Tag: ಪಾದಯಾತ್ರೆ

  • ಪ್ರಧಾನಿ, ಸಂಸದರಿಗಾಗಿ ಪಾದಯಾತ್ರೆ ಹೊರಟ ಅಯ್ಯಪ್ಪನ ಭಕ್ತರು

    ಪ್ರಧಾನಿ, ಸಂಸದರಿಗಾಗಿ ಪಾದಯಾತ್ರೆ ಹೊರಟ ಅಯ್ಯಪ್ಪನ ಭಕ್ತರು

    ಮಡಿಕೇರಿ: ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಿ, ಕೊಡಗು ಮೈಸೂರು ಲೋಕಸಭಾ ಕ್ಷೇತ್ರದಿಂದ ಪ್ರತಾಪ್ ಸಿಂಹ ಗೆಲ್ಲಬೇಕು ಎಂದು ಹರಕೆ ಹೊತ್ತಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಕೊಡಗಿನಿಂದ ಶಬರಿಮಲೆಗೆ ಕಾಲ್ನಡಿಗೆ ಜಾಥಾ ಹೋಗುತ್ತಿದ್ದಾರೆ.

    ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಗುಡ್ಡೆಹೊಸೂರು ಸಮೀಪದ ಬಳ್ಳೂರಿನ ಸಲೀ ಮತ್ತು ಪೃಥ್ವಿ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಕಾಲ್ನಡಿಗೆ ಜಾಥಾ ನಡೆಸುತ್ತಿದ್ದಾರೆ. ಬಳ್ಳೂರಿನಿಂದ ಶಬರಿ ಮಲೆಗೆ 600 ಕಿಲೋ ಮೀಟರ್ ಕಾಲ್ನಡಿಗೆ ಜಾಥಾ ನಡೆಸುತ್ತಿದ್ದು, ಇಂದಿನಿಂದ 25 ದಿನಗಳ ಕಾಲ ಶಬರಿಮಲೆಗೆ ನಡೆಯಲಿದ್ದಾರೆ.

    ತಮ್ಮೂರಿನ ಯಾವುದೇ ಮನೆಗಳಿಗೆ ಹಕ್ಕುಪತ್ರವಿಲ್ಲ, ಅವುಗಳನ್ನು ನೀಡುವಂತೆ ಹಲವು ವರ್ಷಗಳಿಂದ ಕೇಳಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕೇಂದ್ರದಲ್ಲಿ ಮೋದಿಯವರು ಪ್ರಧಾನಿಯಾಗಿ ನಮ್ಮ ಸಮಸ್ಯೆ ಬಗೆಹರಿಸುವರೆಂಬ ನಂಬಿಕೆಯಿಂದ ಹರಕೆ ಹೊತ್ತಿದ್ದೇವು. ಆದರೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ ಆದರೆ ಸಿಗುತ್ತದೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಕಾಲ್ನಡಿಗೆ ಮಾಡುತ್ತಿರುವ ಅಯ್ಯಪ್ಪ ಮಾಲಾಧಾರಿಗಳು.

  • ತಿರುಪತಿಯಿಂದ ಅಯ್ಯಪ್ಪ ಭಕ್ತರ ಜೊತೆ ಹೆಜ್ಜೆ ಹಾಕಿದ ಶ್ವಾನ ಕರ್ನಾಟಕಕ್ಕೆ ಬಂತು – ವಿಡಿಯೋ ನೋಡಿ

    ತಿರುಪತಿಯಿಂದ ಅಯ್ಯಪ್ಪ ಭಕ್ತರ ಜೊತೆ ಹೆಜ್ಜೆ ಹಾಕಿದ ಶ್ವಾನ ಕರ್ನಾಟಕಕ್ಕೆ ಬಂತು – ವಿಡಿಯೋ ನೋಡಿ

    ಚಿಕ್ಕಮಗಳೂರು: ಶಬರಿಮಲೆಗೆ ಪಾದಯಾತ್ರೆ ಮಾಡುತ್ತಿರುವ ಭಕ್ತರ ಜೊತೆ ಶ್ವಾನವೊಂದು 480 ಕಿ.ಮೀ ದೂರದಿಂದ ನಡೆದುಕೊಂಡು ಬರುತ್ತಿದೆ.

    ಆಕ್ಟೋಬರ್ 31 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ತೋಡಾರು ಗ್ರಾಮದ ನಿವಾಸಿ ರಾಜೇಶ್ ಗುರುಸ್ವಾಮಿ ಅವರ ನೇತೃತ್ವದಲ್ಲಿ ಆರು ಜನ ಅಯ್ಯಪ್ಪನ ಭಕ್ತರು ಮಾಲೆ ಧರಿಸಿ ತಿರುಪತಿಯ ತಿರುಮಲದಿಂದ ಬರಿಗಾಲಿನಲ್ಲಿ ಪಾದಯಾತ್ರೆ ಶುರು ಮಾಡಿದ್ದಾರೆ. ಈ ವೇಳೆ ಇವರ ಜೊತೆ ಸೇರಿಕೊಂಡಿರುವ ನಾಯಿಯೊಂದು 480 ಕಿ.ಮೀ ನಡೆದು ಭಾನುವಾರ ಚಿಕ್ಕಮಗಳೂರಿನ ಕೊಟ್ಟಿಗೆಹಾರ ತಲುಪಿದೆ.

