Tag: ಪಬ್ ಜೀ

  • ಪಬ್ ಜೀ ಆಟಕ್ಕಾಗಿ 12ರ ಬಾಲಕನನ್ನು ಕೊಲೆ ಮಾಡಿದ 17ರ ಸ್ನೇಹಿತ

    ಪಬ್ ಜೀ ಆಟಕ್ಕಾಗಿ 12ರ ಬಾಲಕನನ್ನು ಕೊಲೆ ಮಾಡಿದ 17ರ ಸ್ನೇಹಿತ

    ಮಂಗಳೂರು: ಪಬ್ ಜೀ ಮೊಬೈಲ್ ಆಟ ನಿಷೇಧವಾಗಿದರೂ ಆಟಕ್ಕೆ ಅಡಿಕ್ಟ್ ಆದವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಪಬ್ ಜೀ ಆಟ ಮತ್ತೊಂದು ರೂಪದಲ್ಲಿ ಮೊಬೈಲ್‍ಗೆ ಬಂದಿದೆ. ಆ ಆಟ ಈಗ ಜೀವ ತೆಗೆಯುವ ಹಂತಕ್ಕೆ ತಲುಪಿದ್ದು ಮಂಗಳೂರಿನಲ್ಲಿ ಬಾಲಕನ ಜೀವ ಪಬ್ ಜೀ ಆಟದಲ್ಲಿ ಅಂತ್ಯವಾಗಿದೆ.

    ಆಕೀಫ್(12) ಬರ್ಬರವಾಗಿ ಹತ್ಯೇಗೀಡಾದ ಬಾಲಕ. ಈತ ಮಂಗಳೂರು ನಗರ ಹೊರವಲಯದ ಕೆ.ಸಿ ರೋಡ್ ನಿವಾಸಿಯಾಗಿದ್ದು, ಪ್ರಸ್ತುತ ಕೆ.ಸಿ.ರೋಡ್‍ನ ಫಲಹಾ ಇಂಗ್ಲಿಷ್ ಮೀಡಿಯಾಂ ಶಾಲೆಯ 7 ತರಗತಿ ವಿದ್ಯಾರ್ಥಿಯಾಗಿದ್ದನು. ನಿನ್ನೆ ರಾತ್ರಿ 9 ಗಂಟೆಗೆ ಮನೆಯಿಂದ ಹೊರಟವನು ಇಂದು ಬೆಳಗ್ಗೆ ಕೊಲೆಯಾದ ಸ್ಥಿತಿಯಲ್ಲಿ ಮೈದಾನದಲ್ಲಿ ಪತ್ತೆಯಾಗಿದ್ದಾನೆ.

    ಆಕೀಫ್‍ಗೆ ಕಳೆದ ಮೂರು ತಿಂಗಳ ಹಿಂದೆ ಮೊಬೈಲ್ ಅಂಗಡಿಯಲ್ಲಿದ್ದ 17 ವರ್ಷದ ಬಾಲಕನ ಪರಿಚಯವಾಗಿದ್ದಾನೆ. ಬಳಿಕ ಇಬ್ಬರೂ ಪಬ್ ಜೀ ಗೇಮ್ ಆಟವಾಡಲು ಆರಂಭಿಸಿದ್ದಾರೆ. ಆಟದಲ್ಲಿ ಪ್ರತಿ ಬಾರಿಯೂ ಆಕೀಫ್ ಗೆಲುವು ಸಾಧಿಸಿದ್ದನು. ಇದರಿಂದ ಕೋಪಗೊಂಡ ಬಾಲಕ ಆಟದಲ್ಲಿ ಮೋಸ ಮಾಡ್ತಿದ್ದೀಯಾ, ಮುಖಾಮುಖಿ ಆಡೋಣ ಅಂತಾ ನಿನ್ನೆ ಸ್ಥಳೀಯ ಮೈದಾನಕ್ಕೆ ಕರೆದಿದ್ದಾನೆ.

    ಬಳಿಕ ರಾತ್ರಿ 9 ಗಂಟೆಗೆ ಇಬ್ಬರೂ ಮೈದಾನದಲ್ಲಿ ಪಬ್ ಜೀ ಆಡಿದ್ದಾರೆ. ಈ ವೇಳೆ ಆಟದಲ್ಲಿ ಬಾಲಕ ಸೋತಿದ್ದಾನೆ. ಇದರಿಂದ ಇಬ್ಬರ ನಡುವೆಯೂ ಗಲಾಟೆಯಾಗಿದೆ. ಗಲಾಟೆ ಮಧ್ಯೆ ಬಾಲಕ ಆಕೀಫ್‍ಗೆ ದೊಡ್ಡ ಕಲ್ಲಿನಲ್ಲಿ ಹೊಡೆದಿದ್ದು, ಆಕೀಫ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದರಿಂದ ಗಾಬರಿಗೊಂಡ ಬಾಲಕ, ಆಕೀಫ್ ಶವವನ್ನು ಮೈದಾನದ ಪೊದೆಯಲ್ಲಿ ಬಚ್ಚಿಟ್ಟು ಪರಾರಿಯಾಗಿದ್ದಾನೆ. ಬೆಳಗ್ಗಿನ ವೇಳೆ ಆಕೀಫ್ ಮೃತದೇಹ ಮೈದಾನದ ಪೊದೆಯಲ್ಲಿ ಕಂಡುಬಂದಿದ್ದು, ಬಾಲಕ ವಿಚಾರಣೆ ವೇಳೆ ಎಲ್ಲವನ್ನೂ ಬಾಯಿಬಿಟ್ಟಿದ್ದಾನೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಆಕೀಫ್‍ಗೆ ಪೋಷಕರು ಆನ್ ಲೈನ್ ಕ್ಲಾಸ್ ಉದ್ದೇಶದಿಂದ ಮೊಬೈಲ್ ತೆಗೆದುಕೊಟ್ಟಿದ್ದರು. ಮೊಬೈಲ್‍ನಲ್ಲಿ ವಿವಿಧ ಆ್ಯಪ್‍ಗಳನ್ನು ಡೌನ್ ಲೋಡ್ ಮಾಡಿಕೊಂಡಿದ್ದ. ಮೊಬೈಲ್ ಆಟದಲ್ಲೂ ಬಹಳ ಚೂಟಿಯಾಗಿದ್ದ. ಸದಾ ಮೊಬೈಲ್‍ನಲ್ಲೇ ಕಾಲ ಕಳೆಯುತ್ತಿದ್ದ ಆಕೀಫ್ ಪಬ್ ಜೀ ಆಟದ ವಿಚಾರಕ್ಕೆ ಭೀಕರ ಹತ್ಯೆಯಾಗಿದ್ದು, ಇದೀಗ ಮನೆಯವರನ್ನೂ ದಂಗುಬಡಿಸಿದೆ.

    ಒಟ್ಟಿನಲ್ಲಿ ಮಾರಕ ಪಬ್ ಜೀ ಆಟ ಬಾಳಿ ಬದುಕಬೇಕಾಗಿದ್ದ ಬಾಲಕನ ಜೀವವನ್ನು ಬಲಿಪಡೆದಿದೆ. ಮಕ್ಕಳಿಗೆ ಅನಿವಾರ್ಯವಾಗಿ ಮೊಬೈಲ್ ಕೊಟ್ಟ ಪೋಷಕರೂ ಮಕ್ಕಳ ಬಗ್ಗೆ ಜಾಗೃತವಾಗಿರಬೇಕಾಗಿದೆ.