Tag: ಪಬ್ಲಿಕ ಟಿವಿ

  • ಹುಚ್ಚ ವೆಂಕಟ್ ಗಳಿಸಿದ ಮತಕ್ಕಿಂತ ನೋಟಾಗೆ ಬಿತ್ತು ಹೆಚ್ಚು ವೋಟು!

    ಹುಚ್ಚ ವೆಂಕಟ್ ಗಳಿಸಿದ ಮತಕ್ಕಿಂತ ನೋಟಾಗೆ ಬಿತ್ತು ಹೆಚ್ಚು ವೋಟು!

    ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು 25,492 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಟ ಮತ್ತು ನಿರ್ದೇಶಕ ಹುಚ್ಚವೆಂಕಟ್ ಅವರು 764 ಮತಗಳನ್ನು ಮಾತ್ರ ಪಡೆದಿದ್ದಾರೆ. 15 ಅಭ್ಯರ್ಥಿಗಳಿದ್ದ ಕಣದಲ್ಲಿ ಹುಚ್ಚ ವೆಂಕಟ್  ಗಳಿಸಿದ್ದ ಮತಗಳಿಗಿಂತ ನೋಟಾಗೆ ಹೆಚ್ಚು ವೋಟು ಬಿದ್ದಿದೆ.

    2,724 ನೋಟಾ ವೋಟು ಚಲಾವಣೆಯಾಗಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ನಂತರ ನೋಟಾಗೆ ಹೆಚ್ಚಿನ ವೋಟು ಬಿದ್ದಿದೆ. ಆರ್ ಆರ್ ನಗರದಲ್ಲಿ ಒಟ್ಟು 2,56,447 ಮತಗಳಿದ್ದವು, ಅದರಲ್ಲಿ ಮೂರು ಪೋಸ್ಟಲ್ ಮತಗಳು ತಿರಸ್ಕೃತಗೊಂಡಿತ್ತು.

    ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು 1,08,064 ಮತಗಳು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಮುನಿರಾಜು ಗೌಡ 82,572 ಮತಗಳಳನ್ನು ಗಳಿಸಿದ್ದಾರೆ. ಇನ್ನು ಜೆಡಿಎಸ್‍ನ ರಾಮಚಂದ್ರ ಅವರು 60,360 ಮತಗಳು ಪಡೆದುಕೊಂಡಿದ್ದಾರೆ.

  • 30 ಅಡಿ ಆಳದ ಕಂದಕಕ್ಕೆ ಬಿತ್ತು ಸರ್ಕಾರಿ ಬಸ್ – 20 ಕ್ಕೂ ಅಧಿಕ ಮಂದಿಗೆ ಗಾಯ, ಮೂವರು ಗಂಭೀರ

    30 ಅಡಿ ಆಳದ ಕಂದಕಕ್ಕೆ ಬಿತ್ತು ಸರ್ಕಾರಿ ಬಸ್ – 20 ಕ್ಕೂ ಅಧಿಕ ಮಂದಿಗೆ ಗಾಯ, ಮೂವರು ಗಂಭೀರ

    ಚಿಕ್ಕಮಗಳೂರು: ಸರ್ಕಾರಿ ಬಸ್ಸೊಂದು ಸುಮಾರು 30 ಅಡಿ ಆಳದ ಕಂದಕಕ್ಕೆ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕಡೂರು ತಾಲೂಕು ತಂಗಲಿ ಸಮೀಪದ ವೇದಾ ನದಿ ಸೇತುವೆಯಿಂದ ಬಸ್ ಪಲ್ಟಿಯಾಗಿದೆ. ಬಸ್ಸಿನಲ್ಲಿ ಸುಮಾರು 20 ಅಧಿಕ ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ಬಸ್ ಬೆಂಗಳೂರಿನಿಂದ ಕುಂದಾಪುರಕ್ಕೆ ಹೋಗುತ್ತಿತ್ತು. ಬಸ್ ತಂಗಲಿ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ವೇದಾ ನದಿ ಸೇತುವೆಗೆ ಡಿಕ್ಕಿ ಹೊಡೆದು ನದಿಗೆ ಬಿದ್ದಿದೆ.

    ಬಸ್ ನದಿಗೆ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಇನ್ನು ಈ ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಕಡೂರು ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೇದಾ ನದಿ ಸುಮಾರು ವರ್ಷಗಳಿಂದ ನೀರಿಲ್ಲದೇ ಬತ್ತಿಹೋಗಿತ್ತು. ಈ ಘಟನೆ ಕಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಲವ್ವರ್ ಗಾಗಿ ಬರೋಬ್ಬರಿ 35 ಲಕ್ಷ ನೋಟಿನ ಬೊಕ್ಕೆಯನ್ನೇ ಕೊಟ್ಟ

    ಲವ್ವರ್ ಗಾಗಿ ಬರೋಬ್ಬರಿ 35 ಲಕ್ಷ ನೋಟಿನ ಬೊಕ್ಕೆಯನ್ನೇ ಕೊಟ್ಟ

    ಬೀಜಿಂಗ್: ಸಾಮಾನ್ಯವಾಗಿ ಕೆಲವು ಕಡೆ ಮದುವೆ ಸಂದರ್ಭದಲ್ಲಿ ವಧು-ವರರಿಗೆ ನೋಟಿನ ಹೂ ಮಾಲೆಯನ್ನ ಹಾಕುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಪ್ರಿಯಕರ ತನ್ನ ಪ್ರಿಯತಮೆಗಾಗಿ ನೋಟುಗಳಿಂದಲೇ ಮಾಡಿದ್ದ ಹೂಗುಚ್ಛವನ್ನು ಉಡುಗೊರೆಯಾಗಿ ನೀಡಿದ್ದಾನೆ.

    ಈ ಘಟನೆ ಚೀನಾದಲ್ಲಿ ನಡೆದಿದ್ದು, ಪ್ರಿಯತಮೆ ನೋಟಿನಿಂದ ತಯಾರಾಗಿದ್ದ ಹೂಗುಚ್ಛವನ್ನು ಹಿಡಿದು ಹೋಟೆಲ್ ನಲ್ಲಿ ನಿಂತಿರುವ ಫೋಟೋವೊಂದು ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈಗ ಅದು ಎಲ್ಲೆಡೆ ವೈರಲ್ ಆಗಿದೆ. ಯುವಕ ಈ ಬೊಕ್ಕೆಯನ್ನು ಸಿದ್ಧ ಪಡಿಸಲು ಸುಮಾರು 330,000 ಯುವಾನ್(ಅಂದಾಜು 35.26 ಲಕ್ಷ ರೂ.)ಖರ್ಚು ಮಾಡಿದ್ದಾನೆ ಎಂದು ವರದಿಯಾಗಿದೆ.

    ಮೇ 16 ರಂದು ಯುವಕನ ಗೆಳತಿಯ ಹುಟ್ಟುಹಬ್ಬ ಇತ್ತು. ಆದ್ದರಿಂದ ಹುಟ್ಟುಹಬ್ಬಕ್ಕಾಗಿ ವಿಶೇಷವಾದ ಗಿಫ್ಟ್ ನೀಡಲು ಬಯಸಿದ್ದನು. ಆಗ ಆತನ ನೋಟಿನ ಪುಷ್ಪಗುಚ್ಛವನ್ನು ಉಡುಗೊರೆಯಾಗಿ ನೀಡಲು ಬಯಸಿದ್ದು, ಇದಕ್ಕಾಗಿ ಹೂವಿನ ಅಂಗಡಿಯಿಂದ ಏಳು ಉದ್ಯೋಗಿಗಳನ್ನು ಕರೆತಂದು ಸುಮಾರು 10 ಗಂಟೆಗಳ ಕಾಲ ಕುಳಿತು ನೋಟುಗಳನ್ನು ಪೋಣಿಸಿದ್ದ ಬೊಕ್ಕೆಯನ್ನು ಸಿದ್ಧಪಡಿಸಿದ್ದಾನೆ. ಇದಕ್ಕಾಗಿ ಯುವಕ ಸುಮಾರು 35 ಲಕ್ಷದ 70 ಸಾವಿರ ರೂ. ಮೌಲ್ಯದ ನೋಟುಗಳನ್ನು ಬಳಸಿದ್ದಾನೆ.

    ಈ ಫೋಟೋ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಕೆಲವರು ಆತನಿಗೆ ಟೀಕೆ ಮಾಡಿದ್ದರು. ಮತ್ತೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಇದು ಕೆಲವು ದಿನಗಳ ನಂತರ ಅಧಿಕಾರಿಗಳಿಗೆ ಕಣ್ಣಿಗೆ ಬಿದ್ದಿದೆ. ಇದರಿಂದ ಯುವಕ ಪ್ರೀತಿಗಾಗಿ ಚೀನಾ ಕರೆನ್ಸಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ. ಇದು ಕಾನೂನು ಪ್ರಕಾರ ಅಪರಾಧವಾಗಿದ್ದು, ಈಗ ಆತನ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ.

  • ಬೈಕ್ ನಿಯಂತ್ರಣ ತಪ್ಪಿ ಬಿಎಂಟಿಸಿ ಬಸ್ ಚಕ್ರಕ್ಕೆ ಸಿಲುಕಿ ಪೇದೆ ದುರ್ಮರಣ

    ಬೈಕ್ ನಿಯಂತ್ರಣ ತಪ್ಪಿ ಬಿಎಂಟಿಸಿ ಬಸ್ ಚಕ್ರಕ್ಕೆ ಸಿಲುಕಿ ಪೇದೆ ದುರ್ಮರಣ

    ಬೆಂಗಳೂರು: ಬಿಎಂಟಿಸಿ ಬಸ್ ಹರಿದು ಪೊಲೀಸ್ ಪೇದೆ ಮೃತಪಟ್ಟ ಘಟನೆ ಬೆಂಗಳೂರಿನ ಬನಶಂಕರಿ ಸರ್ಕಲ್ ಬಳಿ ನಡೆದಿದೆ.

    ಸಿದ್ದು ಬೈರವಾಡಿಗೆ ಮೃತ ಪೇದೆಯಾಗಿದ್ದು, ಇವರು ವಿಜಯಪುರ ಮೂಲದವರಾಗಿದ್ದಾರೆ. 2016 ರ ಬ್ಯಾಚ್‍ನ ಸಿದ್ದು ಅವರು ಜಯನಗರದಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.

    ಎಂದಿನಂತೆ ತನ್ನ ಕೆಲಸ ಮುಗಿಸಿ ಸಾರಕ್ಕಿಯ ಮನೆಗೆ ತೆರಳುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿದೆ. ಹೀಗಾಗಿ ಬೈಕ್ ನಿಂದ ಕೆಳಗೆ ಬಿದ್ದ ಇವರ ಮೇಲೆ ಬಿಎಂಟಿಸಿ ಬಸ್ ಹರಿದಿದೆ. ಪರಿಣಾಮ ಬಸ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

    ಈ ಸಂಬಂಧ ಬನಶಂಕರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೈಕಮಾಂಡ್ ಸೂಚನೆ ಬೆನ್ನಲ್ಲೇ ಚುನಾವಣಾ ಪ್ರಚಾರದಿಂದ ಹಿಂದೆ ಸರಿದ ರೆಡ್ಡಿ!

    ಹೈಕಮಾಂಡ್ ಸೂಚನೆ ಬೆನ್ನಲ್ಲೇ ಚುನಾವಣಾ ಪ್ರಚಾರದಿಂದ ಹಿಂದೆ ಸರಿದ ರೆಡ್ಡಿ!

    ಚಿತ್ರದುರ್ಗ: ಬಹಿರಂಗ ಪ್ರಚಾರದಲ್ಲಿ ಭಾಗವಹಿಸದಂತೆ ಹೈಕಮಾಂಡ್ ನೀಡಿದ ಸೂಚನೆ ಹಿನ್ನೆಲೆಯಲ್ಲಿ ಮಾಜಿ ಸಚಿವ, ಗಣಿಧಣಿ ಗಾಲಿ ಜನಾರ್ದನ ರೆಡ್ಡಿಯವರು ಚುನಾವಣಾ ಪ್ರಚಾರದಿಂದ ಹಿಂದೆ ಸರಿದಿದ್ದಾರೆ.

    ಸೂಚನೆ ಸಿಕ್ಕ ಕೂಡಲೇ ತನ್ನ ಕುಚುಕು ಗೆಳೆಯ ಶ್ರೀರಾಮುಲು ಪರ ಮೊಳಕಾಲ್ಮೂರಿನ ಪ್ರಚಾರದಿಂದ ಹಿಂದೆ ಸರಿದಿದ್ದಾರೆ. ಒಂದು ವಾರದಿಂದ ರಾಮುಲು ಪರ ಭರ್ಜರಿ ಪ್ರಚಾರ ನಡೆಸಿದ್ದರು. ಅಲ್ಲದೇ ರಾಮುಲು ಗೆಲ್ಲಿಸುವಲ್ಲಿ ಮಾಸ್ಟರ್ ಪ್ಲಾನ್ ಸಹ ಮಾಡುತ್ತಿದ್ದರು. ಇದನ್ನೂ ಓದಿ: ಸ್ನೇಹಿತರ ಗೆಲುವಿಗಾಗಿ ಫೀಲ್ಡ್ ಗಿಳಿದ ಜನಾರ್ದನ ರೆಡ್ಡಿಗೆ ಬ್ರೇಕ್!

    ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಭಾನುವಾರ ಚಿತ್ರದುರ್ಗಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಯಕರಿಗೆ ಮುಜುಗರ ತಪ್ಪಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಹೀಗಾಗಿ ರೆಡ್ಡಿಯವರು ಶುಕ್ರವಾರ ಸಂಜೆಯಿಂದ ಹಾನಗಲ್ ಮನೆಯಿಂದ ಹೊರಗೆ ಕಾಣಿಸಿಕೊಂಡಿಲ್ಲ. ಆದ್ರೆ ರೆಡ್ಡಿಯವರು ಮೊಳಕಾಲ್ಮೂರು ಮನೆಯಲ್ಲಿಯೇ ಇದ್ದಾರೆ ಅಂತ ಬೆಂಬಲಿಗರು ಬಿಂಬಿಸುತ್ತಿದ್ದಾರೆ. ಇದನ್ನೂ ಓದಿ:  ಪೊಲೀಸರು ತೊಂದ್ರೆ ಕೊಟ್ರೆ ಫೋನ್ ಮಾಡಿ- ನನ್ನ ನಂಬರ್ ತಗೊಳ್ಳಿ ಅಂದ್ರು ಶಾ

    ಜನಾರ್ದನ ರೆಡ್ಡಿ ಬೆಂಗಳೂರಿಗೆ ತೆರಳಿದ್ದಾರೆ ಎಂಬ ಇನ್ನೊಂದು ಮಾಹಿತಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.

  • ‘ಯುಗ ಯುಗಾದಿ ಕಳೆದರೂ… ಯುಗಾದಿ ಮರಳಿ ಬರುತಿದೆ…’ ಹಾಡಿಗೆ ಹೆಜ್ಜೆ ಹಾಕಿದ ಹಿರಿಯ ನಟಿ ಲೀಲಾವತಿ!

    ‘ಯುಗ ಯುಗಾದಿ ಕಳೆದರೂ… ಯುಗಾದಿ ಮರಳಿ ಬರುತಿದೆ…’ ಹಾಡಿಗೆ ಹೆಜ್ಜೆ ಹಾಕಿದ ಹಿರಿಯ ನಟಿ ಲೀಲಾವತಿ!

    ಬೆಂಗಳೂರು: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ…… ಈ ಹಾಡನ್ನು ನೀವೆಲ್ಲರೂ ಕೇಳಿ ನೋಡಿ ಆನಂದಿಸಿದ್ದಿರಾ. ಬ್ಲಾಕ್ ಆಡ್ ವೈಟ್ ತೆರೆಯ ಮೇಲೆ 55 ವರ್ಷಗಳ ಹಿಂದೆ ಕುಲವಧು ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ತಾರೆ ನಟಿ ಲೀಲಾವತಿ. ಲೀಲಾವತಿ ಅವರು ತಮ್ಮ ಮನೆಯಲ್ಲಿ ಪಬ್ಲಿಕ್ ಟಿವಿ ತಂಡದ ಜೊತೆ ಯುಗಾದಿ ಹಬ್ಬದಂದು ಅದೇ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ.

    ಕರುನಾಡ ಕನ್ನಡಿಗರ ಮನೆ ಮಾತಾಗಿರುವ 55 ವರ್ಷಗಳ ಹಿಂದಿನ ಕುಲವಧು ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ಹಿರಿಯ ನಟಿ ಡಾ. ಲೀಲಾವತಿಯವರು ಯುಗಾದಿ ಹಬ್ಬವನ್ನ ತಮ್ಮ ಮನೆಯಲ್ಲಿ ಸರಳವಾಗಿ ಆಚರಿಸಿದರು. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಮಗ ವಿನೋದ್ ರಾಜ್ ಹಾಗೂ ಮನೆಯ ಕೆಲಸಗಾರರ ಜೊತೆ ಲೀಲಾವತಿಯವರು ದೇವರಿಗೆ ಪೂಜೆ ಸಲ್ಲಿಸಿ ಬೇವು ಬೆಲ್ಲ ತಿಂದು ಸಂತಸಪಟ್ಟರು.

     

    ಇದೇ ವೇಳೆ 1963ರಲ್ಲಿ ತಾವು ನಟಿಸಿರುವ ಕುಲವಧು ಚಿತ್ರದ ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ…. ಎಂಬ ಕರುನಾಡ ಕನ್ನಡಿಗರು ಮರೆಯಲಾಗದಂತಹ ಹಾಡಿಗೆ ಅಮ್ಮ-ಮಗ ಹೆಜ್ಜೆ ಹಾಕುವ ಮೂಲಕ ಯುಗಾದಿ ಹಬ್ಬವನ್ನ ಸಂಭ್ರಮಿಸಿದರು. ಐದುವರೆ ದಶಕದ ಹಿಂದಿನ ಕುಲವಧು ಚಿತ್ರದ ಸನ್ನಿವೇಶದ ಜೊತೆ ಮುಖ್ಯ ಪಾತ್ರವನ್ನ ನಟಿಸಿರುವ ವರನಟ ಡಾ.ರಾಜ್‍ರವರನ್ನು ನೆನೆದು ಲೀಲಾವತಿಯವರು ಕಣ್ಣೀರಿಟ್ಟರು.

    ಒಟ್ಟಾರೆ ಮರೆಯಾಗದ ಮಾಣಿಕ್ಯದಂತಿರುವ ಐದುವರೆ ದಶಕದ ಹಿಂದಿನ ಕುಲವಧು ಚಿತ್ರದ ಹಾಡು, ಇಂದಿಗೂ ಯುಗಾದಿ ಹಬ್ಬದ ಸಂಭ್ರಮಕ್ಕೆ ರಾಜ್ಯದ ಜನರಲ್ಲಿ ಮನೆ ಮಾತಾಗಿಯೇ ಉಳಿದಿದೆ.

     

     

  • ರಾಜ್ಯ ಸರ್ಕಾರದ ವಿರುದ್ಧ ರಸ್ತೆಗಿಳಿದ ಸರ್ಕಾರಿ ನೌಕರರು-ಬೃಹತ್ ಪ್ರತಿಭಟನೆ

    ರಾಜ್ಯ ಸರ್ಕಾರದ ವಿರುದ್ಧ ರಸ್ತೆಗಿಳಿದ ಸರ್ಕಾರಿ ನೌಕರರು-ಬೃಹತ್ ಪ್ರತಿಭಟನೆ

    ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧ ವರ್ಗಗಳ ನೌಕರರು ಇಂದು ನಗರದ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು.

    ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ 62 ವಿವಿಧ ವರ್ಗಗಳ ಸಾವಿರಾರು ನೌಕರರು ಅಹಿಂಸಾ ಸಂಘಟನೆ(ಅಲ್ಪ ಸಂಖ್ಯಾತ, ಹಿಂದುಳಿದ, ಸಾಮಾನ್ಯ ವರ್ಗ) ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

    ಇಂದು ಬೆಳಗ್ಗೆ ಫ್ರೀಡಂ ಪಾರ್ಕ್ ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಅರಮನೆ ಮೈದಾನದ ವರೆಗೂ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೌಕರರು ಮುಂಬಡ್ತಿ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿರುವ ಆದೇಶ ಜಾರಿ ಮಾಡುವಂತೆ ಎಂದು ಒತ್ತಾಯ ಮಾಡಿದರು. ಅಲ್ಲದೇ ಸುಪ್ರೀಂ ಆದೇಶವಿದ್ದರೂ ರಾಜ್ಯ ಸರ್ಕಾರ ಮುಂಬಡ್ತಿಯನ್ನು ನೀಡಲು ಹಿಂದೇಟು ಹಾಕುತ್ತಿದೆ. ರಾಜ್ಯ ಸರ್ಕಾರದ ಶೇ.82 ರಷ್ಟು ನೌಕರರಿಗೆ ಮುಂಬಡ್ತಿ ನೀಡಬೇಕು ಆಗ್ರಹಿಸಿದರು.

    ಅಲ್ಲದೇ ರಾಜ್ಯ ಸರ್ಕಾರವು ಸುಪ್ರೀಂ ಆದೇಶಕ್ಕೆ ತದ್ವಿರುದ್ಧವಾಗಿ ಕಾನೂನು ಜಾರಿಗೆ ಮಾಡಲು ನಿರ್ಧರಿಸಿದೆ. ಆದರಿಂದಲೇ ಈ ಕಾಯ್ದೆಯನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತರಲು ರಾಜ್ಯಪಾಲರಿಗೆ ಕಡತ ರವಾನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಕಾವ್ಯ ನಿಗೂಢ ಸಾವು- ಪೋಷಕರಿಗೆ ಸಂಸದ ಕಟೀಲ್ ಸಾಂತ್ವನ

    ಕಾವ್ಯ ನಿಗೂಢ ಸಾವು- ಪೋಷಕರಿಗೆ ಸಂಸದ ಕಟೀಲ್ ಸಾಂತ್ವನ

    ಮಂಗಳೂರು: ಜುಲೈ 20ರಂದು ಆಳ್ವಾಸ್ ಕಾಲೇಜಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ವಿದ್ಯಾರ್ಥಿನಿ ಕಾವ್ಯಶ್ರೀ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದ್ದಾರೆ.

    ಇದನ್ನೂ ಓದಿ: ಕಾವ್ಯ ನಿಗೂಢ ಸಾವು: ಆಳ್ವಾಸ್ ಸಂಸ್ಥೆ ವಿರುದ್ಧ ಭಾರೀ ಪ್ರತಿಭಟನೆ- ಹಾಸ್ಟೆಲ್‍ನ ಸಿಸಿಟಿವಿ ದೃಶ್ಯ ಬಿಡುಗಡೆ

    ಕಾವ್ಯ ಪೋಷಕರಿಗೆ ಸಾಂತ್ವನ ಹೇಳಿದ ನಳಿನ್ ಕುಮಾರ್, ಆರೋಪಿಗಳು ಯಾರೇ ಆಗಿದ್ದರೂ ಸರಿ ಅವರನ್ನು ಬಂಧಿಸಬೇಕು. ಈ ಕುರಿತು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ರಾಜ್ಯ ಮತ್ತು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಪ್ರಕರಣದಲ್ಲಿರುವ ಗೊಂದಲಗಳು ಶೀಘ್ರ ನಿವಾರಣೆಯಾಗಬೇಕು ಅಂದ್ರು.

    ಇದನ್ನೂ ಓದಿ:  ವಿದ್ಯಾರ್ಥಿನಿ ಕಾವ್ಯ ಪೂಜಾರಿ ಕೇಸ್: ಆಳ್ವಾಸ್ ಕಾಲೇಜು ಮುಖ್ಯಸ್ಥ ಮೋಹನ್ ಆಳ್ವ ಹೇಳಿದ್ದೇನು?

    ಕಾವ್ಯ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ರಾಜಕೀಯ ನಾಯಕರು ತೆಪ್ಪಗಾಗಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಾಕ ಆಕ್ರೋಶ ವ್ಯಕ್ತವಾಗಿತ್ತು.

    ಕಾವ್ಯಾ ಸಾವಿನ ಸಮಗ್ರ ತನಿಖೆಗೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯೆದುರು ಎಬಿವಿಪಿ ಪ್ರತಿಭಟನೆ ನಡೆಸಿತು. ನ್ಯಾಯಕ್ಕಾಗಿ ಆಗ್ರಹಿಸಿ ವಿದ್ಯಾರ್ಥಿಗಳು ಧರಣಿ ನಡೆಸಿದ್ರು.

     

  • ಝಂಡಾ ಬದಲಾದ್ರೂ ಜಾತ್ಯಾತೀತ ಅಜೆಂಡಾವನ್ನು ಮುಂದುವರಿಸ್ತೇನೆ: ವಿಶ್ವನಾಥ್

    ಝಂಡಾ ಬದಲಾದ್ರೂ ಜಾತ್ಯಾತೀತ ಅಜೆಂಡಾವನ್ನು ಮುಂದುವರಿಸ್ತೇನೆ: ವಿಶ್ವನಾಥ್

    ಬೆಂಗಳೂರು: ತೆನೆಹೊತ್ತ ಮಹಿಳೆಯನ್ನು ಕೊರಳಿಗೆ ಸುತ್ತಿಕೊಂಡಿದ್ದೇನೆ. ಇದು ಇಡೀ ರಾಜ್ಯಾದ್ಯಂತ ಸುತ್ತಿಕೊಳ್ಳುವಂತೆ ಆಗಬೇಕು ಎಂದು ಮಾಜಿ ಸಂಸದ ಎಚ್ ವಿಶ್ವನಾಥ್ ಹೇಳಿದ್ದಾರೆ.

    ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್‍ಗೆ ಸೇರ್ಪಡೆಯಾದ ಬಳಿಕ ಮಾತನಾಡಿದ ಅವರು, ಪ್ರಾದೇಶಿಕ ಪಕ್ಷವಾದರೂ ಪ್ರಧಾನ ಮಂತ್ರಿಯನ್ನು ಕೊಟ್ಟ ಪಕ್ಷ ಜೆಡಿಎಸ್. ಮುಖ್ಯಮಂತ್ರಿಗಳನ್ನ ಮಾಡಿದ್ದು ಜೆಡಿಎಸ್. ಇದು ಹುಡುಗಾಟವಲ್ಲ. ಮುಂದೆ ದೇವೇಗೌಡರ ನೆರಳಾಗಿ, ಕುಮಾರಸ್ವಾಮಿ ಸ್ನೇಹಿತರಾಗಿ ನಿಮ್ಮಲ್ಲರ ಜೊತೆ ಹೆಜ್ಜೆ ಹಾಕುತ್ತೇವೆ ಎಂದು ತಿಳಿಸಿದರು.

    ಹರಿಯುವ ನೀರು: ನನ್ನ 40 ವರ್ಷದ ರಾಜಕೀಯ ಇತಿಹಾಸದಲ್ಲಿ ಐತಿಹಾಸಿಕ ತಿರುವು ಇದು. ಬೆಳಗ್ಗೆ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಿ ಬಂದಿದ್ದೇನೆ. ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರಲಿ ಅಂತ ದೇವರಲ್ಲಿ ಕೇಳಿಕೊಂಡಿದ್ದೇನೆ. ಹಾಗಾಗಿ ರಾಜಕಾರಣ ನಿಂತ ನೀರಲ್ಲ. ರಾಜಕಾರಣ ಹರಿಯುವ ನೀರು ಎಂದರು.

    ಝಂಡಾ ಬದಲಾಗಿದೆ: ಸನ್ನಿವೇಶ, ಸಮಯಗಳು ನಡುವೆ ಹೊಸ ಮನೆಗೆ ಪಾದಾರ್ಪಣೆ ಮಾಡಿದ್ದೇನೆ. ರಾಷ್ಟ್ರೀಯ ಪಕ್ಷದಲ್ಲಿ ಕಲಿತ ಕೆಲಸ ಜೆಡಿಎಸ್‍ನಲ್ಲೂ ಮುಂದುವರೆಸುತ್ತೇನೆ. ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರಿಕ್ಕೆ ತರಲು ನಾನು ಎಲ್ಲ ಪ್ರಯತ್ನ ಮಾಡುತ್ತೇನೆ. ಇವತ್ತಿನಿಂದ ನನ್ನ ಝಂಡಾ ಬದಲಾಗಿದೆ. ತೆನೆ ಹೊತ್ತ ಮಹಿಳೆ ಝಂಡಾ ಹಿಡಿದುಕೊಂಡಿದ್ದೇನೆ. ಆದರೆ ನನ್ನ ಜಾತ್ಯಾತೀತ ಅಜೆಂಡಾವನ್ನು ಜೆಡಿಎಸ್ ನಲ್ಲೂ ಮುಂದುವರೆಸುತ್ತೇನೆ ಎಂದರು.

    ಲಾಭ ಇಲ್ಲ: ಪಕ್ಷ ಪರಿಸ್ಥಿತಿ ಸನ್ನಿವೇಶ ಇದನ್ನೇ ಪ್ರಶ್ನಿಸುತ್ತಿದ್ದರೆ ಯಾವ ಲಾಭವೂ ಇಲ್ಲ. ಇಂದು ಹೊಸ ಮನೆಗೆ ಬಂದಿದ್ದೇನೆ. ಯಾವ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ದುಡಿದ್ದೇನೋ ಅದೇ ಉತ್ಸಾಹದಿಂದ ಜೆಡಿಎಸ್ ನಲ್ಲಿ ದುಡಿಯುವೆ. 2006ರಲ್ಲಿ ಸಿಎಂ ಆಗಿದ್ದಾಗ ಕುಮಾರಸ್ವಾಮಿ ಬಗ್ಗೆ ವಿಧಾನಸೌಧದಲ್ಲಿ ಮೆಚ್ಚುಗೆ ಮಾತನಾಡಿದ್ದೆ. ಈಗ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ದೇವೇಗೌಡರು ದೇವರಲ್ಲಿ ಅಪಾರ ನಂಬಿಕೆ ಇಟ್ಟವರು. ಅಂತವರ ಜೊತೆ, ನಿಮ್ಮೆಲ್ಲರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಯೋಗ. ಮುಖಂಡರ ಜೊತೆ ಕುಳಿತು ಚರ್ಚಿಸಿ, ತಂತ್ರಗಾರಿಕೆ ಮಾಡಿ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಎಂದು ವಿಶ್ವನಾಥ್ ಹೇಳಿದರು.

    ಪ್ರಾಮಾಣಿಕ ರಾಜಕಾರಣಿ: ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ ಎಚ್. ವಿಶ್ವನಾಥ್ ಪ್ರಾಮಾಣಿಕ ರಾಜಕಾರಣಿ. ತಮ್ಮ ಬೆಂಬಲಿಗರ ಜೊತೆ ಪಕ್ಷಕ್ಕೆ ಸೇರಿದ್ದಾರೆ. ಕಳೆದ ಹಲವಾರು ತಿಂಗಳಿನಲ್ಲಿ ಮಾಧ್ಯಮದವರು ವಿಶ್ವನಾಥ್ ಸೇರ್ಪಡೆ ಬಗ್ಗೆ ಕೇಳ್ತಿದ್ರು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ವಿಶ್ವನಾಥ್ ಪಕ್ಷ ಸೇರಲು ಮೈಸೂರು ಜಿಲ್ಲೆಯ ನಮ್ಮ ಶಾಸಕರೇ ಕಾರಣ ಎಂದು ಹೇಳಿದರು.

    10ರಲ್ಲಿ ಜಯ: ವಿಶ್ವನಾಥ್ ಅವರು ಮನಸ್ಸಿನಲ್ಲಿ ಎಷ್ಟು ನೊಂದಿದ್ದಾರೆ ಅನ್ನೊದು ನನಗೆ ಗೊತ್ತಿದೆ. 40 ವರ್ಷದ ದುಡಿಮೆ ಮಾಡಿಕೊಂಡ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಬರೋದು ಎಷ್ಟು ಕಷ್ಟ ಗೊತ್ತು. ವಿಶ್ವನಾಥ್ ಸೇರ್ಪಡೆಯಿಂದ ಮೈಸೂರು ಭಾಗದ 11 ಕ್ಷೇತ್ರಗಳ ಪೈಕಿ 10 ಕ್ಷೇತ್ರದಲ್ಲಿ ಜಯಗಳಿಸುವ ವಿಶ್ವಾಸ ಇದೆ. ದೇವೇಗೌಡರಿಂದ ಅನೇಕ ಜನ ಬೆಳೆದಿದ್ದಾರೆ. ಪಕ್ಷದಲ್ಲಿ ಬೆಳೆದವರೇ ಪಕ್ಷ ನಾಶ ಮಾಡಬೇಕು ಅಂತ ಓಡಾಡುತ್ತಿದ್ದಾರೆ. ಇಂತಹವರಿಗೇ ನೀವೇ ಪಾಠ ಕಲಿಸಬೇಕು ಎಂದು ಹೇಳುವ ಮೂಲಕ ಜೆಡಿಎಸ್ ಬಂಡಾಯ ನಾಯಕರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

    ಜೆಡಿಎಸ್ ಪಕ್ಷದಲ್ಲಿ ಬೆಳೆದ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಆದರು. ಅವರು ಕಾಂಗ್ರೆಸ್ ಸೇರಲು ಪ್ರೇರೇಪಿಸಿದ್ದು ವಿಶ್ವನಾಥ್. 130 ವರ್ಷಗಳ ಇತಿಹಾಸದ ಬಗ್ಗೆ ಇವತ್ತು ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಸಿಎಂ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯ ಮಾಡುತ್ತಾರೆ. ನಾನೇನು ಸಿಎಂ ಆಗುವ ಕನಸು ಕಾಣ್ತಿಲ್ಲ. ಅಧಿಕಾರದ ಆಸೆ ನಮಗೆ ಇಲ್ಲ. ರಾಜ್ಯದ ಜನರ ಹಿತ ಕಾಯಲು ಜೆಡಿಎಸ್ ಗೆ ಅಧಿಕಾರ ಬೇಕು ಅಷ್ಟೇ. ಇದು ಅಪ್ಪಮಕ್ಕಳ ಪಕ್ಷ ಅಲ್ಲ. ಎಲ್ಲ ಸಮುದಾಯದವರು ಇಲ್ಲಿ ನಾಯಕರಾಗಿದ್ದಾರೆ ಎಂದರು.

    ಯಾರು ಏನೇ ಸಮೀಕ್ಷೆ ಮಾಡಲಿ. ಜೆಡಿಎಸ್ ಕೂಡಾ ಸಮೀಕ್ಷೆ ಮಾಡಿದೆ. ಜೆಡಿಎಸ್ ಪಕ್ಷದ ಶಕ್ತಿ ಏನು ಎಂಬುದು ಗೊತ್ತಿದೆ. ಈ ಬಾರಿ ಅಷ್ಟು ಸುಲಭವಲ್ಲ. ಜೆಡಿಎಸ್ ಬಗ್ಗೆ ಮುಂದಿನ ಚುನಾವಣೆಯಲ್ಲಿ ಗೊತ್ತಾಗುತ್ತದೆ ಎಂದು ಎಚ್‍ಡಿಕೆ ತಿಳಿಸಿದರು.

    ಎಚ್.ವಿಶ್ವನಾಥ್ ಜೊತೆ ಅವರ ಹಲವು ಬೆಂಬಲಿಗರು, ಕಾಂಗ್ರೆಸ್ ಮುಖಂಡರು ಜೆಡಿಎಸ್‍ಗೆ ಸೇರ್ಪಡೆಯಾದರು. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಪಕ್ಷದ ಬಾವುಟ, ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ವಿಶ್ವನಾಥ್ ಅವರ ಮಗ ಅಮಿತ್ ವಿಶ್ವನಾಥ್ ಕೂಡಾ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.

    ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀಕಂಠೇಗೌಡ, ಶಾಸಕ ಜಿ.ಟಿ.ದೇವೆಗೌಡ, ಮಧು ಬಂಗಾರಪ್ಪ, ಮಾಜಿ ಶಾಸಕ ಬಂಡೇಪ್ಪ ಕಾಶಂಪುರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ವಿಡಿಯೋ: ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಒಪ್ಪದ ಮಗನಿಗೆ ತಂದೆಯಿಂದ ಹಲ್ಲೆ

    ವಿಡಿಯೋ: ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಒಪ್ಪದ ಮಗನಿಗೆ ತಂದೆಯಿಂದ ಹಲ್ಲೆ

    ಮೈಸೂರು: ಮತಾಂತರಕ್ಕೆ ಒಪ್ಪದ ಮಗನಿಗೆ ತಂದೆ ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್ ನಲ್ಲಿ ನಡೆದಿದೆ.

    ಪವಿತ್ ಎಂಬಾತನೇ ತಂದೆ ರವಿಯಿಂದ ಹಲ್ಲೆಗೊಳಗಾದ ಮಗ. ಬುಡುಕಟ್ಟು ಜನಾಂಗದ ರವಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಆದರೆ ಪುತ್ರ ಪವಿತ್ ಮತಾಂತರಗೊಳ್ಳದೇ ಹಿಂದೂ ಧರ್ಮದಲ್ಲಿ ಮುಂದುವರೆದಿದ್ದನು.

    ರವಿ ಮಾತ್ರ ಮತಾಂತರಗೊಳ್ಳುವಂತೆ ಮಗನ ಮೇಲೆ ಒತ್ತಡ ಹಾಕುತ್ತಿದ್ದರು. ದೇವಸ್ಥಾನಕ್ಕೆ ಬಂದಿದ್ದ ಮಗ ಪವಿತ್‍ನನ್ನು ಕಂಡ ರವಿ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದು, ರವಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=S0JyvLDfqcA