Tag: ಪಲಿಮಾರು ಸ್ವಾಮೀಜಿ

  • ಅಬ್ಬರದ ಮುಂಗಾರು ಮಳೆಯಲ್ಲಿ ಉಡುಪಿ ಕೃಷ್ಣನಿಗೆ ಚಿನ್ನದ ರಥೋತ್ಸವ

    ಅಬ್ಬರದ ಮುಂಗಾರು ಮಳೆಯಲ್ಲಿ ಉಡುಪಿ ಕೃಷ್ಣನಿಗೆ ಚಿನ್ನದ ರಥೋತ್ಸವ

    ಉಡುಪಿ: ಮುಂಗಾರು ಮಳೆಯ ಅಬ್ಬರದ ನಡುವಲ್ಲೇ ಉಡುಪಿ ಕೃಷ್ಣನ ಉತ್ಸವ ನಡೆದಿದೆ. ರಥಬೀದಿಯಲ್ಲಿ ಮೊಣಕಾಲುವರೆಗೆ ನೀರು ತುಂಬಿಕೊಂಡಿದ್ದು ಮಳೆನೀರಿನ ನಡುವೆ ಶ್ರೀಕೃಷ್ಣನನ್ನು ಚಿನ್ನದ ರಥದಲ್ಲಿ ಕುಳ್ಳಿರಿಸಿ ಉತ್ಸವ ಮಾಡಲಾಯಿತು.

    ಈ ಬಾರಿಯ ಬರಗಾಲದ ಬಿಸಿ ಶ್ರೀ ಕೃಷ್ಣ ಮಠಕ್ಕೂ ತಟ್ಟಿತ್ತು. ಮಠದ ಮಧ್ವ ಸರೋವರ ಬತ್ತಿ ಹೋಗಿತ್ತು. ಇಂದು ಬೆಳಗ್ಗೆ ಬೀಸಿದ ಭಾರೀ ಗಾಳಿ ಮಳೆ, ಕೃಷ್ಣ ದೇವರಿಗೂ ಹಿತಾನುಭವ ನೀಡಿದೆ. ರಾತ್ರಿಯ ಉತ್ಸವ ಆರಂಭವಾಗುವ ವೇಳೆಯಲ್ಲೇ ಭಾರೀ ಮಳೆ ಸುರಿಯಿತು. ಚಿನ್ನದ ರಥವೇರಿದ ಕೃಷ್ಣ ಮುಂಗಾರು ಮಳೆಗೆ ಮೈಯ್ಯೊಡ್ಡಿ ಮೆರಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು.

    ಮೊದಲ ಮಳೆಯ ರೋಮಾಂಚನವನ್ನು ಶ್ರೀಕೃಷ್ಣನ ಜೊತೆ ನೂರಾರು ಭಕ್ತರು ಕೂಡಾ ಅನುಭವಿಸಿದರು. ಪರ್ಯಾಯ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥರು ಹಾಗೂ ಅದಮಾರು ಮಠದ ಈಶಪ್ರಿಯ ತೀರ್ಥರು ಮಳೆಯಲ್ಲಿ ನೆನೆಯುತ್ತಲೇ ಕೃಷ್ಣ ನನ್ನು ನೆನೆದರು. ಭಕ್ತರು ಮಳೆಯಲ್ಲಿ ತೋಯುತ್ತಲೇ ಕೃಷ್ಣಜಪ ಮಾಡಿ ರಥವೆಳೆದರು.

    ಮೊದಲ ಮಳೆಯಾದ ಕಾರಣ ರಥಬೀದಿಯಲ್ಲಿ ಕಾಲು ಮುಳುಗುವಷ್ಟು ನೀರಿತ್ತು. ಹರಿಯುವ ಜಲದ ನಡುವೆ ಹರಿಯ ರಥೋತ್ಸವ ಉತ್ಸವ ನಡೆದದ್ದು ವಿಶೇಷವೆನಿಸಿತು. ಇನ್ನಾದರೂ ಬರಗಾಲ ಕಳೆದು ಮುಂಗಾರು ಜನರನ್ನು ಹರಸಲಿ ಎಂದು ಭಕ್ತರು ಕೃಷ್ಣನನ್ನು ಬೇಡಿಕೊಂಡರು.

    ಈ ಸಂದರ್ಭ ಮಾತನಾಡಿದ ಪರ್ಯಾಯ ಪಲಿಮಾರು ಸ್ವಾಮೀಜಿ, ಭಾಗೀರತಿ ಜನ್ಮದಿನದ ಈ ಉತ್ಸವ ಸದಾ ನೆನಪುಳಿಯುವಂತದ್ದು. ಜಲಧಾರೆ ದೇವರ ನೆತ್ತಿ ಮೇಲೆ ಸುರಿಯುತ್ತಿತ್ತು. ದೇವರು ರಥಬೀದಿಯಲ್ಲಿ ಉತ್ಸವ ಹೊರಟಿದ್ದ. ಈ ಬಾರಿ ಯಾರೂ ಚಿಂತಿಸುವ ಅಗತ್ಯವಿಲ್ಲ. ಜನ ಜಾನುವಾರುಗಳಿಗೆ ನೀರು. ರೈತರಿಗೆ ಉತ್ತಮ ಬೆಳೆ ಸಿಗಲಿದೆ. ಮಳೆಗಾಲದಲ್ಲಿ ನಿರಂತರ ಮಳೆಯಾಗಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

  • ಅಣ್ಣಾಮಲೈ 10 ವರ್ಷ ಬಿಟ್ಟು ರಾಜೀನಾಮೆ ನೀಡಿ- ಪಲಿಮಾರು ಸ್ವಾಮೀಜಿ

    ಅಣ್ಣಾಮಲೈ 10 ವರ್ಷ ಬಿಟ್ಟು ರಾಜೀನಾಮೆ ನೀಡಿ- ಪಲಿಮಾರು ಸ್ವಾಮೀಜಿ

    ಉಡುಪಿ: ದಕ್ಷ ಅಧಿಕಾರಿಯಾಗಿರುವ ಅಣ್ಣಾಮಲೈ ಕಾನೂನು ಸುವ್ಯವಸ್ಥೆ ನಿಭಾಯಿಸುವ ತಜ್ಞರು. ಹೀಗಾಗಿ ಅವರು ಇನ್ನೂ ಹತ್ತು ವರ್ಷ ಪೊಲೀಸ್ ಸೇವೆ ಮಾಡುವಂತಾಗಲಿ ಎಂದು ಕೃಷ್ಣಮಠದ ಪರ್ಯಾಯ ಪಲಿಮಾರು ಮಠದ ಯತಿ ಶ್ರೀ ವಿದ್ಯಾಧೀಶ ಸ್ವಾಮೀಜಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷ ನೇತಾರ ರಾಜಕೀಯಕ್ಕೆ ಹೋಗುತ್ತಾರೆಂಬ ಚರ್ಚೆ ನಡೆಯುತ್ತಿದೆ. ಅಣ್ಣಾಮಲೈ ರಾಜಕೀಯ ಪ್ರವೇಶಕ್ಕೆ ನನ್ನ ವಿರೋಧ ಇಲ್ಲ. ಆದರೆ ಅವರು ಇನ್ನೂ ಹತ್ತು ವರ್ಷ ಪೊಲೀಸ್ ಸೇವೆ ಮಾಡಲಿ. ಇಷ್ಟು ಬೇಗ ರಾಜಕೀಯ ಪ್ರವೇಶ ಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.

    ರಾಜಕೀಯದಲ್ಲಿ ಸೋಲು ಗೆಲುವಿಗೆ ಸಿದ್ಧವಾಗಿರಬೇಕು. ಪೊಲೀಸ್ ಅಧಿಕಾರಿಯಾಗಿ ಅಣ್ಣಾಮಲೈ ಸೋಲು ಕಾಣದ ವ್ಯಕ್ತಿಯಾಗಿದ್ದಾರೆ. ರಾಜಕೀಯದಲ್ಲಿ ಎಲ್ಲರ ಪ್ರೀತಿ ಗಳಿಸಲು ಸಾಧ್ಯವಿಲ್ಲ. 10 ವರ್ಷ ತಡವಾಗಿ ರಾಜಕೀಯಕ್ಕೆ ಸೇರಿ. ರಾಜಕೀಯಕ್ಕೆ ವಯಸ್ಸಿನ ಮಿತಿ ಇಲ್ಲ. ಆದರೆ ರಾಜಕೀಯ ಸೇರ್ಪಡೆಗೆ ನಿರ್ಧರಿಸಿದ್ದರೆ ಅದಕ್ಕೂ ಪ್ರಾರ್ಥಿಸುತ್ತೇನೆ ಎಂದರು. ಇದನ್ನೂ ಓದಿ: ನಾನು ನನ್ನ ಖಾಕಿಯಲ್ಲಿ ಪ್ರತಿ ಕ್ಷಣವನ್ನು ಜೀವಿಸಿದ್ದೇನೆ: ಅಭಿಮಾನಿಗಳಿಗೆ ಅಣ್ಣಾಮಲೈ ಭಾವನಾತ್ಮಕ ಪತ್ರ

