Tag: ಪಾಠ

  • ಸೆಪ್ಟಂಬರ್‌ವರೆಗೆ ಶಾಲೆ ಆರಂಭ ಇಲ್ಲ- ಇಂದಿನಿಂದ ಚಂದನ ವಾಹಿನಿಯಲ್ಲಿ ಆನ್‍ಲೈನ್ ಕ್ಲಾಸ್

    ಸೆಪ್ಟಂಬರ್‌ವರೆಗೆ ಶಾಲೆ ಆರಂಭ ಇಲ್ಲ- ಇಂದಿನಿಂದ ಚಂದನ ವಾಹಿನಿಯಲ್ಲಿ ಆನ್‍ಲೈನ್ ಕ್ಲಾಸ್

    – 4 ಗಂಟೆಯಲ್ಲಿ 8 ವಿಷಯಗಳ ಬೋಧನೆ

    ಬೆಂಗಳೂರು: ಮಹಾಮಾರಿ ಕೊರೊನಾದಿಂದ ಸದ್ಯಕ್ಕೆ ಸೆಪ್ಟಂಬರ್‌ವರೆಗೂ ಶಾಲೆಗಳ ಪ್ರಾರಂಭ ಇಲ್ಲ. ಹೀಗಾಗಿ ಇಂದಿನಿಂದ ಮಕ್ಕಳಿಗೆ ಇ-ಕ್ಲಾಸ್ ಆರಂಭವಾಗಲಿದೆ.

    ಚಂದನ ವಾಹಿನಿಯಲ್ಲಿ ಸೇತುಬಂದ ಕಾರ್ಯಕ್ರಮಗಳು ಆರಂಭವಾಗುತ್ತಿವೆ. ಇಂದಿನಿಂದ 8-10ನೇ ತರಗತಿವರೆಗಿನ ಪಾಠಗಳು ಪ್ರಸಾರವಾಗುತ್ತೆ. ಮಕ್ಕಳ ಹಿತ ದೃಷ್ಠಿಯಿಂದ ಇಂದಿನಿಂದ ಬ್ರಿಡ್ಜ್ ಕೋರ್ಸ್ ನಡೆಸಲಾಗುತ್ತಿದೆ. ಜುಲೈ 20 ರಿಂದ 31ರ ವರೆಗೆ ಬ್ರಿಡ್ಜ್ ಕೋರ್ಸ್ ನಡೆಯಲಿದ್ದು, ಈಗಾಗಲೇ ಶಿಕ್ಷಣ ಇಲಾಖೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಶಾಲೆಗಳ ಪ್ರಾರಂಭ ಕುರಿತು ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಶಿಕ್ಷಣ ಸಚಿವ ಸುರೇಶ ಕುಮಾರ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಸೆಪ್ಟೆಂಬರ್‌ನಲ್ಲಿ ಶಾಲೆ ಪ್ರಾರಂಭ ಆಗುತ್ತೆ ಎಂಬ ನಿರ್ಣಯವನ್ನು ಸರ್ಕಾರ ವ್ಯಕ್ತಪಡಿಸಿಲ್ಲ. ಕೊರೊನಾ ಸಂದರ್ಭದಲ್ಲಿನ ಶಿಕ್ಷಣ ಕ್ಷೇತ್ರದ ಆದ್ಯತೆಗಳು ಬೇರೆ ಇದೆ. ಅವನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ತನ್ನನ್ನು ತೊಡಗಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

    ವಿದ್ಯಾರ್ಥಿಗಳು ಯಾವುದೇ ತೊಂದರೆಯಿಲ್ಲದ ಮುಕ್ತ ವಾತಾವರಣದ ಸೃಷ್ಟಿಯಾದ ಮೇಲೆ ಮಾತ್ರ ಶಾಲೆಗಳಿಗೆ ಹಾಜರಾಗುತ್ತಾರೆ. ಸದ್ಯಕ್ಕೆ ಶಾಲೆಗಳನ್ನು ತೆರೆಯುವ ಬಗ್ಗೆ ನಾವು ಯಾವುದೇ ಯೋಚನೆ, ನಿರ್ಣಯ ಕೈಗೊಂಡಿಲ್ಲ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅನವಶ್ಯಕ ಆತಂಕ ಬೇಡ ಎಂದು ಸುರೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.

    ಈ ವರ್ಷ ಇ ಕ್ಲಾಸ್ ಹಾಗೂ ಆನ್‍ಲೈನ್ ಕ್ಲಾಸ್‍ಗಳು ಮಾತ್ರನ ಅಂತ ಬಹುತೇಕ ಪೋಷಕರ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಶಾಲೆಗಳ ಓಪನ್ ಆಗುವ ಸಾಧ್ಯತೆ ಕಡಿಮೆ ಇದೆ.

    ಇತ್ತೀಚೆಗೆ ಸಚಿವ ಸುಧಾಕರ್ ಸುದ್ದಿಗೋಷ್ಠಿಯಲ್ಲಿ ಕೂಡ ಈ ವಿಚಾರ ಪ್ರಸ್ತಾಪ ಮಾಡಿದ್ದು, ಮಕ್ಕಳು, ವೃದ್ಧರನ್ನ ಹೊರಗೆ ಕಳಿಸದೇ ರಕ್ಷಣೆ ಮಾಡುವ ಅಗತ್ಯವಿದೆ ಎಂದು ಹೇಳಿದ್ದರು. ಜೊತೆಗೆ ಮಕ್ಕಳ ತಜ್ಞರಿಂದಲೂ ಶಾಲೆ ಓಪನ್ ಮಾಡದೇ ಇರುವುದೇ ಉತ್ತಮ ಎಂಬ ಸಲಹೆ ಬಂದಿತ್ತು.

