Tag: ಪರಾರಿ

  • ಮದ್ವೆಯಾಗಿ ಕೆಲವೇ ನಿಮಿಷಗಳಲ್ಲಿ ಪತಿಯ ಮುಂದೆಯೇ ಪ್ರಿಯಕರನ ಜೊತೆ ವಧು ಎಸ್ಕೇಪ್!

    ಮದ್ವೆಯಾಗಿ ಕೆಲವೇ ನಿಮಿಷಗಳಲ್ಲಿ ಪತಿಯ ಮುಂದೆಯೇ ಪ್ರಿಯಕರನ ಜೊತೆ ವಧು ಎಸ್ಕೇಪ್!

    ಲಕ್ನೋ: ಮದುವೆಯಾಗಿ ಕೆಲವೇ ನಿಮಿಷಗಳಲ್ಲಿ ನೋಡನೋಡುತ್ತಿದ್ದಂತೆ ವರನ ಮುಂದೆ ವಧು ಪ್ರಿಯಕರನ ಜೊತೆ ಓಡಿ ಹೋದ ಘಟನೆ ಉತ್ತರ ಪ್ರದೇಶದ ಸುಲ್ತಾನ್‍ಪುರ್ ನ ಕೋತ್ವಾಲಿಯಲ್ಲಿ ನಡೆದಿದೆ.

    ವಧು ಅದ್ಧೂರಿಯಾಗಿ ಮದುವೆಯಾದ ಮೇಲೆ ತನ್ನ ತವರು ಮನೆಯನ್ನು ಬಿಟ್ಟು ಪತಿಯ ಮನೆಗೆ ಕಾರಿನಲ್ಲಿ ಹೋಗುತ್ತಿದ್ದಳು. ಆ ಕಾರಿನ ಹಿಂದೆ ಕುಟುಂಬದವರು ಹಾಗೂ ಸಂಬಂಧಿಕರು ಕೂಡ ಹೋಗುತ್ತಿದ್ದರು.

    ಕಾರಿನಲ್ಲಿ ಹೋಗುತ್ತಿದ್ದಾಗ ಕೆಲವೇ ನಿಮಿಷದಲ್ಲಿ ವಧು ನನಗೆ ತಲೆನೋವು ಆಗುತ್ತಿದೆ ಹಾಗೂ ವಾಂತಿ ಬರುವ ಹಾಗೇ ಆಗುತ್ತಿದೆ ಎಂದು ಸುಳ್ಳು ಹೇಳಿ ಕಾರನ್ನು ನಿಲ್ಲಿಸಿದ್ದಾಳೆ. ನಂತರ ಕಾರಿನಿಂದ ಇಳಿದು ಫೋನಿನಲ್ಲಿ ಯಾರ ಜೊತೆ ಮಾತನಾಡಿದ್ದಾಳೆ.

    ತನ್ನ ಪತ್ನಿಯ ಆರೋಗ್ಯದ ಬಗ್ಗೆ ವಿಚಾರಿಸಲು ವರ ಕಾರಿನಿಂದ ಇಳಿದಿದ್ದಾನೆ. ಆಗ ವಧು ವರನಲ್ಲಿ ನಾನು ಬರುತ್ತೇನೆ ನೀವು ಈಗ ಕಾರಿನಲ್ಲಿ ಕುಳಿತುಕೊಳ್ಳಿ ಎಂದಿದ್ದಾಳೆ. ತನ್ನ ಪತ್ನಿಯ ಮಾತನ್ನು ಒಪ್ಪಿ ವರ ಕಾರಿನಲ್ಲಿ ಕುಳಿತುಕೊಂಡಿದ್ದಾನೆ.

    ವಧು ಈಗ ಬರುತ್ತಾಳೆ ಎಂದು ವರ ಕಾರಿನಲ್ಲಿ ಕುಳಿತ್ತಿದ್ದರೆ ಆ ಕ್ಷಣದಲ್ಲಿ ಆಕೆಯ ಪ್ರಿಯಕರ ಬೈಕಿನಲ್ಲಿ ಬಂದಿದ್ದಾನೆ. ಪ್ರಿಯಕರ ಬಂದಿದ್ದೆ ತಡ ಆತನ ಬೈಕಿನಲ್ಲಿ ಕುಳಿತು ಇಬ್ಬರು ಪರಾರಿಯಾಗಿದ್ದಾರೆ. ಕಣ್ಣ ಮುಂದೆಯೇ ಈ ಘಟನೆ ನೋಡಿದ ಸಂಬಂಧಿಕರು ಒಂದು ಕ್ಷಣ ದಂಗಾಗಿದ್ದಾರೆ.

    ನಂತರ ವರ, ಸಂಬಂಧಿಕರು ವಧುವಿನ ಪ್ರಿಯಕರನ ಮನೆಗೆ ಹೋಗಿದ್ದಾರೆ. ಅಲ್ಲದೇ ಪೊಲೀಸರಿಗೂ ಕರೆ ಮಾಡಿ ಘಟನೆ ಬಗ್ಗೆ ವಿವರಿಸಿದ್ದಾರೆ. ಈ ವೇಳೆ ವಧುವಿನ ಪೋಷಕರು ಪ್ರಿಯಕರನ ವಿರುದ್ಧ ಕಿಡ್ನಾಪ್ ದೂರನ್ನು ನೀಡಿದ್ದಾರೆ. ಆದರೆ ಪೊಲೀಸರು ಇದುವರೆಗೂ ಕೇಸನ್ನು ದಾಖಲಿಸಿಕೊಳ್ಳಲಿಲ್ಲ ಎಂದು ವರದಿಯಾಗಿದೆ.

