Tag: ಪಶ್ಚಿಮ ಘಟ್ಟಗಳು

  • ಪಶ್ಚಿಮ ಘಟ್ಟವನ್ನು ಕಾಶ್ಮೀರವಾಗಿಸಿದ ಮಳೆಯ ಮಂಜು

    ಪಶ್ಚಿಮ ಘಟ್ಟವನ್ನು ಕಾಶ್ಮೀರವಾಗಿಸಿದ ಮಳೆಯ ಮಂಜು

    – (ಚಿತ್ರ ಕೃಪೆ: ಗೋಪಿಜೋಲಿ)

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಾಗದಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ನ.1 ರ ವರೆಗೂ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆ ಬೀಳುವ ಸೂಚನೆ ನೀಡಿದ್ದು, ಮಂಜು ಮುಸುಕಿದ ವಾತಾವರಣ ಹಾಗೂ ಚಳಿ ಬೀಳುವ ಸೂಚನೆ ನೀಡಿದೆ.

    ಹೌದು, ಕಳೆದ ಮೂರ್ನಾಲ್ಕು ದಿನದಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಆಗಾಗ ಮಳೆ ಸುರಿದರೆ ಮುಂಜಾನೆ ಮತ್ತು ಸಂಜೆ ವೇಳೆ ದಟ್ಟ ಮಂಜು ಆವರಿಸುವ ಮೂಲಕ ಕರಾವಳಿಯನ್ನು ಕಾಶ್ಮೀರದ ಸೊಬಗಿಗೆ ವಾತಾವರಣ ಬದಲಿಸಿದೆ.

    ಕರಾವಳಿಯ ಕಾಶ್ಮೀರ ಎಂದು ಉತ್ತರ ಕನ್ನಡ ಜಿಲ್ಲೆಗೆ ಪರ್ಯಾಯ ಹೆಸರುಂಟು. ಈ ಹೆಸರಿಗೆ ತಕ್ಕಂತೆ ಇದೀಗ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲು ಸೇರಿದಂತೆ ಕರಾವಳಿ ಭಾಗದಲ್ಲಿ ಮಂಜಿನ ವಾತಾವರಣ ಸೃಷ್ಟಿಯಾಗಿದ್ದು, ಕುಮಟಾದ ಗೋಪಿ ಅವರ ಕ್ಯಾಮೆರಾ ಕಣ್ಣಲ್ಲಿ ಸುಂದರ ದೃಶ್ಯಗಳು ಸೆರೆಯಾಗಿವೆ.

  • ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ – ಸಕಲೇಶಪುರ ಭೂ ಕುಸಿತಕ್ಕೆ ಎತ್ತಿನಹೊಳೆ ಯೋಜನೆಯ ಅಣೆಕಟ್ಟುಗಳೇ ಕಾರಣವೇ?

    ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ – ಸಕಲೇಶಪುರ ಭೂ ಕುಸಿತಕ್ಕೆ ಎತ್ತಿನಹೊಳೆ ಯೋಜನೆಯ ಅಣೆಕಟ್ಟುಗಳೇ ಕಾರಣವೇ?

    ಮಂಗಳೂರು: ಪಶ್ಚಿಮ ಘಟ್ಟಗಳಲ್ಲಿ ಅಲ್ಲಲ್ಲಿ ಭೂಕುಸಿತ ಆಗುತ್ತಿರುವುದಕ್ಕೆ ಎತ್ತಿನಹೊಳೆ ಯೋಜನೆ ಹೆಸರಲ್ಲಿ ಅಣೆಕಟ್ಟುಗಳನ್ನು ಕಟ್ಟಿದ್ದೇ ಕಾರಣ ಎನ್ನುವುದು ಪರಿಸರ ತಜ್ಞರ ಮಾತು. ಹೀಗಾಗಿ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ಮಾಡಲು ಸಕಲೇಶಪುರ ವ್ಯಾಪ್ತಿಯ ಎಂಟು ಕಡೆ ನಿರ್ಮಿಸಲಾಗುತ್ತಿರುವ ಅಣೆಕಟ್ಟು ಪ್ರದೇಶಕ್ಕೆ ತೆರಳಿ ನೋಡಿದಾಗ, ಅಲ್ಲಿ ಭೂಕುಸಿತ ಆಗಿರುವುದು ಕಂಡುಬಂದಿದೆ.

    ಅಣೆಕಟ್ಟು ನಿರ್ಮಾಣಕ್ಕಾಗಿ ಗುಡ್ಡ ಅಗೆದಿರುವ ಪ್ರದೇಶದಲ್ಲಿ ಕುಸಿತ ಆಗಿದ್ದಲ್ಲದೆ, ಆಸುಪಾಸಿನ ಬೆಟ್ಟಗಳ ಮಧ್ಯೆಯೂ ಭೂಮಿ ಕುಸಿಯುತ್ತಿರುವುದು ಬೆಳಕಿಗೆ ಬಂದಿದೆ. ನೇತ್ರಾವತಿ ಉಗಮಗೊಳ್ಳುವ ಪ್ರದೇಶಗಳಲ್ಲಿಯೇ ಈ ಅಣೆಕಟ್ಟುಗಳಿದ್ದು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗುತ್ತಿದೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸುತ್ತಿರುವುದು, ಗುಡ್ಡ ಅಗೆದಿರುವುದು ದುರಂತಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳೀಯ ಜನ ಹೇಳಿದ್ದಾರೆ.

    ಬಯಲು ಸೀಮೆಗೆ ನೀರು ಹರಿಸಲು ಹಾಕಿರುವ ಪೈಪ್ ಲೈನ್ ಕೂಡ ಕುಸಿದು ಬಿದ್ದಿದೆ. ಕನಿಷ್ಠ ಪಿಲ್ಲರ್ ಕೂಡ ಇಲ್ಲದೆ ಹಾಕಿರುವ ಪೈಪ್ ಲೈನ್ ಬೇಜವಾಬ್ದಾರಿಯ ಕಾಮಗಾರಿ ಅನ್ನುವುದಕ್ಕೆ ಸಾಕ್ಷ್ಯ ಹೇಳುತ್ತಿದೆ. ಸಕಲೇಶಪುರದ ಮಾರನಹಳ್ಳಿಯಲ್ಲಿ ಬೃಹತ್ ಪಂಪ್ ಹೌಸ್ ಕಾಮಗಾರಿ ನಡೆಯುತ್ತಿದೆ. ಅಲ್ಲಿಯೂ ಗುಡ್ಡ ಕುಸಿಯುತ್ತಿದ್ದು, ಆತಂಕದಲ್ಲಿಯೇ ಕೆಲಸಗಾರರು ಕೆಲಸದಲ್ಲಿ ನಿರತರಾಗಿದ್ದಾರೆ.

    ಅವೈಜ್ಞಾನಿಕ ಯೋಜನೆಯಿಂದ ಸಕಲೇಶಪುರದಲ್ಲಿಯೂ ಕೊಡಗಿನ ಮಾದರಿಯಲ್ಲೇ ಭೂಕುಸಿತ ಆಗುವ ಭಯ ಸ್ಥಳೀಯರಲ್ಲಿದೆ. ಹೀಗಾಗಿ ಎತ್ತಿನಹೊಳೆ ಯೋಜನೆಯನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿ ಸಕಲೇಶಪುರ ವಿಭಾಗಾಧಿಕಾರಿಗೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಶ್ಚಿಮ ಘಟ್ಟಗಳ ಶ್ರೇಣಿಗಳಲ್ಲಿ ಕಾಣಿಸಿಕೊಂಡ ಬಿರುಕು

    ಪಶ್ಚಿಮ ಘಟ್ಟಗಳ ಶ್ರೇಣಿಗಳಲ್ಲಿ ಕಾಣಿಸಿಕೊಂಡ ಬಿರುಕು

    ಮಂಗಳೂರು: ಪಶ್ಚಿಮ ಘಟ್ಟಗಳ ಶ್ರೇಣಿಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮತ್ತಷ್ಟು ಭೂ-ಕುಸಿತವಾಗುವ ಸಾಧ್ಯತೆ ಹೆಚ್ಚಾಗಿರುವುದಾಗಿ ತಿಳಿದು ಬಂದಿದೆ.

    ಹೌದು, ಕೊಡಗಿನ ಗಡಿಭಾಗದ ಗಾಳಿಬೀಡು, ವಣಚ್ಚಲ್ ಬೆಟ್ಟಗಳ ತುದಿಯಲ್ಲಿ ಭಾರೀ ಬಿರುಕು ಬಿಟ್ಟಿದ್ದಲ್ಲದೆ, ಹಲವು ಎಕರೆಗಟ್ಟಲೇ ಭೂ-ಕುಸಿತವಾಗಿರುವುದು ಬೆಳಕಿಗೆ ಬಂದಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಆರ್ ಪಿಐ ಗಣೇಶ್ ಜೊತೆ ಸುಳ್ಯದ ಸ್ವಯಂ ಸೇವಕರ ತಂಡ ಬೆಟ್ಟದ ತುದಿಗೆ ತೆರಳಿದ್ದಾಗ ಬೆಟ್ಟಗಳ ತುದಿಯಲ್ಲಿ ಭಾರೀ ಬಿರುಕು ಬಿಟ್ಟಿರುವುದು ಕಂಡುಬಂದಿದೆ. ಹೀಗಾಗಿ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ಮತ್ತಷ್ಟು ಭೂಕುಸಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ಈಗಾಗಲೇ ಬೆಟ್ಟಗಳ ತಪ್ಪಲು ಪ್ರದೇಶದ ಜೋಡುಪಾಲ, ಮದೆನಾಡು ಮತ್ತು ಮೊಣ್ಣಂಗೇರಿ ಗ್ರಾಮಗಳಲ್ಲಿ ಭೂಕುಸಿತದಿಂದ ನೂರಾರು ಮನೆಗಳು ನೆಲ ಸಮವಾಗಿವೆ. ಅಲ್ಲದೇ ಸಮುದ್ರ ಮಟ್ಟದಿಂದ 5 ಸಾವಿರ ಅಡಿ ಎತ್ತರದಲ್ಲಿರುವ ನಿಸರ್ಗ ರಮಣೀಯ ತಾಣವೆಂದೇ ಬಣ್ಣಿಸುವ ಶೋಲಾ ಕಾಡುಗಳಲ್ಲಿ ಭಾರೀ ಬಿರುಕು ಕಾಣಿಸಿಕೊಂಡಿದ್ದು, ಸುತ್ತಮುತ್ತ ಗ್ರಾಮಗಳ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv