Tag: ಪವರ್ ಮ್ಯಾನ್

  • ಕರ್ತವ್ಯದ ವೇಳೆ ಮೃತಪಟ್ಟ ಪವರ್ ಮ್ಯಾನ್ ಕುಟುಂಬಕ್ಕೆ ಸೆಸ್ಕ್ ವತಿಯಿಂದ 1.06 ಕೋಟಿ ರೂ. ಪರಿಹಾರ ವಿತರಣೆ

    ಕರ್ತವ್ಯದ ವೇಳೆ ಮೃತಪಟ್ಟ ಪವರ್ ಮ್ಯಾನ್ ಕುಟುಂಬಕ್ಕೆ ಸೆಸ್ಕ್ ವತಿಯಿಂದ 1.06 ಕೋಟಿ ರೂ. ಪರಿಹಾರ ವಿತರಣೆ

    – ಪರಿಹಾರದ ಚೆಕ್ ವಿತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಧನ ಸಚಿವ ಕೆ.ಜೆ.ಜಾರ್ಜ್
    – ಪಾಂಡವಪುರ ಉಪ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪವರ್ ಮ್ಯಾನ್ ಮಹೇಶ್

    ಮೈಸೂರು: ನಿಗಮದ ಸಿಬ್ಬಂದಿ ಹಾಗೂ ಅಧಿಕಾರಿಗಳ ಆರೋಗ್ಯ ಮತ್ತು ಸುರಕ್ಷತೆಗೆ ಸದಾ ಬದ್ಧವಾಗಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (CESC) ಕರ್ತವ್ಯನಿರತ ವೇಳೆ ಪ್ರಾಣ ಕಳೆದುಕೊಂಡ ಕಿರಿಯ ಪವರ್ ಮ್ಯಾನ್ (Power Man) ಕುಟುಂಬಕ್ಕೆ 1.06 ಕೋಟಿ ರೂ. ಪರಿಹಾರದ ಚೆಕ್ ವಿತರಿಸಿದೆ.

    ಮೈಸೂರಿನ (Mysuru) ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಸರ್ಕಾರದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶುಂಕುಸ್ಥಾಪನೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಕೆ.ಜಾರ್ಜ್ ಅವರು ಇತ್ತೀಚೆಗೆ ಕರ್ತವ್ಯನಿರತದ ವೇಳೆ ಪ್ರಾಣಕಳೆದುಕೊಂಡು ಸೆಸ್ಕ್ ವ್ಯಾಪ್ತಿಯ ಪಾಂಡವಪುರ ಉಪ ವಿಭಾಗದ ಕಿರಿಯ ಪವರ್ ಮ್ಯಾನ್ ಮಹೇಶ್ (27 ವರ್ಷ) ಅವರ ಕುಟುಂಬಕ್ಕೆ 1.06 ಕೋಟಿ ರೂ.ಗಳ ಪರಿಹಾರದ ಚೆಕ್ ವಿತರಿಸಿದರು. ಮೃತ ಪವರ್ ಮ್ಯಾನ್ ಮಹೇಶ್ ಅವರ ತಂದೆ ಬೋರೇಗೌಡ ಅವರು ಪರಿಹಾರದ ಚೆಕ್ ಸ್ವೀಕರಿಸಿದರು. ಇದನ್ನೂ ಓದಿ: ಪುಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆ – ಕೆಲಸದ ಒತ್ತಡವೇ ಕಾರಣ ಅಂತ ಡೆತ್ ನೋಟ್ ಬರೆದಿಟ್ಟು ಸೂಸೈಡ್

    ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷರೂ ಆಗಿರುವ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇಂಧನ ಸಚಿವರಾದ ಕೆ.ಜೆ.ಜಾರ್ಜ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು, ಮೈಸೂರು ವಿಭಾಗದ ಅಧೀಕ್ಷಕ ಇಂಜಿನಿಯರ್ ಸುನೀಲ್ ಮತ್ತಿತರರು ಇದ್ದರು. ಇದನ್ನೂ ಓದಿ: 14 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಹೆಚ್‌ಪಿವಿ ವ್ಯಾಕ್ಸಿನ್ – ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ

  • KPTCLನ 1899 ಹುದ್ದೆಗಳ ಭರ್ತಿಗೆ ಚಾಲನೆ ನೀಡಿದ ಸುನಿಲ್ ಕುಮಾರ್

    KPTCLನ 1899 ಹುದ್ದೆಗಳ ಭರ್ತಿಗೆ ಚಾಲನೆ ನೀಡಿದ ಸುನಿಲ್ ಕುಮಾರ್

    ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ(ಕೆಪಿಟಿಸಿಎಲ್‍) 1899 ಕಿರಿಯ ಪವರ್ ಮ್ಯಾನ್ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದ್ದು, ಇಂದು ಅದರ ಮೊದಲ ಹಂತವಾಗಿ, ಸಾಂಕೇತಿಕವಾಗಿ 21 ಜನರಿಗೆ ನೇಮಕಾತಿ ಆದೇಶ ಪತ್ರವನ್ನು ವಿತರಿಸಲಾಗುತ್ತಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.

    ಬೆಂಗಳೂರಿನ ಕಾವೇರಿ ಭವನದಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಸಭಾಂಗಣದಲ್ಲಿ ಈ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡಿದ ಬಳಿಕ ಮಾತನಾಡಿದ ಅವರು, ಕೆಪಿಟಿಸಿಎಲ್‍ನ 1899 ಹುದ್ದೆಗಳಿಗೆ 2019ರ ಫೆಬ್ರವರಿಯಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು, ಅಂದಿನಿಂದ ಇಂದಿನವರೆಗೂ ಈ ನೇಮಕಾತಿ ಪ್ರಕ್ರಿಯೆ ನಾನಾ ಕಾರಣಗಳಿಗಾಗಿ ನೆನೆಗುದಿಗೆ ಬಿದ್ದಿತ್ತು, ಈ ಬಗ್ಗೆ ಅನೇಕರು ನನ್ನ ಗಮನ ಸೆಳೆದಾಗ ನಾನು ಕೂಡಲೇ ಅಗತ್ಯವಾದ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ, ಆದೇಶ ಪತ್ರ ನೀಡುವಂತೆ ಸೂಚನೆ ನೀಡಿದ್ದೆ, ಅದರಂತೆ ಇಂದು 21 ಜನ ಕಿರಿಯ ಪವರ್ ಮ್ಯಾನ್ ಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ ಎಂದರು. ಇದನ್ನೂ ಓದಿ: ಸರ್ಕಾರಿ ಕಚೇರಿಗಳಿಗೆ ಶಾಕ್ ನೀಡಿದ ಸುನಿಲ್ ಕುಮಾರ್

    ಅತ್ಯಂತ ಶೀಘ್ರದಲ್ಲೇ ಉಳಿದ 1878 ಜನರಿಗೆ ನೇಮಕಾತಿ ಆದೇಶ ನೀಡಲಾಗುವುದು. ನಮ್ಮ ಸರ್ಕಾರ ಬಂದ ನಂತರ ಅತಿ ದೊಡ್ಡ ಪ್ರಮಾಣದಲ್ಲಿ ಈ ನೇಮಕ ಪ್ರಕ್ರಿಯೆ ನಡೆದಿರುವುದು ವೈಯಕ್ತಿಕವಾಗಿ ನನಗೆ ಸಂತೋಷ ತಂದಿದೆ. ಕೆಪಿಟಿಸಿಎಲ್ ನಲ್ಲಿ ಖಾಲಿ ಇರುವ ಇತರ ಹುದ್ದೆಗಳ ಭರ್ತಿಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕ್ರಮ ವಹಿಸಲಾಗುತ್ತದೆ ಎಂದು ಸ್ಪಷ್ಟಪಡಿಸದರು.

    ಈ ಸಂದರ್ಭದಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್ ಹಾಗೂ ಕೆಪಿಟಿಸಿಎಲ್‍ನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಎಂ.ಮಂಜುಳಾ ಅವರು ಉಪಸ್ಥಿತರಿದ್ದರು. ಇದನ್ನೂ ಓದಿ: ಕಗ್ಗತ್ತಲಲ್ಲಿ ಕರ್ನಾಟಕ ಮುಳುಗುವ ಆತಂಕ – ಇಂಧನ ಸಚಿವರು ಹೇಳಿದ್ದೇನು?

  • ಎದೆ ಮಟ್ಟದ ನೀರಿನಲ್ಲಿ ತೆರಳಿ ವಿದ್ಯುತ್ ಸಂಪರ್ಕ ಸರಿಪಡಿಸಿದ ಪವರ್ ಮ್ಯಾನ್

    ಎದೆ ಮಟ್ಟದ ನೀರಿನಲ್ಲಿ ತೆರಳಿ ವಿದ್ಯುತ್ ಸಂಪರ್ಕ ಸರಿಪಡಿಸಿದ ಪವರ್ ಮ್ಯಾನ್

    ಹಾಸನ: ಎದೆ ಮಟ್ಟದ ನೀರಿನಲ್ಲಿ ತೆರಳಿ ವಿದ್ಯುತ್ ಸಂಪರ್ಕವನ್ನು ಪವರ್ ಮ್ಯಾನ್ ಸರಿಪಡಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಗ್ರಾಮಸ್ಥರಿಗೆ ಸಹಾಯವಾಗಲಿ ಎಂದು ಪವರ್ ಮ್ಯಾನ್ ಅಮಿತ್ ಎದೆಮಟ್ಟದವರೆಗೆ ನಿಂತಿದ್ದ ನೀರಿನಲ್ಲೇ ಸುಮಾರು 500 ಮೀಟರ್ ತೆರಳಿ ವಿದ್ಯುತ್ ಸಂಪರ್ಕ ಸರಿಪಡಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನಲ್ಲಿ ಕಳೆದ 3 ದಿನದಿಂದ ಸತತವಾಗಿ ಮಳೆ ಆರ್ಭಟ ಜೋರಾಗಿದ್ದು, ರಾಮನಾಥಪುರ ವ್ಯಾಪ್ತಿಯ ತೋಟವೊಂದರಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

    ಇದರಿಂದಾಗಿ ಗ್ರಾಮಸ್ಥರಿಗೆ ವಿದ್ಯುತ್ ಸಮಸ್ಯೆ ತಲೆದೋರಿದ್ದು ಪವರ್ ಮ್ಯಾನ್ ಬಳಿ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ರಾಮನಾಥಪುರ ಹೋಬಳಿ, ಚಾಮುಂಡೇಶ್ವರಿ ವಿದ್ಯುತ್ ನಿಗಮ ನಿಯಮಿತ ದಲ್ಲಿ ಜೂನಿಯರ್ ಪವರ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಅಮಿತ್ ಅವರು ಸುತ್ತಲೂ ಎದೆವರೆಗೂ ನೀರು ನಿಂತಿದ್ದ ತೋಟದಲ್ಲಿ ಸುಮಾರು 500 ಮೀಟರ್ ದೂರದವರೆಗೂ ತೆರಳಿ ವಿದ್ಯುತ್ ಸಂಪರ್ಕ ಸರಿಪಡಿಸಿ, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.