Tag: ಪಳನಿ ಸ್ವಾಮಿ

  • ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಡಿ – ಮತ್ತೆ ತಮಿಳುನಾಡು ಕ್ಯಾತೆ

    ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಡಿ – ಮತ್ತೆ ತಮಿಳುನಾಡು ಕ್ಯಾತೆ

    ನವದೆಹಲಿ: ಮೇಕೆದಾಟು ಯೋಜನೆಗೆ ಮತ್ತೆ ತಮಿಳುನಾಡು ಕ್ಯಾತೆ ವ್ಯಕ್ತಪಡಿಸಿದ್ದು, ಈ ಯೋಜನೆಗೆ ಒಪ್ಪಿಗೆ ನೀಡದಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಮನವಿ ಮಾಡಿದ್ದಾರೆ.

    ದೆಹಲಿಯ ಪ್ರಧಾನಿ ಕಚೇರಿಯಲ್ಲಿ ಮೋದಿ ಅವರನ್ನು ಭೇಟಿಯಾದ ಪಳನಿಸ್ವಾಮಿ, ಅಣೆಕಟ್ಟು ನಿರ್ಮಾಣದಿಂದ ತಮಿಳುನಾಡು ಹಿತಾಸಕ್ತಿಗೆ ಧಕ್ಕೆಯಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದರು.

    ಈ ಹಿಂದೆ ಈ ಯೊಜನೆ ಸಂಬಂಧ ಪಳನಿಸ್ವಾಮಿ ಮೋದಿಗೆ ಪತ್ರ ಬರೆದಿದ್ದರು. ಆದರೆ ಇಂದು ಖುದ್ದು ಭೇಟಿಯಾಗಿ ಯೋಜನೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದನ್ನು ಓದಿ: ಮೇಕೆದಾಟಿಗೂ ತಮಿಳುನಾಡು ಕ್ಯಾತೆ ಯಾಕೆ? ಯೋಜನೆಯಿಂದ ರಾಜ್ಯಕ್ಕಾಗುವ ಲಾಭ ಏನು?

    ಮೂರು ದಿನಗಳ ಹಿಂದೆ ಸಿಎಂ ಕುಮಾರಸ್ವಾಮಿ ಅವರು ಮೇಕೆದಾಟು ಯೋಜನೆ ಸಂಬಂಧ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಅನುಮತಿ ನೀಡುವಂತೆ ಮನವಿ ಮಾಡಿದ್ದರು.

    ಕುಮಾರಸ್ವಾಮಿ ಮತ್ತು ರಾಜ್ಯದ ಅಧಿಕಾರಿಗಳು ಮೇಕೆದಾಟು ಯೋಜನೆಯ ಬಗ್ಗೆ ವಿವರಿಸುವ ಮೊದಲೇ ಎಲ್ಲ ಮಾಹಿತಿಯನ್ನು ತಿಳಿದುಕೊಂಡಿದ್ದ ಗಡ್ಕರಿ ಈ ಯೋಜನೆ ಆರಂಭಿಸಿದರೆ ತಪ್ಪೇನಿದೆ? ಕರ್ನಾಟಕ ಭೂಮಿ ಮುಳುಗಡೆಯಾಗುತ್ತದೆ ಹೊರತು ತಮಿಳುನಾಡು ಭೂಮಿ ಮುಳುಗಡೆಯಾಗುವುದಿಲ್ಲ. ನೂರಾರು ಟಿಎಂಸಿ ನೀರು ಸಮುದ್ರಕ್ಕೆ ವ್ಯರ್ಥವಾಗಿ ಹೋಗುವುದು ತಪ್ಪುತ್ತದೆ ಅಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದರು ಎಂದು ಮೂಲಗಳು ತಿಳಿಸಿತ್ತು.  ಇದನ್ನು ಓದಿ: ಮೇಕೆದಾಟು ಯೋಜನೆಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ: ಸಿಎಂ ಎಚ್‍ಡಿಕೆ

    ಗಡ್ಕರಿ ಭೇಟಿ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ್ದ ಸಿಎಂ, ಮೇಕೆದಾಟು ಯೋಜನೆಗೆ ಜಲಸಂಪನ್ಮೂಲ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಲ್ಲದೇ ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದಾರೆ. ಈ ಬಾರಿ 200 ಟಿಎಂಸಿ ನೀರು ಸಮುದ್ರಕ್ಕೆ ವ್ಯರ್ಥವಾಗಿ ಹರಿದಿದೆ. ಈ ನೀರನ್ನು ಸಂಗ್ರಹಿಸಿಟ್ಟುಕೊಂಡರೆ, ಬರಗಾಲದ ಸಂದರ್ಭದಲ್ಲಿ ಬಳಕೆಗೆ ಅನುಕೂಲವಾಗಿರುತ್ತದೆ. ವಾಸ್ತವಾಂಶಗಳ ಕುರಿತು ಸಚಿವರ ಗಮನಕ್ಕೆ ತಂದಿದ್ದು, ಅವರೂ ಸಹ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರೀ ಹೈಡ್ರಾಮದ ಬಳಿಕ ವಿಶ್ವಾಸ ಮತಯಾಚನೆಯಲ್ಲಿ ಗೆದ್ದಿತು ಶಶಿಕಲಾ ಬಣ

    ಭಾರೀ ಹೈಡ್ರಾಮದ ಬಳಿಕ ವಿಶ್ವಾಸ ಮತಯಾಚನೆಯಲ್ಲಿ ಗೆದ್ದಿತು ಶಶಿಕಲಾ ಬಣ

    ಚೆನ್ನೈ: ಗದ್ದಲ, ಕೋಲಾಹಲ ರಾಜಕೀಯ ಹೈಡ್ರಾಮಕ್ಕೆ ಕಾರಣವಾಗಿದ್ದ ತಮಿಳುನಾಡು ವಿಶೇಷ ಅಧಿವೇಶನದಲ್ಲಿ ಕೊನೆಗೂ ಶಶಿಕಲಾ ಬಣ ಗೆದ್ದಿದೆ. ಸಿಎಂ ಪಳನಿಸ್ವಾಮಿ ವಿಶ್ವಾಸ ಮತ ಯಾಚನೆ ಪರೀಕ್ಷೆಯಲ್ಲಿ ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

    ಕಾಂಗ್ರೆಸ್, ಡಿಎಂಕೆ ಶಾಸಕರ ಅನುಪಸ್ಥಿತಿಯಲ್ಲಿ ಸರ್ಕಾರದ ಪರವಾಗಿ 122 ಶಾಸಕರು ಮತವನ್ನು ಚಲಾಯಿಸಿದ್ದರೆ ವಿರುದ್ಧವಾಗಿ 11 ಮತಗಳು ಬಿದ್ದಿದೆ. ಈ ಮೂಲಕ ಅಧಿಕೃತವಾಗಿ ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದಿದೆ.

    ಭಾರೀ ಹೈಡ್ರಾಮ: ಕರ್ನಾಟಕದ ವಿಧಾನಸಭೆಯಲ್ಲಿ ಈ ಹಿಂದೆ ನಡೆದ ಇತಿಹಾಸ ತಮಿಳುನಾಡಿನಲ್ಲಿ ಮರುಕಳಿಸಿತ್ತು. ಶನಿವಾರ ಬೆಳಗ್ಗೆ 11 ಗಂಟೆಗೆ ವಿಶೇಷ ಅಧಿವೇಶನ ಆರಂಭವಾದ ಕೂಡಲೇ ಸಿಎಂ ಪಳನಿ ಸ್ವಾಮಿ ವಿಶ್ವಾಸಮತಯಾಚನೆ ನಿರ್ಣಯ ಮಂಡಿಸಿದ ಬಳಿಕ ಡಿಎಂಕೆ ನಾಯಕ ಸ್ಟಾಲಿನ್ ರಹಸ್ಯ ಮತದಾನಕ್ಕೆ ಆಗ್ರಹಿಸಿದರು. ಸ್ಟಾಲಿನ್‍ಗೆ ಪನ್ನೀರ್ ಸೆಲ್ವಂ ಬಣದ ಶಾಸಕರು ರಹಸ್ಯ ಮತದಾನ ನಡೆಸುವಂತೆ ಸ್ಪೀಕರ್ ಅವರನ್ನು ಒತ್ತಾಯಿಸಿದರು.

    ಕಲಾಪದಲ್ಲಿ ಮಾತನಾಡಿದ ಸ್ಟಾಲಿನ್, ವಿಶ್ವಾಸಮತಯಾಚನೆಗೆ ಪೊಲೀಸ್ ರಕ್ಷಣೆಯಲ್ಲಿ ಶಾಸಕರನ್ನು ಕರೆ ತರಲಾಗಿದೆ. ಇದರಿಂದಾಗಿ ಶಾಸಕರಿಗೆ ತಮ್ಮ ಅಭಿಪ್ರಾಯವನ್ನು ನೇರವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಹಸ್ಯ ಮತದಾನ ನಡೆಸಬೇಕು ಎಂದು ಆಗ್ರಹಿಸಿದರು.

    ಪನ್ನೀರ್ ಸೆಲ್ವಂ ಬಣದ ಮುಖ್ಯ ಸಚೇತಕ ಮತ್ತು ಶಾಸಕ ಸೆಮ್ಮೈಲೈ ಮಾತನಾಡಿ, ಎಐಎಡಿಎಂಕೆ ಶಾಸಕರಿಗೆ ಜೀವ ಬೆದರಿಕೆ ಇದೆ. ಹೀಗಾಗಿ ಅವರನ್ನು ರಕ್ಷಿಸಿ ಎಂದು ಹೇಳಿದರು. ಆದರೆ ಸ್ಪೀಕರ್ ಧನ್‍ಪಾಲ್ ಅವರು, ವಿಶ್ವಾಸಮತಯಾಚನೆ ಹೇಗೆ ನಡೆಸಬೇಕು ಎನ್ನುವುದು ನನಗೆ ಬಿಟ್ಟ ವಿಚಾರ. ಮತದಾನ ಹೇಗೆ ನಡೆಸಬೇಕು ಎನ್ನುವುದು ನನಗೆ ತಿಳಿದಿದೆ. ಇದರಲ್ಲಿ ಯಾರೂ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಹೇಳಿ ಮತದಾನಕ್ಕೆ ಅವಕಾಶ ನೀಡಿದರು.

    ಹೈಡ್ರಾಮ ಹೀಗಿತ್ತು: ರಹಸ್ಯ ಮತದಾನಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಡಿಎಂಎಕೆ, ಕಾಂಗ್ರೆಸ್, ಪನ್ನೀರ್ ಸೆಲ್ವಂ ಬಣದ ಶಾಸಕರು ಸದನದ ಭಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಡಿಎಂಕೆ ಶಾಸಕರು ಸ್ಪೀಕರ್ ಮುಂದುಗಡೆ ಇರುವ ಮೈಕ್ ಮತ್ತು ಟೇಬಲ್ ಕುರ್ಚಿಗಳು ಒಡೆದು ಹಾಕಿದರು. ಅಷ್ಟೇ ಅಲ್ಲದೇ ಸ್ಪೀಕರ್ ಧನ್ ಪಾಲ್ ಮೇಲೆ ಫೈಲ್ ಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಡಿಎಂಕೆಯ ಕೆಲ ಶಾಸಕರು ಸ್ಪೀಕರ್ ಧನ್‍ಪಾಲ್ ಶರ್ಟ್ ಎಳೆದ ಪ್ರಸಂಗ ನಡೆಯಿತು. ಪ್ರತಿಭಟನೆ ಜೋರಾಗುತ್ತಿದ್ದಂತೆ ಸ್ಪೀಕರ್ ಸದನವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು.

    ಸದನ ಮತ್ತೆ ಆರಂಭವಾದ ಕೂಡಲೇ ಡಿಎಂಕೆ ಶಾಸಕರ ಮತ್ತೆ ಪ್ರತಿಭಟನೆ ನಡೆಸಿದರು. ಈ ವೇಳೆ ಶರ್ಟ್ ಹಿಡಿದು ಎಳೆದಾಡಿದಕ್ಕೆ ಡಿಎಂಕೆಯ ಎಲ್ಲ ಶಾಸಕರನ್ನು ಸ್ಪೀಕರ್ ಸದನದಿಂದ ಹೊರಗಡೆ ಹಾಕುವಂತೆ ಮಾರ್ಷಲ್‍ಗಳಿಗೆ ಸೂಚಿಸಿದರು. ಮಾರ್ಷಲ್‍ಗಳು ಬಲವಂತವಾಗಿ ಶಾಸಕರನ್ನು ಹೊರಕ್ಕೆ ಹಾಕಿದರು. ಸ್ಪೀಕರ್ ನಿರ್ಧಾರವನ್ನು ಖಂಡಿಸಿ ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್ ಶಾಸಕರು ಸಭಾ ತ್ಯಾಗ ಮಾಡಿದರು. ಈ ಎಲ್ಲ ಹೈಡ್ರಾಮದ ಬಳಿಕ ಕೊನೆಗೆ ಮೂರು ಗಂಟೆಗೆ ನಡೆದ ಕಲಾಪದಲ್ಲಿ ಒಟ್ಟು 123 ಮತಗಳನ್ನು ಪಡೆಯುವ ಮೂಲಕ ಪಳನಿಸ್ವಾಮಿ ಬಹುಮತವನ್ನು ಸಾಬೀತು ಪಡಿಸುವಲ್ಲಿ ಯಶಸ್ವಿಯಾದರು.

    ರಾಜ್ಯಪಾಲರಿಗೆ ದೂರು: ಹರಿದ ಬಟ್ಟೆಯಲ್ಲಿ ವಿಧಾನಸಭೆಯಿಂದ ಹೊರಬಂದ ಡಿಎಂಕೆ ನಾಯಕ ಸ್ಟಾಲಿನ್ ಅದೇ ಬಟ್ಟೆಯಲ್ಲಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರಿಗೆ ಸರ್ಕಾರದ ವಿರುದ್ಧ ದೂರು ನೀಡಿದ್ದಾರೆ.

    ಸಮಾಧಿಗೆ ಭೇಟಿ: ವಿಶ್ವಾಸ ಮತಯಾಚನೆಯಲ್ಲಿ ಗೆದ್ದ ಬಳಿಕ ಸಿಎಂ ಪಳನಿಸ್ವಾಮಿ ಚೆನ್ನೈನ ಮರೀನಾ ಬೀಚ್ ಸಮೀಪ  ಇರುವ ಜಯಾ ಸಮಾಧಿಗೆ ತಮ್ಮ ಶಾಸಕರ ಜೊತೆ ತೆರಳಿ ನಮನ ಸಲ್ಲಿಸಿದರು.

    ಶರ್ಟ್ ಬಿಚ್ಚಿದ್ದ ಗೂಳಿಹಟ್ಟಿ ಚಂದ್ರಶೇಖರ್: 2010ರ ಅಕ್ಟೋಬರ್‍ನಲ್ಲಿ ಬಿಎಸ್‍ಯಡಿಯೂರಪ್ಪ ವಿಶ್ವಾಸ ಮತಯಾಚನೆ ವೇಳೆ ಶಾಸಕಾರ ಮಾರಾಮಾರಿ ನಡೆದಿತ್ತು. ಈ ವೇಳೆ ಮಾರ್ಷಲ್‍ಗಳು ಗೂಳಿಹಟ್ಟಿ ಚಂದ್ರಶೇಖರ್ ಅವರನ್ನು ಹೊರಹಾಕಲು ಮುಂದಾದಾಗ ಅವರು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದರು.

  • ತಮಿಳುನಾಡು ಅಸೆಂಬ್ಲಿಯಲ್ಲಿ ಹೈಡ್ರಾಮ: ಮೈಕ್, ಟೇಬಲ್ ಕುರ್ಚಿ ಒಡೆದು ಹಾಕಿದ ಶಾಸಕರು

    ತಮಿಳುನಾಡು ಅಸೆಂಬ್ಲಿಯಲ್ಲಿ ಹೈಡ್ರಾಮ: ಮೈಕ್, ಟೇಬಲ್ ಕುರ್ಚಿ ಒಡೆದು ಹಾಕಿದ ಶಾಸಕರು

    ಚೆನ್ನೈ:ಕರ್ನಾಟಕದ ವಿಧಾನಸಭೆಯಲ್ಲಿ ಈ ಹಿಂದೆ ನಡೆದ ಇತಿಹಾಸ ಈಗ ತಮಿಳುನಾಡಿನಲ್ಲಿ ಮರುಕಳಿಸಿದೆ. ಪಳನಿಸ್ವಾಮಿ ವಿಶ್ವಾಸ ಮತಯಾಚನೆ ವೇಳೆ ಡಿಎಂಕೆ ಶಾಸಕರು ಫೈಲ್‍ಗಳನ್ನು ಸ್ಪೀಕರ್ ಮೇಲೆ ಎಸೆದು ಕೋಲಾಹಲ ಸೃಷ್ಟಿಸಿದ್ದಾರೆ.

    ಶನಿವಾರ ಬೆಳಗ್ಗೆ 11 ಗಂಟೆಗೆ ವಿಶೇಷ ಅಧಿವೇಶನ ಆರಂಭವಾದ ಕೂಡಲೇ ಸಿಎಂ ಪಳನಿ ಸ್ವಾಮಿ ವಿಶ್ವಾಸಮತಯಾಚನೆ ನಿರ್ಣಯ ಮಂಡಿಸಿದ ಬಳಿಕ ಡಿಎಂಕೆ ನಾಯಕ ಸ್ಟಾಲಿನ್ ರಹಸ್ಯ ಮತದಾನಕ್ಕೆ ಆಗ್ರಹಿಸಿದರು. ಸ್ಟಾಲಿನ್‍ಗೆ ಪನ್ನೀರ್ ಸೆಲ್ವಂ ಬಣದ ಶಾಸಕರು ಬೆಂಬಲ ವ್ಯಕ್ತಪಡಿಸಿದರು.

    ಕಲಾಪದಲ್ಲಿ ಮಾತನಾಡಿದ ಸ್ಟಾಲಿನ್, ವಿಶ್ವಾಸಮತಯಾಚನೆಗೆ ಪೊಲೀಸ್ ರಕ್ಷಣೆಯಲ್ಲಿ ಶಾಸಕರನ್ನು ಕರೆ ತರಲಾಗಿದೆ. ಇದರಿಂದಾಗಿ ಶಾಸಕರಿಗೆ ತಮ್ಮ ಅಭಿಪ್ರಾಯವನ್ನು ನೇರವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಹಸ್ಯ ಮತದಾನ ನಡೆಸಬೇಕು ಎಂದು ಆಗ್ರಹಿಸಿದರು.

    ಪನ್ನೀರ್ ಸೆಲ್ವಂ ಬಣದ ಮುಖ್ಯ ಸಚೇತಕ ಮತ್ತು ಶಾಸಕ ಸೆಮ್ಮೈಲೈ ಮಾತನಾಡಿ, ಎಐಎಡಿಎಂಕೆ ಶಾಸಕರಿಗೆ ಜೀವ ಬೆದರಿಕೆ ಇದೆ. ಹೀಗಾಗಿ ಅವರನ್ನು ರಕ್ಷಿಸಿ ಎಂದು ಹೇಳಿದರು. ಆದರೆ ಸ್ಪೀಕರ್ ಧನ್‍ಪಾಲ್ ಅವರು, ವಿಶ್ವಾಸಮತಯಾಚನೆ ಹೇಗೆ ನಡೆಸಬೇಕು ಎನ್ನುವುದು ನನಗೆ ಬಿಟ್ಟ ವಿಚಾರ. ಮತದಾನ ಹೇಗೆ ನಡೆಸಬೇಕು ಎನ್ನುವುದು ನನಗೆ ತಿಳಿದಿದೆ. ಇದರಲ್ಲಿ ಯಾರೂ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಹೇಳಿ ಮತದಾನಕ್ಕೆ ಅವಕಾಶ ನೀಡಿದರು.

    ರಹಸ್ಯ ಮತದಾನಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಡಿಎಂಎಕೆ, ಕಾಂಗ್ರೆಸ್, ಪನ್ನೀರ್ ಸೆಲ್ವಂ ಬಣದ ಶಾಸಕರು ಸದನದ ಭಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಡಿಎಂಕೆ ಶಾಸಕರು ಸ್ಪೀಕರ್ ಮುಂದುಗಡೆ ಇರುವ ಮೈಕ್ ಮತ್ತು ಟೇಬಲ್ ಕುರ್ಚಿಗಳು ಒಡೆದು ಹಾಕಿದರು. ಅಷ್ಟೇ ಅಲ್ಲದೇ ಸ್ಪೀಕರ್ ಧನ್ ಪಾಲ್ ಮೇಲೆ ಫೈಲ್ ಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಜೋರಾಗುತ್ತಿದ್ದಂತೆ ಸ್ಪೀಕರ್ ಸದನದವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು.

    ಶರ್ಟ್ ಬಿಚ್ಚಿದ್ದ ಗೂಳಿಹಟ್ಟಿ ಚಂದ್ರಶೇಖರ್: 2010ರ ಅಕ್ಟೋಬರ್‍ನಲ್ಲಿ ಬಿಎಸ್‍ಯಡಿಯೂರಪ್ಪ ವಿಶ್ವಾಸ ಮತಯಾಚನೆ ವೇಳೆ ಶಾಸಕರ ಮಾರಾಮಾರಿ ನಡೆದಿತ್ತು. ಈ ವೇಳೆ ಮಾರ್ಷಲ್‍ಗಳು ಗೂಳಿಹಟ್ಟಿ ಚಂದ್ರಶೇಖರ್ ಅವರನ್ನು ಹೊರಹಾಕಲು ಮುಂದಾದಾಗ ಅವರು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದರು.