Tag: ಪಹಲ್ಗಾಮ್ ದಾಳಿ

  • ರಕ್ತ ಹರಿಯುವ ಕಡೆ ಮಾತುಕತೆ ಪ್ರಸ್ತಾಪವೇ ಬರಲ್ಲ – ಆಪರೇಷನ್ ಸಿಂಧೂರ ಚರ್ಚೆಯಲ್ಲಿ ರಾಜನಾಥ್‌ ಸಿಂಗ್‌ ಘರ್ಜನೆ

    ರಕ್ತ ಹರಿಯುವ ಕಡೆ ಮಾತುಕತೆ ಪ್ರಸ್ತಾಪವೇ ಬರಲ್ಲ – ಆಪರೇಷನ್ ಸಿಂಧೂರ ಚರ್ಚೆಯಲ್ಲಿ ರಾಜನಾಥ್‌ ಸಿಂಗ್‌ ಘರ್ಜನೆ

    – ನಮ್ಮ ಕ್ಷಿಪಣಿಗಳಿಂದ ಹೊಮ್ಮಿದ್ದು ಪ್ರತೀಕಾರದ ಪ್ರವಾಹ

    ನವದೆಹಲಿ: ಲೋಕಸಭೆಯ (Lok Sabha) ಮಾನ್ಸೂನ್‌ ಅಧಿವೇಶನ ಆರಂಭವಾದ ದಿನದಿಂದ ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಕುರಿತು ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿದ್ದವು. ಅದರಂತೆ ಇಂದು (ಜುಲೈ 28 ಸೋಮವಾರ) ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath Singh) ಅವರು, ಲೋಕಸಭೆಯಲ್ಲಿ ಈ ಚರ್ಚೆಗೆ ನಾಂದಿ ಹಾಡಿದರು.

    ನಮ್ಮದು ಪ್ರತೀಕಾರದ ದಾಳಿಯಾಗಿತ್ತು
    ಲೋಕಸಭೆಯಲ್ಲಿ ಆಪರೇಷನ್‌ ಸಿಂಧೂರ (Operation Sindoor) ಕುರಿತು ಭಾಷಣ ಮಾಡಿದ ರಾಜನಾಥ್‌ ಸಿಂಗ್‌, ಈ ಸೇನಾ ಕಾರ್ಯಾಚರಣೆ ಭಾರತದ ಸೇನಾ ಸಾಮರ್ಥ್ಯಕ್ಕೆ ಉದಾಹರಣೆ ಮಾತ್ರವಲ್ಲದೇ, ಭಯೋತ್ಪಾದನೆ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆಯ ಪ್ರತೀಕ ಎಂದು ಬಣ್ಣಿಸಿದರು. ಪಾಕಿಸ್ತಾನದ ದಾಳಿ ವೇಳೆ ಭಾರತದ್ದು ಆತ್ಮರಕ್ಷಣೆಯ ಪ್ರತಿದಾಳಿಯಾಗಿತ್ತು. ಭಾರತ ಯಾರನ್ನೂ ಉದ್ದೇಶ ಪೂರ್ವಕವಾಗಿ ಟಾರ್ಗೆಟ್‌ ಮಾಡಿಲ್ಲ. ಆದ್ರೆ ಪಾಕಿಸ್ತಾನ (Pakistan) ನಮ್ಮ ವಿಮಾನ ನಿಲ್ದಾಣ, ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಈ ಎಲ್ಲ ದಾಳಿಗಳನ್ನು ನಮ್ಮ ಸೇನೆ ವಿಫಲಗೊಳಿಸಿದೆ. ಒಂದೇ ಒಂದು ನಿಗದಿತ ಸ್ಥಳದಲ್ಲಿ ಪಾಕಿಸ್ತಾನಕ್ಕೆ ದಾಳಿ ಮಾಡಲು ಸಾಧ್ಯವಾಗಿಲ್ಲ ಎಂದು ಸಂಸತ್‌ಗೆ ತಿಳಿಸಿದರು.

    ಪಾಕಿಸ್ತಾನದ ದಾಳಿಗೆ ʻಆಪರೇಷನ್ ಸಿಂಧೂರʼ ಹೆಸರಿನಲ್ಲಿ ಭಾರತ ಪ್ರತಿ ದಾಳಿ ನಡೆಸಿತು. ಪಾಕಿಸ್ತಾನದ ವಿಮಾನ ನಿಲ್ದಾಣ, ಸೇನಾ ನೆಲೆ, ಏರ್‌ ಡಿಫೆನ್ಸ್ ಸಿಸ್ಟಮ್ (ರಕ್ಷಣಾ ವ್ಯವಸ್ಥೆ) ಗಳನ್ನ ಟಾರ್ಗೆಟ್‌ ಮಾಡಿ ಧ್ವಂಸಗೊಳಿಸಿತು. ಮೂರು ಸೇನಾಪಡೆಗಳನ್ನ ಬಳಸಿಕೊಂಡು ಪಾಕಿಸ್ತಾನದ ಪ್ರತಿಯೊಂದು ದಾಳಿಗೂ ತಕ್ಕ ಉತ್ತರ ನೀಡಲಾಯಿತು ಎಂದು ವಿವರಿಸುತ್ತಿದ್ದರು. ಈ ವೇಳೆ ವಿಕ್ಷಗಳಿಂದ ಗದ್ದಲ ಶುರುವಾಯಿತು, ಭಾಷಣಕ್ಕೆ ಅಡ್ಡಿಪಡಿಸುವ ಪ್ರಯತ್ನವೂ ನಡೆಯಿತು. ಆದಾಗ್ಯೂ ರಾಜನಾಥ್‌ ಸಿಂಗ್‌ ಮಾತು ಮುಂದುವರಿಸಿದ್ರು.

    ಪಾಕ್‌ ಕೆಣಕಿದ್ರೆ ಸುಮ್ಮನಿರಲ್ಲ
    ಗಡಿ ದಾಟುವುದು, ಅಲ್ಲಿನ ಪ್ರದೇಶವನ್ನ ವಶಕ್ಕೆ ಪಡೆಯುವುದು ನಮ್ಮ ಉದ್ದೇಶವಾಗಿರಲಿಲ್ಲ. ಪಹಲ್ಗಾಮ್‌ ದಾಳಿಗೆ ಪ್ರತಿಕಾರ, ಭಯೋತ್ಪಾದಕ ನೆಲೆಗಳನ್ನ ಧ್ವಂಸ ಮಾಡುವುದು, ಫ್ರಾಕ್ಸಿ ವಾರ್ ಮಾಡುತ್ತಿರುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವುದು ನಮ್ಮ ಉದ್ದೇಶವಾಗಿತ್ತು. ಇದರಲ್ಲಿ ಪಾಕಿಸ್ತಾನ ಸೋಲು ಒಪ್ಪಿಕೊಂಡಿತು. ದಾಳಿಯನ್ನ ನಿಲ್ಲಿಸುವಂತೆ ಮನವಿ ಮಾಡಿಕೊಂಡಿತು. ಪಾಕಿಸ್ತಾನದ ಡಿಜಿಎಂಓ ಮನವಿ ಬಳಿಕವೇ ಕದನ ವಿರಾಮ ಮಾಡಿಕೊಳ್ಳಲಾಯಿತು. ಆದ್ರೆ ಆಪರೇಷನ್‌ ಸಿಂಧೂರ ಇನ್ನೂ ಮುಗಿದಿಲ್ಲ. ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಪಾಕ್‌ ಪ್ರಚೋದನೆ ನೀಡಿದ್ರೆ ಮತ್ತೆ ಆಪರೇಷನ್‌ ಶುರುವಾಗಲಿದೆ. ಆಪರೇಷನ್‌ ಸಿಂಧೂರದಿಂದ ನಮ್ಮ ಸೈನಿಕರ ಮನೋಬಲ ಹೆಚ್ಚಾಗಿದೆ ಎಂದು ಇಂಚಿಂಚೂ ಮಾಹಿತಿ ನೀಡಿದರು.

    ಪಹಲ್ಗಾಮ್‌ ದಾಳಿ ವಿವರಿಸಿದ ಸಚಿವ
    ಇದರೊಂದಿಗೆ ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ಗುಂಪೊಂದು ಅಮಾಯಕ ಪ್ರವಾಸಿಗರ ಮೇಲೆ ಭೀಕರ ದಾಳಿ ನಡೆಸಿತು. ಈ ದಾಳಿಯಲ್ಲಿ ಓರ್ವ ವಿದೇಶಿ ಪ್ರಜೆಯೂ ಸೇರಿದಂತೆ ಒಟ್ಟು 26 ಭಾರತೀಯ ನಾಗರಿಕರು ಸಾವನ್ನಪ್ಪಿದ್ದರು. ಭಯೋತ್ಪಾದಕರು ಪ್ರವಾಸಿಗರ ಧರ್ಮ ಕೇಳಿ ಅವರ ಮೇಲೆ ಗುಂಡು ಹಾರಿಸಿದ್ದರು. ಈ ಘಟನೆ ದೇಶಾದ್ಯಂತ ಆಕ್ರೋಶದ ಅಲೆಯನ್ನೇ ಸೃಷ್ಟಿಸಿತ್ತು. ಈ ದಾಳಿಯನ್ನು ಲಷ್ಕರ್-ಎ-ತೋಯ್ಬಾ ಸಂಘಟನೆಯ ಅಂಗಸಂಸ್ಥೆ ದಿ ರೆಸಿಸ್ಟನ್ಸ್‌ ಫ್ರಂಟ್‌ (ಟಿಆರ್‌ಎಫ್‌) ನಡೆಸಿತ್ತು ಎಂದು ರಾಜನಾಥ್‌ ಸಿಂಗ್‌, ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಆರಂಭಿಸಲು ಕಾರಣವಾದ ಘಟನೆಗಳನ್ನು ವಿವರಿಸಿದರು.

  • Operation Mahadev | ಪಹಲ್ಗಾಮ್‌ ನರಮೇಧಕ್ಕೆ ಕಾರಣವಾಗಿದ್ದ ಪ್ರಮುಖ ಉಗ್ರ ಯೋಧರ ಗುಂಡಿಗೆ ಬಲಿ

    Operation Mahadev | ಪಹಲ್ಗಾಮ್‌ ನರಮೇಧಕ್ಕೆ ಕಾರಣವಾಗಿದ್ದ ಪ್ರಮುಖ ಉಗ್ರ ಯೋಧರ ಗುಂಡಿಗೆ ಬಲಿ

    – ಪಾಕಿಸ್ತಾನದ ಪ್ಯಾರಾ ಕಮಾಂಡೊ ಆಗಿದ್ದ ಹಾಶಿಮ್‌ ಮೂಸ

    ಶ್ರೀನಗರ: ʻಆಪರೇಷನ್‌ ಮಹಾದೇವ್‌ʼ (Operation MAHADEV) ಹೆಸರಿನಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಶ್ರೀನಗರದ ಲಿಡ್ವಾಸ್‌ ಪ್ರದೇಶದಲ್ಲಿ ಮೂವರು ವಿದೇಶಿ ಉಗ್ರರನ್ನ ಹತ್ಯೆಗೈದಿವೆ. ಹತ್ಯೆಗೈದ ಮೂವರಲ್ಲಿ ಓರ್ವ ಉಗ್ರ ಪಹಲ್ಗಾಮ್‌ ದಾಳಿಯಲ್ಲಿ ಭಾಗಿಯಾಗಿದ್ದ ಮುಖ್ಯ ಹಂತಕ ಅನ್ನೋದು ಖಚಿತವಾಗಿದೆ.

    ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ ನರಮೇಧ ನಡೆಸಿದ ಪ್ರಮುಖ ಉಗ್ರ ಹಾಶಿಮ್‌ ಮೂಸಾ ಅಲಿಯಾಸ್‌ ಸುಲೇಮಾನ್‌ ಮೂಸಾನನ್ನ ಹೊಡೆದುರುಳಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಮೂಲಗಳು ಮಾಹಿತಿ ಹಂಚಿಕೊಂಡಿವೆ.

    ಹಾಶಿಮ್‌ ಮೂಸಾ ಯಾರು?
    ಹಾಶಿಮ್‌ ಮೂಸಾ ಪಾಕಿಸ್ತಾನ ಸೇನೆಯ ಹಿನ್ನೆಲೆ ಹೊಂದಿದ್ದಾನೆ. ಪಹಲ್ಗಾಮ್ ದಾಳಿಯಲ್ಲಿ ISI ಪಾತ್ರದ ಇರುವುದಕ್ಕೆ ಇದು ಪ್ರಬಲ ಸಾಕ್ಷಿಯಾಗಿದೆ. ಪಾಕಿಸ್ತಾನದ ಪ್ಯಾರಾ ಕಮಾಂಡೊ (Pakistani Para Commando) ಆಗಿದ್ದ ಮೂಸಾ ವಿಶೇಷ ತರಬೇತಿ ಪಡೆದಿದ್ದ. ಲಷ್ಕರ್-ಎ-ತೈಬಾದಲ್ಲೂ ಪ್ರಮುಖನಾಗಿ ಗುರುತಿಸಿಕೊಂಡಿದ್ದ, ಅದಕ್ಕಾಗಿಯೇ ಸ್ಥಳೀಯರಲ್ಲದವರನ್ನ ಕೊಲ್ಲಲು, ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಮೂಸಾನನ್ನ ಭಾರತಕ್ಕೆ ಕಳುಹಿಸಲಾಗಿತ್ತು. ಹಾಶೀಮ್ ಮೂಸಾ LeT ಸಂಘಟನೆಗೆ ಸೇರಿದವನಾಗಿದ್ದು, SSG ಕಮಾಂಡೋ ಯುದ್ಧದಲ್ಲಿ ಪರಿಣತಿ ಹೊಂದಿದ್ದ ಎಂದು ತಿಳಿದುಬಂದಿದೆ.

    Pahalgam 7

    ಮೂವರು ವಿದೇಶಿ ಉಗ್ರರ ಹತ್ಯೆ
    ಸೇನೆಯ ಹಿರಿಯ ಅಧಿಕಾರಿಗಳ ಪ್ರಕಾರ, ಆಪರೇಷನ್‌ ಮಹಾದೇವ್‌ ಕಾರ್ಯಾಚರಣೆಯಲ್ಲಿ ಹಾಶಿಮ್‌ ಮೂಸಾ ಸೇರಿ ಮೂವರು ಉಗ್ರರನ್ನ ಹತ್ಯೆಗೈಯಲಾಗಿದೆ. ಸೇನೆಯ ಚಿನಾರ್ ಕಾರ್ಪ್ಸ್ ನೇತೃತ್ವದಲ್ಲಿ ಮತ್ತು ಜಮ್ಮು ಮತ್ತು ಕಾಶ್ಮೀರ (Jammu And Kashmir) ಪೊಲೀಸರೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನ ಹತ್ಯೆಗೈಯಲಾಗಿದೆ. ಲಿಡ್ವಾಸ್‌ನ ದಚಿಗಮ್ ಶ್ರೀನಗರದ ಹೊರವಲಯದಲ್ಲಿರುವ ದಟ್ಟ ಅರಣ್ಯ ಪ್ರದೇಶವಾಗಿದೆ. ಇಲ್ಲಿನ ಬೆಟ್ಟದ ದುರ್ಗಮ ಹಾದಿಯು ಟ್ರಾಲ್‌ಗೆ ಸಂಪರ್ಕ ಕಲ್ಪಿಸುತ್ತದೆ. ಈ ಪ್ರದೇಶದಲ್ಲಿ‌ ಹಿಂದೆಯೂ ಟಿಆರ್‌ಎಫ್‌‌ ಉಗ್ರ ಸಂಘಟನೆಯ ಚಟುವಟಿಕೆಗಳು ನಡೆಯುತ್ತಿತ್ತು ಎಂದು ವರದಿಗಳು ತಿಳಿಸಿವೆ.

    ಮೂವರು ಉಗ್ರರನ್ನು ಹತ್ಯೆಗೈದ ಬಳಿಕ ದಚಿಗಮ್ ಅರಣ್ಯ ಪ್ರದೇಶದಲ್ಲಿ ಸಿಆರ್‌ಪಿಎಫ್, ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆ ಮುಂದುವರಿದಿದೆ. ಕಳೆದ ಜನವರಿ ತಿಂಗಳಲ್ಲಿ ಈ ಪ್ರದೇಶದಲ್ಲಿ ಟಿಆರ್‌ಎಫ್ ಉಗ್ರರ ಅಡಗು ತಾಣವನ್ನಸೇನೆ ಧ್ವಂಸಗೊಳಿಸಿತ್ತು. ಆದ್ರೆ 2 ದಿನಗಳ ಹಿಂದೆ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದಿದೆ. ಅಲ್ಲದೇ ಇನ್ನಷ್ಟು ಉಗ್ರರು ಈ ಪ್ರದೇಶದಲ್ಲಿರುವ ಶಂಕೆ ವ್ಯಕ್ತವಾಗಿದೆ.

    ದಚಿಗಮ್ ಅರಣ್ಯವನ್ನ ಈಗಾಗಲೇ ಟಿಆರ್‌ಎಫ್‌ನ ಮುಖ್ಯ ಅಡಗುತಾಣವೆಂದು ಪರಿಗಣಿಸಲಾಗಿದೆ. ಇದೇ ಗುಂಪು ಇತ್ತೀಚೆಗೆ ಎಲ್‌ಒಸಿ ಬಳಿ ನಡೆದಿದ್ದ ನೆಲಬಾಂಬ್ ಸ್ಫೋಟದ ಹೊಣೆ ಹೊತ್ತುಕೊಂಡಿತ್ತು, ಇದರಲ್ಲಿ ಓರ್ವ ಸೈನಿಕ ಹುತಾತ್ಮರಾಗಿ ಮೂವರು ಗಾಯಗೊಂಡಿದ್ದರು. ಇನ್ನೂ ಕಾರ್ಯಾಚರಣೆ ಹಿನ್ನೆಲೆ ಸಾರ್ವಜನಿಕರು ಮನೆಯಿಂದ ಆಚೆ ಬರದಂತೆ ಭದ್ರತಾ ಪಡೆದಗಳು ಎಚ್ಚರಿಕೆ ನೀಡಿವೆ.

  • Operation MAHADEV | ಪಹಲ್ಗಾಮ್‌ ದಾಳಿಯ ಮೂವರು ಶಂಕಿತ ಉಗ್ರರನ್ನು ಹತ್ಯೆಗೈದ ಸೇನೆ

    Operation MAHADEV | ಪಹಲ್ಗಾಮ್‌ ದಾಳಿಯ ಮೂವರು ಶಂಕಿತ ಉಗ್ರರನ್ನು ಹತ್ಯೆಗೈದ ಸೇನೆ

    – ಶ್ರೀನಗರ ಬಳಿಯ ಲಿಡ್ವಾಸ್‌ನಲ್ಲಿ ಎನ್‌ಕೌಂಟರ್

    ಶ್ರೀನಗರ: ʻಆಪರೇಷನ್‌ ಮಹಾದೇವ್‌ʼ (Operation MAHADEV) ಅಡಿಯಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯೊಂದರಲ್ಲಿ ಭದ್ರತಾ ಪಡೆಗಳು ಶ್ರೀನಗರದ ಲಿಡ್ವಾಸ್‌ ಪ್ರದೇಶದಲ್ಲಿ ಮೂವರು ವಿದೇಶಿ ಉಗ್ರರನ್ನ ಹತ್ಯೆಗೈದಿವೆ.

    ಸೇನೆಯ ಹಿರಿಯ ಅಧಿಕಾರಿಗಳ ಪ್ರಕಾರ, ಈ ಮೂವರು ಏಪ್ರಿಲ್‌ 22ರ ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ (Pahalgam Terrorist Attack) ಭಾಗಿಯಾಗಿದ್ದರೆಂದು ಶಂಕಿಸಲಾಗಿದೆ. ಅಲ್ಲದೇ ಲಷ್ಕರ್‌ ಮುಖವಾಣಿ ಟಿಆರ್‌ಎಫ್‌ (The Resistance Front) ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪಾಕಿಸ್ತಾನದಿಂದಲೇ ಬಂದರೆಂದು ಏಕೆ ಅನ್ಕೋತೀರಿ, ಉಗ್ರರು ದೇಶದೊಳಗೇ ಬೆಳೆದಿರಬಹುದು – ʻಕೈʼ ನಾಯಕ ಚಿದಂಬರಂ ಹೇಳಿಕೆ ವಿವಾದ

    ಸೇನೆಯ ಚಿನಾರ್ ಕಾರ್ಪ್ಸ್ ಕಂಪನಿ ಮತ್ತು ಜಮ್ಮು ಮತ್ತು ಕಾಶ್ಮೀರ (Jammu And Kashmir) ಪೊಲೀಸರು ನಡೆಸಿದ ಯಶಸ್ವಿ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನ ಹತ್ಯೆಗೈಯಲಾಗಿದೆ. ಲಿಡ್ವಾಸ್‌ನ ದಚಿಗಮ್ ಶ್ರೀನಗರದ ಹೊರವಲಯದಲ್ಲಿರುವ ದಟ್ಟ ಅರಣ್ಯ ಪ್ರದೇಶವಾಗಿದೆ. ಇಲ್ಲಿನ ಬೆಟ್ಟದ ದುರ್ಗಮ ಹಾದಿಯು ಟ್ರಾಲ್‌ಗೆ ಸಂಪರ್ಕ ಕಲ್ಪಿಸುತ್ತದೆ. ಈ ಪ್ರದೇಶದಲ್ಲಿ‌ ಹಿಂದೆಯೂ ಟಿಆರ್‌ಎಫ್‌‌ ಉಗ್ರ ಸಂಘಟನೆಯ ಚಟುವಟಿಕೆಗಳು ನಡೆಯುತ್ತಿತ್ತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: UP | ಅವಸಾನೇಶ್ವರ ಮಹಾದೇವ ದೇವಾಲಯದಲ್ಲಿ ಕಾಲ್ತುಳಿತ – ಇಬ್ಬರು ಭಕ್ತರು ಸಾವು, 29 ಮಂದಿಗೆ ಗಾಯ

    ಪೊಲೀಸರ ಜಂಟಿ ಕಾರ್ಯಾಚರಣೆ ಮುಂದುವರಿದಿದೆ. ಕಳೆದ ಜನವರಿ ತಿಂಗಳಲ್ಲಿ ಈ ಪ್ರದೇಶದಲ್ಲಿ ಟಿಆರ್‌ಎಫ್ ಉಗ್ರರ ಅಡಗು ತಾಣವನ್ನಸೇನೆ ಧ್ವಂಸಗೊಳಿಸಿತ್ತು. ಆದ್ರೆ 2 ದಿನಗಳ ಹಿಂದೆ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದಿದೆ. ಅಲ್ಲದೇ ಇನ್ನಷ್ಟು ಉಗ್ರರು ಈ ಪ್ರದೇಶದಲ್ಲಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಪೊಲೀಸಪ್ಪನ ಪತ್ನಿಗೆ ಅತ್ತೆ, ಮಾವನಿಂದ ಕಿರುಕುಳ – ವಿಡಿಯೋ ಹರಿಬಿಟ್ಟು ಮಹಿಳೆ ಆತ್ಮಹತ್ಯೆ

    ದಚಿಗಮ್ ಅರಣ್ಯವನ್ನ ಈಗಾಗಲೇ ಟಿಆರ್‌ಎಫ್‌ನ ಮುಖ್ಯ ಅಡಗುತಾಣವೆಂದು ಪರಿಗಣಿಸಲಾಗಿದೆ. ಇದೇ ಗುಂಪು ಇತ್ತೀಚೆಗೆ ಎಲ್‌ಒಸಿ ಬಳಿ ನಡೆದಿದ್ದ ನೆಲಬಾಂಬ್ ಸ್ಫೋಟದ ಹೊಣೆ ಹೊತ್ತುಕೊಂಡಿತ್ತು, ಇದರಲ್ಲಿ ಓರ್ವ ಸೈನಿಕ ಹುತಾತ್ಮರಾಗಿ ಮೂವರು ಗಾಯಗೊಂಡಿದ್ದರು. ಇನ್ನೂ ಕಾರ್ಯಾಚರಣೆ ಹಿನ್ನೆಲೆ ಸಾರ್ವಜನಿಕರು ಮನೆಯಿಂದ ಆಚೆ ಬರದಂತೆ ಭದ್ರತಾ ಪಡೆದಗಳು ಎಚ್ಚರಿಕೆ ನೀಡಿವೆ.

  • ಪಾಕಿಸ್ತಾನದಿಂದಲೇ ಬಂದರೆಂದು ಏಕೆ ಅನ್ಕೋತೀರಿ, ಉಗ್ರರು ದೇಶದೊಳಗೇ ಬೆಳೆದಿರಬಹುದು – ʻಕೈʼ ನಾಯಕ ಚಿದಂಬರಂ ಹೇಳಿಕೆ ವಿವಾದ

    ಪಾಕಿಸ್ತಾನದಿಂದಲೇ ಬಂದರೆಂದು ಏಕೆ ಅನ್ಕೋತೀರಿ, ಉಗ್ರರು ದೇಶದೊಳಗೇ ಬೆಳೆದಿರಬಹುದು – ʻಕೈʼ ನಾಯಕ ಚಿದಂಬರಂ ಹೇಳಿಕೆ ವಿವಾದ

    – ಪಾಕ್‌ಗೆ ಕ್ಲೀನ್‌ ಚಿಟ್‌ ಕೊಟ್ರಾ ಕಾಂಗ್ರೆಸ್‌ ನಾಯಕ?; ಬಿಜೆಪಿ ತೀವ್ರ ಆಕ್ಷೇಪ

    ನವದೆಹಲಿ: ಇಂದಿನಿಂದ ಲೋಕಭೆಯಲ್ಲಿ ಪಹಲ್ಗಾಮ್‌ ದಾಳಿ (Pahalgam Terrorist Attack) ಹಾಗೂ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಕುರಿತು 16 ಗಂಟೆಗಳ ಮ್ಯಾರಥಾನ್‌ ಚರ್ಚೆ ನಡೆಯದೆ. ಆದ್ರೆ ಚರ್ಚೆ ಶುರುವಾಗುವುದಕ್ಕೂ ಮುನ್ನವೇ ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಅವರ ಹೇಳಿಕೆ ಕೋಲಾಹಲ ಎಬ್ಬಿಸಿದೆ. ಚಿದಂಬರಂ (Chidambaram) ಪಾಕಿಸ್ತಾನಕ್ಕೆ ಕ್ಲೀನ್‌ ಚಿಟ್‌ ಕೊಟ್ರಾ ಅನ್ನೋ ಪ್ರಶ್ನೆಯೂ ಎದಿದ್ದು, ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಎನ್‌ಡಿಎ ನಾಯಕರು ತೀವ್ರ ವಾಗ್ದಾಳಿ ನಡೆದಿದ್ದಾರೆ.

    ಚಿದರಂಬರಂ ಹೇಳಿದ್ದೇನು?
    ಪಹಲ್ಗಾಮ್ ದಾಳಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ (Congress) ಹಿರಿಯ ನಾಯಕ, ಕಳೆದ ಕೆಲವು ವಾರಗಳಲ್ಲಿ ಎನ್‌ಐಎ ತನಿಖೆ ಮಾಡಿದೆ ಎಂಬುದನ್ನ ಹೇಳಲು ಸರ್ಕಾರ ಸಿದ್ಧವಿಲ್ಲ. ಅವರು ಭಯೋತ್ಪಾದಕರನ್ನ ಗುರುತಿಸಿದ್ದಾರೆಯೇ? ಅವರು ಎಲ್ಲಿಂದ ಬಂದ್ರು ಅಂತ ಯಾರಿಗೆ ಗೊತ್ತು? ಅವರು ದೇಶದೊಳಗೇ ತರಬೇತಿ ಪಡೆದ, ಮನೆಯಲ್ಲಿ ಬೆಳೆದ ಭಯೋತ್ಪಾದಕರಾಗಿರಬಹುದು. ಪಾಕಿಸ್ತಾನದಿಂದಲೇ (Pakistan) ಬಂದವರೆಂದು ಏಕೆ ಭಾವಿಸಿದ್ದೀರಿ? ಅಂತ ಪ್ರಶ್ನೆ ಮಾಡಿದ್ದರು.

    ಮುಂದುವರಿದು… ಭಯೋತ್ಪಾದಕರು ಪಾಕಿಸ್ತಾನದಿಂದಲೇ ಬಂದವರೆಂದು ಹೇಳೋದಕ್ಕೆ ಯಾವುದೇ ಪುರಾವೆಗಳಿಲ್ಲ. ಭಾರತ ಅನುಭವಿಸಿದ ನಷ್ಟವನ್ನು ಸರ್ಕಾರ ಕೂಡ ಮರೆಮಾಡುತ್ತಿದೆ. ಇಷ್ಟೆಲ್ಲ ಆದ್ರೂ ಸರ್ಕಾರ ದೇಶವನ್ನ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ರು. ಇದನ್ನೂ ಓದಿ: Explained| ಬದಲಾದ ಮಾಲ್ಡೀವ್ಸ್‌ – ಇಂಡಿಯಾ ಔಟ್‌ ಹೇಳಿ ಈಗ ಮೋದಿಯನ್ನು ಆಹ್ವಾನಿಸಿದ್ದು ಯಾಕೆ?

    ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆಯನ್ನ ನಿಲ್ಲಿಸಲಾಗಿದೆ. ಕೊನೆಗೊಳಿಸಿಲ್ಲ ಅಂತ ಪ್ರಧಾನಿ ಹೇಳಿದ್ದಾರೆ. ಹಾಗಿದ್ದರೇ ಕದನ ವಿರಾಮದ ಬಳಿಕ ಕೇಂದ್ರ ಏನು ಕ್ರಮ ತೆಗೆದುಕೊಂಡಿದೆ. ಪಹಲ್ಗಾಮ್‌ನಂತೆ ಮತ್ತೊಂದು ದಾಳಿಯಾದ್ರೆ ತಡೆಯಲು ಮೋದಿ ಸರ್ಕಾರ ಏನು ಕ್ರಮ ಕೈಗೊಂಡಿದೆಯೇ? ದಾಳಿ ಮಾಡಿದ ಉಗ್ರರು ಎಲ್ಲಿದ್ದಾರೆ? ಉಗ್ರರಿಗೆ ಆಶ್ರಯ ನೀಡಿದ್ದ ಕೆಲವರನ್ನ ಬಂಧಿಸಲಾಗಿದೆ ಎಂಬ ಸುದ್ದಿ ಹರಿದಾಡಿತ್ತು, ಅವರಿಗೆ ಏನು ಶಿಕ್ಷೆ ಆಯ್ತು? ಇಂತಹ ಹಲವು ಪ್ರಶ್ನೆಗಳಿವೆ. ಇದ್ಯಾವುದರ ಬಗ್ಗೆಯೂ ಕೇಂದ್ರ ಸರ್ಕಾರ ಮಾತನಾಡ್ತಿಲ್ಲ ಅಂತ ಪ್ರಶ್ನೆಗಳ ಮಳೆಸುರಿಸಿದರು. ಇದನ್ನೂ ಓದಿ: ಕಠಿಣ ಸಂದರ್ಭದಲ್ಲೂ ಅಭಿವೃದ್ಧಿಯ ದೀಪ ಬೆಳಗಿಸಬಹುದು – ಮಾಜಿ ಮಾವೋವಾದಿಗಳ ಮೀನು ಕೃಷಿಗೆ ಮೋದಿ ಶ್ಲಾಘನೆ

    ಎನ್‌ಡಿಎ ತೀವ್ರ ವಾಗ್ದಾಳಿ
    ಚಿದರಂಬರಂ ಹೇಳಿಕೆ ಬೆನ್ನಲ್ಲೇ ಕೇಸರಿ ಪಡೆ ಕೆರಳಿ ಕೆಂಡವಾಗಿದೆ. ಚಿದರಂಬರಂ ಪಾಕಿಸ್ತಾನವನ್ನ ನಿರಂತರವಾಗಿ ಏಕೆ ಸಮರ್ಥನೆ ಮಾಡಿಕೊಳ್ತಿದ್ದಾರೆ? ವಿಶ್ವದಲ್ಲೇ ಅತಿಹೆಚ್ಚು ಭಯೋತ್ಪಾದನೆ ರಫ್ತು ದೇಶದ ವಿರುದ್ಧ ಪ್ರಶ್ನೆಗಳನ್ನು ಎತ್ತದ ಕಾಂಗ್ರೆಸ್‌, ತನ್ನ ದೇಶದ ಭದ್ರತಾ ಸಂಸ್ಥೆಗಳನ್ನೇ ಏಕೆ ಪ್ರಶ್ನಿಸುತ್ತೆ? ಚಿದಂಬರಂ ತಮ್ಮ ಹೇಳಿಕೆ ಮೂಲಕ ಸಮಾಜಕ್ಕೆ ಏನು ಸಂದೇಶ ಕೊಡಲು ಹೊರಟಿದ್ದಾರೆ. ನಮ್ಮ ದೇಶದ ಧೈರ್ಯಶಾಲಿ ಸಶಸ್ತ್ರ ಪಡೆಗಳಿಗಿಂತ ಐಎಸ್‌ಐ ಅನ್ನೇ ಹೆಚ್ಚು ನಂಬುತ್ತೀರಾ? ರಾಷ್ಟ್ರೀಯ ಹಿತಾಸಕ್ತಿಗಿಂತ ರಾಜಕೀಯ ದ್ವೇಷವೇ ನಿಮಗೆ ಮುಖ್ಯವಾಯ್ತಾ? ಅಂತ ಪ್ರಶ್ನೆಗಳ ಮಳೆ ಸುರಿಸಿದ್ದಾರೆ. ಇದನ್ನೂ ಓದಿ: UP | ಅವಸಾನೇಶ್ವರ ಮಹಾದೇವ ದೇವಾಲಯದಲ್ಲಿ ಕಾಲ್ತುಳಿತ – ಇಬ್ಬರು ಭಕ್ತರು ಸಾವು, 29 ಮಂದಿಗೆ ಗಾಯ

    ವಿವಾದದ ಬಳಿಕ ಚಿದಂಬರಂ ಸ್ಪಷ್ಟನೆ
    ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಹೇಳಿಕೆಗೆ ಚಿದಂಬರಂ ಸ್ಪಷ್ಟನೆ ನೀಡಿದ್ದಾರೆ. ನನ್ನ ಹೇಳಿಕೆಯನ್ನ ತಿರುಚಲಾಗಿದೆ. ರೆಕಾರ್ಡ್‌ ಮಾಡಿದ ಸಂಪೂರ್ಣ ಸಂದರ್ಶನವನ್ನ ಮುಚ್ಚಿಟ್ಟು, ಒಂದೆರಡು ವಾಕ್ಯಗಳನ್ನ ಅಳಿಸಿದ್ದಾರೆ. ಕೆಲ ಪದಗಳನ್ನ ಮ್ಯೂಟ್‌ ಮಾಡಿದ್ದಾರೆ. ಇದು ಅತ್ಯಂತ ಕೆಟ್ಟ ಟ್ರೋಲ್‌ ಅಂತ ಹೇಳಿದ್ದಾರೆ. ಇದನ್ನೂ ಓದಿ:  ಪೊಲೀಸಪ್ಪನ ಪತ್ನಿಗೆ ಅತ್ತೆ, ಮಾವನಿಂದ ಕಿರುಕುಳ – ವಿಡಿಯೋ ಹರಿಬಿಟ್ಟು ಮಹಿಳೆ ಆತ್ಮಹತ್ಯೆ

     

  • `ಆಪರೇಷನ್ ಸಿಂಧೂರ’ ಬಗ್ಗೆ ಸದನದಲ್ಲಿ ಮುಂದಿನ ವಾರ ಚರ್ಚೆ – ಲೋಕಸಭೆಯಲ್ಲಿ 16 ಗಂಟೆ, ರಾಜ್ಯಸಭೆಯಲ್ಲಿ 9 ಗಂಟೆ ನಿಗದಿ

    `ಆಪರೇಷನ್ ಸಿಂಧೂರ’ ಬಗ್ಗೆ ಸದನದಲ್ಲಿ ಮುಂದಿನ ವಾರ ಚರ್ಚೆ – ಲೋಕಸಭೆಯಲ್ಲಿ 16 ಗಂಟೆ, ರಾಜ್ಯಸಭೆಯಲ್ಲಿ 9 ಗಂಟೆ ನಿಗದಿ

    – ಸಂಸತ್ತಿನಲ್ಲಿ ಮೊದಲ ದಿನವೇ `ಪಹಲ್ಗಾಮ್’ ಗದ್ದಲ

    ನವದೆಹಲಿ: ಪಹಲ್ಗಾಮ್ ಉಗ್ರರದಾಳಿಗೆ ಪ್ರತೀಕಾರವಾಗಿ ಪಾಕ್ (Pakistan) ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ ವಿಚಾರದಲ್ಲಿ ಸಂಸತ್ತಿನಲ್ಲಿ ಪ್ರಸ್ತಾಪವಾಗಿ ಗದ್ದಲ-ಕೋಲಾಹಲದಿಂದಾಗಿ ಕಲಾಪವನ್ನು ಮಂಗಳವಾರಕ್ಕೆ (ಜು.22) ಮುಂದೂಡಲಾಗಿದೆ.

    ಪಹಲ್ಗಾಮ್ ಉಗ್ರರ ದಾಳಿ (Pahalgam Attack) ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ವಿಪಕ್ಷಗಳು ಪಟ್ಟು ಹಿಡಿದಿದ್ದವು. ಪ್ರಶ್ನೋತ್ತರ ಅವಧಿ ಬಳಿಕ ಅವಕಾಶ ಕೊಡ್ತೇವೆ ಅಂತ ಸ್ಪೀಕರ್ ಓಂಬಿರ್ಲಾ ಹೇಳಿದರೂ ವಿಪಕ್ಷಗಳ ಘೋಷಣೆ, ಗೋಜಲು ಹೆಚ್ಚಾಗಿ ಕಲಾಪವನ್ನು ಪದೇ ಪದೇ ಮುಂದೂಡಬೇಕಾಯಿತು. ಇದನ್ನೂ ಓದಿ: ಆಪರೇಷನ್ ಸಿಂಧೂರ ವೇಳೆ ಭಾರತದ ಸೇನಾ ಶಕ್ತಿಯನ್ನ ಇಡೀ ವಿಶ್ವವೇ ನೋಡಿದೆ; ಸಂಸತ್ ಅಧಿವೇಶನಕ್ಕೂ ಮುನ್ನ ಮೋದಿ ಮಾತು

    ಇನ್ನೂ ಸಂಸತ್ ವ್ಯವಹಾರ ಸಲಹಾ ಸಮಿತಿಯು ʻಆಪರೇಷನ್‌ ಸಿಂಧೂರʼ (Operation Sindoor) ಕುರಿತು ಚರ್ಚೆ ನಡೆಸಲು ಮುಂದಿನವಾರ ಸಮಯ ನಿಗದಿ ಮಾಡಿದೆ. ವಿಪಕ್ಷಗಳ ಬಿಗಿ ಪಟ್ಟಿನ ಬಳಿಕ ಲೋಕಸಭೆಯಲ್ಲಿ 16 ಗಂಟೆ ಹಾಗೂ ರಾಜ್ಯಸಭೆಯಲ್ಲಿ 9 ಗಂಟೆಗಳ ಸಮಯವನ್ನ ಚರ್ಚೆಗೆ ನಿಗದಿ ಮಾಡಿರುವುದಾಗಿ ಘೋಷಿಸಿದೆ. ವಿಪಕ್ಷಗಳು ಈ ವಾರವೇ ಕಲಾಪದಲ್ಲಿ ಚರ್ಚೆ ನಡೆಸಬೇಕೆಂದು ಬಿಗಿ ಪಟ್ಟು ಹಿಡಿದಿದ್ದವು. ಆದ್ರೆ ಪ್ರಧಾನಿಯವರ ವಿದೇಶಿ ಪ್ರವಾಸದ ಹಿನ್ನೆಲೆ ಚರ್ಚೆಯನ್ನು ಮುಂದಿನ ವಾರಕ್ಕೆ ನಿಗದಿಪಡಿಸಲಾಗಿದೆ.

    ಕಳೆದ ಏಪ್ರಿಲ್‌ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನವಾಗಿದೆ. ಅಲ್ಲದೇ ಆಪರೇಷನ್‌ ಸಿಂಧೂರ ವಿಪಕ್ಷಗಳು ಚರ್ಚೆಗೆ ಕೋರಿದ್ದ 8 ವಿಷಯಗಳಲ್ಲಿ ಒಂದಾಗಿದೆ. ಇದನ್ನೂ ಓದಿ: ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ ಫಲಾನುಭವಿಗಳಲ್ಲಿ ಕರ್ನಾಟಕ ಮುಂಚೂಣಿ

    ವಿಜಯೋತ್ಸವಕ್ಕಾಗಿ ಮುಂಗಾರು ಅಧಿವೇಶನ
    ಇನ್ನೂ ಅಧಿವೇಶನಕ್ಕೂ ಮುನ್ನ ಮಾತನಾಡಿದ ಮೋದಿ, ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಶೇ.100ರಷ್ಟು ಗುರಿಯನ್ನು ಸಾಧಿಸಲಾಗಿದೆ. ಭಯೋತ್ಪಾದಕರ ನೆಲೆಗಳನ್ನು ಕೇವಲ 22 ನಿಮಿಷಗಳಲ್ಲಿ ನೆಲಸಮ ಮಾಡಲಾಗಿದೆ. ವಿಜಯೋತ್ಸವದ ಸಂಭ್ರಮಕ್ಕಾಗಿಯೇ ಈ ಮುಂಗಾರು ಅಧಿವೇಶನ. ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸದಸ್ಯರು ಈ ವಿಜಯೋತ್ಸವವನ್ನು ಆಚರಿಸುತ್ತಾರೆಂಬ ಭರವಸೆಯಿದೆ ಎಂದು ಹೇಳಿದರು. ಅಲ್ಲದೆ, ಇಡೀ ವಿಶ್ವವೇ ಭಾರತದ ಸೇನಾ ಶಕ್ತಿಯತ್ತ ಆಕರ್ಷಿತವಾಗಿವೆ. ನನ್ನ ವಿದೇಶಿ ಭೇಟಿಯಲ್ಲಿ ಭಾರತದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳ ಕಡೆಗೆ ಪ್ರಪಂಚ ಆಕರ್ಷಣೆಗೊಳಗಾಗಿರುವುದನ್ನು ಗಮನಿಸಿದ್ದೇನೆ ಅಂದರು.

  • ಪಹಲ್ಗಾಮ್‌ ದಾಳಿಯನ್ನ TRF ನಡೆಸಿದೆ ಅನ್ನೋದಕ್ಕೆ ಸಾಕ್ಷಿ ತೋರಿಸಿ – ಉಗ್ರ ಸಂಘಟನೆಗೆ ಪಾಕ್‌ ನೇರ ಬೆಂಬಲ

    ಪಹಲ್ಗಾಮ್‌ ದಾಳಿಯನ್ನ TRF ನಡೆಸಿದೆ ಅನ್ನೋದಕ್ಕೆ ಸಾಕ್ಷಿ ತೋರಿಸಿ – ಉಗ್ರ ಸಂಘಟನೆಗೆ ಪಾಕ್‌ ನೇರ ಬೆಂಬಲ

    ಇಸ್ಲಾಮಾಬಾದ್: ಪಾಕಿಸ್ತಾನದ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್‌ ದಾರ್‌ (Ishaq Dar) ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಉಗ್ರ ಸಂಘಟನೆಗೆ ಸಂಸತ್‌ನಲ್ಲಿ ಬಹಿರಂಗವಾಗಿಯೇ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಪಾಕಿಸ್ತಾನ ಸಂಸತ್ತಿನಲ್ಲಿ ಭಾಷಣ ಮಾಡುವಾಗ, ಪಹಲ್ಗಾಮ್‌ ದಾಳಿಯನ್ನ (Pahalgam attack) ಟಿಆರ್‌ಎಫ್‌ ನಡೆಸಿದೆ ಅನ್ನೋದಕ್ಕೆ ಸಾಕ್ಷಿ ತೋರಿಸಿ ಎಂದು ಕೇಳಿರುವ ಇಶಾಕ್‌ ದಾರ್‌ ಉಗ್ರ ಸಂಘಟನೆಗೆ ನೇರ ಬೆಂಬಲ ಸೂಚಿಸಿದ್ದಾರೆ. ಇದನ್ನೂ ಓದಿ: Uttar Pradesh | ಸ್ಕೂಲ್ ವ್ಯಾನ್‌ನಲ್ಲಿ 4 ವರ್ಷದ ಬಾಲಕಿ ಮೇಲೆ ರೇಪ್ – ಡ್ರೈವರ್ ಬಂಧನ

    USA designates LeT offshoot TRF behind the Pahalgam attack as terrorist organisation Setback for Pakistan

    ಏಪ್ರಿಲ್ 22ರ ಪಹಲ್ಗಾಮ್ ಉಗ್ರ ದಾಳಿ (Pahalgam Attack) ಎಸಗಿದ ಪಾಕಿಸ್ತಾನ (Pakistan) ಮೂಲದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಅನ್ನು ಅಮೆರಿಕದ ವಿದೇಶಾಂಗ ಇಲಾಖೆ ಒಂದು ದಿನದ ಹಿಂದಷ್ಟೇ ಭಯೋತ್ಪಾದಕ ಸಂಘಟನೆ ಪಟ್ಟಿಗೆ ಸೇರಿಸಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರ ಪ್ರಾಣ ಬಲಿ ಪಡೆದ ಘಟನೆಯ ಹೊಣೆಗಾರಿಕೆಯನ್ನು ಈ ಸಂಘಟನೆ ವಹಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ (Marco Rubio) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಮೆರಿಕದ ಈ ಹೇಳಿಕೆ ಬೆನ್ನಲ್ಲೇ ಪಾಕ್‌ ಉಪ ಪ್ರಧಾನಿ ಸಂಸತ್‌ನಲ್ಲಿ ಟಿಆರ್‌ಎಫ್‌ ಪರ ಧ್ವನಿ ಎತ್ತಿದ್ದಾರೆ.  ಇದನ್ನೂ ಓದಿ: ಪಹಲ್ಗಾಮ್‌ ದಾಳಿಯ ಹೊಣೆ ಹೊತ್ತಿದ್ದ ಟಿಆರ್‌ಎಫ್‌ನ್ನು ಉಗ್ರ ಸಂಘಟನೆ ಪಟ್ಟಿಗೆ ಸೇರಿಸಿದ ಅಮೆರಿಕ

    ಸಂಸತ್‌ನಲ್ಲಿ ಮಾತನಾಡಿದ ಇಶಾಕ್‌ ದಾರ್‌, ಅಮೆರಿಕ ಟಿಆರ್‌ಎಫ್‌ ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಗುಂಪು ಟಿಆರ್‌ಎಫ್‌. ಇದು ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್‌ಇಟಿ) ನ ಪ್ರಾಕ್ಸಿ ಕೂಡ ಆಗಿದೆ ಅಂತ ಅಮೆರಿಕ ಹೇಳಿದೆ. ಯುಎನ್‌ಎಸ್‌ಸಿ ಹೇಳಿಕೆಯಲ್ಲಿ ಟಿಆರ್‌ಎಫ್ ಉಲ್ಲೇಖವನ್ನು ನಾವು ವಿರೋಧಿಸುತ್ತೇವೆ. ಪಾಕಿಸ್ತಾನ ಇದನ್ನ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಟೇಕಾಫ್ ಆಗಿ 16 ನಿಮಿಷಕ್ಕೆ ಲ್ಯಾಂಡ್ ಆಯ್ತು ಏರ್ ಇಂಡಿಯಾ ವಿಮಾನ

    Pahalgam Terror Attack 2 1

    ಟಿಆರ್‌ಎಫ್‌ ಅನ್ನು ಅಕ್ರಮವೆಂದು ನಾವು ಪರಿಗಣಿಸಲ್ಲ, ಪಹಲ್ಗಾಮ್‌ ದಾಳಿಯನ್ನ ಅವರೇ ನಡೆಸಿದ್ದಾರೆ ಎಂಬುದಕ್ಕೆ ಸಾಕ್ಷಿ ತೋರಿಸಿ ಅಂತಲೂ ಹೇಳಿದ್ದಾರೆ. ಇದನ್ನೂ ಓದಿ: ಪಾಟ್ನಾ ಆಸ್ಪತ್ರೆಯಲ್ಲಿ ಐಸಿಯುಗೆ ನುಗ್ಗಿ ಗ್ಯಾಂಗ್‌ಸ್ಟರ್‌ ಹತ್ಯೆ – ಐವರು ಆರೋಪಿಗಳು ಕೋಲ್ಕತ್ತಾದಲ್ಲಿ ಅರೆಸ್ಟ್‌

  • Pahalgam Attack | ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಅರೆಸ್ಟ್‌

    Pahalgam Attack | ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಅರೆಸ್ಟ್‌

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ (Pahalgam Attack) ನಡೆಸಿದ್ದ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರನ್ನು ಎನ್‌ಐಎ (NIA) ಅಧಿಕಾರಿಗಳು ಬಂಧಿಸಿದ್ದಾರೆ.

    ಬಂಧಿತರನ್ನು ಪರ್ವೈಜ್ ಅಹ್ಮದ್ ಜೋಥರ್ ಮತ್ತು ಬಶೀರ್ ಅಹ್ಮದ್ ಜೋಥರ್ ಎಂದು ಗುರುತಿಸಲಾಗಿದೆ. ಇಬ್ಬರು ಪಹಲ್ಗಾಮ್ ನಿವಾಸಿಗಳಾಗಿದ್ದು, ನಿಷೇಧಿತ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (LeT) ಸಂಘಟನೆಗೆ ಸೇರಿದ ಮೂವರು ಉಗ್ರರಿಗೆ ಆಶ್ರಯ ನೀಡಿದ್ದರು. ಇನ್ನೂ ತನಿಖೆ ವೇಳೆ, ಬಂಧಿತರು ದಾಳಿಕೋರರ ಗುರುತುಗಳನ್ನು ಬಹಿರಂಗಪಡಿಸಿದ್ದು, ಉಗ್ರರು ಪಾಕಿಸ್ತಾನಿ (Pakistan) ಪ್ರಜೆಗಳು ಎಂದು ದೃಢಪಟ್ಟಿದೆ. ಇದನ್ನೂ ಓದಿ: Pahalgam Terror Attack – ತನಗೇ ಗೊತ್ತಿಲ್ಲದೆ ಪ್ರವಾಸಿಗನ ಮೊಬೈಲ್‌ನಲ್ಲಿ ಸೆರೆಯಾಯ್ತು ಭೀಕರ ಉಗ್ರ ಕೃತ್ಯ

    ಆರೋಪಿಗಳ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.

    ಏಪ್ರಿಲ್ 22 ರಂದು, ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ 26 ಜನರನ್ನು ಹತ್ಯೆಗೈದಿದ್ದರು. ಇದಾದ ಬಳಿಕ ಭಾರತ ಹಾಗೂ ಪಾಕ್‌ ನಡುವೆ ಉದ್ವಿಗ್ನತೆ ಉಂಟಾಗಿತ್ತು. ಭಾರತೀಯ ಸೇನೆ, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಹಲವಾರು ಉಗ್ರರನ್ನು ಹೊಡೆದು ಹಾಕಿತ್ತು. ಇದನ್ನೂ ಓದಿ: Pahalgam Terror Attack | ಮರದಿಂದ ಕೆಳಗಿಳಿದು ಉಗ್ರರ ದಾಳಿ

  • ಪಹಲ್ಗಾಮ್‌ ದಾಳಿಗೂ ಕಾಲ್ತುಳಿತಕ್ಕೂ ಏನ್‌ ಸಂಬಂಧ? ಮನಮೋಹನ್ ಸಿಂಗ್‌ ಪ್ರಧಾನಿಯಾಗಿದ್ದಾಗ ಎಷ್ಟು ಅಟ್ಯಾಕ್ ಆಗಿದ್ವು – ಹೆಚ್‌ಡಿಕೆ ಪ್ರಶ್ನೆ

    ಪಹಲ್ಗಾಮ್‌ ದಾಳಿಗೂ ಕಾಲ್ತುಳಿತಕ್ಕೂ ಏನ್‌ ಸಂಬಂಧ? ಮನಮೋಹನ್ ಸಿಂಗ್‌ ಪ್ರಧಾನಿಯಾಗಿದ್ದಾಗ ಎಷ್ಟು ಅಟ್ಯಾಕ್ ಆಗಿದ್ವು – ಹೆಚ್‌ಡಿಕೆ ಪ್ರಶ್ನೆ

    – ಜನರ ಹೃದಯದಲ್ಲಿ ಸ್ಥಾನ ಪಡೆದು ಈ ಮಣ್ಣಿಗೆ ಹೋಗ್ತೀನಿ – ಸಚಿವ ಭಾವುಕ
    – ಪೊಲೀಸರ ಯಡವಟ್ಟಿಗೆ ಬಾಲಕಿ ಸಾವು ಪ್ರಕರಣ ಸ್ಮರಿಸಿದ ಹೆಚ್‌ಡಿಕೆ

    ಮಂಡ್ಯ: ಪಹಲ್ಗಾಮ್‌ ಭಯೋತ್ಪಾದಕ ದಾಳಿಗೂ (Pahalgam Terror Attack) ಕಾಲ್ತುಳಿತ ಪ್ರಕರಣಕ್ಕೂ ಏನು ಸಂಬಂಧ? ಮನಮೋಹನ್ ಸಿಂಗ್‌ ಪ್ರಧಾನಿಯಾಗಿದ್ದಾಗ ಎಷ್ಟು ಅಟ್ಯಾಕ್ ಆಗುದ್ದೋ, ಆಗ ಅವರು ರಾಜೀನಾಮೆ ಕೊಟ್ರಾ? ಅಂತ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಪ್ರಶ್ನೆ ಮಾಡಿದ್ದಾರೆ.

