Tag: ಪಲ್ಸ್ ಪೋಲಿಯೋ

  • ಪೋಲಿಯೋ ಲಸಿಕೆ ಅಭಿಯಾನಕ್ಕೆ ವಿಜಯಪುರ ಜಿಲ್ಲಾಧಿಕಾರಿ ಚಾಲನೆ

    ಪೋಲಿಯೋ ಲಸಿಕೆ ಅಭಿಯಾನಕ್ಕೆ ವಿಜಯಪುರ ಜಿಲ್ಲಾಧಿಕಾರಿ ಚಾಲನೆ

    ವಿಜಯಪುರ: ಪಲ್ಸ್ ಪೋಲಿಯೋ ಲಸಿಕೆ ಅಭಿಯಾನಕ್ಕೆ ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಚಾಲನೆ ನೀಡಿದರು.

    ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ 3.16 ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುವುದು. ಇದಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 1,250 ಭೂತ್‍ಗಳನ್ನು ಸ್ಥಾಪಿಸಲಾಗಿದೆ. ಬಳಿಕ ಮೂರು ದಿನ ಆಶಾ ಕಾರ್ಯ ಕರ್ತೆಯರು ಹಾಗೂ ಸಿಬ್ಬಂದಿ ಮನೆ ಮನೆಗೆ ತೆರಳಿ ಪೋಲಿಯೋ ಲಸಿಕೆ ಹಾಕುವರು, ಜಿಲ್ಲೆಯಲ್ಲಿ ಇರುವ ಎಲ್ಲ ಮಕ್ಕಳಿಗೂ ಪೋಷಕರು ಪಲ್ಸ್ ಪೋಲಿಯೋ ಹಾಕಿಸಬೇಕು ಎಂದು ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಮಹೇಂದ್ರ ಕಾಪ್ಸೆ, ಜಿಲ್ಲಾ ಪಂಚಾಯತ್ ಸಿಇಓ ಗೋವಿಂದರೆಡ್ಡಿ, ಜಿಲ್ಲಾ ನೊಡಲ್ ಅಧಿಕಾರಿ ಡಾ.ಜಯರಾಮ್, ತಾಲ್ಲೂಕು ಅಧಿಕಾರಿ ಕವಿತಾ ಹಾಗೂ ಇತರರು ಉಪಸ್ಥಿತರಿದ್ದರು.

  • ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಚಾಲನೆ

    ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಚಾಲನೆ

    -ತಡವಾಗಿ ಆಗಮಿಸಿದ ಸಚಿವರು, ಚಳಿಗೆ ನಡುಗಿದ ಪುಟ್ಟ ಮಕ್ಕಳು

    ಬೆಂಗಳೂರು: ರಾಜ್ಯಾದ್ಯಂತ ಇಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಚಾಲನೆ ನೀಡಿದರು.

    ಬೆಂಗಳೂರಿನ ಚಿಕ್ಕಜಾಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಚಿವರು ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಎಲ್ಲಾ ಮಕ್ಕಳಿಗೆ ಕಡ್ಡಾಯ ಲಸಿಕೆ ಹಾಕಲು ಸೂಚಿಸಲಾಗಿದೆ. ಈ ಬಾರಿ 100ಕ್ಕೆ 100ರಷ್ಟು ಟಾರ್ಗೆಟ್ ರೀಚ್ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ಪಂಚಾಯ್ತಿ, ಶಾಲೆ, ಮನೆಗಳಿಗೆ ಹೋಗಿ ಲಸಿಕೆ ಹಾಕಿ ಜಾಗೃತಿ ಮೂಡಿಸೋದಕ್ಕೆ ಸೂಚನೆಯನ್ನು ನೀಡಲಾಗಿದೆ ಎಂದು ತಿಳಿಸಿದರು.

    ಕಳೆದ ವರ್ಷ 66 ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲಾಗಿತ್ತು. ಈ ಬಾರಿಯೂ ಉತ್ತಮ ಪ್ರಮಾಣದಲ್ಲಿ ಲಸಿಕೆ ಆಗುತ್ತೆ ಎಂಬ ವಿಶ್ವಾಸವನ್ನ ವ್ಯಕ್ತಪಡಿಸಿದರು. ಹಾಗೆಯೇ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಬಗ್ಗೆ ಅಪಪ್ರಚಾರ ಆಗುತ್ತಿದೆ. ಇದಕ್ಕೆ ಯಾರೂ ಕಿವಿಗೊಡಬೇಡಿ. ಎಲ್ಲಾ ಖಾಯಿಲೆಗಳಿಗೆ ಲಸಿಕೆ ಅಗತ್ಯ. ಮಕ್ಕಳಿಗೆ ಲಸಿಕೆ ಹಾಕಿಸಿ ಎಂದು ಸಚಿವರು ಪೋಷಕರಲ್ಲಿ ಮನವಿ ಮಾಡಿದರು.

    ಕಾರ್ಯಕ್ರಮಕ್ಕೆ ತಡವಾಗಿ ಬಂದ ಸಚಿವರು
    ತಮ್ಮದೇ ಇಲಾಖೆಯ ಕಾರ್ಯಕ್ರಮಕ್ಕೆ ಸಚಿವರು ತಡವಾಗಿ ಆಗಮಿಸಿದರು. ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಚಿವರು 4 ಗಂಟೆಗೆ ಚಾಲನೆ ನೀಡಬೇಕಿತ್ತು. ಸಚಿವರು ಬೇಗನೇ ಬರ್ತಾರೆ ಅಂತನೇ ಇಲಾಖೆ ಹಾಗೂ ಚಿಕ್ಕಜಾಲ ಆಸ್ಪತ್ರೆಯ ಸಿಬ್ಬಂದಿ ಬೆಳಗ್ಗಿನ ಜಾವ 4 ಗಂಟೆಗೆನೇ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಯನ್ನ ಸಿಂಗಾರ ಮಾಡಿದ್ದರು. ಆದರೆ ಸಚಿವರು ಮಾತ್ರ ಬರಲೇ ಇಲ್ಲ. ಚಳಿಗೆ ನಡುಗುತ್ತಾ ಹಲವು ತಾಯಂದಿರು ಪುಟ್ಟ ಪುಟ್ಟ ಮಕ್ಕಳನ್ನ ಎತ್ತಿಕೊಂಡು ಬಂದಿದ್ದರು. ಸಚಿವರ ಆಗಮನಕ್ಕಾಗಿ ಇಲಾಖೆಯ ಅಧಿಕಾರಿಗಳು ಕೂಡ ಹೂಗುಚ್ಛ ಹಿಡಿದು, ಕಾದು ನಿಂತಿದ್ದರು. ಆದರೆ ಸಚಿವರು ಮಾತ್ರ ಬರೋಬ್ಬರಿ 6:50ಕ್ಕೆ ಕಾರ್ಯಕ್ರಮ ಸ್ಥಳಕ್ಕೆ ಬಂದಿದ್ದು, ಸಚಿವರ ಈ ವರ್ತನೆಗೆ ಇಲಾಖೆಯ ಕೆಲ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.

  • ಪಲ್ಸ್ ಪೋಲಿಯೋ ವದಂತಿ ಸುಳ್ಳು: ಆರೋಗ್ಯ ಇಲಾಖೆ ಸ್ಪಷ್ಟನೆ

    ಪಲ್ಸ್ ಪೋಲಿಯೋ ವದಂತಿ ಸುಳ್ಳು: ಆರೋಗ್ಯ ಇಲಾಖೆ ಸ್ಪಷ್ಟನೆ

    ಬೆಂಗಳೂರು: ಪಲ್ಸ್ ಪೋಲಿಯೋ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿ ಸುಳ್ಳು ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

    ಈ ಸಂಬಂಧ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಸುಳ್ಳು ಸುದ್ದಿಗೆ ಕಿವಿಗೊಡದಂತೆ ಸಾರ್ಜಜನಿಕರಿಗೆ ಮನವಿ ಮಾಡಿಕೊಂಡಿದೆ. ಪೋಷಕರು ಯಾವುದೇ ಆತಂಕವಿಲ್ಲದೇ ಮಕ್ಕಳಿಗೆ ಲಸಿಕೆ ಹಾಕಿಸಬಹುದು ಎಂದು ತಿಳಿಸಲಾಗಿದೆ.

    ಪೋಲಿಯೋ ಹನಿ ಬಗ್ಗೆ ಸೆಪ್ಟೆಂಬರ್ 20ರಂದು ಸಾಮಾಜಿಕ ಜಾಲತಾಣ ವಾಟ್ಸಪ್‍ನಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿತ್ತು. “ದಯಮಾಡಿ ಬೇಗ ಶೇರ್ ಮಾಡಿ, ನಾಳೆ 5 ವರ್ಷದ ಒಳಗೆ ಇರುವ ಮಕ್ಕಳಿಗೆ ಪೋಲಿಯೋ ಹಾಕಿಸ ಬೇಡಿ ಅದರಲ್ಲಿ ವೈರಸ್ ಬೆರೆಸಿರುತ್ತದೆ. ಪೋಲಿಯೋ ತಯಾರು ಮಾಡಿದ ಆ ಕಂಪನಿ ಯಜಮಾನರನ್ನು ಅರೆಸ್ಟ್ ಮಾಡಿದ್ದಾರೆ. ದಯಮಾಡಿ ಎಲ್ಲರಿಗೂ ತುರ್ತು ಶೇರ್ ಮಾಡಿ ಸತ್ಯ, ಸತ್ಯ” ಎಂಬ ಸುಳ್ಳು ಸಂದೇಶ ವಾಟ್ಸಪ್‍ನಲ್ಲಿ ಹರಿದಾಡುತ್ತಿತ್ತು. ಈ ರೀತಿಯ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಕೊಡಬಾರದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ.

    ಪಲ್ಸ್ ಪೋಲಿಯೋ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, 2014ರಲ್ಲಿ ಭಾರತವು ವಿಶ್ವಸಂಸ್ಥೆಯಿಂದ ಪೋಲಿಯೋ ಮುಕ್ತ ರಾಷ್ಟ್ರ ಎಂಬ ಬಿರುದು ಪಡೆದುಕೊಂಡಿದೆ. ಈ ಕುರಿತು ಸುಳ್ಳು ವದಂತಿ ಹೊರಡಿಸಬಾರದು ಎಂಬ ನಿದರ್ಶನ ನೀಡಲಾಗಿದೆ. ಆದರೂ ಅಪಪ್ರಚಾರ ನಡೆಯುತ್ತಿದೆ. ಪೋಷಕರು ಯಾವುದೇ ಆತಂಕವಿಲ್ಲದೇ ಲಸಿಕೆ ಹಾಕಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

    ಈ ಸಂಬಂಧ ಮಾಹಿತಿಯನ್ನು ಜಿಲ್ಲೆಯ ಜಿಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಜೊತೆಗೆ ಅಂಗನವಾಡಿ ಫಲಾನುಭವಿಗಳಿಗೆ ಹಾಗೂ ಪೋಷಕರಿಗೆ ತಿಳಿಸಲು ಸೂಕ್ತ ಕ್ರಮವಹಿಸುವಂತೆ ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ, ಮೇಲ್ವಿಚಾರಕಿಯರಿಗೆ, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸೂಚಿಸಲು ಕೋರಿ ಸುತ್ತೋಲೆ ಹೊರಡಿಸಲಾಗಿದೆ.