    ನಾಯಿಯ ಅಯ್ಯಪ್ಪ ಮೇಲಿನ ಭಕ್ತಿ ಕಂಡು ಬೆರಗಾಗಿರುವ ಅಯ್ಯಪ್ಪನ ಭಕ್ತರು ಅವರ ಜೊತೆ ಈ ನಾಯಿಯನ್ನು ಅಯ್ಯಪ್ಪನ ಸನ್ನಿಧಿಗೆ ಕರೆದುಕೊಂಡು ಹೋಗಲು ತೀರ್ಮಾನ ಮಾಡಿದ್ದಾರೆ. ಅದರಂತೆ ಅವರ ಜೊತೆ 480 ಕಿ.ಮೀ ಬಂದಿರುವ ನಾಯಿಗೆ ರಸ್ತೆ ಮಧ್ಯೆ ಕಾಲಿಗೆ ಕೆಲ ಗಾಯಗಳಾಗಿವೆ. ಆಗ ಹತ್ತಿರದ ಪಶುವೈದ್ಯರ ಬಳಿ ಚಿಕಿತ್ಸೆ ನೀಡಲು ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಅಯ್ಯಪ್ಪನ ಭಕ್ತರು ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಅಯ್ಯಪ್ಪನ ಭಕ್ತರು, ನಾವು ಪ್ರತಿ ವರ್ಷ ಪಾದಯಾತ್ರೆ ಮಾಡುತ್ತೇವೆ. ಆದರೆ ಈ ವರ್ಷ ಇದು ಹೊಸ ಅನುಭವದ ರೀತಿ ಇದೆ. ಮೊದಲು ನಾವು ಈ ಶ್ವಾನವನ್ನು ಗಮನಿಸಿರಲಿಲ್ಲ. ಬಹಳ ಮುಂದೆ ನಡೆದುಕೊಂಡು ಬಂದ ನಂತರ ಗಮನಿಸಿದ್ದೇವೆ. ನಾಯಿಗೆ ಅಯ್ಯಪ್ಪನ ಮೇಲಿರುವ ಭಕ್ತಿಯನ್ನು ನೋಡಿ ಸಂತೋಷವಾಗಿದೆ ಎಂದು ಹೇಳಿದ್ದಾರೆ.

  • ಮೋದಿ ಬಳಿ ಪರಿಹಾರ ಕೇಳಲು ನಿಮ್ಗೆ ಧೈರ್ಯವಿಲ್ಲ – ಸಂಸದರಿಗೆ ಸಂತ್ರಸ್ತರು ಘೇರಾವ್

    ಮೋದಿ ಬಳಿ ಪರಿಹಾರ ಕೇಳಲು ನಿಮ್ಗೆ ಧೈರ್ಯವಿಲ್ಲ – ಸಂಸದರಿಗೆ ಸಂತ್ರಸ್ತರು ಘೇರಾವ್

    ಬೆಳಗಾವಿ: ನಿಮಗೆ ಪ್ರಧಾನಿ ನರೇಂದ್ರ ಮೋದಿ ಬಳಿ ಪರಿಹಾರ ಕೇಳಲು ಧೈರ್ಯವಿಲ್ಲ ಎಂದು ಸಂಸದ ಅಣ್ಣಾಸಾಹೇಬ್ ಜೊಲ್ಲೆಗೆ ಸಂತ್ರಸ್ತರು ಗ್ರಾಮದಿಂದ ಘೇರಾವ್ ಹಾಕಿದ್ದಾರೆ.

    ಗಾಂಧೀಜಿ 150ನೇ ಜನ್ಮದಿನಾಚರಣೆ ಅಂಗವಾಗಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದ ಅಣ್ಣಾಸಾಬ್ ಜೊಲ್ಲೆ ಪಾದಯಾತ್ರೆ ಮಾಡುತ್ತಿದ್ದಾರೆ. ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಿಂದ ಪಾದಯಾತ್ರೆ ಆರಂಭ ಮಾಡಿದ ಸಂಸದರನ್ನು ತಡೆದ ಗಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಪ್ರವಾಹ ಬಂದು ಎರಡು ತಿಂಗಳಾದರೂ ಯಾರೂ ನಮ್ಮ ಕಷ್ಟ ಕೇಳಲು ಬಂದಿಲ್ಲ. ನಿಮ್ಮ ಸರ್ಕಾರದಿಂದ ಪರಿಹಾರ ಬಂದಿಲ್ಲ ಸ್ಥಳೀಯ ಶಾಸಕ ಸತೀಶ್ ಜಾರಕಿಹೊಳಿ ಎಲ್ಲ ಮಾಡಿದ್ದಾರೆ. ನೀವೇನು ಮಾಡಿದ್ದೀರಿ ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ವೇಳೆ ಕೋಪಗೊಂಡ ಸಂಸದರು, ಎಲ್ಲವನ್ನೂ ನಾವು ಮಾಡುತ್ತಿದ್ದೇವೆ ಎಂದು ಸಂತ್ರಸ್ತರನ್ನು ತಳ್ಳಿ ಮುಂದೆ ಹೋಗಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಬಳಿ ಪರಿಹಾರ ಕೊಡಿಸಲು ನಿಮಗೆ ಧೈರ್ಯವಿಲ್ಲ. ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಸಂತ್ರಸ್ತರು ಘೇರಾವ್ ಹಾಕಿದ್ದಾರೆ.

  • ದಲಿತರ ಮನೆಗೆ ಭೇಟಿ ನೀಡಿದ ಪೇಜಾವರ ಶ್ರೀಗಳು

    ದಲಿತರ ಮನೆಗೆ ಭೇಟಿ ನೀಡಿದ ಪೇಜಾವರ ಶ್ರೀಗಳು

    – ಅನಾರೋಗ್ಯದ ನಡುವೆಯೂ ಪಾದಯಾತ್ರೆ

    ಮೈಸೂರು: ದಲಿತರ ಮೇಲಿನ ಶೋಷಣೆ ಕುಗ್ಗಿಸಲು ಪಾದಯಾತ್ರೆ ಮಾಡುತ್ತಿರುವ ಪೇಜಾವರ ಶ್ರೀಗಳು ದಲಿತ ಕೇರಿಯಲ್ಲಿ ಸಾಮರಸ್ಯದ ಪಾದಯಾತ್ರೆ ಮಾಡಿ ದಲಿತರ ಕುಟುಂಬಗಳಿಗೆ ಆಶೀರ್ವಾದ ಮಾಡಿದ್ದಾರೆ.

    ಇಂದು ಪೇಜಾವರ ಶ್ರೀಗಳು ಮೈಸೂರಿನ ಮಂಜುನಾಥಪುರ ಬಡಾವಣೆಯ ದಲಿತರ ಮನೆಗೆ ಭೇಟಿ ನೀಡಿದರು. ದಲಿತ ದಂಪತಿ ಚೌಡಪ್ಪ, ರಾಜಮ್ಮ ಅವರ ಮನೆಗೆ ಬಂದು ಆಶೀರ್ವಾದ ಮಾಡಿದರು. ಅನಾರೋಗ್ಯದ ಹಿನ್ನೆಲೆಯಲ್ಲಿ ವೀಲ್ ಚೇರ್‍ ನಲ್ಲಿ ಕುಳಿತು ಪಾದಯಾತ್ರೆ ಮಾಡುತ್ತಾ ಮನೆಗೆ ಬಂದ ಶ್ರೀಗಳನ್ನು ಗೌರವಿಸಿದ ದಂಪತಿ ಶ್ರೀಗಳ ಕೃಪೆಗೆ ಪಾತ್ರರಾದರು.

    ಈ ವೇಳೆ ಡಿಕೆಶಿ ಪರ ಮಠಾಧೀಶರ ಪ್ರತಿಭಟನೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿ ಶ್ರೀಗಳು, ನಾನು ಈ ವಿಚಾರದ ಬಗ್ಗೆ ಮಾತನಾಡುವುದಿಲ್ಲ, ತಟಸ್ಥವಾಗಿರುತ್ತೇನೆ. ಅವರಿಗೆ ಡಿಕೆಶಿ ನಿರಪರಾಧಿ ಎಂದು ತೋರಿದೆ. ಆ ಕಾರಣದಿಂದ ಅವರು ಬೆಂಬಲಿಸುತ್ತಿರಬಹುದು. ಈ ವಿಚಾರದಲ್ಲಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನಿರಾಕಾರಿಸಿದರು.

  • ಜೆಡಿಎಸ್‍ನ ಮುಂದಿನ ನಡೆಯೇನು?

    ಜೆಡಿಎಸ್‍ನ ಮುಂದಿನ ನಡೆಯೇನು?

    ಬೆಂಗಳೂರು: ಮೈತ್ರಿ ಸರ್ಕಾರ ಬಿದ್ದು ಹೋದ ಬೆನ್ನಲ್ಲೇ ಜೆಡಿಎಸ್ ಪಕ್ಷದಲ್ಲೀಗ ಮೌನ ಆವರಿಸಿದ್ದು, ಇಂದು ಬೆಂಗಳೂರಿನ ಜೆಪಿ ಭವನದಲ್ಲಿ ಶಾಸಕರ ಸಭೆ ನಡೆಯಲಿದೆ.

    ಅನಿರೀಕ್ಷಿತವಾಗಿ ಸಿಕ್ಕ ಅಧಿಕಾರ ಅಲ್ಪಾವಧಿಗೆ ಹೋಗಿದ್ದರಿಂದ ಈಗ ಗೌಡರ ಕುಟುಂಬದ ಚಿತ್ತ ಸಹಜವಾಗಿಯೇ ಪಕ್ಷ ಸಂಘಟನೆಯತ್ತ ಹೊರಳುವ ಸಾಧ್ಯತೆ ಇದೆ. ಲೋಕಸಭಾ ಸೋಲಿನ ಬಳಿಕ ಮಾಜಿ ಪ್ರಧಾನಿ ದೇವೇಗೌಡರು ರಾಜ್ಯಾದ್ಯಂತ ಪಾದಯಾತ್ರೆ ಕೈಗೊಂಡು ಪಕ್ಷ ಬಲವರ್ಧನೆಯ ಘೋಷಣೆ ಮಾಡಿದ್ದರು.

    ಆಗಸ್ಟ್ 20ರಿಂದ ನಂಜನಗೂಡಿನಿಂದ ಮೊದಲ ಹಂತದ ಪಾದಯಾತ್ರೆ ಆರಂಭವಾಗಿ ಜೆಡಿಎಸ್ ಪ್ರಾಬಲ್ಯ ಇರುವ ದಕ್ಷಿಣ ಕರ್ನಾಟಕ ಭಾಗದಲ್ಲಿ ಸಂಚರಿಸಲಿದ್ದು, ಎರಡನೇ ಹಂತದಲ್ಲಿ ಉತ್ತರ ಕರ್ನಾಟಕದಲ್ಲಿ ಸಾಗಲಿದೆ.

    ಮುಂದಿನ ನಡೆಯೇನು..?
    ಮೊದಲಿಗೆ ಪಕ್ಷಕ್ಕೆ ದ್ರೋಹ ಬಗೆದವರಿಗೆ ಸರಿಯಾಗಿ ಪಾಠ ಕಲಿಸಲು ದೇವೇಗೌಡರು ನಿರ್ಧಾರ ಮಾಡಿದ್ದಾರೆ. ಮೂವರು ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ರಾಜಕೀಯ ಜೀವನ ಮುಗಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ನಂತರ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುವುದು ಅವರ ಮುಂದಿನ ಗುರಿಯಾಗಿದ್ದು, ತಾತ, ಅಪ್ಪ, ಮಗನಿಂದ ಜೆಡಿಎಸ್ ಪಾರ್ಟಿ ಉಳಿವಿಗೆ ಕೆಲಸ ಪ್ರಾರಂಭಿಸುವುದಾಗಿದೆ.

    ಆಗಸ್ಟ್ ತಿಂಗಳಿಂದಲೇ ದೇವೇಗೌಡರು ಪಕ್ಷ ಸಂಘಟನೆ ಕೆಲಸ ಶುರು ಮಾಡಲಿದ್ದು, ಮೊದಲಿಗೆ ಪಾದಯಾತ್ರೆ ಮೂಲಕ ಪಕ್ಷ ಸಂಘಟನೆ ಮಾಡಲು ನಿರ್ಧರಿಸಿದ್ದಾರೆ. ದೇವೇಗೌಡ, ಕುಮಾರಸ್ವಾಮಿ, ನಿಖಿಲ್ ಪಾದಯಾತ್ರೆ ಪ್ಲಾನ್ ಮಾಡಿದ್ದಾರೆ. ಮುಖ್ಯವಾಗಿ ಪಕ್ಷಕ್ಕೆ ದ್ರೋಹ ಬಗೆದ ಅತೃಪ್ತರನ್ನ ಉಪ ಚುನಾವಣೆಯಲ್ಲಿ ಸೋಲಿಸುವುದು ಗೌಡರ ಕುಟುಂಬದ ಮೊದಲ ಟಾರ್ಗೆಟ್ ಆಗಿದೆ ಎಂದು ಹೇಳಲಾಗುತ್ತಿದೆ.

  • ಕ್ಷೇತ್ರಾದ್ಯಂತ 150 ಕಿ.ಮೀ.ಪಾದಯಾತ್ರೆ ಮಾಡಿ: ಸಂಸದರಿಗೆ ಮೋದಿ ಸೂಚನೆ

    ಕ್ಷೇತ್ರಾದ್ಯಂತ 150 ಕಿ.ಮೀ.ಪಾದಯಾತ್ರೆ ಮಾಡಿ: ಸಂಸದರಿಗೆ ಮೋದಿ ಸೂಚನೆ

    ನವದೆಹಲಿ: ಎಲ್ಲ ಸಂಸದರು ನಿಮ್ಮ ಕ್ಷೇತ್ರಗಳಲ್ಲಿ 150 ಕಿ.ಮೀ.ಪಾದಯಾತ್ರೆ ಮಾಡಿ ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ.

    ಬಿಜೆಪಿ ಸಂಸದರೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಹಾತ್ಮಾ ಗಾಂಧಿ ಅವರ 150ನೇ ಜನ್ಮ ದಿನಾಚರಣೆ ‘ಗಾಂಧಿ 150’ ಕಾರ್ಯಕ್ರಮದ ಅಂಗವಾಗಿ ಪಾದಯಾತ್ರೆ ಮಾಡುವಂತೆ ಈ ಸೂಚನೆ ನೀಡಿದ್ದಾರೆ.

    ಅ.2 ಹಾಗೂ ಅ.31 ಗಾಂಧೀಜಿ ಹಾಗೂ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಅಂಗವಾಗಿ ಅ.2ರಿಂದ 31ರ ನಡುವೆ ಪ್ರತಿ ದಿನ 15 ಕಿ.ಮೀ. ಪಾದಯಾತ್ರೆ ಮೂಲಕ ಕ್ರಮಿಸುವಂತೆ ಎಲ್ಲ ಸಂಸದರಿಗೂ ಸೂಚಿಸಿದ್ದಾರೆ. ಅಲ್ಲದೆ, ರಾಜ್ಯಸಭಾ ಸದಸ್ಯರೂ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದು, ಪಕ್ಷ ಸಂಘಟನೆ ದುರ್ಬಲ ಇರುವ ಕಡೆ ಪಾದಯಾತ್ರೆ ನಡೆಸುವಂತೆ ಸೂಚಿಸಿದ್ದಾರೆ.

    ರಾಜ್ಯಸಭಾ ಸದಸ್ಯರಿಗೆ ಕ್ಷೇತ್ರವನ್ನು ಹಂಚಿಕೆ ಮಾಡಲಾಗುವುದು. ಪ್ರತಿಯೊಂದು ಕ್ಷೇತ್ರದಲ್ಲೂ ಕನಿಷ್ಠ 15ರಿಂದ 20 ತಂಡಗಳನ್ನು ರಚಿಸಬೇಕು. ಅವರ ನೇತೃತ್ವದಲ್ಲಿ ಪ್ರತಿದಿನ 15 ಕಿಲೋ ಮೀಟರ್ ಪಾದಯಾತ್ರೆ ನಡೆಸಬೇಕು. ಗಾಂಧೀಜಿ ಅವರ ಸ್ವಾತಂತ್ರ್ಯ ಹೋರಾಟ ಹಾಗೂ ಸಸಿ ನಡೆಯುವ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಮೋದಿ ಸಭೆಯಲ್ಲಿ ಹೇಳಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಷಿ, ಹಳ್ಳಿಗಳ ಪುನರ್‍ಜೀವನ ಮತ್ತು ಸ್ವಾವಲಂಬಿಗಳನ್ನಾಗಿ ಮಾಡುವುದು. ಗಿಡ ನೆಡುವುದು ಹಾಗೂ ಶೂನ್ಯ ಬಜೆಟ್ ಕೃಷಿಯತ್ತ ಗಮನಹರಿಸುವಂತೆ ತಿಳುವಳಿಕೆ ನೀಡುವ ಉದ್ದೇಶದಿಂದ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

    ನಾವು ‘ಸಂಕಲ್ಪ ಪತ್ರ’ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವುದು ನಮ್ಮ ಭವಿಷ್ಯದ ಗುರಿಯಾಗಬೇಕೆಂದು ಮೋದಿ ಸಭೆಯಲ್ಲಿ ಸೂಚಿಸಿದ್ದಾರೆ ಎಂದು ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.

    ಪ್ರತಿ ದಿನ 15 ಕಿ.ಮೀ.ಪಾದಯಾತ್ರೆ ಮಾಡುವುದರಿಂದ ಎಲ್ಲ ಬೂತ್‍ಗಳನ್ನು ಕವರ್ ಮಾಡಬಹುದು. ಇದೇ ಅವಕಾಶವನ್ನು ಬಳಸಿಕೊಂಡು ಸಂಸದರು ಮಹಾತ್ಮಾ ಗಾಂಧಿ ಅವರ ಸಂದೇಶ, ಸಿದ್ಧಾಂತ ಹಾಗೂ ಜೀವನದ ಕುರಿತು ವಿವರಿಸಿ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಕುರಿತು ಸಂಸದರಿಗೆ ವಿವರಿಸಿದ್ದು, ದೂರದೃಷ್ಟಿ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಇದೇ ವೇಳೆ ಬಜೆಟ್ ಒಳ್ಳೆಯ ಅಂಶಗಳನ್ನು ಜನರಿಗೆ ತಲುಪಿಸುವಂತೆ ತಿಳಿಸಿದ್ದಾರೆ.