    ಮಂಡ್ಯ (Mandya) ಮೈಶುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿಂದು ಪಾಲ್ಗೊಂಡಿದ್ದ ಸಚಿವರು, ಶಾಲಾ ಆವರಣದಲ್ಲಿ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಆರೋಗ್ಯ ಇನ್ನೂ ಪಿಕಪ್ ಆಗಬೇಕು. ಆದ್ರೆ ಎಲ್ಲಾ ಕಡೆ ಬರಲೇಬೇಕು ಹೀಗಾಗಿ ಬರ್ತಾ ಇದ್ದೀನಿ. ಕಾಲ್ತುಳಿತದ ವಿಚಾರದಲ್ಲಿ ಸರ್ಕಾರ ಗಂಟೆಗೊಂದು ತೀರ್ಮಾನ ಮಾಡ್ತಾ ಇದೆ. ಅಂತಿಮವಾಗಿ ಇವರು ಏನು ಮಾಡ್ತಾರೆ ನೋಡಬೇಕು. ಮೊದಲು ಇರುವ ನ್ಯಾಯಾಂಗ ತನಿಖೆ ಅಂದ್ರು. ಈಗ ಸಿಐಡಿ ತನಿಖೆ ಅಂತಾ ಇದ್ದಾರೆ. ಅಂತಿಮವಾಗಿ ತನಿಖಾ ವರದಿ ಪಡೆದುಕೊಳ್ಳುತ್ತಾರೆ. ಇದೊಂದು ಸರ್ಕಾರ ಅನ್ನೋಕೆ ಆಗುತ್ತಾ? ಯಾವುದೇ ತೀರ್ಮಾನ ಮಾಡಿದ್ರೆ ಸ್ಪಷ್ಟತೆ ಇರಬೇಕು. ಅಧಿಕಾರಿಗಳ ತಪ್ಪು ಏನಿತ್ತು? ಎಫ್‌ಐಆರ್‌ನಲ್ಲಿ ಅಧಿಕಾರಿಗಳು ಕರ್ತವ್ಯ ಲೋಪ ಆಗಿಲ್ಲ ಅಂತಾ ಇದೆ. ಒಟ್ಟಿನಲ್ಲಿ ಸರ್ಕಾರ ಸಂಪೂರ್ಣ ವೈಫಲ್ಯ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಪಹಲ್ಗಾಮ್‌, ಪ್ರಯಾಗ್‌ರಾಜ್‌ನಲ್ಲಿ ತೊಂದ್ರೆ ಆದ್ರೆ ರಾಷ್ಟ್ರೀಯ ನಾಯಕರು ಕೇಳಬೇಕು ಅಲ್ವಾ. ಆ ಬಗ್ಗೆ ರಾಷ್ಟ್ರ ನಾಯಕರು ಹೋರಾಟ ಮಾಡಬೇಕು. ಇಲ್ಲಿ ಇವರು ಮಾಡಿರೋ ತಪ್ಪಿಗೆ ಪೆಹಲ್ಗಾಮ್‌, ಪ್ರಯಾಗ್‌ರಾಜ್ ಘಟನೆ ಮಧ್ಯೆ ತರ್ತಿದ್ದಾರೆ. ಪೆಹಲ್ಗಾಮ್‌ ಘಟನೆಗೂ ಇಲ್ಲಿಗೂ ಏನು ಸಂಬಂಧ? ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗೆ ಎಷ್ಟು ಅಟ್ಯಾಕ್ ಆಗುದ್ವು? ಆಗ ಅವರು ರಾಜೀನಾಮೆ ಕೊಟ್ರಾ? ಬೆಂಗಳೂರಿನಲ್ಲಿ ಇವರ ವರ್ಚಸ್‌ಗಾಗಿ ಘಟನೆ ನಡೆದಿರೋದು ಎಂದು ತಿವಿದರು.

    ಪೊಲೀಸರ ಯಡವಟ್ಟಿಗೆ ಬಾಲಕಿ ಸಾವು; ಘಟನೆ ಸ್ಮರಿಸಿದ ಹೆಚ್‌ಡಿಕೆ
    ಇದಕ್ಕೂ ಮುನ್ನ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್‌ಡಿಕೆ, ನನ್ನಿಂದ ಜಿಲ್ಲೆಗೆ ಅನುಕೂಲ ಆಗುತ್ತೆ ಅಂತಾ ಕಳೆದ ಚುನಾವಣೆಯಲ್ಲಿ ಗೆಲ್ಲಿಸಿದ್ದಿರಿ. ಬೃಹತ್ ಕೈಗಾರಿಕಾ ಸಚಿವನಾಗಿ ನನ್ನ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದೀರಿ. ಕಾರ್ಖಾನೆ ತರಲು ರಾಜ್ಯ ಸರ್ಕಾರದ ಸಹಕಾರವೂ ಬೇಕಿರುತ್ತೆ. ಈ ವರ್ಷ ದೇಶಾದ್ಯಂತ 14 ಸಾವಿರ ಎಲೆಕ್ಟ್ರಿಕ್ ಬಸ್ ಕೊಡಲು ತೀರ್ಮಾನ ಆಗಿದೆ. ಅದರಲ್ಲಿ ಬೆಂಗಳೂರಿಗೆ 4,500 ಬಸ್, ಬೇರೆ ರಾಜ್ಯಕ್ಕೆ 2 ಸಾವಿರ ಬಸ್ ಕೊಡಲಾಗುತ್ತಿದೆ. ಜಿಲ್ಲೆಗೆ ಏನಾದ್ರೂ ಕೈಗಾರಿಕೆ ತರಲು ನಿತ್ಯ ಪ್ರಯತ್ನ ಮಾಡ್ತಿದ್ದೇನೆ. ರಾಜ್ಯ ಸರ್ಕಾರದ ಸಹಕಾರ ಪಡೆಯುವ ಪ್ರಯತ್ನವನ್ನೂ ಮಾಡ್ತೀನಿ. ರೈತ ಭವನ ಪುನಶ್ಚೇತನಕ್ಕೆ 4 ಕೋಟಿ ಅನುದಾನ ಕೊಡಿಸಿದ್ದೇನೆ. ಆ ಕೆಲಸ ಯಾರಿಗೆ ಕೊಟ್ಟು ಮಾಡಿಸಬೇಕು ಅನ್ನೋದ್ರ ಚರ್ಚೆ ಆಗ್ತಿದೆ. ನನಗೆ ಬಹಳ ನೋವು ತಂದ ದೃಶ್ಯ ಅಂದ್ರೆ ಮಂಡ್ಯ ಮಿಮ್ಸ್ ನಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಗು ನಿಧನ ಆಗಿದ್ದು. ಪೊಲೀಸರ ವರ್ತನೆಯಿಂದ ನಾಯಿ ಕಚ್ಚಿದ ಮಗು ಸಾವನ್ನಪ್ಪಿದ್ದು, ಈ ಎರಡೂ ಪ್ರಕರಣಗಳು ನೋವು ತರುತ್ತದೆ. ಈ ವಿಷಯದಲ್ಲಿ ಸರ್ಕಾರಿ ಅಧಿಕಾರಿಗಳು ಹಣದಾಸೆಗೆ ಜೀವ ಕಳೆಯಬಾರದು ಎಂದು ತಿಳಿವಳಿಕೆ ನೀಡಿದರು.

    ಜನಕ್ಕೆ ನನ್ನ ಮೇಲೆ ವಿಶ್ವಾಸ ಬರಲಿಲ್ಲ
    ಮಿಮ್ಸ್ ಆಸ್ಪತ್ರೆ ಸಮಸ್ಯೆಗೆ ಇವತ್ತು ತಕ್ಷಣ ಸಿಎಸ್‌ಆರ್ ಫಂಡ್ ನಲ್ಲಿ ಎರಡೂವರೆ ಕೋಟಿ ಕೊಡಿಸಿದ್ದೇನೆ. ಮೈಶುಗರ್ ಶಿಕ್ಷಣ ಸಂಸ್ಥೆ ಉಳಿಸಲು ನಾನು ಬದ್ಧ. ಅದಕ್ಕೆ ಬೇಕಾದ ನೀಲನಕ್ಷೆ ಸಿದ್ಧಪಡಿಸಿಕೊಡಿ. ಮಾದರಿ ಶಾಲೆ ಮಾಡಲು ಅಗತ್ಯ ನೆರವು. ನನ್ನ ಕನಸಿತ್ತು ಪಂಚ ಯೋಜನೆಗಳನ್ನ ತರಬೇಕು, ಪ್ರತಿ ಪಂಚಾಯಿತಿ ಮಟ್ಟದಲ್ಲಿ ಉಚಿತ ಇಂಗ್ಲೀಷ್ ಶಾಲೆ ತರಬೇಕು ಅಂದುಕೊಂಡಿದ್ದೆ. ನನ್ನ ದುರಾದೃಷ್ಟ ಜನರಿಗೆ ನನ್ನ ಮೇಲೆ ವಿಶ್ವಾಸ ಬರಲಿಲ್ಲ. ನಾನು ಅಂತಹ ದೊಡ್ಡ ಕಾರ್ಯಕ್ರಮ ಕೊಡ್ತೇನೆ ಅಂತ ನಂಬಿಕೆ ಬರಲಿಲ್ಲ. ಇವತ್ತು ಗ್ಯಾರಂಟಿ ಹೆಸರಲ್ಲಿ, ತೆರಿಗೆ ನೆಪದಲ್ಲಿ ಸುಲಿಗೆ ಮಾಡ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ನಿಮ್ಮ ಹೃದಯದಲ್ಲಿ ಸ್ಥಾನ ಪಡೆದು ಮಣ್ಣಿಗೆ ಹೋಗ್ತೀನಿ
    ನಾನು ಆಂಧ್ರದಲ್ಲಿ ಇತಿಹಾಸದ ಕಾರ್ಖಾನೆ ಉಳಿಸಿದೆ. ಹೆಚ್‌ಎಂಟಿ ಫ್ಯಾಕ್ಟರಿ ಉಳಿಸಲು ಪಣತೊಟ್ಟಿದ್ದೇನೆ. ಆದ್ರೆ, ಅದಕ್ಕೆ ರಾಜ್ಯ ಸರ್ಕಾರ ಭೂಮಿ ಕೊಡುತ್ತಿಲ್ಲ. ನನಗೆ ಮಂಡ್ಯ ಜನ ಸ್ವಲ್ಪ ಸಮಯ ಕೊಡಿ. ನನ್ನ ಮೇಲೆ ಜಿಲ್ಲೆಯ ಜನ ಸಾಕಷ್ಟು ನಿರೀಕ್ಷೆ ಇಟ್ಟಿದ್ದೀರಿ. ನನ್ನ ಒಂದು ಕಣ್ಣು, ಹೃದಯ ಇಲ್ಲೇ ಇರುತ್ತೆ. ನಿಮ್ಮ ನಿರೀಕ್ಷೆ ಆಸೆಗಳನ್ನ ನಿರಾಸೆ ಮಾಡಲ್ಲ. ನನಗೆ ಬೇರೆ ಯಾವುದೇ ಆಸೆ ಇಲ್ಲ, ನನಗೆ ಬೇಕಿರೋದು ನಿಮ್ಮ ಹೃದಯದಲ್ಲಿ ಸ್ಥಾನ, ಆ ಶಾಶ್ವತ ಸ್ಥಾನ ಪಡೆದು ನಂತರ ನಾನು ಈ ಮಣ್ಣಿಗೆ ಹೋಗ್ತೀನಿ ಎಂದು ಭಾಷಣದ ವೇಳೆ ಭಾವುಕರಾದರು.

