Tag: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

  • ‘ಸಲಗ’ ಪ್ರೀ-ರಿಲೀಸ್ ಕಳೆ ಹೆಚ್ಚಿಸಲಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್

    ‘ಸಲಗ’ ಪ್ರೀ-ರಿಲೀಸ್ ಕಳೆ ಹೆಚ್ಚಿಸಲಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್

    ಗಂಧದ ಗುಡಿಯಲ್ಲಿ ‘ಸಲಗ’ ಚಿತ್ರದ ಸೌಂಡ್ ದಿನದಿಂದ ದಿನಕ್ಕೆ ಜೋರಾಗ್ತಿದೆ. ಚಿತ್ರದ ಪ್ರಮೋಷನಲ್ ಕಾರ್ಯಕ್ರಮದಲ್ಲಿ ಚಿತ್ರತಂಡ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ಇದರ ಬೆನ್ನಲ್ಲೇ ಅದ್ದೂರಿ ಪ್ರಿರಿಲೀಸ್ ಕಾರ್ಯಕ್ರಮಕ್ಕೆ ಟೀಂ ಸಲಗ ಪ್ಲ್ಯಾನ್ ಮಾಡಿಕೊಂಡಿದೆ. ಅಕ್ಟೋಬರ್ 10ರಂದು ನಡೆಯಲಿರುವ ಈ ಕಾರ್ಯಕ್ರಮಕ್ಕೆ ಪವರ್ ಫುಲ್ ಕಳೆ ನೀಡಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಮಿಸುತ್ತಿದ್ದಾರೆ.

    ಹೌದು, ಅಕ್ಟೋಬರ್ 10ರಂದು ತೆರೆ ಮೇಲೆ ಅಬ್ಬರಿಸಲು ‘ಸಲಗ’ ಸಕಲ ಸಿದ್ಧವಾಗಿದೆ. ನಾಡಹಬ್ಬದಂದೇ ಸಲಗನ ದರ್ಬಾರ್ ಚಿತ್ರಮಂದಿರಗಳಲ್ಲಿ ಶುರುವಾಗಲಿದ್ದು, ಅದಕ್ಕೂ ಮುನ್ನ ಪ್ರೀ- ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದೆ ಚಿತ್ರತಂಡ. ಈ ಕಾರ್ಯಕ್ರಮಕ್ಕೆ ಚಂದನವನದ ಸ್ಟಾರ್ ನಟ ನಟಿಯರು,ರಾಜಕೀಯ ನಾಯಕರು ಆಗಮಿಸಲಿದ್ದಾರೆ.

    ಈಗಾಗಲೇ ಚಿತ್ರತಂಡ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಇದರ ಬೆನ್ನಲ್ಲೇ ಚಿತ್ರತಂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನ ಕೋರಿದೆ. ಸಲಗ ಚಿತ್ರದ ಆರಂಭದಿಂದಲೂ ಚಿತ್ರತಂಡಕ್ಕೆ ಸಾಥ್ ನೀಡುತ್ತಾ ಬಂದಿರುವ ಪವರ್ ಸ್ಟಾರ್ ಚಿತ್ರತಂಡದ ಸಂತಸವನ್ನು ಹೆಚ್ಚಿಸಿದ್ದು, ಇದೀಗ ಕಾರ್ಯಕ್ರಮಕ್ಕೆ ಬರುವ ಮೂಲಕ ಚಿತ್ರತಂಡಕ್ಕೆ ಪವರ್ ಫುಲ್ ಸಾಥ್ ನೀಡುತ್ತಿದ್ದಾರೆ.

    ದುನಿಯಾ ವಿಜಿ ಮೊದಲ ನಿರ್ದೇಶನವಾದ್ದರಿಂದ ಅವರ ಡೈರೆಕ್ಷನ್ ಸ್ಟೈಲ್, ವಿಜಿ ಹಾಗೂ ಡಾಲಿ ಜುಗಲ್ಬಂದಿ ಚಿತ್ರದಲ್ಲಿ ಹೇಗಿರಬಹುದೆಂದು ಚಿತ್ರ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ವಿಜಿ ಅಭಿಮಾನಿ ಬಳಗವಂತೂ ಬಿಡುಗಡೆಗೂ ಮುನ್ನವೇ ಸಲಗವನ್ನು ತೇರು ಹೊತ್ತು ಸಂಭ್ರಮಿಸುವಂತೆ ಆರಾಧನೆ ಮಾಡೋಕೆ ಶುರುವಿಟ್ಟಿದ್ದಾರೆ.

    ಚಿತ್ರದ ಯಶಸ್ಸಿಗೆ ಪೂಜೆ ಪುನಸ್ಕಾರದ ಜೊತೆ ಹರಕೆ ಕೂಡ ಹೊತ್ತಿದ್ದಾರೆ. ಇನ್ನೂ ಕೆಲವರು ಟ್ಯಾಟೂ ಹಾಕಿಸಿಕೊಂಡು ಸಲಗ ಸಿನಿಮಾ ಮೇಲಿನ ಅಭಿಮಾನ ತೋರುತ್ತಿದ್ದಾರೆ. ಹೀಗೆ ಸಖತ್ ಕ್ರೇಜ್ ಕ್ರಿಯೇಟ್ ಮಾಡಿರುವ ಸಲಗ ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡಿ ಇನ್ನಷ್ಟು ಕಿಕ್ ಕೊಡಲು ರೆಡೆಯಾಗಿದೆ. ಇದನ್ನೂ ಓದಿ: ‘ಸಲಗ’ ಕ್ರೇಜ್ ಭಲೇ ಜೋರು- ಭಕ್ತಗಣಕ್ಕೆ ಶರಣೆಂದ ಬ್ಲ್ಯಾಕ್ ಕೋಬ್ರಾ

    ಚಿತ್ರದಲ್ಲಿ ವಿಜಿ ರೌಡಿ ಪಾತ್ರಕ್ಕೆ ಬಣ್ಣಹಚ್ಚಿದ್ರೆ ಡಾಲಿ ಪೊಲೀಸ್ ಅವತಾರ ತೊಟ್ಟಿದ್ದಾರೆ. ಸಂಜನಾ ಆನಂದ್ ನಾಯಕಿಯಾಗಿ ಮಿಂಚಿದ್ದು, ಚರಣ್ ರಾಜ್ ಮಾಸ್ ಮ್ಯೂಸಿಕ್, ಮಾಸ್ತಿ ಸಂಭಾಷಣೆ, ಶಿವ ಸೇನ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಕೆ.ಪಿ ಶ್ರೀಕಾಂತ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಸಲಗ ಅಕ್ಟೋಬರ್ 14ಕ್ಕೆ ಚಿತ್ರಮಂದಿರದ ಕದ ತಟ್ಟಲಿದೆ.

  • ಎಂಎಲ್‍ಎ ಪ್ರಥಮ್ ಗೆ ಚಾಲೆಂಜಿಂಗ್ ಸ್ಟಾರ್ – ಪವರ್ ಸ್ಟಾರ್ ಸಾಥ್!

    ಎಂಎಲ್‍ಎ ಪ್ರಥಮ್ ಗೆ ಚಾಲೆಂಜಿಂಗ್ ಸ್ಟಾರ್ – ಪವರ್ ಸ್ಟಾರ್ ಸಾಥ್!

    ಬಿಗ್‍ಬಾಸ್ ವಿನ್ನರ್ ಪ್ರಥಮ್ ಅಭಿನಯದ ದೇವ್ರಂಥಾ ಮನುಷ್ಯ ಈಗಾಗಲೇ ತೆರೆಗೆ ಬಂದಿದೆ. ಅದಾಗಲೇ ಪ್ರಥಮ್ ಮತ್ತೊಂದಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅವರ ಲಿಸ್ಟಿನಲ್ಲಿರೋ ಪ್ರಮುಖ ಚಿತ್ರ ಎಂಎಲ್‍ಎ.

    ಮಹಾ ಮಾತುಗಾರ, ಚುರುಕು ವ್ಯಕ್ತಿತ್ವದ ಪ್ರಥಮ್ ಸಾಮಾನ್ಯ ವ್ಯಕ್ತಿಗಳಿಂದ ಹಿಡಿದು ದೇವೇಗೌಡ, ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ಅವರ ತನಕ ಎಲ್ಲರನ್ನೂ ಬಲೆಗೆ ಕೆಡವಿಕೊಂಡಿದ್ದರು. ಕನ್ನಡ ಚಿತ್ರರಂಗದಲ್ಲಿ ಅಷ್ಟು ಸುಲಭಕ್ಕೆ ಯಾರ ಕೈ ಸಿಗದವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ದರ್ಶನ್ ಅವರ ಮನಗೆಲ್ಲಬೇಕೆಂದರೆ, ವರ್ಷಾನುಗಟ್ಟಲೆ ವ್ರತವನ್ನೇ ಮಾಡಬೇಕು ಅನ್ನೋ ಮನಸ್ಥಿತಿ ಸದ್ಯಕ್ಕಿದೆ. ಆದರೆ ಚಾಲಾಕಿ ಪ್ರಥಮ್ ದರ್ಶನ್ ಅವರನ್ನೂ ಭೇಟಿಯಾಗಿ, ತನ್ನ ಹೆಗಲ ಮೇಲೆ ಅವರ ಕೈ ಇರಿಸಿಕೊಂಡು ಬಂದಿದ್ದಾರೆ. ಇದನ್ನೂ ಓದಿ: ರಾಜಕೀಯ ಪ್ರವೇಶದ ಬಗ್ಗೆ ಬಿಗ್‍ಬಾಸ್ ಪ್ರಥಮ್ ನ ಮನದಾಳದ ಮಾತು

    ಇತ್ತೀಚೆಗೆ ದರ್ಶನ್ ಅವರ ಮೈಸೂರಿನಲ್ಲಿ ಯಜಮಾನ ಚಿತ್ರದ ಶೂಟಿಂಗಿನಲ್ಲಿ ತೊಡಗಿಕೊಂಡಿದ್ದಾಗ ಪ್ರಥಮ್ ರನ್ನು ಕರೆಸಿಕೊಂಡಿದ್ದರಂತೆ. ಈ ಸಂದರ್ಭದಲ್ಲಿ ತನ್ನ ಎಂಎಲ್‍ಎ ಸಿನಿಮಾದ ಆಡಿಯೋ ಬಿಡುಗಡೆ ನೀವೇ ಮಾಡಬೇಕು ಎನ್ನುವ ಪ್ರಥಮ್ ರ ಪ್ರೀತಿಯ ಅಹವಾಲಿಗೆ ಚಾಲೆಂಜಿಂಗ್ ಸ್ಟಾರ್ ಎಸ್ ಅಂದಿದ್ದಾರೆ. ‘ಓಕೆ ಬಿಡು ಚಿನ್ನಾ ನಿನ್ನ ಎಂಎಲ್‍ಎ ಸಿನಿಮಾ ಆಡಿಯೋ ರಿಲೀಸ್ ಗೆ ಬಂದೇ ಬರ್ತೀನಿ. ನಿನಗೆ ಒಳ್ಳೇದಾಗ್ಲಿ’ ಅಂತಾ ಆಶೀರ್ವಾದ ಮಾಡಿ ಕಳಿಸಿದ್ದಾರೆ. ಅಂದ ಹಾಗೆ ವೆಂಕಟೇಶ್ ರೆಡ್ಡಿ ನಿರ್ಮಾಣದಲ್ಲಿ, ಮಂಜು ಮೌರ್ಯ ನಿರ್ದೇಶನದ ಎಂಎಲ್‍ಎ ಸಿನಿಮಾದ ಆಡಿಯೋ ಹಕ್ಕನ್ನು ಪುನೀತ್ ರಾಜ್ ಕುಮಾರ್ ಅವರ ಪಿಆರ್‍ಕೆ ಸಂಸ್ಥೆ ಖರೀದಿಸುವುದು ಪಕ್ಕಾ ಆಗಿದೆ. ಇದನ್ನೂ ಓದಿ: ಎಂಎಲ್‍ಎ ಆಗಲು ಹೊರಟಿದ್ದಾರೆ ಒಳ್ಳೆ ಹುಡುಗ ಪ್ರಥಮ್!

    ಈ ಚಿತ್ರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ ಹೆಚ್.ಎಂ. ರೇವಣ್ಣ ಪ್ರಥಮ್ ಎಂಎಲ್‍ಎ ಚಿತ್ರದಲ್ಲಿ ಪ್ರಮುಖವಾದೊಂದು ಪಾತ್ರ ನಿರ್ವಹಿಸಿದ್ದಾರೆ. ಅದಕ್ಕಾಗಿ ತಮ್ಮ ಒತ್ತಡದ ಕೆಲಸ ಕಾರ್ಯಗಳ ನಡುವೆಯೂ ತಮ್ಮ ಭಾಗದ ಚಿತ್ರೀಕರಣವನ್ನು ರೇವಣ್ಣ ಅವರು ಮುಗಿಸಿಕೊಟ್ಟಿದ್ದರು. ಒಂದೊಳ್ಳೆ ಸಂದೇಶವನ್ನು, ಆಶಯವನ್ನು ಯುವ ಜನಾಂಗಕ್ಕೆ ರವಾನಿಸೋ ಸದುದ್ದೇಶ ಹೊಂದಿರೋ ಈ ಚಿತ್ರದ ಕಥೆಯನ್ನು ಮೆಚ್ಚಿಕೊಂಡು ರೇವಣ್ಣನವರು ಮುಖ್ಯಮಂತ್ರಿಯಾಗಿ ನಟಿಸಲು ಒಪ್ಪಿಕೊಂಡಿದ್ದಲ್ಲದೆ, ಚುನಾವಣೆ ಬಂದಿರೋದರಿಂದ ಕೂರಲು ನಿಲ್ಲಲೂ ಪುರುಸೊತ್ತಿಲ್ಲದಷ್ಟು ಬ್ಯುಸಿಯಾಗಿರೋ ರೇವಣ್ಣ ಈ ಚಿತ್ರಕ್ಕಾಗಿ ನಾಲ್ಕು ದಿನಗಳ ಡೇಟ್ ಕೊಟ್ಟಿದ್ದರು. ಈಗ ದರ್ಶನ್ ಮಾತ್ರವಲ್ಲದೆ ಆಡಿಯೋ ಹಕ್ಕು ಪಡೆಯುವ ಮೂಲಕ ಪುನೀತ್ ರಾಜ್ ಕುಮಾರ್ ಕೂಡಾ ಪ್ರಥಮ್ ಕೈ ಹಿಡಿದಿದ್ದಾರೆ..! ಇದನ್ನೂ ಓದಿ: ಸಿನಿಮಾ ಸೆಟ್ ನ ಮೊದಲ ದಿನವೇ ಯಜಮಾನನಾಗಿ ಬಂದ ಚಾಲೆಂಜಿಂಗ್ ಸ್ಟಾರ್!

  • ಸಿಎಂ ನಿವಾಸಕ್ಕೆ ಪುನೀತ್ ರಾಜ್‍ಕುಮಾರ್ ಭೇಟಿ

    ಸಿಎಂ ನಿವಾಸಕ್ಕೆ ಪುನೀತ್ ರಾಜ್‍ಕುಮಾರ್ ಭೇಟಿ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ಭೇಟಿ ನೀಡಿದ್ದಾರೆ.

    ಕಳೆದ ಹತ್ತು ದಿನಗಳಿಂದ ಉಪಚುನಾವಣೆ ಪ್ರಚಾರ, ಕಾರ್ಯತಂತ್ರ ರೂಪಿಸುವಲ್ಲಿ ಮಗ್ನರಾಗಿದ್ದ ಮುಖ್ಯಮಂತ್ರಿಗಳು ಮೈಸೂರಿನಲ್ಲಿ ಭಾನುವಾರ ಸಿನಿಮಾ ನೋಡುವ ಮೂಲಕ ರಿಲ್ಯಾಕ್ಸ್ ಆಗಿದ್ರು. ಹತ್ತು ದಿನಗಳಿಂದ ಮೈಸೂರಿನಲ್ಲೇ ಇರುವ ಮುಖ್ಯಮಂತ್ರಿಗಳು ಬೆಂಗಳೂರಿಗೆ ಹೊರಡುವ ಮುನ್ನ ಭಾನುವಾರ ಮಧ್ಯಾಹ್ನ ಜಯಲಕ್ಷ್ಮಿಪುರದಲ್ಲಿರುವ ಡಿಆರ್‍ಸಿ ಮಲ್ಟಿಪ್ಲೆಕ್ಸ್‍ಗೆ ತೆರಳಿ `ಕೌಟುಂಬಿಕ ಪ್ರಧಾನ’ ಮತ್ತು ಪುನೀತ್ ರಾಜಕುಮಾರ್ ನಾಯಕ ನಟರಾಗಿ ಅಭಿನಯಿಸಿರುವ `ರಾಜಕುಮಾರ’ ಚಿತ್ರ ವೀಕ್ಷಿಸಿದ್ರು.

    ಚಿತ್ರ ವೀಕ್ಷಿಸಿದ ಸಿಎಂ, ರಾಜಕುಮಾರ ಚಿತ್ರತಂಡಕ್ಕೆ ತಮ್ಮ ನಿವಾಸಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದರು. ಹೀಗಾಗಿ ಇಂದು ಪುನೀತ್ ರಾಜ್‍ಕುಮಾರ್ ಸಿಎಂ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಸಿಎಂ, ಚಿತ್ರ ಉತ್ತಮವಾಗಿ ಮೂಡಿಬಂದಿದೆ ಅಂತಾ ಪವರ್ ಸ್ಟಾರ್‍ಗೆ ಅಭಿನಂದನೆ ಸಲ್ಲಿಸಿದ್ರು. ಪುನೀತ್ ಅವರಿಗೆ ಚಿತ್ರದ ನಿರ್ದೇಶಕ ಸಂತೋಷ ಹಾಗೂ ನಿರ್ಮಾಪಕ ವಿಜಯ್ ಸಾಥ್ ನೀಡಿದ್ರು.

    ಮುಖ್ಯಮಂತ್ರಿಗಳು ಮೊದಲಿನಿಂದಲೂ ವರನಟ ಡಾ.ರಾಜಕುಮಾರ್ ಅವರ ಅಭಿಮಾನಿಯಾಗಿದ್ದಾರೆ. ಅಲ್ಲದೇ ಸ್ವಂತ ಜಿಲ್ಲೆಯವರೆಂಬ ಅಭಿಮಾನವೂ ಇದೆ. ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿದ್ದ ಪುನೀತ್, ತಮ್ಮ ಚಿತ್ರ ಬಿಡುಗಡೆ ಆಗುತ್ತಿರುವ ವಿಷಯ ತಿಳಿಸಿದ್ದರು. ಸಿದ್ದರಾಮಯ್ಯ ಅವರು ತಮ್ಮ ಸಿನಿಮಾ ನೋಡಿದ ವಿಷಯವನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡ ಪುನೀತ್, ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಂತಸ ವ್ಯಕ್ತಪಡಿಸಿದರು.

    ಡಾ.ರಾಜ್ ಅವರನ್ನು ಭೇಟಿಯಾದಾಗ ಅವರು “ನಮ್ಮ ಕಾಡಿನವರು ಬಂದರು” ಎಂದು ಹೇಳುತ್ತಿದ್ದುದನ್ನು ಸಿದ್ದರಾಮಯ್ಯ ಇದೇ ವೇಳೆ ಸ್ಮರಿಸಿಕೊಂಡರು.

  • ಬಾಕ್ಸಾಫೀಸಲ್ಲಿ ಧೂಳೆಬ್ಬಿಸಿದ ರಾಜಕುಮಾರ – ಮೊದಲ ದಿನ ಗಳಿಸಿದ್ದೆಷ್ಟು?

    ಬಾಕ್ಸಾಫೀಸಲ್ಲಿ ಧೂಳೆಬ್ಬಿಸಿದ ರಾಜಕುಮಾರ – ಮೊದಲ ದಿನ ಗಳಿಸಿದ್ದೆಷ್ಟು?

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ರಾಜಕುಮಾರನ ದರ್ಬಾರು ಶುರುವಾಗಿದೆ. ಗಂಧದಗುಡಿಯ ಗಲ್ಲಪೆಟ್ಟಿಯಲ್ಲಿ ರಾಜಕುಮಾರನ ವಹಿವಾಟು ಜೋರಾಗಿದೆ. ಆ ವಹಿವಾಟಿನ ಲೆಕ್ಕಚಾರ ಹೀಗಿದೆ.

    ಸ್ಯಾಂಡಲ್‍ವುಡ್‍ನ ಸಮಸ್ತ ಅಪ್ಪು ಅಭಿಮಾನಿಗಳಿಗೆ ನಿನ್ನೆಯಿಂದಲೇ ಯುಗಾದಿ ಹಬ್ಬ ಶುರುವಾಗಿದೆ. ಪುನೀತ್ ಅಭಿಮಾನಿಗಳು ಯಾವ ರೀತಿ ನಿರೀಕ್ಷೆ ಮಾಡಿದ್ರೋ ಅದೇ ರೀತಿ ರಾಜಕುಮಾರ ಚಿತ್ರ ತೆರೆ ಮೇಲೆ ಮೂಡಿಬಂದಿದೆ. ಹಾಗೆಯೇ ಮೊದಲ ದಿನವೇ ರಾಜಕುಮಾರನ ಸಂಪಾದನೆ ಭರ್ಜರಿಯಾಗಿದೆ.

    ಒಂದೇ ದಿನಕ್ಕೆ ರಾಜಕುಮಾರ ಚಿತ್ರದ ನಿರ್ಮಾಪಕ ತಮ್ಮ ಜೇಬಿಗೆ ಆರೂವರೆ ಕೋಟಿ ರೂಪಾಯಿ ಇಳಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಓಪನಿಂಗ್ ಬೇರೆ ಯಾವ ಚಿತ್ರಕ್ಕೂ ಸಿಕ್ಕಿರಲಿಲ್ಲ.

    ಇದನ್ನೂ ಓದಿ: ರಾಜ್ಯಾದ್ಯಂತ `ರಾಜಕುಮಾರ’ನ ಹವಾ- ದಾವಣಗೆರೆಯಲ್ಲಿ ಅಪ್ಪು ಅಭಿಮಾನಿಗಳಿಗೆ ಲಾಠಿಚಾರ್ಜ್

    ಶುಕ್ರವಾರವಷ್ಟೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ರಾಜಕುಮಾರ’ ಚಿತ್ರ ರಾಜ್ಯಾದ್ಯಂತ 275 ಚಿತ್ರ ಮಂದಿಗಳಲ್ಲಿ ತೆರೆಕಂಡಿದೆ. ಜೊತೆಗೆ ದೇಶದ ಕೆಲ ಪ್ರಮುಖ ನಗರಗಳ ಸಿಲ್ವರ್ ಸ್ಕ್ರೀನ್‍ಗಳಲ್ಲಿಯೂ ರಾಜಕುಮಾರ ರಾರಾಜಿಸ್ತಿದೆ. ಇದೀಗಷ್ಟೇ ಪರೀಕ್ಷೆಗಳು ಮುಗಿದು, ಯುಗಾದಿ ಹಬ್ಬರ ರಜೆಗಳು ಶುರುವಾಗ್ತಿವೆ. ಇದು ರಾಜಕುಮಾರನಿಗೆ ಪ್ಲಸ್ ಪಾಯಿಂಟ್. ಸಿನಿಮಾದ ಬಗ್ಗೆ ಒಳ್ಳೆಯ ರೆಸ್ಪಾನ್ಸ್ ಇರುವ ಕಾರಣ ಮುಂದಿನ ದಿನಗಳಲ್ಲಿ ರಾಜಕುಮಾರ ಮತ್ತಷ್ಟು ಕೋಟಿ ಕೊಳ್ಳೆ ಹೊಡೆಯೋದ್ರಲ್ಲಿ ಯಾವುದೇ ಸಂಶಯ ಇಲ್ಲ.

    `ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಇದೇ ಮೊದಲ ಬಾರಿಗೆ ದಕ್ಷಿಣದ ಸುಂದರಿ ಪ್ರಿಯಾ ಆನಂದ್ ಕನ್ನಡ ಚಿತ್ರದಲ್ಲಿ ನಟಿಸಿದ್ದು, ಚೊಚ್ಚಲ ಚಿತ್ರದಲ್ಲೇ ಪುನೀತ್ ರಾಜ್ ಕುಮಾರ್ ಗೆ ನಾಯಕಿಯಾಗಿ ಕಾಣಿಸಿಕೊಡಿದ್ದಾರೆ.

    ಪ್ರಕಾಶ್ ರೈ, ಅನಂತ್ ನಾಗ್, ಅಚ್ಯುತ್ ಕುಮಾರ್, ಸಾಧುಕೋಕಿಲಾ, ಚಿಕ್ಕಣ್ಣ, ರಂಗಾಯಣ ರಘು, ತಮಿಳು ನಟ ಶರತ್ ಕುಮಾರ್, ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ವೇಳೆ ಹೆಲಿಕಾಪ್ಟರ್ನಿಂದ ಹಾರಿ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮುಳುಗಿ ಮೃತಪಟ್ಟಿದ್ದ ಅನಿಲ್ ಸೇರಿದಂತೆ ಸೇರಿದಂತೆ ಹಲವು ಮಂದಿ ಅಭಿನಯಿಸಿದ್ದಾರೆ.

    ಮಾರ್ಚ್ 9ರಂದು ಬಿಡುಗಡೆಯಾದ ರಾಜಕುಮಾರ ಅಫಿಶಿಯಲ್ ಮೇಕಿಂಗ್ ವಿಡಿಯೋ 10 ಲಕ್ಷ ವ್ಯೂ ಕಂಡಿದ್ದರೆ, ಫೆ.17ರಂದು ಬಿಡುಗಡೆಯಾಗಿದ್ದ ರಾಜಕುಮಾರ ಚಿತ್ರದ ಟೈಟಲ್ ಹಾಡನ್ನು ಕೇವಲ 6 ಗಂಟೆಯಲ್ಲಿ 1 ಲಕ್ಷ ಜನ ವೀಕ್ಷಿಸಿದ್ದರು.