Tag: ಪರ್ಜನ್ಯ ಹೋಮ

  • ಮುಂಗಾರು ಅಧಿವೇಶನದ ಮೊದಲ ದಿನ ವಿಧಾನಸಭೆಯಲ್ಲಿ ಶಾಸಕರಿಗೆ ಬರ

    ಮುಂಗಾರು ಅಧಿವೇಶನದ ಮೊದಲ ದಿನ ವಿಧಾನಸಭೆಯಲ್ಲಿ ಶಾಸಕರಿಗೆ ಬರ

    ಬೆಂಗಳೂರು: ಮುಂಗಾರು ಅಧಿವೇಶನದ ಮೊದಲ ದಿನ ವಿಧಾನಸಭೆಯಲ್ಲಿ ಶಾಸಕರಿಗೆ ಬರ ಬಂದಿತ್ತು. ಕೇವಲ 45 ಶಾಸಕರು ಮಾತ್ರ ಹಾಜರಿದ್ರು. ಮೌಢ್ಯದ ಬಗ್ಗೆ ಹಾಸ್ಯದ ಶೈಲಿಯಲ್ಲಿ ಚರ್ಚೆಯಾಯ್ತು.

    ಮಳೆಗಾಗಿ ಸಚಿವ ಎಂಬಿ ಪಾಟೀಲ್ ಪರ್ಜನ್ಯ ಹೋಮದ ಬಗ್ಗೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪ್ರಸ್ತಾಪಿಸಿದಾಗ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿ, ಸರ್ಕಾರ ದುಡ್ಡು ಭರಿಸಲ್ಲ. ಅದು ಎಂಬಿ ಪಾಟೀಲ್ ಸ್ವಂತ ಖರ್ಚು. ಅದು ಅವರ ನಂಬಿಕೆ. ವೈಯಕ್ತಿಕವಾಗಿ ನಾನು ನಂಬುವುದಿಲ್ಲ ಎಂದರು.

    ಈ ವೇಳೆ ಎದ್ದು ನಿಂತ ಜಗದೀಶ್ ಶೆಟ್ಟರ್, ಸಚಿವರಾಗಿ ಎಂಬಿ ಪಾಟೀಲ್ ಮಾಡಿದ್ದನ್ನ ಸಿಎಂ ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಬಂದಿರೋದು ಖೇದಕರ. ಮೋಡ ಬಿತ್ತನೆ ಬದಲು ಮೂಢ ಬಿತ್ತನೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

    ಈಶ್ವರಪ್ಪ ಗರಂ: ಪರಿಷತ್‍ನಲ್ಲಿ ಈಶ್ವರಪ್ಪ ಗರಂ ಆಗಿದ್ರು. ವಿಮಲಗೌಡರಿಗೆ ಸಂತಾಪ ಸೂಚಿಸುವ ವೇಳೆ, ಪಕ್ಷಾಂತರ ಮಾಡುವವರು ಪಕ್ಷ ಕಟ್ಟಲು ಬರೋದಿಲ್ಲ. ಅಧಿಕಾರ ಅನುಭವಿಸಲು ಬರುತ್ತಾರೆ ಅಂತ ಪಕ್ಷದ ನಾಯಕರ ವಿರುದ್ಧವೇ ಈಶ್ವರಪ್ಪ ಪರೋಕ್ಷ ವಾಗ್ದಾಳಿ ನಡೆಸಿದರು.

    ವಿಮಲಗೌಡರು ಚುನಾವಣೆಗೆ ನಿಂತು ಸೋತಿದ್ದಾಗ ಧೈರ್ಯ ಹೇಳಲು ಹೋಗಿದ್ದೆ. ಆಗ, ಸೋಲು ಬೇಸರ ತಂದಿಲ್ಲ. ನಮ್ಮವರೇ ನಮಗೆ ಸೋಲಿಸಿದ್ರಲ್ಲ ಅಂತ ವಿಮಲ ಬೇಸರಗೊಂಡಿದ್ದರು ಎಂದು ಅವರು ಹೇಳಿದರು.

  • ಮಳೆಗಾಗಿ ನಡೆಸುವ ವಿಶೇಷ ಪೂಜೆಗೆ ಸರ್ಕಾರದ ಹಣ ಬಳಸಲ್ಲ: ಎಂಬಿ ಪಾಟೀಲ್

    ಮಳೆಗಾಗಿ ನಡೆಸುವ ವಿಶೇಷ ಪೂಜೆಗೆ ಸರ್ಕಾರದ ಹಣ ಬಳಸಲ್ಲ: ಎಂಬಿ ಪಾಟೀಲ್

    ಬೆಂಗಳೂರು: ಮಳೆಗಾಗಿ ನಡೆಸುವ ವಿಶೇಷ ಪೂಜೆಗೆ ಸರ್ಕಾರದ ಹಣ ಬಳಕೆ ಮಾಡುವುದಿಲ್ಲ. ಈ ಪೂಜೆಯ ವೆಚ್ಚಕ್ಕೆ ತಗಲುವ ಖರ್ಚನ್ನು ನಾನು ಮತ್ತು ಸ್ನೇಹಿತರು ಭರಿಸಲು ತೀರ್ಮಾನ ಕೈಗೊಂಡಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

    ಮಾಧ್ಯಮಗಳಿಗೆ ಹೇಳಿಕೆಯನ್ನು ಬಿಡುಗಡೆ ಮಾಡಿದ ಅವರು, ಮಾಧ್ಯಮಗಳಲ್ಲಿ ನಮ್ಮ ಉದ್ದೇಶವನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಅಗತ್ಯವಾಗಿ ಹಣವನ್ನು ಖರ್ಚು ಮಾಡಲಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ ಎಂದು ತಿಳಿಸಿದರು.

    ಹೇಳಿಕೆಯಲ್ಲಿ ಏನಿದೆ?
    ಕೃಷ್ಣಾ ಮತ್ತು ಕಾವೇರಿ ನದಿಗಳು ಕರ್ನಾಟಕದ 6 ಕೋಟಿ ಜನತೆಯ ಜೀವನಾಡಿಗಳು. ಕುಡಿಯುವ ನೀರನ್ನು ಒದಗಿಸುವ ಹಾಗೂ ರೈತರ ಪಾಲಿಗೆ ಈ ನದಿಗಳು ದೇವತೆ ಸಮಾನವಾಗಿದ್ದು, ಈ ಎರಡೂ ನದಿಗಳಿಗೆ ಪೂಜಾ ಕೈಂಕರ್ಯ ನಡೆಸುವುದು, ನಮ್ಮ ಸಂಸ್ಕೃತಿ ಪರಂಪರೆ ಹಾಗೂ ಧರ್ಮದ ಭಾಗವಾಗಿದೆ.

    ಈ ಎರಡೂ ನದಿಗಳಿಂದ ರಾಜ್ಯದ ಜನತೆಗೆ ಉಪಕಾರವಾಗಿದ್ದು, ಹಾಗೂ ಮುಂದಿನ ದಿನಗಳಲ್ಲೂ ತಾಯಿಯ ಕರುಣೆಯನ್ನು ಬಯಸಿ ಕೃತಜ್ಞತಾ ಪೂರ್ವಕವಾಗಿ ನಮನ ಸಲ್ಲಿಸಲು ಈ ಹಿಂದೆ ಕಾವೇರಿ ನಿಗಮದ ಮಂಡಳಿ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು ಈ ಉದ್ದೇಶಕ್ಕೆ ತಲಾ 10 ಲಕ್ಷ ರೂ. ವೆಚ್ಚ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಈ ಪೂಜಾ ಕಾರ್ಯಕ್ಕೆ ತಗಲುವ ವೆಚ್ಚವನ್ನು ನಾನು ಮತ್ತು ಸ್ನೇಹಿತರು ಭರಿಸುವ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ. ಸರ್ಕಾರದ ಒಂದು ರೂಪಾಯಿ ಹಣವನ್ನು ಈ ಪೂಜೆಗೆ ಬಳಸುವುದಿಲ್ಲ.

    ಇಂದು ಕೃಷ್ಣಾ ನದಿಯ ಉಗಮಸ್ಥಾನವಾದ ಮಹಾಬಲೇಶ್ವರದಲ್ಲಿ ಮೂಜೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ತರಹದ ಪೂಜೆಯನ್ನು ಕಾವೇರಿಯ ಉಗಮಸ್ಥಳವಾದ ಭಾಗಮಂಡಲದಲ್ಲಿ ಜೂನ್ 4ರಂದು ನಡೆಯಲಿದೆ.

