Tag: ಪರಿಶೀಲನೆ

  • ಎರಡು ದಶಕಗಳ ಹಿಂದೆ ಬಂದ್ ಆಗಿದ್ದ ಇಎಸ್‍ಐ ಆಸ್ಪತ್ರೆಗೆ ಹೈಟೆಕ್ ಟಚ್

    ಎರಡು ದಶಕಗಳ ಹಿಂದೆ ಬಂದ್ ಆಗಿದ್ದ ಇಎಸ್‍ಐ ಆಸ್ಪತ್ರೆಗೆ ಹೈಟೆಕ್ ಟಚ್

    ಕಲಬುರಗಿ: ಕಳೆದ ಎರಡು ದಶಕಗಳ ಹಿಂದೆ ನಾನಾ ಕಾರಣಗಳಿಂದ ಬಂದ್ ಆಗಿದ್ದ ಶಹಬಾದ್ ಪಟ್ಟಣದಲ್ಲಿನ ಇಎಸ್‍ಐ ಆಸ್ಪತ್ರೆಗೆ ಇದೀಗ ಹೈಟೆಕ್ ಟಚ್ ನೀಡಲಾಗುತ್ತಿದ್ದು, ಇಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಆಸ್ಪತ್ರೆಗೆ ಭೇಟಿ ಕಾಮಗಾರಿ ಪರಿಶೀಲನೆ ನಡೆಸಿದರು.

    ನೀರು, ಆಂತರಿಕ ವಿದ್ಯುತ್ತೀಕರಣ ಸೇರಿದಂತೆ ಬಹುತೇಕ ಸಿವಿಲ್ ಕಾಮಗಾರಿ ಪೂರ್ಣಗೊಂಡಿವೆ ಎಂದು ಸ್ಥಳದಲ್ಲಿದ್ದ ಸೇಡಂ ಉಪವಿಭಾಗದ ಲೊಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ಕೃಷ್ಣಾ ಅಗ್ನಿಹೋತ್ರಿ ಅವರು ಮಾಹಿತಿ ನೀಡಿದರು. ಗ್ಯಾಸ್ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿದ್ದರಿಂದ ಪ್ರಾಯೋಗಿಕವಾಗಿ ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಡಿ.ಸಿ. ಸೂಚಿಸಿದರು.

    ನವೀಕರಣಗೊಂಡ ಆಸ್ಪತ್ರೆಗೆ ಬೇಕಾಗುವ ವೈದ್ಯಕೀಯ ಉಪಕರಣಗಳು, ಪೀಠೋಪಕರಣಗಳ ಇಂಡೆಂಟ್ ಸಲ್ಲಿಸಬೇಕು. ಅದರ ಜೊತೆಗೆ ಅಸ್ಪತ್ರೆಗೆ ಅವಶ್ಯಕವಿರುವ ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿ ವಿವರ ಸಹ ನೀಡಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಮರದೀಪ ಪವಾರ್ ಅವರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

    ಉಳಿದ ಕೆಲಸ-ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸಿ, ಅಸ್ಪತ್ರೆ ಪುನರಾರಂಭಕ್ಕೆ ಅಣಿಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಸುರೇಶ್ ವರ್ಮಾ, ನಗರಸಭೆಯ ಆಯುಕ್ತ ಕೆ.ಗುರುಲಿಂಗಪ್ಪ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಅಣ್ಣೆಪ್ಪ ಕುದ್ರಿ, ಸಹಾಯಕ ಅಭಿಯಂತ ಜಗನ್ನಾಥ್ ಮಾಳಗೆ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

  • ನಕಲಿ ಪಾಸ್ ಸೃಷ್ಟಿ – ಪರಿಶೀಲನೆಯಲ್ಲಿ ಸಿಕ್ಕಿಬಿದ್ದ ನೂರಾರು ಜನರ ವಾಹನ ಜಪ್ತಿ

    ನಕಲಿ ಪಾಸ್ ಸೃಷ್ಟಿ – ಪರಿಶೀಲನೆಯಲ್ಲಿ ಸಿಕ್ಕಿಬಿದ್ದ ನೂರಾರು ಜನರ ವಾಹನ ಜಪ್ತಿ

    ರಾಯಚೂರು: ಕೊರೊನಾ ಲಾಕ್‍ಡೌನ್ ಮುಂದುವರಿಕೆ ಹಿನ್ನೆಲೆ ಜನರ ಓಡಾಟಕ್ಕೆ ಮತ್ತಷ್ಟು ಬ್ರೇಕ್ ಬಿದ್ದಿದೆ. ಆದರೆ ಅಡ್ಡದಾರಿ ಹಿಡಿದ ಜಿಲ್ಲೆಯ ಕೆಲ ಜನ ನಕಲಿ ಪಾಸ್ ಸೃಷ್ಟಿಸಿಕೊಂಡು ಚೆಕ್ ಪೋಸ್ಟ್, ನಾಕಾಬಂದಿಗಳಲ್ಲಿ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ.

    ಅನುಮಾನದ ಮೇಲೆ ಪರಿಶೀಲನೆ ಆರಂಭಿಸಿದ ರಾಯಚೂರು ಪೊಲೀಸರು ನೂರಕ್ಕೂ ಹೆಚ್ಚು ನಕಲಿ ಪಾಸ್ ಜಪ್ತಿ ಮಾಡಿದ್ದಾರೆ. ಅನಾವಶ್ಯಕವಾಗಿ ತಿರುಗಾಡುವವರನ್ನ ಪರಿಶೀಲಿಸಿ ನಕಲಿ ಪಾಸ್ ಗಳನ್ನ ಜಪ್ತಿ ಮಾಡಲಾಗಿದೆ. ಮಾಧ್ಯಮದವರು, ಆರೋಗ್ಯ ಇಲಾಖೆ ಸಿಬ್ಬಂದಿಗಳ ಹೆಸರಲ್ಲಿ ನಕಲಿ ಪಾಸ್ ಗಳನ್ನು ಸೃಷ್ಟಿಸಿಕೊಂಡು ಜನ ಓಡಾಡುತ್ತಿದ್ದರು.

    ನಗರದ ಗಂಜ್ ವೃತ್ತದಲ್ಲಿ ಪೊಲೀಸರು ಪರಿಶೀಲನೆ ಮಾಡಿದ್ದು, ಪರಿಶೀಲನೆಯ ವೇಳೆ ಸುಮಾರು ನೂರಕ್ಕೂ ಅಧಿಕ ನಕಲಿ ಪಾಸ್ ಪತ್ತೆಯಾಗಿವೆ. ಮಾರ್ಕೆಟ್ ಯಾರ್ಡ್ ಪೊಲೀಸರು ನಕಲಿ ಪಾಸ್, ಬೈಕ್ ಹಾಗೂ ಕಾರುಗಳನ್ನ ಜಪ್ತಿ ಮಾಡಿದ್ದಾರೆ. ನಕಲಿ ಪಾಸ್ ಸೃಷ್ಟಿಸಿಕೊಂಡು ಅನಗತ್ಯವಾಗಿ ಓಡಾಡುತ್ತಿರುವವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

    ಘಟನೆಯಿಂದ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಹಾಗೂ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು ಪ್ರತಿಯೊಬ್ಬರ ಪಾಸ್ ಗಳನ್ನು ಪರಿಶೀಲನೆ ಮಾಡಿ ಚೆಕ್ ಪೋಸ್ಟ್ ಸಿಬ್ಬಂದಿಗೆ ಸರಿಯಾಗಿ ಪರಿಶೀಲಿಸುವಂತೆ ಎಚ್ಚರಿಕೆ ನೀಡಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ನ್ಯಾಯಬೆಲೆ ಅಂಗಡಿಗೆ ಸಚಿವ ಗೋಪಾಲಯ್ಯ ದಿಢೀರ್ ಭೇಟಿ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ನ್ಯಾಯಬೆಲೆ ಅಂಗಡಿಗೆ ಸಚಿವ ಗೋಪಾಲಯ್ಯ ದಿಢೀರ್ ಭೇಟಿ

    ನೆಲಮಂಗಲ: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಇಂದು ಬೆಂಗಳೂರು ಹೊರವಲಯ ನೆಲಮಂಗಲ ನಗರಕ್ಕೆ ದಿಢೀರ್ ಭೇಟಿ ನೀಡಿದರು.

    ನಾಲ್ಕು ದಿನದ ಹಿಂದೆ ಪಬ್ಲಿಕ್ ಟಿವಿಯಲ್ಲಿ ಪಡಿತರ ಅಂಗಡಿಯ ದಿನಸಿಯಲ್ಲಿ ದೂಳು ಮತ್ತು ಹುಳ ಇದ್ದ ಪ್ರಕರಣದ ಹಿನ್ನಲೆ ಸುದ್ದಿ ಪ್ರಸಾರವಾಗಿತ್ತು. ಈ ಸಂಬಂಧ ಇಂದು ಸಚಿವರು ಭೇಟಿ ನೀಡಿದರು. ನೆಲಮಂಗಲ ನಗರದ ನ್ಯಾಯ ಬೆಲೆ ಅಂಗಡಿಗೆ ತೆರಳಿ ಪರಿಶೀಲನೆ ನಡೆಸಿ ಅಕ್ಕಿ ಗೋಧಿಯನ್ನು ವೀಕ್ಷಿಸಿದರು. ತೂಕ ಹಾಗೂ ಗುಣಮಟ್ಟ ಪರಿಶೀಲನೆ ನಡೆಸಿದ ಸಚಿವ ಗೋಪಾಲಯ್ಯ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ.

    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಗೋಪಾಲಯ್ಯ, ಇದು ದಿಢೀರ್ ಭೇಟಿಯಲ್ಲ. ರಾಜ್ಯದ ಹಲವು ಕಡೆ ಪಡಿತರ ವಿತರಣಾ ಮಳಿಗೆಗಳಿಗೆ ತೆರಳುತ್ತೇನೆ. ಒಂದು ಕುಟುಂಬಕ್ಕೆ 10 ಕೆಜಿ ಅಕ್ಕಿ ಮತ್ತು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಸಹ ಮೂರು ತಿಂಗಳ ಪಡಿತರ ಜೊತೆಗೆ ತೊಗರಿ ಬೇಳೆ ಸಹ ನೀಡಲಿದೆ. ಇದೀಗ ಬಿಪಿಎಲ್ ಕಾರ್ಡ್ ಕೇಳಿರುವ ಕುಟಂಬಗಳಿಗೂ ಕಾರ್ಡ್ ವಿತರಿಸಲಿದ್ದೇವೆ ಎಂದರು.

    ಬಯೋಮೆಟ್ರಿಕ್ ಇಲ್ಲದ ಕುಟುಂಬಗಳಿಗೂ ಆಹಾರ ವಿತರಿಸಲು ಚಿಂತನೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಿಗೆ ತೆರಳುತ್ತೇನೆ ಎಂದು ತಿಳಿಸಿದರು. ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಆಯುಕ್ತರು, ಹಿರಿಯ ಅಧಿಕಾರಿಗಳು ಸೇರಿದಂತೆ ನೆಲಮಂಗಲ ಶಾಸಕ ಡಾ.ಶ್ರೀನಿವಾಸ ಮೂರ್ತಿ, ತಹಶೀಲ್ದಾರ್ ಶ್ರೀನಿವಾಸಯ್ಯ ಮತ್ತು ಪೊಲೀಸ್ ಅಧಿಕಾರಿಗಳು ಜೊತೆಯಲ್ಲಿ ಇದ್ದರು.

  • ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಭಾಸ್ಕರ್ ರಾವ್-ಸುಳ್ಳು ಹೇಳಿ ತಗ್ಲಾಕೊಂಡ ಜನ

    ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಭಾಸ್ಕರ್ ರಾವ್-ಸುಳ್ಳು ಹೇಳಿ ತಗ್ಲಾಕೊಂಡ ಜನ

    – ಗಾಡಿ ಪಾರ್ಕ್ ಮಾಡಿ, ಮನೆಗೆ ಹೋಗಿ

    ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಇಂದು ಬೆಳ್ಳಂಬೆಳಗ್ಗೆ ವಾಕಿಂಗ್ ಡ್ರೆಸ್‍ನಲ್ಲೇ ರಸ್ತೆಗಿಳಿದಿದ್ದಾರೆ. ತಾವೇ ಖುದ್ದು ವಾಹನ ತಪಾಸಣೆ ನಡೆಸಿ, ಮುಲಾಜಿಲ್ಲದೆ ವಾಹನಗಳನ್ನು ಸೀಜ್ ಮಾಡಿದ್ದಾರೆ.

    ನಗರದ ಟೌನ್ ಹಾಲ್ ಬಳಿ ಭಾಸ್ಕರ್ ರಾವ್ ಚೆಕಿಂಗ್ ಮಾಡಿದ್ದು, ಎಲ್ಲಿಂದ ಬರ್ತಾ ಇರೋದು, ಗಾಡಿ ಸೈಡ್‍ಗೆ ಹಾಕು, ಪಾಸ್ ಇದ್ಯಾ, ಗಾಡಿ ನಿಲ್ಲಿಸು. ದೂರ ನಿಲ್ಲಪ್ಪ ನೀನು ಎಂದು ಹೇಳುತ್ತಲೇ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಸೀಜ್ ಮಾಡಿದ್ದಾರೆ. ಹೀಗೆ ಸುಖಾಸುಮ್ಮನೆ ಓಡಾಡುತ್ತಿದ್ದ ಇನ್ನೋವಾ ಕಾರನ್ನು ಮುಲಾಜಿಲ್ಲದೆ ಸೀಜ್ ಮಾಡಿದ್ದಾರೆ.

    ಕಮೀಷನರ್ ಎದುರೇ ಪಾಸ್ ಇಲ್ಲದೆ ವಾಹನಗಳ ಓಡಾಟ ಹೆಚ್ಚಾಗಿದ್ದು, ಹಲವು ಬೈಕ್, ಕಾರುಗಳನ್ನು ಜಪ್ತಿ ಮಾಡಿಸಿದ್ದಾರೆ. ಕೆಎಸ್‍ಆರ್‍ಟಿಸಿ ಸಿಬ್ಬಂದಿ, ಆರ್ಮಿ ಪ್ಲೇಟ್ ಹಾಕಿದ್ದ ವಾಹನಗಳು ಸೇರಿ ಹಲವು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

    ಬೈಕ್ ನಲ್ಲಿ ದೇವಸ್ಥಾನಕ್ಕೆ ಹೊರಟವರು, ಅಂತ್ಯಕ್ರಿಯೆಗೆ ಹೊರಟವರು, ತರಕಾರಿಗೆ ಹೊರಟವರು, ನೆಂಟರ ಮನೆಗೆ ಹೊರಟವರು ಕಮೀಷನರ್‍ಗೆ ಸಿಕ್ಕಿ ಬಿದ್ದಿದ್ದಾರೆ. ಇದನ್ನು ಗಮನಿಸಿದ ಕಮಿಷನರ್ ಸಾರ್ವಜನಿಕರ ಓಡಾಟ ಹೆಚ್ಚಾಗಿದೆ. ವಾಹನ ತಪಾಸಣೆ ಸರಿಯಾಗಿ ಅಗ್ತಿಲ್ಲ. ಮತ್ತಷ್ಟು ಬಿಗಿಗೊಳಿಸಿ ಚೆಕಿಂಗ್ ಮಾಡಬೇಕು ಎಂದು ಕಂಟ್ರೋಲ್ ರೂಂ ಮೂಲಕ ಮತ್ತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ವಾಕಿ ಟಾಕಿ ಮೂಲಕ ವಾಹನಗಳನ್ನು ಸರಿಯಾಗಿ ತಪಾಸಣೆ ಮಾಡಿ. ಬಹುತೇಕ ಮಂದಿ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದಾರೆ. ಆದರೂ ತಪಾಸಣೆ ಸರಿಯಾಗಿ ಅಗ್ತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

  • ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯಲ್ಲಿ ಬಿರುಕು – ತಜ್ಞರ ಪರಿಶೀಲನೆ

    ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯಲ್ಲಿ ಬಿರುಕು – ತಜ್ಞರ ಪರಿಶೀಲನೆ

    ಮೈಸೂರು: ನಗರದ ಕೆ.ಆರ್ ವೃತ್ತದಲ್ಲಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ಪ್ರತಿಮೆ ಸ್ಥಳಕ್ಕೆ ಇತಿಹಾಸ ತಜ್ಞ ಡಾ. ರಂಗರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಕಲ್ಲಿನಲ್ಲಿರುವ ದೋಷದಿಂದ ಸಣ್ಣ ಪ್ರಮಾಣದ ಬಿರುಕು ಪ್ರತಿಮೆಯಲ್ಲಿ ಕಂಡಿದೆ. ನಗರ ಪ್ರಮುಖ ವೃತ್ತ ಇದಾಗಿರೋದ್ರಿಂದ ಇಲ್ಲಿ ವಾಹನ ದಟ್ಟಣೆ ಹೆಚ್ಚು. ಇದರಿಂದಾಗಿ ಕಾರ್ಬನ್ ಡೈಆಕ್ಸೈಡ್, ಮಾನಾಕ್ಸೈಡ್ ಇದೇಲ್ಲಾ ಸೇರಿ ಶಿಲ್ಪ ಹಾಳಾಗ್ತಿದೆ ಎಂದು ಪುರಾತತ್ವ ತಜ್ಞ ಪ್ರೋ. ರಂಗರಾಜು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯಲ್ಲಿ ಬಿರುಕು – ಪಾಲಿಕೆ, ಜಿಲ್ಲಾಡಳಿತ ಮೇಲೆ ನಿರ್ಲಕ್ಷ್ಯದ ಆರೋಪ

    ಪ್ರತಿಮೆಯಲ್ಲಿ ಕತ್ತಿನ ಭಾಗಕ್ಕೆ ಬಳಸಿರುವ ಶಿಲೆ ಉತ್ತಮ ಗುಣಮಟ್ಟದ್ದಲ್ಲ. ಹೀಗಾಗಿ ಪದೇ ಪದೇ ಅದು ಹಾಳಾಗುತ್ತಿದೆ. ಸದ್ಯ ಪ್ರತಿಮೆಗೆ ಸಣ್ಣ ಪ್ರಮಾಣದ ಬಿರುಕು ಇರುವುದರಿಂದ ಹೆಚ್ಚಿನ ಆತಂಕ ಇಲ್ಲ ಎಂದರು. ಬೇಸಿಗೆಯಲ್ಲಿ ಇದರ ಬಗ್ಗೆ ಹೆಚ್ಚು ಆತಂಕ ಇಲ್ಲ ಆದರೆ ಮಳೆಗಾಲಕ್ಕೆ ಹೆಚ್ಚು ತೊಂದರೆ ಆಗುತ್ತೆ. ಹೀಗಾಗಿ ಮಳೆಗಾಲದ ಹೊತ್ತಿಗೆ ಪ್ರತಿಮೆ ಸಂರಕ್ಷಣೆ ಮಾಡಿದರೆ ಒಳಿತು ಎಂದು ಪುರಾತತ್ವ ತಜ್ಞರು ಹೇಳಿದರು. ಇದನ್ನೂ ಓದಿ: ಚಾಮುಂಡಿ ಬೆಟ್ಟದ ನಂದಿ ವಿಗ್ರಹದಲ್ಲಿ ಬಿರುಕು!

    ಈ ಹಿಂದೆ ಪ್ರತಿಮೆ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದರು. ಈ ಪ್ರತಿಮೆಯನ್ನು ಅಮೃತ ಶಿಲೆಯಲ್ಲಿ ನಿರ್ಮಿಸಲಾಗಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ನೆನಪಿನಾರ್ಥವಾಗಿ ಸರ್ ಎಂ. ವಿಶ್ವೇಶ್ವರಯ್ಯನವರು ಉದ್ಘಾಟಿಸಿದ್ದರು. ಆದರೆ ಈಗ ಪ್ರತಿಮೆಯ ಮುಖ ಹಾಗೂ ಕುತ್ತಿಗೆ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈ ಬಗ್ಗೆ ಪಾಲಿಕೆ ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯವಹಿಸಿವೆ. ಪ್ರತಿಮೆ ಸರಿಪಡಿಸುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು.

  • ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಸೇವಿಸಿ ಪರಿಶೀಲಿಸಿದ ರಾಯಚೂರು ಎಸ್ಪಿ

    ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಸೇವಿಸಿ ಪರಿಶೀಲಿಸಿದ ರಾಯಚೂರು ಎಸ್ಪಿ

    ರಾಯಚೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಸರ್ಕಾರಿ ಶಾಲೆಗೆ ದಿಢೀರ್ ಭೇಟಿನೀಡಿ ಪರಿಶೀಲನೆ ನಡೆಸಿ ಶಾಲಾ ಸಿಬ್ಬಂದಿಗೆ ಶಾಕ್ ನೀಡಿದ್ದಾರೆ.

    ರಾಯಚೂರು ನಗರದ ಪೊಲೀಸ್ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನ ಪರಿಶೀಲಿಸಿದರು. ಪೊಲೀಸ್ ಸಿಬ್ಬಂದಿ ಮಕ್ಕಳು ಹೆಚ್ಚಾಗಿ ಓದುವ ಶಾಲೆಯಲ್ಲಿನ ಆಹಾರ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದರು.

    ಶಾಲೆಯಲ್ಲಿ ತಯಾರಾದ ಬಿಸಿಯೂಟದ ಗುಣಮಟ್ಟವನ್ನು ಪರೀಕ್ಷಿಸಿ ಬಳಿಕ ಮಕ್ಕಳೊಂದಿಗೆ ಸರತಿ ಸಾಲಿನಲ್ಲಿ ಕುಳಿತು ಬಿಸಿಯೂಟ ಸೇವಿಸಿದರು. ಶಾಲೆಯ ಮಕ್ಕಳೊಂದಿಗೆ ಮಾತನಾಡಿ ಶಾಲೆಯ ಬಗ್ಗೆ ಮತ್ತು ಸಮಸ್ಯೆ ಬಗ್ಗೆ ಮಾಹಿತಿ ಪಡೆದರು. ಕಷ್ಟಪಟ್ಟು ಚೆನ್ನಾಗಿ ಓದಿ ಶಾಲೆ ಹಾಗೂ ಜಿಲ್ಲೆಗೆ ಕೀರ್ತಿ ತನ್ನಿ ಎಂದು ಮಕ್ಕಳಿಗೆ ಕರೆ ನೀಡಿದರು.

  • ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ- ಅಧಿಕಾರಿಗಳಿಂದ ಚುರುಕುಗೊಂಡ ಸ್ಥಳ ಪರಿಶೀಲನೆ

    ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ- ಅಧಿಕಾರಿಗಳಿಂದ ಚುರುಕುಗೊಂಡ ಸ್ಥಳ ಪರಿಶೀಲನೆ

    ರಾಯಚೂರು: ದೇಶದಲ್ಲಿಯೇ ಹಿಂದುಳಿದಿರುವ ರಾಯಚೂರು ನಗರಕ್ಕೆ ನಾಗರಿಕ ವಿಮಾನ ನಿಲ್ದಾಣ ಆರಂಭದ ಕನಸು ಚಿಗುರೊಡೆದಿದೆ. ಇಂದು ವಿಮಾನ ನಿಲ್ದಾಣಕ್ಕಾಗಿ ತಜ್ಞರ ತಂಡ ರಾಯಚೂರಿಗೆ ಆಗಮಿಸಿ ಸ್ಥಳ ಪರಿಶೀಲಿಸಿದೆ. ಆದರೆ ಈಗ ಗುರುತಿಸಿರುವ ಸ್ಥಳದಲ್ಲಿ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಚಿಮಣಿ ಅಡ್ಡಿಯಾಗಿದೆ. ಇದೇ ಕಾರಣಕ್ಕೆ ಯೋಜನೆ ಕೈತಪ್ಪುತ್ತಾ ಎನ್ನುವ ಅನುಮಾನ ಶುರುವಾಗಿದೆ.

    ಅಭಿವೃದ್ಧಿ ಸೂಚ್ಯಂಕದಲ್ಲಿ ದೇಶದಲ್ಲಿಯೇ ಅತ್ಯಂತ ಹಿಂದುಳಿದಿರುವ ರಾಯಚೂರು ಜಿಲ್ಲೆಯಲ್ಲಿ ಕೃಷಿಯೊಂದಿಗೆ ಕೈಗಾರಿಕೆಗೆ ವಿಫುಲ ಅವಕಾಶಗಳಿವೆ. ಅಲ್ಲದೆ ರಾಜ್ಯದಲ್ಲಿಯೇ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ಶಾಖೋತ್ಪನ್ನ ಸ್ಥಾವರಗಳು ಇಲ್ಲಿವೆ. ಆದರೆ ಇಲ್ಲಿ ಬೃಹತ್ ಕೈಗಾರಿಕೆಗಳಿಗೆ ವಿಮಾನ ನಿಲ್ದಾಣ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಹಲವು ವರ್ಷಗಳ ಹಿಂದಿನಿಂದ ನೆನೆಗುದಿಗೆ ಬಿದ್ದ ನಾಗರಿಕ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ರಾಜ್ಯ ವಿಮಾನ ನಿಲ್ದಾಣ ಪ್ರಾಧಿಕಾರವು ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ.

    ಇಂದು ವಿಮಾನ ತಜ್ಞರಾಗಿರುವ ಕ್ಯಾಪ್ಟನ್ ಶಾಮಂತ ನೇತ್ರತ್ವದ ತಂಡ ಭೇಟಿ ನೀಡಿತು. ಈ ತಂಡವು ಈಗಾಗಲೇ ವಿಮಾನ ನಿಲ್ದಾಣಕ್ಕಾಗಿ ಗುರುತಿಸಿದ ವೈಟಿಪಿಎಸ್ ಪಕ್ಕದ ಭೂಮಿ ಪರಿಶೀಲಿಸಿದ್ದು, ಇಲ್ಲಿಯ ಚಿಮಣಿ ಹಾಗು ವಿದ್ಯುತ್ ಲೈನ್‍ಗಳು ಹಾಗು ಜುರಾಲಾದಿಂದ ಹೈ ಟೆನ್ಶನ್ ವಿದ್ಯುತ್ ಹಾಯ್ದು ಹೋಗುವುದರಿಂದ ಈ ಸ್ಥಳ ಎಷ್ಟು ಸೂಕ್ತ ಎಂಬ ಬಗ್ಗೆ ಪರಿಶೀಲಿಸಿತು.

    ಈ ಹಿಂದೆ ಯರಮರಸ್ ಏಗನೂರು ಸೀಮಾಂತರದಲ್ಲಿ ವೈಟಿಪಿಎಸ್ ನಿರ್ಮಾಣವಾಗದ ಮುನ್ನ ವಿಮಾನ ನಿಲ್ದಾಣಕ್ಕಾಗಿ 420 ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಆದರೆ ವೈಟಿಪಿಎಸ್ ನಿರ್ಮಾಣದ ನಂತರ ಈ ಸ್ಥಳ ಸೂಕ್ತವಾಗಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಇದೇ ವೇಳೆ ರಾಯಚೂರು ತಾಲೂಕಿನ ಸಿಂಗನೋಡಿ ಬಳಿಯಲ್ಲಿ ಸುಮಾರು 600 ಎಕರೆ ಭೂಮಿ ಗುರುತಿಸಲಾಗುದ್ದು, ಇವುಗಳಲ್ಲಿ ಯಾವುದು ಸೂಕ್ತ ಹಾಗೂ ಆರ್ಥಿಕ ಹೊರೆ ಕಡಿಮೆಯಾಗಬಹುದು ಎನ್ನುವ ಬಗ್ಗೆ ಪರಿಶೀಲಿಸಲಾಗುತ್ತಿದೆ.

    ಅಲ್ಲದೆ, ವೈಟಿಪಿಎಸ್ ಪಕ್ಕ ಗುರುತಿಸಿರುವ ಸ್ಥಳವು ಒಂದಿಷ್ಟು ಐತಿಹಾಸಿಕ ಮಹತ್ವ ಪಡೆದುಕೊಂಡಿದ್ದು, 1954ರಲ್ಲಿ ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರು ರಾಯಚೂರು ಮಾರ್ಗವಾಗಿ ಹೋಗುವಾಗ ವಿಮಾನದಲ್ಲಿ ತಾಂತ್ರಿಕ ತೊಂದರೆಯಾಗಿ ಇದೇ ಸ್ಥಳದಲ್ಲಿ ವಿಮಾನ ಇಳಿಸಲಾಗಿತ್ತು. ಇದೇ ಕಾರಣಕ್ಕೆ ಇಲ್ಲಿಯೇ ವಿಮಾನ ನಿಲ್ದಾಣವಾಗಲಿ ಎಂಬ ವಾದವು ಇದೆ. ಇನ್ನೂ ಕೆಲವರು ಕಲಬುರಗಿಯಲ್ಲಿ ವಿಮಾನ ನಿಲ್ದಾಣ ಆರಂಭವಾಗಿದೆ. ಕಲಬುರಗಿಗಿಂತ ಮೊದಲೇ ಪ್ರಸ್ತಾಪಿತವಾದ ರಾಯಚೂರು ವಿಮಾನ ನಿಲ್ದಾಣ ಎಲ್ಲಿಯಾದರೂ ಆಗಲಿ ಬೇಗ ಆರಂಭವಾಗಲಿ ಎಂದು ಜನರು ಆಶಿಸುತ್ತಿದ್ದಾರೆ.

  • ಚೆಕ್‌ಪೋಸ್ಟ್‌ನಲ್ಲಿ ಸಿಎಂ ಕಾರು ತಡೆದು ಪರಿಶೀಲನೆ

    ಚೆಕ್‌ಪೋಸ್ಟ್‌ನಲ್ಲಿ ಸಿಎಂ ಕಾರು ತಡೆದು ಪರಿಶೀಲನೆ

    ಹಾಸನ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕಾರನ್ನು ಹಾಸನ ಗಡಿ ಹಿರೀಸಾವೆ ಚೆಕ್ ಪೋಸ್ಟ್ ನಲ್ಲಿ ತಡೆದು ಚುನಾಚಣಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

    ಸಿಎಂ ಕುಮಾರಸ್ವಾಮಿ ಅವರು ಜಿಲ್ಲೆಯ ಚನ್ನರಾಯಪಟ್ಟಣಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಹಿರೀಸಾವೆ ಚೆಕ್ ಪೋಸ್ಟ್ ಬಳಿ ಸಿಎಂ ಕಾರು ಬರುತ್ತಿದ್ದಂತೆಯೇ, ಅದನ್ನು ತಡೆದು ಪೊಲೀಸ್ ಹಾಗೂ ಚುನಾವಣಾ ಸಿಬ್ಬಂದಿ ವಾಹನವನ್ನು ತಪಾಸಣೆ ಮಾಡಿದ್ದಾರೆ.

    ಕುಮಾರಸ್ವಾಮಿ ಅವರು ಶಿವಮೊಗ್ಗಕ್ಕೆ ಹೋಗುವ ಮಾರ್ಗದಲ್ಲಿ ಚನ್ನರಾಯಪಟ್ಟಣದಲ್ಲಿರುವ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಮನೆಗೆ ಹೋಗಿದ್ದರು. ಅಲ್ಲಿ ಉಪಹಾರ ಸೇವನೆ ಬಳಿಕ ಕಾರ್ಯಕರ್ತರೊಂದಿಗೆ ಚುನಾವಣೆ ಸಂಬಂಧ ಚರ್ಚೆ ನಡೆಸಿದ್ದಾರೆ. ಬಳಿಕ ಅರಸೀಕೆರೆ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳಲಿದ್ದಾರೆ.

    ಚನ್ನರಾಯಪಟ್ಟಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಇಂದು ಶಿವಮೊಗ್ಗದಲ್ಲಿ ಮದುಭಂಗಾರಪ್ಪ ನಾಮಪತ್ರ ಸಲ್ಲಿಸಲಿದ್ದಾರೆ. ಅಲ್ಲಿಂದ ಕುಂದಾಪುರದಲ್ಲಿ ಮೀನುಗಾರರ ಸಮಾವೇಶ ಇದೆ. ಹೀಗಾಗಿ ಗೋಕರ್ಣದಲ್ಲಿ ವಾಸ್ತವ್ಯ ಮಾಡುತ್ತೇನೆ. ಇಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮೆಲ್ಲ ಅಭ್ಯರ್ಥಿಗಳು ಯಾರು ಕಣದಲ್ಲಿದ್ದಾರೆ. ಅವರೆಲ್ಲರ ಕ್ಷೇತ್ರಗಳಿಗೂ ಭೇಟಿ ನೀಡುತ್ತೇನೆ. ನಮಗೆ ಹೆಲಿಕಾಪ್ಟರ್ ಭೇಟಿ ಬಳಸುವುದಕ್ಕೆ ಬಿಜೆಪಿ-ಕೇಂದ್ರ ಸರ್ಕಾರ ತಡೆ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.

  • ಬೈಕ್ ಸವಾರರ ಮೇಲೆ ಸಂಚಾರಿ ಪೊಲೀಸರು ದರ್ಪ

    ಬೈಕ್ ಸವಾರರ ಮೇಲೆ ಸಂಚಾರಿ ಪೊಲೀಸರು ದರ್ಪ

    ಹಾವೇರಿ: ಬೈಕ್ ಸವಾರರ ಮೇಲೆ ಹಾವೇರಿ ಸಂಚಾರಿ ಠಾಣೆಯ ಪೊಲೀಸರು ದರ್ಪ ತೋರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

    ಹಾವೇರಿ ನಗರದ ಜಿ.ಎಚ್.ಕಾಲೇಜ್ ಬಳಿ ಈ ಘಟನೆ ನಡೆದಿದೆ. ಸಂಚಾರಿ ಠಾಣೆಯ ಇಬ್ಬರು ಪೊಲೀಸರಾದ ಎಂ.ಎಸ್ ಹತ್ತಿ ಮತ್ತು ಸಿ.ಎಂ ಕರ್ಜಗಿ ಎಂಬವರು ಈ ಹಲ್ಲೆ ಮಾಡಿದ್ದಾರೆ.

    ಪೊಲೀಸರ ಹೊಡೆತಕ್ಕೆ ಬೈಕ್ ಸವಾರರು ಕಕ್ಕಾಬಿಕ್ಕಿಯಾಗಿದ್ದರು. ದಾಖಲಾತಿ ಹಾಗೂ ಹೆಲ್ಮೆಟ್ ಕೇಳಿದಾಗ ಪೊಲೀಸ್ ಹಾಗೂ ಬೈಕ್ ಸವಾರರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ಪರಸ್ಪರ ಅವಾಚ್ಯ ಪದಗಳಿಂದ ನಿಂದನೆ ಮಾಡಿಕೊಂಡಿದ್ದಾರೆ. ಆಗ ಕಾನೂನು ಕೈಗೆತ್ತಿಕೊಂಡ ಪೊಲೀಸ್ ಸಿಬ್ಬಂದಿ ಸವಾರರ ಎದುರು ದರ್ಪ ಪ್ರದರ್ಶಿಸಿದ್ದಾರೆ.

    ಕೇಸ್ ದಾಖಲಿಸುವ ಬದಲು ರೌಡಿಗಳಂತೆ ಹಲ್ಲೆ ಮಾಡಿ ದರ್ಪ ಪ್ರದರ್ಶಿಸಿದ್ದು, ಜಿಲ್ಲೆಯ ಜನರು ಖಂಡಿಸಿದ್ದಾರೆ. ಹಲ್ಲೆ ನಂತರ ಪೊಲೀಸರಿಂದ ಬಿಡಿಸಿಕೊಂಡು ಬೈಕ್ ಸವಾರರು ಹೋಗಿದ್ದಾರೆ. ಪೊಲೀಸರು ಹಲ್ಲೆ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

    ಹಾವೇರಿ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೆಟ್ರೋದಲ್ಲಿ ಪ್ರಯಾಣಿಸಿ ಪರಿಶೀಲನೆ ನಡೆಸಿದ ಡಿಸಿಎಂ ಪರಮೇಶ್ವರ್

    ಮೆಟ್ರೋದಲ್ಲಿ ಪ್ರಯಾಣಿಸಿ ಪರಿಶೀಲನೆ ನಡೆಸಿದ ಡಿಸಿಎಂ ಪರಮೇಶ್ವರ್

    ಬೆಂಗಳೂರು: ಟ್ರಿನಿಟಿ ವೃತ್ತ ಸಮೀಪದ ಮೆಟ್ರೋ ಸೇತುವೆಯ ವಯಾಡಕ್ಟ್ ನಲ್ಲಿ ಬಿರುಕು ಮೂಡಿದ ಹಿನ್ನೆಲೆಯಲ್ಲಿ ಡಿಸಿಎಂ ಪರಮೇಶ್ವರ್ ಅವರು ಶನಿವಾರ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡಿ ಪರಿಶೀಲನೆ ನಡೆಸಿದರು.

    ಡಾ. ಅಂಬೇಡ್ಕರ್ ಮೆಟ್ರೋ ನಿಲ್ದಾಣದಿಂದ ಹಲಸೂರು ನಿಲ್ದಾಣದವರೆಗೆ ಪ್ರಯಾಣ ಬೆಳೆಸಿ ಡಿಸಿಎಂ ದೋಷ ಕಾಣಿಸಿಕೊಂಡ ಸ್ಥಳವನ್ನು ಪರಿಶೀಲನೆ ನಡೆಸಿದರು.

    ತಮ್ಮ ಪ್ರಯಾಣದ ವೇಳೆ ಮೆಟ್ರೋ ಪ್ರಯಾಣಿಕರೊಂದಿಗೆ ಮಾತನಾಡಿ ಮಾಹಿತಿ ಪಡೆದರು. ಅಲ್ಲದೇ ಮೆಟ್ರೋದಲ್ಲಿ ಯಾವುದೇ ದೋಷ ಇಲ್ಲ. ಅದ್ದರಿಂದಲೇ ನಾನು ಮೆಟ್ರೋದಲ್ಲೇ ಪ್ರಯಾಣಿಸುತ್ತಿದ್ದೇನೆ ಎಂದು ತಿಳಿಸಿದರು.

    ಟ್ರಿನಿಟಿ ಬಳಿಯ ಮೆಟ್ರೋ ಸೇತುವೆಯ ವಯಾಡಕ್ಟ್ ವೀಕ್ಷಿಸಿ ಬೆಂಗಳೂರು ಮೆಟ್ರೋ ಯೋಜನೆಯ ನಿರ್ದೇಶಕ ವಿಜಯ್ ಕುಮಾರ್ ಅವರಿಂದ ಮಾಹಿತಿ ಪಡೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಮೆಟ್ರೋ ಪಿಲ್ಲರ್ ನಲ್ಲಿ ಯಾವುದೇ ದೋಷವಿಲ್ಲ. ಕಾಂಕ್ರೀಟ್ ಹಾಕುವಾಗ ಹನಿಕಾಂಬ್ (ಕಾಂಕ್ರೀಟ್ ಪದರ ಟೊಳ್ಳಾಗುವುದನ್ನು ಸಿವಿಲ್ ಎಂಜಿನಿಯರಿಂಗ್ ಭಾಷೆಯಲ್ಲಿ ಹನಿಕಾಂಬ್ ಎಂದು ಕರೆಯಲಾಗುತ್ತದೆ) ಆಗಿದೆ. ಅದ್ದರಿಂದ ಯಾವುದೇ ಆತಂಕ ಬೇಡ. ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ದೆಹಲಿಯಿಂದ ಎಂಜಿನಿಯರ್ ಬಂದು ಸಲಹೆ ನೀಡಿದ್ದಾರೆ. ಇಂದು ಸಂಜೆಯಿಂದ ದುರಸ್ತಿ ಕಾರ್ಯ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv