Tag: ಪವಾಡ

  • ಕಟ್ಟಿಗೆ ತರಲು ಹೋಗಿ ನಾಪತ್ತೆಯಾಗಿದ್ದ ವೃದ್ಧ 6 ದಿನಗಳ ಬಳಿಕ ಕಾಡಿನಲ್ಲಿ ಪತ್ತೆ!

    ಕಟ್ಟಿಗೆ ತರಲು ಹೋಗಿ ನಾಪತ್ತೆಯಾಗಿದ್ದ ವೃದ್ಧ 6 ದಿನಗಳ ಬಳಿಕ ಕಾಡಿನಲ್ಲಿ ಪತ್ತೆ!

    – 82 ವರ್ಷದ ಹಿರಿ ಜೀವ ಬದುಕುಳಿದಿದ್ದೇ ಪಾವಡ
    – ಕಾಪಾಡಿದ್ದೇ ಊರಿನ ದೈವಗಳೆಂಬ ನಂಬಿಕೆ

    ಮಂಗಳೂರು: ಕಟ್ಟಿಗೆ ತರಲು ಕಾಡಿಗೆ ತೆರಳಿದ್ದ 82 ವರ್ಷದ ವಯೋವೃದ್ಧ ಇದ್ದಕ್ಕಿದಂತೆ ಕಣ್ಮರೆಯಾಗಿದ್ದರು. 6 ದಿನಗಳ ಸತತ ಹುಡುಕಾಟದ ಬಳಿಕ ವೃದ್ಧ ಪತ್ತೆಯಾದ ರೋಚಕ ಘಟನೆ ನಡೆದಿದೆ. ಆ ಹಿರಿಯ ಜೀವ ಆ ಭಯಾನಕ ಕಾಡಲ್ಲಿ ಬದುಕುಳಿದಿದ್ದೇ ಪವಾಡ. ಕೇವಲ ನೀರು ಕುಡಿದೇ ಇದ್ದ ಅವರನ್ನ ಕಾಪಾಡಿದ್ದೇ ಊರಿನ ದೈವಗಳು ಎಂಬ ನಂಬಿಕೆ ಈಗ ಮನೆ ಮಾತಾಗಿದೆ.

    ಹೌದು. ಕಟ್ಟಿಗೆ ತರಲೆಂದು ಮನೆ ಸಮೀಪದ ಕಾಡಿಗೆ ಹೋಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ (Belthangady, Dakshina Kannada) ತಾಲೂಕಿನ ಶಿಬಾಜೆ ಗ್ರಾಮದ ಐಂಗುಡ ನಿವಾಸಿ 82 ವರ್ಷದ ವಾಸು ರಾಣ್ಯ 6 ದಿನಗಳ ಬಳಿಕ ಕಾಡಿನಲ್ಲಿ ಪತ್ತೆಯಾದ ಘಟನೆ ನಡೆದಿದೆ. ಶಿಬಾಜೆ ಗ್ರಾಮದ ವಾಸು ರಾಣ್ಯ ಎಂಬವರು ಮೇ 21 ರಂದು ಬೆಳಗ್ಗೆ ಕೈಯಲ್ಲಿ ಕತ್ತಿ ಹಿಡಿದು ಮನೆ ಸಮೀಪವಿರುವ ಗುಡ್ಡಕ್ಕೆ ತೆರಳಿದ್ದರು. ಕಟ್ಟಿಗೆ ತರಲು ಹೋಗಿರಬಹುದು ಎಂದು ಅವರ ಮನೆಯವರು ಸುಮ್ಮನಿದ್ದರು. ಮಧ್ಯಾಹ್ನದವರೆಗೂ ವಾಸು ರಾಣ್ಯ ಅವರು ಮನೆಗೆ ಬರದೇ ಇದ್ದಾಗ ಸ್ಥಳೀಯರ ಜೊತೆ ಹುಡುಕಾಟ ನಡೆಸಲಾಗಿತ್ತು. ಸುಮಾರು 5 ದಿನಗಳ ಕಾಲ ಸುತ್ತಮುತ್ತ ಹುಡುಕಿದರೂ ವಾಸು ರಾಣ್ಯ ಪತ್ತೆಯಾಗಿರಲಿಲ್ಲ. ತನ್ನನ್ನು ಯಾರೋ ಬಾ ಬಾ ಎಂದು ಕರೆದಂತಾಯಿತು. ಹಾಗಾಗಿ ಧ್ವನಿಯ ಹಿಂದೆ ನಾನು ಹೋದೆ. ಆಹಾರವನ್ನೇನೂ ತಾನು ತೆಗೆದುಕೊಳ್ಳದೆ ಕೇವಲ ನೀರು ಮಾತ್ರ ಕುಡಿಯುತ್ತಿದ್ದೆ ಎಂದು ಕನವರಿಕೆಯಂತೆ ಹೇಳುತ್ತಿದ್ದರು. ವಾಸು ರಾಣ್ಯ ನಾಪತ್ತೆಯಾದ ದಿನ ಈ ಪರಿಸರದಲ್ಲಿ ವಿಪರೀತ ಗುಡುಗು, ಮಿಂಚು ಮಳೆ ಬಂದಿದ್ದರೂ ಆ ಸಮಯದಲ್ಲಿ ಒಬ್ಬಂಟಿಯಾಗಿ ಕಾಡಲ್ಲೇ ಇದ್ದರಂತೆ. ಇದನ್ನೂ ಓದಿ: ವರ್ತೆ ಪಂಜುರ್ಲಿ ಅಭಯ ನಿಜವಾಯ್ತು- ಕೊಲೆ ಆರೋಪಿ ನ್ಯಾಯಾಲಯಕ್ಕೆ ಶರಣು!

    ಮೇ 26 ರಂದು ಬೆಳಗ್ಗೆ ಮನೆಯವರು ಆಡು ಮೇಯಿಸಲೆಂದು ಮನೆ ಸಮೀಪವಿರುವ ಗುಡ್ಡೆಗೆ ತೆರಳಿದ್ದಾಗ ಕೂ…ಕೂ…ಎಂಬ ಶಬ್ದ ಕೇಳಿ ಬಂದಿದೆ. ಸದ್ದಿನ ಜಾಡು ಹಿಡಿದು ಸ್ಥಳೀಯರು ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದ ಶೌರ್ಯ ವಿಪತ್ತು ತಂಡದವರು ಹುಡುಕಾಟ ನಡೆಸಿದಾಗ ಮನೆಯ ಮೇಲಿನ ಭಾಗದ ಬಂಡಿಹೊಳೆ ಕಾಡಿನ ಸುಮಾರು 3 ಕಿ.ಮೀ. ದೂರದಲ್ಲಿ ವಾಸು ರಾಣ್ಯ ಪತ್ತೆಯಾಗಿದ್ದಾರೆ. ಬಳಿಕ ಅವರನ್ನು ಕೊಕ್ಕಡ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ವಾಸು ರಾಣ್ಯ ಅವರು ಆರೋಗ್ಯವಾಗಿದ್ದಾರೆ. ವಾಸು ರಾಣ್ಯ ಅವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಕೆಲಸ ಶ್ಲಾಘನೀಯ.

    ವಾಸು ಜೀವಂತವಾಗಿ ಇರುವ ಬಗ್ಗೆ ಭರವಸೆಯನ್ನೆ ಕಳೆದುಕೊಂಡಿದ್ದ ಊರ ಜನರಲ್ಲಿ ಈಗ ಸಂಭ್ರಮ ಮನೆಮಾಡಿದೆ. ವಾಸು ಅವರನ್ನು ಆ 6 ದಿನ ರಕ್ಷಣೆ ನೀಡಿದ್ದೇ ಆ ಊರಿನ ದೈವಗಳು ಎಂಬ ನಂಬಿಕೆ ಊರಿನವರದ್ದು. ಬದುಕುಳಿಯಲು ಶಕ್ತಿ ನೀಡಿದ್ದೇ ವಾಸು ಕುಟುಂಬಸ್ಥರು ನಂಬಿ ಸೇವೆ ಸಲ್ಲಿಸುತ್ತಿರುವ ದೈವಗಳು ಎಂಬ ನಂಬಿಕೆ ಈಗ ಮನೆಮಾತಾಗಿದೆ. ಅದು ಏನೇ ಇರಲಿ 82 ವರ್ಷದ ವಾಸುರಾಣ್ಯ ದಟ್ಟಕಾಡಿನ ನಡುವೆ 6 ದಿನಗಳ ಕಾಲ ಬದುಕುಳಿದಿದ್ದೇ ಒಂದು ಪವಾಡ.