  • ಕುಟುಂಬ ರಾಜಕಾರಣಕ್ಕೆ ಜನ ತಕ್ಕ ಶಿಕ್ಷೆ ನೀಡಿದ್ದಾರೆ: ಎಚ್‍ಡಿಡಿ

    ಕುಟುಂಬ ರಾಜಕಾರಣಕ್ಕೆ ಜನ ತಕ್ಕ ಶಿಕ್ಷೆ ನೀಡಿದ್ದಾರೆ: ಎಚ್‍ಡಿಡಿ

    ಬೆಂಗಳೂರು: ನನ್ನ ರಾಜಕೀಯ ಜೀವನದಲ್ಲೇ ನಾನು ಕುಟುಂಬ ರಾಜಕಾರಣ ಮಾಡಿಲ್ಲ. ಆದರೆ, ಕಳೆದ ಚುನಾವಣೆಯಲ್ಲಿ ನಮ್ಮ ಕುಟುಂಬದಲ್ಲೇ ಮೂವರು ಸ್ಪರ್ಧಿಸಬೇಕಾದ ಪರಿಸ್ಥಿತಿ ಎದುರಾಯಿತು. ಇದಕ್ಕೆ ಜನರೂ ತಕ್ಕ ಶಿಕ್ಷೆ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಕುಟುಂಬ ರಾಜಕಾರಣದ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದಾರೆ.

    ಇಂದು ಖಾಸಗಿ ಹೋಟೆಲ್‍ನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಎಂದೂ ಕುಟುಂಬ ರಾಜಕಾರಣ ಮಾಡಿಲ್ಲ. ಆದರೆ ಕಳೆದ ಚುನಾವಣೆಯಲ್ಲಿ ನಮ್ಮ ಕುಟುಂಬದ ಮೂವರು ಚುನಾವಣೆಗೆ ಸ್ಪರ್ಧಿಸಬೇಕಾಯಿತು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗಿದ್ದನ್ನು ನೋಡಿದ್ದೇನೆ. ಜನರೂ ತಕ್ಕ ಶಿಕ್ಷೆ ನೀಡಿದ್ದಾರೆ. ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗದವರನ್ನು ಗುರುತಿಸಿಕೊಂಡು ಬಂದೆ. ನಾನು ಚುನಾವಣೆಗೆ ನಿಂತಿದ್ದೂ ಆಕಸ್ಮಿಕ. ಇನ್ನು ನಾನು ಚುನಾವಣೆಗೆ ನಿಲ್ಲುವುದಿಲ್ಲ. ಪಕ್ಷ ಸಂಘಟನೆಗೆ ಸಾಕಷ್ಟು ದುಡಿದಿದ್ದೇನೆ. ನಿಖಿಲ್ ಕುಮಾರಸ್ವಾಮಿ ಒಬ್ಬ ಯುವಕನಾಗಿ ಶಕ್ತಿ ಮೀರಿ ಕೆಲಸ ಮಾಡಿದ್ದಾನೆ. ಒಳ್ಳೆಯ ಹೆಸರು ಪಡೆಯುತ್ತಿದ್ದಾನೆ. ನಿಖಿಲ್ ರಾಜಕೀಯಕ್ಕೆ ಬರುವುದು ಸಹ ಕನಸು ಮನಸಲ್ಲೂ ಗೊತ್ತಿರಲಿಲ್ಲ ಎಂದು ಹೇಳಿ ದೇವೇಗೌಡರು ಭಾವುಕರಾದರು.

    ಒಂದು ತಿಂಗಳಲ್ಲಿ ಪಕ್ಷದಲ್ಲಿರುವ ಘಟಕಗಳನ್ನು ಅಸ್ತಿತ್ವಕ್ಕೆ ತರುತ್ತೇನೆ. ಪಾದಯಾತ್ರೆಯಿಂದ ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರಕ್ಕೆ ಆಪಾಯ ಆಗಬಾರದು. ಇದನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡಬೇಕು. ಪರಸ್ಪರ ಮೈತ್ರಿ ಮಾಡಿಕೊಂಡಿದ್ದೇವೆ. ಇದಕ್ಕೆ ಯಾವುದೇ ರೀತಿಯ ಅಪಾಯ ಬರಬಾರದು. ಪ್ರಾದೇಶಿಕ ಪಕ್ಷಗಳು ಇಲ್ಲದಿದ್ದರೆ, ರಾಷ್ಟ್ರೀಯ ಪಕ್ಷಗಳು ನಮ್ಮನ್ನು ಬಹಳ ಉದಾಸೀನವಾಗಿ ಕಾಣುತ್ತಿದ್ದವು. ಹೆಚ್ಚು ತಡ ಮಾಡದೆ ಪಾದಯಾತ್ರೆಯನ್ನು ಪ್ರಾರಂಭಿಸಬೇಕು. ಈಗಲೇ ನಾನು ದೆಹಲಿಗೆ ಹೊರಡುವ ಸನ್ನಿವೇಶ ಇಲ್ಲ. ಪಕ್ಷದ ಕಚೇರಿಯಲ್ಲಿದ್ದು ಎಲ್ಲವನ್ನೂ ಗಮನಿಸುತ್ತೇನೆ ಎಂದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.

    ಮತ್ತೊಮ್ಮೆ ಬಿಜೆಪಿ ಪಕ್ಷ ತಲೆ ಎತ್ತಬಾರದು. ನಾನು ಸತ್ತರೂ ಸಹ ಪಕ್ಷ ಉಳಿಸುತ್ತೇನೆ. ನನ್ನ ಕಾಲ ಮುಗಿಯುತ್ತಾ ಬಂದಿದೆ. ಕೊನೆ ಉಸಿರಿರುವ ವರೆಗೆ ಪಕ್ಷದ ಏಳಿಗೆಗಾಗಿ ದುಡಿಯುತ್ತೇನೆ. ಇನ್ನು ಮುಂದೆ ಮುಂದಿನ ಪೀಳಿಗೆಯ ಜವಾಬ್ದಾರಿ ಎಂದು ದೇವೇಗೌಡ ಅವರು ಕಾರ್ಯಕರ್ತರ ಸಭೆಯಲ್ಲಿ ಭಾವುಕರಾದರು.

  • ಸಾಲಮನ್ನಾ ಹವಾ ಕ್ರಿಯೇಟ್ ಮಾಡಲು ಜೆಡಿಎಸ್‍ನಿಂದ ಅದ್ಧೂರಿ ಪಾದಯಾತ್ರೆ

    ಸಾಲಮನ್ನಾ ಹವಾ ಕ್ರಿಯೇಟ್ ಮಾಡಲು ಜೆಡಿಎಸ್‍ನಿಂದ ಅದ್ಧೂರಿ ಪಾದಯಾತ್ರೆ

    ಬೆಂಗಳೂರು: ‘ಸೋಲು ಗೆಲುವು ಬೇಕಾಗಿಲ್ಲ. ಆದರೆ ಹವಾ ಕ್ರಿಯೇಟ್ ಮಾಡ್ಬೇಕು. ಸಾಲಮನ್ನಾ ಕುರಿತು ಜನರಿಗೆ ಸರ್ಕಾರದ ಸಾಧನೆ ತಿಳಿಸಬೇಕು ಎಂದು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ವೈಎಸ್‍ವಿ ದತ್ತಾ ಹೇಳಿದ್ದಾರೆ.

    ಖಾಸಗಿ ಹೋಟೆಲ್‍ನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅನ್ನ ಭಾಗ್ಯದಿಂದ ರಾಜಕೀಯವಾಗಿ ಲಾಭವಾಯ್ತು. ಆದರೆ, ಸಾಲ ಮನ್ನಾದಿಂದ ರಾಜಕೀಯ ಲಾಭವಾಗಿಲ್ಲ. ಪ್ರಧಾನಿ ಮೋದಿ ವರ್ಷಕ್ಕೆ ಆರು ಸಾವಿರ ನೀಡಿದರೆ ಅವರಿಗೆ ಲಾಭ ಸಿಗುತ್ತದೆ. 46 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದರೂ ನಮಗೇನೂ ಲಾಭವಾಗಿಲ್ಲ. ಸೋಲು ಗೆಲುವು ಬೇಕಾಗಿಲ್ಲ. ಆದರೆ ಹವಾ ಕ್ರಿಯೇಟ್ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

    ಮೊದಲ ಹಂತದಲ್ಲಿ ಕಾವೇರಿಯಿಂದ ತುಂಗಭದ್ರೆಯವರೆಗೆ ಪಾದಯಾತ್ರೆ ನಡೆಯಲಿದೆ. ಎರಡನೇ ಹಂತದ ಪಾದಯಾತ್ರೆ ಕೃಷ್ಣಾದಿಂದ ಮಲಪ್ರಭಾವರೆಗೆ ನಂಜನಗೂಡು, ಮಳವಳ್ಳಿ, ಕೊಳ್ಳೇಗಾಲ, ಬೆಂಗಳೂರು, ಹೊಸಕೋಟೆ, ಚಿಂತಾವಣಿ, ಕುಣಿಗಲ್, ತುಮಕೂರು, ನೆಲಮಂಗಲ, ಮಡಿಕೇರಿ, ಸುಳ್ಯ, ಮಂಗಳೂರು, ಹಾಸನ, ಬೇಲೂರು, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಹರಿಹರದವರೆಗೆ ಸುಮಾರು 1,475 ಕಿ.ಮೀ. ಪಾದಯಾತ್ರೆ ಮಾಡಬೇಕು. ಪಾದಯಾತ್ರೆ ಪ್ರಾರಂಭಿಸಿದ್ದೇ ದೇವೇಗೌಡರು. ನಮಗೀಗ ಪ್ರಾದೇಶಿಕ ವಿಷಯಗಳೇ ಹೋರಾಟದ ಅಸ್ತ್ರ. ಇದರಲ್ಲಿ ಕಾವೇರಿ, ಮಹದಾಯಿ, ಬೆಳಗಾವಿ, ರೈಲ್ವೇ ಅನುದಾನಗಳು ಎಲ್ಲಾ ಸೇರುತ್ತವೆ ಎಂದು ಪಾದಯಾತ್ರೆಯ ರೂಪುರೇಷೆಗಳನ್ನು ತಿಳಿಸಿದರು.

    ಆಗಸ್ಟ್ 20ರಿಂದ ಪಾದಯಾತ್ರೆ
    ಮೊದಲ ಹಂತದ ಪಾದಯಾತ್ರೆ ಕಾವೇರಿಯಿಂದ ತುಂಗಭದ್ರಾದವರೆಗೆ ನಡೆಯಲಿದ್ದು, ಆಗಸ್ಟ್ 20ರಂದು ಪಾದಯಾತ್ರೆ ಆರಂಭ ಆಗಲಿದೆ. ದಿ.ದೇವರಾಜು ಅರಸು ಅವರ ಹುಟ್ಟು ಹಬ್ಬ. ಹೀಗಾಗಿ ಅಂದು ನಮ್ಮ ಪಾದಯಾತ್ರೆ ಪ್ರಾರಂಭ ಮಾಡುತ್ತೇವೆ. ಆಗಸ್ಟ್ 20ರಿಂದ ನವೆಂಬರ್‍ವರೆಗೆ ಪಾದಯಾತ್ರೆ ನಡೆಯಲಿದೆ. ಎರಡನೇ ಹಂತದ ಪಾದಯಾತ್ರೆ ಡಿಸೆಂಬರ್‍ನಿಂದ 2020ರ ಫೆಬ್ರವರಿ ವರೆಗೆ ನಡೆಯಲಿದ್ದು, ತುಂಗಭದ್ರಾದಿಂದ-ಕೃಷ್ಣ-ಮಲಪ್ರಭಾ ವರೆಗೆ ನಡೆಯಲಿದೆ ಎಂದು ವೈಎಸ್ ವಿ ದತ್ತ ಮಾಹಿತಿ ನೀಡಿದರು.

    ‘ಕೈ’ ನಿಂದ ಕೊಲೆ ಬೆದರಿಕೆ :
    ಜೆಡಿಎಸ್ ವರಿಷ್ಠರ ಬಳಿ ಅಳಲು ತೋಡಿಕೊಂಡ ಯುವ ಜೆಡಿಎಸ್ ಕಾರ್ಯಕರ್ತರು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರೆ ನಮಗೆ ಕಾಂಗ್ರೆಸ್ಸಿನವರು ಕೊಲೆ ಬೆದರಿಕೆ ಹಾಕುತ್ತಾರೆ. ಈ ಬಗ್ಗೆ ಸ್ಥಳೀಯ ಶಾಸಕರ ಗಮನಕ್ಕೆ ತಂದರೆ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಸಮಸ್ಯೆಗಳನ್ನು ನಮ್ಮ ಪಕ್ಷದವರೇ ಆಲಿಸಿಲ್ಲ ಅಂದರೆ ನಾವು ಎಲ್ಲಿಗೆ ಹೋಗಬೇಕು ಎಂದು ನಾಗಮಂಗಲ ತಾಲೂಕಿನ ಯುವ ಕಾರ್ಯಕರ್ತ ಜಯಶಂಕರ್ ಅಳಲು ತೋಡಿಕೊಂಡರು.

    ನಿಖಿಲ್ ಕುಮಾರಸ್ವಾಮಿ ಪಾದ ಯಾತ್ರೆ ಮಾಡಿದ್ರೆ 2 ಲಕ್ಷ ಕಾರ್ಯಕರ್ತರನ್ನು ಸೇರಿಸುತ್ತೇವೆ. ಸುಮ್ಮನೆ ಪಾದಯಾತ್ರೆ ಮಾಡುವುದಾದರೆ ಪ್ರಯೋಜನವಿಲ್ಲ. ಪಾದಯಾತ್ರೆಗೆ ಕೇಂದ್ರ ಸರ್ಕಾರ ವಿರುದ್ಧ ಹೋರಾಟ ಎಂಬ ಅಜೆಂಡಾ ಬೇಕು. ರಾಜ್ಯದ ವಿಷಯಗಳ ಬಗ್ಗೆ ಕೇಂದ್ರ ಬಗೆಹರಿಸದ ವಿಷಯಗಳನ್ನು ಅಜೆಂಡಾವಾಗಿ ಮಾಡಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು ಎಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಜೆಡಿಎಸ್ ಕಾರ್ಯಕರ್ತರು ಜೆಡಿಎಸ್ ವರಿಷ್ಠರ ದೇವೇಗೌಡರಿಗೆ ಸಲಹೆ ನೀಡಿದ್ದಾರೆ.

    ಆಕ್ಟೀವ್ ಇಲ್ಲ
    ನಾಗಮಂಗಲದಲ್ಲಿ ಇವತ್ತು ಕೂಡ ಕಾಂಗ್ರೆಸ್ಸಿನ ಚಲುವರಾಯ ಸ್ವಾಮಿಯದ್ದೇ ನಡೆಯುತ್ತಿದೆ. ನಮ್ಮ ಪಕ್ಷದ ಶಾಸಕ ಸುರೇಶ್ ಗೌಡರದ್ದು ಏನು ನಡೆಯುತ್ತಿಲ್ಲ. ಯಾವುದಾದರೂ ಕೆಲಸ ಆಗಬೇಕಿದ್ದರೂ ಚಲುವರಾಯಸ್ವಾಮಿ ಹೇಳಿದರೆ ಮಾತ್ರ ಕ್ಷೇತ್ರದಲ್ಲಿ ನಡೆಯುತ್ತದೆ. ಸುರೇಶ್ ಗೌಡರದ್ದು ಏನು ನಡೆಯುತ್ತಿಲ್ಲ ಎಂದು ಯುವ ಕಾರ್ಯಕರ್ತರು ಈ ವೇಳೆ ದೂರು ನೀಡಿದರು.

  • ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲಾತಿಗೆ ಒತ್ತಾಯ – ರಾಜಧಾನಿ ತಲುಪಿದ ಬೃಹತ್ ಪಾದಯಾತ್ರೆ

    ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲಾತಿಗೆ ಒತ್ತಾಯ – ರಾಜಧಾನಿ ತಲುಪಿದ ಬೃಹತ್ ಪಾದಯಾತ್ರೆ

    ಬೆಂಗಳೂರು: ಪರಿಶಿಷ್ಟ ಪಂಗಡದವರಿಗೆ ಶೇಕಡಾ 7.5ರಷ್ಟು ಮೀಸಲಾತಿಗೆ ಆಗ್ರಹಿಸಿ ವಾಲ್ಮೀಕಿ ಸಮುದಾಯ ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಿಂದ ಕೈಗೊಂಡಿದ್ದ ಪಾದಯಾತ್ರೆ ಬೆಂಗಳೂರು ತಲುಪಿದ್ದು, ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸುತ್ತಿದ್ದಾರೆ.

    ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮಿಜಿಯಿಂದ ಪಾದಯಾತ್ರೆ ನೇತೃತ್ವ ವಹಿಸಿದ್ದು, ಧರಣಿಯಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದಾರೆ. ಮೀಸಲಾತಿಗೆ ಒತ್ತಾಯಿಸಿ ಇಂದು ಬೃಹತ್ ಶಕ್ತಿ ಪ್ರದರ್ಶನಕ್ಕೆ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.