    ಈ ಸಂದರ್ಭದಲ್ಲಿ ಈ ಭಾಗದ ಜನಪ್ರತಿನಿಧಿಗಳು ಸೇರಿದಂತೆ, ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಯವರು ಭಾಗಿಯಾಗುತ್ತಿದ್ದಾರೆ ಎಂದು ಎಂಬಿ ಪಾಟೀಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  • ಮೌಢ್ಯ ವಿರೋಧಿ ಸರ್ಕಾರದಿಂದ ಮೌಢ್ಯಾಚರಣೆ: ಮಳೆಗಾಗಿ ಪರ್ಜನ್ಯ ಹೋಮಕ್ಕೆ ಸಿದ್ಧತೆ

    ಮೌಢ್ಯ ವಿರೋಧಿ ಸರ್ಕಾರದಿಂದ ಮೌಢ್ಯಾಚರಣೆ: ಮಳೆಗಾಗಿ ಪರ್ಜನ್ಯ ಹೋಮಕ್ಕೆ ಸಿದ್ಧತೆ

    ಬೆಂಗಳೂರು: ರಾಜ್ಯದಲ್ಲಿ ರಣಭೀಕರ ಬರ ಇದ್ದರೂ ಸಮರ್ಪಕವಾಗಿ ನಿಭಾಯಿಸದ ಆಡಳಿತ-ವಿಪಕ್ಷ, ರಾಜ್ಯ-ಕೇಂದ್ರ ಅಂತ ಹೇಳಿ ಸರ್ಕಾರ-ಜನಪ್ರತಿನಿಧಿಗಳು ಕೆಸರೆರಚಾಟದಲ್ಲೇ ಕಾಲಕಳೆದ್ರು. ವಿಪಕ್ಷಗಳು ಮಳೆಗಾಲದ ಆರಂಭದಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಂಡು ನಗೆಪಾಟಲಿಗೀಡಾದ್ರೆ, ಈಗ ಸರ್ಕಾರ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಪರ್ಜನ್ಯ ಹೋಮ ನಡೆಸಲು ಮುಂದಾಗಿದೆ.

    ಅದರಲ್ಲೂ ಮೌಢ್ಯ ವಿರೋಧಿ ಅಂತ ಹೇಳೋ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕೇರಳ ಪಂಡಿತರನ್ನ ಕರೆಸಿ ನೀರಾವರಿ ನಿಗಮ ಹೋಮ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

    ರಾಜ್ಯದ ಜೀವನದಿಗಳಾದ ಉತ್ತರದ ಕೃಷ್ಣಾನದಿ ಮೂಲದ ಮಹಾಬಲೇಶ್ವರದಲ್ಲಿ ಶುಕ್ರವಾರ, ದಕ್ಷಿಣದ ಕಾವೇರಿ ನದಿಮೂಲ ಭಾಗಮಂಡಲದಲ್ಲಿ ಶನಿವಾರ ಪರ್ಜನ್ಯ ಹೋಮ ನಡೆಸಲು ಸಿದ್ಧತೆ ನಡೆದಿದೆ. ಇದಕ್ಕಾಗಿ ಎರಡೂ ಕಡೆ 20 ಲಕ್ಷ ರೂ. ಖರ್ಚು ಮಾಡಲು ಸರ್ಕಾರ ಮುಂದಾಗಿದೆ.

    ಟಿಆರ್‍ಪಿಗಾಗಿ ಮಾಡ್ತಿದ್ದೀರಿ: ಪರ್ಜನ್ಯ ಹೋಮ ಮಾಡ್ತಿರೋದ್ರ ಬಗ್ಗೆ ಸಂಜೆ 5 ಗಂಟೆ ನ್ಯೂಸ್‍ನಲ್ಲಿ ಜಲಸಂಪನ್ಮೂಲ ಸಚಿವರಾದ ಎಂ.ಬಿ. ಪಾಟೀಲ್ ಅವರನ್ನು ಪಬ್ಲಿಕ್ ಟಿವಿ ಸಂಪರ್ಕಿಸಿತು. ಈ ವೇಳೆ ದೂರವಾಣಿಯಲ್ಲಿ ಮಾತನಾಡಿದ ಸಚಿವರು ಸರ್ಕಾರದ ನಡೆಯನ್ನ ಬಲವಾಗಿ ಸಮರ್ಥಿಸಿಕೊಂಡು, ಇದ್ದಕ್ಕಿದ್ದಂತೆ ಭಾವೋದ್ವೇಗಕ್ಕೆ ಒಳಗಾಗಿ, ಟಿಆರ್‍ಪಿಗಾಗಿ ನೀವಿದನ್ನು ವಿವಾದ ಮಾಡ್ತಿದ್ದೀರಾ ಅಂದ್ರು. ಅಷ್ಟೇ ಅಲ್ಲ, ಇಂಥದ್ದನ್ನ ಕಡಿವಾಣ ಹಾಕೋಕೆ ಸದನ ಸಮಿತಿ ಮಾಡ್ತಿದ್ದೀವಿ ಅಂತ ಹೇಳಿದರು.