  • ತುಕಾಲಿ ಸಂತು ಹುಟ್ಟಿದಾಗ ಅವರ ಊರಲ್ಲಿ ನಡೆದಿತ್ತು ಪವಾಡ

    ತುಕಾಲಿ ಸಂತು ಹುಟ್ಟಿದಾಗ ಅವರ ಊರಲ್ಲಿ ನಡೆದಿತ್ತು ಪವಾಡ

    ದಾ ಕಾಮಿಡಿ ಮಾಡಿಕೊಂಡು ಎಲ್ರನ್ನೂ ನಗುನಗಿಸ್ತಾ ಇರ್ತಿದ್ದ ಸಂತೋಷ್ (Tukali Santu), ಅಪರೂಪಕ್ಕೊಮ್ಮೆ ಸೀರಿಯಸ್ ಆಗಿದ್ದಾರೆ. ಅಷ್ಟೇ ಅಲ್ಲ, ತುಂಬ ಸೀರಿಯಸ್ ಆಗಿ ತಮ್ಮ ಹುಟ್ಟಿನ ಪವಾಡದ ಕಥೆಯನ್ನು ರೋಚಕವಾಗಿ ಹೇಳಿಕೊಡುತ್ತಿದ್ದಾರೆ. ಆದ್ರೆ ಏನ್ಮಾಡೋದು? ಅವ್ರು ಸೀರಿಯಸ್ ಆಗಿ ಮಾತಾಡಲಿಕ್ಕೆ ಶುರುಮಾಡಿದಾಗ, ಯಾವಾಗ್ಲೂ ಸೀರಿಯಸ್ ಆಗಿರೋ ಸ್ಪರ್ಧಿಗಳೆಲ್ಲ ಕಾಮಿಡಿ ಮಾಡಿ ಅವ್ರ ಕಾಲೆಳಿಲಿಕ್ಕೆ ಶುರುಮಾಡಿದಾರಪ್ಪಾ. ತಾವು ಹೇಳಿದ ಕಥೆಯನ್ನು ಯಾರೂ ನಂಬ್ಲಿಲ್ಲ ಅಂದ್ರೆ ಸಂತೋಷ್‌ಗೆ ನೋವಾಗಲ್ವಾ? ಹೋಗ್ಲಿ ನೀವಾದ್ರೂ ಅವ್ರ ಹುಟ್ಟಿನ ಕಥೆಯನ್ನು ‘ಸೀರಿಯಸ್’ ಆಗಿ ಕೇಳಿ.

    ’15-01-1990ಕ್ಕೆ ಒಬ್ಬ ಮಹಾನ್ ಸಾಧಕನ ಜನನ ಆಗತ್ತೆ’ ಸಂತೋಷ್ ಕಥೆಯ ಸಾಲಿನ ಬಗ್ಗೆಯೇ ನೀತುಗೆ ಅನುಮಾನ. 1990? ಎಂದು ಪ್ರಶ್ನಾರ್ಥಕವಾಗಿ ಕೇಳ್ತಾರೆ. ಆದ್ರೆ ವಯಸ್ಸನ್ನು ಕಡಿಮೆ ಮಾಡಿಕೊಳ್ಳುವ ಹುಮ್ಮಸ್ಸಿನಲ್ಲಿದ್ದ ಸಂತೋಷ್‌ ಅವರ ಅನುಮಾನದ ಕಡೆಗೆ ಗಮನಹರಿಸಲು ಸಾಧ್ಯನಾ? ಅವರು ತಮ್ಮ ಪಾಡಿಗೆ ತಾವು ಮಾತು ಮುಂದುವರಿಸುತ್ತಾರೆ. ‘ಪವಾಡ ಪುರುಷ ಅಲ್ಲ ನಾನು. ನಾನು ಹುಟ್ಟಿದ್ದೇ ಒಂದು ಪವಾಡ. ಪವಾಡದಿಂದ (Pavada) ಜನನ. ನಾನು ಹುಟ್ಟಿದ್ದೇ ಒಂದು ಪವಾಡ. ನಿಮಗಿನ್ನ ಗೊತ್ತಿಲ್ಲ, ಒಂಬತ್ತು ತಿಂಗಳಾಗಿ ಮೂರು ದಿನಕ್ಕೆ ನಾನು ಹುಟ್ಟಿರೋದು. ಒಂಬತ್ತುತಿಂಗಳು ಕರೆಕ್ಟಾಗಿ ಬರತ್ತಲ್ಲಾ. ಅವತ್ತು, ಜೋರಾದ ಗುಡುಗು, ಸಿಡಿಲು, ಮಳೆ, ಗಾಳಿ…’ ಇಷ್ಟು ಹೇಳುತ್ತಿದ್ದ ಹಾಗೆಯೇ ಮಧ್ಯ ಬಾಯಿ ಹಾಕಿದೋರು ವರ್ತೂರು ಸಂತೋಷ್. “ಈ ಭೂಮಿಗೆ ಯಾವ್ದೋ ದುಷ್ಟಶಕ್ತಿ ಬರ್ತಿದೆ ಅಂತ ಸೂಚನೆ’ ಎಂದ ಅವರ ಮಾತಿಗೆ ಉಳಿದವರೆಲ್ಲ ಜೋರಾಗಿ ನಕ್ಕರು. ಗೌರೀಶ ಅಕ್ಕಿ, ಇನ್ನೊಂದು ಹೆಜ್ಜೆ ಮುಂದೆ ಹೋಗಿ, ‘ಧುರ್ಯೋಧನ ಹುಟ್ಟಬೇಕಾದರೆ ಹಿಂಗೇ ಆಗಿತ್ತಂತೆ’ ಎಂದು ಸಂತೋಷ್ ಜನ್ಮಕ್ಕೆ ಪುರಾಣಸ್ಪರ್ಶವನ್ನು ಬೇರೆ ಕೊಟ್ಟುಬಿಟ್ಟರು.

    ತುಕಾಲಿ ಅವರಿಗೆ ಕೋಪ ಬರ್ದೇ ಇರತ್ತಾ? ಆದ್ರೂ ನಗ್ತಾನೇ ‘ನನ್ನ ಹಾಳು ಮಾಡ್ತಿದ್ದಾರೆ ಇವ್ರು’ ಎಂದು ಹೇಳಿ ತಮ್ಮ ಕಥೆಯನ್ನು ಮುಂದುವರಿಸಿದ್ರು. ‘ಜೋರಾದ ಗುಡುಗು, ಸಿಡಿಲು, ಮಳೆ ಬರ್ತಾ ಐತೆ. ರಾತ್ರಿ ಒಂಬತ್ತು ಗಂಟೆ. ಅಮ್ಮ ಬೆಳಿಗ್ಗೆ ತಿಂಡಿ ಮಾಡ್ಬೇಕಲಾ… ತರಕಾರಿ ಹಿಡ್ಕೊಂಡು ಬರ್ತಾ ಇದ್ದಾರೆ ದೇವಸ್ಥಾನದ ಹತ್ರ. ಆಗ ಯಾವ್ದೋ ಒಂದು ಶಬ್ದ’ ಎಂದು ಎರಡು ಸಾಲು ಹೇಳುವಷ್ಟರಲ್ಲಿ ನೀತು ತಲೆಗೆ ಹೊಸ ಆಲೋಚನೆ ಹೊಳೆದಿದೆ. ‘ಈ ಕಥೆಯನ್ನೇ ಸಿನಿಮಾ ಮಾಡ್ಬೋದು ನೀವು’ ಎಂದು ಗೌರೀಶ ಅವರಿಗೆ ಸಲಹೆಯನ್ನೂ ಕೊಟ್ಟುಬಿಟ್ಟರು.

