Tag: ಪಶು ವೈದ್ಯ

  • ನಾಯಿಯ ಹಲ್ಲನ್ನು ಸ್ವಚ್ಛಗೊಳಿಸಲು 4 ಲಕ್ಷ ರೂ. ಖರ್ಚು!

    ನಾಯಿಯ ಹಲ್ಲನ್ನು ಸ್ವಚ್ಛಗೊಳಿಸಲು 4 ಲಕ್ಷ ರೂ. ಖರ್ಚು!

    ವಾಷಿಂಗ್ಟನ್: ಸಾಮಾನ್ಯವಾಗಿ ಶ್ವಾನಪ್ರಿಯರು ಶ್ವಾನಗಳನ್ನು ತಮ್ಮ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅದರ ತಿಂಡಿ, ಆರೋಗ್ಯ ಸೇರಿದಂತೆ ನಾಯಿಗಳಿಗೆ ಇರುವ ಎಲ್ಲಾ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಮಾಲೀಕ ನಾಯಿಯ ಹಲ್ಲನ್ನು ಸ್ವಚ್ಛಗೊಳಿಸಲು ಬರೋಬ್ಬರಿ 5,000 ಡಾಲರ್ (3.9 ಲಕ್ಷ ರೂ) ಖರ್ಚು ಮಾಡಿದ್ದಾನೆ.

    ಯುನೈಟೆಡ್ ಸ್ಟೇಟ್‌ನ ಮಧ್ಯಪಶ್ಚಿಮ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರೆಡ್ಡಿಟ್ ಬಳಕೆದಾರನೊಬ್ಬ ತಮ್ಮ ಸಾಕು ನಾಯಿಯ ಹಲ್ಲುಗಳನ್ನು ಸ್ವಚ್ಛಗೊಳಿಸುವ ಕಾರ್ಯವಿಧಾನದ ಕುರಿತು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?: 12 ವರ್ಷದ ನಾಯಿಯ ಹಲ್ಲನ್ನು ಸ್ವಚ್ಛಗೊಳಿಸಲು ಪಶು ವೈದ್ಯರತ್ತಿರ ಕರೆದೊಯ್ಯಲಾಗಿತ್ತು. ಆಗ ಅಲ್ಲಿ ನಾಯಿಯು ಹಲ್ಲಿನ ಬಣ್ಣವನ್ನು ಕಳೆದುಕೊಂಡಿತು. ಇದರಿಂದಾಗಿ ಆ ಕಾರ್ಯವಿಧಾನವನ್ನು ನಿಲ್ಲಿಸಲಾಯಿತು. ಜೊತೆಗೆ ಅನೇಕ ರೀತಿಯ ಪರೀಕ್ಷೆಗಳನ್ನು ಮಾಡಿಸಲಾಯಿತು. ಏಕೆಂದರೆ ಶ್ವಾನವು ಉತ್ತಮ ಆರೋಗ್ಯವನ್ನು ಹೊಂದಿದೆಯೇ ಎಂದು ಪರೀಕ್ಷಿಸಬೇಕಾಗಿತ್ತು. ಈ ಪರೀಕ್ಷೆಗಳಲ್ಲಿ ರಕ್ತ ಪರೀಕ್ಷೆಗಳು ಮತ್ತು ಹೃದಯ ತಪಾಸಣೆಗಳನ್ನು ಮಾಡಿಸಲಾಯಿತು.

    ಅದಾದ ಬಳಿಕ ತಜ್ಞರನ್ನು ಸಂಪರ್ಕಿಸಿ ಬಾಯಿಯ ಎಕ್ಸ್ ರೇ ಅನ್ನು ಮಾಡಿಸಲಾಯಿತು. ಅಷ್ಟೇ ಅಲ್ಲದೇ ಶ್ವಾನದ ಕೆಲ ಹಲ್ಲುಗಳನ್ನು ಹೊರತೆಯಲು ಹೇಳಿದ್ದರು. ಏಕೆಂದರೆ ಶ್ವಾನಕ್ಕೆ ಕ್ಯಾನ್ಸರ್ ಇದೆಯಾ ಎಂದು ಖಚಿತ ಪಡಿಕೊಳ್ಳಲು ಬಯಾಪ್ಸಿ ಮಾಡಲಾಗಿತ್ತು. ಈ ಎಲ್ಲಾ ಕಾರ್ಯ ವಿಧಾನಕ್ಕೆ 5,000 ಡಾಲರ್ ವೆಚ್ಚವಾಯಿತು ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚೀನಾದಲ್ಲಿ ಮಂಕಿ ವೈರಸ್ ಪತ್ತೆ – ಪಶುವೈದ್ಯ ಬಲಿ

    ಚೀನಾದಲ್ಲಿ ಮಂಕಿ ವೈರಸ್ ಪತ್ತೆ – ಪಶುವೈದ್ಯ ಬಲಿ

    ಬೀಜಿಂಗ್: ಕೊರೊನಾ ವೈರಸ್ ಈಗ ತನ್ನ ಮೂರನೇ ಅಲೆಯನ್ನು ತೋರಿಸುತ್ತಿರುವ ಬೆನ್ನಲ್ಲೇ ಈಗ ಚೀನಾದಲ್ಲಿ ಮಂಕಿ ವೈರಸ್ ಪತ್ತೆಯಾಗಿದೆ.

    ಮಾರ್ಚ್ ಆರಂಭದಲ್ಲಿ ಮೃತಪಟ್ಟ ಎರಡು ಕೋತಿಗಳನ್ನು ಅಧ್ಯಯನ ನಡೆಸಿದ್ದ ಬೀಜಿಂಗ್ ಮೂಲದ ಪಶುವೈದ್ಯ ಈ ಮಂಕಿ ಬಿ ವೈರಸ್ ಸೋಂಕಿಗೆ ತುತ್ತಾಗಿ ಬಲಿಯಾಗಿದ್ದಾನೆ ಎಂದು ಚೀನಾದ ಸಿಡಿಸಿ ವೀಕ್ಲಿ ವರದಿ ಮಾಡಿದೆ. ಇದನ್ನೂ ಓದಿ: ಅಮೆರಿಕದ ಮಾಧ್ಯಮಗಳಿಗೆ ​ಲಕ್ಷಾಂತರ ಡಾಲರ್ ಸುರಿದಿದೆ ಚೀನಾ

    53 ವರ್ಷದ ಪಶುವೈದ್ಯನಿಗೆ ಆರಂಭದಲ್ಲಿ ವಾಂತಿ ಬಂದಿತ್ತು. ನಂತರ ಜ್ವರ, ನರ ವೈಜ್ಞಾನಿಕ ರೋಗದ ಲಕ್ಷಣಗಳು ಬಂತು. ವಿಶಿಷ್ಟ ಲಕ್ಷಣಗಳು ಕಂಡು ಬಂದ ಕೂಡಲೇ ವಿವಿಧ ಆಸ್ಪತ್ರೆಗಳಿಗೆ ವೈದ್ಯನನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೇ 27 ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

    ವಿಶಿಷ್ಟ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಏಪ್ರಿಲ್ ಮಧ್ಯಭಾಗದಲ್ಲಿ ಸಂಶೋಧಕರು ಮುಂದಿನ ಅಧ್ಯಯನಕ್ಕಾಗಿ ಆತನ ದೇಹದಿಂದ ರಕ್ತ, ಮೂಗಿನ ದ್ರವ, ಗಂಟಲ ದ್ರವ ಮತ್ತು ಪ್ಲಾಸ್ಮಾ ಸೇರಿದಂತೆ ಹಲವಾರು ಮಾದರಿಗಳನ್ನು ಸಂಗ್ರಹಿಸಿದ್ದಾರೆ.

    ಈ ವೈರಸ್ ಹೊಸದೆನಲ್ಲ. 1992ರಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಈ ವೈರಸ್‍ಗೆ ಭಯಪಡುವ ಅಗತ್ಯವಿಲ್ಲ. ಕೋತಿಯ ಜೊತೆ ನೇರವಾಗಿ ಸಂಪರ್ಕ ಹೊಂದಿದರೆ ಮಾತ್ರ ಈ ಸೋಂಕು ಬರುತ್ತದೆ. ವೈರಸ್ ದೇಹ ಪ್ರವೇಶಿಸಿದ 1-3 ವಾರದದಲ್ಲಿ ಈ ಸೋಂಕಿನ ಲಕ್ಷಣಗಳು ಕಾಣಿಸುತ್ತದೆ. ಸಾವಿನ ಪ್ರಮಾಣವು 70% -80% ರಷ್ಟು ಇರುತ್ತದೆ ಎಂದು ವರದಿಯಾಗಿದೆ.

  • ಬೆಳೆ ಹಾಳು ಮಾಡ್ತೀವೆ ಎಂದು ನೀರಿಗೆ ವಿಷ ಬೆರೆಸಿ 12ಕ್ಕೂ ಹೆಚ್ಚು ಹಸು ಕೊಂದರು!

    ಬೆಳೆ ಹಾಳು ಮಾಡ್ತೀವೆ ಎಂದು ನೀರಿಗೆ ವಿಷ ಬೆರೆಸಿ 12ಕ್ಕೂ ಹೆಚ್ಚು ಹಸು ಕೊಂದರು!

    ಚಾಮರಾಜನಗರ: ಬೆಳೆ ಹಾಳುಮಾಡುತ್ತವೆ ಎಂದು ನೀರಿಗೆ ವಿಷ ಬೆರೆಸಿ 12ಕ್ಕೂ ಹೆಚ್ಚು ಹಸುಗಳನ್ನು ಕೊಂದಿರುವ ಅಮಾನವೀಯ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೋಕಿನ ಹುತ್ತೂರು ಗ್ರಾಮದಲ್ಲಿ ನಡೆದಿದೆ.

    ವಿಷ ಬೆರೆಸಿದ ನೀರು ಕುಡಿದ ಪರಿಣಾಮ 50ಕ್ಕೂ ಹೆಚ್ಚು ಹಸುಗಳ ಸ್ಥಿತಿ ಚಿಂತಾಜನಕವಾಗಿದೆ. ಹುತ್ತೂರಿನ ಸುತ್ತಮುತ್ತ ಇರುವ ತೋಟಗಳಿಗೆ ಹಸುಗಳು ನುಗ್ಗಿ ಬೆಳೆ ಮೇಯ್ದು ಹಾಳು ಮಾಡುತ್ತವೆ ಎಂದು ಹಸುಗಳನ್ನೇ ಕೊಲ್ಲಲು ಕೆಲವು ತೋಟದ ಮಾಲೀಕರು ಯೋಚಿಸಿ ಗ್ರಾಮದ ಹೊರವಲಯದಲ್ಲಿನ ಹಳ್ಳವೊಂದರಲ್ಲಿ ನಿಂತಿದ್ದ ನೀರಿಗೆ ವಿಷ ಬೆರೆಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

    ಬಯಲಿನಲ್ಲಿ ಮೇಯಲು ಹೋಗಿದ್ದ ಹಸುಗಳು ಎಂದಿನಂತೆ ಸಂಜೆ ಗ್ರಾಮಕ್ಕೆ ವಾಪಸ್ ಆಗುವ ಸಮಯದಲ್ಲಿ ಹಳ್ಳದಲ್ಲಿನ ನೀರು ಕುಡಿದಿವೆ. ನಂತರ ಮನೆಗಳಿಗೆ ಬರುವಷ್ಟರಲ್ಲಿ ದಾರಿ ನಡುವೆಯೇ 12ಕ್ಕೂ ಹೆಚ್ಚು ಹಸುಗಳು ಕುಸಿದು ಬಿದ್ದು ಸಾವನ್ನಪ್ಪಿವೆ. ಮತ್ತಷ್ಟು ಹಸುಗಳು ಅಸ್ವಸ್ಥಗೊಂಡಿವೆ. ಕೂಡಲೇ ಗ್ರಾಮಸ್ಥರು ಒಡೆಯರಪಾಳ್ಯದ ಪಶುವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ್ದ ವೈದ್ಯರು ಅಸ್ವಸ್ಥಗೊಂಡಿರುವ ಹಸುಗಳಿಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆ ಬಳಿಕವೂ ಬಹುತೇಕ ಹಸುಗಳು ಬದುಕುಳಿಯುವುದು ಕಷ್ಟ ಎನ್ನಲಾಗಿದೆ.

  • ನೆರೆಯಿಂದ ತತ್ತರಿಸಿದ ರೈತರು – ಜಾನುವಾರಗಳ ಚಿಕಿತ್ಸೆಗೂ ಲಂಚ ಕೇಳುತ್ತಿರೋ ವೈದ್ಯರು

    ನೆರೆಯಿಂದ ತತ್ತರಿಸಿದ ರೈತರು – ಜಾನುವಾರಗಳ ಚಿಕಿತ್ಸೆಗೂ ಲಂಚ ಕೇಳುತ್ತಿರೋ ವೈದ್ಯರು

    ಹುಬ್ಬಳ್ಳಿ: ಇತ್ತೀಚೆಗಷ್ಟೇ ಸಂಭವಿಸಿದ ನೆರೆ ಪ್ರವಾಹದಿಂದ ರೈತರು ತತ್ತರಿಸಿದ್ದಾರೆ. ಆ ರೈತರ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಪಶು ವೈದ್ಯರು ಲಂಚ ಕೇಳುತ್ತಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಲಂಚಬಾಕ ಪಶು ವೈದ್ಯ ಡಾ. ನಿಂಗಪ್ಪ ಮಾಯಾಗೋಳ್ ಕೈ ತುಂಬಾ ಸರ್ಕಾರಿ ಸಂಬಳ ಬರುತ್ತಿದ್ದರೂ ರೈತರು ಹಣ ಕೊಡದಿದ್ದರೆ ಜಾನುವಾರುಗಳಿಗೆ ಚಿಕಿತ್ಸೆಯನ್ನೇ ನೀಡುತ್ತಿಲ್ಲ. ರೈತರ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕಾದರೆ ಇನ್ನೂರು ಮುನ್ನೂರರಿಂದ ಸಾವಿರ ಸಾವಿರ ರೂಪಾಯಿವರೆಗೂ ಲಂಚ ಕೊಡುವಂತೆ ಕೇಳುತ್ತಿದ್ದಾರೆ.

    ಇತ್ತೀಚೆಗಷ್ಟೇ ಸಂಭವಿಸಿದ ನೆರೆಪ್ರವಾಹದಿಂದ ತತ್ತರಿಸಿ ಹೋಗಿರುವ ರೈತರ ಗೋಳು ಒಂದೆಡೆಯಾದರೆ ಧನದಾಹಿ ಪಶು ವೈದ್ಯ ಡಾ. ನಿಂಗಪ್ಪ ವೈದ್ಯನ ಲಂಚದಾಹದಿಂದ ಕುಂದಗೋಳ ತಾಲೂಕಿನ ರೈತರು ಬೇಸತ್ತು ಹೋಗಿದ್ದಾರೆ. ಮಾನವೀಯತೆಯನ್ನೇ ಮರೆತ ಈ ಲಂಚಬಾಕ ವೈದ್ಯ ರಾಜಾರೋಷವಾಗಿ ರೈತರಿಂದ ಹಣ ತೆಗೆದುಕೊಳ್ಳುವ ಸಂಪೂರ್ಣ ವೀಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ರೈತರು ತಮ್ಮ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಬೇಕೆಂದರೆ ಈ ಪಶು ವೈದ್ಯರಿಗೆ ಲಂಚ ನೀಡಲೇಬೇಕು.

    ಪ್ರತಿ ತಿಂಗಳು ಈ ಪಶು ವೈದ್ಯರಿಗೆ ಸರ್ಕಾರದಿಂದ ಸರಿಯಾಗಿ ಸಂಬಳ ಬರುತ್ತಿದ್ದರೂ ಪಶುಗಳಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಇಲ್ಲಿನ ರೈತರ ಜೀವವನ್ನೇ ಹಿಂಡುತ್ತಿದ್ದಾರೆ. ತಾಲೂಕಿನಾದ್ಯಂತ 60 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಾವಿರಾರು ಜಾನುವಾರುಗಳನ್ನ ರೈತರು ಸಾಕಿದ್ದಾರೆ. ಆದರೆ ಆ ಜಾನುವಾರುಗಳಿಗೆ ಅನಾರೋಗ್ಯ ಎದುರಾದರೆ ಈ ವೈದ್ಯರು ಚಿಕಿತ್ಸೆ ನೀಡಬೇಕಾದರೆ ನೂರರಿಂದ ಸಾವಿರದವರೆಗೆ ಹಣ ನೀಡಿದರೆ ಮಾತ್ರ ಚಿಕಿತ್ಸೆ ನೀಡಲು ಬರುತ್ತಾರೆ. ಹೀಗಾಗಿ ಈ ಭಾಗದ ರೈತರು ವೈದ್ಯರ ಈ ನಡೆಗೆ ಬೇಸತ್ತಿದ್ದು, ತಮ್ಮ ನೋವನ್ನು ಯಾರಿಗೂ ಹೇಳಿಕೊಳ್ಳದೆ ಒದ್ದಾಡುತ್ತಿದ್ದಾರೆ.

  • ಧರ್ಮನಿಂದನೆ ಆರೋಪ – ಪಾಕಿನಲ್ಲಿ ಹಿಂದೂ ಡಾಕ್ಟರ್ ಅರೆಸ್ಟ್

    ಧರ್ಮನಿಂದನೆ ಆರೋಪ – ಪಾಕಿನಲ್ಲಿ ಹಿಂದೂ ಡಾಕ್ಟರ್ ಅರೆಸ್ಟ್

    ನವದೆಹಲಿ: ಧರ್ಮನಿಂದನೆ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಹಿಂದೂ ಡಾಕ್ಟರ್ ಒಬ್ಬರನ್ನು ಅರೆಸ್ಟ್ ಮಾಡಲಾಗಿದೆ.

    ಈ ಘಟನೆ ಹಿಂದೂಗಳೇ ಹೆಚ್ಚಾಗಿ ವಾಸ ಮಾಡುವ ಪಾಕಿಸ್ತಾನದ ದಕ್ಷಿಣ ಸಿಂಧು ಪ್ರಾಂತ್ಯದಲ್ಲಿ ನಡೆದಿದ್ದು, ಬಂಧನಕ್ಕೊಳಪಟ್ಟ ಹಿಂದೂ ಪಶು ವೈದ್ಯನನ್ನು ರಮೇಶ್ ಕುಮಾರ್ ಎಂದು ಗುರುತಿಸಲಾಗಿದೆ.

    ಸ್ಥಳೀಯ ಮಸೀದಿಯೊಂದರ ಮುಖ್ಯಸ್ಥ ಮೌಲ್ವಿ ಇಶಾಕ್ ನೂಹಿ, ಪಶು ವೈದ್ಯ ರಮೇಶ್ ತಮ್ಮ ಧರ್ಮದ ಪವಿತ್ರ ಪುಸ್ತಕದ ಹಾಳೆಯನ್ನು ಹರಿದು ಅದರಲ್ಲಿ ಔಷಧಿಗಳನ್ನು ಸುತ್ತಿ ಜನರಿಗೆ ನೀಡಿದ್ದಾರೆ. ಈ ಮೂಲಕ ನಮ್ಮ ಧರ್ಮದ ನಿಂದನೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ದೂರಿನ ಅನ್ವಯ ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ. ಈ ವಿಚಾರ ತಿಳಿದು ಕೋಪಗೊಂಡ ಮುಸ್ಲಿಮರು ಸಿಂಧು ಪ್ರಾಂತ್ಯದಲ್ಲಿರುವ ಹಿಂದೂ ಧರ್ಮದವರ ಅಂಗಂಡಿಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿದ್ದಾರೆ. ಈ ಸಂಬಂಧ ಈಗ ಸಿಂಧು ಪ್ರಾಂತ್ಯದಲ್ಲಿ ಉದ್ವಿಗ್ನ ಪರಿಸ್ಥತಿ ಉಂಟಾಗಿದೆ.

    ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಪೊಲೀಸ್ ಅಧಿಕಾರಿ ಅಹಿದ್ ಹುಸೇನ್ ಲೆಘಾರಿ, ಮೌಲ್ವಿ ನೂಹಿ ಅವರು ನೀಡಿದ್ದ ದೂರಿನ ಅನ್ವಯ ರಮೇಶ್ ಕುಮಾರ್ ಎಂಬ ಪಶು ವೈದ್ಯರನ್ನು ಬಂಧಿಸಲಾಗಿದೆ. ನಗರದಲ್ಲಿ ಅಶಾಂತಿ ಉಂಟಾದ ಕಾರಣ ಅವರನ್ನು ಸುರಕ್ಷಿತವಾದ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಈ ಪ್ರಕರಣದ ಬಗ್ಗೆ ಸರಿಯಾಗಿ ತನಿಖೆ ಮಾಡಿ ಕ್ರಮಕೈಗೊಳ್ಳಲಾಗುತ್ತೆದೆ ಎಂದು ಹೇಳಿದ್ದಾರೆ.

    https://twitter.com/timesofpak123/status/1132965562852810754

    ಪಾಕ್‍ನ ಸಿಂಧು ಪ್ರಾಂತ್ಯದಲ್ಲಿ ಅಪಾರ ಸಂಖ್ಯೆಯ ಹಿಂದೂ ಧರ್ಮದವರು ವಾಸಮಾಡುತ್ತಿದ್ದು, ನಮ್ಮ ಮೇಲೆ ಮುಸ್ಲಿಂ ಸಮುದಾಯದವರು ವೈಯಕ್ತಿಕ ದ್ವೇಷವನ್ನು ಇಟ್ಟಿಕೊಂಡಿದ್ದಾರೆ. ಈ ದ್ವೇಷದ ಪ್ರತೀಕಾರವನ್ನು ತೀರಿಸಿಕೊಳ್ಳಲು ಧರ್ಮನಿಂಧನೆ ಮಾಡಿದ್ದೇವೆ ಎಂದು ಆರೋಪ ಮಾಡಿ ನಮ್ಮನ್ನು ಜೈಲಿಗೆ ಕಳುಹಿಸುತ್ತಿದ್ದಾರೆ ಎಂದು ಪಾಕ್‍ನಲ್ಲಿರುವ ಹಿಂದೂ ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದಾರೆ.

    ಪಾಕಿಸ್ತಾನದಲ್ಲಿ 75 ಲಕ್ಷ ಹಿಂದೂಗಳು ವಾಸವಿದ್ದಾರೆ. ಇದರಲ್ಲಿ 1987 ರಿಂದ 2016 ವರೆಗೆ ಸುಮಾರು 1,472 ಹಿಂದೂಗಳನ್ನು ಧರ್ಮನಿಂದನೆಯ ಆರೋಪದ ಮೇಲೆ ಜೈಲಿಗೆ ಕಳುಹಿಸಲಾಗಿದೆ ಎಂದು ಲಾಹೋರ್‍ ನ ವಕೀಲರ ಸಂಘವೊಂದು ಅಂಕಿಅಂಶಗಳನ್ನು ಬಿಡುಗಡೆ ಮಾಡಿತ್ತು.

  • 3 ಕಣ್ಣು, 2 ಮುಖ, ಬಾಯಿ, ನಾಲಗೆಯ ವಿಚಿತ್ರ ಕುರಿಮರಿ ಜನನ

    3 ಕಣ್ಣು, 2 ಮುಖ, ಬಾಯಿ, ನಾಲಗೆಯ ವಿಚಿತ್ರ ಕುರಿಮರಿ ಜನನ

    ಗದಗ: ಸಾಮಾನ್ಯವಾಗಿ ಹಸು, ಕುರಿಗಳು ಎರಡು ತಲೆ ಅಥವಾ 5 ಕಾಲು ಹೊಂದಿರುವ ಮರಿಗಳು ಜನಿಸಿರು ಘಟನೆಗಳನ್ನು ನೋಡಿದ್ದೇವೆ. ಆದರೆ 3 ಕಣ್ಣು, 2 ಮುಖ, 2 ಬಾಯಿ, 2 ನಾಲಗೆ ಹೊಂದಿರುವ ವಿಚಿತ್ರ ಕುರಿ ಮರಿಯೊಂದು ಜನಿಸಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಇಟಗಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ದೇವಪ್ಪ ಸಂಗನಾಳ ಎಂಬವರ ಮನೆಯ ಕುರಿ ವಿಚಿತ್ರ ರೀತಿಯ ಮರಿಗೆ ಜನ್ಮ ನೀಡಿದೆ. ಬಹು ಅಂಗಾಂಗಳನ್ನು ಹೊಂದಿರುವ ಈ ಮರಿ ನೋಡಲು ವಿಚಿತ್ರವಾಗಿ ಕಾಣುತ್ತಿದ್ದು, ಇದನ್ನು ಕಂಡ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಚಿತ್ರ ಕುರಿ ಮರಿ ಜನನವಾಗಿರುವ ಮಾಹಿತಿ ಕೇಳಿದ ಹಲವು ಮಂದಿ ದೇವಪ್ಪ ಅವರ ಮನೆಗೆ ಭೇಟಿ ನೀಡಿ ಕುತೂಹಲದಿಂದ ಮರಿಯನ್ನು ನೋಡಲು ಆಗಮಿಸುತ್ತಾರೆ.

    ಸುಮಾರು 70 ವರ್ಷದಿಂದ ನಮ್ಮ ಕುಟುಂಬದಲ್ಲಿ ಪಾರಂಪರಿಕವಾಗಿ ಕುರಿ ಸಾಕಾಣಿಕೆಯನ್ನೇ ವೃತ್ತಿಯಾಗಿ ನಡೆಸಿಕೊಂಡು ಬರುತ್ತಿದೆ. ಸದ್ಯ ಮನೆಯಲ್ಲಿ 60ಕ್ಕೂ ಹೆಚ್ಚು ಕುರಿಗಳನ್ನು ಸಾಕಾಣಿಕೆ ಮಾಡುತ್ತಿದ್ದೇವೆ. ಆದರೆ ಈ ಹಿಂದೆ ಇಂತಹ ಮರಿ ಜನನವಾಗಿದ್ದ ಉದಾಹರಣೆ ನಮ್ಮ ಬಳಿ ಇಲ್ಲ. ಇದೇ ಮೊದಲ ಬಾರಿಗೆ ಬಹು ಅಂಗಾಂಗ ಹೊಂದಿರುವ ಕುರಿಮರಿ ಜನನವಾಗಿದೆ.

    ಇಂದು ಬೆಳಗ್ಗೆ ಕುರಿಮರಿ ಜನನವಾಗಿದ್ದು, ಸದ್ಯ ಆರೋಗ್ಯವಾಗಿದೆ. ಈ ಕುರಿತು ಪಶು ವೈದ್ಯರಿಗೆ ಮಾಹಿತಿ ನೀಡಿ ಅವರಿಂದ ಸಲಹೆ ಪಡೆಯಲು ಮುಂದಾಗಿದ್ದೇವೆ ಎಂದು ದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv