Tag: ಪಲ್ಲಕ್ಕಿ

  • ಶಟರ್ ಧ್ವಂಸಗೊಳಿಸಿ ದೇಗುಲದಿಂದ ಪಲ್ಲಕ್ಕಿ ಹೊರತಂದು ಮೆರವಣಿಗೆ – 50ಕ್ಕೂ ಅಧಿಕ ಮಂದಿ ಅರೆಸ್ಟ್

    ಶಟರ್ ಧ್ವಂಸಗೊಳಿಸಿ ದೇಗುಲದಿಂದ ಪಲ್ಲಕ್ಕಿ ಹೊರತಂದು ಮೆರವಣಿಗೆ – 50ಕ್ಕೂ ಅಧಿಕ ಮಂದಿ ಅರೆಸ್ಟ್

    – ನಿರ್ಬಂಧದ ನಡುವೆ ಅಡ್ಡ ಪಲ್ಲಕ್ಕಿ ಉತ್ಸವ
    – ಪೊಲೀಸ್ ವಾಹನಕ್ಕೂ ಡಿಕ್ಕಿ

    ಕೊಪ್ಪಳ: ನಿರ್ಬಂಧದ ನಡುವೆಯೂ ಅಡ್ಡಪಲ್ಲಕ್ಕಿ ಉತ್ಸವವನ್ನು ಆಚರಣೆ ಮಾಡಿದ್ದು, ಪರಿಣಾಮ 50ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಶ್ರೀಅವಧೂತ ಶುಕಮುನಿ ದೇವರ ಆರಾಧನೆ ಮಹೋತ್ಸವ ನಿಮಿತ್ತ ಪ್ರತಿ ವರ್ಷ ಅಡ್ಡಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಬಾರಿ ಕೊರೊನಾ ಭೀತಿಯಿಂದ ತಲತಲಾಂತರದಿಂದ ಆಚರಿಸಿಕೊಂಡು ಬಂದಂತಹ ಅಡ್ಡಪಲ್ಲಕ್ಕಿ ಉತ್ಸವವನ್ನು ಸರಳವಾಗಿ ದೇವಸ್ಥಾನದ ಆವರಣದಲ್ಲಿ ಆಚರಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿತ್ತು.

    ಅಡ್ಡಪಲ್ಲಕ್ಕಿ ಉತ್ಸವ ಮೆರವಣಿಗೆ ಆರಂಭವಾಗುತ್ತಿದಂತೆ ಏಕಾಏಕಿ ಪಲ್ಲಕ್ಕಿ ಹೊತ್ತ ಭಕ್ತರು ದೇವಸ್ಥಾನದ ಮುಖ್ಯದ್ವಾರದ ಬಾಗಿಲು ಒಡೆಯಲು ಆರಂಭಿಸಿದರು. ಕೊನೆಗೆ ದೇವಸ್ಥಾನದ ಶಟರ್ ಧ್ವಂಸಗೊಳಿಸಿ ಪಲ್ಲಕ್ಕಿಯನ್ನು ಹೊರ ತಂದು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಈ ಮಧ್ಯೆ ಪಲ್ಲಕ್ಕಿ ಹೊರಬರುತ್ತಿದಂತೆ ಅಲ್ಲೆ ನಿಲ್ಲಿಸಿದ್ದ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಪೊಲೀಸ್ ವಾಹನದ ಗಾಜು ಪುಡಿ ಪುಡಿಯಾಗಿದೆ.

    ಅಡ್ಡಪಲ್ಲಕ್ಕಿ ಉತ್ಸವಕ್ಕೆ ತಹಶೀಲ್ದಾರರು ನಿರ್ಬಂಧ ಹೇರಿದರೂ ಕೂಡ ಸಾವಿರಾರು ಜನಜಂಗುಳಿ ಮಧ್ಯೆ ಪಲ್ಲಕ್ಕಿ ಉತ್ಸವ ಆಚರಣೆ ಮಾಡಿದ್ದಾರೆ. ಅಲ್ಲದೇ ನಾನಾ ಅವಾಂತರಕ್ಕೂ ಕಾರಣವಾಯಿತು. ಸ್ಥಳದಲ್ಲಿ ಬೀಡು ಬಿಟ್ಟಿದ್ದ ಕುಷ್ಟಗಿ ತಹಶೀಲ್ದಾರ್ ಎಂ.ಸಿದ್ದೇಶ ಸೇರಿದಂತೆ ಪೊಲೀಸ್ ಅಧಿಕಾರಿಗಳ ಮಾತಿಗೂ ಜನರು ಕ್ಯಾರೆ ಮಾಡಲಿಲ್ಲ. ಕೊನೆಗೆ ಪೊಲೀಸರು ಮತ್ತು ಜನರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪೊಲೀಸರು ಜನ್ರು ಮೇಲೆ ಲಾಠಿ ಕೂಡ ಬೀಸಿದರು.

    ಒಂದು ಗಂಟೆಗಳ ಕಾಲ ಗ್ರಾಮದ ಮಧ್ಯೆ ಗ್ರಾಮಸ್ಥರು ಪಲ್ಲಕ್ಕಿ ಬಿಟ್ಟು ಹೋಗಿದ್ದರು. ಕೊನೆಗೆ ಪೊಲೀಸರು ಪಲ್ಲಕ್ಕಿ ಹೊತ್ತು ದೇವಸ್ಥಾನಕ್ಕೆ ತಂದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ರಾತ್ರಿ ಸ್ಥಳಕ್ಕೆ ಎಸ್‍ಪಿ ಜಿ.ಸಂಗೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಕುಷ್ಟಗಿ ಕಂದಾಯ ನೀರಿಕ್ಷಕ ಮತ್ತು ಪೊಲೀಸ್ ಠಾಣೆ ಸಿಬ್ಬಂದಿಯಿಂದ ಪ್ರತ್ಯೇಕ ದೂರು ದಾಖಲು ಮಾಡಿದ್ದಾರೆ. ಇಬ್ಬರು ದೂರಿನನ್ವಯ ಪೊಲೀಸರು 50ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.

  • ಪಲ್ಲಕ್ಕಿಯಲ್ಲಿ ಕೂರಿಸಿ ಗ್ರಾಮದ ತುಂಬ ವಿನಯ್ ಗುರೂಜಿ ಮೆರವಣಿಗೆ

    ಪಲ್ಲಕ್ಕಿಯಲ್ಲಿ ಕೂರಿಸಿ ಗ್ರಾಮದ ತುಂಬ ವಿನಯ್ ಗುರೂಜಿ ಮೆರವಣಿಗೆ

    ಚಿಕ್ಕಮಗಳೂರು: ಅಣ್ಣ-ತಮ್ಮಂದಿರು ಜಗಳವನ್ನು ರಾಜೀ ಮಾಡಿದ್ದಕ್ಕೆ ಅವಧೂತ ವಿನಯ್ ಗುರೂಜಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಗ್ರಾಮದ ತುಂಬಾ ಮೆರವಣೆಗೆ ಮಾಡಲಾಗಿದೆ.

    ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗ್ರಾಮವೊಂದರಲ್ಲಿ ಅಣ್ಣ-ತಮ್ಮಂದಿರು ಜಗಳ ಮಾಡಿಕೊಂಡಿದ್ದರು. ಮನೆಗೆ ದೇವರ ಅಡ್ಡೆಗಳನ್ನು (ಪಲ್ಲಕ್ಕಿ) ತಂದಾಗ ಎರಡು ದೇವರಲ್ಲಿ ಒಂದು ದೇವರು ಮನೆ ಪ್ರವೇಶಿಸಿದೆ. ಆದರೆ ಮತ್ತೊಂದು ದೇವರು ಮನೆಯೊಳಗೆ ಹೋಗಿಲ್ಲ. ಪೂಜೆ ಮಾಡಿ ಎಷ್ಟೆ ಬೇಡಿಕೊಂಡರು ದೇವರು ಮನೆಯೊಳಗೆ ಹೋಗಿಲ್ಲ. ಆಗ ಸ್ಥಳಕ್ಕೆ ಬಂದ ಅವಧೂತ ವಿನಯ್ ಗುರೂಜಿ ಅಣ್ಣ-ತಮ್ಮಂದಿರನ್ನು ರಾಜಿ ಮಾಡಿಸುತ್ತಿದ್ದಂತೆ ಮನೆಯೊಳಗೆ ಹೋಗದೆ ಹಠ ಹಿಡಿದು ಕುಳಿತ್ತಿದ್ದ ದೇವರು ಮನೆಯೊಳಕ್ಕೆ ಹೋಗಿದೆ.

    ಇದೇ ಖುಷಿಗೆ ಸ್ಥಳೀಯರು ವಿನಯ್ ಗುರೂಜಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಊರಿನ ತುಂಬಾ ಮೆರವಣಿಗೆ ಮಾಡಿದ್ದಾರೆ. ಸ್ಥಳೀಯರು ವಿನಯ್ ಗುರೂಜಿಯನ್ನ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವಾಗ ಅಳುತ್ತಿದ್ದ ಮಗುವನ್ನು ಕಂಡು ವಿನಯ್ ಗುರೂಜಿ ತೊಡೆ ಮೇಲೆ ಕೂರಿಸಿಕೊಂಡು ಸಮಾಧಾನ ಮಾಡುತ್ತಾ ಮಗುವನ್ನು ಸಂತೈಸಿದ್ದಾರೆ. ಅವರ ತೊಡೆ ಮೇಲೆ ಕೂರುತ್ತಿದ್ದಂತೆ ಮಗು ಕೂಡ ಅಳುವುದನ್ನ ನಿಲ್ಲಿಸಿದೆ.

    ಹರಿಹರಪುರ ಸಮೀಪದ ನಂದಿಗೋಡು ಗ್ರಾಮದ ಸಚಿನ್ ಹಾಗೂ ಧ್ವನಿ ದಂಪತಿಯ ಹೀರಾ ಮಗು ವಿನಯ್ ಗುರೂಜಿ ಜೊತೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಹೋಗಿದ್ದು, ಹೆತ್ತವರಲ್ಲೂ ಖುಷಿ ತಂದಿದ್ದು, ಸ್ಥಳೀಯರು ಪುಣ್ಯವಂತ ಮಗು ಎಂದಿದ್ದಾರೆ.

  • ಯುವಕರನ್ನೇ ಹೊತ್ತೊಯ್ಯುವ ಪಲ್ಲಕ್ಕಿ – ಮಂಗ್ಳೂರಿನಲ್ಲಿ ದೈವದ ಪವಾಡ

    ಯುವಕರನ್ನೇ ಹೊತ್ತೊಯ್ಯುವ ಪಲ್ಲಕ್ಕಿ – ಮಂಗ್ಳೂರಿನಲ್ಲಿ ದೈವದ ಪವಾಡ

    ಮಂಗಳೂರು: ಎಲ್ಲೆಡೆ ದೇವರ ಪಲ್ಲಕ್ಕಿಯನ್ನು ಆಳುಗಳು ಹೊತ್ತೊಯ್ದರೆ, ಮಂಗಳೂರಿನ ಕಿನ್ನಿಗೋಳಿ ಸಮೀಪದ ಅತ್ತೂರಿನಲ್ಲಿ ಪಲ್ಲಕ್ಕಿಯನ್ನು ಹಿಡಿದ 20ಕ್ಕೂ ಅಧಿಕ ಯುವಕರನ್ನು ಪಲ್ಲಕ್ಕಿಯೇ ಹಿಡಿದೆಳೆಯುತ್ತದೆ.

    ಇದು ತುಳುನಾಡಿನ ಆರಾಧ್ಯ ದೈವ ಅರಸು ಕುಂಜಿರಾಯ ಉತ್ಸವದ ವೇಳೆ ಕಂಡು ಬರುತ್ತದೆ. ಸಾಮಾನ್ಯವಾಗಿ ಉತ್ಸವದ ವೇಳೆ ದೈವ-ದೇವರುಗಳ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಹೊತ್ತೊಯ್ಯಲಾಗುತ್ತದೆ. ಆದರೆ ಮಂಗಳೂರಿನ ಕಿನ್ನಿಗೋಳಿ ಸಮೀಪದ ಅತ್ತೂರಿನಲ್ಲಿ ನಡೆಯುವ ಅರಸು ಕುಂಜಿರಾಯ ದೈವದ ಜಾತ್ರಾ ಮಹೋತ್ಸವ ತುಂಬಾನೇ ವಿಭಿನ್ನವಾಗಿದೆ. ಈ ಕ್ಷೇತ್ರಕ್ಕೆ ಸಂಬಂಧಪಟ್ಟ ಜಾರಂತಾಯ ಬಂಟ ದೈವದ ಮೊಗವನ್ನು (ಮುಖವಾಡ) ಪಲ್ಲಕ್ಕಿಯಲ್ಲಿಟ್ಟು ಸುಮಾರು ಮೂರು ಕಿಲೋ ಮೀಟರ್ ನಡೆದು ಬರುವ ಸನ್ನಿವೇಶವನ್ನು ನೋಡಲೆಂದೇ ನೆರೆ ಗ್ರಾಮದಿಂದ ಬರುತ್ತಾರೆ. ಇಲ್ಲಿ ಪಲ್ಲಕ್ಕಿಯನ್ನು ಸುಮಾರು ಇಪ್ಪತ್ತರಷ್ಟು ಯುವಕರು ಹೊತ್ತು ಬರುತ್ತಾರೆ. ಆಗ ದೈವದ ಮೊಗ ಹೊತ್ತ ಆ ಪಲ್ಲಕ್ಕಿ ಆವೇಶಕ್ಕೊಳಗಾಗಿ ತನ್ನನ್ನು ಹೊತ್ತಿರುವ ಆಳುಗಳನ್ನೇ ಎಳೆದಾಡಲು ಆರಂಭಿಸುತ್ತದೆ ಎಂದು ಅರಸು ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ಚರಣ್ ಜೆ.ಶೆಟ್ಟಿ ತಿಳಿಸಿದ್ದಾರೆ.

    ಪಲ್ಲಕ್ಕಿಯನ್ನು ಹೊತ್ತ ಸುಮಾರು 20 ಮಂದಿಗೂ ಆ ಪಲ್ಲಕ್ಕಿಯ ಆರ್ಭಟವನ್ನು ತಡೆಯಲಾಗೋದಿಲ್ಲ. ಮುಂದೆ ಹೋಗಲೆಂದು ತಂಡದ ಯುವಕರು ಪ್ರಯತ್ನಿಸಿದರೆ ಪಲ್ಲಕ್ಕಿ ತನ್ನಿಂದ ತಾನೇ ಹಿಂದಕ್ಕೆ ಹೋಗುತ್ತದೆ. ಬಳಿಕ ಪ್ರಯತ್ನಿಸಿ ಮುಂದೆ ಹೋದರೆ ಮತ್ತೆ ಎಡಕ್ಕೆ, ಬಲಕ್ಕೆ ಪಲ್ಲಕ್ಕಿ ಸಾಗುತ್ತದೆ. ಪಲ್ಲಕ್ಕಿಯ ಒಳಗಿರುವ ಜಾರಂದಾಯ-ಬಂಟ ದೈವದ ಮೊಗ(ಮುಖವಾಡ) ಪಲ್ಲಕ್ಕಿಯಿಂದ ಹೊರಗೆ ಹಾರಲು ಯತ್ನಿಸುತ್ತದೆಯಂತೆ. ಈ ವೇಳೆ ಪಲ್ಲಕ್ಕಿಯನ್ನು ಹಿಡಿದಿರುವ ಯುವಕರು ಶತ ಪ್ರಯತ್ನದಿಂದ ಪಲ್ಲಕ್ಕಿಯೊಳಗಿರುವ ಮುಖವಾಡ ಬೀಳದಂತೆ ಮುಂದಕ್ಕೆ ಸಾಗಲು ಪ್ರಯತ್ನಿಸುತ್ತಾರೆ. ಸುಮಾರು ಮೂರುಗಂಟೆ ಸತತ ಪ್ರಯತ್ನದ ಬಳಿಕ ಮುಖವಾಡವನ್ನು ಹೊತ್ತು ತಂದ ಪಲ್ಲಕ್ಕಿ ದೈವಸ್ಥಾನದ ಒಳಗೆ ಸೇರುತ್ತದೆ. ಇದನ್ನು ದೈವಸ್ಥಾನದ ಒಳಗೆ ತರೋದೇ ದೈವ ಶಕ್ತಿ ಅನ್ನೋದು ನಂಬಿಕೆಯಾಗಿದೆ.

    ಈ ಪಲ್ಲಕ್ಕಿಯನ್ನು ಹೊತ್ತು ತರುವ ಯುವಕರ ತಂಡವೂ ಸುಮಾರು 15 ದಿನಗಳ ಕಾಲ ಸಸ್ಯಾಹಾರದಿಂದ ಇದ್ದು, ಮೂರು ದಿನಗಳ ಕಾಲ ಒಪ್ಪೊತ್ತಿನ ಊಟ ಮಾಡಿ ಶುಚಿಯಾಗಿರುತ್ತಾರೆ. ಪಲ್ಲಕ್ಕಿ ಹೊರುವ ದಿನ ಸಮುದ್ರ ಸ್ನಾನ ಮಾಡಿ ದೈವಸ್ಥಾನಕ್ಕೆ ಬರಬೇಕಾಗುತ್ತದೆ. ಭಾರವಾದ ಹಾಗೂ ಆವೇಶಭರಿತ ಪಲ್ಲಕ್ಕಿಯನ್ನು ಹೊರುವವರ ಹೆಗಲಿನ ಸಿಪ್ಪೆಗಳು ಹೋದರೂ ದೈವೀ ಕಾರಣಿಕದಿಂದ ಯಾವುದೇ ನೋವು ಆಯಾಸಗಳೂ ಆಗೋದಿಲ್ಲ. ಪಲ್ಲಕ್ಕಿ ರಭಸದಿಂದ ಸುತ್ತಾಡಿದರೂ ಇಂದಿಗೂ ಓರ್ವನಿಗೂ ಯಾವುದೇ ಗಾಯಗಳಾಗಿಲ್ಲ ಅನ್ನೋದು ವಿಶೇಷ. ಇದೆಲ್ಲವೂ ದೈವಗಳ ಕಾರಣಿಕ ಎಂದು ಪಲ್ಲಕ್ಕಿ ಹೊರುವವರಾದ ದಿನೇಶ್ ಹರಿಪಾದೆ ತಿಳಿಸಿದ್ದಾರೆ.

  • ಹಾಲಸೋಮೇಶ್ವರ ಜಾತ್ರೆಯಲ್ಲಿ ಮುಳ್ಳುಗದ್ದುಗೆ ಮೇಲೆ ನರ್ತಿಸಿದ ಸ್ವಾಮೀಜಿ ನೋಡಲು ಜನಸಾಗರ

    ಹಾಲಸೋಮೇಶ್ವರ ಜಾತ್ರೆಯಲ್ಲಿ ಮುಳ್ಳುಗದ್ದುಗೆ ಮೇಲೆ ನರ್ತಿಸಿದ ಸ್ವಾಮೀಜಿ ನೋಡಲು ಜನಸಾಗರ

    ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಹಾಲಸೋಮೇಶ್ವರ ಜಾತ್ರೆ ಅದ್ಧೂರಿಯಾಗಿ ನಡೆಯಿತು. ಜಾತ್ರೆ ವೇಳೆ ಪಲ್ಲಕ್ಕಿಯಲ್ಲಿ ಸಾಕಷ್ಟು ಮುಳ್ಳುಗಳನ್ನ ಹಾಕಿ ಗದ್ದುಗೆ ಮಾಡಿರುತ್ತಾರೆ. ಮುಳ್ಳಿನ ಗದ್ದುಗೆ ಮೇಲೆ ಹಾಲೇಶ್ವರ ಸ್ವಾಮೀಜಿ ಕುಣಿದಿದ್ದು, ಇದನ್ನ ನೋಡಲು ಜನಸಾಗರವೇ ಸೇರಿತ್ತು.

    ಈ ಮುಳ್ಳುಗದ್ದುಗೆ ಪವಾಡ ನೋಡಲೆಂದು ಸುತ್ತಲಿನ ಗ್ರಾಮಗಳಾದ ಡೋಣಿ ತಾಂಡಾ, ಡಂಬಳ, ದಿಂಡೂರು, ಕದಾಂಪೂರ, ಪಾಪನಾಶಿ, ಹೀಗೆ ಸುತ್ತಲಿನ ಸಾವಿರಾರು ಜನ ಭಕ್ತರು ಆಗಮಿಸಿರುತ್ತಾರೆ. ಮುಳ್ಳು ಗದ್ದುಗೆ ಜಾತ್ರೆ ನಡೆಯುವ ವೇಳೆ ಮಕ್ಕಳಾಗದವರಿಗೆ ಉಡಿ ತುಂಬಿದ್ರೆ ಮಕ್ಕಳು ಆಗುತ್ತದೆ, ಕಂಕಣ ಕಟ್ಟಿದ್ರೆ ಮದುವೆಯಾಗುತ್ತದೆ, ರೋಗ-ರುಜಿನಗಳಿಂದ ಬಳಲುವವರು ತಿರ್ಥ ಸೇವಿಸಿದ್ರೆ ರೋಗ ಗುಣಮುಖವಾಗುತ್ತವೆ ಎಂಬ ನಂಬಿಕೆ ಈ ಭಕ್ತರದ್ದಾಗಿದೆ.

    ಡೋಣಿ ಗ್ರಾಮದಲ್ಲಿ ಹಾಲಸೋಮೇಶ್ವರ ಜಾತ್ರೆ 21 ವರ್ಷಗಳಿಂದ ನಡೆಯುತ್ತಿದೆ. ಮಠದ ಪೀಠಾಧಿಪತಿ ಹಾಲೇಶ್ವರ ಸ್ವಾಮೀಜಿ ಮೊದಲು 11 ದಿನಗಳವರೆಗೆ ಗವಿಯಲ್ಲಿ ಕುಳಿತು ತಪಸ್ಸು ಮಾಡ್ತಾರೆ. ಜಾತ್ರೆಯ ದಿನದಂದು ರಾತ್ರಿ ವೇಳೆ ಗವಿಯಿಂದ ಹೊರಬಂದು ಮುಳ್ಳು ಪಲ್ಲಕ್ಕಿಯ ಗದ್ದುಗೆ ಏರಿ ಜನರಲ್ಲಿ ಭಕ್ತಿ ಮೂಡಿಸುತ್ತಾರೆ ಅಂತ ಹಿರೆಹಡಗಲಿ ಅಭಿನವ ಹಾಲಕೇರಿ ಸ್ವಾಮೀಜಿ ತಿಳಿಸಿದ್ದಾರೆ.