Tag: ಪವಾಡ

  • ಉತ್ಸವಕ್ಕೂ ಮುನ್ನ ಹಾಸನಾಂಬೆ ದೇವಿಯ ಪವಾಡದ ಬಗ್ಗೆಯೇ ಅನುಮಾನ!

    ಉತ್ಸವಕ್ಕೂ ಮುನ್ನ ಹಾಸನಾಂಬೆ ದೇವಿಯ ಪವಾಡದ ಬಗ್ಗೆಯೇ ಅನುಮಾನ!

    – ಜ್ಞಾನ ವಿಜ್ಞಾನ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಎಚ್ಚರಿಕೆ

    ಹಾಸನ: ಮುಂದಿನ ತಿಂಗಳಿಂದ ವಿಖ್ಯಾತ ದೇವಾಲಯ ಹಾಸನಾಂಬೆಯ ಉತ್ಸವ ನಡೆಯಲಿದ್ದು, ಇದೀಗ ಹಾಸನಾಂಬೆಯ ಪವಾಡ, ಮಹಿಮೆಯ ಬಗ್ಗೆ ಅನುಮಾನವೊಂದು ಎದ್ದಿದೆ.

    ಈ ದೇವಾಲಯದ ಬಾಗಿಲನ್ನು ವರ್ಷಕೊಮ್ಮೆ ಮಾತ್ರ ತೆಗೆಯುತ್ತಾರೆ. ಮತ್ತೆ ಬೆರಳೆಣಿಕೆ ದಿನಗಳ ನಂತರ ಮತ್ತೆ ಮುಚ್ಚಲಾಗುತ್ತದೆ. ಕಳೆದ ವರ್ಷ ಹಚ್ಚಿದ ದೀಪ ಉರಿಯುತ್ತಲೆ ಇರುತ್ತದೆ. ಇಟ್ಟ ಅನ್ನದ ನೈವೇದ್ಯ ಹಳಸುವುದಿಲ್ಲ. ಹೂವು ಬಾಡುವುದಿಲ್ಲ. ಇದೆಲ್ಲ ಆ ದೇವಿಯ ಮಹಿಮೆ ಮತ್ತು ಪವಾಡ ಎನ್ನುತ್ತಾರೆ.

    ನಿಜಕ್ಕೂ ಅಲ್ಲಿ ಒಂದು ವರ್ಷಗಳ ಕಾಲ ದೀಪ ಉರಿಯುತ್ತಲೇ ಇರುತ್ತಾ ಎನ್ನುವ ಒಂದು ಪ್ರಶ್ನೆ ಸದಾ ಎಲ್ಲರಿಗೂ ಕಾಡುತ್ತದೆ. ಆ ಹೂವುಗಳ ಬಾಡುವುದೇ ಇಲ್ವ. ನೈವೇದ್ಯ ನಿಜಕ್ಕೂ ಹಳಸುವುದಿಲ್ಲವೇ ಎನ್ನುವ ಹಲವು ಪ್ರಶ್ನೆಗಳು ಸಹಜವಾಗಿ ಎಲ್ಲರಲ್ಲೂ ಇದೆ. ಆದ್ರೆ ಈಗಾಗಲೇ ಕೋಟ್ಯಂತರ ಮಂದಿ ಭಕ್ತಿಯಿಂದ ದೇವಿಯ ದರ್ಶನವನ್ನೂ ಮಾಡಿದ್ದಾರೆ. ಶ್ರದ್ಧಾಭಕ್ತಿಯಿಂದ ಹಾಸನಾಂಬೆಯ ದರ್ಶನವನ್ನೂ ಮಾಡುತ್ತಾರೆ. ಆದ್ರೆ ಇಲ್ಲಿ ನಡೆಯುವ ಪವಾಡದ ಸತ್ಯಾಸತ್ಯತೆ ಏನು ಎಂಬ ಪ್ರಶ್ನೆಗೆ ಇದೀಗ ಮತ್ತೆ ಜೀವ ಬಂದಿದೆ.

    ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಹಾಸನಾಂಬೆ ಉತ್ಸವಕ್ಕೂ ಮುನ್ನ ಅಲ್ಲಿಯ ಪವಾಡ ಕುರಿತು ಸತ್ಯಾಸತ್ಯತೆ ಶೋಧ ನಡೆಯಬೇಕು ಎಂದು ಒತ್ತಾಯ ಕೇಳಿಬಂದಿದೆ. ಇದಕ್ಕಾಗಿ ಮೂಢನಂಬಿಕೆ ವಿರೋಧಿಸುವ ಮತ್ತು ವಿವಿಧ ಸಂಘಸಂಸ್ಥೆಗಳ ಸದಸ್ಯರು ಜಿಲ್ಲಾಡಳಿತಕ್ಕೆ ಈ ಕುರಿತು ಮನವಿ ಮಾಡಲು ಮುಂದಾಗಿದ್ದಾರೆ. ಒಂದೆಡೆ ಮೂಢನಂಬಿಕೆ ನಿಷೇಧ ಕಾನೂನು ಜಾರಿಗೆ ತಂದಿರುವ ಸರ್ಕಾರವೇ ಇಲ್ಲಿ ಮೂಢನಂಬಿಕೆಯನ್ನ ಬಿತ್ತರಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿರುವ ಜ್ಞಾನ-ವಿಜ್ಞಾನ ಸಮಿತಿ ಸದಸ್ಯರು ಜಿಲ್ಲಾಡಳಿತ ನಿಜಾಂಶವನ್ನು ಬಯಲು ಮಾಡಬೇಕು ಎಂದು ಆಗ್ರಹಿಸುವ ಕುರಿತು ಚರ್ಚೆ ನಡೆಸಿದ್ದಾರೆ.

    ಹಾಸನ ನಗರದ ಕಚೇರಿಯಲ್ಲೇ ನಡೆದ ಈ ಸಭೆಯಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ನಂತರ ಸತ್ಯ ಶೋಧನ ಸಮಿತಿ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ನೀಡಲು ನಿರ್ಧರಿಸಲಾಯಿತು. ಅಲ್ಲದೇ ಮುಂದಿನ ದಿನಗಳಲ್ಲಿ ಮೂಢ ನಂಬಿಕೆ ನಿಷೇಧ ಕಾನೂನಿನ ಅನ್ವಯ ಇದರ ವಿರುದ್ಧ ಹೋರಾಡಲು ತೀರ್ಮಾನಿಸಿದೆ. ಈ ಮೂಲಕ ಪ್ರಶ್ನೆಯನ್ನು ಹುಟ್ಟುಹಾಕಿರುವ ಸಮಿತಿ ಈ ಬಾರಿ ಹಾಸನಾಂಬೆ ಉತ್ಸವಕ್ಕೆ ಮುನ್ನವೇ ವಿವಾದಕ್ಕೆ ನಾಂದಿ ಹಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೆಸಿಬಿ ಕಾರ್ಯಾಚರಣೆ ವೇಳೆ ಕೇಳಿತು ಮಗು ಅಳೋ ಸದ್ದು – ಸಾವು ಗೆದ್ದು ಬಂದಳು 3 ವರ್ಷದ ಸಂಜನಾ

    ಜೆಸಿಬಿ ಕಾರ್ಯಾಚರಣೆ ವೇಳೆ ಕೇಳಿತು ಮಗು ಅಳೋ ಸದ್ದು – ಸಾವು ಗೆದ್ದು ಬಂದಳು 3 ವರ್ಷದ ಸಂಜನಾ

    ಬೆಂಗಳೂರು: ಈಜೀಪುರದಲ್ಲಿ ಕುಸಿದು ಬಿದ್ದಿದ್ದ ಕಟ್ಟಡದ ಅವಶೇಷಗಳಡಿಯಿಂದ 3 ವರ್ಷದ ಹೆಣ್ಣು ಮಗುವೊಂದು ಪವಾಡಸದೃಶವಾಗಿ ಬದುಕುಳಿದಿದೆ. 3 ವರ್ಷದ ಸಂಜನಾ ಸಾವನ್ನೇ ಗೆದ್ದು ಬಂದ ಮಗು.

    ಮಗುವನ್ನು ಕಟ್ಟಡದ ಅವಶೇಷಗಳಡಿಯಿಂದ ಮಗುವನ್ನು ಹೊರಗೆ ತೆಗೆಯುತ್ತಿದ್ದಂತೆಯೇ ಅಲ್ಲಿ ಸೇರಿದ್ದವರು ಶಿಳ್ಳೆ ಹಾಗೂ ಕರತಾಡನಗಳ ಮೂಲಕ ಶ್ಲಾಘಿಸಿದರು. ಇಂದು ಬೆಳಗ್ಗೆ ಕುಸಿದು ಬಿದ್ದ ಕಟ್ಟಡದ ತೆರವಿಗೆ ಜೆಸಿಬಿ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಅವಶೇಷಗಳಡಿಯಿಂದ ಮಗು ಅಳುತ್ತಿರುವ ಸದ್ದು ಕೇಳಿಸಿದೆ. ತಕ್ಷಣ ಜೆಸಿಬಿ ಮೂಲಕ ನಡೆಸುತ್ತಿದ್ದ ಕಾರ್ಯಾಚರಣೆಯನ್ನು ಅಗ್ನಿಶಾಮಕ ಸಿಬ್ಬಂದಿ ನಿಲ್ಲಿಸಿದ್ದಾರೆ. ಬಳಿಕ ತಾವೇ ಸ್ವತಃ ಒಂದೊಂದೇ ಕಲ್ಲು, ಇಟ್ಟಿಗೆಗಳನ್ನು ತೆಗೆಯುತ್ತಿದ್ದಾಗ ಸಂಜನಾ ಅಗ್ನಿಶಾಮಕ ಸಿಬ್ಬಂದಿ ಕೈಗೆ ಸಿಕ್ಕಿದ್ದಾಳೆ. ಮಗುವನ್ನು ಅಂಬುಲೆನ್ಸ್ ನಲ್ಲಿ ಸಮೀಪದ ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದಿದ್ದಾರೆ.

    ಏನಾಗಿತ್ತು?: ಇಂದು ಬೆಳಗ್ಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 2 ಅಂತಸ್ತಿನ ಮನೆ ಕುಸಿದು ನಾಲ್ವರು ಮೃತಪಟ್ಟಿದ್ದರು. ಈ ಘಟನೆಯಲ್ಲಿ ಗರ್ಭಿಣಿಯೊಬ್ಬರು ಇನ್ನೂ ಅವಶೇಷದಡಿ ಸಿಲುಕಿದ್ದಾರೆ ಎನ್ನಲಾಗುತ್ತಿದ್ದು, ಇವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಗ್ರೀನ್‍ವ್ಯೂ ಹೋಟೆಲ್ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ರವಿಚಂದ್ರ ಹಾಗೂ ಕಲಾವತಿ ಹಾಗೂ ಮತ್ತಿಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ 7.10ಕ್ಕೆ ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ಸುಮಾರು 7.15ಕ್ಕೆ ಕಟ್ಟಡ ಕುಸಿದಿದೆ. ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ಮುಂದುವರಿದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಅಗ್ನಿಶಾಮಕ ದಳ ಸಿಬ್ಬಂದಿಯ ಮೇಲೂ ಗೋಡೆ ಕುಸಿದಿದ್ದು ಸುರೇಶ್, ಸುಬಾನ್, ಸೋಮಶೇಖರ್ ಎಂಬವರಿಗೆ ಗಾಯವಾಗಿದೆ. ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ರವಿಚಂದ್ರ ಹಾಗೂ ಕಲಾವತಿ ಎಂಬವರು ಮೇಲಿನ ಮನೆಯಲ್ಲಿದ್ದರು. ಕೆಳಗಿನ ಮನೆಯಲ್ಲಿದ್ದ ಎಂಟು ತಿಂಗಳ ಗರ್ಭಿಣಿ ಅಶ್ವಿನಿ ಹಾಗೂ ಇಬ್ಬರು ಮಕ್ಕಳು ಒಳಗೆ ಸಿಲುಕಿದ್ದರು. ಅಶ್ವಿನಿ ಅವರ ಗಂಡ ನೀರು ತರಲು ಹೊರಗೆ ಬಂದ ವೇಳೆ ಈ ಅವಘಡ ಸಂಭವಿಸಿದೆ. ಸುಮಾರು 20 ವರ್ಷ ಹಳೆಯ ಕಟ್ಟಡ ಇದಾಗಿದ್ದು, ಬ್ಯಾಚುಲರ್ಸ್ ಸುಮಾರು 5-6 ವರ್ಷದಿಂದ ಈ ಕಟ್ಟಡದಲ್ಲಿ ನೆಲೆಸಿದ್ದರು. ಘಟನೆಯಿಂದಾಗಿ ಅಕ್ಕಪಕ್ಕದ ಮನೆಗಳೂ ಕೂಡ ಬಿರುಕುಬಿಟ್ಟಿವೆ ಎಂದು ತಿಳಿದುಬಂದಿದೆ.

    https://youtu.be/Ybpd5J__WuM

  • ಮದ್ದೂರಿನ ದರ್ಗಾದ ಗೋರಿಯಲ್ಲಿ ಉಸಿರಾಟದ ಕಂಪನ – ಕುತೂಹಲ ವೀಕ್ಷಣೆಗೆ ಮುಗಿಬಿದ್ದ ಜನ

    ಮದ್ದೂರಿನ ದರ್ಗಾದ ಗೋರಿಯಲ್ಲಿ ಉಸಿರಾಟದ ಕಂಪನ – ಕುತೂಹಲ ವೀಕ್ಷಣೆಗೆ ಮುಗಿಬಿದ್ದ ಜನ

    ಮಂಡ್ಯ: ಮುಸ್ಲಿಂ ದರ್ಗಾದ ಗೋರಿಯೊಂದರಲ್ಲಿ ವಿಚಿತ್ರ ವಿಸ್ಮಯಕಾರಿ ಅನುಭವವಾಗ್ತಿದೆ. ದರ್ಗಾದಲ್ಲಿ ಒಟ್ಟು ಮೂರು ಗೋರಿಗಳಿವೆ. ಅದರಲ್ಲಿ ಎರಡು ಗೋರಿಗಳಲ್ಲಿ ಉಸಿರಾಟದ ಅನುಭವವಾಗ್ತಿದೆ ಎಂದು ಹೇಳಲಾಗುತ್ತಿದೆ. ಗೋರಿಯ ಮೇಲೆ ಹೊದಿಸಿರುವ ಚಾದರ್ ಅಲೆಯ ರೀತಿ ಮೇಲೆ ಕೆಳಗೆ ಅಲುಗಾಡುತ್ತಿದೆ.

    ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಹೊಳೆ ಬೀದಿಯಲ್ಲಿರುವ ಹಜರತ್ ಶಮನ್ ಷಾ ಇದೀಗ ವಿಸ್ಮಯಕ್ಕೆ ಕಾರಣವಾಗಿದೆ. ಗೋರಿಯ ಮೇಲೆ ಹೊದಿಸಿರುವ ಚಾದರದಲ್ಲಿ ಚಲನೆ ಕಂಡು ಬಂದಿದ್ದು ಸಮುದ್ರದಲ್ಲಿ ಬರುವ ಅಲೆಯ ರೀತಿ ಚಾದರ್ ಮೇಲೆ-ಕೆಳಗೆ ಚಲಿಸುತ್ತಿದೆ. ಕಳೆದ ಮೂರು ದಿನಗಳಿಂದ ಈ ರೀತಿಯ ಅನುಭವವಾಗಿದ್ರೂ ಇಂದು ಚಾದರ್ ಹೆಚ್ಚಿನ ಪ್ರಮಾಣದಲ್ಲಿ ಮೇಲೆ ಕೆಳಗೆ ಚಲಿಸಲಾರಂಭಿಸಿದೆ.

    ಈ ವಿಷಯ ಕ್ಷಣಮಾತ್ರದಲ್ಲಿ ಮದ್ದೂರು ಪಟ್ಟಣಾದ್ಯಂತ ಪಸರಿಸಿದ್ದು, ಜನರು ದರ್ಗಾದಲ್ಲಿ ನಡೆಯುತ್ತಿರುವ ಪವಾಡ ನೋಡಲು ಬರುತ್ತಿದ್ದಾರೆ. ಹಜರತ್ ಶಮನ್ ಷಾ ದರ್ಗಾಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಇದೇ ಮೊದಲ ಬಾರಿಗೆ ಈ ರೀತಿಯ ವಿಸ್ಮಯ ನಡೆದಿದೆ ಎಂದು ಸ್ಥಳೀಯರು ಹೇಳುತ್ತಾರೆ.

    ದರ್ಗಾದಲ್ಲಿರುವ ಗೋರಿಯ ಮೇಲಿನ ಚಾದರ್ ಅಲುಗಾಡುತ್ತಿರುವುದು ಎಲ್ಲರ ಕುತೂಹಲ ಕೆರಳಿಸಿ ಜನಸಾಗರವೇ ಹರಿದು ಬರುವಂತೆ ಮಾಡಿದೆ. ಆದರೆ ಚಾದರ್ ಅಲುಗಾಟದ ಹಿಂದೆ ಏನಾದರೂ ವೈಜ್ಞಾನಿಕ ಕಾರಣ ಇದೆಯಾ ಎಂಬುದು ತಿಳಿಯಬೇಕಿದೆ.

    https://youtu.be/Rkl5p_G8Tz4

     

  • ದಾವಣಗೆರೆ ಉಕ್ಕಡಗಾತ್ರಿಯಲ್ಲಿ ಅಜ್ಜಯ್ಯನ ಜಾತ್ರೆ – ಸಾವಿರಾರು ಭಕ್ತರು ಭಾಗಿ

    ದಾವಣಗೆರೆ ಉಕ್ಕಡಗಾತ್ರಿಯಲ್ಲಿ ಅಜ್ಜಯ್ಯನ ಜಾತ್ರೆ – ಸಾವಿರಾರು ಭಕ್ತರು ಭಾಗಿ

    ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ಅಜ್ಜಯ್ಯನ ಸುಕ್ಷೇತ್ರದಲ್ಲಿ ವಿಶಿಷ್ಟ ಜಾತ್ರೆ ನಡೆಯುತ್ತಿದೆ. ಮಾನಸಿಕ ಕಾಯಿಲೆಯಿಂದ ಹಿಡಿದು ಎಲ್ಲಾ ರೋಗಗಳನ್ನು ವಾಸಿ ಮಾಡುವ ಶಕ್ತಿ ಈ ಕ್ಷೇತ್ರಕ್ಕಿದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.

    ಪ್ರತಿ ಅಮಾವಾಸ್ಯೆಯಲ್ಲಿ ಈ ಕ್ಷೇತ್ರದಲ್ಲಿ ವಿಶಿಷ್ಟವಾದ ಪೂಜೆ ನಡೆಯುತ್ತವೆ. ಅದರಲ್ಲೂ ವರ್ಷದ ಶಿವರಾತ್ರಿ ಅಮಾವಾಸ್ಯೆ ನಂತರ ನಡೆಯುವ ಅಜ್ಜಯ್ಯನ ರಥೋತ್ಸವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ನೆರೆದು ಜಾತ್ರೆಯನ್ನು ವಿಜೃಂಭಣೆಯಿಂದ ನೆರವೇರಿಸುತ್ತಾರೆ. ಬೆಳ್ಳಗ್ಗೆಯಿಂದಲೂ ಶ್ರೀ ಗುರು ಕರಿಬಸವೇಶ್ವರ ಸ್ವಾಮಿಗೆ ವಿಶೇಷವಾದ ಪೂಜೆ ಪುನಸ್ಕಾರ ನಡೆಯುತ್ತವೆ. ಮೊದಲಿಗೆ ಅಜ್ಜಯ್ಯನ ಗದ್ದುಗೆ ಪೂಜೆ ನಡೆಸಿ ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಾರೆ.

     

    ಅಜ್ಜಯ್ಯನ ಪವಾಡವನ್ನು ನಂಬಿ ಲಕ್ಷಾಂತರ ಮಂದಿ ಭಕ್ತ ಸಂಕುಲವೇ ಇಲ್ಲಿ ನೆರೆಯುತ್ತದೆ. ಶಿವರಾತ್ರಿ ಬಳಿಕ ಅಮವಾಸ್ಯೆಯಂದು ನಡೆಯುವ ಜಾತ್ರೆಯಲ್ಲಿ ಕ್ಷುದ್ರ ಶಕ್ತಿಗಳಿಂದ ತೊಂದರೆ ಅನುಭವಿಸುತ್ತಿರುವ ಭಕ್ತರನ್ನು ಪಾರು ಮಾಡುವ ಶಕ್ತಿ ಶ್ರೀ ಗುರು ಕರಿಬಸವೇಶ್ವರ ಸ್ವಾಮಿಗೆ ಇದೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ.

    ಹೀಗಾಗಿ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಕಷ್ಟಗಳನ್ನು ಅಜ್ಜಯ್ಯನ ಮುಂದಿಟ್ಟು ಬೇಡಿಕೊಳ್ಳುತ್ತಾರೆ. ಶ್ರೀ ಕ್ಷೇತ್ರಗಳಲ್ಲಿ ಒಂದಾದ ಉಕ್ಕಡಗಾತ್ರಿಯಲ್ಲಿ ರಥೋತ್ಸವ ಅದ್ದೂರಿಯಾಗಿ ನಡೆಯುತ್ತದೆ. ನಂಬಿದ ಭಕ್ತರಿಗೆ ಕ್ಷೇಮವನ್ನಾಚಿಸುವ ಶ್ರೀ ಕರಿಬಸವೇಶ್ವರನ ದರ್ಶನ ಪಡೆದು ಭಕ್ತಾದಿಗಳು ಪುನೀತರಾಗುತ್ತಾರೆ.