Tag: ಪರಿಕ್ಕರ್

  • ಮನಸಿದ್ದರೆ ಯಾವ ಕಾಯಿಲೆ ಬೇಕಾದ್ರೂ ಗೆಲ್ಲಬಹುದು: ಪರಿಕ್ಕರ್

    ಮನಸಿದ್ದರೆ ಯಾವ ಕಾಯಿಲೆ ಬೇಕಾದ್ರೂ ಗೆಲ್ಲಬಹುದು: ಪರಿಕ್ಕರ್

    ಪಣಜಿ: ಮನಸ್ಸಿದ್ದರೆ ಯಾವ ಕಾಯಿಲೆ ಬೇಕಾದರೂ ಗೆಲ್ಲಬಹುದು ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

    ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಮನೋಹರ್ ಪರಿಕ್ಕರ್ ಅವರು ಮನಸ್ಸು ಒಂದಿದ್ದರೆ ಯಾವ ಕಾಯಿಲೆಯನ್ನು ಬೇಕಾದರೂ ಗೆಲ್ಲಬಹುದು ಎಂದು ಟ್ವೀಟ್ ಮಾಡಿದ್ದಾರೆ. ಕೆಲ ತಿಂಗಳಿನಿಂದ ಅನಾರೋಗ್ಯದಲ್ಲಿರುವ ಪರಿಕ್ಕರ್ ಜನವರಿ 31 ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಗೋವಾದ ಉಪ ಸ್ಪೀಕರ್ ಪ್ರತಿಕ್ರಿಯಿಸಿ, ಪರಿಕ್ಕರ್ ಅವರ ಆರೋಗ್ಯ ಉತ್ತಮವಾಗಿಲ್ಲ. ದೇವರ ಆಶೀರ್ವಾದದಿಂದ ಅವರು ಬದುಕಿದ್ದಾರೆ. ಅವರಿಗೆ ಏನಾದರೂ ಆದರೆ ಗೋವಾದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಲಿದೆ ಎಂದು ತಿಳಿಸಿದ್ದಾರೆ.

    ಮೆದೋಜೀರಕ ಗ್ರಂಥಿ ಸಮಸ್ಯೆಯಿಂದ ಬಳಲುತ್ತಿರುವ ಪರಿಕ್ಕರ್ ಕೆಲ ವರ್ಷಗಳಿಂದ ಪಣಜಿ, ಮುಂಬೈ, ದೆಹಲಿ, ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆದಿದ್ದಾರೆ.

    ಹಣಕಾಸು ಖಾತೆಯನ್ನು ನಿಭಾಯಿಸುತ್ತಿರುವ ಮನೋಹರ್ ಪರಿಕ್ಕರ್ ಅವರು ಕಳೆದ ವಾರ ಗೋವಾ ವಿಧಾನಸಭೆಗೆ ಮೂಗಿಗೆ ಪೈಪ್, ತಲೆಗೆ ಟೋಪಿ ಹಾಕಿಕೊಂಡು ಆಗಮಿಸಿದ್ದರು. ಬಳಿಕ ಮೆಲು ಧ್ವನಿಯಲ್ಲಿಯೇ ಬಜೆಟ್ ಮಂಡಿಸಿದರು. ಹೀಗಾಗಿ ವಿಧಾನಸಭೆಯ ಸದಸ್ಯರು ಶಾಂತವಾಗಿ ಬಜೆಟ್ ಭಾಷಣವನ್ನು ಆಲಿಸಿದ್ದರು.

    ಪರಿಕ್ಕರ್ ಅವರು ತಮ್ಮ ಭಾಷಣದ ಮಧ್ಯದಲ್ಲಿ ಹಲವು ಬಾರಿ ಸಿಬ್ಬಂದಿಗೆ ಕೇಳಿ ನೀರು ಪಡೆದು ಬಜೆಟ್ ಮಂಡನೆಯನ್ನು ಪೂರ್ಣಗೊಳಿಸಿದರು. ಅನಾರೋಗ್ಯ ಪರಿಸ್ಥಿತಿಯಲ್ಲೂ ಬಜೆಟ್ ಮಂಡನೆ ಮೂಲಕ ಕರ್ತವ್ಯ ನಿರ್ವಹಿಸಿದ ಮನೋಹರ್ ಪರಿಕ್ಕರ್ ಅವರಿಗೆ ಪಕ್ಷಾತೀತವಾಗಿ ಅಭಿನಂದನೆ ಸಲ್ಲಿಸಿದ್ದರು.

    ಗೋವಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೋಡನ್ಕರ್, ಮೊದಲು ಹುಷಾರಾಗಿ ಬನ್ನಿ, ಆಮೇಲೆ ಜೋಷ್ ಕುರಿತಾಗಿ ಮಾತನಾಡಿ ಎಂದು ಕಳೆದ ಸೋಮವಾರ ವ್ಯಂಗ್ಯವಾಡಿದ್ದರು. ಬಜೆಟ್ ಮಂಡನೆಗೂ ಮುನ್ನ ಮಹೋಹರ್ ಪರಿಕ್ಕರ್ ಅವರು, ನಾನು ಅತ್ಯಂತ ಜೋಷ್‍ನಿಂದಲೇ ಬಜೆಟ್ ಮಂಡಿಸುತ್ತಿದ್ದೇನೆ ಎಂದು ಹೇಳುವ ಮೂಲಕ ಗಿರೀಶ್ ಚೋಡನ್ಕರ್ ಅವರಿಗೆ ತಿರುಗೇಟು ನೀಡಿದ್ದರು. ನನ್ನ ಕೊನೆ ಉಸಿರು ಇರುವವರೆಗೂ ರಾಜ್ಯದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಬಜೆಟ್ ಮಂಡನೆ ವೇಳೆ ಭಾವನಾತ್ಮಕವಾಗಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಅಪ್ಪ-ಮಕ್ಕಳಿಗೆ ಮಹದಾಯಿ ಸಮಸ್ಯೆ ಬಗೆಹರಿಸೋಕೆ ಇಷ್ಟ ಇಲ್ಲ- ಎಚ್‍ಡಿಕೆ, ದೇವೇಗೌಡರ ವಿರುದ್ಧ ಬಿಎಸ್‍ವೈ ಕಿಡಿ

    ಅಪ್ಪ-ಮಕ್ಕಳಿಗೆ ಮಹದಾಯಿ ಸಮಸ್ಯೆ ಬಗೆಹರಿಸೋಕೆ ಇಷ್ಟ ಇಲ್ಲ- ಎಚ್‍ಡಿಕೆ, ದೇವೇಗೌಡರ ವಿರುದ್ಧ ಬಿಎಸ್‍ವೈ ಕಿಡಿ

    ಹುಬ್ಬಳ್ಳಿ: ಮಹದಾಯಿ ವಿಷಯದಲ್ಲಿ ಕಾಂಗ್ರೆಸ್ ನಾಟಕ ಮಾಡುತ್ತಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಬೇಜವಾಬ್ದಾರಿ ಮನುಷ್ಯ. ಅಪ್ಪ-ಮಕ್ಕಳಿಗೆ ಮಹದಾಯಿ ಸಮಸ್ಯೆ ಬಗೆಹರಿಸೋಕೆ ಇಷ್ಟ ಇಲ್ಲ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿಸ್ ಯಡಿಯೂರಪ್ಪ ಎಚ್‍ಡಿ ಕುಮಾರಸ್ವಾಮಿ ಹಾಗೂ ದೇವೇಗೌಡರ ವಿರುದ್ಧ ಕಿಡಿ ಕಾರಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹದಾಯಿ ನೀರಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೆ. 2008 ರಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅನುಮತಿ ನೀಡಿದ್ದರು. ಕಾಂಗ್ರೆಸ್ ಸರ್ಕಾರ 2012 ರಲ್ಲಿ ಗೋವಾ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಆಗ ಯಾಕೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಮಧ್ಯಪ್ರವೇಶ ಮಾಡಲಿಲ್ಲ ಅಂತ ಕಿಡಿ ಕಾರಿದ್ರು.

    ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಗೋವಾ ಮುಖ್ಯಮಂತ್ರಿ ಹೇಳಿದ್ದಾರೆ. ಗೋವಾ ಸಿಎಂ ಅವರಿಗೆ ಯಾಕೆ ಪತ್ರ ಬರೆಯಬೇಕು ಎಂಬುದನ್ನು ನಾನು ಹೇಳುವುದು ಸರಿಯಲ್ಲ. ಅವರು ನೀರು ಕೊಡಲು ಒಲವು ತೋರಿದ್ದಾರೆ. ಹೀಗಿರುವಾಗ ಯಾರಿಗೆ ಪತ್ರ ಬರೆದಿದ್ದಾರೆ ಎಂಬುದು ಮುಖ್ಯವಲ್ಲ ಅಂತ ಹೇಳಿದ್ರು.

    ಈ ಹಿಂದೆ ನಮ್ಮ ಮುಖ್ಯಮಂತ್ರಿ ಹಲವು ಸಾರಿ ಹೇಳುತ್ತಾ ಬಂದಿದ್ದಾರೆ. ನೀವು ಗೋವಾ ಸಿಎಂ ಅವರನ್ನು ಒಪ್ಪಿಸಿ ಎಂದಿದ್ದರು. ನಾವು ಈಗ ಗೋವಾ ಸಿಎಂ ಅವರನ್ನು ಒಪ್ಪಿಸಿದ್ದೇವೆ. ಹೀಗಾಗಿ ಅವರು ಮಾತುಕತೆಗೆ ಒಪ್ಪಿ ನಮಗೆ ಲಿಖಿತವಾಗಿ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಸರ್ಕಾರ ನೀರಿನ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಅಂತ ಸಿಡಿಮಿಡಿಗೊಂಡ್ರು.

    2005-12 ರವರೆಗೆ ಗೋವಾ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಅವಾಗ ಯಾಕೆ ಕಾಂಗ್ರೆಸ್ ಮಹದಾಯಿ ಸಮಸ್ಯೆ ಇತ್ಯರ್ಥಪಡಿಸಲಿಲ್ಲ. ಆವಾಗ್ಯಾಕೆ ಇವರು ರಾಜಕೀಯ ದೊಂಬರಾಟ ಮಾಡಿದ್ರು? ಆದ್ರೂ ನಮ್ಮ ಪ್ರಯತ್ನ ಮಾಡಿದ್ದೇವೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಗೋವಾ ಸಿಎಂ ಮನವೊಲಿಸಿದ್ದೇವೆ. ಗೋವಾ ಸಿಎಂ ನಮಗೆ ಒಪ್ಪಿಗೆ ನೀಡಿ ಪತ್ರ ನೀಡಿದ್ದಾರೆ. ಈ ಪತ್ರವನ್ನು ಟ್ರಿಬ್ಯುನಲ್ ಮುಂದೆ ತೆಗೆದುಕೊಂಡು ಹೋಗಿ ಸಮಸ್ಯೆ ಬಗೆಹರಿಯುತ್ತೆ. ನಿಮ್ಮಿಂದ 15 ವರ್ಷದಿಂದ ಆಗದೇ ಇರೋ ಕೆಲಸ ನಾವು ಮಾಡಿದ್ದೇವೆ. ಈಗಲಾದ್ರೂ ಸಮಸ್ಯೆ ಇತ್ಯರ್ಥ ಮಾಡೋಕೆ ಒಟ್ಟಾಗಿ ಪ್ರಯತ್ನ ಮಾಡೋಣ ಅಂತ ಕಾಂಗ್ರೆಸ್ಸಿಗರಿಗೆ ಬಿಎಸ್‍ವೈ ಸಲಹೆಯಿತ್ತರು.

  • ಗೋವಾದಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ – 40 ವರ್ಷ ನೆಲೆಸಿದ್ದ ಮನೆಗಳ ಧ್ವಂಸ

    ಗೋವಾದಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ – 40 ವರ್ಷ ನೆಲೆಸಿದ್ದ ಮನೆಗಳ ಧ್ವಂಸ

    ಕಾರವಾರ: ಮಹದಾಯಿ ವಿಚಾರದಲ್ಲಿ ಡಬಲ್ ಗೇಮ್ ಆಡ್ತಿರುವ ಗೋವಾ ಈಗ ಅಲ್ಲಿನ ಕನ್ನಡಿಗರಿಗೆ ಕಿರುಕುಳ ನೀಡುತ್ತಿದೆ. ವಾಸ್ಕೋದಾ ಬೈನಾ ಬೀಚ್‍ನಲ್ಲಿ 40 ವರ್ಷಗಳಿಂದ ನೆಲೆ ಕಂಡುಕೊಂಡಿದ್ದ ನೂರಾರು ಕನ್ನಡಿಗರ ಬದುಕು ಮತ್ತೆ ಬೀದಿಗೆ ಬಿದ್ದಿದೆ.

    ಕನ್ನಡಿಗರ ಮನೆ ನೆಲಸಮಗೊಳಿಸಲು ಸಿಎಂ ಮನೋಹರ್ ಪರಿಕ್ಕರ್ ಆದೇಶ ಕೊಟ್ಟಿದ್ದು, ಅಧಿಕಾರಿಗಳು ಈಗ 55 ಕನ್ನಡಿಗರ ಮನೆಯನ್ನ ಧ್ವಂಸ ಮಾಡಿದ್ದಾರೆ.

    ಮನೆಯನ್ನ ನೆಲಸಮ ಮಾಡದಂತೆ ಕನ್ನಡಿಗರು ಕಣ್ಣೀರಿಟ್ಟು ಅಂಗಲಾಚಿದರೂ ಅಧಿಕಾರಿಗಳು ದಯೆ ತೋರಿಲ್ಲ. ಹೀಗಾಗಿ ಬೈನಾ ಬೀಚ್‍ನ ಕನ್ನಡಿಗರು ತುತ್ತು ಅನ್ನಕ್ಕೂ ಪರದಾಡ್ತಿದ್ದಾರೆ.

    2004ರಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ 380, ನಂತರ 2014ರಲ್ಲಿ 75 ಮನೆ ಹಾಗೂ 2015ರಲ್ಲಿ 102 ಮನೆಗಳನ್ನು ತೆರವುಗೊಳಿಸಲಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಗೋವಾ ಸಿಎಂಗೆ ಪತ್ರ ಬರಿಯುತ್ತೇನೆ ಅಂತ ಹೇಳಿದ್ದಾರೆ.

    ಬೆಳಗಾವಿಯಲ್ಲಿ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕನ್ನಡಿಗರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಎಂದರು. ದೆಹಲಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪರಿಕ್ಕರ್ ಗೆ ಪತ್ರ ಬರೆಯುತ್ತೇನೆ ಎಂದರು.

    ಒಟ್ಟಿನಲ್ಲಿ ರಾಜ್ಯದ ನಾಯಕರೆಲ್ಲಾ ಪತ್ರ, ಪತ್ರ ಅಂತಿದ್ದಾರೆ ವಿನಃ ಯಾರೂ ನೆರವಿಗೆ ಬರ್ತಿಲ್ಲ ಎಂದು ಗೋವಾ ಕನ್ನಡಿಗರು ಗೋಳಾಡುತ್ತಿದ್ದಾರೆ.

     

  • ಗೋವಾದಲ್ಲಿ ಇಂದಿನಿಂದ ಪರಿಕ್ಕರ್ ಆಡಳಿತ

    ಗೋವಾದಲ್ಲಿ ಇಂದಿನಿಂದ ಪರಿಕ್ಕರ್ ಆಡಳಿತ

    ಪಣಜಿ: ಬಹುಮತ ಸಾಬೀತು ಪರೀಕ್ಷೆಯಲ್ಲಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಗೆದ್ದಿದ್ದಾರೆ. 22 ಮಂದಿ ಶಾಸಕರು ಮನೋಹರ್ ಪರಿಕ್ಕರ್ ಅವರನ್ನು ಬೆಂಬಲಿಸುವ ಮೂಲಕ ಗೋವಾದಲ್ಲಿ ಅಧಿಕೃತವಾಗಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿದೆ.

    ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನವನ್ನು ಗೆದ್ದಿದ್ದರೆ ಬಿಜೆಪಿ 13 ಸ್ಥಾನವನ್ನು ಗೆದ್ದುಕೊಂಡಿತ್ತು. ಸರಳ ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದ್ದು, ಇಷ್ಟು ಸೀಟ್‍ಗಳು ಯಾವುದೇ ಪಕ್ಷಕ್ಕೆ ಸಿಗದ ಹಿನ್ನೆಲೆಯಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿತ್ತು.

    ಈಗ ಎಂಜಿಪಿ, ಜಿಎಫ್‍ಪಿ ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ರಚಿಸಿಕೊಂಡಿದೆ. ಇಬ್ಬರು ಪಕ್ಷೇತರರು ಮತ್ತು ಓರ್ವ ಎನ್‍ಸಿಪಿ ಶಾಸಕರ ಬೆಂಬಲ ಸೂಚಿಸಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಏರಿದೆ.

    ಅತೀ ದೊಡ್ಡ ಪಕ್ಷವಾಗಿದ್ದರೂ ಸರ್ಕಾರ ರಚನೆಗೆ ಆಹ್ವಾನ ನೀಡಿರಲಿಲ್ಲ ಎಂದು ರಾಜ್ಯಪಾಲರ ನಡೆಯನ್ನು ದೂರಿ ಕಾಂಗ್ರೆಸ್ ಸುಪ್ರೀಂಕೋರ್ಟ್ ಕದ ತಟ್ಟಿತ್ತು. ಸುಪ್ರೀಂ ಕಾಂಗ್ರೆಸ್ ಅರ್ಜಿಯನ್ನು ಮಾನ್ಯ ಮಾಡದೇ 48 ಗಂಟೆಯ ಒಳಗಡೆ ಬಹುಮತ ಸಾಬೀತುಪಡಿಸುವಂತೆ ಮಂಗಳವಾರ ಬಿಜೆಪಿಗೆ ಸೂಚಿಸಿತ್ತು.

    ಇದನ್ನೂ ಓದಿ: ನಾಲ್ಕನೇಯ ಬಾರಿ ಗೋವಾ ಸಿಎಂ ಆದ ಪರಿಕ್ಕರ್: ಪ್ರಮಾಣವಚನದ ವೇಳೆ ಸಣ್ಣ ಎಡವಟ್ಟು