ಬೆಂಗಳೂರು: ಪರಿಸರ ಅಭಿವೃದ್ಧಿ ಸಂರಕ್ಷಣೆಗೆ ಮಾಧ್ಯಮಗಳು (Media) ಹೆಚ್ಚು ಒತ್ತು ನೀಡಬೇಕು. ಪತ್ರಕರ್ತರು ಪರಿಸರ ನ್ಯಾಯಕ್ಕೆ ಬದ್ಧವಾಗಿರಬೇಕು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ
ಇಂದು ಬೆಂಗಳೂರಿನ ವಾರ್ತಾಸೌಧದಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಪರಿಸರ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದ ಮಾಧ್ಯಮ ರಂಗಕ್ಕೂ ಇಂದಿನ ಮಾಧ್ಯಮ ರಂಗಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಸ್ವಾತಂತ್ರ್ಯೋತ್ತರ ಪತ್ರಿಕೋದ್ಯಮ ಶ್ರೀಮಂತರ ಕೈಗಳಿಗೆ ಸಿಕ್ಕಿಹಾಕಿಕೊಂಡಿದೆ. ಪತ್ರಕರ್ತರು ಇದನ್ನು ಅರ್ಥ ಮಾಡಿಕೊಂಡು ಕರ್ತವ್ಯ ನಿರ್ವಹಿಸಬೇಕಿದೆ ಎಂದರು. ಇದನ್ನೂ ಓದಿ: ಜಾತಿಗಣತಿ ಮುಂದೂಡಲ್ಲ, ಮುಂದೂಡಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ವಡ್ಡರ್ಸೆ ರಘುರಾಮ ಶೆಟ್ಟರು ಸಮ ಸಮಾಜ ನಿರ್ಮಾಣದ ಕನಸು ಕಂಡ ಪತ್ರಕರ್ತರು. ಜಾತಿ ಸಮಸ್ಯೆಗಳ ವಿರುದ್ಧ ಬರೆದವರು. ಸಮಾಜದ ಧ್ವನಿಯಂತೆ ಬಾಳಿದವರು. ಪತ್ರಿಕಾವೃತ್ತಿಯಲ್ಲಿ ತೊಡಗಿರುವವರಿಗೆ ವಡ್ಡರ್ಸೆಯವರಂತವರು ಮಾದರಿಯಾಗಲಿ ಎಂದು ಹೇಳಿದರು.
ಮಾಧ್ಯಮಗಳ ಅಭಿಪ್ರಾಯಗಳು ವಸ್ತುಸ್ಥಿತಿಯಿಂದ ಕೂಡಿರಬೇಕು. ಅನೇಕ ಬಾರಿ ಸುದ್ದಿಗಳಲ್ಲಿ ಊಹಾ ಪತ್ರಿಕೋದ್ಯಮ ಕಾಣುತ್ತದೆ, ಅದು ಆಗಬಾರದು. ಸತ್ಯ – ಅಸತ್ಯಗಳನ್ನು ಪತ್ತೆ ಹಚ್ಚಿ, ಸತ್ಯವನ್ನು ಶೋಧನೆ ಮಾಡುವ ಕಾರ್ಯವನ್ನು ಪತ್ರಿಕೋದ್ಯಮ ಮಾಡಬೇಕು. ಸರ್ಕಾರದ ಜನಪರ ವಿಚಾರಗಳನ್ನು ಜನರಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜನ ವಿರೋಧಿ ಕಾರ್ಯವನ್ನು ಸರ್ಕಾರ ಮಾಡಿದರೆ ಅದನ್ನೂ ಜನರಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಸಾಮಾಜಿಕ ನ್ಯಾಯ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿರಬೇಕಾದ ವಿಚಾರವಲ್ಲ. ಎಲ್ಲರಿಗೂ ದೇಶದ ವ್ಯವಸ್ಥೆಯಲ್ಲಿ ಇನ್ನೂ ಸಹ ಸಮಾನವಾದ ಅವಕಾಶ ಸಿಗದಿರಲು ಕಾರಣಗಳೇನು ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಧ್ಯಮಗಳು ಮಾಡಬೇಕು ಎಂದರು.
ಇತ್ತೀಚಿಗೆ ಟಿವಿ ಚಾನೆಲ್‌ಗಳು ಇನ್ನೊಬ್ಬರ ಹೇಳಿಕೆ ಬಗ್ಗೆ ಪ್ರತಿಕ್ರಿಯೆಯನ್ನು ಕೇಳಿ ಬ್ರೇಕಿಂಗ್ ಸುದ್ದಿ ಮಾಡುತ್ತವೆ. ಅದರಲ್ಲಿ ಅನೇಕ ವಿಚಾರಗಳು ಸಮಾಜಕ್ಕೆ ಸಂಬಂಧವೇ ಪಟ್ಟಿರುವುದಿಲ್ಲ. ಸಮಾಜಕ್ಕೆ ಸಂಬಂಧಪಟ್ಟಂತಹ ವಿಚಾರಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ. ಭಾನು ಮುಷ್ತಾಕ್ ದಸರಾ ಉದ್ಘಾಟನೆಯನ್ನು ವಿಷಯವನ್ನಾಗಿಸಲು ಹೊರಟರು. ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ್ ಸಹ ಇದನ್ನು ವಜಾಗೊಳಿಸಿದೆ. ದಸರಾ ಹಬ್ಬ ಧಾರ್ಮಿಕ ವಿಚಾರವಲ್ಲ, ಅದು ನಾಡ ಹಬ್ಬವಾಗಿದ್ದು, ಸಾಂಸ್ಕೃತಿಕ ವಿಚಾರವಾಗಿದೆ ಎಂದು ಹೇಳಿದರು.
ಸುಮಾರು 2017ರಿಂದ ಬಾಕಿ ಇದ್ದ ಪ್ರಶಸ್ತಿಗಳನ್ನು ಇಂದು ಪ್ರದಾನ ಮಾಡಲಾಗಿದೆ. ಆಯಾ ವರ್ಷದ ಪ್ರಶಸ್ತಿಗಳನ್ನು ಆಯಾ ವರ್ಷವೇ ನೀಡಿದರೆ ಉತ್ತಮ. ಅನೇಕ ವರ್ಷಗಳ ಪ್ರಶಸ್ತಿಗಳನ್ನು ಒಟ್ಟಿಗೆ ನೀಡುವುದು ಒಳ್ಳೆಯ ಪದ್ಧತಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.





















