Tag: ಪಾಕಿಸ್ತಾನ ಅಧ್ಯಕ್ಷ ಅಲ್ವಿ

  • ಬಾಯಿಗೆ ಬಂದಂತೆ ಪೋಸ್ಟ್ ಹಾಕಬೇಡಿ – ಪಾಕಿಸ್ತಾನ ಅಧ್ಯಕ್ಷರಿಗೆ ಟ್ವಿಟ್ಟರ್ ನೋಟಿಸ್

    ಬಾಯಿಗೆ ಬಂದಂತೆ ಪೋಸ್ಟ್ ಹಾಕಬೇಡಿ – ಪಾಕಿಸ್ತಾನ ಅಧ್ಯಕ್ಷರಿಗೆ ಟ್ವಿಟ್ಟರ್ ನೋಟಿಸ್

    ಇಸ್ಲಾಮಾಬಾದ್: ಬಾಯಿಗೆ ಬಂದಂತೆ ಪೋಸ್ಟ್ ಹಾಕಬೇಡಿ, ಯೋಚಿಸಿ ಪೋಸ್ಟ್ ಹಾಕಿ ಎಂದು ಜಮ್ಮು ಕಾಶ್ಮೀರದ ಕುರಿತು ಪೋಸ್ಟ್ ಮಾಡಿದ್ದ ಪಾಕಿಸ್ತಾನದ ಅಧ್ಯಕ್ಷ ಆರೀಫ್ ಆಲ್ವಿ ಅವರಿಗೆ ಟ್ವಿಟ್ಟರ್ ಕಂಪನಿ ನೋಟಿಸ್ ನೀಡಿದೆ.

    ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವೆ ಶಿರೀನ್ ಮಜಾರಿ, ಪಾಕಿಸ್ತಾನದ ಅಧ್ಯಕ್ಷ ಅಲ್ವಿ ಅವರಿಗೆ ಬಂದ ನೋಟಿಸಿನ ಈಮೇಲ್ ಸ್ಕ್ರೀನ್ ಶಾಟ್‍ನ್ನು ಪೋಸ್ಟ್ ಮಾಡಿದ್ದು, ಇದಕ್ಕೆ ಖಂಡನೆ ವ್ಯಕ್ತಪಡಿಸಿ, ಟ್ವಿಟ್ಟರ್ ಮೋದಿ ಸರ್ಕಾರದ ಮುಖವಾಣಿಯಾಗಲು ಹೊರಟಿದ್ದು, ನಮ್ಮ ಅಧ್ಯಕ್ಷರಿಗೆ ನೋಟಿಸ್ ಕಳುಹಿಸಿದೆ. ಇದು ಕೆಟ್ಟ ಅಭಿರುಚಿಯಾಗಿದೆ, ಅಲ್ಲದೆ, ಹಾಸ್ಯಾಸ್ಪದವಾಗಿದೆ ಎಂದು ಟ್ವಿಟ್ಟರ್ ನ ನೀಡಿದ ನೋಟಿಸ್ ಕುರಿತು ಟೀಕಿಸಿದ್ದಾರೆ.

    ಸೋಮವಾರ ಪಾಕಿಸ್ತಾನದ ಅಧ್ಯಕ್ಷ ಅಲ್ವಿ ಕಾಶ್ಮೀರದ ವಿಚಾರದ ಕುರಿತು ನಡೆಸಿದ ಪ್ರತಿಭಟನಾ ರ್ಯಾಲಿಯ ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ನೋಟಿಸ್ ಜಾರಿ ಮಾಡಿದೆ.