    ಈಗ ಸಂತೋಷ್‌ ತಾಳ್ಮೆಯ ಕಟ್ಟೆ ಒಡೀತು. ‘ಯಾರಾದ್ರೂ ಬಂದು ನನ್ ತಲ್ ತಲೆಗೆ ಹೊಡ್ದುಬಿಡ್ರಪ್ಪಾ… ಹೊಡ್ದುಬಿಡಿ… ನನ್ ಲೈಫ್‌ನ ರಿಯಲ್ ಸ್ಟೋರಿ ಹೇಳ್ತಿದೀನಿ… ಸಿನಿಮಾ ಮಾಡ್ಬೇಕು ಅಂತಿದೀರಲಾ ನೀವು…’ ಎಂದು ಕೋಪಗೊಂಡರೇನೋ ನಿಜ. ಆದ್ರೆ ಕಥೆಯನ್ನು ಹೇಳುವ ಉತ್ಸಾವನ್ನು ಮಾತ್ರ ಕಳೆದುಕೊಳ್ಳಲಿಲ್ಲ. ‘ಇದು ನಿಜವಾಗ್ಲೂ ನಡೆದಿದ್ದು. ನಮ್ಮೂರಲ್ಲಿ ಮಾರಮ್ಮನ ಗುಡಿ, ಆಂಜನೇಯ ಸ್ವಾಮಿ ಗುಡಿ ಇವೆ. ಈಗ ದೇವಸ್ಥಾನ ಕಟ್ತವ್ರೆ. ವೆರಿ ಪವರ್‍‌ಫುಲ್ ಆಂಜನೇಯಸ್ವಾಮಿ. ಆ ಗುಡಿ ಹತ್ರ ನಮ್ಮಮ್ಮ ತರಕಾರಿ ಬ್ಯಾಗ್ ಹಿಡ್ಕಂಡು ಬರೋವಾಗ ಒಂದು ಧ್ವನಿ ಕೇಳ್ತಂತೆ.. ನಿನ್ ಮಗ ಇಡೀ ಜಗತ್ತನ್ನೇ….’

    ಸಂತೋಷ್ ಮಾತನ್ನು ತುಂಡರಿಸಿದ ಸಿರಿ (Siri),  ‘ಹಾಳ್ಮಾಡ್ತಾನೆ ಅಂದ್ರಾ?’ ಎಂದು ಕೇಳಿದರು. ‘ಇಲ್ಲ. ಆಳ್ತಾನೆ ಅಂತ. ನಾನು ದೊಡ್ಡ ಇದಾಯ್ತೀನಿ ಅಂತ ಹೇಳಿದ್ದು ಅಲ್ಲಿ’ ಎಂದು ಸಮಾಧಾನದಿಂದ ತಿದ್ದಿದರು ತುಕಾಲಿ ಅವರು. ‘ನಿನ್ ಮಗ ಒಳ್ಳೆ ಅದ್ಭುತ ವ್ಯಕ್ತಿಯಾಗ್ತಾನೆ. ಸಾಧಕನಾಗ್ತಾನೆ. ಇಡೀ ನಾಡನ್ನು ಗೆಲ್ಲುವಂಥ ಶಕ್ತಿ ಸಿಗ್ತದೆ- ಇಷ್ಟು ಮಾತು ಆ ಗುಡುಗು ಸಿಡಿಲು ಮಳೆಯಲ್ಲಿ ಎಲ್ಲೋ ಒಂದು ಕಡೆ ಎಕೋ ಧ್ವನಿಯಲ್ಲಿ ಕೇಳಿಸಿದ್ದು’

     

    ಸಂತೋಷ್ ಇಷ್ಟು ತನ್ಮಯನಾಗಿ ಕಥೆ ಹೇಳ್ತಿದ್ರೆ ಉಳಿದವರಿಗೆಲ್ಲ ಲಾಜಿಕ್‌ನ ಸಮಸ್ಯೆ. ‘ನೀವು ಎಲ್ಲಿದ್ರಿ ಆವಾಗ?’ ‘ನೀವು ಹುಟ್ಟೇ ಇರ್ಲಿಲ್ವಲ್ಲಾ. ನಿಮಗೆ ಹೇಗೆ ಗೊತ್ತಾಯ್ತು?’ ‘ಅಮ್ಮನತ್ರ ಛತ್ರಿ ಇರ್ಲಿಲ್ವಾ?’ -ರೋಚಕ ಪವಾಡದ ಕಥೆಯನ್ನು ಅಷ್ಟೇ ರಸವತ್ತಾಗಿ ಹೇಳುತ್ತಿರುವಾಗ ಅದನ್ನು ಮೈಮರೆತು ಕೇಳಿಸಿಕೊಳ್ಳೋದು ಬಿಟ್ಟು ಎಲ್ರೂ ಹೀಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳತೊಡಗಿದ್ರೆ ಕಥೆ ಮುಂದುವರಿಸೋದಾದ್ರೂ ಹೇಗೆ? ಆದ್ರೆ ತುಕಾಲಿ ಅವರಿಗೆ ತಮ್ಮನ್ನು ಜನ್ಮದ ಹಿಂದಿನ ‘ಪವಾಡ’ದ ಕಥೆಯನ್ನು ಎಲ್ಲರಿಗೂ ನಂಬಿಸಬೇಕು ಎಂಬ ಹಠ. ಇಂತಹ ಹತ್ತಾರು ಕಥೆಗಳನ್ನು JioCinemaದ ‘Unseen ಕಥೆಗಳ’ಲ್ಲಿ ನೋಡಬಹುದಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಸಪ್ಪನಿಗೆ ಚಮಚದಲ್ಲಿ ಹಾಲು ಕುಡಿಸಿದ ಭಕ್ತರು!

    ಬಸಪ್ಪನಿಗೆ ಚಮಚದಲ್ಲಿ ಹಾಲು ಕುಡಿಸಿದ ಭಕ್ತರು!

    ಬಾಗಲಕೋಟೆ: ಜನ ಮರುಳೊ, ಜಾತ್ರೆ ಮರುಳೊ ಎಂಬ ಘಟನೆ ನಿನ್ನೆ ರಾತ್ರಿ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ನಡೆದಿದೆ. ಬಸಪ್ಪನಿಗೆ ಭಕ್ತರು ಚಮಚದಲ್ಲಿ ಹಾಲು ಕುಡಿಸಿದ್ದಾರೆ.

    ಪಟ್ಟಣದ ಅರಳಿಕಟ್ಟೆ ಬಸಪ್ಪನಿಗೆ ಭಕ್ತರು ಚಮಚದಲ್ಲಿ ಹಾಲು ಕುಡಿಸಲು ಶುರು ಮಾಡಿದ್ದಾರೆ. ಚಮಚದಲ್ಲಿನ ಹಾಲು ಕೆಳಗೆ ಬಿದ್ದರೇ ಬಸವಣ್ಣ ಹಾಲು ಕುಡಿದ ಅಂತ ನಂಬಿಕೆ. ಈ ಸುದ್ದಿ ಪಟ್ಟಣದ ತುಂಬ ಹರಡಿದ್ದು, ಬಸಪ್ಪನನ್ನು ನೋಡಲು ಜನರು ಮುಗಿಬಿದ್ದಿದ್ದಾರೆ.

    ನಿನ್ನೆ ರಾತ್ರಿ ಜನರು ಬಸಪ್ಪನ ಪವಾಡ ನೋಡಬೇಕು ಎಂದು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.

  • 58 ವರ್ಷದ ಸಮಸ್ಯೆ ಬಗೆಹರಿಸಿದ ಬಸಪ್ಪ – ಪವಾಡ ನೋಡಿ ನಿಬ್ಬೆರಗಾದ ಜನರು

    58 ವರ್ಷದ ಸಮಸ್ಯೆ ಬಗೆಹರಿಸಿದ ಬಸಪ್ಪ – ಪವಾಡ ನೋಡಿ ನಿಬ್ಬೆರಗಾದ ಜನರು

    ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಬಸಪ್ಪನ ಮತ್ತೊಂದು ಪವಾಡ ನಡೆದಿದ್ದು, 58 ವರ್ಷದ ಗುಡ್ಡಪ್ಪ ನೇಮಕ ವಿವಾದವನ್ನು ಬಸಪ್ಪ ಇತ್ಯರ್ಥ ಮಾಡಿದೆ.

    basappa

    ಮಂಡ್ಯ ತಾಲೂಕಿನ ದೊಡ್ಡಬಾನಸವಾಡಿ ಗ್ರಾಮದ ಮೂರು ದೇವಾಲಯಗಳಿಗೆ ಮೂವರು ಪೂಜಾರಿಗಳ ನೇಮಕ ಮಾಡುವ ಮೂಲಕ ಹೊನ್ನನಾಯಕನಹಳ್ಳಿ ಧರೆಗೆ ದೊಡ್ಡವರು ಮಂಟೇಸ್ವಾಮಿ ಬಸಪ್ಪ ಪವಾಡ ಮಾಡಿದೆ. ದೊಡ್ಡಬಾನಸವಾಡಿ ಗ್ರಾಮದ ಚೌಡೇಶ್ವರಿ, ಪಟ್ಟಲದಮ್ಮ, ಮಾರ್ಗೋನಹಳ್ಳಿ ಅಮ್ಮ ದೇಗುಲಕ್ಕೆ ಅರ್ಚಕರು ಇರಲಿಲ್ಲ. ಹೀಗಾಗಿ ಅರ್ಚಕರ ಆಯ್ಕೆಗೆ ಬಸಪ್ಪನನ್ನು ಗ್ರಾಮಕ್ಕೆ ಕರೆಸಲಾಯಿತು.

    ಪೂಜಾರಿ ಆಯ್ಕೆ ವಿವಾದದಿಂದ 58 ವರ್ಷದಿಂದ ಪಟ್ಟಲದಮ್ಮನ ಕೊಂಡ, ಬಂಡಿ ಹಬ್ಬಗಳು ನಿಂತಿದ್ದವು. ಪಟ್ಟಲದಮ್ಮ ದೇವಿಯ ಅರ್ಚಕರೊಬ್ಬರ ನಿಧನದ ಬಳಿಕ, ಇಲ್ಲಿ ಈ ಹಬ್ಬ ನಿಂತಿತ್ತು. ವಯೋಸಹಜವಾಗಿ 58 ವರ್ಷದ ಹಿಂದೆ ಅರ್ಚಕರು ಮೃತಪಟ್ಟಿದ್ದರು. ಬಳಿಕ ಮತ್ತಿಬ್ಬರು ಪೂಜಾರಿಗಳನ್ನು ಗ್ರಾಮಸ್ಥರು ನೇಮಿಸಿದ್ದರು. ಆದರೆ ಅರ್ಚಕರ ಮೈ ಮೇಲೆ ದೇವರು ಬಾರದಿದ್ದಕ್ಕೆ 58 ವರ್ಷಗಳಿಂದ ಪಟ್ಟಲದಮ್ಮನ ಹಬ್ಬ ನಿಂತಿತ್ತು. ಇದೀಗ ಮತ್ತೆ ಹಬ್ಬ ಆಚರಣೆ ಮಾಡಬೇಕೆಂದು ದೈವಸ್ವರೂಪಿ ಮಂಟೇಸ್ವಾಮಿ ಬಸಪ್ಪನ ಮೊರೆಗೆ ಗ್ರಾಮಸ್ಥರು ಹೋಗಿದ್ದರು. ಗ್ರಾಮಸ್ಥರ ಮನವಿ ಮೇರೆಗೆ ಊರಿಗೆ ಬಸಪ್ಪ ಬಂದಿತ್ತು. ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ 3ನೇ ಹಂತ, ಪಂಜಾಬ್ ಮತದಾನ ಇಂದು – ಅಖಿಲೇಶ್ ಯಾದವ್ ಭವಿಷ್ಯ ನಿರ್ಧಾರ

    ಊರಿಗೆ ಬಂದ ನಂತರ ದೇವಸ್ಥಾನಗಳ ಅರ್ಚಕರ ನೇಮಕ ಪ್ರಕ್ರಿಯೆಯನ್ನು ಬಸಪ್ಪ ಆರಂಭಿಸಿತು. ಜನರ ಗುಂಪಿನಲ್ಲಿ ಕುಳಿತಿದ್ದ ಮೂವರನ್ನು ಬಸಪ್ಪ ಗುರುತಿಸಿತು. ಬಳಿಕ ಅವರನ್ನು ದೇಗುಲದ ಮುಂಭಾಗದ ಕೊಳಕ್ಕೆ ತಳ್ಳಿ ಅರ್ಚಕರ ಆಯ್ಕೆಯನ್ನು ಮಾಡಿತು. ಬಸಪ್ಪನ ಪವಾಡ ಕಣ್ಣಾರೆ ಕಂಡ ಗ್ರಾಮಸ್ಥರು ಮೂಕವಿಸ್ಮಿತರಾದರು. ಚೌಡೇಶ್ವರಿ ದೇಗುಲಕ್ಕೆ ಪ್ರತಾಪ್, ಪಟ್ಟಲದಮ್ಮ ದೇಗುಲಕ್ಕೆ ಮಂಜು, ಮಾರ್ಗೋನಹಳ್ಳಿ ಅಮ್ಮ ದೇಗುಲಕ್ಕೆ ಶಿವಣ್ಣ ಎಂಬುವರನ್ನು ಅರ್ಚಕರನ್ನಾಗಿ ಬಸಪ್ಪ ಆಯ್ಕೆ ಮಾಡಿತು. ಇದನ್ನೂ ಓದಿ: ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್

  • ಮಂಡ್ಯದಲ್ಲಿ ಬಸಪ್ಪನ ಪವಾಡಕ್ಕೆ ಮಾರುಹೋದ ಗ್ರಾಮಸ್ಥರು

    ಮಂಡ್ಯದಲ್ಲಿ ಬಸಪ್ಪನ ಪವಾಡಕ್ಕೆ ಮಾರುಹೋದ ಗ್ರಾಮಸ್ಥರು

    ಮಂಡ್ಯ: ಒಬ್ಬ ಆರ್ಚಕನಾಗಬೇಕೆಂದರೆ ಆತನಿಗೆ ಮಂತ್ರ, ಸ್ತೋತ್ರ, ಶಾಸ್ತ್ರಗಳ ಬಗ್ಗೆ ಜ್ಞಾನವಿರಬೇಕು. ಆಚಾರ- ವಿಚಾರ ಆಚರಣೆ ಸಾಮಾನ್ಯವಾಗಿ ತಿಳಿದಿರಬೇಕು. ಅಲ್ಲದೆ ದೇವಸ್ಥಾನಕ್ಕೆ ಯಾರು ಆರ್ಚಕನಾಗಬೇಕೆಂಬುವುದನ್ನು ದೇವಾಲಯದ ಆಡಳಿತ ಮಂಡಳಿ ನಿರ್ಧರಿಸುತ್ತದೆ. ಆದರೆ ಮಂಡ್ಯ ಜಿಲ್ಲೆಯ ದೇವಸ್ಥಾನವೊಂದರಲ್ಲಿ ತನಗೆ ಯಾರು ಪೂಜೆ ಮಾಡಬೇಕೆಂಬುವುದನ್ನು ಸ್ವತಃ ದೇವರೇ ಪರೋಕ್ಷವಾಗಿ ನಿರ್ಧರಿಸುವ ಮೂಲಕ ಪವಾಡ ಸೃಷ್ಟಿಸಿದೆ.

    ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯ ಈರೇಗೌಡನದೊಡ್ಡಿಯಲ್ಲಿ ಕಾಲಬೈರವೇಶ್ವರಸ್ವಾಮಿಯ ಬಸಪ್ಪ ಅಲ್ಲಿನ ಮಾರಮ್ಮ ದೇವಸ್ಥಾನಕ್ಕೆ ಅರ್ಚಕನನ್ನು ನೇಮಿಸುವ ಮೂಲಕ ಬಸವವೊಂದು ಪವಾಡ ಮಾಡಿದೆ. ಗ್ರಾಮದ ಮಾರಮ್ಮ ದೇವಸ್ಥಾನಕ್ಕೆ ಯಾರನ್ನು ಅರ್ಚಕನಾಗಿ ನೇಮಿಸುವುದು ಎಂದು ಗ್ರಾಮಸ್ಥರು ಗೊಂದಲದಲ್ಲಿದ್ದರು. ಈ ಕುರಿತ ಗೊಂದಲ ಬಗೆ ಹರಿಸಲು ಕಾಲಭೈರವೇಶ್ವರಸ್ವಾಮಿ ಬಸಪ್ಪನನ್ನು ಗ್ರಾಮಸ್ಥರು ಕರೆತಂದಿದ್ದಾರೆ. ಈರೇಗೌಡನದೊಡ್ಡಿಯ ಕೃಷ್ಣ ಎಂಬವರನ್ನು ಅರ್ಚಕರನಾಗಿ ಬಸಪ್ಪ ಆಯ್ಕೆ ಮಾಡಿದೆ. ಮೊದಲಿಗೆ ಬಸಪ್ಪನ ಆಯ್ಕೆಯನ್ನು ಕೃಷ್ಣ ತಿರಸ್ಕರಿಸಿದ್ದಾರೆ.

    ನನಗೆ ಸಾಕಷ್ಟು ಕಷ್ಟಗಳು ಇವೆ, ನಾನು ಅರ್ಚಕ ಆಗಲ್ಲ ಎಂದು ಕೃಷ್ಣ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಬಸಪ್ಪ ತನ್ನ ಕೊಂಬುಗಳಿಂದ ತಿವಿಯುವ ಮೂಲಕ ಕೃಷ್ಣನಿಗೆ ತಕ್ಕ ಪಾಠ ಕಲಿಸಿದೆ. ನಂತರ ಬಸಪ್ಪನ ತೀರ್ಪನ್ನು ಕೃಷ್ಣ ಹಾಗೂ ಗ್ರಾಮಸ್ಥರು ಒಪ್ಪಿಕೊಂಡರು. ಬಳಿಕ ಕೃಷ್ಣನನ್ನು ಗ್ರಾಮ ಕಲ್ಯಾಣಿಗೆ ಮುಳುಗಿಸಿ ಸ್ನಾನ ಮಾಡಿದ ಬಳಿಕ ಕೃಷ್ಣನನ್ನು ಅರ್ಚಕನಾಗಿ ನೇಮಕ ಮಾಡಲಾಗಿದೆ.

  • ಮಾಟ ಮಂತ್ರ ಪತ್ತೆ ಮಾಡಿದ ಬಸವ

    ಮಾಟ ಮಂತ್ರ ಪತ್ತೆ ಮಾಡಿದ ಬಸವ

    ಮಂಡ್ಯ: ತಮ್ಮ ಮನೆಯ ಆವರಣದಲ್ಲಿ ಮಾಡಲಾಗಿದೆ ಎನ್ನಲಾದ ಮಾಟ ಮಂತ್ರದ ನಿವಾರಣೆಗಾಗಿ ರೈತ ಕುಟುಂಬವೊಂದು ಬಸಪ್ಪನ ಮೊರೆ ಹೋಗಿರುವ ಘಟನೆ ಜಿಲ್ಲೆ ನಾಗಮಂಗಲ ತಾಲೂಕಿನ ಚಿಕ್ಕವೀರನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಹೊನ್ನಲಗೇಗೌಡ ಎಂಬವರೇ ತಮ್ಮ ಮನೆಯಲ್ಲಿನ ಸಮಸ್ಯೆ ಪರಿಹಾರಕ್ಕಾಗಿ ಬಸವನ ಮೊರೆ ಹೋಗಿದ್ದರು. ರೈತ ಮನೆಯವರಿಗೆ ಯಾರೋ ಮಾಟ ಮಾಡಿಸಿದ್ದಾರೆ. ಅದನ್ನ ಮನೆಯ ಆವರಣದಲ್ಲಿ ಎಲ್ಲೋ ಒಂದು ಕಡೆ ಹೂತು ಹಾಕಿದ್ದಾರೆ ಎಂಬ ಬಗೆಗೆ ಅನುಮಾನಗೊಂಡಿದ್ದನು. ಈ ರೀತಿಯ ಮಾಟ ಮಂತ್ರಗಳನ್ನ ಗುರುತಿಸಿ ನಿವಾರಿಸುವುದರಲ್ಲಿ ಹೆಸರುವಾಸಿಯಾಗಿರುವ ರಾಮನಗರ ಜಿಲ್ಲೆಯ ಜಯಪುರ ಗ್ರಾಮದ ಶ್ರೀ ತಾಯಿ ಚಾಮುಂಡೇಶ್ವರಿ ದೇವಿಯ ಬಸವನನ್ನು ಊರಿಗೆ ಕರೆಸಿದ್ದಾರೆ.


    ಊರಿಗೆ ಬಂದ ಬಸಪ್ಪನಿಗೆ ಭಕ್ತಿ ಪೂರ್ವಕವಾಗಿ ಪೂಜೆ ಸಲ್ಲಿಸಿದ ನಂತರ ಬಸಪ್ಪ ಹೊನ್ನಲಗೇಗೌಡರ ಮನೆಯ ಮುಂದೆ ಎರಡು ಕಡೆ ಹೂತಿಟ್ಟಿದ್ದ ಎರಡು ಮಾಟದ ವಸ್ತುಗಳನ್ನು ಪತ್ತೆ ಹಚ್ಚಿದೆ. ಮಾಟ ಮಾಡಿ ಹೂತಿಟ್ಟಿದ್ದ ಸ್ಥಳವನ್ನ ತನ್ನ ಪಾದದ ಮೂಲಕ ತೋರಿಸಿಕೊಟ್ಟಿದೆ. ನಂತರ ಅಲ್ಲಿ ಗುಂಡಿ ತೆಗೆಸಿ ನೋಡಿದಾಗ ಮಾಟ ಮಾಡಿ ಹೂತಿಟ್ಟಿರುವುದು ಬೆಳಕಿಗೆ ಬಂದಿದೆ.

  • ಅಳುತ್ತಿದ್ದ ಮಗುವಿನ ತೊಟ್ಟಿಲನ್ನು ಕೊಂಬಿನಿಂದ ತೂಗಿ ಮಲಗಿಸಿದ ಬಸಪ್ಪ

    ಅಳುತ್ತಿದ್ದ ಮಗುವಿನ ತೊಟ್ಟಿಲನ್ನು ಕೊಂಬಿನಿಂದ ತೂಗಿ ಮಲಗಿಸಿದ ಬಸಪ್ಪ

    ಮಂಡ್ಯ: ಸಕ್ಕರೆ ನಗರಿ ಮಂಡ್ಯ ಜಿಲ್ಲೆಯ ಹಲವು ಭಾಗಗಳಲ್ಲಿ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯ ಕಾಲಭೈರವೇಶ್ವರನ ಬಸಪ್ಪ ಹಾಗೂ ರಾಮನಗರ ಜಿಲ್ಲೆಯ ಕಾವಾಣಾಪುರದ ಬಸಪ್ಪನ ಪವಾಡಗಳು ಜನರಿಗೆ ಅಚ್ಚರಿಯುಂಟು ಮಾಡುತ್ತಿವೆ.

    ಬುಧವಾರ ಮಂಡ್ಯ ತಾಲೂಕಿನ ಡಣಾಯಕನಪುರ ಗ್ರಾಮದಲದಲ್ಲಿ ರಾಮನಗರ ಕಾವಾಣಾಪುರದ ಬಸಪ್ಪ ಅಳುತ್ತಿದ್ದ ಮಗುವನ್ನು ಮಲಗಿಸಿ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದ್ದಾನೆ. ಡಣಾಯಕನಪುರದ ಮನೆಯೊಂದರಲ್ಲಿ ಮಹಿಳೆಗೆ ಮಾನಸಿಕ ಸಮಸ್ಯೆ ಎದುರಾಗಿತ್ತು. ಜನರು ಆಕೆಗೆ ದೆವ್ವ ಹಿಡಿದಿದೆ ಎಂದು ಹೇಳುತ್ತಿದ್ದರು. ಹೀಗಾಗಿ ಈ ಸಮಸ್ಯೆಯನ್ನು ಹೋಗಲಾಡಿಸಬೇಕೆಂದು ಕಾವಾಣಾಪುರದ ಬಸಪ್ಪನನ್ನು ಕರೆಸಲಾಗಿತ್ತು.

    ಬಸಪ್ಪ ಮನೆಗೆ ಕಾಲಿಟ್ಟಾಗ ಆ ಮನೆಯಲ್ಲಿ ಮಹಿಳೆಯ ಪುಟ್ಟ ಮಗು ತೊಟ್ಟಿಲಿನಲ್ಲಿ ಅಳುತ್ತಿತ್ತು. ಈ ವೇಳೆ ಮಗು ಅಳುತ್ತಿದ್ದ ಶಬ್ದವನ್ನು ಕೇಳಿಸಿಕೊಂಡ ಬಸಪ್ಪ, ಶಬ್ದವನ್ನು ಆಲಿಸಿ ಮಗುವಿದ್ದ ಕೋಣೆಗೆ ಹೋಗಿ, ಮಗುವನ್ನೇ ಒಂದು ನಿಮಿಷದ ಕಾಲ ನೋಡುತ್ತಾ ನಿಂತಿತು. ಬಳಿಕ ತನ್ನ ಕೊಂಬಿನಿಂದ ತೊಟ್ಟಿಲನ್ನು ತೂಗಲು ಪ್ರಾರಂಭಿಸಿತು. ಒಂದು ಕಡೆ ಬಸಪ್ಪ ತೊಟ್ಟಿಲನ್ನು ತೂಗುತ್ತಿದ್ದರೆ, ಇನ್ನೊಂದೆಡೆ ಅಳುತ್ತಲೇ ತೊಟ್ಟಿಲಲ್ಲಿದ್ದ ಮಗು ಬಸಪ್ಪನನ್ನು ನೋಡುತಿತ್ತು. ಬಳಿಕ ಮಗು ತನ್ನ ಅಳುವನ್ನು ನಿಲ್ಲಿಸಿ ಕಣ್ಣು ಮುಚ್ಚಿ ಮಲಗಿತು. ಬಸಪ್ಪನ ಈ ಪವಾಡವನ್ನು ಕಂಡ ಜನರು ಅಚ್ಚರಿಪಟ್ಟರು.

    ಮಗು ಮಲಗಿದ ನಂತರ ಸಮಸ್ಯೆ ಇರುವ ಮಹಿಳೆಯನ್ನು ಬಸಪ್ಪನ ಮುಂದೆ ನಿಲ್ಲಿಸಲಾಯಿತು. ನಂತರ ಬಸಪ್ಪ ಆ ಮಹಿಳೆಗೆ ಆಶೀರ್ವಾದ ಮಾಡಿದ ನಂತರ ಆಕೆಯ ಸಮಸ್ಯೆ ದೂರವಾಗಿದೆ ಎಂದು ಜನರು ಹೇಳುತ್ತಿದ್ದಾರೆ. ರಾಮನಗರದ ಕಾವಾಣಾಪುರದ ಬಸಪ್ಪ ಹಾಗೂ ಚಿಕ್ಕರಸಿನಕೆರೆಯ ಕಾಲಭೈರವೇಶ್ವರ ಬಸಪ್ಪ ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಪವಾಡಗಳನ್ನು ಮಾಡುವ ಮೂಲಕ ಜನರನ್ನು ಅಚ್ಚರಿ ಪಡಿಸುತ್ತಿವೆ. ಅಲ್ಲದೆ ಪವಾಡಗಳ ಮೂಲಕ ಸಾಕಷ್ಟು ಸಮಸ್ಯೆಗಳಿಗೆ ಈ ಬಸಪ್ಪಗಳು ಪರಿಹಾರವನ್ನು ಸಹ ನೀಡಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

  • ಬೀರಲಿಂಗೇಶ್ವರ ಕಾರ್ತಿಕೋತ್ಸವದಲ್ಲೊಂದು ಪವಾಡ

    ಬೀರಲಿಂಗೇಶ್ವರ ಕಾರ್ತಿಕೋತ್ಸವದಲ್ಲೊಂದು ಪವಾಡ

    ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೋಡಿ ಗ್ರಾಮದಲ್ಲಿ ಬೀರಲಿಂಗೇಶ್ವರ ಕಾರ್ತಿಕೋತ್ಸದ ಹಿನ್ನೆಲೆಯಲ್ಲಿ ಲೋಳೆಸರಕ್ಕೆ ಎರಡು ಕುಡುಗೋಲು ಹಾಕಿ ಅದಕ್ಕೆ 50 ಕೆಜಿ ತೂಕದ ಕಲ್ಲು ಕಟ್ಟಿ ತೂಗಿಬಿಡಲಾಗುತ್ತದೆ.

    ಗ್ರಾಮದಲ್ಲಿ ಪ್ರತಿ ಕಾರ್ತಿಕಾ ಮಾಸದಲ್ಲಿ ಹುಣ್ಣಿಮೆಗಿಂತ ಮೊದಲು ಈ ಕಾರ್ತಿಕೋತ್ಸವ ನಡೆಯುತ್ತದೆ. ಈ ಕಾರ್ತಿಕೋತ್ಸವದಲ್ಲಿ ಪವಾಡವೇ ಪ್ರಮುಖವಾದ ಕಾರ್ಯಕ್ರಮ. ಬೀರಲಿಂಗೇಶ್ವರ ದೇವಾಲಯದಲ್ಲಿ ಒಂದು ಲೋಳೆಸರ (ಅಲೋವೆರಾ)ಕ್ಕೆ ಎರಡು ಕುಡುಗೋಲನ್ನು ಹಾಕಿ, ಅದಕ್ಕೆ 50 ಕೆ.ಜಿ ತೂಕದ ಕಲ್ಲಿನ ಗುಂಡನ್ನು ತೂಗುಬಿಡುತ್ತಾರೆ. ಸಾಮಾನ್ಯವಾದ ಲೋಳೆಸರಕ್ಕೆ 50 ಕೆಜಿ ತೂಕದ ಕಲ್ಲಿನ ಗುಂಡನ್ನು ತೂಗಿ ಹಾಕಿದ್ದರೂ ತಡೆದುಕೊಳ್ಳುವ ಶಕ್ತಿ ಇದೆ ಎನ್ನುವುದೇ ಇಲ್ಲಿನ ಪವಾಡವಾಗಿದೆ.

    ಕಾರ್ತಿಕ ಮಾಸದಲ್ಲಿ ಬೀರಲಿಂಗೇಶ್ವರ ದೇವಾಲಯದ ಆರ್ಚಕರು ಉಪವಾಸವಿದ್ದು ಈ ಪವಾಡ ನಡೆಸುತ್ತಾರೆ. ಈ ಪವಾಡವನ್ನು ನೋಡಿ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿಗಳು ಕೂಡ ಅಚ್ಚರಿಗೊಂಡಿದ್ದಾರೆ. ಬೆಳ್ಳೂಡಿ ಗ್ರಾಮ ಬೀರಲಿಂಗೇಶ್ವರ ದೇವಸ್ಥಾನದ ಪೂಜಾರಿಗಳಿಂದ ಪವಾಡ ನಡೆಯುತ್ತಿದ್ದು, ಪ್ರತಿ ವರ್ಷ ಪವಾಡವನ್ನು ನೋಡಲು ದೂರದೂರಿನಿಂದ ಜನರು ಆಗಮಿಸಿ ಅಪರೂಪದ ಸನ್ನಿವೇಶವನ್ನು ನೋಡಿ ಆಶ್ಚರ್ಯ ಪಡುತ್ತಾರೆ.

    ಪ್ರತಿ ವರ್ಷವೂ ಇದೇ ರೀತಿಯಾದಂತಹ ಪವಾಡ ನಡೆಯುತ್ತಿದ್ದು, ಸಂಜೆ ವೇಳೆ ತುಂಬಿದ ಕೊಡಕ್ಕೆ ಪೂಜಿಸಿದ ಬಟ್ಟೆ ಕಟ್ಟಿ ಅದನ್ನು ಉಲ್ಟಾ ಮಾಡಿ ನೇತು ಹಾಕುತ್ತಾರೆ. ತುಂಬಿದ ಕೊಡದಿಂದ ಒಂದು ಹನಿ ನೀರು ಸಹ ಹೊರ ಬರುವುದಿಲ್ಲ. ಇದೆಲ್ಲ ಬೀರಲಿಂಗೇಶ್ವರ ದೇವರ ಪವಾಡ ಎಂದು ಅರ್ಚಕರು ಹೇಳುತ್ತಾರೆ

  • ದೇವಿ ಕಣ್ಬಿಟ್ಟಿದ್ದಾಳೆಂದು ಹಬ್ಬಿತು ಸುದ್ದಿ – ಜನ ಸೇರ್ತಿದ್ದಾಗೆ ಬಯಲಾಯ್ತು ಅಸಲಿಯತ್ತು

    ದೇವಿ ಕಣ್ಬಿಟ್ಟಿದ್ದಾಳೆಂದು ಹಬ್ಬಿತು ಸುದ್ದಿ – ಜನ ಸೇರ್ತಿದ್ದಾಗೆ ಬಯಲಾಯ್ತು ಅಸಲಿಯತ್ತು

    ಹುಬ್ಬಳ್ಳಿ: ಜಿಲ್ಲೆಯ ಮಂಟೂರು ರಸ್ತೆ ವಲ್ಲಭಬಾಯಿ ನಗರದ ಶ್ರೀರಾಮ ಮಂದಿರದಲ್ಲಿ ಮಂಗಳವಾರ ಸಂಜೆ ನಲ್ಲಮ್ಮ ದೇವಿ ಕಣ್ಣು ಬಿಟ್ಟಿದ್ದಾಳೆ ಎಂಬ ಸುದ್ದಿ ಹಬ್ಬಿತ್ತು. ಇದನ್ನು ಕೇಳಿ ದೇವಿಯ ದರ್ಶನಕ್ಕೆ ಜನಸಾಗರವೇ ಹರಿದು ಬಂದು, ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಆದರೆ ಸಮಯ ಕಳೆದಂತೆ ದೇವಿಯ ಕಣ್ಣಿನ ಅಸಲಿಯತ್ತನ್ನ ಕಂಡ ಜನ ಶಾಕ್ ಆಗಿದ್ದಾರೆ.

    ಕೆಲವು ಯುವಕರು ದೇವಸ್ಥಾನದ ಪಕ್ಕದ ಮೈದಾನದಲ್ಲಿ ಫುಟ್‍ಬಾಲ್ ಆಡುತ್ತಿದ್ದರು. ಸಂಜೆ 4 ಗಂಟೆ ಸುಮಾರು ಯುವಕನೊಬ್ಬ ದೇವಸ್ಥಾನದ ಬಳಿ ಬಂದಿದ್ದ. ನಲ್ಲಮ್ಮ ದೇವಿ ಗುಡಿಯ ಬಾಗಿಲು ತೆರೆದಿತ್ತು. ಬಾಗಿಲು ಮುಚ್ಚಲೆಂದು ಹೋದಾಗ ದೇವಿ ಕಣ್ಣು ತೆರೆದಿರುವುದನ್ನು ನೋಡಿ ಅಚ್ಚರಿಯಾಗಿ ಕೂಡಲೇ ಜನರನ್ನು ಸೇರಿಸಲಾಗಿತ್ತು. 30 ವರ್ಷದಿಂದ ಇರುವ ಈ ನಲ್ಲಮ್ಮ ದೇವಿ ದೇವಸ್ಥಾನದಲ್ಲಿ ನಡೆದ ಪವಾಡ ನೋಡಲು ಜನಸಾಗರವೇ ಹರಿದುಬಂದಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಪಬ್ಲಿಕ್ ಟಿವಿ ತಂಡಕ್ಕೂ ಅನುಮಾನ ಹುಟ್ಟಿತ್ತು.

    ದೇವಿಗೆ ಬಂದಿರುವ ಕಣ್ಣು ಅಸಲಿಯೋ ನಕಲಿಯೋ ಎಂಬ ಚರ್ಚೆಯೂ ನಮ್ಮ ಮನದಲ್ಲೇ ಶುರುವಾಗಿತ್ತು. ಪರೀಕ್ಷಿಸಲು ಮುಂದಾದ್ರೂ ನೂಕುನುಗ್ಗಲು ಉಂಟಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಅಷ್ಟರಲ್ಲೇ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿತ್ತು. ದೇವಿ ಕಣ್ಣು ಬಿಟ್ಟಿರುವುದನ್ನು ನೋಡಲು ಜನ ಬರುತ್ತಲೇ ಇದ್ದುದರಿಂದ ನಿಯಂತ್ರಿಸುವುದೇ ಪೊಲೀಸರಿಗೆ ಸವಾಲಾಗಿತ್ತು.

    ಕಣ್ಣು ಮೂಡಿದ್ದ ದೇವರ ಫೋಟೋ ಪರೀಕ್ಷಿಸಿ ನೋಡಿದಾಗ ಅದು ಬಾಹ್ಯವಾಗಿ ಅಂಟಿಸಿದ್ದು ಎಂಬ ಅನುಮಾನ ಬಂದಿತ್ತು. ಬಳಿಕ ಶ್ರೀರಾಮ ದೇವಸ್ಥಾನದ ಟ್ರಸ್ಟಿಗಳು ಪೊಲೀಸರ ಸಮ್ಮುಖದಲ್ಲಿ ಪರೀಕ್ಷೆ ನಡೆಸಲಾಯಿತು. ನಲ್ಲಮ್ಮ ದೇವಿಯ ಮೂರ್ತಿಯನ್ನು ದೊಡ್ಡ ಹರಿವಾಣದಲ್ಲಿಟ್ಟು ನೀರಿನಿಂದ ಸ್ಚಚ್ಛವಾಗಿ ತೊಳೆದಾಗ ಅಸಲಿಯತ್ತು ಬಯಲಾಯಿತು.

    ಬಾಗಿಲಿಗೆ ಬೀಗ ಇಲ್ಲದ ಚಿಕ್ಕ ಗುಡಿ ಪ್ರವೇಶಿಸಿದ್ದ ಖದೀಮರು ಹುಣಸೇ ಹಣ್ಣು ಬಳಸಿ ಮೂರ್ತಿಗೆ ಪ್ಲಾಸ್ಟಿಕ್ ಕಣ್ಣನ್ನು ಅಂಟಿಸಿ, ಅರಿಶಿಣ-ಕುಂಕುಮ ಹಾಕಿದ್ದರು. ತುಸು ದೂರದಿಂದ ನೋಡಿದರೆ, ಅಸಲಿ ಕಣ್ಣು ಮೂಡಿರುವಂತೆಯೇ ಭಾಸವಾಗುತ್ತಿತ್ತು. ಇದನ್ನೇ ಪವಾಡ ಎಂದು ನಂಬಿದ ಕೆಲವರು ಗುಲ್ಲೆಬ್ಬಿಸಿದ್ದರಿಂದ ನೂರಾರು ಜನ ಜಮಾಯಿಸಿದ್ದರು. ಪವಾಡ ಬಯಲಾಗುತ್ತಿದ್ದಂತೆಯೇ ಅಲ್ಲಿದ್ದ ಜನರೆಲ್ಲ ಅಪರಿಚಿತ ಖದೀಮನನ್ನು ಶಪಿಸುತ್ತ ವಾಪಸ್ಸಾದರು.

    ಶ್ರೀರಾಮ ದೇವಸ್ಥಾನದ ಆವರಣದಲ್ಲಿ ನಲ್ಲಮ್ಮದೇವಿ ಗುಡಿ ಇದೆ. ಇದು ರೈಲ್ವೆ ಇಲಾಖೆಯ ಜಾಗೆಯೂ ಹೌದು. ತನ್ನದೇ ಜಾಗ ಆದ್ದರಿಂದ ರೈಲ್ವೆ ಇಲಾಖೆ ಇತ್ತೀಚೆಗೆ ದೇವಸ್ಥಾನ ತೆರವು ಮಾಡಲು ಮುಂದಾಗಿತ್ತು. ಅದನ್ನು ತಪ್ಪಿಸಲೆಂದು ಕೆಲವರು ಈ ರೀತಿ ನಾಟಕ ಮಾಡಿ ಜನರ ಭಾವನೆ ಕೆರಳಿಸಲು ಪ್ರಯತ್ನ ನಡೆಸಿದ್ದರು ಎಂಬ ಮಾತು ಕೇಳಿಬಂದಿದೆ. ತನಿಖೆಯ ನಂತರವಷ್ಟೇ ಇದರ ಹಿಂದೆ ಯಾರ ಕೈವಾಡವಿದೆ ಅಂತ ತಿಳಿಯಬೇಕಿದೆ.

  • ಮಂತ್ರಾಕ್ಷತೆಯಾಯ್ತು ನಿರ್ಮಾಲ್ಯ ಸಾಲಿಗ್ರಾಮ!- ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪವಾಡ

    ಮಂತ್ರಾಕ್ಷತೆಯಾಯ್ತು ನಿರ್ಮಾಲ್ಯ ಸಾಲಿಗ್ರಾಮ!- ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪವಾಡ

    ಬಾಗಲಕೋಟೆ: ನಗರದ ವಿದ್ಯಾಗಿರಿಯ ಮನೆಯೊಂದರಲ್ಲಿ ಮಂತ್ರಾಲಯದಿಂದ ತಂದಿದ್ದ ಮಂತ್ರಾಕ್ಷತೆ ನಿರ್ಮಾಲ್ಯ ಸಾಲಿಗ್ರಾಮವಾಗಿ ಪರಿವರ್ತನೆಯಾರುವ ಪವಾಡ ಬುಧವಾರದಂದು ನಡೆದಿದೆ.

    ಬಾಗಲಕೋಟೆಯ ವಿದ್ಯಾಗಿರಿಯ ನಿವಾಸಿ ಪ್ರಹ್ಲಾದ್ ಸೀಮಿಕೇರಿ ಎಂಬವರ ಮನೆಯಲ್ಲಿ ಈ ಪವಾಡ ಜರುಗಿದೆ. ಪ್ರಹ್ಲಾದ್ ಅವರು ಮಂತ್ರಾಲಯ ಶ್ರೀ ಗುರು ರಾಘವೇಂದ್ರರಾಯರ ಪರಮ ಭಕ್ತರು. ಪ್ರಹ್ಲಾದ್ ಹಾಗೂ ಅವರ ಕುಟುಂಬ 6 ತಿಂಗಳ ಹಿಂದೆ ಮಂತ್ರಾಲಯದಿಂದ ಮಂತ್ರಾಕ್ಷತೆಯನ್ನು ಮನೆಗೆ ತಂದಿದ್ದರು. 15 ದಿನಗಳ ಹಿಂದೆ ದೇವರಿಗೆ ಪೂಜೆ ಮಾಡುವ ವೇಳೆ ಮಂತ್ರಾಕ್ಷತೆಯು ನಿರ್ಮಾಲ್ಯ ಸಾಲಿಗ್ರಾಮವಾಗಿ ಬದಲಾಗಿದೆ. ತಕ್ಷಣ ಈ ಪವಾಡವನ್ನು ಮಂತ್ರಾಲಯ ಶ್ರೀಗಳಿಗೆ ಕೆರೆ ಮಾಡಿ ಪ್ರಹ್ಲಾದ್ ತಿಳಿಸಿದ್ದಾರೆ.

    ನಂತರ ಈ ಪವಾಡ ಸತ್ಯವೆಂದು ಮಂತ್ರಾಲಯದ ಶ್ರೀ ಸುಬುಧೆಂದ್ರತೀರ್ಥರು ಖಚಿತ ಪಡಿಸುವವರೆಗೂ ಸಾಲಿಗ್ರಾಮ ವಿಚಾರವನ್ನು ಪ್ರಹ್ಲಾದ್ ಗುಟ್ಟಾಗಿಟ್ಟಿದ್ದರು. ಆದರೆ ಶ್ರೀಗಳು ನಡೆದಿರುವ ಸಾಲಿಗ್ರಾಮ ಪವಾಡ ಸತ್ಯವೆಂದು ತಿಳಿಸಿದ ಮೇಲೆ ಪವಾಡವನ್ನು ಬಹಿರಂಗ ಮಾಡಲಾಗಿದೆ. ಇಂದು ಶುಭದಿನ ರಾಘವೇಂದ್ರರ ವಾರ ಎಂದು ಪವಾಡವನ್ನು ಪ್ರಹ್ಲಾದ್ ಹಾಗೂ ಅವರ ಕುಟುಂಬಸ್ಥರು ಬಹಿರಂಗಪಡಿಸಿದ್ದಾರೆ.

    ಮಂತ್ರಾಕ್ಷತೆಯು ಸುಮಾರು ಹತ್ತು ನಿರ್ಮಾಲ್ಯ ಸಾಲಿಗ್ರಾಮವಾಗಿ ಬದಲಾಗಿತ್ತು. ಅದರಲ್ಲಿ ನಿತ್ಯನಿರಂತರ ಪೂಜೆಗಾಗಿ ಐದು ಸಾಲಿಗ್ರಾಮಗಳನ್ನು ಮಂತ್ರಾಲಯ ಮಠಕ್ಕೆ ನೀಡಲಾಗಿದೆ. ಈ ಪವಾಡ ರಾಘವೇಂದ್ರ ರಾಯರ ಅನುಗ್ರಹದಿಂದ ನಡೆದಿದೆ. ಬ್ರಾಹ್ಮಣ ಸಂಪ್ರದಾದಲ್ಲಿ ಪವಿತ್ರವಾದ ಸ್ಥಾನ ಪಡೆದ ಸಾಲಿಗ್ರಾಮ ದೇವರ ಸ್ವರೂಪ ಎಂದು ಪ್ರಹ್ಲಾದ್ ಹೇಳಿದ್ದಾರೆ.

    https://www.youtube.com/watch?v=AOCiD1p5AGc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv