Tag: ಪರಮೇಶ್ವರ್ ನಾಯ್ಕ್

  • ಮನವಿ ಮಾಡ್ಕೊಂಡ್ರೂ ಜನ ನನ್ನ ಮೇಲಿನ ಪ್ರೀತಿಗೆ ಮಗನ ಮದ್ವೆಗೆ ಬಂದಿದ್ದಾರೆ: ಪರಮೇಶ್ವರ್ ನಾಯ್ಕ್

    ಮನವಿ ಮಾಡ್ಕೊಂಡ್ರೂ ಜನ ನನ್ನ ಮೇಲಿನ ಪ್ರೀತಿಗೆ ಮಗನ ಮದ್ವೆಗೆ ಬಂದಿದ್ದಾರೆ: ಪರಮೇಶ್ವರ್ ನಾಯ್ಕ್

    ದಾವಣಗೆರೆ: ಮದುವೆಗೆ ಕಡಿಮೆ ಜನ ಬನ್ನಿ ಅಂತ ನಾನು ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋ ಮಾಡಿ ಮನವಿ ಮಾಡಿಕೊಂಡಿದ್ದೆ. ಆದರೆ ಜನ ನನ್ನ ಮೇಲಿನ ಪ್ರೀತಿಯಿಂದ ಮುದುವೆ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಮಾಜಿ ಸಚಿವ ಪಿಟಿ ಪರಮೇಶ್ವರ್ ನಾಯ್ಕ್ ಸ್ಪಷ್ಟನೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮದುವೆಯಲ್ಲಿ ಕಾನೂನು ಉಲ್ಲಂಘನೆ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ನನ್ನ ಮಗನ ಮದುವೆಗೆ ಕಡಿಮೆ ಜನ ಬನ್ನಿ ಎಂದು ಮನವಿ ಮಾಡಿದ್ದೆ. ಆದರೆ ನನ್ನ ಮೇಲಿನ ಪ್ರೀತಿಯಿಂದ ಜನರು ಜಾಸ್ತಿ ಬಂದಿದ್ದಾರೆ. ಹಾಗಂತ ಜನರು ಬರುವುದನ್ನು ತಡೆಯಲು ಸಾಧ್ಯವಾಗುತ್ತಾ ಎಂದು ಪ್ರಶ್ನಿಸಿದರು.

    ಎಲ್ಲರಿಗೂ ಮಾಸ್ಕ್ ಸ್ಯಾನಿಟೈಜರ್, ಥರ್ಮಲ್ ಸ್ಕಾನಿಂಗ್ ಮಾಡಲು ಹೇಳಿದ್ದೆ. ಆದರೆ ಜನ ಜಾಸ್ತಿಯಾದ ಹಿನ್ನೆಲೆ ಏನು ಮಾಡಲು ಸಾಧ್ಯವಾಗಲಿಲ್ಲ. ಕೋವಿಡ್ ಸಮಯದಲ್ಲಿ ಇಷ್ಟೊಂದು ಜನ ಸೇರಬಾರದು ಎಂದು ಮನವಿ ಮಾಡಿಕೊಂಡಿದ್ದೆ ಎಂದರು.

    ಇದೇ ವೇಳೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಇಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವರು, ನನಗೂ ಪೊಲೀಸರು ನೋಟಿಸ್ ನೀಡಿದ್ದಾರೆ. ನಾನು ಯಾರ ಮೇಲೆ ಏನು ಹೇಳೋಲ್ಲ, ಯಾರ ಮೇಲೂ ಆರೋಪ ಕೂಡ ಮಾಡಲ್ಲ ಎಂದು ಅವರು ತಿಳಿಸಿದರು.

    ಬಳ್ಳಾರಿ ಜಿಲ್ಲೆಯ ಲಕ್ಷ್ಮೀಪುರದಲ್ಲಿ ನಡೆದ ಮಾಜಿ ಸಚಿವ, ಹಾಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್ ಪುತ್ರ ಅವಿನಾಶ್ ಮದುವೆಗೆ ಗಣ್ಯರ ದಂಡೇ ಆಗಮಿಸಿದ್ದು, ಅದ್ಧೂರಿಯಾಗಿ ಜಾತ್ರೆಯಂತೆ ವಿವಾಹ ಮಾಡಿದ್ದಾರೆ. ನೂನಾರು ಜನ ವಿವಾಹದಲ್ಲಿ ಭಾಗಿಯಾಗಿದ್ದಾರೆ. ಇದೇ ವೇಳೆ ಸಚಿವ ಶ್ರೀರಾಮುಲು ಅವರು ಸ್ಟೇಜ್ ಮೇಲೆ ಹೋಗಿ ಕೈ ಕುಲುಕಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಯಾವುದೂ ಇಲ್ಲದೆ ನೂರಾರು ಜನ ಸೇರಿದ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ. ವಿಶೇಷವೆಂದರೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಹ ವಿವಾಹದಲ್ಲಿ ಭಾಗಿಯಾಗಿದ್ದಾರೆ.

    ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಹೆಲಿಕಾಪ್ಟರ್‍ನಲ್ಲಿ ಮದುವೆಗೆ ಆಗಮಿಸಿದ್ದು, ಇದೇ ವೇಳೆ ಹೆಲಿಕಾಪ್ಟರ್ ನೋಡಲು ಜನ ಮುಗಿ ಬಿದ್ದಿದ್ದಾರೆ. ಸಾಮಾಜಿಕ ಅಂತರವಿಲ್ಲದೆ ಜನ ಜಾತ್ರೆಯಂತೆ ಸೇರಿದ್ದಾರೆ. ಕಾಂಗ್ರೆಸ್ ಮುಖಂಡರು ಸಹ ಸಾಮಾಜಿಕ ಅಂತರವಿಲ್ಲದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕೊರೊನೊಗೆ ಡೋಂಟ್ ಕೇರ್ ಎಂದು ಮದುವೆ ಕಾರ್ಯಕ್ರಮದಲ್ಲಿ ಜನಸ್ತೋಮವೇ ಸೇರಿದೆ. ನೂರಾರು ಜನ ಸೇರಿದ ಮದುವೆ ಸಮಾರಂಭದಲ್ಲಿ ಭಾಗಿಯಾಗುವ ಮೂಲಕ ಸಚಿವ ಶ್ರೀ ರಾಮುಲು, ಸಿದ್ದರಾಮಯ್ಯ, ಡಾ.ಜಿ ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ನಾಯಕರು ಲಾಕ್‍ಡೌನ್ ನಿಯಮವನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.

  • ತುರುಬು ಬಿಚ್ಚುವುದು ಗೊತ್ತು, ಕಟ್ಟುವುದು ಗೊತ್ತು- ಈಶ್ವರಪ್ಪಗೆ ಪರಮೇಶ್ವರ್ ನಾಯ್ಕ್ ತಿರುಗೇಟು

    ತುರುಬು ಬಿಚ್ಚುವುದು ಗೊತ್ತು, ಕಟ್ಟುವುದು ಗೊತ್ತು- ಈಶ್ವರಪ್ಪಗೆ ಪರಮೇಶ್ವರ್ ನಾಯ್ಕ್ ತಿರುಗೇಟು

    ದಾವಣಗೆರೆ: ಸಚಿವ ಈಶ್ವರಪ್ಪ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಮಹಿಳೆಯರಿಗೆ ತುರುಬು ಬಿಚ್ಚುವುದು ಗೊತ್ತು, ಕಟ್ಟುವುದು ಗೊತ್ತಿದೆ ಎಂದು ಮಾಜಿ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್ ತಿರುಗೇಟು ನೀಡಿದ್ದಾರೆ.

    ಈಶ್ವರಪ್ಪ ಕಾಂಗ್ರೆಸ್‍ನ್ನು ತುರುಬಿಗೆ ಹೋಲಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪನವರಿಗೆ ಸ್ವಾಭಿಮಾನ ಇದ್ದರೆ ಅವರ ಬೆನ್ನು ಅವರು ನೋಡಿಕೊಳ್ಳಲಿ. ಅವರ ಯೋಗ್ಯತೆ ಎಲ್ಲಿಗೆ ಬಂತು ಎನ್ನುವುದು ಗೊತ್ತಾಗುತ್ತೆ. ಉಪಮುಖ್ಯಮಂತ್ರಿಯಾದವರು ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಕಿದರು.

    ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಕೊಂಡಾಡಿದ ಪಿಟಿಪಿ, ರಾಜ್ಯದಲ್ಲೇ ದಾವಣಗೆರೆಯಷ್ಟು ಯಾರೂ ಅಭಿವೃದ್ಧಿ ಮಾಡಿಲ್ಲ. ಸಾಕಷ್ಟು ಅನುದಾನ ತೆಗೆದುಕೊಂಡು ಬಂದು ಅಭಿವೃದ್ಧಿ ಕೆಲಸ ಮಾಡಿದರು. ಆದರೆ ಮತದಾರರು ಅವರ ಕೈ ಹಿಡಿಯಲಿಲ್ಲ. ವಿರೋಧಿಗಳಿಗೆ ಠೇವಣೆ ಇಲ್ಲದಂತೆ ಮಾಡಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕಿತ್ತು. ಮತದಾರರು ಆ ರೀತಿ ಮಾಡಲಿಲ್ಲ. ಆದರೆ ಈ ಬಾರಿ ಪಾಲಿಕೆ ಚುನಾವಣೆಯಲ್ಲಿಯಾದರೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದ್ದಾರೆ.

    ಅನರ್ಹ ಶಾಸಕರಿಗೆ ಹಾಗೂ ಬಿಜೆಪಿಗೆ ಸಂಬಂಧವಿಲ್ಲ ಎಂಬ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿಕೆ ಕುರಿತು ಮಾತನಾಡಿದ ಅವರು, ಬಿಜೆಪಿಯವರದ್ದು ಏಣಿ ಹತ್ತಿ ಅದನ್ನೇ ಒದೆಯುವ ಕೆಲಸ ಮಾಡುತ್ತಿದ್ದಾರೆ. ಮೊದಲಿನಿಂದಲೂ ಇದೇ ರೀತಿಯ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಗೂಳಿಹಟ್ಟಿ ಶೇಖರ್ ಸೇರಿದಂತೆ ಹಲವರನ್ನು ಪಕ್ಷಕ್ಕೆ ಸೇರಿಸಿಕೊಂಡರು. ಈಗ ಅವರ ಸ್ಥಿತಿ ಏನಾಗಿದೆ ಎನ್ನುವುದನ್ನು ನೋಡುತ್ತಿದ್ದೇವೆ. ಈಗಿನ ಬಿಜೆಪಿ ಸರ್ಕಾರ ಅನೈತಿಕ ಸರ್ಕಾರ, ಬಿಜೆಪಿಯನ್ನು ನಂಬಬೇಡಿ ಎಂದು ಅನರ್ಹ ಶಾಸಕರಿಗೆ ಹೇಳಿದ್ದೆವು. ಈಗ ಅವರಿಗೆ ಜ್ಞಾನೋದಯವಾಗಿರಬೇಕು. ಅದಕ್ಕೆ ಸವದಿಯವರು ಈ ರೀತಿ ಹೇಳಿರಬೇಕು ಎಂದು ಟಾಂಗ್ ನೀಡಿದರು.

  • ಅತ್ತ ಸರ್ಕಾರ ಹೋಗೋ ಚಿಂತೆ, ಇತ್ತ ಸಚಿವರಿಗೆ ಉದ್ಘಾಟನೆ ಚಿಂತೆ!

    ಅತ್ತ ಸರ್ಕಾರ ಹೋಗೋ ಚಿಂತೆ, ಇತ್ತ ಸಚಿವರಿಗೆ ಉದ್ಘಾಟನೆ ಚಿಂತೆ!

    ಬಳ್ಳಾರಿ: ಒಂದೆಡೆ ಸರ್ಕಾರ ಉಳಿಯುತ್ತೋ ಉರುಳುತ್ತೋ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಸಚಿವ ಪರಮೇಶ್ವರ್ ನಾಯ್ಕ್ ಸರ್ಕಾರ ಹೋಗೋ ಭಯದಲ್ಲಿ ಅಧಿಕಾರದ ದರ್ಪ ಮೆರೆದು ನೂತನ ಗ್ರಾಮ ಪಂಚಾಯತ ಕಟ್ಟಡವನ್ನು ಉದ್ಘಾಟನೆ ಮಾಡಿದ್ದಾರೆ.

    ಹಡಗಲಿ ತಾಲೂಕಿನ ಐನಹಳ್ಳಿ ಗ್ರಾಮ ಪಂಚಾಯತಿಯ ನೂತನ ಕಟ್ಟಡ ಉದ್ಘಾಟನೆ ವೇಳೆ ಸಚಿವರು ತಮ್ಮ ಅಧಿಕಾರದ ದರ್ಪ ಪ್ರದರ್ಶನ ಮಾಡಿದ್ದಾರೆ. ನೂತನ ಗ್ರಾಪಂ ಕಟ್ಟಡ ಉದ್ಘಾಟನೆಗೆ ಗ್ರಾಮಪಂಚಾಯತಿಯ ಸದಸ್ಯರಿಗೆ ಆಹ್ವಾನ ನೀಡದೇ ಸಚಿವರು ಕಟ್ಟಡ ಉದ್ಘಾಟನೆಗೆ ಮುಂದಾಗಿದ್ದರು.

    ಹೀಗಾಗಿ ಗ್ರಾಮಸ್ಥರು, ಗ್ರಾಮ ಪಂಚಾಯತಿ ಸದಸ್ಯರು ಸಚಿವರ ವರ್ತನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ಮಧ್ಯೆ ಆಗಮಿಸಿದ ಸಚಿವರು ಎಲ್ಲರನ್ನೂ ಎಕಾಏಕಿ ನೂಕಿಕೊಂಡು ಗ್ರಾಮ ಪಂಚಾಯತ ಕಟ್ಟಡವನ್ನು ಉದ್ಘಾಟನೆ ಮಾಡಿದ್ದರು. ಸಚಿವರ ಈ ನಡೆಯನ್ನು ಗ್ರಾಮಸ್ಥರು ಖಂಡಿಸಿದ್ದಾರೆ.

  • ಸಿದ್ದರಾಮಯ್ಯ ಮಂಜೂರು ಮಾಡಿದ್ದ ಯೋಜನೆಗೆ ಸ್ವಪಕ್ಷೀಯ ಸಚಿವನೇ ಅಡ್ಡಿ

    ಸಿದ್ದರಾಮಯ್ಯ ಮಂಜೂರು ಮಾಡಿದ್ದ ಯೋಜನೆಗೆ ಸ್ವಪಕ್ಷೀಯ ಸಚಿವನೇ ಅಡ್ಡಿ

    ಬಳ್ಳಾರಿ: ಜಿಲ್ಲೆಯಲ್ಲಿ ಸೇಡಿನ ರಾಜಕೀಯ ಆರಂಭವಾಯ್ತಾ ಎನ್ನುವ ಅನುಮಾನವೊಂದು ಮೂಡಿದೆ. ಯಾಕೆಂದರೆ ಮಾಜಿ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಿದ ಕಾಮಗಾರಿಗೆ ಸ್ವಪಕ್ಷೀಯ ಸಚಿವನಿಂದಲೇ ಅಡ್ಡಿಯಾಗಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. ಮುಜುರಾಯಿ ಸಚಿವ ಪಿಟಿ ಪರಮೇಶ್ವರ್ ನಾಯಕ್ ಹಾಗೂ ಶಾಸಕ ಭೀಮಾ ನಾಯ್ಕೆ ನಡುವೆ ನೀರಾವರಿ ಯೋಜನೆಗಾಗಿ ಹಗ್ಗಜಗ್ಗಾಟ ನಡೆಯುತ್ತಿದೆ. ಈ ಮೂಲಕ ಬಳ್ಳಾರಿಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ನಾಯಕರ ಜಗಳ ಬೀದಿಗೆ ಬಂದಿದೆ. ಭೀಮಾ ನಾಯ್ಕ್ ಹೀಗೆ ರೈತ ಸಭೆಯಲ್ಲಿ ಸಚಿವ ಪಿಟಿ ಪರಮೇಶ್ವರ್ ನಾಯ್ಕ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ವಿರುದ್ಧ ಪರಮೇಶ್ವರ್ ನಾಯ್ಕ್ ಸೇಡು ತೀರಿಸಿಕೊಳ್ಳಲು ಹಗರಿಬೊಮ್ಮನಹಳ್ಳಿಯ ಜನರ 50 ವರ್ಷದ ಕನಸಾಗಿರುವ 26 ಹಳ್ಳಿಗೆ ಜೀವನಾಡಿಯಾಗುವ ಮಾಲವಿ ಜಲಾಶಯಕ್ಕೆ ನೀರುಣಿಸುವ ಯೋಜನೆಗೆ ಅಡ್ಡಿ ಪಡಿಸಿದ್ದಾರೆ ಆರೋಪ ಕೇಳಿಬಂದಿದೆ.

    ಅಡ್ಡಿ ಯಾಕೆ?:
    ಕಾಮಗಾರಿ ಕೆಲಸದಲ್ಲಿ ಪರ್ಸೆಂಟೆಜ್ ಸಿಕ್ಕಿಲ್ಲ ಎಂದು ಪಿಟಿಪಿ ಯೋಜನೆಗೆ ಅಡ್ಡಿ ಪಡಿಸುತ್ತಿದ್ದಾರೆ. ನಾಮಫಲಕದಲ್ಲಿ ತನ್ನ ಹೆಸರು ಹಾಕುವಂತೆ ಪಿಟಿಪಿ ಮಸಲತ್ತು ಹಾಕಿದ್ದಾರೆ. ಇವನ್ಯಾವ ಸಚಿವರು ಯೋಜನೆ ಭೂಮಿ ಪೂಜೆ ಮಾಡೋಕೆ? ಎರಡು ವರ್ಷದಿಂದ ಪಿಟಿಪಿ ಕಿರುಕುಳ ಕೊಡುತ್ತಿದ್ದಾನೆ. ಈ ವಿಷಯವನ್ನ ಸಿದ್ದರಾಮಯ್ಯ, ಎಂಬಿ ಪಾಟೀಲ್ ಸೇರಿ ಎಲ್ಲರ ಗಮನಕ್ಕೂ ತಂದಿದ್ದರೂ ಬಗೆ ಹರಿದಿಲ್ಲ. ಈಗ ನನ್ನ ಕೈಯಲ್ಲಿ ತಡಿಯೋಕ್ ಆಗಲ್ಲ, ಒಂದಲ್ಲ ಹತ್ತು ಸಾವಿರ ರೈತರನ್ನ ಸಚಿವನ ಮನೆ ಮುಂದೆ ಸೇರಿಸ್ತೀನಿ ಎಂದು ಪರಮೇಶ್ವರ್ ನಾಯ್ಕ್ ಹೇಳುವ ಮೂಲಕ ರೈತರ ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಯೋಜನೆ ಹಿನ್ನೆಲೆಯೇನು?:
    ಹಗರಿಬೊಮ್ಮನಹಳ್ಳಿ ಕ್ಷೇತ್ರದ 26 ಹಳ್ಳಿಗೆ ನೀರುಣಿಸುವ ಮಾಲವಿ ಜಲಾಶಯಕ್ಕೆ ತುಂಗಭದ್ರಾ ಡ್ಯಾಂ ಹಿನ್ನೀರಿನಿಂದ ನೀರುಣಿಸಲು 153 ಕೋಟಿ ಯೋಜನೆ ರೂಪಿಸಲಾಗಿದೆ. ಇದಕ್ಕೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಭೂಮಿ ಪೂಜೆ ಮಾಡಿದ್ದರು. ಆದರೆ ಒಂದೂವರೆ ವರ್ಷವಾದರೂ ಯೋಜನೆ ಪೂರ್ಣವಾಗಿಲ್ಲ. ಯೋಜನೆ ವಿಳಂಬಕ್ಕೆ ಸಚಿವರು ಕಾರಣ ಎಂದು ಶಾಸಕ ಭೀಮಾನಾಯ್ಕ್ ಆರೋಪಿಸುತ್ತಿದ್ದಾರೆ.

    ಮಾಲವಿಗೆ ನೀರೊಯ್ಯಲು ಹೂವಿನಹಡಗಲಿ ಕ್ಷೇತ್ರದ ರಾಜೊಳ್ಳಿಯ ಬಳಿ ಜಾಕ್ವೆಲ್ ಕೂರಿಸಿ, ಪೈಪ್ ಲೈನ್ ಮಾಡಬೇಕು. ಹೀಗಾಗಿ ತನ್ನ ಕ್ಷೇತ್ರದ ರೈತನ ನೆರವಿನಿಂದ ಸಚಿವ ಪಿಟಿಪಿ ಈ ಯೋಜನೆ ಪೂರ್ಣವಾಗಲು ಬಿಡ್ತಿಲ್ಲ ಎಂದು ಭೀಮಾನಾಯಕ್ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

  • ಹಾಲು ಒಕ್ಕೂಟದ ಪಟ್ಟಕ್ಕೆ ಶಾಸಕರು-ಸಚಿವರ ಫೈಟ್!

    ಹಾಲು ಒಕ್ಕೂಟದ ಪಟ್ಟಕ್ಕೆ ಶಾಸಕರು-ಸಚಿವರ ಫೈಟ್!

    -ಮಗನನ್ನು ಕಣಕ್ಕಿಳಿಸಲು ಎಲೆಕ್ಷನ್ ಪೋಸ್ಟ್ ಪೋನ್!

    ಬಳ್ಳಾರಿ: ದೇಶದಲ್ಲೀಗ ಲೋಕಸಭೆ ಚುನಾವಣೆಯದ್ದೇ ಮಾತು. ಆದ್ರೆ ಗಣಿನಾಡು ಬಳ್ಳಾರಿಯಲ್ಲಿ ಮಾತ್ರ ರಾಜಕಾರಣಿಗಳು ಬೇರೆಯದ್ದೇ ಚುನಾವಣೆ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ವಿಚಿತ್ರ ಅಂದ್ರೆ ಸಚಿವರೊಬ್ಬರು ತಮ್ಮ ಪ್ರಭಾವ ಬಳಸಿ ತಮ್ಮ ಮಗನಿಗಾಗಿ ಚುನಾವಣೆಯನ್ನೇ ಮುಂದೂಡುವಂತೆ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಮುಜುರಾಯಿ ಇಲಾಖೆ ಸಚಿವ ಪರಮೇಶ್ವರ್ ನಾಯ್ಕ್ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಗೆ ಸಖತ್ ತಲೆಕೆಡಿಸಿಕೊಂಡಿದ್ದಾರೆ. ಬಳ್ಳಾರಿ, ರಾಯಚೂರು, ಕೊಪ್ಪಳ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಗೆ ತಮ್ಮ ಮಗನನ್ನು ಕಣಕ್ಕಿಳಿಸಬೇಕು ಅನ್ನೋದು ಸಚಿವ ಪರಮೇಶ್ವರ್ ನಾಯ್ಕ್ ಆಸೆ. ಈ ಸ್ಥಾನಕ್ಕೆ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ, ಶಾಸಕ ಭೀಮಾನಾಯ್ಕ್ ಕೂಡಾ ತಮ್ಮವರನ್ನೇ ಆಯ್ಕೆ ಮಾಡಲು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸಚಿವ ಪರಮೇಶ್ವರ್ ನಾಯ್ಕ್ ತಮ್ಮ ಪ್ರಭಾವ ಬಳಸಿ, ಡಿಸಿ ಮೇಲೆ ಒತ್ತಡ ಹೇರಿ ಏಪ್ರಿಲ್ 3ರ ಬದಲು ಮೇ 5ಕ್ಕೆ ಚುನಾವಣೆ ಮುಂದೂಡಿದ್ದಾರೆ.

    ಹರಪನಹಳ್ಳಿ ತಾಲೂಕು ಇತ್ತೀಚಿಗೆ ಬಳ್ಳಾರಿಗೆ ಸೇರ್ಪಡೆಯಾಗಿದೆ. ಹೀಗಾಗಿ ಶಿವಮೊಗ್ಗ ಒಕ್ಕೂಟದಲ್ಲಿರೋ ತಮ್ಮ ಪುತ್ರ ಭರತ್ ಸದಸ್ಯತ್ವವನ್ನು ಬಳ್ಳಾರಿ ಒಕ್ಕೂಟಕ್ಕೆ ವರ್ಗಾವಣೆ ಮಾಡಿಸಿ ಕಣಕ್ಕಿಳಿಸಲು ಪರಮೇಶ್ವರ್ ತಂತ್ರ ಹೂಡಿದ್ದಾರೆ. ಜೊತೆಗೆ ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಸಹ ರಾಯಚೂರಿನ ಸಿಂಧನೂರಲ್ಲಿ ತಮ್ಮವರನ್ನೇ ನಿರ್ದೇಶಕರನ್ನಾಗಿ ಮಾಡಲು ಪ್ಲಾನ್ ಮಾಡಿದ್ದಾರೆ. ಹೀಗಾಗಿ ಇಬ್ಬರೂ ಸೇರಿ ಚುನಾವಣೆ ಮುಂದೂಡಿದ್ದಾರೆ ಎಂದು ಹಾಲು ಉತ್ಪಾದಕರು ಆರೋಪಿಸುತ್ತಿದ್ದಾರೆ.

    ಹಾಸನ, ವಿಜಯಪುರ, ಶಿವಮೊಗ್ಗ, ಧಾರವಾಡ, ಮಂಗಳೂರು ಸೇರಿದಂತೆ ವಿವಿಧ ಹಾಲು ಒಕ್ಕೂಟಗಳ ಚುನಾವಣೆಗಳು ನಿಗದಿತ ದಿನಾಂಕಕ್ಕೆ ನಡೆಯುತ್ತಿವೆ. ಲೋಕಸಭೆ ಚುನಾವಣೆ ನೆಪವೊಡ್ಡಿ ತಮ್ಮವರನ್ನು ಗೆಲ್ಲಿಸಲು ಸಚಿವರು ಹೀಗೆ ಲಾಬಿ ನಡೆಸಿರೋದು ಕೆಎಂಎಫ್ ವಲಯದಲ್ಲಿ ಭಾರಿ ವಿರೋಧಕ್ಕೆ ಕಾರಣವಾಗಿದೆ.

  • ಬಾಯಲ್ಲಿ ಬೂಟು ಇಡ್ತೀನಿ ಅಂದ ಪರಮೇಶ್ವರ್ ನಾಯ್ಕ್ ವಿರುದ್ಧ ಭುಗಿಲೆದ್ದ ಆಕ್ರೋಶ

    ಬಾಯಲ್ಲಿ ಬೂಟು ಇಡ್ತೀನಿ ಅಂದ ಪರಮೇಶ್ವರ್ ನಾಯ್ಕ್ ವಿರುದ್ಧ ಭುಗಿಲೆದ್ದ ಆಕ್ರೋಶ

    ಬಳ್ಳಾರಿ: ನೀವು ನನಗೆ ಮತ ಹಾಕಿಲ್ಲ. ನಿಮ್ಮ ಬಾಯಲ್ಲಿ ಬೂಟು ಇಟ್ಟು ಹೊಡೆಯುತ್ತೇನೆ ಎಂದು ಅವಾಜ್ ಹಾಕಿದ್ದ ಪರಮೇಶ್ವರ್ ನಾಯ್ಕ್ ವಿರುದ್ಧ ಹಡಗಲಿ ಜನರು ಆಕ್ರೋಶ ಗೊಂಡಿದ್ದು, ಜನರು ಪರಮೇಶ್ವರ್ ನಾಯ್ಕ್ ಶಾಸಕತ್ವವನ್ನು ರದ್ದು ಮಾಡಿ ಅಂತ ಆಂದೋಲನ ಶುರು ಮಾಡಿದ್ದಾರೆ.

    ಇತ್ತೀಚೆಗೆ ಮೈಲಾರ ಗ್ರಾಮದ ಮತದಾರರಿಗೆ ಮನಸೋ ಇಚ್ಛೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಪರಮೇಶ್ವರ್ ನಾಯ್ಕ್ ರ ಶಾಸಕತ್ವವನ್ನ ರದ್ದುಗೊಳಿಸಬೇಕೆಂದು ಆಗ್ರಹಿಸಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಓದೋ ಗಂಗಪ್ಪ ನೇತೃತ್ವದಲ್ಲಿ ಇಂದು ಸಾವಿರಾರು ಮತದಾರರು ಬೃಹತ್ ಪ್ರತಿಭಟನೆ ನಡೆಸಿದರು.

    ಹಡಗಲಿಯ ಮೈಲಾರ ದೇವಸ್ಥಾನದಿಂದ ಹಡಗಲಿಯ ವಿವಿಧೆಡೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಓದೋ ಗಂಗಪ್ಪ ಅಭಿಮಾನಿಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪರಮೇಶ್ವರ್ ನಾಯ್ಕ್ ರಿಂದ ಕ್ಷೇತ್ರದ ಜನರಿಗೆ ಅವಮಾನವಾಗಿದೆ ಅಂತಾ ಕಿಡಿಕಾರಿದರು. ಅಲ್ಲದೇ ಮತದಾರರಿಂದ ಮತ ಪಡೆದು ಅವರ ಬಾಯಲ್ಲೇ ಬೂಟು ಇಡ್ತೀನಿ ಅನ್ನೋ ಅವರಿಗಿರುವ ದರ್ಪ ದಬ್ಬಾಳಿಕೆ ಹಿನ್ನೆಲೆಯಲ್ಲಿ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕೆಂದು ತಹಶಿಲ್ದಾರ್ ಮೂಲಕ ವಿಧಾನ ಸಭಾಧ್ಯಕ್ಷರು ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಪುರಸಭೆ ಸದಸ್ಯ ವಿಲನ್ಸ್ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಲೆಕ್ಷನ್‍ನಲ್ಲಿ ಅಧಿಕಾರಿಯ ಸಹೋದರ ಸಹಾಯ ಮಾಡಿಲ್ಲಂತ ಸೇಡು -ಎಇಇಗೆ ಪರಮೇಶ್ವರ್ ನಾಯ್ಕ್ ಅವಮಾನ

    ಎಲೆಕ್ಷನ್‍ನಲ್ಲಿ ಅಧಿಕಾರಿಯ ಸಹೋದರ ಸಹಾಯ ಮಾಡಿಲ್ಲಂತ ಸೇಡು -ಎಇಇಗೆ ಪರಮೇಶ್ವರ್ ನಾಯ್ಕ್ ಅವಮಾನ

    ಬಳ್ಳಾರಿ: ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಮಾಜಿ ಸಚಿವರೊಬ್ಬರು ಫೋನ್ ರಿಸೀವ್ ಮಾಡಲಿಲ್ಲ ಅಂತಾ ಡಿವೈಎಸ್ ಪಿ ಅನುಪಮಾ ಶೆಣೈರನ್ನ ಎತ್ತಂಗಡಿ ಮಾಡಿದ ಪ್ರಕರಣ ಇನ್ನೂ ರಾಜ್ಯದ ಜನರ ಮನಸ್ಸಿನಿಂದ ಮಾಸಿಲ್ಲ. ನಾನು ಡಿವೈಎಸ್ಪಿ ಎತ್ತಂಗಡಿ ಮಾಡೇ ಇಲ್ಲಾ ಅಂತಾ ವಾದಿಸಿ ಕೊನೆಗೆ ಸಿಕ್ಕಿಕೊಂಡಿದ್ದ ಮಾಜಿ ಮಂತ್ರಿಗಳು ಇದೀಗ ಮತ್ತೊಂದು ಕಿತಾಪತಿ ಮಾಡಿದ್ದಾರೆ.

    ಮಾಜಿ ಮಂತ್ರಿ ಮತ್ತು ಹಾಲಿ ಶಾಸಕ ಪಿಟಿ ಪರಮೇಶ್ವರ ನಾಯ್ಕ್, ಚುನಾವಣೆಯಲ್ಲಿ ಅಧಿಕಾರಿಯೊಬ್ಬರ ಸಹೋದರ ತಮ್ಮ ಪರವಾಗಿ ಕೆಲಸ ಮಾಡಲಿಲ್ಲ ಅಂತಾ ಜೆಸ್ಕಾ ಇಲಾಖೆಯ ಎಇಇ (ಅಸಿಸ್ಟೆಂಟ್ ಎಜ್ಯೂಕ್ಯೂಟಿವ್ ಎಂಜಿನಿಯರ್) ಗೆ ತುಂಬಿದ ಸಭೆಯಲ್ಲಿ ಎಲ್ಲರೆದುರೆಗೆ ಅವಮಾನ ಮಾಡಿ ಮನೆಗೆ ಕಳುಹಿಸಿದ್ದಾರೆ.

    ಹೂವಿನಹಡಗಲಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಜೆಸ್ಕಾ ಎಇಇ ಆಗಿ ಸೇವೆ ಸಲ್ಲಿಸುತ್ತಿದ್ದ ಶ್ರೀನಿವಾಸ ಮಂತ್ರೋಂಡಿಯವರ ಸಹೋದರರೊಬ್ಬರು ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಓದು ಗಂಗಪ್ಪ ಪರ ಕೆಲಸ ಮಾಡಿದ್ದರು. ಇದನ್ನೆ ಅಸ್ತ್ರವಾಗಿ ಮಾಡಿಕೊಂಡ ಪರಮೇಶ್ವರ ನಾಯ್ಕ್ ಎಇಇ ಶ್ರೀನಿವಾಸರನ್ನ ನೀವೂ ಚುನಾವಣೆಯಲ್ಲಿ ನನ್ನ ಪರವಾಗಿ ಕೆಲಸ ಮಾಡಿಲ್ಲವೆಂದು ತುಂಬಿದ ಸಭೆಯಲ್ಲಿ ಅವಮಾನ ಮಾಡಿದ್ದಾರೆ. ಅಲ್ಲದೇ ನೀವೂ ಇಲ್ಲಿಂದ ಹೋಗಿಬಿಡಿ ಇಲ್ಲದಿದ್ದರೇ ನಿಮ್ಮ ಮೇಲೆ ನಾನೇ ಹಿರಿಯ ಅಧಿಕಾರಿಗಳಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮಾಡುವೆ ಅಂತಾ ಧಮ್ಕಿ ಹಾಕಿದ್ದಾರೆ.

    ಹೀಗಾಗಿ ಶಾಸಕರ ಸೇಡಿನ ರಾಜಕಾರಣಕ್ಕೆ ಮನನೊಂದ ಜೆಸ್ಕಾನ ಎಇಇ ಶ್ರೀನಿವಾಸರು ದೀರ್ಘ ರಜೆ ಹಾಕಿ ಮನೆಗೆ ಹೋಗಿದ್ದಾರೆ. ಅಲ್ಲದೇ ಈ ಅವಕಾಶವನ್ನೆ ಬಳಸಿಕೊಂಡ ಪರಮೇಶ್ವರ ನಾಯ್ಕ್ ಅದೇ ಜೆಸ್ಕಾಗೆ ತಮ್ಮ ಆಪ್ತರಾದ ಹಡಗಲಿ ಮೂಲದ ಮೋಟ್ಲಾ ನಾಯ್ಕ್ ಅವರನ್ನು ಪೋಸ್ಟಿಂಗ್ ಸಹ ಮಾಡಿಸಿಕೊಂಡು ಬಂದಿದ್ದಾರೆ. ತಮ್ಮ ವಿರುದ್ಧ ಕೆಲಸ ಮಾಡಿದವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿರುವ ಪರಮೇಶ್ವರ ನಾಯ್ಕ್ ರ ವರ್ತನೆಯಿಂದ ಮತ್ತೊಬ್ಬ ಪ್ರಾಮಾಣಿಕ ಅಧಿಕಾರಿ ಮನನೊಂದು ಮನೆಗೆ ಹೋಗಿದ್ದಾರೆ.

    ಅಷ್ಟೇ ಅಲ್ಲದೇ ತಮ್ಮಗಾದ ಅವಮಾನವನ್ನು ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಈಗಾಗಲೇ ಹಲವಾರು ಅಧಿಕಾರಿಗಳಿಗೆ ಕಿರುಕುಳ ನೀಡಿರುವ ಪರಮೇಶ್ವರ ನಾಯ್ಕ್ ಇದೀಗ ಸಿಎಂ ಕುಮಾರಸ್ವಾಮಿಯವರ ಇಲಾಖೆಯ ಅಧಿಕಾರಿಗೆ ಅವಮಾನ ಮಾಡಿ ಮನೆಗೆ ಕಳುಹಿಸಿರುವುದರಿಂದ ಸಿಎಂ ಕುಮಾರಸ್ವಾಮಿ ತಮ್ಮ ಇಲಾಖೆಯ ಅಧಿಕಾರಿಗಾದ ಅವಮಾನಕ್ಕೆ ನ್ಯಾಯ ಕೊಡಿಸುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.

  • ಪರಮೇಶ್ವರ್  ನಾಯ್ಕ್ ಗೆ ಟಿಕೆಟ್ ಕೊಡಬೇಡಿ- ಕಾಂಗ್ರೆಸ್ ವೀಕ್ಷಕರಿಗೆ ಕಾರ್ಯಕರ್ತರಿಂದಲೇ ದೂರು

    ಪರಮೇಶ್ವರ್ ನಾಯ್ಕ್ ಗೆ ಟಿಕೆಟ್ ಕೊಡಬೇಡಿ- ಕಾಂಗ್ರೆಸ್ ವೀಕ್ಷಕರಿಗೆ ಕಾರ್ಯಕರ್ತರಿಂದಲೇ ದೂರು

    ಬಳ್ಳಾರಿ: ಮಾಜಿ ಸಚಿವ, ಹಡಗಲಿ ಶಾಸಕ ಪರಮೇಶ್ವರ್ ನಾಯ್ಕ್ ಗೆ ಕಾಂಗ್ರೆಸ್ ಟಿಕೆಟ್ ನೀಡಬೇಡಿ ಅಂತ ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಕಾಂಗ್ರೆಸ್ ವೀಕ್ಷಕರಿಗೆ ದೂರು ನೀಡುವ ಮೂಲಕ ಪರಮೇಶ್ವರ್ ನಾಯ್ಕ್ ವಿರುದ್ಧ ಸಿಡಿದೆದ್ದಿದ್ದಾರೆ.

    ಪರಮೇಶ್ವರ್ ನಾಯ್ಕ್ ಬದಲಾಗಿ ಯುವಕರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ. ಪರಮೇಶ್ವರ್ ನಾಯ್ಕ್ ಗೆ ಟಿಕೆಟ್ ನೀಡಿದ್ರೆ ನಾವು ಪಕ್ಷದ ಪರವಾಗಿ ಕೆಲಸ ಮಾಡಲ್ಲವೆಂದು ಕಾರ್ಯಕರ್ತರು ವೀಕ್ಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಯುವ ಮುಖಂಡ ಕೃಷ್ಣ ನಾಯ್ಕ್ ಸೇರಿ ಒಟ್ಟು 9 ಆಕ್ಷಾಂಕಿಗಳು ಕಾಂಗ್ರೆಸ್ ವೀಕ್ಷಕರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.

    ಪರಮೇಶ್ವರ್ ನಾಯ್ಕ್ ದುರಂಹಕಾರಿ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಇತಂಹವರಿಗೆ ಟಿಕೆಟ್ ನೀಡಿದ್ರೆ ಪಕ್ಷಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಅಂತಿದ್ದಾರೆ ಕೈ ಕಾರ್ಯಕರ್ತರು.

  • ಮಾಜಿ ಸಚಿವ ಪರಮೇಶ್ವರ್ ನಾಯ್ಕ್ ಕೃಪಾಕಟಾಕ್ಷ -ಗನ್ ಮ್ಯಾನ್‍ಗೂ ಸರ್ಕಾರಿ ಕಾಮಗಾರಿ ಗುತ್ತಿಗೆ

    ಮಾಜಿ ಸಚಿವ ಪರಮೇಶ್ವರ್ ನಾಯ್ಕ್ ಕೃಪಾಕಟಾಕ್ಷ -ಗನ್ ಮ್ಯಾನ್‍ಗೂ ಸರ್ಕಾರಿ ಕಾಮಗಾರಿ ಗುತ್ತಿಗೆ

    ಬಳ್ಳಾರಿ: ರಾಜಕಾರಣಿಗಳಿಗೆ ಗನ್ ಮ್ಯಾನ್ ಗಳು ಭದ್ರತೆ ಕೊಡೋದನ್ನ ನೀವು ನೋಡಿರ್ತೀರಿ, ಕೇಳಿರ್ತೀರಿ. ಆದ್ರೆ ಮಾಜಿ ಸಚಿವ, ಹಾಲಿ ಶಾಸಕರಿಗೆ ಭದ್ರತೆ ನೀಡೋ ಗನ್ ಮ್ಯಾನ್ ಒಬ್ಬರಿಗೆ ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಭಾಗ್ಯ ದೊರೆತಿದೆ. ಭದ್ರೆತೆ ನೀಡಿದ್ದಕ್ಕಾಗಿ ಶಾಸಕರು ಮೂರು ಕಾಮಗಾರಿಗಳ ಕೆಲಸವನ್ನು ಗನ್ ಮ್ಯಾನ್ ಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

    ಮಾಜಿ ಸಚಿವ, ಹಡಗಲಿಯ ಹಾಲಿ ಶಾಸಕ ಪರಮೇಶ್ವರ ನಾಯ್ಕ್ ರ ಭ್ರಷ್ಟತನ ಈಗಾಗಲೇ ರಾಜ್ಯದ ಜನರಿಗೆ ತಿಳಿದಾಗಿದೆ. ಆದ್ರೆ ಇದೂವರೆಗೂ ಸರ್ಕಾರದಿಂದ ಬರೋ ಯೋಜನೆಗಳು, ಕಾಮಗಾರಿಗಳನ್ನು ಬೆಂಬಲಿಗರು, ಪರಮಾಪ್ತರಿಗೆ ಮಾತ್ರ ಹಂಚುತ್ತಿದ್ದ ಪರಮೇಶ್ವರ ನಾಯ್ಕ್, ಇದೀಗ ಮತ್ತೊಂದು ಅಕ್ರಮ ಎಸಗಿದ್ದಾರೆ.

    ಹಡಗಲಿ ಪುರಸಭೆಯ 14ನೇ ಹಣಕಾಸು ಯೋಜನೆಯಲ್ಲಿನ ಮೂರು ಕಾಮಗಾರಿಗಳನ್ನು ತಮ್ಮ ಗನ್ ಮ್ಯಾನ್ ಎಕಾಂಬರ್ ನಾಯ್ಕ್ ಗೆ ಗುತ್ತಿಗೆ ನೀಡಿ ಮತ್ತೊಂದು ಅಕ್ರಮ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ. 14ನೇ ಹಣಕಾಸು ಯೋಜನೆಯಲ್ಲಿ 79.58 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ 16 ಕಾಮಗಾರಿಗಳ ಪೈಕಿ ತಲಾ 5 ಲಕ್ಷದ ಮೂರು ಕಾಮಗಾರಿಗಳನ್ನು ತಮ್ಮ ಗನ್ ಮ್ಯಾನ್ ಎಕಾಂಬರ್ ನಾಯ್ಕ್ ಗೆ ನೀಡಿರುವುದು ಪರಮೇಶ್ವರ ನಾಯ್ಕ್ ರ ಪರಮಭ್ರಷ್ಟತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

    ಪುರಸಭೆಯಿಂದ 14ನೇ ಹಣಕಾಸಿನ ಯೋಜನೆಗಳ ಕಾಮಗಾರಿಯ ಟೆಂಡರ್ ಮುದ್ದಿ ಸುರೇಶ ಎನ್ನುವವರಿಗಾಗಿದೆ. ಆದ್ರೆ ಟೆಂಡರ್ ಯಾರಿಗಾದ್ರೂ ಏನು, ಕಾಮಗಾರಿಗಳ ಲಿಸ್ಟ್ ಹಾಗೂ ಕೆಲಸ ಮಾಡೋ ಗುತ್ತಿಗೆದಾರರ ಲಿಸ್ಟ್ ಮಾತ್ರ ಪರಮೇಶ್ವರ ನಾಯ್ಕ್ ಅವರೇ ಫೈನಲ್ ಮಾಡ್ತಾರೆ. ಹೀಗಾಗಿ ಹೂವಿನಹಡಗಲಿಯಲ್ಲಿ ನಡೆಯೋ ಕಾಮಗಾರಿಗಳ ಬಿಲ್ ಒಬ್ಬರ ಹೆಸರಿಗೆ ನೀಡಿದ್ರೆ, ಕೆಲಸ ಮಾಡೋದು ಮಾತ್ರ ಇನ್ಯಾರೋ ಎನ್ನುವಂತಾಗಿದೆ. ಅಲ್ಲದೇ 16 ಕಾಮಗಾರಿಗಳ ಲಿಸ್ಟ್ ಫೈನಲ್ ಮಾಡಿರುವ ಪರಮೇಶ್ವರ ನಾಯ್ಕ್ ಮೂರು ಕಾಮಗಾರಿಗಳನ್ನು ಕೇವಲ `ಈ’ ಅನ್ನೋ ಹೆಸರಿಗೆ ನೀಡಲು ಸೂಚಿಸಿರುವುದು ಪರಮೇಶ್ವರ ನಾಯ್ಕ್ ರ ಜಾಣತನವನ್ನು ಎತ್ತಿ ತೋರಿಸುತ್ತಿದೆ.

    ಎಲ್ಲ ಕಾಮಗಾರಿಗಳನ್ನು ಹಂಚಿಕೆ ಮಾಡಿರುವ ಶಾಸಕ ಪರಮೇಶ್ವರ ನಾಯ್ಕ್, ಮೂರು ಕಾಮಗಾರಿಗಳನ್ನು ಗನ್ ಮ್ಯಾನ್ ಎಕಾಂಬರ್ ಗೆ ನೀಡಿದ್ದಾರೆ ಅಂತಾ ಪುರಸಭೆ ಸದಸ್ಯರು ಆರೋಪ ಮಾಡುತ್ತಿದ್ದಾರೆ. ಈ ಕುರಿತು ಪುರಸಭೆ ಮುಖ್ಯಾಧಿಕಾರಿಗಳನ್ನು ಪ್ರಶ್ನೆ ಮಾಡಿದ್ರೆ ಹಾಗೆಲ್ಲಾ ಏನೂ ಆಗಿಲ್ಲ. ಜಿಲ್ಲಾಧಿಕಾರಿಗಳ ಬಳಿ ಅಂತಿಮ ಪಟ್ಟಿ ಇದೆ ಅಂತಾ ಹಾರಿಕೆ ಉತ್ತರ ನೀಡುತ್ತಾರೆ.

    14ನೇ ಹಣಕಾಸು ಯೋಜನೆಯು ಪ್ರಥಮ ದರ್ಜೆ ಗುತ್ತಿಗೆದಾರರ ಹೆಸರಿನಲ್ಲಿ ಟೆಂಡರ್ ಆದ್ರೂ ಕಾಮಗಾರಿಗಳನ್ನು ಮಾತ್ರ ಪರಮೇಶ್ವರ ನಾಯ್ಕ್ ಪರಮಾಪ್ತರೇ ಮಾಡೋದು ಅಂತಾ ಪುರಸಭೆ ಸದಸ್ಯರು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ದಕ್ಷ ಅಧಿಕಾರಿ ಎಂದು ಹೆಸರು ಗಳಿಸಿರುವ ಬಳ್ಳಾರಿ ಜಿಲ್ಲಾಧಿಕಾರಿಗಳು ಶಾಸಕರ ಗನ್ ಮ್ಯಾನ್ ಗೂ ಕಾಮಗಾರಿಗಳ ಗುತ್ತಿಗೆ ನೀಡಿರುವ ಪ್ರಕರಣ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

  • ಪರಮೇಶ್ವರ್ ನಾಯ್ಕ್ ದರ್ಬಾರ್: ಪ್ರಕಟಣೆಯಾದ ದಿನವೇ ಟೆಂಡರ್ ಮುಕ್ತಾಯ- ಗೋಲ್ಮಾಲ್ ಬಯಲಾದ್ಮೇಲೆ ದಾಖಲೆಗಳೇ ಮಾಯ

    ಪರಮೇಶ್ವರ್ ನಾಯ್ಕ್ ದರ್ಬಾರ್: ಪ್ರಕಟಣೆಯಾದ ದಿನವೇ ಟೆಂಡರ್ ಮುಕ್ತಾಯ- ಗೋಲ್ಮಾಲ್ ಬಯಲಾದ್ಮೇಲೆ ದಾಖಲೆಗಳೇ ಮಾಯ

    ಬಳ್ಳಾರಿ: ಮಾಜಿ ಸಚಿವ, ಹಾಲಿ ಶಾಸಕ ಪರಮೇಶ್ವರ್ ನಾಯ್ಕ್ ಆಡಿದ್ದೇ ಆಟ ಮಾಡಿದ್ದೇ ಕಾನೂನು ಎಂಬಂತಾಗಿದೆ. ಸಾಮಾನ್ಯವಾಗಿ ಟೆಂಡರ್ ಕರೆಯೋಕೆ ಅದರದ್ದೇ ಆದ ರೂಲ್ಸ್ ಗಳಿವೆ. ಆದ್ರೆ ಬಳ್ಳಾರಿಯಲ್ಲಿ ಮಾತ್ರ ಈ ರೂಲ್ಸ್ ಯಾವ ಲೆಕ್ಕಕ್ಕೂ ಇಲ್ಲ.

    ಹೂವಿನಹಡಗಲಿಯ ಮಾನ್ಯರ ಮಸಲವಾಡ, ಕೊಯಿಲಾರಗಟ್ಟಿ ಗ್ರಾಮಗಳ ಕೆರೆ ಹೂಳೆತ್ತುವ ಕಾಮಗಾರಿಗೆ ಅಧಿಕಾರಿಗಳು, ಹಾಲಿ ಶಾಸಕ ಪರಮೇಶ್ವರ್ ನಾಯ್ಕ್ ಟೆಂಡರ್ ಕರೆದು ಅದ್ರ ಜಾಹೀರಾತನ್ನ ಈ ಸಂಜೆ ಪತ್ರಿಕೆಯಲ್ಲಿ ಪ್ರಕಟಿಸಿದ್ರು. ವಿಚಿತ್ರ ಅಂದ್ರೆ ಅದೇ ಸಂಜೆ ಟೆಂಡರ್ ಸಹ ಮುಗಿದುಹೋಗಿದೆ. ಈ ಬಗ್ಗೆ ಸೋಗಿ ಜಿಲ್ಲಾ ಪಂಚಾಯತ್ ಸದಸ್ಯ ವಿಶ್ವನಾಥ ದಾಖಲೆ ಸಮೇತ ಜಿಲ್ಲಾ ಪಂಚಾಯತ ಸಿಇಓಗೆ ದೂರು ಸಲ್ಲಿಸಿದ್ದಾರೆ.

    ಇನ್ನೊಂದು ವಿಚಿತ್ರ ಅಂದ್ರೆ ಅಕ್ರಮ ಬಯಲಾಗ್ತಿದ್ದಂತೆ ದಾಖಲೆಗಳು ಸಹ ನಾಪತ್ತೆಯಾಗಿದೆ. ಕಳ್ಳತನವಾಗಿರುವ ಟೆಂಡರ್ ಪ್ರಕಟಣೆಯ ದಾಖಲೆಗಳನ್ನು ಜಿಲ್ಲಾ ಪಂಚಾಯತ್ ಮುಂದೆ ಹಾಜರುಪಡಿಸುವಂತೆ ಸಿಇಓ ಆದೇಶ ನೀಡಿದ್ದಾರೆ. ಇನ್ನು ಈ ಬಗ್ಗೆ ಸೂಕ್ತ ತನಿಖೆಗೆ ಸ್ಥಳೀಯರು ಆಗ್ರಹಿಸಿದ್ದಾರೆ.