Tag: ಪಶು ಆಸ್ಪತ್ರೆ

  • ನಟಿ ಲೀಲಾವತಿ ಕನಸಿನ ಪಶು ಆಸ್ಪತ್ರೆ ನ.26ಕ್ಕೆ ಉದ್ಘಾಟನೆ

    ನಟಿ ಲೀಲಾವತಿ ಕನಸಿನ ಪಶು ಆಸ್ಪತ್ರೆ ನ.26ಕ್ಕೆ ಉದ್ಘಾಟನೆ

    ಮಾಜಮುಖಿ ಕೆಲಸಗಳ ಮೂಲಕ ಜನರ ಹೃದಯಕ್ಕೆ ಇನ್ನೂ ಹತ್ತಿರವಾಗುತ್ತಿರುವ ಹಿರಿಯ ನಟಿ ಲೀಲಾವತಿ ಅವರ ಕನಸಿನ ಆಸ್ಪತ್ರೆ ನಾಳೆ ಬೆಳಗ್ಗೆ 10 ಗಂಟೆಗೆ ಉದ್ಘಾಟನೆ ಆಗಲಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K.Sivakumar) ಅವರು ಪಶು ಆಸ್ಪತ್ರೆಯನ್ನು (Hospital) ಉದ್ಘಾಟಿಸಲಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ಲೀಲಾವತಿ  ಅವರ ಆಸೆ ಇದಾಗಿದ್ದು, ಸರ್ಕಾರ ಅದಕ್ಕೆ ಸಮ್ಮತಿ ನೀಡಿದೆ.

    ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಬಳಿ ಸುಸಜ್ಜಿತ ಪಶು ಆಸ್ಪತ್ರೆಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡಿರುವ ಲೀಲಾವತಿ ಮತ್ತು ವಿನೋದ್ ರಾಜ್, ಹಿಂದೆ ಜನರಿಗಾಗಿ ಮತ್ತೊಂದು ಆಸ್ಪತ್ರೆಯನ್ನೂ ನಿರ್ಮಿಸಿದ್ದರು. ಈ ಆಸ್ಪತ್ರೆಯನ್ನೂ ಸರಕಾರವೇ ನೋಡಿಕೊಳ್ಳುತ್ತಿದೆ. ಬೆಂಗಳೂರಿನ ಥಣಿಸಂದ್ರದ ಪಶು ಆಸ್ಪತ್ರೆಯನ್ನು ಸರಕಾರ ಸೋಲದೇವನಹಳ್ಳಿಗೆ ಶಿಪ್ಟ್ ಮಾಡಿ ಆದೇಶ ಪ್ರಕಟಿಸಿದೆ.

    ಲೀಲಾವತಿ ಅವರ ಆರೋಗ್ಯಕ್ಕಾಗಿ ಸರ್ಜಾ ಪ್ರಾರ್ಥನೆ

    ಹಿರಿಯ ನಟಿ ಲೀಲಾವತಿ (Leelavati) ಅವರ ಮನೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದ್ದಾರೆ ಖ್ಯಾತ ನಟ ಅರ್ಜುನ್ ಸರ್ಜಾ (Arjun Sarja). ನೆಲಮಂಗಲದ ಬಳಿ ಇರುವ ಸೋಲದೇವನಹಳ್ಳಿ ತೋಟದ ಮನೆಗೆ ಬಂದಿದ್ದ ಅರ್ಜುನ್ ಸರ್ಜಾ, ಕೆಲಹೊತ್ತು ಲೀಲಾವತಿ ಅವರ ಮನೆಯಲ್ಲಿ ಇದ್ದು, ಆರೋಗ್ಯ ವಿಚಾರಿಸಿದ್ದಾರೆ.

    ವಯಸ್ಸಿನ ಕಾರಣದಿಂದಾಗಿ ಲೀಲಾವತಿ ಅವರು ಹಾಸಿಗೆ ಹಿಡಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಸೋಲದೇವನಹಳ್ಳಿಗೆ ತೆರಳಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಇದೀಗ ಅರ್ಜುನ್ ಸರ್ಜಾ ಕೂಡ ಅದೇ ಕೆಲಸ ಮಾಡಿದ್ದಾರೆ. 87 ವರ್ಷದ ಹಿರಿಯ ನಟಿ ಲೀಲಾವತಿಯವರು ಆರೋಗ್ಯ ಸಮಸ್ಯೆಯಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ.

     

    ತಾಯಿಯ ಆರೋಗ್ಯ ವಿಚಾರಿಸುವಾಗ ಲೀಲಾವತಿ ಪುತ್ರ ವಿನೋದ್ ರಾಜ್(Vinod Raj)ಕಣ್ಣೀರಿಟ್ಟಿದ್ದಾರೆ. ಆನಂತರ ಲೀಲಾವತಿಯವರು ಬೇಗ ಆರೋಗ್ಯ ಸುಧಾರಿಸಲು ಭಗವಂತ ಹನುಮಂತನಲ್ಲಿ ಪ್ರಾರ್ಥಿಸುವುದಾಗಿ ನಟ ಅರ್ಜುನ್ ಸರ್ಜಾ ತಿಳಿಸಿದ್ದಾರೆ. ದೊಡ್ಡ ಹನುಮಂತನ ದೇವಾಲಯ ಕಟ್ಟಿಸಿದ್ದು ಅಲ್ಲಿ ಪ್ರಾರ್ಥನೆ ಸಲ್ಲಿಸುವುದಾಗಿ ಹೇಳಿದರು ಅರ್ಜುನ್ ಸರ್ಜಾ.

  • ಭೂ ಸೇನಾ ನಿಗಮದಿಂದ ರುದ್ರಭೂಮಿಯಲ್ಲಿ ಪಶು ಆಸ್ಪತ್ರೆ – ಗ್ರಾಮಸ್ಥರ ವಿರೋಧ

    ಭೂ ಸೇನಾ ನಿಗಮದಿಂದ ರುದ್ರಭೂಮಿಯಲ್ಲಿ ಪಶು ಆಸ್ಪತ್ರೆ – ಗ್ರಾಮಸ್ಥರ ವಿರೋಧ

    ಕೊಪ್ಪಳ: ಇಡೀ ಗ್ರಾಮಕ್ಕೆ ಇರುವ ಏಕೈಕ ರುದ್ರಭೂಮಿಯಲ್ಲಿಯೇ ಸರ್ಕಾರಿ ಕಟ್ಟಡವೊಂದು ಅನಧಿಕೃತವಾಗಿ ನಿರ್ಮಾಣವಾಗುತ್ತಿದ್ದು ಅಂತ್ಯಸಂಸ್ಕಾರವನ್ನು ಎಲ್ಲಿ ಮಾಡಬೇಕೆಂಬ ಆತಂಕದಲ್ಲಿ ತಾಲೂಕಿನ ಹಗೇದಾಳ ಗ್ರಾಮಸ್ಥರು ಚಿಂತೆಗೀಡಾಗಿದ್ದಾರೆ.

    ಪಕ್ಕದ ಚೆಳ್ಳೂರು ಗ್ರಾಮಕ್ಕೆ ಮಂಜೂರಾದ ಪಶು ಆಸ್ಪತ್ರೆ ಹಗೇದಾಳ ಗ್ರಾಮದ ಸ್ಮಶಾನ ಭೂಮಿಯಲ್ಲಿ ನಿರ್ಮಾಣವಾಗುತ್ತಿರುವುದರಿಂದ ಈ ಸಮಸ್ಯೆ ಉದ್ಭವವಾಗಿದೆ. ಗ್ರಾಮದಲ್ಲಿರುವ ಏಕೈಕ ಸ್ಮಶಾನವನ್ನು ಅತಿಕ್ರಮಣವಾಗಿ ಸರ್ಕಾರವೇ ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿರುವುದರಿಂದ ಕೊಪ್ಪಳದ ಕಾರಟಗಿ ತಾಲೂಕಿನ ಹುಳ್ಕಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಗೇದಾಳ ಗ್ರಾಮಸ್ಥರು ಅಧಿಕಾರಿಗಳ ದೌರ್ಜನ್ಯ ವಿರೋಧಿಸಿ ಹೋರಾಟಕ್ಕೆ ಸಿದ್ಧವಾಗಿದ್ದಾರೆ.

    ಹಗೇದಾಳ ಗ್ರಾಮ ಸ್ಮಶಾನ ಭೂಮಿಯಲ್ಲಿ ಇದೀಗ ತಲೆ ಎತ್ತುತ್ತಿರುವ ಕಟ್ಟಡ ಪಶು ಆಸ್ಪತ್ರೆ ಎಂದು ಹೇಳಲಾಗಿದೆ. ಹಗೇದಾಳ ಗ್ರಾಮಕ್ಕೆ ಯಾವುದೇ ಸರ್ಕಾರಿ ಯೋಜನೆ ಮಂಜೂರಾಗಿಲ್ಲ. ಚೆಳ್ಳೂರು ಗ್ರಾಮಕ್ಕೆ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸರ್ಕಾರ 38 ಲಕ್ಷ ರೂ. ಅನುದಾನ ನೀಡಿದೆ. ಕಳೆದ ನವೆಂಬರ್‍ನಲ್ಲಿ ಕನಕಗಿರಿ ಕ್ಷೇತ್ರ ಶಾಸಕ ಬಸವರಾಜ್ ದಢೇಸ್ಗೂರು ಸೇರಿದಂತೆ ಅಧಿಕಾರಿಗಳು ಎಲ್ಲರೂ ಪಶು ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.

    ಒಂದು ಊರಿನ ಯೋಜನೆಯನ್ನು ಅಧಿಕಾರಿಗಳು ಮತ್ತೊಂದೂರಿನಲ್ಲಿ ಅನುಷ್ಠಾನ ಮಾಡುತ್ತಿದ್ದು ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಈಗ ಕಟ್ಟುತ್ತಿರುವ ಕಟ್ಟಡ ಹಗೇದಾಳದಲ್ಲಿ ಇರುವುದರಿಂದ ಚೆಳ್ಳೂರು ಗ್ರಾಮಕ್ಕೆ ಈ ಆಸ್ಪತ್ರೆ ಅತೀ ದೂರವಾಗುತ್ತಿದೆ. ಹಗೇದಾಳ ಗ್ರಾಮದ ಸರ್ವೇ ನಂ.71/1ರಲ್ಲಿ 3 ಎಕರೆ 22 ಗುಂಟೆ ಭೂಮಿ ಸ್ಮಶಾನಕ್ಕೆ ಸೇರಿದೆ. ಸುತ್ತಲಿನ ಪ್ರದೇಶ ಒತ್ತುವರಿಯಾಗಿದ್ದು ಇರುವ ಸ್ವಲ್ಪ ಭೂಮಿಯಲ್ಲಿಯೇ ಗ್ರಾಮಸ್ಥರ ಅಂತ್ಯ ಸಂಸ್ಕಾರಗಳು ನಡೆಯುತ್ತವೆ. ಇಂಥ ಅಲ್ಪಸ್ವಲ್ಪ ಭೂಮಿಯಲ್ಲಿಯೇ ಭೂಸೇನಾ ನಿಗಮದ ಅಧಿಕಾರಿಗಳೇ ಅಕ್ರಮವಾಗಿ ಒತ್ತುವರಿ ಮಾಡಿ ಕಟ್ಟಡ ಕಟ್ಟುವುದು ಯಾವ ನ್ಯಾಯ ಎಂದು ಗ್ರಾಮಸ್ಥರ ಪ್ರಶ್ನೆ.

    ನಮ್ಮೂರಿನ ಸುಡುಗಾಡಿಯಲ್ಲಿ ಭೂ ಸೇನೆ ನಿಗಮದ ಎಂಜಿನಿಯರ್ ಚಿಂಚೊಳ್ಳಿಕರ್ ಮತ್ತು ದೇವರಾಜ್ ದೌರ್ಜನ್ಯದಿಂದ ಈ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಹಲವು ಬಾರಿ ಮಾತನಾಡಿದರೂ ಸರಿಯಾಗಿ ಉತ್ತರಿಸುತ್ತಿಲ್ಲ. ಸರ್ಕಾರಿ ಕೆಲಸ ಅಡ್ಡಿ ಪಡಿಸಿದರೆ ನಿಮ್ಮ ಮೇಲೆ ಕೇಸ್ ಹಾಕಬೇಕಾಗುತ್ತೆ. ಹೋಗಿ ಎಂಎಲ್‍ಎ ನಾ ಕೇಳ್ರಿ ಎಂದು ಅವಾಜ್ ಹಾಕ್ತಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

    ಕಂದಾಯ ಅಧಿಕಾರಿಗಳು ಹೇಳೋದು ಏನು?
    ಹಗೇದಾಳ ಗ್ರಾಮದ ಸ್ಮಶಾನಕ್ಕಾಗಿ ಉಪಯೋಗಿಸುತ್ತಿರುವ ಜಮೀನಿನಲ್ಲಿ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಭೂಮಿಯನ್ನು ಮಂಜೂರು ಮಾಡಿಲ್ಲ ಎಂದು ಕಾರಟಗಿ ತಹಶೀಲ್ದಾರ್ ದೃಢೀಕರಿಸಿದ್ದಾರೆ. ಅಲ್ಲದೇ ಹಗೇದಾಳ ಗ್ರಾಮದಲ್ಲಿ ಪಶು ವೈದ್ಯಕೀಯ ಕೇಂದ್ರಕ್ಕೆ ಯಾವುದೇ ಸರ್ಕಾರಿ ಜಮೀನನ್ನು ಮಂಜೂರಿ ಮಾಡಿಲ್ಲವೆಂದು ತಮ್ಮ ಹಿಂಬರಹದಲ್ಲಿ ಸ್ಪಷ್ಟಪಡಿಸಿದ್ದಾರೆ.

    ಈ ಎಲ್ಲ ವಿರೋಧದ ನಡುವೆ ಚೆಳ್ಳೂರು ಪಶು ಆಸ್ಪತ್ರೆಯ ವೈದ್ಯರು ಈ ನಿರ್ಮಾಣ ಹಂತದ ಕಟ್ಟಡ ಅವೈಜ್ಞಾನದಿಂದ ಕೂಡಿದೆ ಎಂದು ಹಿರಿಯ ಅಧಿಕಾರಿಗಳಿಗೆ ಆಕ್ಷೇಪಣಾ ಪತ್ರ ಬರೆದಿದ್ದಾರೆಂದು ತಿಳಿದು ಬಂದಿದೆ. ರಸ್ತೆ ಪಕ್ಕದಲ್ಲಿಯೇ ನಿರ್ಮಾಣ ಮಾಡುತ್ತಿದ್ದು, ಜಾನುವಾರುಗಳ ಚಿಕಿತ್ಸೆಗೆ ಮುಂದೆ ತೊಂದರೆಯಾಗಲಿದೆ. ಇದರ ಜೊತಗೆ ಪಶು ಆಸ್ಪತ್ರೆಗೆ ಇರಬೇಕಾದ ಎಲ್ಲ ಮಾನದಂಡಗಳನ್ನು ಇಲ್ಲಿ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.