Tag: ಪರಿಶೀಲನೆ

  • ಅನ್ನಭಾಗ್ಯದ ಭಾವನಾತ್ಮಕ ನಂಟು ತೆರೆದಿಟ್ಟು ಎಚ್‍ಡಿಕೆಗೆ ದೀರ್ಘ ಪತ್ರ ಬರೆದ ಮಾಜಿ ಸಿಎಂ

    ಅನ್ನಭಾಗ್ಯದ ಭಾವನಾತ್ಮಕ ನಂಟು ತೆರೆದಿಟ್ಟು ಎಚ್‍ಡಿಕೆಗೆ ದೀರ್ಘ ಪತ್ರ ಬರೆದ ಮಾಜಿ ಸಿಎಂ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕೊಟ್ಟ ಭರವಸೆಯಂತೆ `ನುಡಿದಂತೆ ನಡೆ’ದಿದ್ದಾರೆ.

    ಬಜೆಟ್‍ನಲ್ಲಿ ಅನ್ನಭಾಗ್ಯದ ಅಕ್ಕಿಯ ಪ್ರಮಾಣ ಮತ್ತು ತೈಲ ಬೆಲೆ ಏರಿಕೆಗೆ ಕಾಂಗ್ರೆಸ್‍ನಲ್ಲೇ ಅಸಮಾಧಾನ ಕೇಳಿ ಬಂದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕಾಂಗ ಸಭೆಯಲ್ಲಿ ಶಾಸಕರು ಸಿದ್ದರಾಮಯ್ಯ ಮತ್ತು ಡಿಸಿಎಂ ಪರಮೇಶ್ವರ್ ಮುಂದೆಯೇ ಅಸಮಾಧಾನವನ್ನು ಪ್ರಕಟಿಸಿದ್ದರು.

    ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಈ ವಿಚಾರವನ್ನು ನಾನು ಸರ್ಕಾರಕ್ಕೆ ಮುಟ್ಟಿಸುತ್ತೇನೆ ಎಂದು ಹೇಳಿದ್ದರು. ಅದರಂತೆ ಈಗ ನೇರವಾಗಿಯೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಅನ್ನ ಭಾಗ್ಯದ ಅಕ್ಕಿ ಪ್ರಮಾಣವನ್ನು ಏರಿಸಬೇಕು  ಮತ್ತು ತೈಲ ಬೆಲೆ ಮೇಲಿನ ತೆರಿಗೆಯನ್ನು ಇಳಿಸುವಂತೆ ಮನವಿ ಮಾಡಿದ್ದಾರೆ.

    ಪತ್ರದಲ್ಲಿ ಏನಿದೆ?
    ಅನ್ನಭಾಗ್ಯ ಎನ್ನುವುದು ನನ್ನ ಪಾಲಿಗೆ ಕೇವಲ ಒಂದು ಸರ್ಕಾರಿ ಯೋಜನೆಯಲ್ಲ. ಅದು ಬಡಜನರ ಹಸಿವು ನೀಗಿಸುವ ಪುಣ್ಯದ ಕೆಲಸ ಎಂದು ನಾನು ನಂಬಿದವನು. ಬಡವರ ಹಸಿವಿನ ಭವಣೆಯನ್ನು ಕಣ್ಣಾರೆ ಕಂಡ ನನ್ನ ಅನುಭವವೇ ಈ ಯೋಜನೆಯ ಪ್ರೇರಣೆ. ಇದರ ಜತೆಗೆ ನನಗೆ ಭಾವನಾತ್ಮಕ ಸಂಬಂಧವಿದೆ.

    ನಮ್ಮ ಒಟ್ಟು ಆಯವ್ಯಯ ಪ್ರಮಾಣವನ್ನು ಗಮನಿಸಿದರೆ ಅನ್ನಭಾಗ್ಯ ಯೋಜನೆ ದುಬಾರಿಯೇನಲ್ಲ. ಐದು ವರ್ಷಗಳ ಅವಧಿಯಲ್ಲಿ ಈ ಯೋಜನೆಗೆ ನಮ್ಮ ಸರ್ಕಾರ ನೀಡಿದ್ದ ಒಟ್ಟು ಹಣ 11,564 ಕೋಟಿ ರೂ.. ಇದರ ಫಲಾನುಭವಿಗಳ ಸಂಖ್ಯೆ 3.85 ಕೋಟಿ. ಜಾತಿ, ಧರ್ಮ, ಪ್ರದೇಶದ ಗಡಿಗಳೆನ್ನಲ್ಲ ಮೀರಿ ಅತ್ಯಂತ ಹೆಚ್ಚು ಫಲಾನುಭವಿಗಳನನ್ನು ತಲುಪುತ್ತಿರುವ ಏಕೈಕ ಯೋಜನೆ ಇದು.

    ಇಂದು ನಮ್ಮ ನಾಡಿನಲ್ಲಿ ಯಾರೊಬ್ಬರೂ ಹಸಿದು ಮಲಗುವಂತಹ ಅಸಹಾಯಕ ಪರಿಸ್ಥಿತಿ ಇಲ್ಲ. ಆಹಾರ ಹಕ್ಕನ್ನು ನೀಡಿದ ತೃಪ್ತಿ ನನ್ನದು. ಹಸಿವಿನ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಗೆದ್ದಿದೆ. ಹಸಿವು ಮುಕ್ತ ಕರ್ನಾಟಕ ಸಾಕಾರಗೊಂಡಿದೆ. ಸತತ ಬರಗಾಲ ಹೊರತಾಗಿಯೂ ರೈತರ ಆತ್ಮಹತ್ಯೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಲಸೆ ಕಡಿಮೆಯಾಗಲು ಅನ್ನಭಾಗ್ಯ ಯೋಜನೆ ಮುಖ್ಯ ಕಾರಣವಾಗಿದೆ.

    ನೀವು ಮಂಡಿಸಿದ ಹೊಸ ಬಜೆಟ್‍ನಲ್ಲಿ ಅನ್ನಭಾಗ್ಯದ ಅಕ್ಕಿಯ ಪ್ರಮಾಣವನ್ನು 5 ಕೆಜಿಗೆ ಇಳಿಸಿದ್ದು ತಿಳಿದು ಅಚ್ಚರಿಯಾಯಿತು. ಅನ್ನಭಾಗ್ಯ ಯೋಜನೆಗೆ ನಾವು ಬಜೆಟ್‍ನಲ್ಲಿ ನಿಗದಿಪಡಿಸಿದ್ದ ಸಹಾಯಧನ 2,450 ಕೋಟಿ ರೂ. 2 ಕೆಜಿ ಅಕ್ಕಿ ಕಡಿಮೆ ಮಾಡುವುದರಿಂದ ಹೆಚ್ಚೆಂದರೆ 600-700 ಕೋಟಿ ರೂಪಾಯಿ ಉಳಿತಾಯ ಮಾಡಬಹುದು. ಆದರೆ ಈ ಕಡಿತದಿಂದ ಹೆಚ್ಚಾಗಲಿರುವ ಬಡವರ ಕಷ್ಟದ ಪ್ರಮಾಣವನ್ನು ನೀವು ಊಹಿಸಬಲ್ಲಿರಿ ಎಂದು ನಾನು ನಂಬಿದ್ದೇನೆ. ಈಗಾಗಲೇ ಬೇರೆ ಬೇರೆ ಜಿಲ್ಲೆಗಳ ಜನತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವುದನ್ನು ನಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ನನ್ನ ಗಮನಕ್ಕೆ ತಂದಿದ್ದಾರೆ.

    ಈ ಹಿನ್ನೆಲೆಯಲ್ಲಿ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದ ಪ್ರತಿಯೊಬ್ಬನ ಸದಸ್ಯರಿಗೂ ನೀಡಲಾಗುತ್ತಿದ್ದ ಅಕ್ಕಿಯನ್ನು ತಲಾ 7 ಕೆಜಿ ಯಿಂದ 5 ಕೆಜಿಗೆ ಇಳಿಸುವ ನಿರ್ಧಾರವನ್ನು ಪುನರ್ ಪರಿಶೀಲಿಸಿ ಹಳೆಯ ಪದ್ಧತಿಯನ್ನೇ ಮುಂದುವರೆಸಿಕೊಂಡು ಹೋಗಬೇಕೆಂದು ಕೋರುತ್ತೇನೆ.

    ಹಾಗೆಯೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಿತ್ತು. ತೈಲ ಬೆಲೆ ಏರಿಕೆಯನ್ನು ಪ್ರಮುಖ ವಿಷಯವನ್ನಾಗಿ ಮಾಡಿಕೊಂಡು ನಮ್ಮ ಪಕ್ಷ ವಿಧಾನ ಸಭೆ ಚುನಾವಣೆಯಲ್ಲಿ ಹೋರಾಟ ನಡೆಸಿತ್ತು. ಜೊತೆಗೆ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರೂ ಸಹ ಈ ವಿಷಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

    ಇಂತಹ ಸನ್ನಿವೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ನಿಧಾರವನ್ನು ತಾವು ಘೋಷಣೆ ಮಾಡಿದ್ದೀರಿ. ಇದರಿಂದ ಬೆಲೆ ಏರಿಕೆ ಜೊತೆಗೆ ಜನಸಾಮಾನ್ಯದ ಮೇಲು ಪರಿಣಾಮ ಬೀರಲಿದೆ. ಹೀಗಾಗಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಸುವ ತೀರ್ಮಾನದ ಬಗ್ಗೆಯೂ ಮರು ಪರಿಶೀಲನೆ ಮಾಡಬೇಕೆಂದು ಕೋರುತ್ತೇನೆ.

  • ಕೇಂದ್ರ ಕಾರ್ಮಿಕ ಭವನಕ್ಕೆ ಸಚಿವರ ದಿಢೀರ್ ಭೇಟಿ – ಅಧಿಕಾರಿಗಳು ಕಂಗಾಲು

    ಕೇಂದ್ರ ಕಾರ್ಮಿಕ ಭವನಕ್ಕೆ ಸಚಿವರ ದಿಢೀರ್ ಭೇಟಿ – ಅಧಿಕಾರಿಗಳು ಕಂಗಾಲು

    ಬೆಂಗಳೂರು: ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರು ಇಂದು ದಿಢೀರ್ ಆಗಿ ಕೇಂದ್ರ ಕಾರ್ಮಿಕಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ಮಿಕ ಇಲಾಖೆಯಲ್ಲಿ ಕೆಲ ಹೊಸ ವ್ಯವಸ್ಥೆಗಳನ್ನು ಮಾಡಬೇಕು. ಅಲ್ಲದೇ ವೇಗದ ಕಾರ್ಯಕ್ಕೆ ಚುರುಕು ಮುಟ್ಟಿಸಬೇಕು ಎಂದು ದಿಢೀರ್ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದೇನೆ. ಯಾವ ಕೆಲಸ ನಡೆಯಬೇಕಿದೆ. ಯಾವೆಲ್ಲ ಕೆಲಸಗಳನ್ನು ಅರ್ಥದಲ್ಲೇ ನಿಲ್ಲಿಸಲಾಗಿದೆ. ಕಾರ್ಮಿಕರಿಗೆ ಏನು ಅನುಕೂಲವಾಗಿದೆ ಎಂದು ಮಾಹಿತಿ ಪಡೆಯಲು ಆಗಮಿಸಿದ್ದಾಗಿ ತಿಳಿಸಿದರು.

    ಇದೇ ವೇಳೆ ಕಾರ್ಮಿಕಭವನದ ಕೆಲ ಕುಂದುಕೊರತೆಗಳು ಗಮನಕ್ಕೆ ಬಂದಿರುವುದಾಗಿ ತಿಳಿಸಿದ ಅವರು, ಅಧಿಕಾರಿಗಳ ಹಾಜರಾತಿ, ಮೂಮೆಂಟ್ ಬುಕ್ ನಲ್ಲಿ ಸರಿಯಾಗಿ ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಅಲ್ಲದೇ ಬಾಲ ಕಾರ್ಮಿಕರ ಬಳಕೆ ಕುರಿತು ಮಾಹಿತಿ ಪಡೆದು, ಬಾಲ ಕಾರ್ಮಿರನ್ನು ಎಲ್ಲಯಾದರೂ ದುಡಿಮೆ ಮಾಡಿಕೊಳ್ಳುವ ಕುರಿತು ತಿಳಿದು ಬಂದರೆ ಕಠಿಣ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

    ಆಯುಕ್ತೆ ಇರುಸು ಮುರುಸು: ತಮ್ಮ ದಿಢೀರ್ ಭೇಟಿ ವೇಳೆ ಸಚಿವರು ಕಾರ್ಮಿಕ ಭವನದ ಶೌಚಾಲಯಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಶೌಚಾಲಯದ ಅವ್ಯವಸ್ಥೆ ಕಂಡು ಕಾರ್ಮಿಕ ಇಲಾಖೆ ಆಯುಕ್ತೆ ಚೈತ್ರಗೆ ಪುರುಷರ ಶೌಚಾಲಯ ದರ್ಶನ ಮಾಡಿಸಿದರು. ದೂರದಲ್ಲಿದ್ದ ಆಯುಕ್ತೆ ಚೈತ್ರರವರನ್ನು ಕರೆದು ಏನು ಪರಿಸ್ಥಿತಿ ಎಂದು ಪ್ರಶ್ನಿಸಿ ಶೌಚಲಯಕ್ಕೆ ಹೋಗಲು ಹೇಳಿದರು. ಇದರಿಂದ ಕೆಲ ಸಮಯ ಆಯುಕ್ತೆ ಚೈತ್ರಾ ಇರುಸು ಮುರುಸುಗೊಂಡರು. ಇನ್ನು ಇದಕ್ಕೂ ಮೊದಲು ಕಚೇರಿ ಬಂದಾಗ ಅಲ್ಲಿರುವ ನೌಕರರನ್ನು ಗುರುತು ಹಿಡಿಯಲಿಲ್ಲ. ಆಗ ಸಚಿವರು ತಮ್ಮ ರೀತಿಯಲ್ಲಿ ಮಾತನಾಡಿದ ವೇಳೆ ನೌಕರರು ಅವರ ಗುರುತು ಹಿಡಿದರು.

    ಅಧಿಕಾರಿ ಸಸ್ಪೆಂಡ್: ಇದೇ ವೇಳೆ ಕೆಲಸದ ಸಮಯದಲ್ಲಿ ಸೂಕ್ತ ಕಾರಣವಿಲ್ಲದೇ ಗೈರುಹಾಜರಾಗಿದ್ದ ಕಾರ್ಮಿಕ ಇಲಾಖೆಯ ಇನ್ಸ್ ಪೆಕ್ಟರ್ ನಾಗರಾಜಯ್ಯ ರನ್ನು ಅಮಾನತು ಮಾಡುವಂತೆ ಸಚಿವರು ಆಯುಕ್ತೆಗೆ ಆದೇಶ ನೀಡಿದರು. ಬಳಿಕ ಕಚೇರಿ ಸಮಯದಲ್ಲಿ ಆಫೀಸ್ ಕೆಲಸ ಬಿಟ್ಟು ಬಿಟ್ಟು ಬೇರೆಡೆ ಹೋಗಿದ್ದು ಕುರಿತು ವಿಚಾರಣೆ ನಡೆಸಿದರು. ಬಳಿಕ ಹಾಜರಾತಿ ಇಲ್ಲದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವಂತೆ ಸೂಚನೆ ನೀಡಿದರು.

  • ಬ್ಯಾಗ್‍ ನಲ್ಲಿ ಕಂತೆ ಕಂತೆ ಹಣ, ಅನುಮಾನಾಸ್ಪದವಾಗಿ ಓಡಾಡ್ತಿದ್ದ 3 ಯುವಕರು ಮಂಡ್ಯ ಪೊಲೀಸರ ವಶಕ್ಕೆ

    ಬ್ಯಾಗ್‍ ನಲ್ಲಿ ಕಂತೆ ಕಂತೆ ಹಣ, ಅನುಮಾನಾಸ್ಪದವಾಗಿ ಓಡಾಡ್ತಿದ್ದ 3 ಯುವಕರು ಮಂಡ್ಯ ಪೊಲೀಸರ ವಶಕ್ಕೆ

    – ಬೆಂಗ್ಳೂರು ಎಟಿಎಂ ಪ್ರಕರಣಕ್ಕೆ ನಂಟು?

    ಮಂಡ್ಯ: ದಾಖಲೆಯಿಲ್ಲದ ಲಕ್ಷಾಂತರ ರೂಪಾಯಿ ಹಣ ಇಟ್ಟುಕೊಂಡಿದ್ದ ಮೂವರು ಯುವಕರನ್ನು ಮಂಡ್ಯ ಜಿಲ್ಲೆ ಮಳವಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮೂವರು ಯುವಕರು ಬ್ಯಾಗ್ ನಲ್ಲಿ ಲಕ್ಷಾಂತರ ರೂಪಾಯಿ ಹಣ ಇಟ್ಟುಕೊಂಡು ಮಳವಳ್ಳಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಮದ್ಯಪಾನ ಮಾಡಿ ಪರಸ್ಪರ ಜಗಳವಾಡುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಯುವಕರನ್ನು ವಿಚಾರಿಸಲು ಮುಂದಾದರು.

    ಈ ವೇಳೆ ಮೂವರು ಯುವಕರು ಅಲ್ಲಿಯೇ ಇದ್ದ ಬಟ್ಟೆ ಅಂಗಡಿಯೊಳಗೆ ಹೋಗಿ ಅವಿತುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಸ್ಥಳೀಯರು ಸೇರಿ ಯುವಕರನ್ನು ಹಿಡಿದು ಬ್ಯಾಗ್ ಪರಿಶೀಲನೆ ನಡೆಸಿದಾಗ ಕಂತೆ ಕಂತೆ ಹಣ ಪತ್ತೆಯಾಗಿದೆ.

    ಹಣದ ಬಗ್ಗೆ ಯಾರೂ ಸಮರ್ಪಕ ಉತ್ತರ ನೀಡಿಲ್ಲ. ಈ ಹಣಕ್ಕೆ ಬೆಂಗಳೂರಿನ ಜಾಲಹಳ್ಳಿ ಎಟಿಎಂ ದರೋಡೆ ಪ್ರಕರಣದ ನಂಟು ಇರಬಹುದು ಎಂದು ಶಂಕಿಸಲಾಗಿದೆ.

    ಬೆಂಗ್ಳೂರಲ್ಲಿ ಎಟಿಎಂ ಹಣ ದರೋಡೆ: ಎಟಿಎಂ ಗೆ ಹಣ ತುಂಬುವ ವೇಳೆ 18 ಲಕ್ಷ ರೂ. ಕಸಿದು ಪರಾರಿಯಾದ ಘಟನೆ ನಗರದ ಜಾಲಹಳ್ಳಿ ಕ್ರಾಸ್ ಬಳಿ ಸೋಮವಾರದಂದು ನಡೆದಿತ್ತು. ಬೆಳಗ್ಗೆ 6 ಗಂಟೆ ಸುಮಾರಿಗೆ ಐಸಿಐಸಿಐ ಬ್ಯಾಂಕ್ ಎಟಿಎಂಗೆ ಹಣ ತುಂಬಿಸುವ ವೇಳೆ 220 ಪಲ್ಸರ್ ಬೈಕ್‍ನಲ್ಲಿ ಹೆಲ್ಮಟ್ ಧರಿಸಿ ಬಂದಿದ್ದ ದುಷ್ರ್ಕಮಿಗಳು ಸೆಕ್ಯೂರ್ ವೆಲ್ ಏಜೆನ್ಸಿಯ ಮೂವರು ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದರು. ಪ್ರತಿರೋಧ ಒಡಿದ್ದಕ್ಕೆ ಕಸ್ಟೋಡಿಯನ್ ಮೋಹನ್ ಅವರಿಗೆ ಚಾಕುವಿನಿಂದ ಇರಿದ ದುಷ್ರ್ಕಮಿಗಳು 18 ಲಕ್ಷ ರೂ. ಕಸಿದು ಪರಾರಿಯಾಗಿದ್ದರು.

    ಮೋಹನ್, ಸಾಗರ್ ಹಾಗೂ ಪ್ರಸನ್ನ ಸೆಕ್ಯೂರ್ ವೆಲ್ ಏಜ್ಸೇನಿಯ ಸಿಬ್ಬಂದಿಗಳು. ಎಟಿಎಂಗೆ ಹಣ ತುಂಬಲು ಒಟ್ಟು 1 ಕೋಟಿ, 25 ಲಕ್ಷ ರೂ. ಹಣ ತಂದಿದ್ದರು. ದುಷ್ಕರ್ಮಿಗಳು ಅದರಲ್ಲಿ 18 ಲಕ್ಷ, 50 ಸಾವಿರ ರೂ. ಹಣದ ಬ್ಯಾಗ್ ಕಸಿದು ಪರಾರಿಯಾಗಿದ್ದರು. ಈ ಘಟನೆ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.