    ಜೂನ್ 9 ರಂದು ಆರಂಭವಾಗಿದ್ದ ಪಾದಯಾತ್ರೆ ಮೂಲಕ ಸಮುದಾಯದ ಸಾವಿರಾರು ಜನರು ಬೆಂಗಳೂರಿಗೆ ಆಗಮಿಸಿದ್ದಾರೆ. ದಾವಣಗೆರೆಯ ರಾಜನಹಳ್ಳಿಯಿಂದ ಆರಂಭಗೊಂಡಿದ್ದ ಪಾದಯಾತ್ರೆಗೆ ರಾಜನಹಳ್ಳಿ, ಜಗಳೂರು, ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಶಿರಾ, ತುಮಕೂರು, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಶಿಡ್ಲಘಟ್ಟ, ಹೊಸಕೋಟೆ ಹಾಗೂ ಕೆಆರ್ ಪುರಂ ಮೂಲಕ ಪಾದಯಾತ್ರೆ ನಡೆದಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ವಾಲ್ಮೀಕಿ ಸಮಾಜದ ಜನರು ಧರಣಿಯಲ್ಲಿ ಭಾಗವಹಿಸುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ತಮ್ಮ ಬೇಡಿಕೆಯ ಮನವರಿಕೆ ಮಾಡುವ ನಿಟ್ಟಿನಲ್ಲಿ ಧರಣಿ ನಡೆಸಲಾಗುತ್ತಿದೆ.

    ಅನಿರ್ದಿಷ್ಟಾ ಅವಧಿಯವರಿಗೆ ಪ್ರತಿಭಟನೆ ಮುಂದುವರಿಯಲಿದೆ. ಇದೇ ಸಂದರ್ಭದಲ್ಲಿ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ಪ್ರಯತ್ನಿಸಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಇತ್ತ ಹೋರಾಟಗಾರರ ಪ್ರತಿಭಟನೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ.

  • ಸೋತ ಮಂಡ್ಯದಲ್ಲೇ ಗೆಲುವು ಕಾಣಲು ನಿಖಿಲ್ ಪ್ರತಿಜ್ಞೆ

    ಸೋತ ಮಂಡ್ಯದಲ್ಲೇ ಗೆಲುವು ಕಾಣಲು ನಿಖಿಲ್ ಪ್ರತಿಜ್ಞೆ

    ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯ ಸೋಲಿನ ಬಳಿಕ ನಿಖಿಲ್ ಕುಮಾರಸ್ವಾಮಿ ಪ್ರತಿಜ್ಞೆ ಮಾಡಿದ್ದು, ಕಳೆದುಕೊಂಡಲ್ಲೇ ಪಡೆಯುವುದಕ್ಕೆ ಸಿಎಂ ಪುತ್ರ ಮೆಗಾ ಪ್ಲಾನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

    ನಿಖಿಲ್ ಕುಮಾರಸ್ವಾಮಿ ಸೋತ ಮಂಡ್ಯ ನೆಲದಲ್ಲೇ ಗೆಲುವು ಕಾಣಲು ಪ್ರತಿಜ್ಞೆ ಮಾಡಿದ್ದು, ಈ ಬಗ್ಗೆ ತಾತ ದೇವೇಗೌಡರ ಬಳಿ ಹೇಳಿಕೊಂಡಿದ್ದಾರೆ. ನಿಖಿಲ್ ತಮ್ಮ ನೇತೃತ್ವದಲ್ಲಿ ಜೆಡಿಎಸ್ ಪಾದಯಾತ್ರೆಗೆ ಚಿಂತನೆ ಮಾಡಿದ್ದು, ಆಂಧ್ರ ಪ್ರದೇಶದಲ್ಲಿ ನಡೆದ ಜಗನ್ ಮಾದರಿ ಪಾದಯಾತ್ರೆಗೆ ನಿಖಿಲ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

    ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸೋಲು ಕಂಡಿದ್ದು, ಹೀಗಾಗಿ ಸೋಲು ಕಂಡ ಸ್ಥಳದಲ್ಲಿಯೇ ಎದ್ದು ಬರಲು ನಿಖಿಲ್‍ಗೆ ಯುವರಾಜನ ಪಟ್ಟ ಕಟ್ಟಿ ಪಕ್ಷ ಸಂಘಟನೆಯತ್ತ ಗೌಡರು ಮುಖ ಮಾಡಲು ತಂತ್ರ ರೂಪಿಸಿದ್ದಾರೆ. ಮೊಮ್ಮಗ ನಿಖಿಲ್‍ಗೆ ದೇವೇಗೌಡರು ಸಾಥ್ ನೀಡಿದ್ದು, ನಿಖಿಲ್ ಬೆನ್ನ ಹಿಂದೆ ತಾತ ನಿಲ್ಲುವ ಸಾಧ್ಯತೆಗಳಿವೆ. ಮಂಡ್ಯದಿಂದಲೇ ಪಾದಯಾತ್ರೆಯನ್ನ ಆರಂಭಿಸಿ ಪಕ್ಷ ಸಂಘಟನೆಗೂ ಪ್ಲಾನ್ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಈಗಾಗಲೇ ದೇವೇಗೌಡರು ಕುಟುಂಬದವರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಒಂದೆಡೆ ಅಪ್ಪ ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಇನ್ನೊಂದು ಕಡೆ ಮಗ ನಿಖಿಲ್ ಪಾದಯಾತ್ರೆಯೊಂದಿಗೆ ದೇವೇಗೌಡರು ಮತ್ತೆ ತಮ್ಮ ಪಕ್ಷ ಕಟ್ಟಲು ಶುರು ಮಾಡಲಿದ್ದಾರೆ. ಜೊತೆಗೆ ಎರಡು ಕಾರ್ಯಕ್ರಮಗಳೊಂದಿಗೆ ಜೆಡಿಎಸ್‍ಗೆ ಶಕ್ತಿ ತುಂಬಲು ದೇವೇಗೌಡರಿಂದ ತಂತ್ರಗಾರಿಕೆ ರೂಪಿಸಿದ್ದಾರೆ ಎನ್ನಲಾಗಿದೆ.

    ಮಂಡ್ಯ, ಮೈಸೂರು, ಹಾಸನ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಶಿವಮೊಗ್ಗ, ಕೋಲಾರ, ಬೆಂಗಳೂರು ನಗರ, ರಾಯಚೂರು ಜಿಲ್ಲೆಗಳಲ್ಲಿ ಮೊದಲ ಹಂತದ ಪಾದಯಾತ್ರೆ ಮಾಡುವ ಸಾಧ್ಯತೆಗಳಿವೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]