  • ಜೀಪು ಹರಿದು ಮನೆ ಅಂಗಳದಲ್ಲಿ ಆಡುತ್ತಿದ್ದ ಕಂದಮ್ಮ ಸಾವು!

    ಜೀಪು ಹರಿದು ಮನೆ ಅಂಗಳದಲ್ಲಿ ಆಡುತ್ತಿದ್ದ ಕಂದಮ್ಮ ಸಾವು!

    ವಿಜಯಪುರ: ಜೀಪ್ ಹತ್ತಿ ಇಳಿದ ಪರಿಣಾಮ ಮನೆಯ ಮುಂದೆ ಆಟವಾಡುತ್ತಿದ್ದ ಮಗುವೊಂದು ಮೃತಪಟ್ಟ ಘಟನೆ ವಿಜುಯಪುರ ನಗರ ಹೊರ ವಲಯದ ಬಾರಾಕುಟ್ರೆ ತಾಂಡಾದಲ್ಲಿ ನಡೆದಿದೆ.

    ಅಮನ್ ಕಾಂತು ರಾಠೋಡ (3) ಮೃತ ಕಂದಮ್ಮ. ತಕ್ಷಣವೇ ಚಾಲಕ ಜೀಪ್ ಸಮೇತ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ.

    ಬಾರಾಕುಟ್ರೆ ತಾಂಡದ ಅಮನ್ ತನ್ನ ಮನೆಯ ಮುಂದೆ ಆಟವಾಡುತ್ತಿದ್ದ. ಅಮನ್ ಆಟವಾಡುತ್ತಿರುವುದನ್ನು ಗಮನಿಸದ ಚಾಲಕ ಜೀಪ್ ಅಮನ್ ಮೇಲೆ ಹಾಯಿಸಿದ್ದಾನೆ. ಕೆಳಗೆ ಬಿದ್ದಿದ್ದ ಅಮನ್ ತಲೆ ಮೇಲೆ ಜೀಪ್ ಹತ್ತಿಹೋಗಿದ್ದು, ಸ್ಥಳದಲ್ಲಿ ಬಾಲಕ ಅಮನ್ ಮೃತಪಟ್ಟಿದ್ದಾನೆ. ತನ್ನ ತಪ್ಪು ಗಮನಕ್ಕೆ ಬರುತ್ತಿದ್ದಂತೆ ಚಾಲಕ ಜೀಪನ್ನು ವೇಗವಾಗಿ ಚಾಲನೆ ಮಾಡಿ ಪರಾರಿಯಾಗಿದ್ದಾನೆ.

    ಘಟನೆಯು 15 ನಿಮಿಷ ತಡವಾಗಿ ಪೋಷಕರು ಗಮನಕ್ಕೆ ಬಂದಿದ್ದು, ಈ ಹೊತ್ತಿನಲ್ಲಿ ಚಾಲಕ ಪರಾರಿಯಾಗಿದ್ದ. ಈ ಕುರಿತು ಮೃತ ಅಮನ್ ಪೋಷಕರು ಜೀಪ್ ಚಾಲಕನ ವಿರುದ್ಧ ವಿಜಯಪುರ ನಗರದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  • ಹದಿ-ಹರೆಯದ ವಯಸ್ಸಲ್ಲಿ ಪ್ರೀತಿ ಪ್ರೇಮದ ಹುಚ್ಚು- ಒಂದೇ ಜಿಲ್ಲೆಯಿಂದ ಪರಾರಿಯಾದವರು 233 ಮಂದಿ!

    ಹದಿ-ಹರೆಯದ ವಯಸ್ಸಲ್ಲಿ ಪ್ರೀತಿ ಪ್ರೇಮದ ಹುಚ್ಚು- ಒಂದೇ ಜಿಲ್ಲೆಯಿಂದ ಪರಾರಿಯಾದವರು 233 ಮಂದಿ!

    ಚಿಕ್ಕಬಳ್ಳಾಪುರ: ಹದಿಹರೆಯದ ವಯಸ್ಸು, ಹುಚ್ಚು ಕೋಡಿ ಮನಸ್ಸು, ಪ್ರೀತಿ, ಪ್ರೇಮ, ಎಂದು ಪರಾರಿಯಾದವರೇ ಹೆಚ್ಚು, ಅದು ಒಬ್ಬರಲ್ಲ ಇಬ್ಬರಲ್ಲ, ಬರೋಬ್ಬರಿ ಕಳೆದ 5 ವರ್ಷಗಳಲ್ಲಿ 233ಕ್ಕೂ ಹೆಚ್ಚು ಮಂದಿ ಜಿಲ್ಲೆಯಿಂದ ಕಾಣೆಯಾಗಿದ್ದಾರೆ. ವಿಚಿತ್ರ ಅಂದ್ರೆ ಆಕರ್ಷಣೆಯ ಅಮಲಿನಲ್ಲಿ ಪ್ರೀತಿ ಪ್ರೇಮ ಅಂತ ಕಾಣೆಯಾದ 101 ಮಂದಿ ಇದುವರೆಗೂ ಪತ್ತೆಯಾಗಲೇ ಇಲ್ಲ ಅನ್ನೋದು ಅಘಾತಕಾರಿ ಸಂಗತಿ.

    5 ವರ್ಷಗಳಲ್ಲಿ 233 ಕ್ಕೂ ಹೆಚ್ಚು ಮಕ್ಕಳ ನಾಪತ್ತೆ:
    ಹದಿಹರೆಯದ ವಯಸ್ಸು, ಮೀಸೆ ಮೂಡೋ ವಯಸ್ಸು, ಪ್ರೀತಿಯೆಂಬ ಆಕರ್ಷಣೆಯತ್ತ ಸೆಳೆಯೋ ಮನಸ್ಸು. ನಲ್ಲ ನಲ್ಲೆಯ ಜೊತೆ ಪ್ರಪಂಚ ಸುತ್ತೋ ಕನಸು. ಹೌದು ವಯಸ್ಸು 12-13 ಆದರೆ ಸಾಕು ಈಗ ಪ್ರೀತಿ ಎನ್ನುವ ಮಾಯೆ ಹದಿ ಹರೆಯದ ಅಪ್ರಾಪ್ತ ವಯಸ್ಸಿನ ಹಲವರನ್ನು ಆವರಿಸಿಕೊಂಡುಬಿಡುತ್ತೆ. ಇಂತಹ ಅದೆಷ್ಟೋ ಪ್ರಕರಣಗಳಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಸಾಕ್ಷಿಯಾಗಿದೆ. 2013 ರಿಂದ 2018ರವರೆಗೂ ಕಳೆದ 5 ವರ್ಷಗಳಲ್ಲಿ ಜಿಲ್ಲೆಯಾದ್ಯಾಂತ ಬರೋಬ್ಬರಿ 233 ಕ್ಕೂ ಹೆಚ್ಚು ಹದಿಹರೆಯದ ಅಪ್ರಾಪ್ತ ವಯಸ್ಸಿನ ಮಕ್ಕಳು ಮನೆ ಬಿಟ್ಟು ಹೋಗಿ, ಕಾಣೆಯಾಗಿದ್ದಾರೆ. ಇದರಲ್ಲಿ 118 ಮಂದಿ ಗಂಡು ಮಕ್ಕಳಾಗಿದ್ದರೆ, 115 ಮಂದಿ ಹೆಣ್ಣು ಮಕ್ಕಳು. ಕಾಣೆಯಾದ 233 ಮಂದಿಯಲ್ಲಿ ಇದುವರೆಗೂ ಪತ್ತೆಯಾದವರು 132 ಮಾತ್ರ. ಆದರೆ ಉಳಿದ 101 ಮಂದಿ ಎಲ್ಲಿದ್ದಾರೆ? ಹೇಗಿದ್ದಾರೆ ಅನ್ನೋದು ಇದುವರೆಗೂ ಗೊತ್ತಾಗಿಲ್ಲ ಅನ್ನೋದು ಅಘಾತಕಾರಿ ಸಂಗತಿ.

    ಕಾಣೆಯಾಗೋಕೆ ಕಾರಣಗಳೇನು?
    ಇದಕ್ಕೆಲ್ಲಾ ಕಾರಣ ಹದಿಹರೆಯದ ವಯಸ್ಸಲ್ಲಿ ಮೂಡೋ ಪ್ರೀತಿ-ಪ್ರೇಮದ ಮಾಯೆ ಎನ್ನುವುದು ಬಹುತೇಕ ಪ್ರಕರಣಗಳಲ್ಲಿ ಸಾಬೀತಾದ ಸತ್ಯ ಅನ್ನೋದು ಅಧಿಕಾರಿಗಳ ವಾದ. ಹದಿ ಹರೆಯದ ವಯಸ್ಸಲ್ಲಿ ಹುಟ್ಟೋ ಪ್ರೀತಿನಾ ಪಡೆದುಕೊಳ್ಳಲಾಗದೆ ಬಿಟ್ಟು ಬಿಡಲಾಗದೆ, ಇತ್ತ ಪೋಷಕರಿಗೂ ತಿಳಿಸಲಾಗದೆ ಮನೆ ಬಿಟ್ಟು ಹೋಗೋವರ ಸಂಖ್ಯೆಯೇ ಹೆಚ್ಚು. ಒಂದೆಡೆ ಪ್ರೀತಿ-ಪ್ರೇಮ-ಪ್ರಣಯ ಅಂತ ಮನೆ ಬಿಟ್ಟು ಹೋದವರು ಜಾಸ್ತಿಯಾದರೆ ಮತ್ತೊಂದೆಡೆ ಕಡು ಬಡತನ, ಕೌಟುಂಬಿಕ ದೌರ್ಜನ್ಯ ಪ್ರಕರಣಗಳಿಂದಲೂ ಬೇಸತ್ತು ಕೆಲವರು ಮನೆ ಬಿಟ್ಟು ಹೋಗಿದ್ದಾರೆ. ಇನ್ನೂ ಆಂಧ್ರದ ಗಡಿಭಾಗದ ಜಿಲ್ಲೆಯಲ್ಲಿ ಒಂದೆಡೆ ಬಾಲ್ಯ ವಿವಾಹಗಳು ಅತಿ ಹೆಚ್ಚಾಗಿ ನಡೆಯುತ್ತವೆ. ಮತ್ತೊಂದೆಡೆ ಜಿಲ್ಲೆಯ ಗಡಿ ಭಾಗಗಳಲ್ಲಿ ಮಹಿಳೆಯರು, ಮಕ್ಕಳ ಮಾರಾಟ ಜಾಲ ಸಕ್ರಿಯವಾಗಿರೋದು ಈ ಹಿಂದೆ ಬಯಲಿಗೆ ಬಂದ ಹಲವು ಪ್ರಕರಣಗಳಲ್ಲಿ ಗೊತ್ತಿರುವಂತಹ ವಿಚಾರ. ಹೀಗಾಗಿ ಪ್ರೀತಿ ಪ್ರೇಮದ ಗುಂಗಲ್ಲಿ ಮನೆಯಲ್ಲಿ ವಿಷಯ ತಿಳಿಸಲಾಗದ ಅದೆಷ್ಟೋ ಮಂದಿ ಮನೆ ಬಿಟ್ಟು ಹೋಗಿ ಮದುವೆಯಾಗಿ ಬಂದಿದ್ದಾರೆ. ಕೊನಗೆ ಕಾನೂನಿನ್ವಯ ವಯಸ್ಸಿಗೆ ಮುನ್ನ ಮದುವೆಯಾಗಿ ಶಿಕ್ಷೆಯಾದಂತಹ ಉದಾಹರಣೆಗಳು ಇವೆ.

