Tag: ಪಶ್ಚಿಮಾ ಬಂಗಾಳ

  • ಕೇರಳ, ಪಶ್ಚಿಮ ಬಂಗಾಳದಲ್ಲಿ 11 ಕಡೆ ದಾಳಿ – 9 ಉಗ್ರರ ಬಂಧನ

    ಕೇರಳ, ಪಶ್ಚಿಮ ಬಂಗಾಳದಲ್ಲಿ 11 ಕಡೆ ದಾಳಿ – 9 ಉಗ್ರರ ಬಂಧನ

    – ತಪ್ಪಿತು ಉಗ್ರರ ದಾಳಿ

    ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಅಧಿಕಾರಿಗಳು ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ 11 ಕಡೆ ದಾಳಿ ಮಾಡಿ 9 ಜನ ಉಗ್ರರನ್ನು ಇಂದು ಬಂಧಿಸಿದ್ದಾರೆ.

    ಅಲ್-ಖೈದಾ ಉಗ್ರ ಸಂಘಟನೆಗೆ ಸೇರಿದ 9 ಮಂದಿ ಉಗ್ರರನ್ನು ಎನ್‍ಐಎ ಅರೆಸ್ಟ್ ಮಾಡಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮತ್ತು ಕೇರಳದ ಎರ್ನಾಕುಲಂನಿಂದ ಒಂಬತ್ತು ಭಯೋತ್ಪಾದಕರನ್ನು ಬಂಧಿಸಲಾಗಿದೆ. ಆರು ಮಂದಿಯನ್ನು ಪಶ್ಚಿಮ ಬಂಗಾಳದಿಂದ ಬಂಧಿಸಲಾಗಿದ್ದು, ಉಳಿದ ಮೂವರನ್ನು ಕೇರಳದಿಂದ ಅರೆಸ್ಟ್ ಮಾಡಲಾಗಿದೆ ಎಂದು ಮಾಹಿತಿ ಲಭಿಸಿದೆ.

    ಬಂಧಿತ ಭಯೋತ್ಪಾದಕರನ್ನು ಕೇರಳದ ಎರ್ನಾಕುಲಂ ಮೂಲದವರಾದ ಮುರ್ಷಿದ್ ಹಸನ್, ಇಯಾಕುಬ್ ಬಿಸ್ವಾಸ್, ಮೊಸರಾಫ್ ಹುಸೈನ್ ಮತ್ತು ಪಶ್ಚಿಮಾ ಬಂಗಾಳದ ಮುರ್ಷಿದಾಬಾದ್ ಮೂಲಕದ ನಜ್ಮಸ್ ಸಕೀಬ್, ಅಬು ಸುಫಿಯಾನ್, ಮೈನುಲ್ ಮೊಂಡಾಲ್, ಲ್ಯುಯೆನ್ ಅಹ್ಮದ್, ಅಲ್ ಮಾಮುನ್ ಕಮಲ್ ಮತ್ತು ಅತಿತೂರ್ ರೆಹಮಾನ್ ಎಂದು ಗುರುತಿಸಲಾಗಿದೆ.

    ಈ ವಿಚಾರವಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಎನ್‍ಐಎ, ಪ್ರಾಥಮಿಕ ತನಿಖೆಯ ಪ್ರಕಾರ, ಈ ವ್ಯಕ್ತಿಗಳನ್ನು ಪಾಕಿಸ್ತಾನ ಮೂಲದ ಅಲ್-ಖೈದಾ ಉಗ್ರ ಸಂಘಟನೆಗೆ ಸೇರಿದ ಭಯೋತ್ಪಾದಕರು ಎಂದು ತಿಳಿದು ಬಂದಿದೆ. ಇವರನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರೇರೇಪಿಸಿ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಎನ್‍ಐಎ ತಿಳಿಸಿದೆ.

    ಈ ಭಯೋತ್ಪಾದಕರ ಸಂಘ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಹಣವನ್ನು ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿತ್ತು. ಇದರಲ್ಲಿ ಕೆಲ ಉಗ್ರರು ಹಣ ಬಂದ ನಂತರ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲು ದೆಹಲಿಗೆ ಪ್ರಯಾಣಿಸಲು ಯೋಜನೆ ರೂಪಿಸಿದ್ದರು. ಸದ್ಯ ಖಚಿತ ಮಾಹಿತಿ ಮೇರೆಗೆ ದೇಶದ ವಿವಿಧ ಭಾಗಗಳಲ್ಲಿ ಇವರನ್ನು ಬಂಧಿಸಿದ್ದು, ದೇಶದಲ್ಲಿ ನಡೆಯಬೇಕಿದ್ದ ಹಲವಾರು ಭಯೋತ್ಪಾದಕ ದಾಳಿಗಳು ನಿಂತು ಹೋಗಿವೆ ಎಂದು ಎನ್‍ಐಎ ಹೇಳಿದೆ.

    ಬಂಧಿತರಿಂದ ಡಿಜಿಟಲ್ ಸಾಧನಗಳು, ದಾಖಲೆಗಳು, ಜಿಹಾದಿ ಸಾಹಿತ್ಯ, ತೀಕ್ಷ್ಣವಾದ ಶಸ್ತ್ರಾಸ್ತ್ರಗಳು, ದೇಶೀಯ ನಿರ್ಮಿತ ಬಂದೂಕುಗಳು, ಸ್ಥಳೀಯವಾಗಿ ತಯಾರಿಸಿದ ದೇಹದ ರಕ್ಷಾಕವಚ, ಮನೆಯಲ್ಲಿ ತಯಾರಿಸಿದ ಸ್ಫೋಟಕ ಸಾಧನಗಳು, ತಯಾರಿಸಲು ಬಳಸುವ ಪುಸ್ತಕಗಳು ಸೇರಿದಂತೆ ಹೆಚ್ಚಿನ ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‍ಐಎ ಮಾಹಿತಿ ನೀಡಿದೆ.

  • ರಿಯಾ ಬಂಗಾಳದ ಮಗಳು – ಚಕ್ರವರ್ತಿ ಬೆನ್ನಿಗೆ ನಿಂತ ಕಾಂಗ್ರೆಸ್

    ರಿಯಾ ಬಂಗಾಳದ ಮಗಳು – ಚಕ್ರವರ್ತಿ ಬೆನ್ನಿಗೆ ನಿಂತ ಕಾಂಗ್ರೆಸ್

    – ರಾಜಕೀಯ ತಿರುವು ಪಡೆದುಕೊಂಡ ಪ್ರಕರಣ

    ಕೋಲ್ಕತ್ತಾ: ಡ್ರಗ್ಸ್ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಬಾಲಿವುಡ್ ನಟಿ ರಿಯಾ ಚಕ್ರವರ್ತಿಯ ಬೆನ್ನಿಗೆ ಪಶ್ಚಿಮಾ ಬಂಗಾಳದ ಕಾಂಗ್ರೆಸ್ ನಿಂತುಕೊಂಡಿದ್ದು, ಆಕೆ ಪರವಾಗಿ ರ್ಯಾಲಿ ಕೂಡ ಮಾಡಿದೆ.

    ಕಳೆದ ಜೂನ್ ತಿಂಗಳಲ್ಲಿ ಮೃತಪಟ್ಟ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಫೋಟೋವನ್ನು ಬಿಹಾರದಲ್ಲಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಈಗ ನಟಿ ರಿಯಾ ಚಕ್ರವರ್ತಿ ಪಶ್ಚಿಮಾ ಬಂಗಾಳ ಮೂಲದವಳಾದ ಕಾರಣ ಬಂಗಾಳದ ಕಾಂಗ್ರೆಸ್ ಆಕೆಯ ಪರವಾಗಿ ನಿಂತಿದೆ.

    ರಿಯಾ ಬಂಗಾಳದ ಮಗಳು ಎಂಬ ಬ್ಯಾನರ್ ಹಿಡಿದು ಕಾಂಗ್ರೆಸ್ ಪಕ್ಷ ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರ ಸೂಚನೆಯ ಮೇರೆಗೆ ಪ್ರಾಂತೀಯ ಕಾಂಗ್ರೆಸ್ ಕಚೇರಿಯಿಂದ ವೆಲ್ಲಿಂಗ್ಟನ್ ಜಂಕ್ಷನ್‍ಗೆ ಪ್ರತಿಭಟನೆ ನಡಸಿದೆ. ಜೊತೆಗೆ ಬಂಗಾಳದ ಮಗಳು ರಿಯಾ ಚಕ್ರವರ್ತಿ ವಿರುದ್ಧ ರಾಜಕೀಯ ಪಿತೂರಿ ಮತ್ತು ಪ್ರತೀಕಾರದ ನಡವಳಿಕೆಯನ್ನು ನಾವು ಸಹಿಸಲಾಗುವುದಿಲ್ಲ ಎಂದು ಕಾಂಗ್ರೆಸ್ ಪಕ್ಷ ಶನಿವಾರ ಟ್ವೀಟ್ ಕೂಡ ಮಾಡಿದೆ.

    ಈ ವಿಚಾರವಾಗಿ ಮಾತನಾಡಿರುವ ಪಶ್ಚಿಮ ಬಂಗಾಳ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಧೀರ್ ರಂಜನ್ ಚೌಧರಿ, ಮೃತ ಸುಶಾಂತ್ ಸಿಂಗ್ ರಜಪೂತ್ ಓರ್ವ ಭಾರತೀಯ ನಟ. ಆದರೆ ಆತನನ್ನು ಬಿಹಾರದ ಬಿಜೆಪಿ ಪಕ್ಷ ಬಿಹಾರದ ನಟ ಎಂಬಂತೆ ಬಿಂಬಿಸುತ್ತಿದೆ. ಜೊತೆಗೆ ಇದರಿಂದ ರಾಜಕೀಯ ಲಾಭ ಪಡೆಯಲು ಮುಂದಾಗಿದೆ. ಹೀಗಾಗಿ ರಿಯಾಳನ್ನು ಸುಶಾಂತ್ ಪ್ರಕರಣದಲ್ಲಿ ಅರೆಸ್ಟ್ ಮಾಡದೇ ಆಕೆಯನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದಾರೆ.

    ಜೂನ್ ತಿಂಗಳಲ್ಲಿ ತನ್ನ ಮುಂಬೈನ ಮನೆಯಲ್ಲೇ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಇದಾದ ಬಳಿಕ ಆತನನ್ನು ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ನಂತರ ಸುಶಾಂತ್ ತಂದೆ ನಟಿ ರಿಯಾ ಚಕ್ರವರ್ತಿ ವಿರುದ್ಧ ಬಿಹಾರದಲ್ಲಿ ದೂರು ನೀಡಿದ್ದರು. ಆದರೆ ಸುಶಾಂತ್ ವಿಚಾರದಲ್ಲಿ ಮುಂಬೈ ಪೊಲೀಸರು ಸರಿಯಾದ ತನಿಖೆ ಮಾಡುತ್ತಿಲ್ಲ ಎಂದು ಆರೋಪ ಕೇಳಿ ಬಂದಿತ್ತು.

    ಈ ನಡುವೆ ಸುಶಾಂತ್ ಸಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಸಾಮಾಜಿಕ ಜಾಲತಾಣದ ಮೂಲಕ ಜನರು ಕೇಳಿಕೊಂಡಿದ್ದರು. ಜೊತೆಗೆ ಬಿಹಾರದ ಮುಖ್ಯ ಮಂತ್ರಿ ನಿತೀಶ್ ಕುಮಾರ್ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು. ಕೊನೆಗೂ ಸುಪ್ರೀಂ ಕೋರ್ಟ್ ಸುಶಾಂತ್ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಇಲ್ಲಿಂದ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು.

    ಸದ್ಯ ರಿಯಾ ಚಕ್ರವರ್ತಿಯನ್ನು ಎನ್‍ಸಿಬಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಆಕೆ ಜಾಮೀನು ಆರ್ಜಿ ಕೋರ್ಟಿನಲ್ಲಿ ವಜಾ ಆದ ಕಾರಣ ಆಕೆ ಸದ್ಯ ಬೈಲಕುಲ್ಲಾ ಜೈಲಿನಲ್ಲಿ ಇದ್ದಾಳೆ. ವಿಚಾರಣೆ ವೇಳೆ ನನ್ನ ಜೊತೆ ನಟಿ ರಕುಲ್ ಪ್ರೀತ್ ಸಿಂಗ್, ಸಾರಾ ಅಲಿಖಾನ್, ಡಿಸೈನರ್ ಸಿಮೋನ್ ಖಂಬಟ್ಟಾ, ಸುಶಾಂತ್ ಗೆಳತಿ, ಮಾಜಿ ಮ್ಯಾನೇಜರ್ ರೋಹಿಣಿ ಅಯ್ಯರ್ ಮತ್ತು ನಿರ್ಮಾಪಕ ಮುಕೇಶ್ ಛಾಬ್ರಾ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದು, ಎನ್‍ಸಿಬಿ ಅವರಿಗೆ ಸಮನ್ಸ್ ನೀಡಿದೆ.

    ಎನ್‍ಸಿಬಿ ವಿಚಾರಣೆ ವೇಳೆ ಪಾರ್ಟಿಗಳಲ್ಲಿ ಬಾಲಿವುಡ್ ಐವರು ಸೆಲೆಬ್ರಿಟಿಗಳು ನನ್ನ ಜೊತೆ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂಬ ವಿಚಾರವನ್ನ ರಿಯಾ ಹೊರ ಹಾಕಿದ್ದಾಳೆ ಎನ್ನಲಾಗಿದೆ. ರಿಯಾ ತನ್ನ ಹೇಳಿಕೆಯಲ್ಲಿ 25 ಕಲಾವಿದರ ಹೆಸರು ಹೇಳಿದ್ದಾರೆ ಎನ್ನಲಾಗಿದ್ದು, ಶೇ.80ರಷ್ಟು ಬಾಲಿವುಡ್ ಸ್ಟಾರ್ ಗಳು ಡ್ರಗ್ಸ್ ಸೇವನೆ ಮಾಡುತ್ತಿರುವ ಬಗ್ಗೆ ಎನ್‍ಸಿಬಿ ಅನುಮಾನ ವ್ಯಕ್ತಪಡಿಸಿದೆ. 15 ಜನ ಬಿ ಟೌನ್ ಸ್ಟಾರ್ ಗಳು ಮತ್ತು ಉಳಿದವರು ಬಿ ಕೆಟಗರಿ ಕಲಾವಿದರು ಎನ್ನಲಾಗಿದೆ.

  • ಕಾಲೇಜ್ ಮೆರಿಟ್ ಲಿಸ್ಟ್ – ಸನ್ನಿ ಲಿಯೋನ್, ಮಿಯಾ ಖಲೀಫಾ ಟಾಪರ್

    ಕಾಲೇಜ್ ಮೆರಿಟ್ ಲಿಸ್ಟ್ – ಸನ್ನಿ ಲಿಯೋನ್, ಮಿಯಾ ಖಲೀಫಾ ಟಾಪರ್

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕಾಲೇಜಿನ ಮೆರಿಟ್ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಮಾಜಿ ನೀಲಿ ಚಿತ್ರಗಳ ನಟಿ ಸನ್ನಿ ಲಿಯೋನ್ ಮತ್ತು ಮಿಯಾ ಖಲೀಫಾ ಅವರ ಹೆಸರು ಕಾಣಿಸಿಕೊಂಡಿದೆ.

    ಪಶ್ಚಿಮ ಬಂಗಾಳದ ಬಾರತಸ್ ಸರ್ಕಾರಿ ಕಾಲೇಜಿನಲ್ಲಿ ಶನಿವಾರ ಇಂಗ್ಲಿಷ್ ಆನರ್ಸ್ ವಿದ್ಯಾರ್ಥಿಗಳ ಮೆರಿಟ್ ಲಿಸ್ಟ್ ಅನ್ನು ಘೋಷಣೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಸನ್ನಿ ಲಿಯೋನ್ ಅವರ ಹೆಸರು ನೋಂದಣಿ ಸಂಖ್ಯೆ ಸಮೇತ ಟಾಪ್ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈ ವಿಚಾರವಾಗಿ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕಾಲೇಜು ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ.

    ಇನ್ನೊಂದು ಮುಜುಗರದ ಸಂಗತಿಯೆಂದರೆ ಈ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿ, ನೀಲಿ ಚಿತ್ರಗಳ ತಾರೆ ಮಿಯಾ ಖಲೀಫಾ ಮತ್ತು ಡ್ಯಾನಿ ಡೇನಿಯಲ್ ಅವರ ಹೆಸರು ಕಾಣಿಸಿಕೊಂಡಿದೆ. ಇವರ ನಂತರ ಮೂರನೇ ಸ್ಥಾನದಲ್ಲಿ ಸನ್ನಿ ಕಾಣಿಸಿಕೊಂಡಿದ್ದಾರೆ. ಇದರ ಬಗ್ಗೆ ಪ್ರತ್ಯೇಕವಾಗಿ ಇನ್ನೊಂದು ದೂರು ನೀಡಿರುವ ತೃಣಮೂಲ ಛತ್ರ ಪರಿಷತ್ ನಡೆಸುತ್ತಿರುವ ಕಾಲೇಜು ವಿದ್ಯಾರ್ಥಿ ಸಂಘವು ಶಿಕ್ಷಣ ಸಂಸ್ಥೆಯ ಬಗ್ಗೆ ಅಪಪ್ರಚಾರ ಮಾಡಲು ಪಟ್ಟಭದ್ರ ಹಿತಾಸಕ್ತಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿವೆ.

    ಇದಕ್ಕೂ ಮುನ್ನಾ ಶುಕ್ರವಾರ ಪಶ್ಚಿಮ ಬಂಗಾಳದ, ದಕ್ಷಿಣ 24 ಪರಗಣ ಜಿಲ್ಲೆಯ ಬಡ್ಜ್ ಬಡ್ಜ್ ಕಾಲೇಜಿನಲ್ಲಿ ಇಂಗ್ಲಿಷ್‍ನಲ್ಲಿ ಬಿಎ (ಆನರ್ಸ್)ಗೆ ಆಯ್ಕೆಯಾದ 157 ಅಭ್ಯರ್ಥಿಗಳ ಪಟ್ಟಿಯಲ್ಲೂ ಕೂಡ ಸನ್ನಿ ಲಿಯೋನ್ ಹೆಸರು ಕಂಡ ಬಂದಿತ್ತು. ಈ ಕಾಲೇಜಿನ ಪಟ್ಟಿಯಲ್ಲಿ ಸನ್ನಿ ಹೆಸರು 151ನೇ ಸ್ಥಾನದಲ್ಲಿತ್ತು. ಆದರೆ ಶನಿವಾರ ಮೊದಲ ಮೂರನೇ ಸ್ಥಾನದಲ್ಲಿ ನೀಲಿ ಚಿತ್ರದ ನಟ-ನಟಿಯ ಹೆಸರು ಇರುವ ಕಾಲೇಜು ಅಡಳಿತಕ್ಕೆ ಮುಜುಗರವನ್ನುಂಟು ಮಾಡಿದೆ.

    ಗುರುವಾರ ಕೋಲ್ಕತ್ತಾ ನಗರದಲ್ಲಿರುವ ಅಸುತೋಷ್ ಕಾಲೇಜಿನಲ್ಲೂ ಕೂಡ ಮೆರಿಟ್ ಲಿಸ್ಟ್ ಬಿಡುಗಡೆ ಮಾಡಿತ್ತು. ಇದರಲ್ಲೂ ಕೂಡ ಸನ್ನಿ ಲಿಯೋನ್ ಹೆಸರು ಕಾಣಿಸಿಕೊಂಡಿತ್ತು. ಈ ವಿಚಾರವಾಗಿ ಕಾಲೇಜು ಆಡಳಿತ ಮಂಡಳಿ ಲಾಲ್‍ಬಜಾರ್ ನಲ್ಲಿರುವ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಜೊತೆಗೆ ಆಂತರಿಕ ತನಿಖೆಯು ನಡೆಯಬೇಕು ಎಂದು ಕಾಲೇಜಿನ ಅಧಿಕಾರಿಯೊಬ್ಬರು ಪೊಲೀಸರಿಗೆ ಒತ್ತಾಯ ಮಾಡಿದ್ದರು.

    ಕೊರೊನಾ ವೈರಸ್ ಕಾರಣದಿಂದ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ, ಈ ವರ್ಷ ಪದವಿಪೂರ್ವ ಕೋರ್ಸ್‍ಗಳಿಗೆ ಪ್ರವೇಶಾತಿ ಸಂಪೂರ್ಣವಾಗಿ ಆನ್‍ಲೈನ್ ಆಗಿರುತ್ತದೆ. ಜೊತೆಗೆ ಯಾವುದೇ ಸಂಸ್ಕರಣಾ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಘೋಷಣೆ ಮಾಡಿತ್ತು. ಕೆಲವರು ಇದನ್ನು ದರುಪಯೋಗಪಡಿಸಿಕೊಳ್ಳುತ್ತಿದ್ದಾರೆ.

  • ಅಪ್ರಾಪ್ತ ಬಾಲಕಿಯ ರೇಪ್, ಮರ್ಡರ್ ಆರೋಪ – ಸ್ಥಳೀಯರಿಂದ ಹೆದ್ದಾರಿಯಲ್ಲಿ ಪ್ರತಿಭಟನೆ

    ಅಪ್ರಾಪ್ತ ಬಾಲಕಿಯ ರೇಪ್, ಮರ್ಡರ್ ಆರೋಪ – ಸ್ಥಳೀಯರಿಂದ ಹೆದ್ದಾರಿಯಲ್ಲಿ ಪ್ರತಿಭಟನೆ

    – ಪೊಲೀಸ್ ವಾಹನ ಸೇರಿ ಮೂರು ಬಸ್ಸುಗಳಿಗೆ ಬೆಂಕಿ

    ಕೋಲ್ಕತ್ತಾ: ಅಪ್ರಾಪ್ತ ಬಾಲಕಿಯನ್ನು ರೇಪ್ ಮಾಡಿ ಮರ್ಡರ್ ಮಾಡಿದ್ದಾರೆ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳದ ಚೋಪ್ರಾ ಗ್ರಾಮದವರು ಹೆದ್ದಾರಿಯನ್ನು ತಡೆದು ಪ್ರತಿಭಟನೆ ಮಾಡಿದ್ದಾರೆ.

    ಈಗ ತಾನೇ ಹತ್ತನೇ ತರಗತಿ ಪಾಸ್ ಆಗಿದ್ದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಸ್ಥಳೀಯರು ಮತ್ತು ಗ್ರಾಮಸ್ಥರು ಸೇರಿಕೊಂಡು ಕೋಲ್ಕತಾ ಮತ್ತು ಸಿಲಿಗುರಿ ನಡುವಿನ ನ್ಯಾಷನಲ್ ಹೈವೇ 32ನ್ನು ಬ್ಲಾಕ್ ಮಾಡಿದ್ದಾರೆ. ಜೊತೆಗೆ ಪೊಲೀಸ್ ವಾಹನ ಸೇರಿ ಮೂರು ಬಸ್ಸುಗಳಿಗೆ ಪ್ರತಿಭಟನಾಕರರು ಬೆಂಕಿ ಹಚ್ಚಿದ್ದಾರೆ. ಪರಿಣಾಮ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

    ಮೃತಪಟ್ಟ ಬಾಲಕಿಯ ಸಹೋದರಿ ಮಾತನಾಡಿ, ಆಕೆ ಈಗ ತಾನೇ ಹತ್ತನೇ ತರಗತಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಳು. ಆದರೆ ಕಳೆದ ರಾತ್ರಿ ಆಕೆ ಕಾಣೆಯಾಗಿದ್ದಳು ಎಂದು ಹೇಳಿದ್ದಾರೆ. ಗ್ರಾಮದಲ್ಲಿ ಹುಡುಕಾಡಿದ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿಲ್ಲ. ಆದರೆ ಆಕೆಯ ಮೃತದೇಹ ಊರಹೊರಗಿನ ಮರದ ಕೆಳಗೆ ದೊರಕಿತ್ತು. ಘಟನಾ ಸ್ಥಳದಲ್ಲಿ ಎರಡು ಬೈಕ್ ಮತ್ತು ಮೊಬೈಲ್ ಫೋನ್ ಸಿಕ್ಕ ಕಾರಣ ಸ್ಥಳೀಯರು ಯಾರೋ ರೇಪ್ ಮಾಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದಾರೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪಶ್ಚಿಮ ಬಂಗಾಳದ ಪೊಲೀಸರು, ನಾವು ಸ್ಥಳಕ್ಕೆ ಹೋಗಿ ಮೃತ ಬಾಲಕಿಯ ಶವವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೆವು. ಆದರೆ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಹುಡುಗಿಯ ದೇಹದಲ್ಲಿ ವಿಷ ಇರುವುದು ಪತ್ತೆಯಾಗಿದೆ. ಜೊತೆಗೆ ಆಕೆ ಮೃತದೇಹದ ಮೇಲೆ ಯಾವುದೇ ಗಾಯಗಳಿಲ್ಲ. ಆದ್ದರಿಂದ ಈಕೆಯ ಮೇಲೆ ಅತ್ಯಾಚಾರ ಆಗಿರುವುದಿಲ್ಲ. ಆದರೆ ಗ್ರಾಮಸ್ಥರು ಅನುಮಾನಗೊಂಡು ಈ ರೀತಿ ಪ್ರತಿಭಟನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಘಟನಾ ಸ್ಥಳದಲ್ಲಿ ಬೈಕ್ ಮತ್ತು ಫೋನ್ ಸಿಕ್ಕ ಕಾರಣ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಅದಕ್ಕೆ ಪ್ರತಿಭಟನೆ ಮಾಡಿದ್ದಾರೆ. ಜೊತೆಗೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ. ಪೊಲೀಸ್ ಲಾಠಿ ಚಾರ್ಜ್ ಮಾಡಿ ಸತತ ಮೂರು ಗಂಟೆಯ ನಂತರ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬಾಲಕಿ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

  • ಕೊರೊನಾ ಸಂಕಷ್ಟ ಕಾಲದಲ್ಲಿ ಚುನಾವಣಾ ತಾಲೀಮು- ಬದಲಾಯ್ತು ಪ್ರಚಾರ ತಂತ್ರ

    ಕೊರೊನಾ ಸಂಕಷ್ಟ ಕಾಲದಲ್ಲಿ ಚುನಾವಣಾ ತಾಲೀಮು- ಬದಲಾಯ್ತು ಪ್ರಚಾರ ತಂತ್ರ

    ಕೋಲ್ಕತ್ತಾ: ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ ಕೊರೊನಾ ಸಂಕಷ್ಟದ ನಡುವೆ ಚುನಾವಣಾ ತಾಲೀಮು ಆರಂಭವಾಗಿದ್ದು, ಬೃಹತ್ ವರ್ಚುವಲ್ ಚುನಾವಣಾ ರ‍್ಯಾಲಿಗಳು ನಡೆಸುವ ಬಗ್ಗೆ ಚಿಂತನೆಗಳು ಶುರುವಾಗಿದೆ.

    ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ಜುಲೈ 21ರಂದು ಪ್ರತಿವರ್ಷ ಹುತಾತ್ಮರ ದಿನಾಚರಣೆ ಆಚರಿಸುತ್ತಿದ್ದು, ಅಂದು ಬೃಹತ್ ಸಮಾವೇಶ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಸಂಕಷ್ಟ ಹಿನ್ನೆಲೆ ವರ್ಚುವಲ್ ತಂತ್ರಜ್ಞಾನದ ಮೂಲಕವೇ ಹುತಾತ್ಮರ ದಿನಾಚರಣೆ ಆಚರಿಸಲು ತಿರ್ಮಾನಿಸಿದೆ. ಅದೇ ಕಾರ್ಯಕ್ರಮದಲ್ಲಿ 2021ರ ವಿಧಾನಸಭೆ ಚುನಾವಣೆ ಪ್ರಚಾರಕ್ಕೂ ಚಾಲನೆ ಸಿಗಲಿದೆ ಎನ್ನಲಾಗಿದೆ.

    ಜುಲೈ 21ರಂದು ಮಧ್ಯಾಹ್ನ ಒಂದು ಗಂಟೆಗೆ ಪ್ರತಿ ಬೂತ್ ಮಟ್ಟದಲ್ಲಿ 30 ಕಾರ್ಯಕರ್ತರು ಸೇರಿ ಧ್ವಜ ಹಾರಿಸುವ ಮೂಲಕ ಹುತಾತ್ಮರ ಗೌರವ ಸಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಬಳಿಕ ಎರಡು ಗಂಟೆಯಿಂದ ಮೂರು ಗಂಟೆವರೆಗೂ ಸಿಎಂ ಮಮತಾ ಬ್ಯಾನರ್ಜಿ ಮಾತನಾಡಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 80 ಸಾವಿರ ಬೂತ್‍ಗಳಿದ್ದು ಸುಮಾರು 2.5 ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

    ಈಗಾಗಲೇ ಬಿಜೆಪಿ ಸಕ್ರಿಯವಾಗಿ ಕ್ಯಾಂಪೇನ್ ಆರಂಭಿಸಿದೆ. ಇತ್ತಿಚೇಗೆ ಗೃಹ ಸಚಿವ ಅಮಿತ್ ಶಾ ವಿಡಿಯೋ ಕಾನ್ಫರೆನ್ಸ್ ಮೂಲಕ ಜನ ಸಂವಾದ ಹೆಸರಿನಲ್ಲಿ ವರ್ಚುವಲ್ ರ‍್ಯಾಲಿ ನಡೆಸಿದ್ದರು. ಈ ಡಿಜಿಟಲ್ ರ‍್ಯಾಲಿಗಾಗಿ ಪಶ್ಚಿಮ ಬಂಗಾಳದ ಪ್ರಮುಖ ಸ್ಥಳಗಳಲ್ಲಿ 70,000 ಟೆಲಿವಿಷನ್ ಸೆಟ್‍ಗಳನ್ನು ಹಾಕುವ ಮೂಲಕ ಲಕ್ಷಾಂತರ ಜನರು ಭಾಷಣ ಕೇಳಲು ಅನುವು ಮಾಡಿಕೊಡಲಾಗಿತ್ತು.

    ಈ ವರ್ಷದ ಕೊನೆಯಲ್ಲಿ ಬಿಹಾರ ವಿಧಾನಸಭೆಗೂ ಚುನಾವಣೆ ನಡೆಯಲಿದ್ದು, ಇತಿಹಾಸದಲ್ಲಿ ಮೊದಲ ಬಾರಿಗೆ ವರ್ಚುವಲ್ ರ‍್ಯಾಲಿಗಳು ಅತಿಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುವ ಸಾಧ್ಯತೆಗಳಿದೆ ಎನ್ನಲಾಗಿದೆ. ಇದಕ್ಕಾಗಿ ರಾಜಕೀಯ ಪಕ್ಷಗಳು ಪೂರ್ವ ತಯಾರಿ ಆರಂಭಿಸಿವೆ.

  • ಬಿಜೆಪಿ ಅಭ್ಯರ್ಥಿಯನ್ನು ಒದ್ದು ಪೊದೆಗೆ ತಳ್ಳಿದ ಕಾರ್ಯಕರ್ತರು

    ಬಿಜೆಪಿ ಅಭ್ಯರ್ಥಿಯನ್ನು ಒದ್ದು ಪೊದೆಗೆ ತಳ್ಳಿದ ಕಾರ್ಯಕರ್ತರು

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಈ ಮಧ್ಯೆ ಬಿಜೆಪಿ ಅಭ್ಯರ್ಥಿಯ ಮೇಲೆ ತೃಣ ಮೂಲ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿರುವ ಘಟನೆ ನಾಡಿಯಾ ಜಿಲ್ಲೆಯ ಘಿಯಾಘಾಟ್ ನ ಇಸ್ಲಾಂಪುರ ಪ್ರಾಥಮಿಕ ಶಾಲಾ ಬೂತ್‍ನಲ್ಲಿ ನಡೆದಿದೆ.

    ಹಲ್ಲೆಗೆ ಒಳಗಾದ ಅಭ್ಯರ್ಥಿಯನ್ನು ಬಿಜೆಪಿ ಕರಿಂಪೂರಿ ಕ್ಷೇತ್ರದ ಜೆ. ಪ್ರಕಾಶ್ ಮಜುಂದಾರ್ ಎನ್ನಲಾಗಿದೆ. ಜೆ. ಪ್ರಕಾಶ್ ಮೇಲೆ ಕೆಲ ಜನರು ಮಾರಣಾಂತಿಕವಾಗಿ ಹಲ್ಲೆ ಮಾಡಿ, ಕಾಲಿನಿಂದ ಒದ್ದು, ಅವರನ್ನು ರಸ್ತೆಬದಿಯಲ್ಲಿರುವ ಪೊದೆಯೊಳಗೆ ತಳ್ಳಿದ್ದಾರೆ. ಇದನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ಮಾಡಿದ್ದು, ಈ ಹಲ್ಲೆ ಮಾಡಿದವರು ತೃಣ ಮೂಲ ಕಾಂಗ್ರೆಸ್ ಕಾರ್ಯಕರ್ತರು ಎಂದು ಬಿಜೆಪಿ ಆರೋಪಿಸಿದೆ.

    ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷರು ಆಗಿರುವ ಜೆ. ಪ್ರಕಾಶ್ ಮಜುಂದಾರ್ ಅವರು, ಇಸ್ಲಾಂಪುರ ಪ್ರಾಥಮಿಕ ಶಾಲಾ ಬೂತ್ ನ ಸ್ವಲ್ಪ ದೂರದಲ್ಲೇ ಕೆಲ ಜನರು ಮತದಾನದ ವೇಳೆ ಮತದಾರರಿಗೆ ನೀಡಲು ಅಪಾರ ಪ್ರಮಾಣದ ಆಹಾರ ತಯಾರಿಸುತ್ತಿದ್ದಾರೆ ಎಂದು ತಿಳಿದು ಆ ಸ್ಥಳಕ್ಕೆ ಹೋಗಿದ್ದಾರೆ. ಆ ಸಮಯದಲ್ಲಿ ಅಲ್ಲಿ 10 ರಿಂದ 11 ಜನ ಆಹಾರ ತಯಾರಿಸುತ್ತಿದ್ದರು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

    ಈ ರೀತಿ ಆಹಾರ ತಯಾರು ಮಾಡುತ್ತಿದ್ದಾರೆ ಎಂದು ಪ್ರಕಾಶ್ ಮಜುಂದಾರ್ ಅವರು ಜಿಲ್ಲಾ ಆಡಳಿತಾಧಿಕಾರಿ ಮತ್ತು ಚುನಾವಣಾ ಅಧಿಕಾರಿಗೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಕಾರ್ಯಕರ್ತರು ಮುಜುಂದಾರ್ ಅವರ ಸುತ್ತಾ ಸುತ್ತಿಕೊಂಡು ಪ್ರತಿಭಟನೆ ಮಾಡಿದ್ದಾರೆ. ನಂತರ ಅವರ ಮೇಲೆ ಹಲ್ಲೆ ಮಾಡಿ ಅವರನ್ನು ಕಾಲಿನಿಂದ ಒದ್ದು ರಸ್ತೆಪಕ್ಕದ ಪೊದೆಯೊಳಗೆ ತಳ್ಳಿದ್ದಾರೆ. ನಂತರ ಕೇಂದ್ರ ಪಡೆ ಕಾರ್ಯಕರ್ತರ ಮೇಲೆ ಲಾಠಿ ಜಾರ್ಜ್ ಮಾಡಿ ಮುಜುಂದಾರ್ ಅವರನ್ನು ರಕ್ಷಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಜೆ. ಪ್ರಕಾಶ್ ಮಜುಂದಾರ್ ಅವರು, ಬೂತ್ ಅನ್ನು ವಶಪಡಿಸಿಕೊಳ್ಳುವ ಅವರ ಪಿತೂರಿಯನ್ನು ನಾನು ಬಹಿರಂಗಪಡಿಸಿದ ಕಾರಣ, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನ ಬೆನ್ನಿಗೆ ಕೈಗೆ ಗಾಯಗಳಾಗಿವೆ. ಈ ಗಾಯಗಳು ಹೋಗುತ್ತವೆ. ಆದರೆ ನಮ್ಮ ರಾಜ್ಯ ಈ ಗಾಯಗಳಿಂದ ಮುಕ್ತವಾಗುವುದು ಯಾವಾಗ? ಸಿಎಂ ಮಮತಾ ಬ್ಯಾನರ್ಜಿ ಸಹಚರರು ರಾಜ್ಯದ ಜನರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಇದಕ್ಕೂ ಮುನ್ನ ಮಜುಂದಾರ್ ಅವರು ಬೂತ್ ಒಳಗೆ ಹೋಗಲು ಪ್ರಯತ್ನಿಸಿದಾಗ ಕೂಡ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗೋ ಬ್ಯಾಕ್ ಎಂಬ ಘೋಷಣೆ ಕೂಗಿದ್ದರು. ಅದೂ ಅಲ್ಲದೇ ಕೆಲ ಸ್ಥಳೀಯ ತೃಣಮೂಲ ಕಾಂಗ್ರೆಸ್ ಮುಖಂಡರು ಜೆ. ಪ್ರಕಾಶ್ ಮಜುಂದಾರ್ ಅವರು ಶಾಂತಿಯುತ ವಾತಾವರಣಕ್ಕೆ ಭಂಗ ತಂದಿದ್ದಾರೆ ಎಂದು ಆರೋಪಿಸಿದ್ದರು.

    ಮಜುಂದಾರ್ ಅವರ ಈ ದಾಳಿಯ ಬೆನ್ನಲ್ಲೇ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇವರ ಜೊತೆಗೆ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸುನಿಲ್ ದೇವಧರ್ ಅವರು, ಮಜುಂದಾರ್ ಅವರ ಹಲ್ಲೆ ವಿಡಿಯೋ ಟ್ವೀಟ್ ಮಾಡಿ ಪಶ್ಚಿಮ ಬಂಗಳಾದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿ ಇಲ್ಲ. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿಯಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಬರೆದುಕೊಂಡಿದ್ದಾರೆ.