ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರದಿಂದ 5 ಸಾವಿರ ರೂ. ಪರಿಹಾರ ನೀಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ.
ಆಟೋ ಮತ್ತು ಟ್ಯಾಕ್ಸಿಯನ್ನು ಓಡಿಸಿಕೊಂಡು ಜೀವನ ಮಾಡುತ್ತಿದ್ದ ಚಾಲಕರು ಈ ಲಾಕ್‍ಡೌನ್ ಸಮಯದಲ್ಲಿ ಬಹಳ ಕಷ್ಟ ಅನುಭವಿಸಿದ್ದಾರೆ. ಹೀಗಾಗಿ ಅವರಿಗಾಗಿ ಸರ್ಕಾರ ಸಿಎಂ ಪರಿಹಾರ ನಿಧಿಯಿಂದ ಹಣ ಕೊಡಲು ತೀರ್ಮಾನ ಮಾಡಿದೆ. ಈ ಹಣವನ್ನು ವಿರತಣೆ ಮಾಡಲು ಸಾರಿಗೆ ಇಲಾಖೆಯ ಅಯುಕ್ತರು ಸರ್ಕಾರದ ನಡವಳಿಕೆಗಳ ಪಟ್ಟಿಯನ್ನು ತಯಾರಿಸಿದ್ದು ರಾಜ್ಯಪಾಲರ ಸಹಿಯೊಂದೇ ಬಾಕಿಯಿದೆ. ಈ ನಡವಳಿ ಪ್ರಕಾರ ಯಾವೆಲ್ಲಾ ಚಾಲಕರಿಗೆ ಈ ಹಣ ಸಿಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

ಯಾವೆಲ್ಲಾ ಚಾಲಕರು ಅರ್ಹರರು?
1. ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲನೆ ಮಾಡಲು ಚಾಲನಾ ಅನುಜ್ಞಾ ಪತ್ರ ಮತ್ತು ಬ್ಯಾಡ್ಜ್ ಹೊಂದಿರುವವರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.
2. ಫಲಾನುಭವಿಗಳು ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಾಗಿದ್ದು, ದಿನಾಂಕ: 01-03-2020 ಕ್ಕೆ ಚಾಲ್ತಿಯಲ್ಲಿರುವ ಚಾಲನಾ ಅನುಜ್ಞಾ ಪತ್ರದ ವಿವರಗಳನ್ನು ಪೋರ್ಟಲ್ ನಲ್ಲಿ ನಮೂದಿಸಬೇಕಾಗಿರುತ್ತದೆ.
3. ಚಾಲಕರ ಆಧಾರ್ ಕಾರ್ಡ್ ವಿವರಗಳನ್ನು ಪೋರ್ಟಲ್‍ನಲ್ಲಿ ನಮೂದಿಸಬೇಕಾಗಿರುತ್ತದೆ.

4. ಚಾಲಕರ ಬ್ಯಾಂಕ್ ಅಕೌಂಟ್ ವಿವರ, ಸಂಬಂಧಪಟ್ಟ ಬ್ಯಾಂಕಿನ ಐಎಫ್‍ಎಸ್‍ಸಿ ಕೋಡ್, ಎಂಐಸಿಆರ್ ಕೋಡ್‍ಗಳ ವಿವರಗಳನ್ನು ಪೋರ್ಟಲ್‍ನಲ್ಲಿ ನಮೂದಿಸಬೇಕಾಗಿರುತ್ತದೆ.
5. ಚಾಲಕರು ಚಾಲನೆ ಮಾಡುವ ವಾಹನದ ನೋಂದಣಿ ಸಂಖ್ಯೆ ವಿವರಗಳನ್ನು ಪೋರ್ಟಲ್‍ನಲ್ಲಿ ನಮೂದಿಸಬೇಕಾಗಿರುತ್ತದೆ. ವಾಹನ್-4 ತಂತ್ರಾಂಶದಿಂದ ವಿವರಗಳನ್ನು ನೇರವಾಗಿ ಪಡೆಯುವುದು.
6. ಚಾಲನಾ ಅನುಜ್ಞಾ ಪತ್ರದ ವಿವರಗಳನ್ನು ಸಾರಿಗೆ ಇಲಾಖೆಯ ಸಾರಥಿ-4 ತಂತ್ರಾಂಶದಿಂದ ನೇರವಾಗಿ ಪಡೆದುಕೊಳ್ಳಬೇಕು.

7. ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ತಮ್ಮ ದೈನಂದಿನ ಉದ್ಯೋಗವನ್ನು ನಡೆಸಲಾಗದ ಆದಾಯ ಕಳೆದುಕೊಂಡಿರುವ ಬಗ್ಗೆ ಸ್ವಯಂ ಘೋಷಣೆ ಮಾಡಬೇಕು.
8. ಈ ಯೋಜನೆಯನ್ನು ಜಾರಿಗೊಳಿಸಲು ಅರ್ಹ ಚಾಲಕರು ತಮ್ಮ ಅರ್ಜಿಗಳನ್ನು ‘ಸೇವಾಸಿಂಧು’ವಿನ ಮುಖಾಂತರ ಸಲ್ಲಿಸಲು ವ್ಯವಸ್ಥೆ ಮಾಡಬೇಕಾಗಿರುತ್ತದೆ. ಈ ಬಗ್ಗೆ ‘ಸೇವಾಸಿಂಧು’ ವಿನಲ್ಲಿ ಸೂಕ್ತ ವ್ಯವಸ್ಥೆ ಮಾಡುವಂತೆ ಇ-ಆಡಳಿತ ಇಲಾಖೆಯನ್ನು ಕೋರಬಹುದಾಗಿದೆ.
9. ಅರ್ಹ ಫಲಾನುಭವಿಗಳಿಗೆ ಆಧಾರ್ ಸಂಖ್ಯೆಯ ಮೂಲಕ ಡಿಬಿಟಿ ಮಾಡಬೇಕು ಅಥವಾ ಆನ್‍ಲೈನ್ ಮೂಲಕ ಬ್ಯಾಂಕಿಗೆ ಜಮಾ ಮಾಡಬೇಕು.
10. ಫಲಾನುಭವಿಗಳು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಲು ಅನುವಾಗುವಂತೆ ಅರ್ಹ/ಅನರ್ಹ ಅರ್ಜಿದಾರರ ಪಟ್ಟಿಯನ್ನು ತಂತ್ರಾಂಶದಲ್ಲಿ ಅಳವಡಿಸಿಕೊಳ್ಳಬೇಕು.

ಈ ರೀತಿಯ ನಡವಳಿಕೆಗಳನ್ನು ಸಾರಿಗೆ ಆಯುಕ್ತರು ಸರ್ಕಾರಕ್ಕೆ ತಯಾರಿಸಿ ಕೊಟ್ಟಿದ್ದು, ಇಂದು ಅಥವಾ ನಾಳೆ ಸರ್ಕಾರದ ಆದೇಶ ಪ್ರಕಟವಾಗುವ ಸಾದ್ಯತೆ ಇದೆ.





