  • ಪಹಲ್ಗಾಮ್‌ ದಾಳಿಗೆ ಖಂಡನೆ – ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ʻಬ್ರಿಕ್ಸ್‌ʼ ಸದಸ್ಯ ರಾಷ್ಟ್ರಗಳ ಬೆಂಬಲ

    ಪಹಲ್ಗಾಮ್‌ ದಾಳಿಗೆ ಖಂಡನೆ – ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ʻಬ್ರಿಕ್ಸ್‌ʼ ಸದಸ್ಯ ರಾಷ್ಟ್ರಗಳ ಬೆಂಬಲ

    – ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಯಶಸ್ಸು

    ನವದೆಹಲಿ: ಭಾರತ, ಚೀನಾ, ಬ್ರೆಜಿಲ್‌, ರಷ್ಯಾ ಒಳಗೊಂಡಿರುವ ʻಬ್ರಿಕ್ಸ್ʼ (BRICS) ಒಕ್ಕೂಟದ 10 ರಾಷ್ಟ್ರಗಳು ಪಹಲ್ಗಾಮ್‌ ಭಯೋತ್ಪಾದಕ ದಾಳಿಯನ್ನು (Pahalgam Terror Attack) ಖಂಡಿಸಿವೆ. ಅಲ್ಲದೇ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿ ಹೋರಾಡಲು ನಿರ್ಧರಿಸಿದ್ದು, ಭಾರತಕ್ಕೆ ಬೆಂಬಲ ಸೂಚಿಸಿವೆ. ಇದು ಭಾರತಕ್ಕೆ ಸಿಕ್ಕ ಮತ್ತೊಂದು ರಾಜತಾಂತ್ರಿಕ ಯಶಸ್ಸಾಗಿದೆ.

    ಭಾರತ ಸೇರಿದಂತೆ 10 ʻಬ್ರಿಕ್ಸ್‌ʼ ಸದಸ್ಯ ರಾಷ್ಟ್ರಗಳ ಸಂಸತ್‌ ಪ್ರತಿನಿಧಿಗಳು (BRICS Parliamentary Forum) ಇದೇ ಜೂ.4-5ರಂದು ಬ್ರೆಲಿಯಾದಲ್ಲಿ ನಡೆದ 11ನೇ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದರು. ಬ್ರಿಕ್ಸ್ ಸಂಸದೀಯ ವೇದಿಕೆಯಲ್ಲಿ ಭಾರತ, ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ, ಇರಾನ್, ಯುನೈಟೆಡ್ ಅರಬ್ ಎಮಿರೇಟ್ಸ್, ಈಜಿಪ್ಟ್, ಇಥಿಯೋಪಿಯಾ ಮತ್ತು ಇಂಡೋನೇಷ್ಯಾ ಸಂಸತ್‌ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಇದೇ ಸಭೆಯಲ್ಲಿ ಲೋಕಸಭಾ ಸ್ಪೀಕ‌ರ್ ಓಂ ಬಿರ್ಲಾ ಅವರ ನೇತೃತ್ವದ ಭಾರತೀಯ ಸಂಸದೀಯ ನಿಯೋಗವು ಬ್ರೆಸಿಲಿಯಾದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಭಾಗಿಯಾಗಿ, ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟವನ್ನು ಪ್ರತಿಪಾದಿಸಿತು.

    ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸಿನ ನೆರವನ್ನು ಕಡಿತಗೊಳಿಸುವುದು, ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವುದು, ಆಧುನಿಕ ತಂತ್ರಜ್ಞಾನಗಳ ದುರ್ಬಳಕೆ ನಿಯಂತ್ರಿಸುವುದು, ಕಾನೂನು ಪ್ರಕ್ರಿಯೆಗೆ ಸಹಕರಿಸುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಭಾರತದ ನಿಯೋಗವು ಬಲವಾಗಿ ಪ್ರತಿಪಾದಿಸಿತು. ಇದನ್ನೂ ಓದಿ: `ಆಪರೇಷನ್ ಸಿಂಧೂರ’ ಪಾಕಿಸ್ತಾನಕ್ಕೆ ಸದಾ ಕಾಡಲಿದೆ: ಮೋದಿ

    ಹಲವು ಸುತ್ತಿನ ಮಾತುಕತೆ ಬಳಿಕ ಸದಸ್ಯ ರಾಷ್ಟ್ರಗಳು ಪಹಲ್ಲಾಮ್ ದಾಳಿಯನ್ನು ಖಂಡಿಸಿದವು ಮತ್ತು ಭಯೋತ್ಪಾದನೆ ನಿಗ್ರಹದ ಅಗತ್ಯತೆ ಬಗ್ಗೆ ಒತ್ತಿ ಹೇಳಿದವು. ಜೊತೆಗೆ ಕೃತಕ ಬುದ್ಧಿಮತ್ತೆ, ಜಾಗತಿಕ ವ್ಯಾಪಾರ ಮತ್ತು ಆರ್ಥಿಕತೆ, ಅಂತರ್‌ ಸಂಸದೀಯ ಸಹಕಾರ, ಜಾಗತಿಕ ಶಾಂತಿ ಮತ್ತು ಭದ್ರತೆಯಂತಹ ಪ್ರಮುಖ ವಿಷಯಗಳಿಗೆ ಒಮ್ಮತ ಸೂಚಿಸುವ ಬಗ್ಗೆಯೂ ಚರ್ಚಿಸಲಾಯಿತು. ಇದನ್ನೂ ಓದಿ: ಪರ ಪುರುಷನೊಂದಿಗೆ ಸರಸಕ್ಕೆ ಅಡ್ಡಿ – ಅನ್ನಕ್ಕೆ ವಿಷ ಹಾಕಿ ಇಡೀ ಕುಟುಂಬವನ್ನೇ ಮುಗಿಸಲು ಯತ್ನಿಸಿದ್ದಾಕೆ ಅರೆಸ್ಟ್‌

    ಸಭೆಯಲ್ಲಿ ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ, ಇರಾನ್ ಮತ್ತು ಸಂಯುಕ್ತ ಅರಬ್ ಸಂಸ್ಥಾನದ ಪ್ರತಿನಿಧಿಗಳು ಭಾಗಿಯಾಗಿದ್ದರು. ಅಲ್ಲದೇ ಮುಂದಿನ ಬ್ರಿಕ್ಸ್‌ ಸಭೆಯು ಭಾರತದಲ್ಲಿ ನಡೆಯಲಿದ್ದು, ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರನ್ನೇ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇದನ್ನೂ ಓದಿ: ದೇಶಾದ್ಯಂತ ಬಕ್ರೀದ್‌ ಆಚರಣೆ ಸಂಭ್ರಮ; ಜಮ್ಮು-ಕಾಶ್ಮೀರದಲ್ಲಿ ಶಾಂತಿಯುತವಾಗಿ ಪ್ರಾರ್ಥನೆ ಸಲ್ಲಿಕೆ

  • ಪ್ರಕೃತಿಯಿಂದಲೇ ಕೈಬೀಸಿ ಕರೆಯೋ ನೈನಿತಾಲ್‌ಗೆ ಬರೋ ಪ್ರವಾಸಿಗರ ಸಂಖ್ಯೆ ಕುಸಿತ – ಯಾಕೆ?

    ಪ್ರಕೃತಿಯಿಂದಲೇ ಕೈಬೀಸಿ ಕರೆಯೋ ನೈನಿತಾಲ್‌ಗೆ ಬರೋ ಪ್ರವಾಸಿಗರ ಸಂಖ್ಯೆ ಕುಸಿತ – ಯಾಕೆ?

    ಭಾರತದಲ್ಲಿರುವ ಪ್ರತಿಯೊಂದು ಪ್ರವಾಸಿ ತಾಣವು ಒಂದಕ್ಕೊಂದು ಭಿನ್ನವಾಗಿದೆ. ದಕ್ಷಿಣ ಭಾರತವು ಸಮುದ್ರ, ದ್ವೀಪಗಳು, ಪರ್ವತ ಶಿಖರಗಳು, ಪಶ್ಚಿಮ ಹಾಗೂ ಪೂರ್ವ ಘಟ್ಟಗಳಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇದೇ ರೀತಿ ಉತ್ತರ ಭಾರತವು ನೈಸರ್ಗಿಕ ತಾಣಗಳು, ಹಿಮಾಲಯ ಪರ್ವತ ಶ್ರೇಣಿಗಳು, ಪ್ರಮುಖ ದೇವಾಲಯಗಳು ಹಾಗೂ ವಿಭಿನ್ನ ಸರೋವರಗಳನ್ನು ತನ್ನಲ್ಲಿ ಸೃಷ್ಟಿಸಿಕೊಂಡಿದೆ. ಈ ಪೈಕಿ ಉತ್ತರ ಭಾರತದ ಪ್ರಸಿದ್ಧ ಪ್ರವಾಸಿ ತಾಣವಾದ ನೈನಿತಾಲ್  (Nainital) ಪ್ರವಾಸಿಗರನ್ನು ಪ್ರಕೃತಿ ಸೌಂದರ್ಯದ ಮೂಲಕ ತನ್ನೆಡೆಗೆ ಸೆಳೆಯುತ್ತಿದೆ.

    ಇತ್ತೀಚಿನ ದಿನಗಳಲ್ಲಿ ಅಲ್ಲ…. ಮೊದಲಿನಿಂದಲೂ ನೈನಿತಾಲ್‌ಗೆ ಪ್ರವಾಸಕ್ಕೆಂದು ಹೊರಡುವ ಜನರ ಸಂಖ್ಯೆ ಹೆಚ್ಚು. ಹೀಗಿರುವಾಗ ಇತ್ತೀಚಿನ ದಿನಗಳಲ್ಲಿ ನೈನಿತಾಲ್ ಸೇರಿದಂತೆ ಉತ್ತರ ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಪ್ರವಾಸಿಗರನ್ನು ನಂಬಿಕೊಂಡ ಅಲ್ಲಿನ ಜನರ ಆರ್ಥಿಕ ಸ್ಥಿತಿ ಸಮಸ್ಯೆಗೀಡಾಗುತ್ತಿದೆ.

    ನೈನಿತಾಲ್:
    ಉತ್ತರಾಖಂಡದ (Uttarakhand) ಕುಮಾವುನ್ ಪ್ರದೇಶದಲ್ಲಿ ಕಂಡುಬರುವ ಒಂದು ಪ್ರವಾಸಿ ತಾಣವೆಂದರೆ ಅದು ನೈನಿತಾಲ್. ಇದನ್ನು ಸರೋವರಗಳ ನಗರ ಎಂದು ಕರೆಯಲಾಗುತ್ತದೆ. ಜೊತೆಗೆ ಸುಂದರವಾದ ಗಿರಿಧಾಮವನ್ನು ಇದು ಒಳಗೊಂಡಿದೆ. ಇಲ್ಲಿರುವ ಹಿಮಪರ್ವತಗಳು ಈ ಪ್ರದೇಶದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ನೈನಾದೇವಿ ದೇವಾಲಯ ದೇವಿಯ ಶಕ್ತಿಪೀಠಗಳಲ್ಲಿ ಒಂದು. ಇನ್ನೂ ನವವಿವಾಹಿತರಿಗೆ ಇದು ಹನಿಮೂನ್‌ಗೆ ಒಂದು ಬೆಸ್ಟ್ ಆಯ್ಕೆ ಅಂತಾನೆ ಹೇಳಬಹುದು. ನೈನಿತಾಲ್ ಸರೋವರ ಸಿಹಿ ನೀರಿನ ಸರೋವರವಾಗಿದ್ದು, ಈ ಸರೋವರದಲ್ಲಿ ದೋಣಿ ವಿಹಾರ ಒಳ್ಳೆಯ ಅನುಭವವನ್ನು ನೀಡುತ್ತದೆ. ಈ ಸರೋವರ ಹಚ್ಚಹಸಿರಿನ ಪರ್ವತ ಶ್ರೇಣಿಗಳಿಂದ ಆವೃತ್ತವಾಗಿದ್ದು, ಅರ್ಧಚಂದ್ರನಂತೆ ಹರಿದು ಹೋಗುತ್ತದೆ. ನೈನಿತಾಲ್‌ನಲ್ಲಿ ಔಲಿ ಎಂಬ ತಾಣ, ನಂದಾದೇವಿ ರಾಷ್ಟ್ರೀಯ ಉದ್ಯಾನವನ, ಕೌಸನಿ, ಬಿನ್ಸರ್ ವನ್ಯಜೀವಿಧಾಮ, ಅಲ್ಮೋರಾ ಹೀಗೆ ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡಬಹುದು.

    ನೈನಿತಾಲ್‌ಗೆ ಹೋಗುವುದಾದರೆ ಉತ್ತರಾಖಂಡದ ಪಂತನಗರದ ವಿಮಾನ ನಿಲ್ದಾಣಕ್ಕೆ ತಲುಪಿ, ಅಲ್ಲಿಂದ ಟ್ಯಾಕ್ಸಿಗಳ ಮೂಲಕ ತಲುಪಬಹುದು. ಇನ್ನೂ ರೈಲಿನ ಮೂಲಕ ಹೋಗುವುದಾದರೆ ಕತ್ಗೊಡಮ್ ರೈಲ್ವೆ ನಿಲ್ದಾಣಕ್ಕಿಳಿದು ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ತಲುಪಬಹುದು. ಇನ್ನೂ ದೆಹಲಿಯಿಂದ 6-7 ಗಂಟೆಗಳಲ್ಲಿ ಕಾರು ಅಥವಾ ಇನ್ನಿತರ ವಾಹನಗಳ ಮೂಲಕ ತಲುಪಬಹುದು. ಇಂತಹ ಅದ್ಭುತ ತಾಣಗಳನ್ನು ಒಳಗೊಂಡಿರುವ ನೈನಿತಾಲ್‌ಗೆ ಬೇಸಿಗೆ ತಿಂಗಳಲ್ಲಿ (ಮೇ-ಜೂನ್) ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಈ ಬಾರಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದ್ದು, ಪ್ರಶ್ನೆಯನ್ನು ಹುಟ್ಟು ಹಾಕಿದೆ.

    ಈ ಕುರಿತು ನೈನಿತಾಲ್ ಅಸೋಸಿಯೇಷನ್‌ನ ಅಧ್ಯಕ್ಷ ದಿಗ್ವಿಜಯ ಸಿಂಗ್ ಮಿಷ್ತ ಮಾತನಾಡಿ, ಈ ಬಾರಿ ಇಲ್ಲಿನ ಹೋಟೆಲ್ ಮತ್ತು ರೆಸಾರ್ಟ್ ಬುಕ್ಕಿಂಗ್‌ಗಳಲ್ಲಿ ಭಾರಿ ಕುಸಿತ ಕಂಡಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಶೇಕಡ 90ರಷ್ಟು ಕುಸಿತ ಕಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಅಡ್ವಾನ್ಸ್ ಬುಕಿಂಗ್ ಮಾಡಿದ್ದ ಪ್ರವಾಸಿಗರು ತಮ್ಮ ಬುಕಿಂಗ್‌ಗಳನ್ನು ರದ್ದುಗೊಳಿಸಿದ್ದಾರೆ. ಈ ಬಾರಿ ಕುಸಿತ ಕಂಡ ಹಾಗೆ ಈತನಕ ನೈನಿತಾಲ್‌ನಲ್ಲಿ ಯಾವತ್ತೂ ಆಗಿರಲಿಲ್ಲ ಎಂದು ತಿಳಿಸಿದ್ದಾರೆ.

    ಹೌದು, ಇದಕ್ಕೆಲ್ಲ ಒಂದು ಭೀಕರ ಕಾರಣವಿದೆ. ಈ ಬಾರಿ ಏ.22 ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕರು ನಡೆಸಿದ ಹಿಂದೂಗಳ ನರಮೇಧದಲ್ಲಿ 26 ನಾಗರಿಕರು ಸಾವನ್ನಪ್ಪಿದರು. ಇದು ದೇಶಾದ್ಯಂತ ಭಯದ ವಾತಾವರಣ ಸೃಷ್ಟಿಸಿತ್ತು. ಜೊತೆಗೆ ಈ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿತ್ತು. ಹೀಗಾಗಿ ಪ್ರಾಣ ಭಯದಿಂದಾಗಿ ಈ ಕುಸಿತ ಉಂಟಾಗಿದೆ. ಇದೇ ಮೇ 1ರಂದು ನೈನಿತಾಲ್‌ನಲ್ಲಿ 12 ವರ್ಷದ ಬಾಲಕಿ ಮೇಲೆ 60 ವರ್ಷದ ವೃದ್ಧರೊಬ್ಬರು ಹಲ್ಲೆ ನಡೆಸಿದ್ದರು. ಈ ಕಾರಣದಿಂದಾಗಿ ಅಲ್ಲಿ ಕೋಮುಗಲಭೆ ಉಂಟಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಜೊತೆಗೆ ಪ್ರತಿಭಟನೆಗಳು ಹಾಗೂ ಕೃತ್ಯಗಳಿಗೆ ಕಾರಣವಾಯಿತು. ಈ ಪ್ರತಿಭಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ, ಭಯ ಸೃಷ್ಟಿಸಿತ್ತು. ಹೀಗಾಗಿ ಈ ಕುಸಿತ ಕಂಡು ಬಂದಿದೆ.

    ಆದರೆ ಸದ್ಯದ ಪರಿಸ್ಥಿತಿಯಲ್ಲಿ ನೈನಿತಾಲ್ ಸಂಪೂರ್ಣವಾಗಿ ಸುರಕ್ಷಿತವಾಗಿದ್ದರೂ, ಕೆಲವು  ಕಾರಣಗಳಿಂದ ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ನೈನಿತಾಲ್‌ಗೆ ತೆರಳಲು ಸುಮಾರು 10 ಕಿ.ಮೀ ದೂರದಲ್ಲಿ ವಾಹನ ನಿಲುಗಡೆ ಮಾಡಲು ಅವಕಾಶವಿದೆ. ಹೀಗಾಗಿ ಅನೇಕರಿಗೆ ಇದು ಅನಾನುಕೂಲತೆ ಉಂಟು ಮಾಡಿದೆ. ಸರ್ಕಾರಿ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕಿಂಗ್ ಶುಲ್ಕ ದಿನಕ್ಕೆ 130 ರೂ.ಯಿಂದ 500 ರೂ.ಗೆ ಏರಿಕೆಯಾಗಿದೆ. ಜೊತೆಗೆ ಟೋಲ್‌ಗಳನ್ನು ಹೆಚ್ಚಿಸಲಾಗಿದೆ. ಹೀಗಾಗಿ ನೈನಿತಾಲ್ ಪ್ರಯಾಣ ಹಲವು ಸಮಸ್ಯೆಗಳಿಂದ ಕೂಡಿದೆ. ಇದೆಲ್ಲಾ ಕಾರಣಗಳಿಂದಾಗಿ ಪ್ರವಾಸಿಗರು ಕಾಶ್ಮೀರದ ಹಲವು ಪ್ರವಾಸಿ ತಾಣಗಳು ಸೇರಿದಂತೆ ಸುತ್ತಮುತ್ತಲಿನ ರಾಜ್ಯಗಳಿಗೆ ಪ್ರವಾಸಕ್ಕೆ ಭೇಟಿ ನೀಡಲು ಹಿಂಜರಿಯುತ್ತಿದ್ದಾರೆ.