Tag: ಪಾಕಿಸ್ತಾನ ಪ್ರಧಾನ ಮಂತ್ರಿ

  • ನೀವು ಪ್ರಧಾನಿಯಾಗಿಲ್ಲದಿದ್ದಾಗ ಪಾಕಿಸ್ತಾನ ಅದ್ಭುತವಾಗಿತ್ತು: ಇಮ್ರಾನ್‌ಗೆ ಮಾಜಿ ಪತ್ನಿ ತರಾಟೆ

    ನೀವು ಪ್ರಧಾನಿಯಾಗಿಲ್ಲದಿದ್ದಾಗ ಪಾಕಿಸ್ತಾನ ಅದ್ಭುತವಾಗಿತ್ತು: ಇಮ್ರಾನ್‌ಗೆ ಮಾಜಿ ಪತ್ನಿ ತರಾಟೆ

    ಇಸ್ಲಾಮಾಬಾದ್: ನೀವು ಪ್ರಧಾನಿಯಾಗದಿದ್ದಾಗ ಪಾಕಿಸ್ತಾನ ಅದ್ಭುತವಾಗಿತ್ತು ಎಂದು ರೆಹಮ್ ಖಾನ್ ಅವರು ತನ್ನ ಮಾಜಿ ಪತಿ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.‌

    ಇಮ್ರಾನ್ ಖಾನ್ ಸೃಷ್ಟಿಸಿರುವ ಅವ್ಯವಸ್ಥೆಯನ್ನು ಸರಿಪಡಿಸಲು ದೇಶದ ಜನರು ಒಟ್ಟಾಗಿ ನಿಲ್ಲುವತ್ತ ಗಮನ ಹರಿಸಬೇಕು ಎಂದು ಇಮ್ರಾನ್‌ ಖಾನ್‌ ಮಾಜಿ ಪತ್ನಿ ರೆಹಮ್‌ ಖಾನ್‌ ಕರೆ ನೀಡಿದ್ದಾರೆ.

    ಇಮ್ರಾನ್‌ ಇತಿಹಾಸ. ನಯಾ ಪಾಕಿಸ್ತಾನ (ಹೊಸ ಪಾಕಿಸ್ತಾನ) ಬಿಟ್ಟು ಹೋಗಿರುವ ಅವ್ಯವಸ್ಥೆಯನ್ನು ಸರಿಪಡಿಸಲು ನಾವು ಒಟ್ಟಾಗಿ ನಿಲ್ಲುವತ್ತ ಗಮನಹರಿಸಬೇಕೆಂದು ನಾನು ಭಾವಿಸುತ್ತೇನೆ ಎಂದು ರೆಹಮ್‌ ಖಾನ್‌ ಟ್ವೀಟ್‌ ಮಾಡಿದ್ದಾರೆ.

    ಇಮ್ರಾನ್‌ ಖಾನ್‌ ದೇಶವನ್ನುದ್ದೇಶಿಸಿ ಮಾತನಾಡುವಾಗ, ದೇವರ ದಯೆಯಿಂದ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ. ಖ್ಯಾತಿ, ಸಂಪತ್ತು ಏನೂ ಅಗತ್ಯವಿಲ್ಲ ಎಂದಿದ್ದಾರೆ. ಅವರಿಗೆ ಬುದ್ಧಿವಂತಿಕೆ ಮತ್ತು ಸಾಮರ್ಥ್ಯ ಇಲ್ಲ ಎಂಬುದನ್ನು ಇದು ತೋರಿಸುತ್ತದೆ ಎಂದು ರೆಹಮ್‌ ಖಾನ್‌ ಕುಟುಕಿದ್ದಾರೆ.

    ನನ್ನ ಬಾಲ್ಯದಲ್ಲಿ ಪಾಕಿಸ್ತಾನ ಅಗ್ರಸ್ಥಾನಕ್ಕೆ ಹೋಗಿರುವುದನ್ನು ನೋಡಿದ್ದೇನೆ ಎಂಬ ಇಮ್ರಾನ್‌ ಖಾನ್‌ ಅವರ ಹೇಳಿಕೆಯನ್ನು ರೆಹಮ್‌ ಖಾನ್‌ ಸ್ವಾಗತಿಸಿದ್ದಾರೆ. ʼಹೌದು, ನೀವು ಪ್ರಧಾನಿಯಾಗದಿದ್ದಾಗ ಪಾಕಿಸ್ತಾನ ಅದ್ಭುತವಾಗಿತ್ತು ಎಂದು ಖಾನ್‌ ವಿರುದ್ಧ ಟ್ವೀಟ್‌ ಮೂಲಕ ಚಾಟಿ ಬೀಸಿದ್ದಾರೆ.

    ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಹುದ್ದೆಗೆ ಸಂಕಷ್ಟ ಎದುರಾಗಿದೆ. ಇಮ್ರಾನ್‌ ಖಾನ್‌ ವಿರುದ್ಧ ವಿಪಕ್ಷಗಳು ಅವಿಶ್ವಾಸ ನಿರ್ಣಯದ ಅಸ್ತ್ರ ಪ್ರಯೋಗಿಸಿವೆ. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಖಾನ್‌ ಅವರನ್ನು ಒತ್ತಾಯಿಸಲಾಗುತ್ತಿದೆ.

    ರಾಜೀನಾಮೆ ನೀಡಲು ಇಮ್ರಾನ್‌ ಖಾನ್‌ ನಿರಾಕರಿಸಿದ್ದಾರೆ. ನಾನು 20 ವರ್ಷಗಳಿಂದ ಕ್ರಿಕೆಟ್ ಆಡಿದ್ದೇನೆ. ಹೀಗಾಗಿ ರಾಜಕೀಯದಲ್ಲೂ ಸಹ ಕೊನೆಯ ಎಸೆತದವರೆಗೂ ಆಡುತ್ತೇನೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.