    ಅಣ್ಣಾಮಲೈಗೆ ಎಲ್ಲಿ ಹೋದರೂ ಒಳ್ಳೆದಾಗಲಿ. ರಾಜಕೀಯ ಕ್ಷೇತ್ರ ಶುದ್ಧಿ ಮಾಡಲು ಅವರು ಸಮರ್ಥರಾಗಿದ್ದಾರೆ. ಪೊಲೀಸ್ ಇಲಾಖೆ ಬಿಡಬಾರದು ಎನ್ನುವುದು ನಮ್ಮ ಚಿಕ್ಕ ಆಸೆ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    ರಾಜೀನಾಮೆ:
    ಅಣ್ಣಾಮಲೈ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗಾಗಲೇ ತಮ್ಮ ಡಿಜಿ ಹಾಗೂ ಐಜಿಪಿ ಹುದ್ದೆಗೆ ರಾಜೀನಾಮೆ ನೀಡುತ್ತಿರುವ ಪತ್ರವನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಕೈಗಿತ್ತ ಅಣ್ಣಾಮಲೈ, ಹೆತ್ತವರು ಹಾಗೂ ವೈಯಕ್ತಿಕ ಜೀವನದ ಕಾರಣ ನೀಡಿದ್ದಾರೆ. ಆದರೆ ರಾಜಕೀಯ ಪ್ರವೇಶ ಬಗ್ಗೆ ನಾನು ಈಗಾಗಲೇ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಒಟ್ಟಿನಲ್ಲಿ ಸ್ವಲ್ಪ ದಿನ ಕುಟುಂಬದ ಜೊತೆ ಬೆರೆಯಬೇಕು. ಬೆಳೆಯುತ್ತಿರುವ ಮಗನಿಗೆ ಒಳ್ಳೆಯ ಅಪ್ಪನಾಗಿರಬೇಕು ಎಂದು ಹೇಳಿದ್ದಾರೆ.

  • ರಾಜಕೀಯ ಪ್ರವೇಶದ ಕುರಿತು ಕೊನೆಗೂ ಸ್ಪಷ್ಟನೆ ನೀಡಿದ್ರು ಪಲಿಮಾರು ಶ್ರೀಗಳು

    ರಾಜಕೀಯ ಪ್ರವೇಶದ ಕುರಿತು ಕೊನೆಗೂ ಸ್ಪಷ್ಟನೆ ನೀಡಿದ್ರು ಪಲಿಮಾರು ಶ್ರೀಗಳು

    ಉಡುಪಿ: ನಾನು ರಾಜಕೀಯ ಪ್ರವೇಶ ಮಾಡುವುದಿಲ್ಲ. ನಾನು ರಾಜಕೀಯಕ್ಕೆ ಬರುತ್ತೇನೆ ಎಂಬ ಸುದ್ದಿಯೇ ಬಹಳ ಆಘಾತಕಾರಿ ಎಂದು ಉಡುಪಿ ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿಗಳು ಸ್ಪಷ್ಟಪಡಿಸಿದ್ದಾರೆ.

    ಉಡುಪಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿ, ನಾನು ಸ್ವಪ್ನದಲ್ಲೂ ರಾಜಕೀಯಕ್ಕೆ ಬರುವ ಬಗ್ಗೆ ಆಲೋಚಿಸಿಲ್ಲ. ರಾಜಕೀಯ ನನ್ನ ಕ್ಷೇತ್ರವೂ ಅಲ್ಲ. ನಾನು ಧರ್ಮ ಪೀಠದಲ್ಲಿದ್ದೇನೆ. ಧಾರ್ಮಿಕವಾಗಿ ಮಾಡಬೇಕಾದ ಕೆಲಸ ಸಾಕಷ್ಟು ಬಾಕಿಯಿದೆ. ರಾಜಕೀಯದವರು ಧರ್ಮ ಪೀಠಕ್ಕೆ ಮಣಿಯುತ್ತಾರೆ. ನಾನು ಏಕೆ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಲಿ ಎಂದು ಪ್ರಶ್ನಿಸಿದರು.

    ತಾನು ರಾಜಕೀಯ ಪ್ರವೇಶ ಮಾಡುತ್ತೇನೆ ಎಂಬುವುದು ಕಲ್ಪಿತವಾದ ವಿಚಾರ. ಖಂಡಿತವಾಗಿ ನಾನು ರಾಜಕೀಯ ಪ್ರವೇಶ ನಿರಾಕರಣೆ ಮಾಡುತ್ತಿದ್ದೇನೆ. ಯಾವ ರಾಜಕಾರಣಿಗಳೂ ನನ್ನನ್ನು ಇದುವರೆಗೂ ಸಂಪರ್ಕಿಸಿಯೇ ಇಲ್ಲ. ಸಂಪರ್ಕಿಸಿದರೂ ನಾನು ಒಪ್ಪುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಮುಂದೆ ಪ್ರಚಾರ ಕೂಡಾ ಬೇಡ. ಆದರೆ ಇಂತಹ ಸುದ್ದಿಯಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ ಎಂದರು.

    ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯಿಂದ ರಾಜ್ಯದ ಐದು ಮಠಾಧೀಶರಿಗೆ ಟಿಕೆಟ್ ಎಂಬುವುದಾಗಿ ಸುದ್ದಿಯಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ ಪಾಲಿಮಾರು ಶ್ರೀ ಗಳು ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.