  • ಆನ್‍ಲೈನ್ ಶಿಕ್ಷಣಕ್ಕೆ ಸೆಡ್ಡು ಹೊಡೆದ ಆಡಳಿತ ಮಂಡಳಿ- ಮನೆ ಮನೆಗೆ ತೆರಳಿ ಶಿಕ್ಷಕರಿಂದ ಪಾಠ

    ಆನ್‍ಲೈನ್ ಶಿಕ್ಷಣಕ್ಕೆ ಸೆಡ್ಡು ಹೊಡೆದ ಆಡಳಿತ ಮಂಡಳಿ- ಮನೆ ಮನೆಗೆ ತೆರಳಿ ಶಿಕ್ಷಕರಿಂದ ಪಾಠ

    – ದಿನನಿತ್ಯ 50ಕ್ಕೂ ಹೆಚ್ಚು ಮನೆಗಳಿಗೆ ಶಿಕ್ಷಕರು ಭೇಟಿ
    – ಪಾಠದ ಜೊತೆಗೆ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆಯೂ ಕಾಳಜಿ

    ಬೆಳಗಾವಿ/ಚಿಕ್ಕೋಡಿ: ಕೊರೊನಾ ಮಹಾಮಾರಿಯಿಂದ ಶಾಲೆಗಳನ್ನ ಯಾವಾಗ ಆರಂಭ ಮಾಡಬೇಕು ಎನ್ನುವ ಗೊಂದಲದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗೊಂದಲದಲ್ಲಿವೆ. ಕೆಲ ಶಾಲೆಗಳು ಸರ್ಕಾರ ಬೇಡ ಎಂದರೂ ಆನ್‍ಲೈನ್ ಮೂಲಕ ಮಕ್ಕಳಿಗೆ ಪಾಠ ಮಾಡುತ್ತಿವೆ. ಆದರೆ ಇಲ್ಲೊಂದು ಶಾಲಾ ಆಡಳಿತ ಮಂಡಳಿ ಮಕ್ಕಳಿಗೆ ವಿಭಿನ್ನವಾಗಿ ಪಾಠ ಮಾಡುವ ಹೊಸ ಐಡಿಯಾ ಕಂಡು ಕೊಂಡಿದೆ.

    ಬೈಕ್ ಮೇಲೆ ಹಾಗೂ ನಡೆದುಕೊಂಡು ಶಾಲಾ ಮಕ್ಕಳ ಮನೆಗಳಿಗೆ ತೆರಳಿ ಶಿಕ್ಷಕರು ಪಾಠ ಮಾಡುತ್ತಿರುವ ಹೊಸ ಐಡಿಯಾವನ್ನ ಮಾಡಿದೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಜಿ.ಎಂ.ಹಂಜಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಆಡಳಿತ ಮಂಡಳಿ ಮಾಡಿದೆ. ಮಹಾಮಾರಿ ಕೊರೊನಾದಿಂದ ವಿದ್ಯಾರ್ಥಿಗಳು ಪಾಠ ಬಿಟ್ಟು ಕೇವಲ ಆಟ ಆಡಿ ಕಾಲಹರಣ ಮಾಡುವುದನ್ನ ಗಮನಿಸಿ ಹಾಗೂ ಆನ್‍ಲೈನ್ ಶಿಕ್ಷಣದಿಂದ ಮಕ್ಕಳಿಗೆ, ಪಾಲಕರಲ್ಲಿ ತೊಂದರೆಯಾಗುವುದನ್ನ ಮನಗಂಡು ವಿದ್ಯಾರ್ಥಿಗಳ ಮನೆಗಳಿಗೆ ಶಿಕ್ಷಕರು ತೆರಳಿ ಪಾಠ ಹೇಳುವ ಹೊಸ ಐಡಿಯಾ ಕಂಡುಕೊಂಡಿದೆ.

    600ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮನೆಗಳಿಗೆ ಶಿಕ್ಷಕರೇ ಖುದ್ದಾಗಿ ತೆರಳಿ ಪಾಠ ಮಾಡುತ್ತಿದ್ದಾರೆ. ದಿನನಿತ್ಯ 50ಕ್ಕೂ ಹೆಚ್ಚು ಮನೆಗಳಿಗೆ ಶಿಕ್ಷಕರು ತೆರಳಿ ಹೋಂವರ್ಕ್ ಕೊಟ್ಟು ಬರುತ್ತಾರೆ. ಬಳಿಕ ಮತ್ತೆ ಮೂರು ದಿನಗಳ ಬಳಿಕ ಹೋಂವರ್ಕ್ ಚೆಕ್ ಮಾಡಿ ಹೊಸ ಹೋಂವರ್ಕ್ ಕೊಟ್ಟು ಬರುವ ಕೆಲಸವನ್ನ ಶಿಕ್ಷಕರು ಮಾಡುತ್ತಿದ್ದಾರೆ. 1 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ 28 ಶಿಕ್ಷಕರ ತಂಡ ದಿನನಿತ್ಯ ಹೋಗಿ ಪಾಠ ಮಾಡಿ ಬರುತ್ತಿದ್ದಾರೆ. ಈ ಹೊಸ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ಪಾಲಕರು ಸಂತಸ ವ್ಯಕ್ತಪಡಿಸಿದ್ದು, ಲಾಕ್‍ಡೌನ್‍ನಿಂದ ನಮ್ಮ ಮಕ್ಕಳು ವಿದ್ಯಾಭ್ಯಾಸ ಮರೆತು ಬಿಟ್ಟಿದ್ದರು. ಆದರೆ ಈ ಹೊಸ ವ್ಯವಸ್ಥೆಯಿಂದ ದಿನನಿತ್ಯ ಅಭ್ಯಾಸದ ಕಡೆಗೆ ಗಮನ ಕೊಡುವಂತಾಗಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

    ಅನುದಾನಿತ ಶಾಲೆ ಆದರೂ ಶಿಕ್ಷಕರು ಹೆಚ್ಚು ಇರುವ ಈ ಶಾಲೆಯಲ್ಲಿ ಶಾಲೆಗಳು ಬಂದ ಆಗಿದ್ದ ಕಾರಣ ವೇತನವಿಲ್ಲದೇ ಪರದಾಡುತ್ತಿದ್ದರು. ಇದನ್ನ ಗಮನಿಸಿದ ಆಡಳಿತ ಮಂಡಳಿ ಈಗ ಶಿಕ್ಷಕರಿಗೆ ಹೊಸ ಕಾಯಕ ನೀಡಿ ವೇತನ ನೀಡುತ್ತಿರುವುದಕ್ಕೆ ಶಿಕ್ಷಕರ ಕುಟುಂಬಗಳು ನಿಟ್ಟುಸಿರು ಬಿಟ್ಟಿವೆ. ಅಲ್ಲದೇ ದಿನನಿತ್ಯ ಶಿಕ್ಷಕರು ಪಾಠ ಮಾಡುವುದಷ್ಟೇ ಅಲ್ಲದೇ ವಿದ್ಯಾರ್ಥಿಗಳ ಹಾಗೂ ವಿದ್ಯಾರ್ಥಿಗಳ ಮನೆಯವರ ಆರೋಗ್ಯದ ಮಾಹಿತಿ ಪಡೆದು, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ ಅವರಿಗೆ ಸಲಹೆ ನೀಡಿ ಆಸ್ಪತ್ರೆಗೆ ಕಳಿಸಿಕೊಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಪಾಠದ ಜೊತೆಗೆ ಆರೋಗ್ಯದ ಕಡೆಯೂ ಈ ಶಾಲೆಯ ಶಿಕ್ಷಕರು ಕಾಳಜಿವಹಿಸುತ್ತಿದ್ದಾರೆ.

    ಕೊರೊನಾ ಮಹಾಮಾರಿಗೆ ಶಿಕ್ಷಣ ವ್ಯವಸ್ಥೆಯೇ ಅದಲು ಬದಲಾಗಿದೆ. ಆನ್‍ಲೈನ್ ಶಿಕ್ಷಣ ಬೇಕಾ ಅಥವಾ ಶಾಲೆ ಆರಂಭಿಸಬೇಕಾ ಎನ್ನುವ ಗೊಂದಲದಲ್ಲಿ ಸರ್ಕಾರ ಇದೆ. ಆದರೆ ಈ ಎಲ್ಲ ಗೊಂದಲಗಳನ್ನ ಬದಿಗಿಟ್ಟು ಜಿ.ಎಂ.ಹಂಜಿ ಶಿಕ್ಷಣ ಸಂಸ್ಥೆಯು ಕಂಡುಕೊಂಡಿರುವ ಈ ಹೊಸ ಐಡಿಯಾ ಇತರರಿಗೂ ಮಾದರಿಯಾಗಿದೆ.

  • ಟ್ಯೂಷನ್ ದತ್ತ ಮೇಷ್ಟ್ರೇ ನಿಮಗೊಂದು ಸಲಾಂ: ಸಚಿವ ಸುರೇಶ್ ಕುಮಾರ್

    ಟ್ಯೂಷನ್ ದತ್ತ ಮೇಷ್ಟ್ರೇ ನಿಮಗೊಂದು ಸಲಾಂ: ಸಚಿವ ಸುರೇಶ್ ಕುಮಾರ್

    – ನಿಮ್ಮೊಳಗಿರೋ ಶಿಕ್ಷಕ ಸದಾ ಹಸಿರಾಗಿರಲಿ ಮೇಷ್ಟ್ರೇ

    ಚಿಕ್ಕಮಗಳೂರು: ಫೇಸ್‍ಬುಕ್ ಲೈವ್ ಮೂಲಕ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಪಾಠ ಮಾಡುತ್ತಿರೋ ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತರ ಸೇವೆಗೆ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಫಿದಾ ಆಗಿದ್ದಾರೆ. ದತ್ತ ಅವರಿಗೆ ಪತ್ರ ಬರೆಯುವ ಮೂಲಕ ಅವರ ಸೇವೆಗೆ ಧನ್ಯವಾದ ತಿಳಿಸಿದ್ದಾರೆ.

    ವೃತ್ತಿ ಹಾಗೂ ಮಕ್ಕಳ ಮೇಲಿರುವ ನಿಮ್ಮ ಪ್ರೀತಿಗೆ ನನ್ನದೊಂದು ಸಲಾಂ ಎಂದು ಪತ್ರದಲ್ಲಿ ಬರೆದಿದ್ದಾರೆ. ದತ್ತ ಮೇಷ್ಟ್ರು ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಪ್ರತಿ ದಿನ ಸಂಜೆ 7.30 ರಿಂದ 8.30ರವರೆಗೆ ಫೇಸ್‍ಬುಕ್ ಲೈವ್‍ನಲ್ಲಿ ಪಾಠ ಮಾಡುತ್ತಿದ್ದಾರೆ. ಒಂದು ವಾರ ಭೌತಶಾಸ್ತ್ರ ಹಾಗೂ ಮತ್ತೊಂದು ವಾರ ಗಣಿತ ಪಾಠ ಮಾಡುತ್ತಿದ್ದಾರೆ. ಕೊರೊನಾ ಭಯದಿಂದ ಮುಂದಕ್ಕೆ ಹೋಗಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಜೂನ್ ಮೊದಲು ಅಥವಾ ಎರಡನೇ ವಾರದಲ್ಲಿ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದತ್ತ ಮೆಷ್ಟ್ರು ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಪುನರ್ ಮನನ ಮಾಡುವ ಉದ್ದೇಶದಿಂದ ಫೇಸ್‍ಬುಕ್ ಲೈವ್‍ನಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

    ಫೇಸ್‍ಬುಕ್‍ನಲ್ಲಿ ದತ್ತ ಮೇಷ್ಟ್ರ ಪಾಠ ನೋಡಿದ ಎಲ್ಲರೂ ನಾನು ನಿಮ್ಮ ಸ್ಟೂಡೆಂಟ್ ಆಗಬೇಕಿತ್ತು ಸರ್ ಎಂದು ಕಾಮೆಂಟ್ ಮಾಡಿದವರು ಇದ್ದಾರೆ. ಮಾಜಿ ಶಾಸಕ ವೈ.ಎಸ್.ವಿ ದತ್ತಾಗೆ ಶಿಕ್ಷಕ ವೃತ್ತಿ ಹೊಸತೇನಲ್ಲ. ಅವರು ಮೂಲತಃ ಶಿಕ್ಷಕರು. ಶಾಸಕರಾಗುವ ಮುನ್ನ ಬೆಂಗಳೂರಿನಲ್ಲಿ ಟ್ಯೂಷನ್ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಅವರು ಟ್ಯೂಷನ್ ದತ್ತಮೇಷ್ಟ್ರು ಎಂದೇ ಖ್ಯಾತಿ ಪಡೆದಿದ್ದಾರೆ. ಅವರಿಂದ ಕಲಿತವರು ಬೆಂಗಳೂರಿನ ದಶದಿಕ್ಕುಗಳಲ್ಲೂ ಇದ್ದಾರೆ.