    ಭಾನುವಾರ ಪಾಕಿಸ್ತಾನದ ಸಂವಹನ ಸಚಿವ ಮುರಾದ್ ಸಯೀದ್ ಸಹ, ಟ್ವಿಟ್ಟರ್‍ನ ನಿಮ್ಮ ಒಂದು ಪೋಸ್ಟ್ ಭಾರತದ ಕಾನೂನನ್ನು ಉಲ್ಲಂಘಿಸಿದೆ ಎಂದು ಮೈಕ್ರೋ ಬ್ಲಾಗಿಂಗ್‍ನಿಂದ ನನಗೂ ನೋಟಿಸ್ ಬಂದಿದೆ ಎಂದು ತಿಳಿಸಿದ್ದಾರೆ. ಈ ನೋಟೀಸ್‍ನಲ್ಲಿ ಪಾರದರ್ಶಕತೆಯ ದೃಷ್ಟಿಯಿಂದ ನಿಮಗೆ ನಾವು ಸೂಚಿಸಲು ಬಯಸುತ್ತೇವೆ. ನಿಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಷಯವು ಭಾರತದ ಕಾನೂನಿಗೆ ಉಲ್ಲಂಘಿಸಿರುವ ಕುರಿತು ಭಾರತ ಟ್ವಿಟ್ಟರ್‍ಗೆ ತಿಳಿಸಿದೆ. ಇದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇವೆ ಎಂದು ಟ್ವಿಟ್ಟರ್ ಸಚಿವರಿಗೆ ಕಳುಹಿಸಿದ ನೋಟಿಸ್‍ನಲ್ಲಿ ಉಲ್ಲೇಖಿಸಲಾಗಿದೆ.

    ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಅಮಾನುತುಗೊಳಿಸಿವೆ ಎಂದು ಕಳೆದ ವಾರ ಡೈರೆಕ್ಟರ್ ಜನರಲ್(ಡಿಜಿ) ಇಂಟರ್ ಸರ್ವಿಸ್ ಪಬ್ಲಿಕ್ ರಿಲೇಶನ್ಸ್(ಐಎಸ್‍ಪಿಆರ್) ಮೇಜರ್ ಜನರಲ್ ಆಸಿಫ್ ಗಫೂರ್ ತಿಳಿಸಿದ್ದರು. ಕಾಶ್ಮೀರವನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದಕ್ಕಾಗಿ ಪಾಕಿಸ್ತಾನದ ಖಾತೆಗಳನ್ನು ಅಮಾನತುಗೊಳಿಸಿರುವುದರ ವಿರುದ್ಧ ಪಾಕಿಸ್ತಾನದ ಅಧಿಕಾರಿಗಳು ಟ್ವಿಟ್ಟರ್ ಹಾಗೂ ಫೇಸ್‍ಬುಕ್ ವಿರುದ್ಧ ಕಿಡಿ ಕಾರಿದ್ದಾರೆ. ಪ್ರಾದೇಶಿಕ ಪ್ರಧಾನ ಕಚೇರಿಯಲ್ಲಿರುವ ಭಾರತೀಯ ಸಿಬ್ಬಂದಿಯೇ ಇದಕ್ಕೆ ಕಾರಣ ಎಂದು ಟ್ವೀಟ್ ಮಾಡಿ ಗಫೂರ್ ಆರೋಪಿಸಿದ್ದಾರೆ.

    ಕೇಂದ್ರ ಸರ್ಕಾರ ಆಗಸ್ಟ್ 5ರಂದು ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ, ಎರಡು ಕೇಂದ್ರಾಡಳಿತವನ್ನಾಗಿ ಘೋಷಿಸಿದೆ. ಇದಕ್ಕೆ ಪಾಕಿಸ್ತಾನದಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ ಬಲವಾದ ಪ್ರತಿಕ್ರಿಯೆ ನೀಡುತ್ತಿದೆ. ಜಮ್ಮು ಕಾಶ್ಮೀರದ ವಿಚಾರವು ಆಂತರಿಕ ಸಮಸ್ಯೆಯಾಗಿದೆ ಎಂದು ಭಾರತ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪಷ್ಟವಾಗಿ ತಿಳಿಸಿದೆ.