    ಈ ಸಂಬಂಧ ಫೇಸ್‍ಬುಕ್‍ನಲ್ಲಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡ ಎಂಬಿ ಪಾಟೀಲ್, ನಗರೀಕರಣದ ಪರಿಣಾಮದಿಂದಾಗಿ ಕರ್ನಾಟಕ ಭೀಕರ ಬರವನ್ನು ಎದುರಿಸುತ್ತಿದೆ. ಹೀಗಾಗಿ ರೈತರ ಸಲಹೆಯ ಮೇರೆಗೆ ನಾವು ಪೂಜೆಯನ್ನು ನಡೆಸುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಪೂಜೆಗೆ ಆಗಮಿಸಬೇಕೆಂದು ಅವರು ಕೇಳೀಕೊಂಡಿದ್ದಾರೆ.

    ನಾವು ನಂಬಲ್ಲ: ಮಳೆಗಾಗಿ ಪರ್ಜನ್ಯ ಹೋಮದ ಮೂಲಕ ಮೌಢ್ಯ ಆಚರಣೆ ಮಾಡ್ತಿರೋ ಸಿಎಂ, ನಾವಿದನ್ನೆಲ್ಲಾ ನಂಬೋದಿಲ್ಲ ಅಂತ ಬೆಂಗಳೂರಿನಲ್ಲಿ ರಾಗ ಎಳೆದಿದ್ದಾರೆ. ವಿಕಾಸಸೌಧದಲ್ಲಿ ಮಕ್ಕಳ ಜೊತೆ ಮಕ್ಕಳ ರಕ್ಷಣೆ, ಆರೋಗ್ಯ, ಶಿಕ್ಷಣ, ಸಂಬಂಧಪಟ್ಟಂತೆ ಸಂವಾದ ನಡೆಸಿದ್ರು.

    ಈ ವೇಳೆ, ಸಿಎಂಗೆ ಮಕ್ಕಳು ಪ್ರಶ್ನೆಗಳ ಸುರಿಮಳೆ ಎದುರಾಯ್ತು. ಅದರಲ್ಲಿ ಗಮನ ಸೆಳೆದಿದ್ದು, ವಾಮಾಚಾರ, ಮೂಢನಂಬಿಕೆ ಹೆಸರಲ್ಲಿ ಮಕ್ಕಳ ಬಲಿ. ಇದರ ಬಗ್ಗೆ ಸರ್ಕಾರ ಯಾವ ಕ್ರಮಕೈಗೊಂಡಿದೆ ಅಂತ ರಾಮನಗರದ ವಿದ್ಯಾರ್ಥಿನಿ ಅಮೂಲ್ಯ ಪ್ರಶ್ನಿಸಿದ್ರು.

    ಉತ್ತರ ಕೊಟ್ಟ ಸಿಎಂ, ಸಮಾಜದಲ್ಲಿ ಮೂಢನಂಬಿಕೆ ಹೆಚ್ಚಿದೆ. ಮೌಢ್ಯದ ವಿರುದ್ಧ ಕಾನೂನಿಗೆ ಚಿಂತನೆ ನಡೆದಿದೆ ಅಂದ್ರು. ತಮ್ಮ ಕಾರಿನ ಮೇಲೆ ಕಾಗೆ ಕೂತದ್ದು, ಚಾಮರಾಜನಗರಕ್ಕೆ ಎಂಟ್ರಿ ಕೊಟ್ಟದ್ದು ಎಲ್ಲವನ್ನೂ ಉದಾಹರಣೆ ಸಹಿತ ವಿವರಿಸಿದ್ರು. ಇದೇ ವೇಳೆ, ನಾನು ಮೊದಲು ಸಿಗರೇಟ್ ಸೇದ್ತಿದೆ. ಸಮಸ್ಯೆ ಆದ ಕಾರಣ ಬಿಟ್ಟುಬಿಟ್ಟೆ ಅಂತ ಹೇಳಿದ್ರು. ಇನ್ನು, ತಂದೆ ಸಾಲತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿ ಕುಟುಂಬಕ್ಕೆ ದಿಕ್ಕಿಲ್ಲದಂತಾಗಿದೆ ಅಂತ ನೋವು ತೋಡಿಕೊಂಡ ರೈತನ ಮಗನಿಗೆ 5 ಲಕ್ಷ ಕೊಡುವಂತೆ ಸಿಎಂ ಸೂಚಿಸಿದ್ರು.

    ಪಬ್ಲಿಕ್ ಟಿವಿಗೆ ನೀರಾವರಿ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ ವಿಡಿಯೋ ಇಲ್ಲಿದೆ.

    https://www.youtube.com/watch?v=Uz2rsEJ-xKw