇ 1 ತಿಂಗಳು ಯಾವ ಪುರುಷಾರ್ಥಕ್ಕೆ ನೀವು ಲಾಕ್‍ಡೌನ್ ಮಾಡಿದ್ದು? ಜನ ನಿಮ್ಮ ಮಾತು ಕೇಳಿದಕ್ಕೆ ಈ ರೀತಿ ವಾತಾವರಣ ಸೃಷ್ಟಿಸಿದ್ದೀರಾ? ಎಂದು ಗೃಹ ಸಚಿವರಿಗೆ ಹೆಚ್‍ಡಿಕೆ ಪ್ರಶ್ನಿಸಿದರು.

    ಪಾದರಾಯನಪುರ ಆರೋಪಿಗಳು ಬಿಟ್ಟರೆ ರಾಮನಗರದಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳಿಲ್ಲ. ಆದರೆ ಈಗ ರಾಮನಗರದ ಜೈಲಿನ ಅಧಿಕಾರಿಗಳು, ಸಿಬ್ಬಂದಿಯಲ್ಲಿ ಕೆಲವರು ಬಾಡಿಗೆ ಮನೆಯಲ್ಲಿದ್ದಾರೆ. ಅವರಿಗೆ ಮನೆ ಮಾಲೀಕರು ಮನೆಯನ್ನು ಖಾಲಿ ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಒಂದು ವೇಳೆ ಈ ಅಧಿಕಾರಿಗಳು, ಸಿಬ್ಬಂದಿಗೆ ಸೋಂಕು ತಗುಲಿದರೆ ಇಡೀ ಜಿಲ್ಲೆಗೆ ಸಮಸ್ಯೆ ಪ್ರಾರಂಭವಾಗುತ್ತದೆ. ಇದಕ್ಕೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಕಿಡಿಕಾರಿದರು.

    ನನ್ನ ಮಗನ ಮದುವೆಯನ್ನು ಸಾಮಾಜಿಕ ಅಂತರ ಕಾಯ್ದುಕೊಂಡು, ನಿಯಮಗಳನ್ನು ಪಾಲಿಕೊಂಡು, ನನ್ನ ತೋಟದ ಮನೆಯಲ್ಲಿ ಮಾಡಿದ್ದೇನೆ. ಆದರೆ ಕೆಲ ಮಾಧ್ಯಮಗಳಲ್ಲಿ ಇದು ತಪ್ಪು, ದೇವೇಗೌಡರನ್ನ ಬಂಧಿಸಿ ಎನ್ನುವ ರೀತಿ ಸುದ್ದಿ ಮಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಯಾವ ರೀತಿ ನಮ್ಮ ಕೆಲ ಸ್ನೇಹಿತರು ಹೇಳಿಕೆ ಕೊಟ್ಟರು. ಈಗ ಈ ಪಾದರಾಯನಪುರ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್ ಮಾಡಿರುವ ಬಗ್ಗೆ ಮಹಾನುಭಾವರು ಏನು ಹೇಳುತ್ತಾರೆ? ಯಾರನ್ನ ಹೊಣೆ ಮಾಡುತ್ತಾರೆ? ಯಾರನ್ನ ಜೈಲಿಗೆ ಕಳುಹಿಸುತ್ತಾರೆ ಎಂದು ಪ್ರಶ್ನಿಸಿದರು.

    ಐಸಿಎಂಆರ್ ಸಲಹೆಗಳನ್ನು ಪಾಲಿಸುವಲ್ಲಿ ಸರ್ಕಾರ ಮಹಾನ್ ಅಪರಾಧ ಮಾಡಿದೆ. ಪಾದರಾಯನಪುರ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್ ಮಾಡಿದ್ದು ಸರ್ಕಾರ ಮಾಡಿರುವ ವಿವೇಕರಹಿತ ತೀರ್ಮಾನ ಎಂಬುದು ನನ್ನ ಅಭಿಪ್ರಾಯ. ಕೇಂದ್ರದ ಸಲಹೆ, ನಿಯಮಗಳನ್ನ ರಾಜ್ಯ ಸರ್ಕಾರ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಹೇಳಿದರು.

  • ವಾರದಲ್ಲಿ ಎರಡು ದಿನ ಮದ್ಯ ಮಾರಾಟ ಮಾಡಿ: ಎಚ್.ವಿಶ್ವನಾಥ್

    ವಾರದಲ್ಲಿ ಎರಡು ದಿನ ಮದ್ಯ ಮಾರಾಟ ಮಾಡಿ: ಎಚ್.ವಿಶ್ವನಾಥ್

    – ಮೈತ್ರಿ ಇದ್ದಿದ್ರೆ ಸಿದ್ದರಾಮಯ್ಯ, ಎಚ್‍ಡಿಕೆ ಟ್ರಂಪ್‍ಗಳಾಗ್ತಿದ್ರು

    ಬೆಂಗಳೂರು: ವಾರದಲ್ಲಿ ಎರಡು ದಿನ ಮದ್ಯ ಮಾರಾಟ ಮಾಡುವ ಮೂಲಕ ವ್ಯಸನಿಗಳು ಸಾವನ್ನಪುವುದನ್ನು ತಪ್ಪಿಸಿ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಮೈಸೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ವಾರದಲ್ಲಿ ಎರಡು ದಿನ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ವ್ಯಸನಿಗಳು ಸಾವನ್ನಪ್ಪುವುದನ್ನು ತಪ್ಪಿಸಬಹುದು. ಅಲ್ಲದೆ ಕಾಳ ಸಂತೆಯಲ್ಲಿ ಮದ್ಯ ಮಾರಾಟ ಆಗುವುದನ್ನು ತಪ್ಪಿಸಬೇಕು. ವಾರದಲ್ಲಿ ಎರಡು ದಿನ ಎಲ್ಲ ವೈನ್ ಶಾಪ್, ಎಂಎಸ್‍ಐಎಲ್ ಮಳಿಗೆಗಳಲ್ಲಿ ನಿಗದಿತ ಅವಧಿಯಲ್ಲಿ ಮದ್ಯ ಮಾರಾಟವಾಗಬೇಕು. ಈಗ ಬಾರ್ ಮಾಲೀಕರೇ ತಮ್ಮ ಬಾರ್ ಗಳಲ್ಲಿ ಕಳ್ಳತನ ಮಾಡಿಸುವ ಸ್ಥಿತಿ ಬಂದಿದೆ. ಈ ಸ್ಥಿತಿ ತಪ್ಪಿಸಿ ಎಂದು ಹೇಳಿದ್ದಾರೆ.

    ಮದ್ಯ ವ್ಯಸನಿಗಳ ಆತ್ಮಹತ್ಯೆ ತಪ್ಪಿಸಲು ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕು. ಎಲ್ಲ ಎಂಎಸ್‍ಐಎಲ್ ಹಾಗೂ ವೈನ್ ಸ್ಟೋರ್ ತೆರೆಯಬೇಕು. ವಾರದಲ್ಲಿ 2 ದಿನ ಬೆಳಗ್ಗೆ 8 ರಿಂದ 11 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಕೊಡಿ. ನಿಯಮ ಪಾಲಿಸದಿದ್ದರೆ ಲೈಸನ್ಸ್ ರದ್ದು ಮಾಡಿ. ಬಾರ್ ಮತ್ತು ರೆಸ್ಟೋರೆಂಟ್ ಓಪನ್ ಆದರೆ ಗಲಾಟೆ ಆಗುತ್ತದೆ. ಆದರೆ ಎಂಎಸ್‍ಐಎಲ್ ಹಾಗೂ ಬಾರ್‍ಗಳ ಮೂಲಕ ಪಾರ್ಸಲ್ ಕೊಟ್ಟರೆ ಸಮಸ್ಯೆ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇದೀಗ ಬಾರ್‍ನವರು ಜಾಸ್ತಿ ಬೆಲೆಗೆ ಮಾರಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ವ್ಯಸನ ಅನ್ನೋದು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತದೆ. ಅವರ ಜೀವ ಉಳಿಸುವುದು ಸರ್ಕಾರದ ಜವಾಬ್ದಾರಿ. ಈ ಬಗ್ಗೆ ಸಿಎಂ ಯಡಿಯೂರಪ್ಪ ಗಮನಕ್ಕೆ ತರುತ್ತೇನೆ. ಎಲ್ಲರಿಗೂ ಮದ್ಯ ಮಾರಾಟ ಮಾಡಬೇಕು ಎಂಬ ಅಭಿಪ್ರಾಯವಿದೆ. ಆದರೆ ಹೇಳಲು ಯಾರಿಗೂ ಧೈರ್ಯವಿಲ್ಲ, ನಾನು ಹೇಳುತ್ತಿದ್ದೇನೆ ಎಂದು ವಿಶ್ವನಾಥ್ ತಿಳಿಸಿದ್ದಾರೆ.

    ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಮಾಜಿ ಸಚಿವ ಜಮೀರ್ ಅಹಮದ್ ಅವರನ್ನು ಕಾಂಗ್ರೆಸ್ ಪಕ್ಷವೇ ಹೊರ ಹಾಕಬೇಕು. ಇವತ್ತಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಇದ್ದಿದ್ದರೆ ಕರ್ನಾಟಕ ಮತ್ತೊಂದು ಅಮೆರಿಕಾ ಆಗುತ್ತಿತ್ತು. ಸಾಲು ಸಾಲು ಸಾವುಗಳು ಆಗುತ್ತಿದ್ದವು. ಕುಮಾರಸ್ವಾಮಿ, ಸಿದ್ದರಾಮಯ್ಯ ಟ್ರಂಪ್‍ಗಳಾಗುತ್ತಿದ್ದರು. ತಬ್ಲಿಘಿಗಳ ಪರವಾಗಿ ಇವರೆಲ್ಲ ನಿಂತು ಕರ್ನಾಟಕವನ್ನು ತಬ್ಬಲಿ ಮಾಡುತ್ತಿದ್ದರು. ಕರ್ನಾಟಕದಲ್ಲಿ ಮುಸ್ಲಿಮರ ಓಲೈಕೆಗೆ ನಿಂತು ಇಡೀ ರಾಜ್ಯದಲ್ಲಿ ಸೋಂಕು ತಾಂಡವಾಡುವಂತೆ ಮಾಡುತ್ತಿದ್ದರು ಎಂದು ಆರೋಪಿಸಿದರು.

    ಸಮ್ಮಿಶ್ರ ಸರ್ಕಾರದಲ್ಲಿ ಜಮೀರ್ ಸಹ ಮಂತ್ರಿಯಾಗಿರುತ್ತಿದ್ದರು. ಅವರನ್ನು ತಡೆಯಲು ಆಗುತ್ತಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿದ್ದವರೆಲ್ಲ ಉಡಾಫೆ ಜನ. ಸಿದ್ದರಾಮಯ್ಯ ಕೊರೊನಾ ಅಂದರೆ ನಂಗೇ ಗೊತ್ತಿಲ್ವಾ ಅಂತಿದ್ರು. ಇನ್ನು ಕುಮಾರಸ್ವಾಮಿಯವರು ಬ್ರದರ್ ಕೊರೊನಾ ಮೊನ್ನೆ ಸಿಕ್ಕಿದ್ರು ನಡೆಯಿರಿ ಅನ್ನೋರು ಎಂದು ಸಿದ್ದರಾಮಯ್ಯ, ಕುಮಾರಸ್ವಾಮಿ ಶೈಲಿಯಲ್ಲೇ ಎಚ್.ವಿಶ್ವನಾಥ್ ಹೇಳಿದ್ದಾರೆ.

    ಕಾಂಗ್ರೆಸ್ ಅಲ್ಪಸಂಖ್ಯಾತ ಮುಸ್ಲಿಮರ ಪಕ್ಷಪಾತಿ. ಆದರೆ ದೈವ ಬಲ, ದೈವ ಇಚ್ಛೆಯಿಂದ ದೈವ ಭಕ್ತ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಇದರಿಂದ ನಾವು ಕೊರೊನಾ ವಿರುದ್ಧ ಯಶಸ್ವಿಯಾಗಿ ಹೋರಾಟ ಮಾಡುತ್ತಿದ್ದೇವೆ. ಜಮೀರ್ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ ಮಾಡಿದ ವಿಶ್ವನಾಥ್, ಜಮೀರ್ ಮಾತುಗಳು ಸಾಮಾನ್ಯ ಅಲ್ಪ ಸಂಖ್ಯಾತರ ಭವಿಷ್ಯಕ್ಕೆ ಮುಳುವಾಗಿದೆ. ಜಮೀರ್ ಅಹಮದ್ ಖಾನ್ ಅವರದ್ದು ಸಮಾಜಘಾತುಕ ನಡವಳಿಕೆ. ಅಲ್ಪ ಸಂಖ್ಯಾತ ನಾಯಕರೇ ಅಲ್ಪ ಸಂಖ್ಯಾತರ ಭವಿಷ್ಯಕ್ಕೆ ಮಾರಕವಾಗುತ್ತಿದ್ದಾರೆ ಎಂದು ಹರಿಹಾಯ್ದರು.

  • ಪಾದರಾಯನಪುರದ ಪುಂಡರು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್

    ಪಾದರಾಯನಪುರದ ಪುಂಡರು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್

    ರಾಮನಗರ: ಪಾದರಾಯನಪುರ ಗಲಾಟೆ ಪ್ರಕರಣ ಸಂಬಂಧ ಬಂಧಿಸಲಾಗಿದ್ದ 54 ಆರೋಪಿಗಳನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ರವಾನೆ ಮಾಡಲು ಆದೇಶಿಸಲಾಗಿದೆ.

    ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಆರೋಪಿಗಳನ್ನು ಪರಪ್ಪನ ಅಗ್ರಹಾರದಿಂದ ಶಿಫ್ಟ್ ಮಾಡಲು ಕಾರಾಗೃಹ ಡಿಜಿಪಿ ಅಲೋಕ್ ಮೋಹನ್ ಆದೇಶಿಸಿದ್ದಾರೆ. ಹಾಗೆಯೇ ರಾಮನಗರ ಜೈಲಿನಲ್ಲಿರುವ 177 ಮಂದಿ ಖೈದಿಗಳು, ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡುವಂತೆ ಕೂಡಾ ಆದೇಶದಲ್ಲಿ ತಿಳಿಸಲಾಗಿದೆ.

    ಕೊರೊನಾ ಗ್ರೀನ್ ಜೋನ್‍ನಲ್ಲಿರುವ ರಾಮನಗರ ಜಿಲ್ಲೆಯಲ್ಲಿ ಇಲ್ಲಿಯ ತನಕ ಯಾವುದೇ ಪಾಸಿಟಿವ್ ಕೇಸ್ ಕಾಣಿಸಿಕೊಂಡಿಲ್ಲ. ರಾಮನಗರ ಜೈಲಿನಲ್ಲಿನ ಖೈದಿಗಳು, ಆರೋಪಿಗಳು ಸಹ ಪರಪ್ಪನ ಅಗ್ರಹಾರಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದು, ತಮ್ಮನ್ನು ಶಿಫ್ಟ್ ಮಾಡುತ್ತಿರುವುದಕ್ಕೆ ವಿರೋಧಿಸುತ್ತಿದ್ದಾರೆ ಎಂದು ಜೈಲಿನ ಮೂಲಗಳಿಂದ ತಿಳಿದುಬಂದಿದೆ.

  • ಪಾದರಾಯನಪುರವೇನು ಜಮೀರ್ ಅಜ್ಜನಾ ಆಸ್ತಿನಾ: ಪ್ರಮೋದ್ ಮುತಾಲಿಕ್ ಕಿಡಿ

    ಪಾದರಾಯನಪುರವೇನು ಜಮೀರ್ ಅಜ್ಜನಾ ಆಸ್ತಿನಾ: ಪ್ರಮೋದ್ ಮುತಾಲಿಕ್ ಕಿಡಿ

    – ಶಾಸಕರಾದ ತಕ್ಷಣ ಪಾಳೆಗಾರಿಕೇನಾ

    ಧಾರವಾಡ: ಪಾದರಾಯನಪುರವೇನು ಜಮೀರ್ ಅಜ್ಜನಾ ಆಸ್ತಿನಾ? ಶಾಸಕರಾದ ತಕ್ಷಣ ಪಾಳೆಗಾರಿಕೇನಾ? ಶಾಸಕ ಜಮೀರ್ ಅಹ್ಮದ್ ಚಾಮರಾಜ್ ಪೇಟೆಯ ಶಾಸಕ ಅಷ್ಟೇ, ಚಾಮರಾಜ್ ಕೋಟೆಯ ಶಾಸಕ ಅಲ್ಲ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಪಾದರಾಯನಪುರದಂತ ಘಟನೆಗಳು ಪದೇ ಪದೇ ನಡೆದಿರುವುದು ಖಂಡನೀಯ. ಇದರ ಹಿಂದೆ ಒಂದು ಕೈವಾಡವಿದೆ ಎಂದು ಸಂಶಯ ವ್ಯಕ್ತಪಡಿಸಿದರು.

    ಪಾದರಾಯನಪುರ ಪಾಕಿಸ್ತಾನದಲ್ಲಿ ಇಲ್ಲ, ನಮ್ಮ ದೇಶದಲ್ಲೇ ಇದೆ. ಇಲ್ಲಿ ಹೋಗುವಾಗ ನಮ್ಮನ್ನ ಕೇಳಿ ಹೋಗಬೇಕು ಅಂತಿರಲ್ಲಾ ಎಂದು ಶಾಸಕ ಜಮೀರ್ ವಿರುದ್ಧ ಆಕ್ರೋಶ ಹೊರಹಾಕಿದರು. ಅವರನ್ನ ಅಮಾಯಕರು ಎಂದು ಹೇಳುವುದು ಸರಿಯಲ್ಲ. ಇದಕ್ಕೆ ಸಮರ್ಥನೆ ಮಾಡಿಕೊಳ್ಳಬೇಡಿ. ನೀವೇ ಈ ಘಟನೆಗೆ ಕಾರಣ. ಮೇಲಿಂದ ಮೇಲೆ ಈ ಘಟನೆಯಾಗುತ್ತಿರುವುದು ಕೊರೊನಾ ಹಬ್ಬಿಸಲಿಕ್ಕೆ ಎಂದು ಆರೋಪಿಸಿದರು.

    ರಾತ್ರಿ ಅಲ್ಲಿ ಗಲಭೆ ಮಾಡಿದ್ದು ಸರಿಯಲ್ಲ. ವೈದ್ಯರನ್ನ ಹಾಗೂ ಪೊಲೀಸರನ್ನ ಓಡಿಸಿದವರು ಮನುಷ್ಯರಾ ಎಂದು ಮುತಾಲಿಕ್ ಪ್ರಶ್ನಿಸಿದರು. ಈ ರೋಗ ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಿದೆ. ಕೆಲವರು 24 ಗಂಟೆ ಕೆಲಸ ಮಾಡುತ್ತಿದ್ದಾರೆ, ಅವರ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ. ಇದರ ಹಿಂದೆ ಧರ್ಮ ಇಲ್ಲಾ ಎನ್ನುತ್ತಾರೆ. ಹಾಗಾದ್ರೆ ತಬ್ಲಿಘಿ ಯಾವ ಧರ್ಮ ಎಂದು ಪ್ರಶ್ನೆ ಮಾಡಿದರು.