Tag: ಪರಸಂಗ

  • ಹಳ್ಳಿ ಘಮಲಿನ ‘ಚಂಪಾ’ಕಲಿಯಂಥಾ ‘ಪರಸಂಗ’!

    ಹಳ್ಳಿ ಘಮಲಿನ ‘ಚಂಪಾ’ಕಲಿಯಂಥಾ ‘ಪರಸಂಗ’!

    ಹೊಸಾ ಅಲೆ ಹಳೇ ಸೆಲೆಗಳೆಲ್ಲವೂ ಝಗಮಗಿಸುವ ಕಥೆಗಳ ಬೆಂಬೀಳೋದೇ ಹೆಚ್ಚಾದ್ದರಿಂದ ಹಳ್ಳಿ ಘಮಲಿನ ಕಥೆಗಳೇ ಅಪರೂಪವಾಗಿ ಬಿಟ್ಟಿವೆ. ಹಾಗೊಂದು ವೇಳೆ ಅಂಥಾ ಚಿತ್ರಗಳು ತೆರೆ ಕಂಡರೂ ಎಲ್ಲದರಲ್ಲಿಯೂ ವೀಕ್ ನೆಸ್ ಪ್ರಾಬ್ಲಮ್ಮಿನಿಂದ ಸೊರಗಿರುತ್ತವೆ. ಆದರೆ ಎಲ್ಲ ವಿಚಾರದಲ್ಲಿಯೂ ದಷ್ಟ ಪುಷ್ಟವಾಗಿರುವ ಮಿತ್ರಾ ಅಭಿನಯದ ಪರಸಂಗ ಎಲ್ಲ ವರ್ಗದ ಪ್ರೇಕ್ಷಕರನ್ನೂ ತಣಿಸುತ್ತಾ ಸಾರಾಸಗಟಾಗಿ ಎಲ್ಲರನ್ನು ಥೇಟರಿನತ್ತ ಸೆಳೆಯುತ್ತಿದೆ.

    ಪ್ರೇಕ್ಷಕರ ಬಾಯಿ ಮಾತಿಂದಲೇ ಥೇಟರು ತುಂಬಿಸಿಕೊಂಡ ಚಿತ್ರಗಳು ಗೆದ್ದವೆಂದೇ ಅರ್ಥ. ಸದ್ಯ ಪರಸಂಗವೂ ಅಂಥಾದ್ದೇ ವಾತಾವರಣ ಸೃಷ್ಟಿಸಿರೋದರಿಂದ ಇದು ಗೆದ್ದ ಲಕ್ಷಣ ಎಂಬುದನ್ನು ಸಪರೇಟಾಗಿ ಹೇಳೋ ಅವಶ್ಯಕತೆಯಿಲ್ಲ!

    ಯಾರಾದರೂ ಕಾಯಿಲೆ ಬಿದ್ದರೆ ಬೊಂಬೆಯೊಂದನ್ನು ತಯಾರಿಸಿ ಕಾಯಿಲೆಯನ್ನು ಅದರೊಳಗೆ ತುಂಬಿಸೋ ನಂಬಿಕೆಯಿಂದ ಅದನ್ನು ಗಡಿಯಾಚೆ ಬಿಟ್ಟು ಬರುವ ಒಂದು ಸಂಪ್ರದಾಯವಿದೆ. ಹಳ್ಳಿಗಾಡುಗಳಲ್ಲಿ ಇದು ಈಗಲೂ ಅಳಿದುಳಿದುಕೊಂಡಿದೆ. ಆ ಹಳ್ಳಿಯಲ್ಲಿ ತನ್ನ ವಿಧವೆ ತಾಯಿಯ ಜೊತೆ ಬದುಕುತ್ತಾ, ಊರ ಗೌಡನ ಮನೆಯಲ್ಲಿ ಚಾಕರಿ ಮಾಡಿಕೊಂಡಿರೋ ತಿಮ್ಮ ಕೂಡಾ ಗೊಂಬೆ ದಾಟಿಸುವ ವೃತ್ತಿಯನ್ನೂ ನಡೆಸಿಕೊಂಡು ಬಂದಿರುತ್ತಾನೆ. ಇಂಥವನಿಗೆ ಎತ್ತಣಿದ್ದೆಂತಲಿಂದಲೂ ಮ್ಯಾಚ್ ಆಗದ ಬೊಂಬೆಯಂಥಾ ಹುಡುಗಿಯೇ ಮಡದಿಯಾಗಿ ಬಂದು ಬಿಡುತ್ತಾಳೆ.

    ಚಂಪಾ ಹೆಸರಿನ ಈ ಚೆಲುವೆ ಪರಿಸ್ಥಿತಿಯ ಸಂಕೋಲೆಗೆ ಸಿಲುಕಿ ತನಗೆ ಹೊಂದದ ತಿಮ್ಮನನ್ನು ಮದುವೆಯಾಗುತ್ತಾಳೆ. ಈ ನಡುವೆ ತಿಮ್ಮ ಮಡದಿನ ಮಾತು ಕೇಳಿ ಚಂಪಾ ಚಾಟ್ಸ್ ಎಂಬ ಹೋಟೆಲು ಶುರುವಿಟ್ಟುಕೊಂಡೇಟಿಗೆ ಚಂಪಾಕಲಿಯಂಥಾ ಚಂಪಾಳ ಮೇಲೆ ಇಡೀ ಊರ ಕಣ್ಣು ಬೀಳುತ್ತದೆ. ಚಂಪಾ ಕೂಡಾ ಅಂಥಾ ಪಡ್ಡೆಗಳ ಜೊತೆ ಮೆತ್ತಗೆ ನವರಂಗಿಯಾಟ ಶುರು ಮಾಡಿಕೊಳ್ಳುತ್ತಾಳೆ.

    ಆದರೆ ಊರೆಲ್ಲ ಏನೇ ಹೇಳಿದರೂ ತಿಮ್ಮ ಮಾತ್ರ ತನ್ನ ಹೆಂಡತಿ ಪರಮ ಪತಿವ್ರತೆ ಎಂದೇ ನಂಬಿ ಕೂತಿರುತ್ತಾನೆ. ಹೀಗಿರುವಾಗಲೇ ಚಂಪಾ ಚಾಟ್ಸ್ ಎದುರಿಗೇ ಕ್ಲಿನಿಕ್ಕು ತೆರೆಯೋ ಸ್ಫುರದ್ರೂಪಿ ವೈದ್ಯನೂ ಚಂಪಾಳ ಬಾಧೆಗೆ ಟ್ರೀಟ್ ಮೆಂಟು ಶುರು ಮಾಡಿದಾಕ್ಷಣ ತಿಮ್ಮನ ಬದುಕಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತೆ. ಅದರಾಚೆಗಿನದ್ದು ಅಸಲೀ ಆಹ್ಲಾದ. ನಿರ್ದೇಶಕ ಕೆ.ಎಂ. ರಘು ತಾನೊಬ್ಬ ಅಪ್ಪಟ ಹಳ್ಳಿ ಘಮಲಿನ ಕಥೆ ಹೇಳೇ ಪಾರಂಗತ ಎಂಬುದನ್ನು ಹೆಜ್ಜೆ ಹೆಜ್ಜೆಗೂ ಧೃಡಪಡಿಸಿದ್ದಾರೆ.

    ಹಾಸ್ಯ ನಟರಾಗಿ ಬ್ರ್ಯಾಂಡ್ ಆಗಿದ್ದ ಮಿತ್ರಾ ಈ ಹಿಂದೆ ರಾಗ ಚಿತ್ರದ ಮೂಲಕ ಆ ಸೀಮೆ ದಾಟಿಕೊಂಡಿದ್ದರು. ಪರಸಂಗ ಚಿತ್ರದ ತನ್ಮಯ ನಟನೆಯಿಂದ ಯಾವ ಪಾತ್ರಕ್ಕೂ ಸೈ ಎನಿಸಿದ ಓರ್ವ ಅಪ್ಪಟ ಕಲಾವಿದನಾಗಿ ಮಿತ್ರಾ ಪ್ರೇಕ್ಷಕರನ್ನು ಮುಟ್ಟಿದ್ದಾರೆ. ಇನ್ನು ನಾಯಕಿ ಅಕ್ಷತಾ ಈ ಪಾತ್ರವನ್ನು ಮೈ ಮನಸುಗಳಿಗೆ ತುಂಬಿಕೊಂಡು ನಟಿಸೋ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ನೆಲೆ ನಿಲ್ಲವ ಕನಸನ್ನು ಖಂಡಿತಾ ನನಸು ಮಾಡಿಕೊಂಡಿದ್ದಾರೆ. ವೈದ್ಯನಾಗಿ ನಟಿಸಿರೋ ಮನೋಜ್, ಕನೆಕ್ಷನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಂದ್ರಪ್ರಭ ಸೇರಿದಂತೆ ಎಲ್ಲರದ್ದೂ ಮಾಗಿದ ನಟನೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡರದ್ದೂ ಮನಸಲ್ಲುಳಿಯುವ ಪಾತ್ರ. ನಿರ್ದೇಶಕ, ಕ್ಯಾಮೆರಾ, ಸಂಗೀತ ಸೇರಿದಂತೆ ತಾಂತ್ರಿಕವಾಗಿಯೂ ವಿಶಿಷ್ಟವಾದ ಫೀಲ್ ಕೊಡುವ ಮೂಲಕ ಪರಸಂಗ ಚಿತ್ರ ಗೆಲುವಿನತ್ತ ದಾಪುಗಾಲಿಡುತ್ತಿದೆ.

  • ಪರಸಂಗದ ಹುಡುಗಿ ಅಕ್ಷತಾ!

    ಪರಸಂಗದ ಹುಡುಗಿ ಅಕ್ಷತಾ!

    – ಇದು ಬಹುಕಾಲದಿಂದ ಬಯಸಿದ್ದ ಕಥೆಯಂತೆ!

    ಬೆಂಗಳೂರು: ಮಿತ್ರಾ ನಾಯಕನಾಗಿ ನಟಿಸಿರುವ ಪರಸಂಗ ಚಿತ್ರದ ನಾಯಕಿಯಾಗಿ ಸ್ಯಾಂಡಲ್ ವುಡ್‍ಗೆ ಎಂಟ್ರಿ ಕೊಡುತ್ತಿರುವಾಕೆ ಅಕ್ಷತಾ. ಮಂಗಳೂರು ಮೂಲದ ಅಕ್ಷತಾ ಈ ಹಿಂದೆ ಒಂದಷ್ಟು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸುತ್ತಲೇ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆಯಲು ವರ್ಷಾಂತರಗಳ ಕಾಲದಿಂದ ಹೊಂದಿದ್ದ ಆಸೆ ಪರಸಂಗದ ಮೂಲಕ ಕೈಗೂಡಿದೆ.

    ಪರಭಾಷಾ ಚಿತ್ರಗಲ್ಲಿ ನಟಿಸಿದ್ದ ಅಕ್ಷತಾಗೆ ಬಹು ಕಾಲದ ಕನಸಾಗಿದ್ದದ್ದು ಕನ್ನಡ ಚಿತ್ರರಂಗ. ಇಲ್ಲಿ ನಾಯಕಿಯಾಗಿ ನೆಲೆ ಕಂಡುಕೊಳ್ಳುವ ಉತ್ಕಟ ಬಯಕೆ ಹೊಂದಿದ್ದ ಆಕೆಗೆ ಒಂದೊಳ್ಳೆ ಪಾತ್ರದ ಮೂಲಕವೇ ಪರಿಚಯವಾಗೋ ಹಂಬಲವಿತ್ತು. ಈ ನಡುವೆ ಒಂದಷ್ಟು ಕಥೆಗಳನ್ನೂ ಕೇಳಿದ ಅಕ್ಷತಾಗೆ ತೃಪ್ತಿಯಾಗಿರಲಿಲ್ಲ. ತಾನು ಬಯಸುವಂಥಾ ವಿಶಿಷ್ಟವಾದ ಕಥೆ ಮತ್ತು ಪಾತ್ರ ಸಿಕ್ಕ ಮೇಲೆಯೇ ಕನ್ನಡಕ್ಕೆ ಎಂಟ್ರಿ ಕೊಡುವ ಅಚಲ ನಿರ್ಧಾರ ಮಾಡಿ ಕೂತಿದ್ದ ಅಕ್ಷತಾಗೆ ಮಿತ್ರಾ ಅವರ ಮೂಲಕ ಸಿಕ್ಕಿದ್ದು ಪರಸಂಗ ಚಿತ್ರದ ನಾಯಕಿಯಾಗೋ ಅವಕಾಶ!

    ಈ ಚಿತ್ರದ ಕಥೆ ಕೇಳಿದಾಕ್ಷಣವೇ ಅಕ್ಷತಾ ಇಂಪ್ರೆಸ್ ಆಗಿದ್ದರಂತೆ. ಅದರಲ್ಲಿಯೂ ವಿಶೇಷವಾಗಿ ಸಿದ್ಧಸೂತ್ರಗಳನ್ನು ಬದಿಗಿಟ್ಟು ಹೊಸತನಕ್ಕಾಗಿ ಹಾತೊರೆಯುತ್ತಿದ್ದ ಇಡೀ ಚಿತ್ರ ತಂಡದ ಎನರ್ಜಿ ಅವರಿಗಿಷ್ಟವಾಗಿ ಮರು ಮಾತಿಲ್ಲದೆ ಒಪ್ಪಿಕೊಂಡಿದ್ದರಂತೆ. ಪರಸಂಗ ಚಿತ್ರದಲ್ಲಿ ಅಕ್ಷತಾರದ್ದು ಎಲ್ಲ ಮಹಿಳೆಯರನ್ನೂ ಕಾಡುವಂಥಾ ಪಾತ್ರ. ನೆಗೆಟಿವ್ ಶೇಡ್ ಕೂಡಾ ಇರುವ ಈ ಪಾತ್ರ ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತದೆ ಎಂಬ ಭರವಸೆ ಅಕ್ಷತಾರದ್ದು.

    ನಾಯಕಿಯಾಗಬೇಕೆಂಬ ಆಸೆ ಹೊತ್ತು ಸಿಕ್ಕ ಕಥೆಯನ್ನೆಲ್ಲ ಒಪ್ಪಿಕೊಳ್ಳದೆ ತಾನು ಬಯಸೋ ಪಾತ್ರ ಅರಸಿ ಬರುವವರೆಗೂ ಅಚಲವಾಗಿ ಕಾದು ಕೂತಿದ್ದ ಅಕ್ಷತಾ ತನ್ನ ಪರಸಂಗದ ಪಾತ್ರವನ್ನು ಸ್ವೀಕರಿಸಿ ಹರಸುವಂತೆ ಕನಡದ ಪ್ರೇಕ್ಷಕರಲ್ಲಿ ಅರಿಕೆ ಮಾಡಿಕೊಂಡಿದ್ದಾರೆ.

    ಕೆ ಎಂ ರಘು. ನಿರ್ದೇಶನದ ಪರಸಂಗ ಚಿತ್ರದ ಪ್ರಧಾನ ಪಾತ್ರದಲ್ಲಿ ಮಿತ್ರ, ಅಕ್ಷತ ಶ್ರೀನಿವಾಸ್, ಮನೋಜ್, ತರುಣ್ ಸುಧೀರ್, ಕಾಮಿಡಿ ಕಿಲಾಡಿಗಳು ನಟರುಗಳಾದ ಗೋವಿಂದೇ ಗೌಡ, ಸಂಜು ಬಸಯ್ಯ, ಮಜಾ ಭಾರತ ಹಾಸ್ಯ ರಿಯಾಲಿಟಿ ಶೋ ಕಲಾವಿದೆ ಚಂದ್ರ ಪ್ರಭ ಇದ್ದಾರೆ. ಹರ್ಷ ವರ್ಧನರಾಜ್ ಸಂಗೀತ, ಸುಜೈ ಕುಮಾರ್ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ ಈ `ಪರಸಂಗ’ ಒಳಗೊಂಡಿದೆ.