Tag: ಪರಿಸರ ರಕ್ಷಣೆ

  • ನಿವೃತ್ತಿಯಾದರೂ ಪರಿಸರ ಸೇವೆಯಲ್ಲಿ ತೊಡಗಿರುವ ಉಪನ್ಯಾಸಕ

    ನಿವೃತ್ತಿಯಾದರೂ ಪರಿಸರ ಸೇವೆಯಲ್ಲಿ ತೊಡಗಿರುವ ಉಪನ್ಯಾಸಕ

    – 5 ಸಾವಿರಕ್ಕೂ ಹೆಚ್ಚು ಸಸಿಗಳ ನೆಟ್ಟು ಯುವಕರಿಗೆ ಮಾದರಿ

    ಬಾಗಲಕೋಟೆ: ಪರಿಸರದ ಬಗ್ಗೆ ನಿರ್ಲಕ್ಷ್ಯ ಮನೋಭಾವನೆಯಿಂದ ಕಾಂಕ್ರಿಟ್ ಕಾಡು ಬೆಳೆಯುತ್ತಿದೆ. ಇದರಿಂದ ಎಲ್ಲೆಡೆ ತಾಪಮಾನ ಹೆಚ್ಚುತ್ತಿದೆ. ಆದರೆ ಇಲ್ಲೊಬ್ಬರು ಉಪನ್ಯಾಸಕ ನಿವೃತ್ತಿ ಹೊಂದಿದರೂ ಮನೆಯವರೊಂದಿಗೆ ಕಾಲ ಕಳೆಯದೇ, ತಮ್ಮ ನಿವೃತ್ತಿ ಜೀವನವನ್ನು ಪರಿಸರ ರಕ್ಷಣೆಗೆ ಮುಡಿಪಾಗಿಟ್ಟಿದ್ದಾರೆ.

    ಪರಿಸರ ರಕ್ಷಣೆಗೆ ಮುಂದಾಗಿರುವ ಬಾದಾಮಿ ಪಟ್ಟಣದ ನಿವಾಸಿ ಶಿವರೆಡ್ಡಿ ವಾಸನ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ನಿಸರ್ಗ ಬಳಗ ಎಂಬ ಸಂಘಟನೆ ಹುಟ್ಟುಹಾಕಿ ಸುಂದರ ಪರಿಸರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಮೂಲಕ ಯುವಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುತ್ತ, ಇಡೀ ಪಟ್ಟಣವನ್ನೇ ಹಸಿರೀಕರಣ ಮಾಡಲು ಹೊರಟಿದ್ದಾರೆ. ಪಿಯು ಕಾಲೇಜ್‍ನಲ್ಲಿ ಜೀವಶಾಸ್ತ್ರದ ಉಪನ್ಯಾಸಕರಾಗಿದ್ದ ವಾಸನ್, 63ರ ಇಳಿ ವಯಸ್ಸಿನಲ್ಲಿಯೂ ಪರಿಸರ ಉಳಿಸಿ ಅಭಿಯಾನ ಆರಂಭಿಸಿದ್ದಾರೆ. ಈಗಾಗಲೇ ಪಟ್ಟಣದ ಸುತ್ತ ಸುಮಾರು 5 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಹಸರೀಕರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

    ಹೆಚ್ಚುತ್ತಿರುವ ತಾಪಮಾನವನ್ನು ಸಸಿ ನೆಡುವ ಮೂಲಕ ಕಡಿಮೆ ಮಾಡಬೇಕು. ನೀರಿನ ಅಂತರ್ಜಲ ಮಟ್ಟ ವೃದ್ಧಿಯಾಗಬೇಕು ಎಂಬ ಕನಸುಗಳನ್ನು ಹೊತ್ತು ಬಿಡುವಿನ ವೇಳೆಯಲ್ಲಿ ಊರೂರು ಸುತ್ತಿ ಪರಿಸರ ರಕ್ಷಣೆ, ಗಿಡ ನೆಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಪರಿಸರ ಪ್ರೇಮಿ ಎನಿಸಿಕೊಂಡಿದ್ದಾರೆ. ಯುವಕರು, ಮಹಿಳೆಯರು, ಶಿಕ್ಷಕರನ್ನೊಳಗೊಂಡ ಸುಮಾರು 50 ಸದಸ್ಯರ ನಿಸರ್ಗ ಬಳಗ ಹುಟ್ಟು ಹಾಕಿ ಚಾಲುಕ್ಯರ ನಾಡನ್ನು ಹಸಿರು ನಾಡು ಮಾಡಲು ಹೊರಟಿದ್ದಾರೆ.

    ಬಾದಾಮಿ ಐತಿಹಾಸಿಕ ಪ್ರವಾಸಿ ತಾಣ, ಪಟ್ಟಣದಲ್ಲಿ ಚಾಲುಕ್ಯರ ಆಳ್ವಿಕೆಗೆ ಸಾಕ್ಷಿಯಾದ ಸುಂದರ ಕಲಾಶಿಲ್ಪಗಳಿವೆ. ಇದನ್ನು ವೀಕ್ಷಿಸಲು ದೇಶ-ವಿದೇಶದಿಂದ ಪ್ರವಾಸಿಗರು ಬರುತ್ತಾರೆ. ಆದರೆ ಪಟ್ಟಣ ಮಾತ್ರ ಬಿಸಿಲ ಕೂಪದಲ್ಲಿ ಸುಡುವಂತಿದೆ. ಇದನ್ನರಿತ ಎಸ್.ಎಚ್ ವಾಸನ್, ಬಾದಾಮಿ ಪಟ್ಟಣವನ್ನು ಸುಂದರ ಪರಿಸರದ ಪಟ್ಟಣವನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ, ಪಟ್ಟಣದ ಹಸರೀಕರಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.

    ಸಸಿ ನೆಡುವುದರಲ್ಲಿಯೂ ಜಾಣತನ ಮೆರೆದಿರುವ ಇವರು, ಹೊಂಗೆ ಮರದಿಂದ ಮುಂದೊಂದು ದಿನ ಜೈವಿಕ ಇಂಧನ ಸಿಗುತ್ತೆ ಎಂಬ ಉದ್ದೇಶದಿಂದ ಹೆಚ್ಚಾಗಿ ಹೊಂಗೆ ಸಸಿಗಳನ್ನೇ ನೆಡುತ್ತಿದ್ದಾರೆ. ಅಲ್ಲದೆ, ಈ ಹಿಂದಿನ ಅರಣ್ಯ ಸಚಿವ ರಮಾನಾಥ್ ರೈ ಅವರನ್ನು ಭೇಟಿ ಮಾಡಿ, ಬಾದಾಮಿ ಪಟ್ಟಣಕ್ಕೆ ಸಾಲುಮರದ ತಿಮ್ಮಕ್ಕ ಉದ್ಯಾನವನ್ನು ಸಹ ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ. ಹೀಗಾಗಿ ಬಾದಾಮಿ ಜನ ಇವರನ್ನು ಪರಿಸರ ಪ್ರೇಮಿ ಎಂದು ಕರೆಯುತ್ತಾರೆ.

  • ಪರಿಸರ ರಕ್ಷಣೆ ಮಾಡೋದು ಬಹು ದೊಡ್ಡ ಸವಾಲು- ಡಾ.ಕೆ. ಸುಧಾಕರ್

    ಪರಿಸರ ರಕ್ಷಣೆ ಮಾಡೋದು ಬಹು ದೊಡ್ಡ ಸವಾಲು- ಡಾ.ಕೆ. ಸುಧಾಕರ್

    – ಬೆಳ್ಳಂದೂರು ಮಾಲಿನ್ಯ ನಿಯಂತ್ರಣಕ್ಕೆ ಮೊದಲ ಆದ್ಯತೆ

    ಚಿಕ್ಕಬಳ್ಳಾಪುರ: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹುದ್ದೆ ಕೇವಲ ಹುದ್ದೆಯಲ್ಲ ಇದೊಂದು ಜವಾಬ್ದಾರಿ. 21 ನೇ ಶತಮಾನದಲ್ಲಿ ಪರಿಸರ ರಕ್ಷಣೆ ಮಾಡುವುದು ದೊಡ್ಡ ಸವಾಲು ಎಂದು ನೂತನ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಮತ್ತು ಚಿಕ್ಕಬಳ್ಳಾಪುರ ಶಾಸಕ ಡಾ. ಕೆ. ಸುಧಾಕರ್ ಹೇಳಿದ್ದಾರೆ.

    ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಶಾಸಕ ಸುಧಾಕರ್, ನೇರವಾಗಿ ತಾಲೂಕಿನ ನಂದಿ ಗ್ರಾಮದ ಪ್ರಸಿದ್ಧ ಶ್ರೀಭೋಗನಂದೀಶ್ವರನ ದೇಗುಲಕ್ಕೆ ಭೇಟಿ ನೀಡಿ ದೇವರ ಆರ್ಶೀವಾದ ಪಡೆದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ನನ್ನ ಮೊದಲ ಆದ್ಯತೆ ಎಂದರು.

    ಬೆಂಗಳೂರಿನ ಬೆಳ್ಳಂದೂರು ಕೆರೆ ಮಾಲಿನ್ಯ ತಡೆಗಟ್ಟೋದು ನನ್ನ ಮೊದಲ ಆದ್ಯತೆಗಳಲ್ಲೊಂದಾಗಿದೆ. ಈಗಾಗಲೇ ಮಾನ್ಯ ಉಚ್ಛ ನ್ಯಾಯಾಲಯ ಬೆಳ್ಳಂದೂರು ಕೆರೆಯ ಸಂರಕ್ಷಣೆ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದೆ. ಈ ಸಂಬಂಧ ಜುಲೈ 1 ರಂದು ತಜ್ಞರ ಜೊತೆ ಸಭೆ ನಡೆಸಲಿದ್ದೇನೆ ಎಂದು ಹೇಳಿದರು.

    ಮತ್ತೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್.ವಿ ಮಂಜುನಾಥ್ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷ ಈ ಹಿಂದೆ ತೆಗೆದುಕೊಂಡ ತೀರ್ಮಾನದಂತೆ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ಈ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಅಧ್ಯಕ್ಷ ಸ್ಥಾನ ಕೊಡುವುದಾಗಿ ಮೊದಲೇ ಮಾತುಕತೆ ಆಗಿತ್ತು. ಅದರಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗೂಂಡೂರಾವ್ ಸೂಚಿಸಿದ್ದಾರೆ ಎಂದು ಹೇಳಿದರು.

    ಮೈತ್ರಿ ಸರ್ಕಾರದ ದೋಸ್ತಿ ಪಕ್ಷ ಜೆಡಿಎಸ್ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿರೊದು ಸರಿಯಲ್ಲ. ಉನ್ನತ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಯಬೇಕಿದೆ. ಆದರೂ ಜೆಡಿಎಸ್‍ನವರಿಗೆ ಅಧ್ಯಕ್ಷ ಸ್ಥಾನ ಕೊಡೋದಿಲ್ಲ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.

  • ‘ಪ್ಲಾಸ್ಟಿಕ್ ಶುಲ್ಕ’ ಕಟ್ಟಿ ಉಚಿತವಾಗಿ ಓದಿ – ಶಾಲೆಯ ತಂತ್ರಕ್ಕೆ ಭಾರೀ ಮೆಚ್ಚುಗೆ

    ‘ಪ್ಲಾಸ್ಟಿಕ್ ಶುಲ್ಕ’ ಕಟ್ಟಿ ಉಚಿತವಾಗಿ ಓದಿ – ಶಾಲೆಯ ತಂತ್ರಕ್ಕೆ ಭಾರೀ ಮೆಚ್ಚುಗೆ

    ಗುವಾಹಟಿ: ಪ್ಲಾಸ್ಟಿಕ್ ನಿಯಂತ್ರಿಸಲು ಸರ್ಕಾರ ಸಾಕಷ್ಟು ಕ್ರಮಗಳನ್ನು ತಂದರೂ ಬಳಕೆ ಮಾತ್ರ ನಿಲ್ಲುತ್ತಿಲ್ಲ. ಆದರೆ ಅಸ್ಸಾಂನಲ್ಲಿರುವ ಶಾಲೆಯೊಂದು ವಿನೂತನ ರೀತಿಯಲ್ಲಿ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಮುಂದಾಗಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

    ದಿಸ್‍ಪುರದ ಶಾಲೆಯೊಂದು ವಿದ್ಯಾರ್ಥಿಗಳು ಪ್ಲಾಸ್ಟಿಕ್ ನೀಡಿದರೆ ಶಾಲಾ ಶುಲ್ಕವನ್ನು ಕಟ್ಟುವ ಅಗತ್ಯವಿಲ್ಲ ಎಂದು ಪ್ರಕಟಿಸಿದೆ. ತಮ್ಮ ಶಾಲೆಯ ವಿದ್ಯಾರ್ಥಿಗಳು ಶುಲ್ಕದ ಬದಲು ಪ್ಲಾಸ್ಟಿಕ್ ತ್ಯಾಜ್ಯ ನೀಡಿದರೆ ಸಾಕು ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.

    ಏನಿದು ಪ್ಲಾಸ್ಟಿಕ್ ಶುಲ್ಕ:
    ಶಾಲೆಯಲ್ಲಿರುವ ಒಟ್ಟು 110 ವಿದ್ಯಾರ್ಥಿಗಳು ಪ್ರತಿ ವಾರ 20 ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ನೀಡಬೇಕು. ಶಾಲೆಯ ಸೂಚನೆಯ ಪರಿಣಾಮ ವಿದ್ಯಾರ್ಥಿಗಳು ತಮ್ಮ ಮನೆಯ, ಗ್ರಾಮದ ಸುತ್ತಲು ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಶಾಲೆಗೆ ನೀಡುತ್ತಿದ್ದಾರೆ.

    ಈ ಹಿಂದೆ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿತ್ತು. ಆದರೆ ಈ ವರ್ಷದಿಂದ ಶಾಲೆ ಈ ನಿಯಮವನ್ನು ರೂಪಿಸಿದೆ. ಮಕ್ಕಳಿಂದ ಶೇಖರಿಸಿದ ಪ್ಲಾಸ್ಟಿಕ್ ವಸ್ತುಗಳನ್ನು ಪುನರ್ ಬಳಕೆ ಮಾಡಲು ಶಾಲಾ ಮಂಡಳಿ ನಿರ್ಧರಿಸಿದೆ. ಅಲ್ಲದೇ ಹೆಚ್ಚು ಪ್ಲಾಸ್ಟಿಕ್ ನೀಡಿದ ವಿದ್ಯಾರ್ಥಿಗಳಿಗೆ ಶಾಲೆಯೇ ಹಣವನ್ನು ನೀಡುತ್ತಿದೆ.

    ಈ ಹಿಂದೆ ಗ್ರಾಮದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೆಂಕಿ ಇಟ್ಟು ಸುಡಲಾಗುತಿತ್ತು. ಈಗ ಈ ವಾಯುಮಾಲಿನ್ಯವನ್ನು ತಪ್ಪಿಸಲು ತ್ಯಾಜ್ಯಗಳನ್ನು ಬಳಸಿ ಪ್ಲಾಸ್ಟಿಕ್ ಇಟ್ಟಿಗೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಇಟ್ಟಿಗೆಗಳನ್ನು ಶಾಲೆಯ ಕಟ್ಟಡ ನಿರ್ಮಾಣ ಹಾಗೂ ಸ್ಥಳೀಯ ಶೌಚಾಲಯಗಳ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತಿದೆ. ಮಕ್ಕಳು ಪ್ಲಾಸ್ಟಿಕ್ ಹೆಕ್ಕುತ್ತಿರುವ ಕಾರಣ ಜನರಲ್ಲೂ ಈಗ ಜಾಗೃತಿ ಮೂಡಲು ಆರಂಭಗೊಂಡಿದೆ.

    ಸ್ಥಳೀಯ ಮಕ್ಕಳು ಶಾಲೆಗೆ ಹೋಗದೇ ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡಿ ದಿನಕ್ಕೆ 100 ರೂ. ನಿಂದ 150 ರೂ. ಸಂಪಾದಿಸುತ್ತಿದ್ದರು. ಈಗ ಪ್ಲಾಸ್ಟಿಕ್ ಶುಲ್ಕದಿಂದಾಗಿ ಅವರು ಶಾಲೆಗೆ ಸೇರ್ಪಡೆಯಾಗಿದ್ದಾರೆ.

    ಮಕ್ಕಳಲ್ಲಿ ಸಾಮಾಜಿಕ ಅಸಮತೋಲನ ನಿವಾರಿಸಿ ಉತ್ತಮ ಶಿಕ್ಷಣ ನೀಡಲು ಈ ಶಾಲೆಯನ್ನು 2016 ರಲ್ಲಿ ಆರಂಭಿಸಲಾಗಿದೆ. ಮಝೀನ್ ಅಖ್ತರ್ ಎಂಬವರು ಟಾಟಾ ಇನ್‍ಸ್ಟಿಟ್ಯೂಶನ್‍ನ ಎಂಎಸ್‍ಡಬ್ಲ್ಯು ವಿದ್ಯಾರ್ಥಿನಿ ಪರ್ಮಿತರನ್ನ ಭೇಟಿ ಮಾಡಿ ಅವರ ಸಹಾಯದೊಂದಿಗೆ ಶಾಲೆಯನ್ನು ಸ್ಥಾಪನೆ ಮಾಡಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ವಯಸ್ಸಿನ ಆಧಾರದ ಮೇಲೆ ಶಿಕ್ಷಣ ನೀಡದೆ, ಜ್ಞಾನದ ಆಧಾರದ ಮೇಲೆ ಶಿಕ್ಷಣ ನೀಡಲಾಗುತ್ತಿದೆ.

  • ರಾಣೇಬೆನ್ನೂರಿನ ಆಟೋ ಚಾಲಕರ ಪರಿಸರ ಪ್ರೇಮ-ಹುಟ್ಟುಹಬ್ಬಕ್ಕೆ ಸಸಿ ನೆಟ್ಟು ಹಸಿರು ಕಾಂತ್ರಿ!

    ರಾಣೇಬೆನ್ನೂರಿನ ಆಟೋ ಚಾಲಕರ ಪರಿಸರ ಪ್ರೇಮ-ಹುಟ್ಟುಹಬ್ಬಕ್ಕೆ ಸಸಿ ನೆಟ್ಟು ಹಸಿರು ಕಾಂತ್ರಿ!

    ಹಾವೇರಿ: ಹುಟ್ಟುಹಬ್ಬದ ಆಚರಣೆ ಅಂದರೆ ಕೇಕ್ ಕತ್ತರಿಸುವುದು, ಭರ್ಜರಿ ಪಾರ್ಟಿ ಮಾಡುವುದು ಸಾಮಾನ್ಯ. ಆದರೆ ಹಾವೇರಿಯ ರಾಣೇಬೆನ್ನೂರಿನ ಆಟೋ ಚಾಲಕರು ತಮ್ಮ ಹುಟ್ಟು ಹಬ್ಬದ ಆಚರಣೆ ವೇಳೆ ಸಸಿ ನೆಡುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ.

    ಜಿಲ್ಲೆಯ ರಾಣೇಬೆನ್ನೂರು ನಗರದ ರೈಲು ನಿಲ್ದಾಣದ ಎದುರಿನ ಈ ಗಿಡಗಳನ್ನ ನೆಟ್ಟಿದ್ದು ಇದೇ ಆಟೋ ಚಾಲಕರು. ಆಟೋ ಚಾಲಕರ ಸಂಘ ಕಟ್ಟಿಕೊಂಡಿರೋ 40 ಚಾಲಕರು, ಪ್ರತಿಯೊಬ್ಬರ ಜನ್ಮದಿನದಂದು ಒಂದೊಂದು ಸಸಿ ನೆಡುತ್ತಿದ್ದಾರೆ. ಅಲ್ಲದೇ ಅವುಗಳನ್ನು ನಿರಂತರವಾಗಿ ಪೋಷಣೆ ಮಾಡುತ್ತಿದ್ದಾರೆ.

    ಪ್ರಮುಖವಾಗಿ ಶೋಭಾಬಲ, ಹುಲಗಿಲ, ರೇನ್ ಟ್ರೀ, ನೇರಳೆ, ಬೇವು ಸೇರಿದಂತೆ ಹಲವು ಸಸಿಗಳನ್ನ ನೆಟ್ಟು ಅವುಗಳನ್ನ ಮರಗಳಾಗಿ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾರೆ. ವಿಶೇಷವಾಗಿ ಪ್ರತಿಯೊಂದು ಸಸಿಗೂ ಮಹಾತ್ಮರ ಹೆಸರು ಇಟ್ಟಿದ್ದಾರೆ. ಜೊತೆಗೆ ಇಡೀ ನಗರದ ತುಂಬ ಸಸಿಗಳನ್ನ ನೆಡುವ ಸಂಕಲ್ಪ ಮಾಡಿದ್ದಾರೆ.

    ಕಾಡು ಬೆಳೆಸಿ ನಾಡು ಉಳಿಸಿ ಎನ್ನುವ ಸಂದೇಶ ಸಾರುತ್ತಿರುವ ಆಟೋ ಚಾಲಕರ ಪರಿಸರ ಕಾಳಜಿ ಎಲ್ಲರಿಗೂ ಮಾದರಿಯಾಗಿದೆ.