Tag: ಪಬ್

  • ಪಬ್‍ನಲ್ಲಿ ಬಿಗ್‍ಬಾಸ್ ವಿನ್ನರ್ ಮೇಲೆ ದಾಳಿ – ತಲೆಗೆ ಬಿಯರ್ ಬಾಟಲಿಯಿಂದ ಹಲ್ಲೆ

    ಪಬ್‍ನಲ್ಲಿ ಬಿಗ್‍ಬಾಸ್ ವಿನ್ನರ್ ಮೇಲೆ ದಾಳಿ – ತಲೆಗೆ ಬಿಯರ್ ಬಾಟಲಿಯಿಂದ ಹಲ್ಲೆ

    ಹೈದರಾಬಾದ್: ತೆಲುಗು ‘ಬಿಗ್‍ಬಾಸ್ ಸೀಸನ್ 3’ ನೇ ವಿಜೇತರಾಗಿರುವ ಗಾಯಕ ರಾಹುಲ್ ಸಿಪ್ಲಿಗುಂಜ್ ಮೇಲೆ ಪಂಬ್‍ವೊಂದರಲ್ಲಿ ದಾಳಿ ನಡೆದಿದೆ.

    ಬುಧವಾರ ರಾಹುಲ್ ಪಬ್‍ಗೆ ತೆರಳಿದ್ದರು. ಈ ವೇಳೆ ಕೆಲವು ಯುವಕರ ಗುಂಪು ರಾಹುಲ್ ಮೇಲೆ ದಾಳಿ ನಡೆಸಿದೆ. ಈ ವೇಳೆ ವ್ಯಕ್ತಿಯೊಬ್ಬ ರಾಹುಲ್ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದಿದ್ದಾನೆ ಎನ್ನಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಬ್‍ನಲ್ಲಿ ಕೆಲವರು ರಾಹುಲ್ ಅವರ ಗೆಳತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಈ ವಿಚಾರಕ್ಕೆ ಗಲಾಟೆ ನಡೆದು ಹಲ್ಲೆ ಮಾಡಲಾಗಿದೆ. ಈ ಘಟನೆಯಲ್ಲಿ ರಾಹುಲ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಸದ್ಯಕ್ಕೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಬ್‌-ಇನ್ಸ್‌ಪೆಕ್ಟರ್ ವೈ ಸುರೇಂದರ್ ರೆಡ್ಡಿ ತಿಳಿಸಿದ್ದಾರೆ.

    ಬುಧವಾರ ರಾತ್ರಿ ಈ ಗಲಾಟೆ ನಡೆದಿದೆ. ಗುಂಪಿನಲ್ಲಿದ್ದರಲ್ಲಿ ಒಬ್ಬರು ಬಿಯರ್ ಬಾಟಲಿಗಳಿಂದ ತಲೆಗೆ ಹೊಡೆದಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪಬ್‍ನಲ್ಲಿ ಹಲ್ಲೆ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾಲ್ಲಿ ವೈರಲ್ ಆಗುತ್ತಿದೆ.

    ರಾಹುಲ್ ಹಿನ್ನೆಲೆ ಗಾಯಕ ಮತ್ತು ಸಂಗೀತಗಾರರಾಗಿದ್ದು, ಕೆಲವು ಟಾಲಿವುಡ್ ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೇ ರಾಹುಲ್ ಸಿಪ್ಲಿಗುಂಜ್ ‘ಬಿಗ್‍ಬಾಸ್ ಸೀಸನ್ 2’ ರಲ್ಲಿ ವಿನ್ನರ್ ಆಗುವ ಮೂಲಕ 50 ಲಕ್ಷ ಬಹುಮಾನವನ್ನು ಗೆದ್ದಿದ್ದಾರೆ.

  • ಇಂಗ್ಲೆಂಡ್‍ ಪಬ್‍ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಮೇಲೆ ಹಲ್ಲೆ, ಸಾವು

    ಇಂಗ್ಲೆಂಡ್‍ ಪಬ್‍ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಮೇಲೆ ಹಲ್ಲೆ, ಸಾವು

    ಲಂಡನ್: ಇಂಗ್ಲೆಂಡ್‍ ಮಿಡ್‍ಲ್ಯಾಂಡ್ಸ್ ನ ನಾಟಿಂಗ್‍ಹ್ಯಾಮ್ ಪಬ್‍ವೊಂದರಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದು, ಈಗ ಆತ ಸಾವನ್ನಪ್ಪಿದ್ದಾನೆ.

    ಅರ್ಜುನ್ ಸಿಂಗ್ (20) ಮೃತಪಟ್ಟ ಯುವಕ. ಈ ಬಗ್ಗೆ ಪ್ರತಿಕ್ರಿಯಿಸಿದ ನಾಟಿಂಗ್‍ಹ್ಯಾಮ್ ಪೊಲೀಸರು, 20 ವರ್ಷದ ಯುವಕನೊಬ್ಬ ಅರ್ಜುನನ್ನು ಕೊಲೆ ಮಾಡಿದ್ದಾನೆ. ವಿಚಾರಣೆ ನಡೆಸಲು ನಾವು ಯುವಕನನ್ನು ಬಂಧಿಸಿದ್ದೆವೆ. ಶನಿವಾರ ಸಂಜೆ ಅರ್ಜುನ್ ಮೇಲೆ ಹಲ್ಲೆ ಆಗಿದ್ದು, ಭಾನುವಾರ ಆಸ್ಪತ್ರೆಯಲ್ಲಿ ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

    ನಾಟಿಂಗ್‍ಹ್ಯಾಮ್ ಪೊಲೀಸ್‍ನ ಡಿಟೆಕ್ಟಿವ್ ಇನ್ಸ್ ಪೆಕ್ಟರ್ ರಿಚರ್ಡ್ ಮಾಂಕ್ ಪ್ರತಿಕ್ರಿಯಿಸಿ, ಪತ್ತೆದಾರರ ತಂಡ ನಿರಂತರವಾಗಿ ತನಿಖೆ ನಡೆಸುತ್ತಿದೆ ಮತ್ತು ಕೊಲೆಯ ಅನುಮಾನದ ಮೇಲೆ ಬಂಧನಕ್ಕೊಳಗಾದ ಯುವಕನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದರು.

    ಅರ್ಜುನ್ ಸಿಂಗ್ ಅವರ ಕುಟುಂಬಸ್ಥರು ಈ ಘಟನೆಯ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ವಿನಂತಿಸಿದ್ದಾರೆ. ನಾವು ಸಾಕ್ಷಿಗಾಗಿ, ಜನರ ಬಳಿಯಿರುವ ದೃಶ್ಯಗಳಿಗಾಗಿ ಹಾಗೂ ಘಟನೆ ಬಗ್ಗೆ ಮಾಹಿತಿ ನೀಡುವ ವ್ಯಕ್ತಿಗಾಗಿ ಕಾಯುತ್ತಿದ್ದೆವೆ ಎಂದು ರಿಚರ್ಡ್ ಮಾಂಕ್ ಹೇಳಿದ್ದಾರೆ.

    ನಾಟಿಂಗ್‍ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಅರ್ಜುನ್ ಸಿಂಗ್ ಮೇಲೆ ನಾಟಿಂಗ್‍ಹ್ಯಾಮ್‍ನ ಲಾಂಗ್ ರೋ ಬಳಿಯಿರುವ ಪಬ್‍ನಲ್ಲಿ ಹಲ್ಲೆ ನಡೆಸಲಾಗಿತ್ತು. ತಕ್ಷಣ ಆತನನ್ನು ನಿಕಟವರ್ತಿ ಕ್ವೀನ್ಸ್ ಮೆಡಿಕಲ್ ಸೆಂಟರ್ ಗೆ ಕರೆದುಕೊಂಡು ಹೋಗಲಾಯಿತು. ಆಸ್ಪತ್ರೆಗೆ ದಾಖಲಾದ ಮರುದಿನವೇ ಅರ್ಜುನ್ ಮೃತಪಟ್ಟಿದ್ದಾನೆ.

  • ಪಾರ್ಟಿಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ – ಪ್ರಶ್ನಿಸಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

    ಪಾರ್ಟಿಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ – ಪ್ರಶ್ನಿಸಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

    ಬೆಂಗಳೂರು: ಹೊಸ ವರ್ಷಾಚರಣೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದ ಒಂದೊಂದೇ ಅವಘಡಗಳು ಬೆಳಕಿಗೆ ಬರುತ್ತಿದೆ. ನ್ಯೂ ಇಯರ್ ಪಾರ್ಟಿಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನ್ನು ಪ್ರಶ್ನೆ ಮಾಡಿದ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಕೋರಮಂಗಲದಲ್ಲಿ ನಡೆದಿದೆ.

    ಕೋರಮಂಗಲದ ಐದನೇ ಹಂತದಲ್ಲಿರುವ ಮ್ಯಾಡ್ ಸೈನಟಿಸ್ಟ್ ಪಬ್ ನಲ್ಲಿ ಈ ಘಟನೆ ನಡೆದಿದ್ದು, ಕೇರಳ ಮೂಲದ ಎಂಜಿನಿಯರ್ ವಿದ್ಯಾರ್ಥಿ ಅರ್ಜುನ್ ಎಂಬುವವರಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಹೊಸ ವರ್ಷದ ಸಂಭ್ರಮಾಚರಣೆ ಮಾಡುವುದಕ್ಕೆ ಅರ್ಜುನ್ ಸೇರಿದಂತೆ ಇಬ್ಬರು ಯುವಕ ಯುವತಿಯರು ಪಬ್ ಗೆ ಹೋಗಿದ್ದಾರೆ.

    ಈ ವೇಳೆ ಪಾರ್ಟಿಯಲ್ಲಿ ಡಾನ್ಸ್ ಮಾಡುವ ವೇಳೆ ಯುವಕರ ಗುಂಪೊಂದು ಡಾನ್ಸ್ ಮಾಡುವ ನೆಪದಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದರು. ಇದನ್ನು ನೋಡಿದ ಅರ್ಜುನ್ ಯುವಕರನ್ನು ಪ್ರಶ್ನೆ ಮಾಡಿದ್ದ, ಇದರಿಂದ ಕೋಪಗೊಂಡ ಯುವಕರ ಗುಂಪು ಪಬ್ ಒಳಗಡೆಯೇ ವಿದ್ಯಾರ್ಥಿ ಅರ್ಜುನ್ ನನ್ನ ಹಿಗ್ಗಾಮುಗ್ಗಾ ಥಳಿಸಿದೆ. ಅರ್ಜುನ್ ಬಲಕಣ್ಣು, ಮುಖ ಸೇರಿದಂತೆ ದೇಹದ ಕೆಲ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಜಡೆ ಜಗಳಕ್ಕೆ ಬ್ರೇಕ್ – ಸಂಜನಾ, ವಂದನಾ ಫುಲ್ ಸೈಲೆಂಟ್

    ಜಡೆ ಜಗಳಕ್ಕೆ ಬ್ರೇಕ್ – ಸಂಜನಾ, ವಂದನಾ ಫುಲ್ ಸೈಲೆಂಟ್

    ಬೆಂಗಳೂರು: ನಟಿ ಸಂಜನಾ ಮತ್ತು ನಿರ್ಮಾಪಕಿ ವಂದನಾ ಇಬ್ಬರು ಕೂಡ ಪಬ್ ಒಂದರಲ್ಲಿ ಕುಡಿದು ಪರಸ್ಪರ ಕಿತ್ತಾಡಿಕೊಂಡಿದ್ದರು. ಒಬ್ಬರ ನಡೆತೆ ಮೇಲೆ ಮತ್ತೊಬ್ಬರು ಆರೋಪವನ್ನು ಮಾಡಿಕೊಂಡಿದ್ದರು. ಆದರೆ ಈಗ ಆ ಜಗಳಕ್ಕೆ ಇಬ್ಬರು ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ.

    ಯುಬಿ ಸಿಟಿ ಬಳಿಯ ಪಬ್ ಒಂದರಲ್ಲಿ ಸ್ಯಾಂಡಲ್‍ವುಡ್ ನಟಿ ಸಂಜನಾ, ನಿರ್ಮಾಪಕಿ ವಂದನಾ ಮೇಲೆ ವಿಸ್ಕಿ ಗ್ಲಾಸ್ ಅನ್ನು ಬಿಸಾಡಿದ್ದಕ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾದ ಬಳಿಕ ಸಂಜನಾ ಕೂಡ ವಂದನಾ ಮೇಲೆ ದೂರು ನೀಡಿದ್ದರು.  ಇದನ್ನು ಓದಿ: ರಾಜಿಗೆ ಒಂದೆಜ್ಜೆ ಮುಂದೆ ಇಟ್ಟ ಸಂಜನಾ ಗಲ್ರಾನಿ?

    ಇಬ್ಬರು ಜಿದ್ದಿಗೆ ನಿಂತವರಂತೆ ಇದ್ದರೂ ಕೊನೆಗೆ ಪ್ರಕರಣದಿಂದ ಇಬ್ಬರೂ ಹಿಂದೆ ಸರಿಯುತ್ತಿದ್ದಾರೆ. ಸಂಜನಾ ದೂರು ನೀಡಿದ ಕೆಲವೇ ಗಂಟೆಗಳಲ್ಲಿ ತಮ್ಮ ಟ್ವಿಟ್ಟರ್ ಅಕೌಂಟ್‍ನಲ್ಲಿ ನಾನು ಪ್ರಕರಣಕ್ಕೆ ಇತ್ಯರ್ಥ ಹಾಡುತ್ತೇನೆ ಎಂದಿದ್ದರು. ಬಳಿಕ ವಂದನಾ ಕೂಡ ಸುದ್ದಿಗೋಷ್ಟಿ ನಡೆಸುತ್ತೇನೆ. ಕೋರ್ಟ್ ಮೆಟ್ಟಿಲೇರುತ್ತೇನೆ ಎಂದು ಹೇಳಿ ಈಗ ಸೈಲೆಂಟ್ ಆಗಿದ್ದಾರೆ.

    ಇಬ್ಬರೂ ಬಾಟಲಿಯಲ್ಲಿ ಬಡಿದಾಡಿಕೊಂಡು ಈಗ ಫುಲ್ ಸೈಲೆಂಟ್ ಆಗಿದ್ದಾರೆ. ಸದ್ಯಕ್ಕೆ ಜಡೆ ಜಗಳಕ್ಕೆ ಬ್ರೇಕ್ ಬಿದ್ದಿದೆ.

  • ಮಾಜಿ ಸಿಎಂ ಸೊಸೆ ಮಾಲೀಕತ್ವದ ಪಬ್ ಮೇಲೆ ಸಿಸಿಬಿ ದಾಳಿ

    ಮಾಜಿ ಸಿಎಂ ಸೊಸೆ ಮಾಲೀಕತ್ವದ ಪಬ್ ಮೇಲೆ ಸಿಸಿಬಿ ದಾಳಿ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೊಸೆ ಸ್ಮಿತಾ ಮಾಲೀಕತ್ವದ ಪಬ್ ಮೇಲೆ ಶುಕ್ರವಾರ ರಾತ್ರಿ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಸ್ಥಳದಲ್ಲಿದ್ದ ಮತ್ತೊಬ್ಬ ಮಾಲೀಕನನ್ನು ಬಂಧಿಸಿದ್ದಾರೆ.

    ನಗರದ ಲಿಮೆರಿಡಿಯನ್ ಹೋಟೆಲಿನಲ್ಲಿರುವ ಶುಗರ್ ಕೇನ್ ಪಬ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಪಬ್‍ನಲ್ಲಿ ಅನಧಿಕೃತವಾಗಿ ಕೆಲಸಗಳು ನಡೆಯುತ್ತಿದ್ದು, ಇಡೀ ರಾತ್ರಿ ಪಬ್‍ನಲ್ಲಿ ಡಿಸ್ಕೋ ನಡೆಯುತ್ತದೆ ಎಂಬ ಖಚಿತ ಮಾಹಿತಿ ಮೇಲೆ ರಾತ್ರಿ ಅಧಿಕಾರಿಗಳು ದಾಳಿ ನಡೆಸಿದ್ದರು.

    ಡಿಸ್ಕೊಟೆಕ್ ಲೈಸೆನ್ಸ್ ಮುಗಿದಿತ್ತು. ಆದರೂ ರಿನೀವಲ್ ಮಾಡಿರಲಿಲ್ಲ. ಜೊತೆಗೆ ಸಿಬ್ಬಂದಿ ಅಕ್ರಮವಾಗಿ ಬೆಳಗ್ಗಿನ ಜಾವ 3 ಗಂಟೆವರೆಗೆ ಪಬ್ ಮತ್ತು ಡಿಸ್ಕೊಟೆಕ್ ನಡೆಸುತ್ತಿದ್ದರು. ಇಂದು ಬೆಳಗ್ಗಿನ ಜಾವ ಸುಮಾರು 3 ಗಂಟೆಗೆ ದಾಳಿ ನಡೆಸಿದಾಗ 300 ಜನರು ಪಬ್‍ನಲ್ಲಿದ್ದರು. ಅವರನ್ನು ಸಿಸಿಬಿ ಅಧಿಕಾರಿಗಳು ಹೊರಗೆ ಕಳುಹಿಸಿದ್ದಾರೆ.

    ದಾಳಿ ವೇಳೆ ಸ್ಥಳದಲ್ಲಿದ್ದ ಮತ್ತೊಬ್ಬ ಮಾಲೀಕ ರೋಹನ್ ಗೌಡ ಅಲಿಯಾಸ್ ಮಂಜುನಾಥ್‍ನನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಜೊತೆಗೆ ಮ್ಯಾನೇಜರ್ ಶಶಿಕುಮಾರ್ ನನ್ನೂ ಬಂಧಿಸಿದ್ದಾರೆ.

  • ಯುವತಿ ಹಾರಿದ ಕಟ್ಟಡದ ಮೇಲೆ ದಾಳಿ ನಡೆದಿಲ್ಲ – ಸಿಸಿಬಿ ಸ್ಪಷ್ಟನೆ

    ಯುವತಿ ಹಾರಿದ ಕಟ್ಟಡದ ಮೇಲೆ ದಾಳಿ ನಡೆದಿಲ್ಲ – ಸಿಸಿಬಿ ಸ್ಪಷ್ಟನೆ

    ಬೆಂಗಳೂರು: ಸಿಸಿಬಿ ಪೊಲೀಸರ ದಾಳಿಗೆ ಹೆದರಿ ಪಬ್ ಬಿಲ್ಡಿಂಗ್‍ನಿಂದ ಯುವತಿ ಹಾರಿದ್ದಾಳೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಪಷ್ಟನೆ ನೀಡಿದ್ದು, ಯುವತಿ ಬಿದ್ದ ಡ್ಯಾನ್ಸ್ ಬಾರ್ ಮೇಲೆ ನಮ್ಮ ತಂಡ ದಾಳಿ ಮಾಡಿಲ್ಲ ಎಂದು ಸಿಸಿಬಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ಜುಲೈ 25ರ ರಾತ್ರಿ ನಗರದಲ್ಲಿ ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಪೊಲೀಸರು, ಎನ್.ಆರ್ ರಸ್ತೆಯ ಲವ್ವರ್ಸ್ ನೈಟ್ ಡ್ಯಾನ್ಸ್ ಬಾರ್, ಅಶೋಕ ನಗರದ ಪೇಜ್ 3 ಲೈವ್ ಬ್ಯಾಂಡ್ ಮೇಲೆ ದಾಳಿ ಮಾಡಿದ್ದರು. ಅಂದೇ ಮಹಾರಾಜ ಕಾಂಪ್ಲೆಕ್ಸ್ ನ ಬ್ರಿಗೇಡ್ ಗಾರ್ಡನ್ ಡ್ಯಾನ್ಸ್ ಬಾರ್ ನಿಂದ ಯುವತಿ ಹಾರಿದ್ದಳು.

    ಈ ವೇಳೆ ಸಿಸಿಬಿ ಪೊಲೀಸರ ದಾಳಿಗೆ ಹೆದರಿದ ಯುವತಿ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದಳು ಎಂಬ ಮಾಹಿತಿ ಲಭಿಸಿತ್ತು. ಆದರೆ ಸಿಸಿಬಿ ದಾಳಿಗೂ, ಯುವತಿ ಕಟ್ಟಡದಿಂದ ಬಿದ್ದಿರುವುದಕ್ಕೂ ಸಂಬಂಧವಿಲ್ಲ ಎಂದು ಅಧಿಕಾರಿಗಳು ಅಧಿಕೃತವಾಗಿ ಸ್ಪಷ್ಟನೆ ನೀಡಿದ್ದಾರೆ.

    ಇತ್ತ ಕಟ್ಟಡ 4ನೇ ಮಹಡಿಯಿಂದ ಬಿದ್ದ ಯುವತಿ ಗಂಭೀರವಾಗಿ ಗಾಯಗೊಂಡು ಕೋಮಾಗೆ ಜಾರಿದ್ದಾಳೆ. ಘಟನೆ ಬಗ್ಗೆ ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

  • ನೂತನ ಆಯುಕ್ತರಿಂದ ಮಿಡ್‍ನೈಟ್ ರೌಂಡ್ಸ್ – ಮೆಜೆಸ್ಟಿಕ್‍ನಲ್ಲಿ ಲೇಡಿಸ್ ಬಾರ್ ಮೇಲೆ ದಾಳಿ

    ನೂತನ ಆಯುಕ್ತರಿಂದ ಮಿಡ್‍ನೈಟ್ ರೌಂಡ್ಸ್ – ಮೆಜೆಸ್ಟಿಕ್‍ನಲ್ಲಿ ಲೇಡಿಸ್ ಬಾರ್ ಮೇಲೆ ದಾಳಿ

    ಬೆಂಗಳೂರು: ನಗರದ ನೂತನ ಪೊಲೀಸ್ ಕಮೀಷನರ್ ಅಲೋಕ್ ಕುಮಾರ್ ನೈಟ್ ರೌಂಡ್ಸ್ ಹಾಕಿದ್ದಾರೆ. ಇತ್ತ ರಾತ್ರೋರಾತ್ರಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

    ಪಬ್ ಮತ್ತು ಬಾರ್‌ಗಳಿಂದ ಶಬ್ಧ ಮಾಲಿನ್ಯ ಪ್ರಕರಣ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರ ಕಾರ್ಯವೈಖರಿಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಶಬ್ಧ ಮಾಲಿನ್ಯ ಮಾಪನದ ವಿಧಾನದಲ್ಲೇ ದೋಷ ಎಂದು ಹೈಕೋರ್ಟ್ ಕಿಡಿಕಾರಿತ್ತು. ಈ ಹಿನ್ನೆಲೆಯಲ್ಲಿ ತಡರಾತ್ರಿ ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಚರ್ಚ್ ಸ್ಟ್ರೀಟ್ ಗೆ ದಿಢೀರ್ ಭೇಟಿ ಕೊಟ್ಟು, ಪಬ್ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ.

    ಪರವಾನಿಗೆ ಪಡೆಯದೆ ಡಿ.ಜೆ ಬಳಸುತ್ತಿದ್ದ ಪಬ್‍ಗಳಿಗೆ ನೋಟಿಸ್ ನೀಡಿದ್ದಾರೆ. ಜೂನ್ 26ರೊಳಗೆ ಹೈಕೋರ್ಟ್ ಗೆ ವರದಿ ಸಲ್ಲಿಸಲು ಗಡುವು ಇರುವ ಕಾರಣದಿಂದ ದಿಢೀರ್ ಭೇಟಿ ನೀಡಿ ಪಬ್‍ಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಇತ್ತ ರಾತ್ರೋರಾತ್ರಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮೆಜೆಸ್ಟಿಕ್‍ನ ಸಿಟಿ ಸೆಂಟರ್ ಬಳಿ ನಿಯಮಬಾಹೀರವಾಗಿ ನಡೆಯುತ್ತಿದ್ದ ಲೇಡಿಸ್ ಬಾರ್‌ಗಳ ಮೇಲೆ ದಾಳಿ ನಡೆಸಿದ್ದಾರೆ.

    ಹೊರ ರಾಜ್ಯದಿಂದ ಯುವತಿಯರನ್ನು ಕರೆತಂದು ಮಾಲೀಕ ಲೇಡಿಸ್ ಬಾರ್ ನಡೆಸುತ್ತಿದ್ದನು. ನಿಯಮ ಉಲ್ಲಂಘಿಸಿ ಹೆಚ್ಚಿನ ಯುವತಿಯರಿಂದ ಸಮವಸ್ತ್ರ ಧರಿಸದೇ ಸರ್ವ್ ಮಾಡಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಸಿಸಿಬಿ, ಎಸಿಪಿ ರಾಮಚಂದ್ರಯ್ಯ, ಶೋಭಾ ಕಟವಕರ್ ನೇತೃತ್ವದಲ್ಲಿ ದಾಳಿ ನಡೆದಿದೆ.

    36 ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ. ಅಲ್ಲದೆ 28 ಜನರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಒಂದು ಲಕ್ಷಕ್ಕೂ ಅಧಿಕ ಹಣವನ್ನು ವಶಕ್ಕೆ ಪಡೆದಿದ್ದಾರೆ. ಸದ್ಯಕ್ಕೆ ಈ ಕುರಿತು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಕುಡಿದ ಮತ್ತಲ್ಲಿ ಮಹಡಿಯಿಂದ ಬಿದ್ದ ಲವರ್ಸ್

    ಕುಡಿದ ಮತ್ತಲ್ಲಿ ಮಹಡಿಯಿಂದ ಬಿದ್ದ ಲವರ್ಸ್

    ಬೆಂಗಳೂರು: ಪಬ್‍ನ ಮೂರನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ಜೋಡಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ನಡೆದಿದೆ.

    ಪವನ್ ಅತ್ತಾವರ್ ಹಾಗೂ ವೇದಾ ಆರ್ ಮೃತ ಜೋಡಿ. ಶುಕ್ರವಾರ ರಾತ್ರಿ ಸುಮಾರು 11:30ಕ್ಕೆ ಪವನ್ ಅತ್ತಾವರ್ ಹಾಗೂ ವೇದಾ ಆರ್ ಎಂಬವರು ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿರುವ ಆಶ್ ಬೀರ್ ಪಬ್‍ಗೆ ಬಂದಿದ್ದರು. ಪಬ್‍ನ ಕೊನೆಯ ರೂಫ್ ಫ್ಲೋರ್‌ನಲ್ಲಿ ಕುಳಿತು ಪಾರ್ಟಿ ಮಾಡಿದ್ದ ಪವನ್ ಹಾಗೂ ವೇದಾ ರೂಫಿನ ತುದಿಯಲ್ಲಿ ನಿಂತಿದ್ದರು. ಈ ವೇಳೆ ಆಯತಪ್ಪಿ ಮೂರನೇ ಮಹಡಿಯಿಂದ ನೆಲಕ್ಕೆ ಬಿದ್ದಿದ್ದಾರೆ.

    ಘಟನೆಯಲ್ಲಿ ಪವನ್ ಹಾಗೂ ವೇದಾ ತಲೆಯ ಭಾಗಕ್ಕೆ ಗಂಭೀರವಾಗಿ ಗಾಯವಾಗಿ ತೀವ್ರ ರಕ್ತಸ್ರಾವವಾಗಿತ್ತು. ಇದೇ ವೇಳೆ ನೂತನ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರು ಚರ್ಚ್ ಸ್ಟ್ರೀಟ್ ರೋಡಲ್ಲಿ ನೈಟ್ ರೌಂಡ್ಸ್ ನಲ್ಲಿದ್ದರು. ಇದೇ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕೂಡಲೇ ಸ್ಥಳಕ್ಕೆ ಹೋಗಿ ನೋಡಿದಾಗ ಇಬ್ಬರ ಪರಸ್ಥಿತಿ ಚಿಂತಾಜನಕವಾಗಿತ್ತು. ಇಬ್ಬರನ್ನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಬ್ಬರು ಅಷ್ಟರಲ್ಲಿ ಮೃತಪಟ್ಟಿದ್ದರು.

    ಪವನ್ ಅತ್ತಾವರ್ ರಾಷ್ಟ್ರೀಯ ಪತ್ರಿಕೆಯಲ್ಲಿ ಹಾಗೂ ವೇದಾ ಆರ್ ಐಬಿಎಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪಬ್ ಮಾಲೀಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಬೆಂಗ್ಳೂರು ಪೊಲೀಸರ ವಿರುದ್ಧ ಹೈಕೋರ್ಟ್ ಅಸಮಾಧಾನ

    ಬೆಂಗ್ಳೂರು ಪೊಲೀಸರ ವಿರುದ್ಧ ಹೈಕೋರ್ಟ್ ಅಸಮಾಧಾನ

    ಬೆಂಗಳೂರು: ಜನವಸತಿ ಪ್ರದೇಶಗಳಲ್ಲಿ ಪಬ್‍ಗಳ ಅನುಮತಿ ವಿಚಾರವಾಗಿ ಹೈಕೋರ್ಟ್ ಬೆಂಗಳೂರು ಪೊಲೀಸರ ವಿರುದ್ಧ ಅಸಮಾಧಾನ ಹೊರ ಹಾಕಿದೆ.

    ಪಬ್‍ಗಳಿಂದ ತೀವ್ರ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಹಾಗೂ ತೊಂದರೆ ಅನುಭವಿಸುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಅನೇಕ ಬಾರಿ ಪೊಲೀಸರಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ಯಾವುದೇ ರೀತಿಯ ಪ್ರಯೋಜನವಿಲ್ಲವಾಗಿರಲಿಲ್ಲ ಎಂದು ಆರೋಪಿಸಿ ಪೊಲೀಸ್ ಇಲಾಖೆ, ಬಿಬಿಎಂಪಿ, ಬಿಡಿಎ, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ವಿರುದ್ಧ ಇಂದಿರಾನಗರದ ಹಲವು ಸಂಘಟನೆಗಳಿಂದ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್) ಸಲ್ಲಿಕೆಯಾಗಿತ್ತು.

    ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರಿದ್ದ ವಿಭಾಗೀಯ ಪೀಠವು, ಸಾರ್ವಜನಿಕ ಮನವಿ ಸಂಬಂಧ ಯಾವ ಕ್ರಮ ಕೈಗೊಂಡಿದ್ದೀರಿ?, ಜನನಿಬಿಡ ಪ್ರದೇಶದಲ್ಲಿ ಯಾವ ಮಾನದಂಡದಲ್ಲಿ ಅನುಮತಿ ನೀಡಿದ್ದೀರಿ? ಸಾರ್ವಜನಿಕರ ದೂರಿನ ಬಳಿಕ ತೆಗೆದುಕೊಂಡ ಕ್ರಮ ಏನು ಎಂದು ಪೊಲೀಸ್ ಆಯುಕ್ತರಿಗೆ ಚಾಟಿ ಬೀಸಿದೆ. ಈ ಸಂಬಂಧ ವರದಿಯನ್ನು ನೀಡುವಂತೆ ಕೋರ್ಟ್ ಸೂಚನೆ ನೀಡಿದೆ.

    ಬೆಂಗಳೂರು ನಗರದ ಸಾರ್ವಜನಿಕ ಪ್ರದೇಶದಲ್ಲಿ ಬ್ಯಾನರ್ ಹೆಚ್ಚಾಗಿತ್ತು. ರಸ್ತೆ ಗುಂಡಿಗಳಿಂದ ಸವಾರರು ಪರದಾಡುವಂತಾಗಿತ್ತು. ಈ ವಿಚಾರವಾಗಿ ಹೈಕೋರ್ಟ್ ಬಿಬಿಎಂಪಿ ವಿರುದ್ಧ ಚಾಟಿ ಬೀಸಿತ್ತು.

  • ಪೊಲೀಸರ ಮೇಲೆ ಲೈಂಗಿಕ ಕಿರುಕುಳ ಆರೋಪ!

    ಪೊಲೀಸರ ಮೇಲೆ ಲೈಂಗಿಕ ಕಿರುಕುಳ ಆರೋಪ!

    ಬೆಂಗಳೂರು: ಯುವತಿಯೊಬ್ಬಳು ಪೊಲೀಸರ ಮೇಲೆಯೇ ಲೈಂಗಿಕ ಆರೋಪ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಕೋರಮಂಗಲ ನಿವಾಸಿ ಅಪೇಕ್ಷಾ (ಹೆಸರು ಬದಲಾಯಿಸಲಾಗಿದೆ). ಅಪೇಕ್ಷಾ ಪೊಲೀಸರ ಮೇಲೆಯೇ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾಳೆ. ಇದೇ ತಿಂಗಳ ದಿನಾಂಕ 6ರಂದು ಅಪೇಕ್ಷಾ ತನ್ನ ಸ್ನೇಹಿತೆ ಜೊತೆ ಕೋರಮಂಗಲದಲ್ಲಿರೋ ಬೋಹೋ ಪಬ್‍ಗೆ ತೆರಳಿದ್ದರು. ಪಾರ್ಟಿ ಮುಗಿಸಿ ವಾಪಸ್ ಸಹ ಆಗಿದ್ದರು.

    ಆದರೆ ಮತ್ತದೇ ಪಬ್‍ಗೆ ಬಂದ ಯುವತಿ ತನ್ನ ಮೊಬೈಲ್ ಒಳಗೆ ಇದೆ ಬಿಡಿ ಅಂತ ಕೇಳಿದ್ದಾಳೆ. ಅಷ್ಟೊತ್ತಿಗೆ ಪಬ್ ಕ್ಲೋಸ್ ಆಗಿತ್ತು. ಕೋಪಗೊಂಡ ಅಪೇಕ್ಷಾ ಏಕಾಏಕಿ ಸಿಬ್ಬಂದಿ ಜೊತೆ ಜಗಳ ಮಾಡಿ, ಹೊರಗಡೆ ಇಟ್ಟಿದ್ದ ಹೂವಿನ ಪಾಟ್‍ಗಳನ್ನ ಡ್ಯಾಮೇಜ್ ಮಾಡಿದ್ದಾಳೆ. ಅಷ್ಟೇ ಅಲ್ಲದೇ ಶೆಟರ್ ನ್ನ ಮುರಿಯೋದಕ್ಕೆ ಯತ್ನಿಸಿದ್ದಾಳೆ. ಈ ವೇಳೆ ಭಯಗೊಂಡ ಕೆಲಸಗಾರರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ ಎಂದು ಆಗ್ನೇಯ ವಿಭಾಗ ಡಿಸಿಪಿ ಇಷಾಪಂತ್ ತಿಳಿಸಿದ್ದಾರೆ.

    ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ಯುವತಿಯನ್ನ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದ್ದಾರೆ. ಆದರೆ ಕುಡಿದ ಮತ್ತಿನಲ್ಲಿದ್ದ ಆಕೆ ಯಾವುದೇ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಿಲ್ಲ. ನಂತರ ಸ್ವತಃ ಪೊಲೀಸರೇ ದುಡ್ಡು ಕೊಟ್ಟು ಮನೆಗೆ ಕಳುಹಿಸಿದ್ದರು. ಆದರೆ ಯುವತಿ ಮಾತ್ರ ಪೊಲೀಸರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿ ನನ್ನ ಕಾಲನ್ನ ಮುರಿದು ಹಾಕಿದ್ದಾರೆ ಅಂತ ಫೇಸ್‍ಬುಕ್‍ನಲ್ಲಿ ರಾಷ್ಟ್ರಪತಿ ಸೇರಿದಂತೆ ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ ಎಂದು ನಡೆದ ಘಟನೆ ಬಗ್ಗೆ ಡಿಸಿಪಿ ಅವರು ತಿಳಿಸಿದ್ದಾರೆ.

    ಸದ್ಯಕ್ಕೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಆಗ್ನೇಯ ವಿಭಾಗದ ಡಿಸಿಪಿ ಇಷಾಪಂತ್ ಯುವತಿಯನ್ನ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.