Tag: ಪಾಠ

  • ಅತ್ಯಾಚಾರಿಯ ಮಾರ್ಮಾಂಗಕ್ಕೆ ಒದ್ದು, ಜೋರಾಗಿ ಕೂಗಿ-ಮಹಿಳೆಯರಿಗೆ ಸ್ವಯಂ ರಕ್ಷಣೆಯ ಪಾಠ

    ಅತ್ಯಾಚಾರಿಯ ಮಾರ್ಮಾಂಗಕ್ಕೆ ಒದ್ದು, ಜೋರಾಗಿ ಕೂಗಿ-ಮಹಿಳೆಯರಿಗೆ ಸ್ವಯಂ ರಕ್ಷಣೆಯ ಪಾಠ

    ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಸೇರಿದಂತೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ ಪ್ರತಿದಿನ 110 ಅತ್ಯಾಚಾರ ಪ್ರಕರಣಗಳನ್ನು ದಾಖಲಾಗುತ್ತಿವೆ. ಹೀಗಾಗಿ ಯುವತಿಯರಿಗಾಗಿ ಕೆಲವು ದತ್ತಿ ಮತ್ತು ಎನ್‍ಜಿಒಗಳು ಸ್ವಯಂ-ರಕ್ಷಣಾ ಮತ್ತು ಅತ್ಯಾಚಾರದಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಪಾಠಗಳನ್ನು ನೀಡಲು ನಿರ್ಧರಿಸಿದೆ.

    ದಕ್ಷಿಣ ಆಫ್ರಿಕಾದ ಸೊವೆಟೊ ಟೌನ್‍ಷಿಪ್‍ನ ಶಾಲೆಯೊಂದರಲ್ಲಿ ಬಾಲಕಿಯರಿಗೆ ಸ್ವಯಂ ರಕ್ಷಣೆಯ ಪಾಠ ಹೇಳಿಕೊಡಲಾಗುತ್ತಿದೆ. ತರಬೇತುದಾರರಾದ ಡಿಮಕಾಟ್ಸೊ ಮೊನೊಕೊಲಿ ಅವರು ಸೊಂಟಕ್ಕೆ ಪ್ಯಾಡ್ ಕಟ್ಟಿಕೊಂಡು ಅತ್ಯಾಚಾರ ಎದುರಾದಾಗ ಮಹಿಳೆಯರು, ಯುವತಿಯರು ಅತ್ಯಾಚಾರಿಗಳ ಮಾರ್ಮಾಂಗಕ್ಕೆ ಒದ್ದು, ಜೋರಾಗಿ ಕೂಗಿ ಎಂಬ ಸ್ವಯಂ ರಕ್ಷಣಾ ಪಾಠವನ್ನು ಬೋದಿಸುತ್ತಿದ್ದಾರೆ.

    ಸಾಮಾನ್ಯವಾಗಿ ಮಹಿಳೆರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹೇಗೆ ಎಂಬ ತರಬೇತಿ ನೀಡುವುದರ ಜೊತೆಗೆ, ಮೊನೊಕೊಲಿ ಅವರು ತೊಂದರೆಗೊಳಗಾಗಿರುವ ಪರಿಸ್ಥಿತಿಗಳಿಗೆ ಹೇಗೆ ಪ್ರತಿಕ್ರಿಯಿಸಬಹುದು ಎಂಬುದನ್ನು ಕೂಡಾ ಕಲಿಸುತ್ತಾರೆ. ಯುವತಿಯರಿಗೆ ಮತ್ತೊಂದು ಸಲಹೆ ನೀಡಿದ್ದು, ನಿಮ್ಮ ಮೇಲೆ ದಾಳಿ ಮಾಡಿದಾಗ ನಿಮಗೆ ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ಕಿರುಚಿಕೊಳ್ಳಿ ಎಂದು ಹೇಳಿದ್ದಾರೆ.

    ದಕ್ಷಿಣ ಆಫ್ರಿಕಾದ ಚಾರಿಟಿಯ ಆಕ್ಷನ್ ಬ್ರೇಕ್ಸ್ ಸೈಲೆನ್ಸ್ (ಎಬಿಎಸ್)ನ ಸಹಯೋಗದೊಂದಿಗೆ ಮೊನೊಕೊಲಿ ಅವರು ಶಾಲೆಗಳಲ್ಲಿ ಸಹಭಾಗಿತ್ವದಿಂದ ಯುವತಿಯರಿಗೆ ಸ್ವರಕ್ಷಣೆ ಪಾಠವನ್ನು ಕಲಿಸಲಾಗುತ್ತಿದೆ. ಅಷ್ಟೇ ಅಲ್ಲದೇ ‘ಹೀರೋ ಎಂಪಥಿ’ ಎಂಬ ಕಾರ್ಯಕ್ರಮದ ಮೂಲಕ ಯುವಕರಿಗೆ ಹಿಂಸಾತ್ಮಕ ನಡವಳಿಕೆಯನ್ನು ಗುರುತಿಸಲು ಅವುಗಳ ವಿರುದ್ಧ ಹೋರಾಡುವುದು ಹೇಗೆ ಎಂಬ ಶಿಕ್ಷಣ ನೀಡುವ ಗುರಿಯನ್ನು ಸಹ ಹೊಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಾಠ ಮಾಡ್ತಿದ್ದಾಗ 500 ವಿದ್ಯಾರ್ಥಿಗಳ ಮುಂದೆಯೇ ಫ್ಲೇ ಆಯ್ತು ಪೋರ್ನ್ ವಿಡಿಯೋ!

    ಪಾಠ ಮಾಡ್ತಿದ್ದಾಗ 500 ವಿದ್ಯಾರ್ಥಿಗಳ ಮುಂದೆಯೇ ಫ್ಲೇ ಆಯ್ತು ಪೋರ್ನ್ ವಿಡಿಯೋ!

    ಟೊರೊಂಟೊ: ಮನೋವಿಜ್ಞಾನಿ ಪ್ರೊಫೆಸರ್ ಒಬ್ಬರು ವಿದ್ಯಾರ್ಥಿಗಳಿಗೆ ವಿಡಿಯೋ ಮೂಲಕ ಪಾಠ ಹೇಳಿಕೊಡುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಪೋರ್ನ್ ವಿಡಿಯೋ ಪ್ರಸಾರವಾಗಿರುವ ಘಟನೆ ಕೆನಡಾದ ಟೊರೊಂಟೊದಲ್ಲಿ ನಡೆದಿದೆ.

    ಟೊರಂಟೊ ಸ್ಕಾರ್ಬರೊ ವಿಶ್ವವಿದ್ಯಾನಿಲಯದಲ್ಲಿ ಈ ಘಟನೆ ನಡೆದಿದ್ದು, ಪ್ರೊಫೆಸರ್ ಡಾ. ಸ್ಟೀವ್ ಜೋರ್ಡಾನ್ಸ್ ಪಾಠ ಮಾಡುವಾಗ ಈ ರೀತಿ ವಿಡಿಯೋ ಪ್ಲೇ ಆಗಿದೆ. ಈ ತರಗತಿಯಲ್ಲಿ ಸುಮಾರು 500 ವಿದ್ಯಾರ್ಥಿಗಳಿದ್ದರು ಎಂದು ವದರಿಯಾಗಿದೆ.

    ಪ್ರೋ. ಜೋರ್ಡಾನ್ಸ್ ಕ್ಲಾಸ್ ರೂಮಿನಲ್ಲಿ ಜೈವಿಕ ಮತ್ತು ಅರಿವಿನ ಮನೋವಿಜ್ಞಾನದ ಬಗ್ಗೆ ತಿಳಿಸಲು ತಮ್ಮ ಮೊಬೈಲನ್ನು ಲ್ಯಾಪ್‍ಟಾಪಿಗೆ ಸಂಪರ್ಕಿಸಿ ದೊಡ್ಡ ಸ್ರ್ಕೀನ್ ಮೂಲಕ ಪಾಠ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದಂತೆ ಪೋರ್ನ್ ವಿಡಿಯೋ 500 ವಿದ್ಯಾರ್ಥಿಗಳ ಮುಂದೆ ಪ್ರಸಾರವಾಗಿದೆ. ವಿಡಿಯೋ ಪ್ರಸಾರವಾಗುತ್ತಿದ್ದಂತೆ ವಿದ್ಯಾರ್ಥಿಗಳು ಶಾಕ್ ಆಗಿದ್ದು, ನಂತರ ನಗಲಾರಂಭಿಸಿದ್ದಾರೆ.

    ಈ ವೇಳೆ ಕೆಲ ವಿದ್ಯಾರ್ಥಿಗಳು ಇದನ್ನು ತಮ್ಮ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಬಳಿಕ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಬಗ್ಗೆ ಅನೇಕ ರೀತಿಯ ಕಮೆಂಟ್ ಗಳನ್ನು ಮಾಡಿದ್ದಾರೆ. ನಾನು ಪೋರ್ನ್ ವಿಡಿಯೋ ನೋಡಿದಾಗ ನನಗೆ ಆಶ್ಚರ್ಯವಾಯಿತು. ಆದರೆ ತರಗತಿಯಲ್ಲಿದ್ದ ಬಹಳಷ್ಟು ಜನರು ನಗುತ್ತಿದ್ದರು ಎಂದು ವಿದ್ಯಾರ್ಥಿಯೊಬ್ಬ ಕಮೆಂಟ್ ಮಾಡಿದ್ದಾನೆ.

    ಪ್ರತಿಯೊಬ್ಬರೂ ತಪ್ಪು ಮಾಡುತ್ತಾರೆ. ಆದ್ದರಿಂದ ನಾನು ಅವರನ್ನು ದೂಷಿಸುವುದಿಲ್ಲ. ಈ ಸಂದರ್ಭದಲ್ಲಿ ಎಲ್ಲರೂ ನಕ್ಕು ಸುಮ್ಮನಾಗಿದ್ದಾರೆ ಎಂದು ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ.

    ಇದು ಖಾಸಗಿ ವಿಚಾರವಾಗಿದ್ದು, ಸೂಕ್ತ ವಿಚಾರಣೆ ನಡೆಸುವುದಾಗಿ ವಿಶ್ವವಿದ್ಯಾನಿಲಯದ ಮುಖ್ಯಸ್ಥರು ಹೇಳಿದ್ದಾರೆ. ಇತ್ತ ಈ ಬಗ್ಗೆ ಪ್ರಾಧ್ಯಾಪಕ ಜೊರ್ಡೆನ್ಸ್ ಅವರು ತಮ್ಮ ತಪ್ಪಿಗಾಗಿ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳ ಮುಂದೆ ಕ್ಷಮೆಯಾಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವರದಕ್ಷಿಣೆಯಿಂದ ಹ್ಯಾಂಡ್ಸಮ್ ಹುಡ್ಗ ಸಿಗ್ತಾನಂತೆ, ವರರಿಗೆ ಸ್ವಯಂ ಉದ್ಯೋಗ ಸಿಗುತ್ತಂತೆ- ಕಾಲೇಜಿನ ಸ್ಟಡಿ ಮೆಟೀರಿಯಲ್ ವೈರಲ್

    ವರದಕ್ಷಿಣೆಯಿಂದ ಹ್ಯಾಂಡ್ಸಮ್ ಹುಡ್ಗ ಸಿಗ್ತಾನಂತೆ, ವರರಿಗೆ ಸ್ವಯಂ ಉದ್ಯೋಗ ಸಿಗುತ್ತಂತೆ- ಕಾಲೇಜಿನ ಸ್ಟಡಿ ಮೆಟೀರಿಯಲ್ ವೈರಲ್

    ಬೆಂಗಳೂರು: ಸಾಮಾಜಿಕ ಪಿಡುಗುಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಅವರನ್ನು ಜಾಗೃತರಾಗಿಸಬೇಕಾದ ಕಾಲೇಜೊಂದು ವಿದ್ಯಾರ್ಥಿಗಳಿಗೆ ವರದಕ್ಷಣೆಯನ್ನು ಬೆಂಬಲಿಸುವಂತಹ ಸ್ಟಡಿ ಮೆಟೀರಿಯಲ್ ನೀಡಿ ಮಹಾ ಎಡವಟ್ಟು ಮಾಡಿಕೊಂಡಿದೆ. ಈಗ ಆ ಸ್ಟಡಿ ಮೆಟೀರಿಯಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ನಗರದ ಶಾಂತಿ ನಗರದಲ್ಲಿರುವ ಸೆಂಟ್ ಜೋಸೆಫರ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವರದಕ್ಷಿಣೆಯನ್ನು ಬೆಂಬಲಿಸುವಂತಹ ಸ್ಟಡಿ ಮೆಟೀರಿಯಲ್ ನೀಡಲಾಗಿದೆ. ಇದನ್ನ ವಿದ್ಯಾರ್ಥಿಯೊಬ್ಬರು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ.

    ವರದಕ್ಷಿಣೆಯಿಂದ ಕುರೂಪಿ ಹೆಣ್ಮಕ್ಕಳ ಮದುವೆ ಆಗುತ್ತದೆ. ವರದಕ್ಷಿಣೆಯಿಂದ ಒಳ್ಳೆಯ ಹ್ಯಾಂಡ್ಸಮ್ ಹುಡುಗ ಸಿಗುತ್ತಾನೆ. ವರರಿಗೆ ಸ್ವಯಂ ಉದ್ಯೋಗ ದೊರೆಯುತ್ತದೆ. ಇದರಿಂದ ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಾರೆ. ಅಷ್ಟೇ ಅಲ್ಲದೇ ಬಡ ಹುಡುಗರಿಗೆ ಅನುಕುಲವಾಗುತ್ತೆ. ಇದರಿಂದ ಅವರು ತಮ್ಮ ಓದನ್ನು ಮುಂದುವರೆಸಬಹುದು. ನವ ದಂಪತಿಯ ಜೀವನ ಸುಖಮಯವಾಗಿರುತ್ತೆ. ಜೊತೆಗೆ ಆಸ್ತಿ ಮಾಡಬಹುದು ಎಂದೆಲ್ಲಾ ಅಧ್ಯಯನ ಸಾಮಗ್ರಿಯಲ್ಲಿ ಹೇಳಲಾಗಿದೆ.

    ವರದಕ್ಷಿಣೆ ಬೆಂಬಲಿಸುವ ಈ ಪಾಠವನ್ನು ಚೆನ್ನೈನ ರಿತಿಕಾ ರಮೇಶ್ ಎಂಬುವರು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ. ಇವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸೆಂಟ್ ಜೋಸೇಫ್ ಕಾಲೇಜು ಸ್ಪಷ್ಟನೆ ನೀಡಿದೆ.

    ಇದು ಕಾಲೇಜಿನ ಲೆಕ್ಚರರ್ ನೀಡಿರುವ ಅಧ್ಯಯನ ಸಾಮಾಗ್ರಿ. ಇದಕ್ಕೂ ಕಾಲೇಜಿಗೂ ಸಂಬಂಧವಿಲ್ಲ. ಇದು ಮಹಾರಾಷ್ಟ್ರದ ಒಂದು ಪಠ್ಯಪುಸ್ತಕದಿಂದ ತೆಗೆದ ವಿಷಯ. ವಿದ್ಯಾರ್ಥಿಗಳು ಇದನ್ನೇ ಫೇಸ್‍ಬುಕ್ ಗೆ ಹಾಕಿದ್ದಾರೆ ಎಂದು ಹೇಳಿದೆ.

  • ಯುವಜನತೆಗೆ ಲವ್ ಬಗ್ಗೆ ಸಚಿವ ಆಂಜನೇಯ ಪಾಠ!

    ಯುವಜನತೆಗೆ ಲವ್ ಬಗ್ಗೆ ಸಚಿವ ಆಂಜನೇಯ ಪಾಠ!

    ಧಾರವಾಡ: ಸಿಎಂ ಸಿದ್ದರಾಮಯ್ಯ ಅವರು ಆಗಾಗ ಕನ್ನಡ ವ್ಯಾಕರಣದ ಬಗ್ಗೆ ಪಾಠ ಮಾಡುವುದು ನಿಮಗೆ ಗೊತ್ತೆಯಿದೆ. ಆದರೆ ಈಗ ಸಮಾಜ ಕಲ್ಯಾಣ ಸಚಿವ ಹೆಚ್ ಆಂಜನೇಯ ಅವರು ಯುವಜನತೆಗೆ ಲವ್ ಬಗ್ಗೆ ಪಾಠ ಮಾಡಿ ಸುದ್ದಿಯಾಗಿದ್ದಾರೆ.

    ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳೇ ಲವ್ ಕಡೆ ಗಮನ ಕೊಡದೇ ನೀವೆಲ್ಲರೂ ಚೆನ್ನಾಗಿ ಓದಬೇಕು. ಮೊಬೈಲ್ ಜಾಸ್ತಿ ಉಪಯೋಗಿಸಬೇಡಿ. ಯಾವ ಪೊಲೀಸ್ ಠಾಣೆಯಲ್ಲಿ ಹೋಗಿ ನೋಡಿದರೂ ಹುಡುಗಿ ನಾಪತ್ತೆಯಾಗಿದ್ದಾಳೆ ಎನ್ನುವುದನ್ನೇ ನೋಡುತ್ತೇವೆ. ಆದರೆ ನೀವು ಆ ತರಹ ಮಾಡಬೇಡಿ ಎಂದು ಹೇಳಿದರು.

    ಎಲ್ಲಾ ರೀತಿಯ ಪರಿಶ್ರಮಪಟ್ಟು ಪದವಿ ಓದಿ ಕೆಲಸ ಪಡೆದು ಉನ್ನತ ಸ್ಥಾನಕ್ಕೆ ಏರಿ ನಿಮ್ಮ ಜೀವನಕ್ಕೆ ಭದ್ರತೆಯನ್ನು ಒದಗಿಸಿಕೊಳ್ಳಿ. ನಿಮ್ಮ ತಂದೆ ತಾಯಿ ಹೇಳಿದವರನ್ನು ಮದುವೆಯಾಗಿ ಎಂದು ಬುದ್ಧಿಮಾತನ್ನು ಹೇಳಿದರು.

    ನಾನು ಮದುವೆಯಾಗಿದ್ದ ಹುಡುಗಿಯನ್ನು ನೋಡಿರಲಿಲ್ಲ. ನಮ್ಮ ಅಮ್ಮ ಈ ಹುಡುಗಿಗೆ ತಾಳಿಕಟ್ಟು ಅಂದರು. ಅವಳು ಸ್ನಾತಕೋತ್ತರ ಪದವಿಧರೆ. ಒಳ್ಳೆಯ ಹುಡುಗಿ ನೀನು ತಾಳಿ ಕಟ್ಟು ಅಂದ್ರು ನಾನು ಕಟ್ಟಿದೆ. ಈಗ ನಾವು ಸಂತೋಷದಿಂದ ಇದ್ದೇವೆ. ನಮ್ಮ ತಂದೆ ತಾಯಿ ನೋಡಿದವರನ್ನು ಮದುವೆಯಾಗಿ ನೆಮ್ಮದಿಯಿಂದ ಇದ್ದೇವೆ. ನೀವು ಇದೆ ರೀತಿ ಇರಬೇಕು ಎಂದು ಅವರು ತಿಳಿಸಿದರು.

  • ಮತ್ತೆ ಮೇಷ್ಟ್ರಾದ ಸಿಎಂ- ಮೇಯರ್, ಶಾಸಕರಿಗೆ ಪ್ರಜಾಪ್ರಭುತ್ವದ ಪಾಠ

    ಮತ್ತೆ ಮೇಷ್ಟ್ರಾದ ಸಿಎಂ- ಮೇಯರ್, ಶಾಸಕರಿಗೆ ಪ್ರಜಾಪ್ರಭುತ್ವದ ಪಾಠ

    ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಪಾಠ ಮಾಡೋಕೆ ಶುರುಮಾಡಿದ್ದಾರೆ. ವಿಧಾನಸಭೆ ಕಲಾಪ ಇರಲಿ, ಸಾರ್ವಜನಿಕ ಸಭೆ ಇರಲಿ ಎಲ್ಲಾ ಕಡೆಯೂ ಇದ್ದಕ್ಕಿಂದಂತೆ ಮೇಷ್ಟ್ರಾಗಿ ಬಿಡುತ್ತಾರೆ. ಇವತ್ತು ಕೂಡ ಮೈಸೂರಿನಲ್ಲಿ ಮೇಷ್ಟ್ರಾಗಿದ್ದರು.

    ಮೈಸೂರಿನ ತಮ್ಮ ನಿವಾಸದಲ್ಲಿ ಮೈಸೂರು ಪಾಲಿಕೆ ಮೇಯರ್ ಹಾಗೂ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಅವರು ರಾಜಾತ್ವ-ಪ್ರಜಾಪ್ರಭುತ್ವದ ಕುರಿತು ಪಾಠ ಮಾಡಿದರು. ಮೈಸೂರಿನ ದೇವರಾಜ ಮಾರ್ಕೆಟ್ ದುರಸ್ಥಿ ಕುರಿತು ಮನವಿ ಮಾಡಿದ್ದಕ್ಕೆ ಪಾಠ ಶುರು ಮಾಡಿದ್ರು.

    ರಾಜರು ಎಂದರೆ ಅವರು ದೇವರಲ್ಲ. ಅವರು ಸಹ ಅಂದಿನ ದಿನದಲ್ಲಿ ಸರ್ಕಾರ ನಡೆಸುತ್ತಿದ್ದರು. ಆ ಸರ್ಕಾರಗಳು ವಂಶಪಾರಂಪರ್ಯವಾಗಿದ್ದವು. ಈಗ ಪ್ರಜಾಪ್ರಭುತ್ವದ ಸರ್ಕಾರ ಇದ್ದು ಇಲ್ಲಿ ಜನರಿಂದ ಆಯ್ಕೆ ಆಗುತ್ತಾರೆ ಅಷ್ಟೆ. ಮಹಾರಾಜರು ಜನರಿಗೆ ಹಣವನ್ನ ತಮ್ಮ ಮನೆಯಿಂದ ತಂದುಕೊಡುತ್ತಿರಲಿಲ್ಲ. ಅಂದು ಸಹ ಜನರ ದುಡ್ಡನ್ನೆ ಜನರಿಗೆ ನೀಡುತ್ತಿದ್ದರು. ಮಹಾರಾಜರು ಅದನ್ನು ಕೊಡದೆ ಅವರೇ ಇಟ್ಟುಕೊಳ್ಳೋಕ್ಕೆ ಆಗುತ್ತಿತ್ತಾ? ಎಂದು ಮೇಯರ್ ರವಿಕುಮಾರ್ ಅವರಿಗೆ ಸಿಎಂ ಪ್ರಶ್ನೆ ಹಾಕಿದರು.

