Tag: ಪಾಟೀಲ್ ಪುಟ್ಟಪ್ಪ

  • ಹಾವೇರಿ ಜಿಲ್ಲೆಯ ಹಲಗೇರಿಯಲ್ಲಿ ಪಾಪು ಅಂತ್ಯಕ್ರಿಯೆ

    ಹಾವೇರಿ ಜಿಲ್ಲೆಯ ಹಲಗೇರಿಯಲ್ಲಿ ಪಾಪು ಅಂತ್ಯಕ್ರಿಯೆ

    ಹುಬ್ಬಳ್ಳಿ/ಧಾರವಾಡ: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನಾಡೋಜ ಪಾಟೀಲ ಪುಟ್ಟಪ್ಪ ಅವರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮಾರ್ಚ್ 16 ರಾತ್ರಿ 10 ಗಂಟೆ 10 ನಿಮಿಷಕ್ಕೆ ನಿಧನರಾಗಿದ್ದಾರೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹಲಗೇರಿಯಲ್ಲಿ ಇಂದು ಅಂತ್ಯಕ್ರಿಯೆ ಜರುಗಲಿದೆ.

    ಕಡಿಮೆ ರಕ್ತದೊತ್ತಡ , ರಕ್ತಹೀನತೆ, ಬ್ರೇನ್ ಹೆಮರೈಜ್, ಶ್ವಾಸಕೋಶದ ಸೋಂಕು ಸೇರಿದಂತೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಪಾಟೀಲ ಪುಟ್ಟಪ್ಪ ಅವರಿಗೆ ಕಿಮ್ಸ್ ನಲ್ಲಿ ಒಂದು ತಿಂಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದ ಅವರಿಗೆ ಶ್ವಾಸಕೋಶದ ಸೋಂಕು ತಗುಲಿತ್ತು. ಹಲವು ದಿನ ಚಿಕಿತ್ಸೆಯ ನಂತರ ಪಾಪು ಕೊನೆಯುಸಿರೆಳೆದರು ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ.

    ಹುಬ್ಬಳ್ಳಿ ಮನೆಯಲ್ಲಿ ಇಂದು ಬೆಳಗ್ಗೆ 9 ರಿಂದ 12 ವರಗೆ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗುವುದು. ಮಧ್ಯಾಹ್ನ 12 ಗಂಟೆಯಿಂದ ಅರ್ಧಗಂಟೆ ಕಾಲ ಧಾರವಾಡ ಕರ್ನಾಟಕದ ವಿದ್ಯಾವರ್ಧಕ ಸಂಘದಲ್ಲಿ ಜನರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ನಂತರ ಹಾವೇರಿಯ ರಾಣೇಬೆನ್ನೂರು ತಾಲೂಕಿನ ಸ್ವಗ್ರಾಮ ಹಲಗೇರಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಪಾಟೀಲ ಪುಟ್ಟಪ್ಪ ಅವರ ಪುತ್ರ ಅಶೋಕ್ ಪಾಟೀಲ ಮಾಹಿತಿ ನೀಡಿದ್ದಾರೆ.

    ಜೋಶಿ ಸಂತಾಪ: ಕನ್ನಡಿಗರೆಲ್ಲರಿಗೆ ‘ಪಾಪು’ ಎಂದೇ ಗುರ್ತಿಸಲ್ಪಡುವ ಇವರು ಕನ್ನಡ ಪರ ಹೋರಾಟಗಳು, ಕಾಳಜಿಗಳಿಂದ ಜನಮಾನಸದಲ್ಲಿ ನೆಲೆಯಾದವರು. ಇವರ ಕನ್ನಡದ ಬಗೆಗಿನ ಮಗುವಿನಂತಹಾ ಪ್ರೀತಿ ಕನ್ನಡದ ಕುರಿತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಒಳನೋಟ, ಅಪಾರವಾದ ಪಾಂಡಿತ್ಯ ಎಲ್ಲವೂ ಶ್ರೇಷ್ಠಮಟ್ಟದ್ದೆನ್ನುವುದರಲ್ಲಿ ಅನುಮಾನವಿಲ್ಲ ಎಂದು ಜೋಶಿ ಬಣ್ಣಿಸಿ ಇವರ ನಿಧಾನ ನಿಜಕ್ಕೂ ಶೋಚನೀಯ. ರಾಜ್ಯ ಸಭೆಯ ಸದಸ್ಯ, ಕನ್ನಡ ಕಾವಲು ಮತ್ತು ಗಡಿಸಲಹಾ ಸಮಿತಿ ಸಂಸ್ಥಾಪನ ಅಧ್ಯಕ್ಷ, ಕರ್ನಾಟಕ ಏಕೀಕರಣ, ಗೋಕಾಕ್ ಚಳುವಳಿಗಳ ನೇತೃತ್ವ ವಹಿಸಿದ್ದ ಇವರ ನಿಧನ ನನಗೆ ತುಂಬಾ ನೋವುಂಟುಮಾಡಿದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

  • ಒಂದೇ ವೇದಿಕೆಯಲ್ಲಿ ಗೌರವ ಡಾಕ್ಟರೇಟ್ ಪಡೆದಿದ್ವಿ: ಕಾರ್ನಾಡ್‍ರನ್ನ ನೆನೆದ ಪಾಪು

    ಒಂದೇ ವೇದಿಕೆಯಲ್ಲಿ ಗೌರವ ಡಾಕ್ಟರೇಟ್ ಪಡೆದಿದ್ವಿ: ಕಾರ್ನಾಡ್‍ರನ್ನ ನೆನೆದ ಪಾಪು

    ಹುಬ್ಬಳ್ಳಿ: ಕರ್ನಾಟಕ ವಿಶ್ವ ವಿಶ್ವವಿದ್ಯಾಲಯದಿಂದ ಒಂದೇ ವೇದಿಕೆಯಲ್ಲಿ ನನಗೆ ಹಾಗೂ ಗಿರೀಶ್ ಕಾರ್ನಾಡ್ ಅವರಿಗೆ ಗೌರವ ಡಾಕ್ಟರೇಟ್ ಸಿಕ್ಕಿತ್ತು ಎಂದು ಹಿರಿಯ ನಾಡೋಜ ಪಾಟೀಲ್ ಪುಟ್ಟಪ್ಪ ನೆನೆದಿದ್ದಾರೆ.

    ನಗರದ ನಿವಾಸದಲ್ಲಿ ಮಾತನಾಡಿದ ಅವರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ನಿಧನದಿಂದ ಸಾಹಿತ್ಯ ಲೋಕಕ್ಕೆ ಬಹಳಷ್ಟು ನಷ್ಟವಾಗಿದೆ. ಕಾರ್ನಾಡ್ ಅವರು ನನ್ನಗಿಂತ 22 ವರ್ಷ ಚಿಕ್ಕವರು. ನಾಟಕ ಹಾಗೂ ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡಿದರು ಎಂದು ಸ್ಮರಿಸಿದರು.

    ಗಿರೀಶ್ ಕಾರ್ನಾಡ್ ಅವರ ಧಾರವಾಡದ ನಿವಾಸಕ್ಕೆ ಒಂದು ಐತಿಹಾಸಿಕ ಇತ್ತು. ಆ ಮನೆಗೆ ಮಹಾತ್ಮಾ ಗಾಂಧಿಯವರು ಬಂದು ಹೋಗಿದ್ದರು. ಆದರೂ ಕಾರ್ನಾಡ್ ಆ ಮನೆಯನ್ನು ಮಾರಾಟ ಮಾಡಿದರು. ಆಗಾಗ ವಿದ್ಯಾವರ್ಧಕ ಸಂಘಕ್ಕೆ ಬರುತ್ತಿದ್ದ ಅವರು, ಎಲ್ಲರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿದ್ದರು ಎಂದು ಹೇಳಿದರು.

  • ಈಗಷ್ಟೇ ಅಧಿಕಾರಕ್ಕೆ ಬಂದ ಹೆಚ್‍ಡಿಕೆ ಮೇಲೆ ಆರೋಪ ಮಾಡಿದ್ರೆ ಹೇಗೆ: ಹೆಚ್‍ಡಿಡಿ

    ಈಗಷ್ಟೇ ಅಧಿಕಾರಕ್ಕೆ ಬಂದ ಹೆಚ್‍ಡಿಕೆ ಮೇಲೆ ಆರೋಪ ಮಾಡಿದ್ರೆ ಹೇಗೆ: ಹೆಚ್‍ಡಿಡಿ

    ಧಾರವಾಡ: ರಾಜ್ಯ ಕಂಡ ಎಲ್ಲಾ ಮುಖ್ಯಮಂತ್ರಿಗಳ ಕಾಲದಲ್ಲಿ ಏನು ಆಗಿದೆ ಎನ್ನುವುದು ಚರ್ಚೆಯಾಗಬೇಕು. ಎರಡು ತಿಂಗಳಿಂದ ಹಿಂದಷ್ಟೇ ಅಧಿಕಾರಕ್ಕೆ ಬಂದ ದೇವೇಗೌಡ್ರ ಮಗನ ಮೇಲೆ ಆರೋಪ ಮಾಡಿದರೆ ಹೇಗೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

    ನಗರದ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ನಿವಾಸಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಭೇಟಿ ನೀಡಿ, ಬಳಿಕ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರ ಹೇಳಿಕೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

    ಯಾರ ಯಾರ ಕಾಲದಲ್ಲಿ ಸಮಗ್ರ ಕರ್ನಾಟಕ ಅಭಿವೃದ್ಧಿಯಾಗಿದೆ. ಮೈಸೂರು ಅಭಿವೃದ್ಧಿ ಎಷ್ಟು ಆಗಿದೆ ಎನ್ನುವುದರ ಬಗ್ಗೆ ವಿಧಾನಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಲಹೆ ಕೊಟ್ಟಿದ್ದೇನೆ. ಹೀಗಾಗಿ ಉತ್ತರ ಕರ್ನಾಟಕ ಭಾಗಕ್ಕೆ ಏನು ಕೊಡುಗೆ ನೀಡಿಲ್ಲ ಎನ್ನುವ ಚರ್ಚೆ ಬೇಡ ಎಂದು ಅವರು ಹೇಳಿದರು.

    ಸದನದಲ್ಲಿ ಮೈಸೂರು ಭಾಗಕ್ಕೆ ಯಾರ ಕಾಲದಲ್ಲಿ ಹೆಚ್ಚು ಕೊಡುಗೆ ನೀಡಲಾಗಿದೆ. ರಸ್ತೆ, ಸಕ್ಕರೆ ಕಾರ್ಖಾನೆ ಸೇರಿದಂತೆ ಅನೇಕ ಯೋಜನೆ, ಕೊಡುಗೆ ಹಾಗೂ ನಂಜುಡಪ್ಪ ವರದಿಯನ್ನು ಸುದೀರ್ಘವಾಗಿ ಎರಡ್ಮೂರು ದಿನ ಚರ್ಚೆ ನಡೆಸಬೇಕು. ಆಗ ಮಾತ್ರ ಈ ರೀತಿ ಆರೋಪ ಮಾಡುವುದು ನಿಲ್ಲುತ್ತದೆ. ಈಗಿರುವ ಅಸಮಾಧಾನ ತಿಳಿಯಾಗಲು ಅಂಕಿ ಸಂಖ್ಯೆಗಳ ಮೇಲೆ ಚರ್ಚೆ ನಡೆಸಲಿ ಎಂದು ವಾಗ್ದಾಳಿ ನಡೆಸಿದರು.

    ಇಲ್ಲಿಯವರೆಗೆ 26 ವರ್ಷ ಲಿಂಗಾಯತರು ರಾಜ್ಯವನ್ನು ಆಳಿದ್ದಾರೆ. ರಾಮಕೃಷ್ಣ ಹೆಗಡೆ ಮತ್ತು ದೇವರಾಜ್ ಅರಸು ಕೆಲ ವರ್ಷ ಆಳ್ವಿಕೆ ನಡೆಸಿದ್ದರು. ದೇವೇಗೌಡ್ರ ಮಗ ಈಗಷ್ಟೇ ಸಿಎಂ ಆಗಿದ್ದಾರೆ. ಹೀಗಾಗಿ ಎಲ್ಲ ನಿರ್ಧಾರ ಕೈಗೊಂಡರೆ ಹೇಗೆ ಎಂದು ಪ್ರಶ್ನಿಸಿದರು.