    ತನಿಖೆಯಿಂದ ತಿಳಿಯಬೇಕಿದೆ:
    ಸದ್ಯ ಇದುವರೆಗೂ ಪತ್ತೆಯಾಗದ ಮಕ್ಕಳು-ಮಹಿಳೆಯರು ಎಲ್ಲಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದಷ್ಟೇ ತಿಳಿಯಬೇಕಿದೆ. ಒಂದೆಡೆ ನಾಪತ್ತೆಯಾಗಿರೋ ಮಕ್ಕಳು ಹಾಗೂ ಮಹಿಳೆಯರ ಪತ್ತೆ ಕೆಲಸ ಮಾಡಬೇಕಾದ ಆದ್ಯ ಕರ್ತವ್ಯ ಪೊಲೀಸ್ ಇಲಾಖೆಯದ್ದಾಗಿದೆ. ಮತ್ತೊಂದೆಡೆ ಆಕರ್ಷಣೆಯ ಅಮಲಲ್ಲಿ ಹದಿಹರೆಯದ ವಯಸ್ಸಲ್ಲಿ ಹಾದಿ ತಪ್ತಿರೋ ಮಕ್ಕಳಿಗೆ ಜಾಗೃತಿ ಮೂಡಿಸಿ ಸರಿ ದಾರಿ ತೋರೋ ಕೆಲಸ ಆಧಿಕಾರಿಗಳು ಹಾಗೂ ಪೋಷಕರು ಕೂಡ ಮಾಡಬೇಕಿದೆ.

  • ಕಾರಿನ ಸಮೇತ 71 ಲಕ್ಷ ಹಣದ ಜೊತೆ ಚಾಲಕ ಪರಾರಿ

    ಕಾರಿನ ಸಮೇತ 71 ಲಕ್ಷ ಹಣದ ಜೊತೆ ಚಾಲಕ ಪರಾರಿ

    ಬೀದರ್: 71 ಲಕ್ಷ ನಗದು ಹಾಗೂ ಕಾರು ಸಮೇತ ಕಾರು ಚಾಲಕ ಪರಾರಿಯಾದ ಘಟನೆ ಬೀದರ್ ನ ಮನ್ನಾಏಖೇಳಿಯಲ್ಲಿ ನಡೆದಿದೆ.

    ಉದ್ಯಮಿ ರಾಜೇಶ್ ಎಂಬವರೇ ಹಣ ಕಳೆದುಕೊಂಡ ವ್ಯಕ್ತಿ. ರಾಜೇಶ್ ಕಾರಿನಲ್ಲಿ 71 ಲಕ್ಷ ಹಣವುಳ್ಳ ಬ್ಯಾಗ್ ಇಟ್ಟು ರೈತ ಸಂಪರ್ಕ ಕೇಂದ್ರಕ್ಕೆ ಹೋಗಿದ್ದರು. ಈ ವೇಳೆ ಕಾರ್ ಚಾಲಕ ಮಾರುತಿ ಹಣ ತೆಗೆದುಕೊಂಡು ಕಾರಿನ ಸಮೇತ ಪರಾರಿಯಾಗಿದ್ದಾನೆ.

    ರಾಜೇಶ್ ಬಳ್ಳಾರಿ ಮೂಲದ ಉದ್ಯಮಿಯಾಗಿದ್ದು, ಸೋಯಾ ಸೀಡ್ಸ್ ವ್ಯಾಪಾರ ಮಾಡುತ್ತಿದ್ದರು. ಆದರೆ ರಾಜೇಶ್ ರೈತ ಸಂಪರ್ಕ ಕೇಂದ್ರದಿಂದ ವಾಪಸ್ ಬರೋವಷ್ಟರಲ್ಲಿ ಚಾಲಕ ಬ್ಯಾಗ್ ಸಮೇತ ಪರಾರಿಯಾಗಿದ್ದಾನೆ.

    ಕೆಎ – 34, ಎನ್ -5427 ನಂಬರ್ ನ ಕಾರ್, ಪರಾರಿಯಾದ ಚಾಲಕ ಹೈದರಾಬಾದ್ ಕಡೆ ಹೋಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತು ಮನ್ನಾಖೇಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಹಾಯ ಕೇಳಿದ ಮಹಿಳೆಯ ಎಟಿಎಂ ಬದಲಿಸಿ 1.90ಲಕ್ಷ ರೂ. ವಂಚನೆ!

    ಸಹಾಯ ಕೇಳಿದ ಮಹಿಳೆಯ ಎಟಿಎಂ ಬದಲಿಸಿ 1.90ಲಕ್ಷ ರೂ. ವಂಚನೆ!

    ಮಡಿಕೇರಿ: ಎಟಿಎಂನಲ್ಲಿ ಹಣ ತಗೆದುಕೊಡುವಂತೆ ಸಹಾಯ ಕೇಳಿದ ಮಹಿಳೆಯ ಎಟಿಎಂ ಕಾರ್ಡ್ ಬದಲಿಸಿ 1.90 ಲಕ್ಷ ರೂ. ವಂಚನೆ ಮಾಡಿದ ಘಟನೆ ಮಡಿಕೇರಿ ತಾಲೂಕು ಬಿಳಿಗೇರಿಯಲ್ಲಿ ನಡೆದಿದೆ.

    ಲೋಕೇಶ್ ಹಣ ದೋಚಿ ಪರಾರಿಯಾದ ಆರೋಪಿ. ಈತ ಮಡಿಕೇರಿ ತಾಲೂಕಿನ ಬಿಳಿಗೇರಿ ನಿವಾಸಿಯಾಗಿದ್ದು, ಕಾರ್ಡ್ ಬದಲಿಸಿ ಹಣ ಡ್ರಾಮಾಡಿದ ತಕ್ಷಣ ಲೋಕೇಶ್ ಪರಾರಿಯಾಗಿದ್ದಾರೆ.

    ಮಹಿಳೆಯೊಬ್ಬರು ತಮ್ಮ ಎಟಿಎಂನಿಂದ 10 ಸಾವಿರ ಹಣ ತೆಗೆದುಕೊಡುವಂತೆ ಲೋಕೇಶ್ ಬಳಿ ಸಹಾಯ ಕೋರಿದ್ದಾರೆ. ಸಹಾಯ ಮಾಡಲು ಒಪ್ಪಿಕೊಂಡ ಲೋಕೇಶ್ 10 ಸಾವಿರ ಹಣ ತೆಗೆದುಕೊಟ್ಟು, ತನ್ನ ಬಳಿ ಇದ್ದ ಎಟಿಎಂ ಅನ್ನು ಸಂತ್ರಸ್ತ ಮಹಿಳೆಗೆ ನೀಡಿ, ಅವರ ಎಟಿಎಂ ತನ್ನ ಬಳಿ ಇಟ್ಟುಕೊಂಡಿದ್ದಾನೆ. ಖಾತೆಯ ಹಣ ಪರಿಶೀಲನೆ ವೇಳೆ 1.90 ಲಕ್ಷ ರೂ. ವಂಚನೆ ಮಾಡಿರುವುದು ಗೊತ್ತಾಗಿದೆ.

    1.90 ಲಕ್ಷ ರೂ. ವಂಚನೆ ಆರೋಪದ ಕುರಿತು ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ವಂಚಕ ಲೋಕೇಶ್ ಪತ್ತೆಗಾಗಿ ಪೊಲೀಸರು ತನಿಖೆ ನಡೆಸಿದ್ದಾರೆ.

  • 16ರ ಬಾಲಕಿಯನ್ನ ಅಪಹರಿಸಿ ಅತ್ಯಾಚಾರ ಎಸಗಿದ್ದ ಕಾಮುಕ ಅರೆಸ್ಟ್

    16ರ ಬಾಲಕಿಯನ್ನ ಅಪಹರಿಸಿ ಅತ್ಯಾಚಾರ ಎಸಗಿದ್ದ ಕಾಮುಕ ಅರೆಸ್ಟ್

    ಬೆಳಗಾವಿ: 16 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಹುಕ್ಕೇರಿ ಪೊಲೀಸರು ಬುಧವಾರ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

    ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಶಂಕರ್ ಮಾಳಗಿ (18) ಬಂಧಿತ ಆರೋಪಿ. ಮೇ 1 ರಂದು ಶಂಕರ್ ವಿರುದ್ಧ ಫೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು.

    ಕೃತ್ಯದ ನಂತರ ಪರಾರಿಯಾಗಿದ್ದ ಶಂಕರ್ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸಾವಳೋಜ ಗ್ರಾಮದ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದ. ಶಂಕರ್ ಮೊಬೈಲ್ ನಂಬರ್ ಟ್ರ್ಯಾಪ್ ಮಾಡುವ ಮೂಲಕ ಹುಕ್ಕೇರಿ ಪೊಲೀಸ್ ತಂಡ ಶಂಕರ್ ಇರುವ ಸ್ಥಳವನ್ನು ಗುರುತಿಸಿ, ಬಂಧಿಸಿದ್ದಾರೆ.

  • ಮಾಸ್ತಿಗುಡಿ ದುರಂತ- ಬಂಧಿಸಲು ಹೋದ ಪೊಲೀಸರ ಮುಂದೆ ಪರಾರಿಯಾದ ನಿರ್ಮಾಪಕ

    ಮಾಸ್ತಿಗುಡಿ ದುರಂತ- ಬಂಧಿಸಲು ಹೋದ ಪೊಲೀಸರ ಮುಂದೆ ಪರಾರಿಯಾದ ನಿರ್ಮಾಪಕ

    ರಾಮನಗರ: ಮಾಸ್ತಿಗುಡಿ ಕ್ಲೈಮ್ಯಾಕ್ಸ್ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗದಿದ್ದ ನಿರ್ಮಾಪಕ ಸುಂದರ್ ಪಿ ಗೌಡಗೆ ರಾಮನಗರ ಜೆಎಂಎಫ್ ಸಿ ಕೋರ್ಟ್ ಜಾಮೀನು ರಹಿತ ಬಂಧನದ ವಾರೆಂಟ್ ಆದೇಶಿಸಿದೆ.

    ಜಾಮೀನು ರಹಿತ ವಾರೆಂಟ್ ಹಿನ್ನೆಲೆಯಲ್ಲಿ ಸುಂದರ್ ಪಿ ಗೌಡನನ್ನ ಬಂಧಿಸಲು ಪೊಲೀಸರು ತೆರಳಿದ್ದ ವೇಳೆ ಹೈಡ್ರಾಮವೇ ನಡೆದಿದೆ. ಮಂಗಳವಾರ ಸಂಜೆ ವೇಳೆ ತಾವರೆಕೆರೆ ಪೊಲೀಸರು ವಾರೆಂಟ್ ಹಿಡಿದು ಬೆಂಗಳೂರಿನ ಸುಂದರ್ ಮನೆಗೆ ತೆರಳಿದ್ದರು.

     

    ಈ ವೇಳೆ ಮನೆಯಲ್ಲಿ ಸುಂದರ್ ಹಾಗೂ ನಟ ದುನಿಯ ವಿಜಯ್ ಚರ್ಚೆಯಲ್ಲಿ ತೊಡಗಿದ್ದರು. ವಾರೆಂಟ್ ವಿಚಾರ ತಿಳಿಸಿದ ಪೊಲೀಸರು ಸುಂದರ್ ಬಂಧನಕ್ಕೆ ಮುಂದಾಗಿದ್ದರು. ಈ ವೇಳೆ ಬಟ್ಟೆ ಧರಿಸಿ ಬರುವುದಾಗಿ ಹೇಳಿ ಹೋಗಿದ್ದ ಸುಂದರಗೌಡ ಪರಾರಿಯಾಗಿದ್ದಾರೆ.

    ಆರೋಪಿಯ ಸುಂದರ್ ಪಿ ಗೌಡ ತಾಯಿ ಆರೋಗ್ಯದ ಸಮಸ್ಯೆ ಹಿನ್ನೆಲೆ ತಾವೇ ನಾಳೆ ಕರೆತರುವುದಾಗಿ ದುನಿಯಾ ವಿಜಯ್ ಮಧ್ಯಸ್ತಿಕೆ ವಹಿಸಿದ್ದರು. ದುನಿಯ ವಿಜಯ್ ತಾವೇ ಸ್ವತಃ ಸುಂದರ್ ನನ್ನ ಪೊಲೀಸ್ ಠಾಣೆಗೆ ಕರೆತರುವುದಾಗಿ ಪೊಲೀಸರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ವಿಜಯ್ ಮಾತನ್ನು ನಿರಾಕರಿಸಿದ ತಾವರೆಕೆರೆ ಪೊಲೀಸರು ಸುಂದರ್ ಬಂಧನಕ್ಕೆ ಹುಡುಕಾಟ ನಡೆಸುತ್ತಿದ್ದಾರೆ.

  • ಮದ್ವೆ ಆದ ಕೆಲವೇ ನಿಮಿಷಗಳಲ್ಲಿ ಪತ್ನಿಯನ್ನು ಆಟೋದಲ್ಲಿ ಬಿಟ್ಟು ಪತಿ ಪರಾರಿ!

    ಮದ್ವೆ ಆದ ಕೆಲವೇ ನಿಮಿಷಗಳಲ್ಲಿ ಪತ್ನಿಯನ್ನು ಆಟೋದಲ್ಲಿ ಬಿಟ್ಟು ಪತಿ ಪರಾರಿ!

    ಭುವನೇಶ್ವರ್: ವರನೊಬ್ಬ ಮದುವೆಯಾದ ಕೆಲವೇ ನಿಮಿಷಗಳಲ್ಲಿ ತನ್ನ ಪತ್ನಿಯನ್ನು ನಡುರಸ್ತೆಯಲ್ಲಿ ಬಿಟ್ಟು ಪರಾರಿಯಾದ ಘಟನೆ ಒಡಿಶಾದ ನಯಾಘರ್ ನಲ್ಲಿ ಜಿಲ್ಲೆಯಲ್ಲಿ ನಡೆದಿದೆ.

    ಮಾನಸ್ ಕುಮಾರ್ ಬೆಹೆರಾ(22) ಪರಾರಿಯಾದ ಆರೋಪಿ ಪತಿ. ಮಾನಸ್ ಜೆಸಿಬಿ ಚಾಲಕನಾಗಿದ್ದು, ಮದುವೆಯಾದ ಕೆಲವೇ ನಿಮಿಷಗಳಲ್ಲಿ ತನ್ನ ಪತ್ನಿಯನ್ನು ಆಟೋದಲ್ಲಿ ಕೂರಿಸಿ ಪರಾರಿಯಾಗಿದ್ದಾನೆ.

    ವರದಿಗಳ ಪ್ರಕಾರ ಮಾನಸ್ ಸುರುಕಾಬಾರಿ ಗ್ರಾಮದಲ್ಲಿ ರಸ್ತೆ ದುರಸ್ಥಿ ಕೆಲಸ ಮಾಡುವಾಗ ವಧುವಿನ ಜೊತೆ ಪ್ರೀತಿಯಲ್ಲಿ ಬಿದ್ದನು. ನಂತರ ಮದುವೆ ಆಗುವುದಾಗಿ ಹೇಳಿ ಆಕೆಯ ಜೊತೆ ದೈಹಿಕ ಸಂಬಂಧ ಬೆಳೆಸಿದ್ದ. ದೈಹಿಕ ಸಂಬಂಧ ಬೆಳೆಸಿದ ನಂತರ ಮಾನಸ್ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದ. ಆಗ ಗ್ರಾಮಸ್ಥರು ಮಾನಸ್ ತಂದೆಗೆ ವಿಷಯವನ್ನು ತಿಳಿಸಿ, ಬಲವಂತವಾಗಿ ಆತನನ್ನು ಯುವತಿಯ ಜೊತೆ ಮದುವೆ ಮಾಡಿಸಿದ್ದಾರೆ. ಗ್ರಾಮಸ್ಥರ ಸಮ್ಮುಖದಲ್ಲಿ ಮಾನಸ್ ದೇವಸ್ಥಾನದಲ್ಲಿ ವಧುವಿಗೆ ತಾಳಿ ಕಟ್ಟಿದ್ದಾನೆ.

    ತಾಳಿ ಕಟ್ಟಿದ ನಂತರ ಮಾನಸ್ ತನ್ನ ಪತ್ನಿಗೆ ಬಾಡಿಗೆ ಮನೆಯಲ್ಲಿ ವಾಸಿಸೋಣ ಎಂದು ಹೇಳಿ ಬಾಡಿಗೆ ಮನೆಯನ್ನು ಹುಡುಕಲು ಆಕೆಯನ್ನು ಆಟೋದಲ್ಲಿ ಕರೆದುಕೊಂಡು ಹೋಗಿದ್ದಾನೆ. ನಂತರ ದಾರಿ ಮಧ್ಯೆ ಆಟೋವನ್ನು ನಿಲ್ಲಿಸಿ ಬಾಡಿಗೆ ಮನೆ ಹುಡುಕಿ ಬರುವುದಾಗಿ ಹೇಳಿ ಪರಾರಿಯಾಗಿದ್ದಾನೆ. ಪತ್ನಿ ಮಾನಸ್‍ಗಾಗಿ ಆಟೋದಲ್ಲಿ ಗಂಟೆಗಟ್ಟಲೇ ಕಾಯುತ್ತಾ ಕುಳಿತ್ತಿದ್ದಳು. ಆದರೆ ಮಾನಸ್ ಹಿಂತಿರುಗಿ ಬರಲೇ ಇಲ್ಲ.

    ಮಾನಸ್ ವಾಪಸ್ ಬರದೇ ಇದ್ದಾಗ ಆಟೋ ಡ್ರೈವರ್ ವಧುವನ್ನು ಆಕೆಯ ಮನೆಗೆ ಕರೆದುಕೊಂಡು ಹೋಗಿ ನಡೆದ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾನೆ. ಆಗ ಯುವತಿ ನ್ಯೂಗೋನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾಳೆ. ಆದರೆ ಈ ಘಟನೆ ಒಡಾಗಾಂವ್‍ನಲ್ಲಿ ನಡೆದ ಕಾರಣ ಆ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಯುವತಿಗೆ ಸಲಹೆ ನೀಡಿದರು. ಈಗ ಒಡಾಗಾಂವ್ ನಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿ ಕುತ್ತಿಗೆಗೆ ಚಾಕು ಇರಿದು ಪತಿ ಪರಾರಿ!

    ಪತ್ನಿ ಕುತ್ತಿಗೆಗೆ ಚಾಕು ಇರಿದು ಪತಿ ಪರಾರಿ!

    ಬೀದರ್: ಪತಿಯೇ ಪತ್ನಿಗೆ ಚಾಕು ಇರಿದ ಘಟನೆಯೊಂದು ಬೀದರ್ ನಗರದ ವಿದ್ಯಾ ಕಾಲೋನಿಯಲ್ಲಿ ನಡೆದಿದೆ.

    ಆರೋಪಿ ಪತಿ ಪತ್ನಿ ಮಹಾದೇವಿಯ ಕುತ್ತಿಗೆಗೆ ಚಾಕು ಇರಿದಿದ್ದಾನೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡು ಪತ್ನಿ ಕುಸಿದು ಬಿದ್ದಿದ್ದಾರೆ. ಬಳಿಕ ಪತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಸದ್ಯ ಗಾಯಾಳು ಪತ್ನಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಸ್ಥಳಕ್ಕೆ ದೌಡಾಯಿಸಿದ ಬೀದರ್ ಪೊಲೀಸರು, ಇದೊಂದು ಕೌಟುಂಬಿಕ ಕಲಹದಿಂದಾಗಿ ಪತಿ ಈ ಕೃತ್ಯ ಎಸಗಿರಬಹುದೆಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ತಿಳಿಸಿದ್ದಾರೆ.

    ಘಟನೆ ಸಂಬಂಧ ಬೀದರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಟ್ರೈನಿನಲ್ಲಿ ಪರಾರಿಯಾಗುತ್ತಿದ್ದ ಅಪಹರಣಕಾರರನ್ನು ಫ್ಲೈಟ್ ನಲ್ಲಿ ಹೋಗಿ ಅರೆಸ್ಟ್ ಮಾಡಿದ್ರು ಪೊಲೀಸರು!

    ಟ್ರೈನಿನಲ್ಲಿ ಪರಾರಿಯಾಗುತ್ತಿದ್ದ ಅಪಹರಣಕಾರರನ್ನು ಫ್ಲೈಟ್ ನಲ್ಲಿ ಹೋಗಿ ಅರೆಸ್ಟ್ ಮಾಡಿದ್ರು ಪೊಲೀಸರು!

    ಚಿಕ್ಕಬಳ್ಳಾಪುರ: ಮಾಲೀಕನನ್ನು ಕೊಲೆ ಮಾಡಿ ಅಸ್ಸಾಂಗೆ ತೆರಳುತ್ತಿದ್ದ ತೋಟದ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನೆಟ್ಟಿ ಬಂಧಿಸಿದ್ದಾರೆ.

    ಬೆಂಗಳೂರು ಮೂಲದ ಕರೀಂಖಾನ್(81) ಕೊಲೆ ಮಾಡಿ ಪರಾರಿಯಾಗುತ್ತಿದ್ದ, ಜಾಕೀರ್, ಮುತಾಬುದ್ದೀನ್, ನಸರುವುಲ್ಲಾ ಹುಸೇನ್ ರನ್ನು ಗೌರಿಬಿದನೂರು ಪೊಲೀಸರು ವಿಮಾನದಲ್ಲಿ ಹೋಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಏನಿದು ಪ್ರಕರಣ?
    ಬೆಂಗಳೂರು ಮೂಲದ ಕರೀಂಖಾನ್(81) ಗೌರಿಬಿದನೂರು ತಾಲೂಕು ಗೊಡ್ಡಾವರಹಳ್ಳಿ ಬಳಿ ಅಡಿಕೆ, ಬಾಳೆ, ತೆಂಗಿನ ತೋಟವನ್ನು ಮಾಡಿ ಫಾರಂ ಹೌಸ್ ಮಾಡಿಕೊಂಡಿದ್ದರು. ತೋಟದ ಮನೆಯ ಕಾವಲಿಗಂತಲೇ ಅಸ್ಸಾಂ ಮೂಲದ ಮೂವರು ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಕ ಮಾಡಿದ್ದರು.

    ಆದರೆ ಮೇ 3ರಂದು ತೋಟಕ್ಕೆ ಬಂದಿದ್ದ ಮಾಲೀಕ ಕರೀಂಖಾನ್ ರನ್ನು ಮೂವರು ಸೆಕ್ಯೂರಿಟಿ ಗಾರ್ಡ್ ಗಳು ಕೈ-ಕಾಲು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿದ್ದಾರೆ. ಕರೀಂಖಾನ್ ನನ್ನ ತೋಟದಲ್ಲಿನ ಶೆಡ್ ನಲ್ಲಿ ಮೋಟಾರು ಅಳವಡಿಕೆಗೆ ಇರುವ ಬೃಹದಾದ ಗುಂಡಿಯಲ್ಲಿ ಹಾಕಿ ಕೂಡಿ ಹಾಕಿದ್ದರು. ನಂತರ ಮಗ ಆಯೂಬ್ ಖಾನ್ ಬಳಿ ಅಪರಿಚಿತರಂತೆ ನಿಮ್ಮ ತಂದೆಯನ್ನು ಕಿಡ್ನಾಪ್ ಮಾಡಿದ್ದೇವೆ. 70 ಲಕ್ಷ ರೂ. ನೀಡಿ ಬೇಡಿಕೆ ಇಟ್ಟಿದ್ದರು.

    ಈ ಬಗ್ಗೆ ಕರೀಂಖಾನ್ ಮಗ ಆಯೂಬ್ ಖಾನ್ ಗೌರಿಬಿದನೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆಗೆ ಮುಂದಾಗಿದ್ದರು. ಆದರೆ ಅಷ್ಟರಲ್ಲೇ ಇತ್ತ ಶೆಡ್‍ನ ಗುಂಡಿಯಲ್ಲಿ ಕೂಡಿ ಹಾಕಿದ್ದ ಕರೀಂಖಾನ್ ಕೂಡ ಗುಂಡಿಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇದರಿಂದ ಪೊಲೀಸರಿಗೆ ವಿಷಯ ಗೊತ್ತಾಗುವಷ್ಟರಲ್ಲಿ ಪರಾರಿಯಾಗಬೇಕು ಎಂದು ತೀರ್ಮಾನಿಸಿದ ಮೂವರು ಸೆಕ್ಯೂರಿಟಿ ಗಾರ್ಡ್ ಗಳು, ರೈಲು ಮೂಲಕ ಅಸ್ಸಾಂಗೆ ಪಯಣ ಬೆಳೆಸಿದ್ದರು.

    ಪರಾರಿಯಾದ ವಿಷಯ ತಿಳಿದ ಪೊಲೀಸರು, ಇವರೇ ಅಪಹರಣಕಾರರು ಎಂದು ಅಸ್ಸಾಂ ನತ್ತ ತೆರಳುತ್ತಿದ್ದ ಮೂವರು ಸೆಕ್ಯೂರಿಟಿ ಗಾರ್ಡ್ ಗಳನ್ನ ವಿಮಾನದ ಮೂಲಕ ಕೋಲ್ಕತ್ತಾ ಗೆ ತೆರಳಿ, ಅಲ್ಲಿ ಹೌರಾ ರೈಲ್ವೇ ಜಂಕ್ಷನ್ ನಲ್ಲಿ ಬಂಧಿಸಿ ಕರೆತಂದಿದ್ದಾರೆ. ಆಗ ನಡೆದ ಘಟನೆಯನ್ನ ಬಾಯ್ಬಿಟ್ಟಿರೋ ಸೆಕ್ಯೂರಿಟಿ ಗಾರ್ಡ್‍ಗಳು, ಕರೀಂಖಾನ್ ಮೃತಪಟ್ಟಿರುವ ವಿಷಯ ತಿಳಿಸಿದ್ದಾರೆ. ಈ ಸಂಬಂಧ ಸದ್ಯ ಮೂವರನ್ನು ಗೌರಿಬಿದನೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿತ ಸೆಕ್ಯೂರಿಟಿ ಗಾರ್ಡ್ ಗಳಿಂದ ಸ್ಥಳ ಮಹಜರು ಮಾಡಿಸಿದ್ದಾರೆ.

    ಮತ್ತೊಂದೆಡೆ ಗುಂಡಿಯಲ್ಲಿದ್ದ ಕರೀಂಖಾನ್ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ.

    ಇನ್ನೂ ಮೂವರು ಅಸ್ಸಾಂ ಮೂಲದ ಸೆಕ್ಯೂರಿಟಿ ಗಾರ್ಡ್ ಗಳು, ಬಾಂಗ್ಲಾ ದೇಶದಿಂದ ಅಕ್ರಮವಾಗಿ ದೇಶಕ್ಕೆ ನುಸುಳಿದ್ದಾರೆ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದ್ದು, ಆ ದಿಕ್ಕಿನಲ್ಲೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.