    ಈ ಮಧ್ಯೆ ಪಾಲಿಕೆ ಸದಸ್ಯರೊಬ್ಬರು ಈಗ ನೀವೇ ನಮ್ಮ ಮಹಾರಾಜರು ಎಂದಿದ್ದಕ್ಕೆ ಇಲ್ಲ, ನಾನು ಮಹಾರಾಜನಲ್ಲ. ಅಂದು ಮಹಾರಾಜರನ್ನು ಗೌರವದಿಂದ ನೋಡುತ್ತಿದ್ದರು. ಈಗ ನಾವು ರಸ್ತೆಯಲ್ಲಿ ಹೋಗುತ್ತಿದ್ದರೂ ಜನರು ಬೈಯುತ್ತಾರೆ. ಆಗ ದಸರಾ ಮೆರವಣಿಗೆಯಲ್ಲಿ ಮಹಾರಾಜರು ಬಂದಾಗ ಎಲ್ಲರೂ ಎದ್ದು ಕೈ ಮಗಿಯುತ್ತಿದ್ದರು. ಈಗ ಅದೆಲ್ಲ ಆಗುತ್ತಾ? ನಾವು ಜನರ ಪ್ರತಿನಿಧಿಗಳಷ್ಟೇ ಎಂದು ತಮ್ಮ ಮನೆಗೆ ಬಂದು ಜನಪ್ರತಿನಿಧಿಗಳಿಗೆ ರಾಜತ್ವ, ಪ್ರಜಾಪ್ರಭುತ್ವದ ಪಾಠ ಮಾಡಿದರು.

  • ಅಮ್ಮಾ.. ಪ್ರೀತಿಯಿಂದ ಹೇಳಿಕೊಡಿ- ಪುಟಾಣಿ ವಿಡಿಯೋ ನೋಡಿ ಕೊಹ್ಲಿ, ಶಿಖರ್, ರಾಬಿನ್ ಉತ್ತಪ್ಪ ಹೀಗಂದ್ರು

    ಅಮ್ಮಾ.. ಪ್ರೀತಿಯಿಂದ ಹೇಳಿಕೊಡಿ- ಪುಟಾಣಿ ವಿಡಿಯೋ ನೋಡಿ ಕೊಹ್ಲಿ, ಶಿಖರ್, ರಾಬಿನ್ ಉತ್ತಪ್ಪ ಹೀಗಂದ್ರು

    ಮುಂಬೈ: ಕೆಲದಿನಗಳಿಂದ ಸಾಮಾಜಿಕ ಜಾಲತಾಣ ವಾಟ್ಸಪ್ ಹಾಗೂ ಫೇಸ್ ಬುಕ್ ಗಳಲ್ಲಿ ತಾಯಿಯೊಬ್ಬರು ಮಗುವಿಗೆ ಗದರಿಸಿ ಪಾಠ ಹೇಳಿಕೊಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

    ಈ ವಿಡಿಯೋವನ್ನು ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಶೀಖರ್ ಧವನ್, ರಾಬಿನ್ ಉತ್ತಪ್ಪ ಸೇರಿದಂತೆ ಹಲವರು ಶೇರ್ ಮಾಡಿದ್ದು, ಶಿಕ್ಷಣದ ನೆಪದಲ್ಲಿ ಮಕ್ಕಳನ್ನು ಶಿಕ್ಷಿಸಬೇಡಿ ಅಂತ ತಾಯಂದಿರಿಗೆ ಸಲಹೆ ನೀಡಿದ್ದಾರೆ.

    ವಿಡಿಯೋದಲ್ಲಿ ಹೋಂ ವರ್ಕ್ ಮಾಡಿಸುವ ಸಂದರ್ಭದಲ್ಲಿ ಮಗು ಅಂಕಿಗಳನ್ನು ತಪ್ಪಾಗಿ ಹೇಳಿದೆ. ಈ ವೇಳೆ ತಾಯಿ ಆಕೆಗೆ ಹೊಡೆದಿದ್ದಾರೆ. ಪರಿಣಾಮ ಮಗು ಬಿಕ್ಕಿ ಬಿಕ್ಕಿ ಅಳುತ್ತಾ ಗದರಬೇಡಿ ನಿಧಾನವಾಗಿ, ಪ್ರೀತಿಯಿಂದ ಒಂದು ಎರಡು ಹೇಳಿಕೊಡಿ ಎಂದು ಬೇಡಿಕೊಳ್ಳುವ ದೃಶ್ಯ ಮನಕಲಕುವಂತಿದೆ. ಆದರೂ ಕರುಣೆ ತೋರದ ಪಾಪಿ ತಾಯಿ ಮಗುವಿನ ಮೇಲೆ ತನ್ನ ಕ್ರೂರ ವರ್ತನೆ ತೋರಿದ್ದಾರೆ. ಈ ವಿಡಿಯೋವನ್ನು ವೀಕ್ಷಿಸಿದ ಕ್ರಿಕೆಟಿಗರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

    ಮಕ್ಕಳಿಗೆ ಪ್ರೀತಿಯಿಂದ ಶಿಕ್ಷಣವನ್ನು ನೀಡಿ. ಒತ್ತಾಯಪೂರ್ವಕವಾಗಿ ಗದರಿಸಿ ಪಾಠ ಹೇಳಿಕೊಡಬೇಡಿ. ಇದರಿಂದ ಏನೂ ಪ್ರಯೋಜನವಾಗಲ್ಲ. ಇದರಿಂದ ಮಕ್ಕಳು ಏನನ್ನೂ ಕಲಿಯಲು ಸಾಧ್ಯವಿಲ್ಲ. ಮಕ್ಕಳೊಂದಿಗೆ ತಾಳ್ಮೆಯಿಂದ ವರ್ತಿಸಿ. ಶಿಕ್ಷಣ ವಿಚಾರದಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡಿ ಬೆಳೆಸಿ. ಈ ವಿಡಿಯೋ ಮನಕಲಕುವಂತಿದೆ. ಪುಟ್ಟ ಮಕ್ಕಳಿಗೆ ಈ ರೀತಿ ಹೇಳಿಕೊಡದೇ, ಸಹನೆಯಿಂದ ಹೇಳಿಕೊಡಿ ಅಂತ ಕೊಹ್ಲಿ ಸಲಹೆಯಿತ್ತಿದ್ದಾರೆ.

    ಹೆತ್ತವರು ತಮ್ಮ ಮಕ್ಕಳೊಂದಿಗೆ ತಾಳ್ಮೆಯಿಂದಿರಿ ಎಂದು ನಾನು ಮನವಿ ಮಾಡುತ್ತೇನೆ. ಪ್ರತಿಯೊಂದು ಮಗುವೂ ಒಂದೊಂದು ಹಂತದಲ್ಲಿ ಕಲಿಯುತ್ತದೆ. ಮಗುವಿಗೆ ಹೊಡೆದು ಕಲಿಸುವುದನ್ನು ನಿಲ್ಲಿಸಿ ಎಂದು ಶಿಖರ್ ಧವನ್ ಟ್ವೀಟ್ ಮಾಡಿದ್ದಾರೆ.

    ಇದು ಹೃದಯ ವಿದ್ರಾವಕ ಆಗಿದೆ. ಮಕ್ಕಳನ್ನು ಈ ರೀತಿ ಬೆಳೆಸುವುದು ಸರಿಯಲ್ಲ. ಇದು ನಿಲ್ಲಬೇಕು, ಮಕ್ಕಳಲ್ಲಿ ಭಯ ಹುಟ್ಟಿಸುವುದಕ್ಕಿಂತ ಪ್ರೀತಿಯಿಂದ ಬೆಳೆಸಬೇಕು ಎಂದು ರಾಬಿನ್ ಉತ್ತಪ್ಪ ಕೂಡ ಟ್ವೀಟಿಸಿದ್ದಾರೆ.

    https://www.instagram.com/p/BX9ovhvAsbe/