    ಈಗ ಕೊರೊನಾನ ಆತಂಕದಿಂದ ದೇಶವೇ ಲಾಕ್‍ಡೌನ್ ಆಗಿರುವುದರಿಂದ ಮತ್ತೊಮ್ಮೆ ಫೇಸ್‍ಬುಕ್ ಮೂಲಕ ಮಕ್ಕಳಿಗೆ ಪಾಠ ಮಾಡುವ ಮೂಲಕ ಮಕ್ಕಳೊಂದಿಗೆ ಮಕ್ಕಳಾಗಿದ್ದಾರೆ. ರಾಜಕೀಯ ಮರೆತು ದತ್ತ ಮೇಷ್ಟ್ರಿಗೆ ಪತ್ರ ಬರೆದಿರುವ ಸುರೇಶ್ ಕುಮಾರ್, ಬೆಂಗಳೂರಿನ ರಸ್ತೆಯಲ್ಲಿ ಸಿಕ್ಕಾಗ ಇಬ್ಬರು ಮಾತನಾಡಿದ ಕುಶಲೋಪರಿಯನ್ನ ಪತ್ರದ ಮೂಲಕ ಮತ್ತೊಮ್ಮೆ ನೆನೆದಿದ್ದಾರೆ. ಪತ್ರದ ತುಂಬಾ ದತ್ತರವರನ್ನ ಹಾಡಿ ಹೊಗಳಿರೋ ಸುರೇಶ್ ಕುಮಾರ್ ನಿಮ್ಮೊಳಗಿರುವ ನೈಜ ಶಿಕ್ಷಕ ಸದಾ ಹಸಿರಾಗಿರಲಿ, ನಿಮ್ಮ ನಿಸ್ವಾರ್ಥ ಸೇವೆಗೆ, ಟ್ಯೂಷನ್ ಮೇಷ್ಟ್ರಿಗೆ ನನ್ನದೊಂದು ಸಲಾಂ ಎಂದಿದ್ದಾರೆ.

  • ಲಾಕ್‍ಡೌನ್ ಎಫೆಕ್ಟ್ – ಮೇಷ್ಟ್ರಾದ ಮಾಜಿ ಶಾಸಕ ವೈ.ಎಸ್.ವಿ. ದತ್ತ

    ಲಾಕ್‍ಡೌನ್ ಎಫೆಕ್ಟ್ – ಮೇಷ್ಟ್ರಾದ ಮಾಜಿ ಶಾಸಕ ವೈ.ಎಸ್.ವಿ. ದತ್ತ

    – ನನಗೆ ಶಿಕ್ಷಕ ಎಂದು ಹೇಳಿಕೊಳ್ಳಲು ಹೆಮ್ಮೆ

    ಚಿಕ್ಕಮಗಳೂರು: ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ. ದತ್ತ ಲಾಕ್‍ಡೌನ್ ಹಿನ್ನೆಲೆ ಮೇಷ್ಟ್ರಾಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಫೇಸ್ ಬುಕ್ ಲೈವ್‍ನಲ್ಲಿ ಪ್ರತಿ ದಿನ ಸಂಜೆ 7.30 ರಿಂದ 8.30ರವೆಗೆ ಪಾಠ ಮಾಡುತ್ತಿದ್ದಾರೆ.

    ಒಂದು ವಾರ ಗಣಿತ, ಮತ್ತೊಂದು ವಾರ ಭೌತಶಾಸ್ತ್ರ ಪಾಠ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ. ಜೂನ್ ಮೊದಲ ವಾರದಲ್ಲಿ ಪರೀಕ್ಷೆ ನಡೆಯಬಹುದು ಎಂದು ಹೇಳಲಾಗುತ್ತಿದೆ. ಪರೀಕ್ಷೆ ನಡೆಸಲು ಸರ್ಕಾರ ಕೂಡ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಾಗಾಗಿ ಶೀಘ್ರದಲ್ಲೇ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಪರೀಕ್ಷೆ ನಡೆಯುವ ಹಿನ್ನೆಲೆ, ದತ್ತ ಮೇಷ್ಟ್ರು ಫೇಸ್‍ಬುಕ್ ನಲ್ಲಿ ಈಗಾಗ್ಲೇ ಮಕ್ಕಳಿಗೆ ಗಣಿತ ಪಾಠವನ್ನು ಆರಂಭಿಸಿದ್ದಾರೆ.

    https://www.facebook.com/ysvDattaofficial/videos/1161467544194546/

    ಎರಡು ವಾರಗಳ ಕಾಲ ಮಕ್ಕಳಿಗೆ ಫೇಸ್‍ಬುಕ್ ಲೈವ್‍ನಲ್ಲಿ ಪಾಠ ಮಾಡಲಿದ್ದಾರೆ. ವೈ.ಎಸ್.ವಿ ದತ್ತ ಫೇಸ್‍ಬುಕ್ ಖಾತೆಯಿಂದ ದಿನ ಸಂಜೆ 7.30 ರಿಂದ 8.30ರವರಗೆ ಒಂದು ಗಂಟೆ ಮಕ್ಕಳಿಗೆ ಪಾಠ ಮಾಡಲಿದ್ದಾರೆ. ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ವೈ.ಎಸ್.ವಿ. ದತ್ತ ಮೂಲತಃ ಶಿಕ್ಷಕರು. ನಂತರ ಶಿಕ್ಷಕ ವೃತ್ತಿಯಿಂದ ರಾಜಕಾರಣಕ್ಕೆ ಬಂದಿದ್ದರು. ಈ ಹಿಂದೆ ಅವರು ಶಾಸಕರಾಗಿದ್ದಾಗಲೂ ಕೂಡ ಶಿಕ್ಷಕರ ದಿನಾಚರಣೆಯಂದು ಮಕ್ಕಳಿಗೆ ಪಾಠ ಮಾಡಿದ್ದರು.

    ಈಗ ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆದ ಮೇಲೆ 10ನೇ ತರಗತಿಯ ಪರೀಕ್ಷೆ ಕೂಡ ಮುಂದೂಡಲಾಗಿತ್ತು. ಈಗ ಜೂನ್ ತಿಂಗಳಿನಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆ ಇರುವ ಕಾರಣ ಮಕ್ಕಳಿಗೆ ಪುನರ್ ಮನನ ತರಗತಿ ಅಗತ್ಯವೆಂದು ವರ್ಷಗಳ ಬಳಿಕ ಕೈಯಲ್ಲಿ ಮತ್ತೆ ಚಾಕ್‍ಪೀಸ್ ಹಿಡಿದು ಬದಲಾದ ಜಗದಲ್ಲಿ ಫೇಸ್‍ಬುಕ್ ಮೂಲಕ ಮತ್ತೆ ಶಿಕ್ಷಕ ವೃತ್ತಿಗೆ ಕಾಲಿಟ್ಟಿದ್ದಾರೆ.

  • ಜಿ.ಪಂ ಸಿಇಒ ರಿಂದ SSLC ವಿದ್ಯಾರ್ಥಿಗಳಿಗೆ ಪಾಠ

    ಜಿ.ಪಂ ಸಿಇಒ ರಿಂದ SSLC ವಿದ್ಯಾರ್ಥಿಗಳಿಗೆ ಪಾಠ

    ಯಾದಗಿರಿ: ನಗರದ ಸ್ಟೇಷನ್ ಬಜಾರ್ ಪ್ರೌಢಶಾಲೆಗೆ ಜಿಲ್ಲಾ ಪಂಚಾಯಿತಿ ಸಿಇಒ ಭೇಟಿ ನೀಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಪರಿಶೀಲನೆ ಜೊತೆಗೆ ಭೋದನೆ ಕೂಡ ಮಾಡಿದ್ದಾರೆ.

    ಸಿಇಒ ಶಿಲ್ಪಾ ಶರ್ಮಾ ಅವರು ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ಪರಿಶೀಲನೆ ವೇಳೆ ಮಕ್ಕಳಿಗೆ ವಿಜ್ಞಾನ ಮತ್ತು ಗಣಿತ ಸೂತ್ರಗಳ ಬಗ್ಗೆ ಪ್ರಶ್ನಿಸಿದರು. ಸಿಇಓ ಕೇಳಿದ ಪ್ರಶ್ನೆಗಳಿಗೆ ಬಹುತೇಕ ವಿದ್ಯಾರ್ಥಿಗಳು ಸಮರ್ಪಕ ಉತ್ತರ ನೀಡಿದರು. ಆದರೆ ಕೆಲವು ಮಕ್ಕಳು ಉತ್ತರ ಹೇಳುವುದರಲ್ಲಿ ಎಡವಿದ್ದರಿಂದ ವಿಷಯ ಶಿಕ್ಷಕರನ್ನು ಎಷ್ಟು ಅಧ್ಯಾಯ ಪಾಠ ಮಾಡಿದ್ದೀರಾ ಎಂದು ಕ್ಲಾಸ್ ತೆಗೆದುಕೊಂಡರು.

    ಬೋರ್ಡ್ ಪರೀಕ್ಷೆ ಫಲಿತಾಂಶದಲ್ಲಿ ಯಾದಗಿರಿ ಅತೀ ಹಿಂದುಳಿದ ಜಿಲ್ಲೆಯಾಗಿದೆ. ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಜಿಲ್ಲಾಡಳಿತ ಹಲವಾರು ಯೋಜನೆ ಹಾಕಿಕೊಂಡಿದೆ. ಹೀಗಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕೆಲವೇ ದಿನಗಳು ಬಾಕಿರುವ ಹಿನ್ನೆಲೆಯಲ್ಲಿ ಫಲಿತಾಂಶ ಸುಧಾರಣೆ ಸಮಿತಿ ಅಧ್ಯಕ್ಷರಾಗಿರುವ ಸಿಇಒ, ವಿವಿಧ ಪ್ರೌಢಶಾಲೆಗಳಿಗೆ ತೆರಳಿ SSLC ವಿದ್ಯಾರ್ಥಿಗಳ ಪರೀಕ್ಷಾ ತಯಾರಿಯನ್ನು ಗಮನಿಸುತ್ತಿದ್ದಾರೆ.

  • ನಿವೃತ್ತಿ ಬಳಿಕವೂ 22 ವರ್ಷಗಳಿಂದ ಸೇವೆ-ಗ್ರಾಮೀಣ ಮಕ್ಕಳಿಗೆ ನಿರಂತರ ವಿದ್ಯಾದಾನ

    ನಿವೃತ್ತಿ ಬಳಿಕವೂ 22 ವರ್ಷಗಳಿಂದ ಸೇವೆ-ಗ್ರಾಮೀಣ ಮಕ್ಕಳಿಗೆ ನಿರಂತರ ವಿದ್ಯಾದಾನ

    ರಾಯಚೂರು: ಸರ್ಕಾರಿ ಕೆಲಸದಿಂದ ನಿವೃತ್ತಿಯಾದವರು ಸಂಧ್ಯಾಕಾಲದಲ್ಲಿ ನೆಮ್ಮದಿಯ ಜೀವನ ಬಯಸುತ್ತಾರೆ. ಇವತ್ತಿನ ನಮ್ಮ ಪಬ್ಲಿಕ್ ಹೀರೋ ದೇವದುರ್ಗದ ಮುದುಕಪ್ಪ ಮೇಷ್ಟ್ರು ನಿವೃತ್ತಿ ಬಳಿಕವೂ 22 ವರ್ಷಗಳಿಂದ ವಿದ್ಯಾದಾನ ಮಾಡುತ್ತಿದ್ದಾರೆ.

    ನ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮ 80 ವರ್ಷದ ದೇವಪ್ಪ ಮೇಷ್ಟ್ರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. 1997ರಲ್ಲೇ ನಿವೃತ್ತಿಯಾದರೂ ಸುಮ್ಮನೆ ಕೂರದೆ 22 ವರ್ಷಗಳಿಂದ ವಿದ್ಯಾದಾನ ಮುಂದುವರಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ, ಮಕ್ಕಳಲ್ಲಿ ಇಂಗ್ಲಿಷ್ ಅಗತ್ಯ ಕಂಡು ಅರಕೆರಾದ ಸರ್ಕಾರಿ ಬಾಲಕರ ಪ್ರೌಢ ಶಾಲೆ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಆದರ್ಶ ವಿದ್ಯಾಲಯ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಬೋಧಿಸುತ್ತಿದ್ದಾರೆ. ದೇವದುರ್ಗ ತಾಲೂಕು ಶೈಕ್ಷಣಿಕವಾಗಿ ಹಿಂದುಳಿದಿದೆ. ಹಾಗಾಗಿ, ಬದುಕಿರುವವರೆಗೂ ಮಕ್ಕಳಿಗೆ ಪಾಠಮಾಡಿಕೊಂಡೇ ಇರುತ್ತೇನೆ ಎಂದು ಮುದುಕಪ್ಪ ಮೇಷ್ಟ್ರು ಹೇಳುತ್ತಾರೆ.

    ನಿವೃತ್ತಿ ನಂತರದ ಈ ದಿನಗಳಲ್ಲೂ ಒಂದು ದಿನವೂ ರಜೆ ಪಡೆಯದೆ ತಮ್ಮ ಸೇವೆ ಮುಂದುವರಿಸಿದ್ದಾರೆ. ಮುಖ್ಯವಾಗಿ ವ್ಯಾಕರಣ, ಪ್ರಬಂಧ ಬರೆಯುವುದು, ಇಂಗ್ಲಿಷ್‍ನಲ್ಲಿ ಮಾತನಾಡುವ ತರಬೇತಿಯನ್ನೂ ನೀಡುತ್ತಿದ್ದಾರೆ. ಇವರ ಹಲವಾರು ವಿದ್ಯಾರ್ಥಿಗಳು ಉನ್ನತ ಹುದ್ದೆಗೇರಿದ್ದಾರೆ.

    ರಾಜ್ಯಮಟ್ಟದ ಉತ್ತಮ ಶಿಕ್ಷಕ ಸೇರಿ ಹಲವಾರು ಪ್ರಶಸ್ತಿಗಳನ್ನ ಪಡೆದಿರುವ ಮುದುಕಪ್ಪ ಮೇಷ್ಟ್ರು, ತಮ್ಮ 6 ಜನ ಮಕ್ಕಳಲ್ಲಿ, ಇಬ್ಬರನ್ನು ಸೈನಿಕ ಶಾಲೆಗೆ ಸೇರಿಸಿದ್ದರು. ಅದರಲ್ಲಿ ದೊಡ್ಡಮಗ ಕರ್ನಲ್ ವೆಂಕಟೇಶ್ ನಾಯಕ್ ಸೇನಾಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಇವರಿಂದ ಕಲಿತರು ಡಾಕ್ಟರ್, ಇಂಜಿನಿಯರ್, ಬ್ಯಾಂಕ್ ಮ್ಯಾನೇಜರ್ ಆಗಿದ್ದಾರೆ. ಮಾಜಿ ಸಚಿವರಾದ ಹನುಮಂತಪ್ಪ ಆಲ್ಕೋಡ್, ಶಾಸಕ ಶಿವನಗೌಡ ನಾಯಕ್, ಮಾಜಿ ಸಂಸದ ಬಿ.ವಿ.ನಾಯಕ್ ಇವರೆಲ್ಲ ಮುದುಕಪ್ಪ ಮೇಷ್ಟ್ರ ಶಿಷ್ಯರಾಗಿದ್ದಾರೆ.

  • ಕಾರಾಗೃಹದಲ್ಲಿ ಅಕ್ಷರ ಜ್ಞಾನಾರ್ಜನೆ- ಸಾಕ್ಷರ ಕೈದಿಗಳಿಂದ ಅನಕ್ಷರಸ್ಥ ಕೈದಿಗಳಿಗೆ ಪಾಠ

    ಕಾರಾಗೃಹದಲ್ಲಿ ಅಕ್ಷರ ಜ್ಞಾನಾರ್ಜನೆ- ಸಾಕ್ಷರ ಕೈದಿಗಳಿಂದ ಅನಕ್ಷರಸ್ಥ ಕೈದಿಗಳಿಗೆ ಪಾಠ

    ಕೊಪ್ಪಳ: ಜೀವನದ ಯಾವುದೋ ಒಂದು ಸಮಯದಲ್ಲಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಜೈಲು ಸೇರಿದ ಕೈದಿಗಳ ಜೀವನದಲ್ಲಿ ಹೊಸ ಪುಟವನ್ನು ತೆರೆಯುವ ಕೆಲಸವನ್ನು ಕೊಪ್ಪಳದ ಜಿಲ್ಲಾ ಕಾರಾಗೃಹದಲ್ಲಿ ಮಾಡಲಾಗುತ್ತಿದೆ.

    ಜಿಲ್ಲಾ ಕಾರಾಗೃಹದಲ್ಲಿ ಅಕ್ಷರ ಕಲಿಕೆಯ ವಿಶೇಷ ಕಾರ್ಯಕ್ರಮವನು ಹಮ್ಮಿಕೊಳ್ಳಲಾಗಿದೆ. ವಿಶೇಷ ಎಂದರೆ ಕಾರಾಗೃಹದಲ್ಲಿರುವ ಅಕ್ಷರಸ್ಥ ಕೈದಿಗಳಿಂದಲೇ ಅನಕ್ಷರಸ್ಥ ಕೈದಿಗಳಿಗೆ ಪಾಠ ಮಾಡಲಾಗುತ್ತಿದೆ. ನಿತ್ಯ ಅನಕ್ಷರಸ್ಥ ಕೈದಿಗಳಿಗೆ 1 ಗಂಟೆ ಅಕ್ಷರಗಳ ಸಾಮಾನ್ಯ ಜ್ಞಾನ ಹೇಳಿಕೊಡಲಾಗುತ್ತಿದೆ.

    ಜಿಲ್ಲಾ ಕಾರಾಗೃಹದಲ್ಲಿ ಸುಮಾರು 300 ಜನ ವಿಚಾರಣಾಧೀನ ಕೈದಿಗಳಿದ್ದಾರೆ. ಅದರಲ್ಲಿ ಸುಮಾರು 90 ಕ್ಕೂ ಹೆಚ್ಚು ಜನರಿಗೆ ಅಕ್ಷರ ಜ್ಞಾನ ಇಲ್ಲ. ಹೀಗಾಗಿ ಅನಕ್ಷರಸ್ಥ ಕೈದಿಗಳಿಗೆ ಜೈಲಿನಲ್ಲಿರುವ ಅಕ್ಷರಸ್ಥ ಕೈದಿಗಳಿಂದ ಪಾಠ ಮಾಡಿಸಲಾಗುತ್ತಿದೆ. ಪ್ರತಿ 10 ಅನಕ್ಷರಸ್ಥರನ್ನು ಒಂದು ತಂಡ ಮಾಡಿ ನಿತ್ಯ 1 ಗಂಟೆ ಅವರಿಗೆ ಪಾಠ ಮಾಡಲಾಗುತ್ತಿದೆ.

    ಕೈದಿಗಳಿಗೆ ಶಿಕ್ಷಣ ನೀಡುವ ಈ ಕಾರ್ಯಕ್ಕೆ ಜಿಲ್ಲಾ ವಯಸ್ಕ ಶಿಕ್ಷಣ ಇಲಾಖೆ ಕೂಡಾ ಸಾಥ್ ನೀಡಿದ್ದು, ಕೈದಿಗಳಿಗೆ ಅಗತ್ಯ ಪುಸ್ತಕಗಳನ್ನು ನೀಡಿದೆ. ವಿವಿಧ ಅಪರಾಧದಲ್ಲಿ ಭಾಗಿಯಾದ ಬಂದ ಕೈದಿಗಳು ಇಲ್ಲಿಂದ ಹೊರಗಡೆ ಹೋದಾಗ ಅಕ್ಷರ ಕಲಿತು ಹೋಗಲಿ ಎಂಬುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಕಾರಾಗೃಹ ಅಧೀಕ್ಷಕರಾದ ಬಿ.ಎಮ್.ಕೊಟ್ರೇಶ್ ತಿಳಿಸಿದ್ದಾರೆ.

    ಮೊದಲಿಗೆ ಅಕ್ಷರ ಜ್ಞಾನ ಹೊಂದಿರುವ ಕೈದಿಗಳಿಗೆ ಕೆಲ ಮಾರ್ಗದರ್ಶನಗಳನ್ನು ನೀಡಿ ಆ ಬಳಿಕ ಇತರೇ ಕೈದಿಗಳಿಗೆ ಕಲಿಸಲು ಕಾರ್ಯಕ್ರಮ ರೂಪಿಸಿದ್ದೇವೆ. ಈ ಕಾರ್ಯಕ್ರಮ ಮೊದಲ ಭಾಗವಾಗಿ 6 ತಿಂಗಳ ಕಾಲ ನಡೆಯಲಿದೆ. ಇದು ಕೈದಿಗಳ ಜೀವನಕ್ಕೆ ನೆರವಾಗಲಿ. ಅಕ್ಷರ ಕಲಿತ ಕೈದಿಗಳು ಮನ ಪರಿವರ್ತನೆ ಮಾಡಿಕೊಂಡು ಹೊಸ ದಾರಿ ರೂಪಿಸಿಕೊಳ್ಳಿ ಎಂಬುವುದು ನಮ್ಮ ಗುರಿಯಾಗಿದೆ ಎಂದರು. ಅಧಿಕಾರಿಗಳ ಈ ಕಾರ್ಯಕ್ಕೆ ಸಾರ್ವಜನಿಕರ ವಲಯದಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

  • ಶಿಕ್ಷಕಿಯಾಗಿ ಶಾಲೆಯಲ್ಲಿ ನೆಲದ ಮೇಲೆ ಕೂತು ಐಎಎಸ್ ಅಧಿಕಾರಿಯಿಂದ ಪಾಠ

    ಶಿಕ್ಷಕಿಯಾಗಿ ಶಾಲೆಯಲ್ಲಿ ನೆಲದ ಮೇಲೆ ಕೂತು ಐಎಎಸ್ ಅಧಿಕಾರಿಯಿಂದ ಪಾಠ

    ಚಿಕ್ಕಬಳ್ಳಾಪುರ: ಐಎಎಸ್ ಅಧಿಕಾರಿಯಾದರೂ ಯಾವುದೇ ಅಹಂ ಇಲ್ಲದೆ ಸರ್ಕಾರಿ ಶಾಲೆಗೆ ಭೇಟಿ ಕೊಟ್ಟು ಮಕ್ಕಳೊಂದಿಗೆ ನೆಲದ ಮೇಲೆ ಕೂತು ಪಾಠಪ್ರವಚನ ಮಾಡಿ ಮನಸೆಳೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ನೂತನ ಸಿಇಓ ಫೌಸಿಯಾ ತಾರನಮ್ ಪಾಠ ಮಾಡಿದ ಮಹಿಳಾ ಐಎಎಸ್ ಅಧಿಕಾರಿ. ಇವರು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಸಿಇಓ ಆಗಿ ಕಳೆದ ವಾರವಷ್ಟೇ ಜಿಲ್ಲೆಗೆ ಆಗಮಿಸಿದ್ದಾರೆ. ಅಂದಹಾಗೆ ಜಿಲ್ಲೆಗೆ ಆಗಮಿಸಿರುವ ಸಿಇಓ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳು, ಗ್ರಾಮಪಂಚಾಯ್ತಿ ಕಚೇರಿಗಳು ಸೇರಿ ಸರ್ಕಾರಿ ಆಸ್ಪತ್ರೆ, ಶಾಲೆಗಳನ್ನ ಸುತ್ತಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವುದರ ಜೊತೆಗೆ ಕೆಲಸ ಕಾರ್ಯಗಳ ಬಗ್ಗೆ ಸಾಕಷ್ಟು ನಿಗಾವಹಿಸುವ ಕೆಲಸ ಮಾಡುತ್ತಿದ್ದಾರೆ.

    ಅಗಲಗುರ್ಕಿ ಸರ್ಕಾರಿ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ಕೊಟ್ಟ ಸಿಇಓ, ಮಕ್ಕಳೊಂದಿಗೆ ಮಕ್ಕಳಂತೆ ನೆಲದ ಮೇಲೆ ಕೂತು ಅವರ ಜೊತೆ ಬೆರೆತು ಪಾಠ ಪ್ರವಚನ ಮಾಡಿದ್ದಾರೆ. ಇದರಿಂದ ಗ್ರಾಮಸ್ಥರು ಅಧಿಕಾರಿಯ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸಿಇಓ ಫೌಸಿಯಾ ತಾರನಮ್, ಜಿಲ್ಲೆಯಲ್ಲಿ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡಲು ನಾನು ಬಯಸಿದ್ದೇನೆ. ಹೀಗಾಗಿ ನಾನು ಪೂರ್ವ ನಿಗದಿ ಮಾಡದೆ ಧಿಡೀರ್ ಭೇಟಿ ಕೊಟ್ಟಿದ್ದೇನೆ. ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆಗಳಿಗೆ ಮುಂದಿನ ದಿನಗಳಲ್ಲಿಯೂ ಭೇಟಿ ನೀಡಿ ಅಭಿವೃದ್ಧಿಗೊಳಿಸಲು ಪ್ರಯತ್ನಿಸುತ್ತೇನೆ ಎಂದರು.

  • ರಾಜಕಾರಣ ಬದಿಗಿಟ್ಟು ಶಾಸಕನಿಂದ ಮಕ್ಕಳಿಗೆ ಪಾಠ

    ರಾಜಕಾರಣ ಬದಿಗಿಟ್ಟು ಶಾಸಕನಿಂದ ಮಕ್ಕಳಿಗೆ ಪಾಠ

    ಬೆಳಗಾವಿ/ಚಿಕ್ಕೋಡಿ: ನಮ್ಮ ರಾಜಕೀಯ ನಾಯಕರು ತಾವು ಮಾಡುವ ರಾಜಕಾರಣಕ್ಕೆ 24*7 ಟೈಂ ಕೊಡುತ್ತಾರೆ. ಆದರೆ ಕುಡುಚಿ ಶಾಸಕ ರಾಜಕಾರಣ ಬದಿಗಿಟ್ಟು ಮಕ್ಕಳಿಗೆ ಪಾಠ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ಬೆಳಗಾವಿ ಜಿಲ್ಲೆಯ ಕುಡಚಿ ಶಾಸಕ ಪಿ. ರಾಜೀವ್ ಮಕ್ಕಳಿಗೆ ಪಾಠ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಿಡಕಲ್ ಗ್ರಾಮದ ಮನ್ನಿಕೇರಿ ತೋಟದ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಿಗೆ ರಾಜೀವ್ ಪಾಠ ಮಾಡಿದ್ದಾರೆ.

    9ನೇ ತರಗತಿಯ ವಿದ್ಯಾರ್ಥಿಗಳಿಗೆ ಜೀವಿಗಳ ಉಗಮ ಹಾಗೂ ನಾಗರೀಕತೆಯ ಬಗ್ಗೆ ಪಾಠ ಮಾಡಿದ್ದಾರೆ. ಈ ಹಿಂದೆಯೂ ಶಾಸಕ ಪಿ. ರಾಜೀವ್ ರಸ್ತೆ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕರ ಜೊತೆ ಕಲ್ಲು ಒಡೆಯುವ ಮೂಲಕ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದ್ದರು. ನೇರವಾಗಿ ಜನರ ಜೊತೆ ಬೆರೆತು ಇಂತಹ ಕೆಲಸಗಳನ್ನು ಮಾಡುವುದರ ಮೂಲಕ ರಾಜೀವ್ ಜನಸ್ನೇಹಿ ಶಾಸಕ ಎಂದು ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

    ಅಲ್ಲದೆ ಶಾಸಕರು ಶಾಲೆಗೆ ತೆರಳಿ ಪಾಠ ಮಾಡಿದ್ದಕ್ಕೆ ಶಿಕ್ಷಣ ಪ್ರೇಮಿಗಳು ಶಾಸಕ ಪಿ. ರಾಜೀವ್ ಅವರನ್ನು ಶ್ಲಾಘಿಸಿದ್ದಾರೆ.

  • ನೀವು ಕಲಿತಿದ್ದನ್ನ ಮಕ್ಕಳಿಗೆ ಕಲಿಸ್ರಪ್ಪಾ-ಪ್ರಾಧ್ಯಾಪಕರಿಗೆ ಜಿಟಿಡಿ ಪಾಠ

    ನೀವು ಕಲಿತಿದ್ದನ್ನ ಮಕ್ಕಳಿಗೆ ಕಲಿಸ್ರಪ್ಪಾ-ಪ್ರಾಧ್ಯಾಪಕರಿಗೆ ಜಿಟಿಡಿ ಪಾಠ

    ಬಳ್ಳಾರಿ: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಓದಿದ್ದು ಬರೀ ಏಳನೇ ತರಗತಿಯಾದರೂ ಇಂದು ಪ್ರಾಧ್ಯಾಪಕರಿಗೆ ಪಾಠ ಮಾಡಿದ್ದಾರೆ.

    ಹಂಪಿ ಕನ್ನಡ ವಿವಿಯ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರದಲ್ಲಿ ಮಾತನಾಡಿದ ಸಚಿವ ಜಿ.ಟಿ ದೇವೇಗೌಡ, “ಲಕ್ಷಗಟ್ಟಲೆ ಸಂಬಳ ತಗೆದುಕೊಳ್ಳುತ್ತೀರಾ. ನೋವು ಕಲಿತಿದ್ದನ್ನು ಮಕ್ಕಳಿಗೆ ಕಲಿಸ್ರಪ್ಪಾ. ಶಿಕ್ಷಕ ವೃತ್ತಿ ಸಂಬಳಕ್ಕಾಗಿ ಮಾಡೋದಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಕೆಲಸವಾಗಬೇಕಿದೆ” ಎಂದರು.

    ಅಲ್ಲದೇ ಹಿಂದೆ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಶಿಕ್ಷಕರು ಮನೆಗೆ ಹೋಗುತ್ತಿದ್ರು. ಆದರೆ ಇದೀಗ ಶಿಕ್ಷಕರನ್ನು ಹುಡುಕುವ ಕೆಲಸವಾಗ್ತಿದೆ, ವಿವಿಗಳ ಪ್ರಾಧ್ಯಾಪಕರಿಗೆ ಟ್ರೈನಿಂಗ್ ಕೊಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಅಂತ ಹೇಳಿದ್ರು.

    ಲಕ್ಷಗಟ್ಟಲೆ ಸಂಬಳ ತೆಗೆದುಕೊಂಡು ಏನು ಮಾಡ್ತಾರೆ ಎಂದು ಇದೇ ವೇಳೆ ಪ್ರಶ್ನಿಸಿದ ಅವರು, ಹಿಂದೆ 300 ರೂ. ತೆಗೆದುಕೊಳ್ಳುತ್ತಿದ್ದ ಶಿಕ್ಷಕರು ವಿದ್ಯಾರ್ಥಿ ಮನೆಗೆ ಬರುತ್ತಿದ್ರು. ಆದರೆ ಇಂದು ಕಲಿಯೋರ ಆಸಕ್ತಿಗಿಂತ ಕಲಿಸೋರ ಆಸಕ್ತಿ ಕಡಿಮೆಯಾಗಿದೆ. ಶಿಕ್ಷಣ ಎಲ್ಲೋ ಹೋಗ್ತಿದೆ. ಶಿಕ್ಷಣ ವ್ಯವಸ್ಥೆ ಬದಲಾವಣೆ ಆಗಬೇಕು ಅಂತೆಲ್ಲ ಹೇಳುತ್ತೀರಿ. ಆದರೆ ಅದನ್ನು ಯಾರು ಬದಲು ಮಾಡಬೇಕು. ಹೊಸ ಕಾಲೇಜು ಕೊಡಿ ಅಂತಾರೆ, ಇರೋ ಎಂಜಿನಿಯರಿಂಗ್ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಕೊಡಲು ಆಗ್ತಿಲ್ಲ. ಶಿಕ್ಷಕರು ಪ್ರಾಧ್ಯಾಪಕರು ಸಂಬಳಕ್ಕಾಗಿ ಕೆಲಸ ಮಾಡಬಾರದು. ಶಿಕ್ಷಕ ವೃತ್ತಿ ಪುಣ್ಯದ ಕೆಲಸವಾಗಿದೆ ಅಂದ್ರು.

    ನಿಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿದ್ರೇ ಆಯ್ತಾ? ಸರ್ಕಾರಿ ಶಾಲೆಗೆ ಬರೋ ಮಕ್ಕಳ ಸ್ಥಿತಿ ಏನಾಗಬೇಕೆಂದು ಸಚಿವರು ಪ್ರಾಧ್ಯಾಪಕರಿಗೆ ಪರೋಕ್ಷವಾಗಿ ಪಾಠ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv