Tag: ಪರಿಚ್ಛೇಧ 370

  • ಆರ್ಟಿಕಲ್ 370 ರದ್ದು ಭಾರತದ ಆಂತರಿಕ ವಿಚಾರ ಅಂತ ಒಪ್ಕೊಂಡ ಪಾಕ್

    ಆರ್ಟಿಕಲ್ 370 ರದ್ದು ಭಾರತದ ಆಂತರಿಕ ವಿಚಾರ ಅಂತ ಒಪ್ಕೊಂಡ ಪಾಕ್

    ಇಸ್ಲಾಮಾಬಾದ್: ಆರ್ಟಿಕಲ್ 370 ರದ್ದುಗೊಳಿಸಿದ್ದು ಭಾರತದ ಆಂತರಿಕ ವಿಚಾರ ಎಂದು 21 ತಿಂಗಳ ಬಳಿಕ ಪಾಕಿಸ್ತಾನ ಒಪ್ಪಿಕೊಂಡಿದೆ. ಪಾಕಿಸ್ತಾನದ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪಾಕ್ ವಿದೇಶಾಂಗ ಸಚಿವ ಮಹಮೂದ್ ಖುರೇಷಿ ಒಪ್ಪಿಕೊಂಡಿದ್ದಾರೆ.

    ಈ ಕುರಿತು ಪಾಕಿಸ್ತಾನದ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಖುರೇಷಿ, ಭಾರತದ ಕೇಂದ್ರ ಸರ್ಕಾರ ಜಮ್ಮು ಮತ್ತ ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದೆ. ಈ ಪ್ರಕಾರ ಆರ್ಟಿಕಲ್ 370 ಮತ್ತು 35(ಎ) ಕೂಡ ರದ್ದು ಮಾಡಲಾಗಿದೆ. ಇದು ಭಾರತ ಆಂತರಿಕ ವಿಚಾರವಾಗಿದೆ. ಆದರೆ ಈ ವಿಷಯವಾಗಿ ಸುಪ್ರೀಂ ಕೋರ್ಟ್ ನಲ್ಲಿದ್ದು, ವಿಚಾರಣೆ ನಡೆಯುತ್ತಿದೆ.

    370 ರದ್ದತಿಗೆ ನಾವು ಹೆಚ್ಚು ಪ್ರಾಮುಖ್ಯತೆ ನೀಡಲ್ಲ. 35 ಎ ರದ್ದುಗೊಂಡಿರುವ ಬಗ್ಗೆ ಚಿಂತಿತರಾಗಿದ್ದೇವೆ. ಕಾಶ್ಮೀರದ ಭೌಗೋಳಿಕ ಮತ್ತು ಜನಸಂಖ್ಯೆಯ ಸಮತೋಲನವನ್ನ ಬದಲಿಸುವ ಪ್ರಯತ್ನಗಳು ನಡೆದಿವೆ. 35ಎ ರದ್ದುಗೊಳಿಸಿದ್ದರಿಂದ ಭಾರತ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದು ಹೆಚ್ಚು ಅಂತ ಸಂದರ್ಶನದಲ್ಲಿ ಹೇಳಿದ್ದಾರೆ.

    ಆರ್ಟಿಕಲ್ 370 ರದ್ದುಗೊಂಡ ನಂತರ ಜಮ್ಮು ಕಾಶ್ಮೀರ ಕೇಂದ್ರದ ಅಧೀನಕ್ಕೆ ಒಳಪಟಿದ್ದು. ಲಡಾಕ್ ಕೇಂದ್ರಾಡಳಿತ ಪ್ರದೇಶವಾಗಿದೆ. ಈ ನಿರ್ಧಾರ ಕೈಗೊಳ್ಳುತ್ತಿದ್ದಂತೆ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಸೇರಿದಂತೆ ಸ್ಥಳೀಯ ರಾಜಕೀಯ ನಾಯಕರಾದ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ ಸೇರಿ 6 ರಾಜಕೀಯ ಪಕ್ಷಗಳು ಕೈಜೋಡಿಸಿ ಆರ್ಟಿಕಲ್ 370ಗೆ ವಿರೋಧ ವ್ಯಕ್ತಪಡಿಸಿದ್ದರು ಎಂದು ತಿಳಿಸಿದ್ದಾರೆ.

    ಪರಿಚ್ಛೇಧ 370, 35ಎ ಎಂದರೇನು?
    35(ಎ) ಪ್ರಕಾರ, 1956ರಲ್ಲಿ ಜಮ್ಮು-ಕಾಶ್ಮೀರಕ್ಕಾಗಿ ಪ್ರತ್ಯೇಕ ಸಂವಿಧಾನವನ್ನು ರಚಿಸಲಾಗಿದ್ದು, ಇದು ರಾಜ್ಯದ ಶಾಶ್ವತ ನಿವಾಸಿಗಳನ್ನು ನಿರ್ಧರಿಸುತ್ತದೆ. ಈ ವಿಧಿಯ ಪ್ರಕಾರ 1954 ಮೇ 14ಕ್ಕೂ ಮುನ್ನ ರಾಜ್ಯದಲ್ಲಿ ನೆಲೆಸಿದವರು ಅಥವಾ ಕಳೆದ 10 ವರ್ಷಗಳಿಂದ ರಾಜ್ಯದಲ್ಲಿ ನೆಲೆಸಿದ್ದು, ಕಾನೂನು ಬದ್ಧವಾಗಿ ಸ್ಥಿರಾಸ್ತಿ ಹೊಂದಿರುವವರಿಗಷ್ಟೇ ರಾಜ್ಯದ ಶಾಶ್ವತ ನಿವಾಸಿ ಹಕ್ಕು ದೊರೆಯುತ್ತದೆ.

    ಈ ವಿಧಿಯ ಪ್ರಕಾರ ಹೊರ ರಾಜ್ಯದವರು ಜಮ್ಮು-ಕಾಶ್ಮೀರದಲ್ಲಿ ಆಸ್ತಿ ಖರೀದಿಸಲು ಅಥವಾ ಸರ್ಕಾರಿ ಉದ್ಯೋಗ ಹೊಂದಲು ಅವಕಾಶವಿಲ್ಲ. 35 (ಎ) ವಿಧಿಯ ಮೂಲ ನಿಯಮವು ಮಹಿಳೆಯರ ವಿಚಾರದಲ್ಲಿ ತಾರತಮ್ಯ ಹೊಂದಿದ್ದು, ಅದರ ಪ್ರಕಾರ ಹೊರ ರಾಜ್ಯದ ವ್ಯಕ್ತಿಯನ್ನು ವಿವಾಹವಾಗುವ ಜಮ್ಮು-ಕಾಶ್ಮೀರ ಮಹಿಳೆ ಶಾಶ್ವತ ನಿವಾಸಿ ಹಕ್ಕನ್ನು ಕಳೆದುಕೊಳ್ಳುತ್ತಾಳೆ. ಆದರೆ ಪರುಷರು ಬೇರೆ ರಾಜ್ಯದ ಮಹಿಳೆಯನ್ನು ವಿವಾಹವಾದರೆ ಆ ಪುರಷನ ಹಕ್ಕಿಗೆ ಯಾವುದೇ ಧಕ್ಕೆ ಆಗುವುದಿಲ್ಲ. 2002 ರಲ್ಲಿ ಜಮ್ಮು-ಕಾಶ್ಮೀರ ಹೈಕೋರ್ಟ್ ಐತಿಹಾಸಿಕ ತೀರ್ಪಿನಲ್ಲಿ ಇಂತಹ ಹಕ್ಕನ್ನು ಮಹಿಳೆ ಕಳೆದುಕೊಳ್ಳುವುದಿಲ್ಲ. ಆದರೆ ಈ ದಂಪತಿಗೆ ಜನಿಸುವ ಮಕ್ಕಳಿಗೆ ಶಾಶ್ವತ ನಿವಾಸಿ ಹಕ್ಕು ಇರುವುದಿಲ್ಲ ಎಂದು ತೀರ್ಪು ನೀಡಿತ್ತು.

  • ಕೇಂದ್ರದ ಅಧೀನದಲ್ಲಿ ಜಮ್ಮು-ಕಾಶ್ಮೀರ

    ಕೇಂದ್ರದ ಅಧೀನದಲ್ಲಿ ಜಮ್ಮು-ಕಾಶ್ಮೀರ

    -ವಿಶೇಷ ಅಧಿಕಾರ, ಸ್ಥಾನಮಾನ ರದ್ದು
    -ಲಡಾಕ್ ಕೇಂದ್ರಾಡಳಿತ ಪ್ರದೇಶ

    ನವದೆಹಲಿ: ಕೇಂದ್ರ ಸರ್ಕಾರ ಇಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಜಮ್ಮು ಕಾಶ್ಮೀರ ಕೇಂದ್ರದ ಅಧೀನಕ್ಕೆ ಒಳಪಡಲಿದೆ. ಜಮ್ಮು-ಕಾಶ್ಮೀರ ವಿಧಾನಸಭೆಯನ್ನು ಒಳಗೊಂಡಿದ್ದರೂ ಕೇಂದ್ರದ ಅಧೀನದಲ್ಲಿ ಬರಲಿದೆ. ಲಡಾಕ್ ಕೇಂದ್ರಾಡಳಿತ ಪ್ರದೇಶವಾಗಲಿದೆ. ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ಮತ್ತು ಅಧಿಕಾರವನ್ನು ರದ್ದುಗೊಳಿಸಲಾಗಿದೆ.

    ರಾಜ್ಯಸಭೆಯಲ್ಲಿ ಕೇಂದ್ರಗೃಹ ಸಚಿವ ಅಮಿತ್ ಶಾ ಪರಿಚ್ಛೇಧ 370 ಮತ್ತು 35(ಎ) ರದ್ದುಗೊಳಿಸಲಾಗುವುದು ಎಂದು ಹೇಳುತ್ತಿದ್ದಂತೆ ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿ ಗಲಾಟೆ ಆರಂಭಿಸಿದರು. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ, ಅಧಿಕಾರ ರದ್ದುಗೊಳಿಸಿದ ಆದೇಶಕ್ಕೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.

    ಒಂದು ವೇಳೆ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾಗದಿದ್ದರೂ, ಸುಗ್ರೀವಾಜ್ಞೆ ಇರೋದ್ರಿಂದ ಜಮ್ಮು-ಕಾಶ್ಮೀರ ರಾಜ್ಯವಾಗಿರಲ್ಲ. ಮಸೂದೆಗೆ ರಾಷ್ಟ್ರಪತಿಗಳ ಅಂಕಿತವಾದ ಕ್ಷಣದಿಂದ ಪರಿಚ್ಛೇಧ 370(1) ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನಗಳು ಕೊನೆಗೊಳ್ಳಲಿವೆ. ಇಂದು ನಾನು ತೆಗೆದುಕೊಂಡು ಬಂದಿರುವ ನಾಲ್ಕು ಬಿಲ್ ಕಾಶ್ಮೀರಕ್ಕೆ ಸಂಬಂಧಿಸಿದೆ. ಪರಿಚ್ಛೇಧ 370 ಒಂದಲ್ಲ ಒಂದು ದಿನ ರದ್ದುಗೊಳಿಸಬೇಕಿತ್ತು. ಆದರೆ ಕೆಲವರ ರಾಜಕೀಯ ಹಿತಾಸಕ್ತಿಗಳಿಂದ ಸಾಧ್ಯವಾಗಿರಲಿಲ್ಲ. ಕೆಲವರು ವೋಟ್ ಬ್ಯಾಂಕ್ ಗಾಗಿ ರಾಜಕಾರಣ ಮಾಡುತ್ತಾರೆ. ನಮಗೆ ವೋಟ್ ಬ್ಯಾಂಕ್ ಬಗ್ಗೆ ಚಿಂತೆ ಇಲ್ಲ ಎಂದು ವಿಪಕ್ಷ ನಾಯಕರನ್ನು ಕುಟುಕಿದರು.

    ಪರಿಚ್ಛೇಧ 370 ರದ್ದಾದ ಬಳಿಕ ಜಮ್ಮು-ಕಾಶ್ಮೀರ ವಿಧಾನ ಮಂಡಲವನ್ನು ಒಳಗೊಂಡಿದ್ದರೂ, ಕೇಂದ್ರದ ಅಧೀನದಲ್ಲಿಯೇ ಇರಲಿದೆ. ಲಡಾಕ್ ಮಂತ್ರಿ ಮಂಡಲ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಲಿದೆ ಎಂದು ಅಮಿತ್ ಶಾ ವಿವರಿಸಿದರು.

    ಅಮಿತ್ ಶಾ ಮಾತು ಆರಂಭಿಸುತ್ತಿದ್ದಂತೆಯೇ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ವಿರೋಧ ವ್ಯಕ್ತಪಡಿಸಿದರು. ಮಸೂದೆಗೂ ಮಂಡನೆಗೂ ಮುನ್ನ ಚರ್ಚೆ ನಡೆಯಬೇಕು. ಕಾಶ್ಮೀರದಲ್ಲಿ ಯುದ್ಧದ ಸನ್ನಿವೇಶ ನಿರ್ಮಾಣವಾಗಿದ್ದು, ಜನತೆ ಭಯಗೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳನ್ನು ಸೇರಿದಂತೆ ಸ್ಥಳೀಯ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಮುಂಜಾಗ್ರತಾ ಕ್ರಮವಾಗಿ ಜಮ್ಮು-ಕಾಶ್ಮೀರದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಸಾಮಾನ್ಯ ದಿನಕ್ಕಿಂತ ಕಾಶ್ಮೀರದಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜನೆ ಮಾಡಲಾಗಿತ್ತು. ಇಂದಿನ ಕಲಾಪಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಸುಮಾರು 40 ನಿಮಿಷಗಳ ಸಂಪುಟ ಸಭೆ ನಡೆಸಲಾಯ್ತು. ಜಮ್ಮು ಮತ್ತು ಕಾಶ್ಮೀರದ ಕುರಿತು ತೆಗೆದುಕೊಳ್ಳುತ್ತಿರುವ ನಿರ್ಣಯದ ಬಗ್ಗೆ ಮೋದಿಯವರು ತಮ್ಮ ಮಿತ್ರಪಕ್ಷಗಳ ನಾಯಕರೊಂದಿಗೆ ಚರ್ಚೆ ನಡೆಸಿದ್ದರು.