Tag: ಪಬ್ಲಿಕ ಟಿವಿ

  • ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು: ಈಶ್ವರಪ್ಪ

    ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು: ಈಶ್ವರಪ್ಪ

    ಬೆಂಗಳೂರು: ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

    ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿರುವ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಜಾರಿ ಮಾಡಲ್ಲ ಎಂದು ಹೇಳಿದ್ದು ಯಾರು? ರಾಜಕಾರಣಕ್ಕೊಸ್ಕರ ಪಾದಯಾತ್ರೆ ಮಾಡುತ್ತಿದ್ದಾರೆ. ಅವರು ಪಾದಯಾತ್ರೆ ಮಾಡಿದರೆ ನಮ್ಮದೇನು ಅಭ್ಯಂತರ ಇಲ್ಲ. ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣದಲ್ಲಿ ಯಾವುದೇ ಅಕ್ರಮ ನಡೆದಿಲ್ಲ: ಅರಗ ಜ್ಞಾನೇಂದ್ರ

    ಯಾವುದೇ ಕಾರಣಕ್ಕೂ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿ ನಳೀನ್ ಕುಮಾರ್ ಕಟೀಲ್ ಅವರೇ ಇರುತ್ತಾರೆ. ಅವರು ಬದಲಾವಣೆಯಾಗುವುದಿಲ್ಲ. ಇದು ಕತ್ತಲಲ್ಲಿ ಕರಿ ಬೆಕ್ಕು ಹುಡುಕಿದಂಗೆ. ಸುಮ್ಮನೇ ಆ ರೀತಿ ಹೇಳಬಾರದು. ಅವರು ರಾಜ್ಯಾದ್ಯಂತ ಉತ್ತಮ ಕೆಲಸ ಮಾಡ್ತಿದ್ದಾರೆ. ಚುನಾವಣೆಗಳನ್ನು ಗೆಲ್ಲುತ್ತಾ ಬಂದಿದ್ದೇವೆ. ಸಂಘಟನೆ ಚೆನ್ನಾಗಿ ಮಾಡ್ತಿದ್ದಾರೆ. ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.

    ಬಿಟ್ ಕಾಯಿನ್ ನಲ್ಲಿ ಪ್ರಭಾವಿಗಳಿದ್ದಾರೆ ಎಂಬ ವಿಪಕ್ಷಗಳ ಆರೋಪ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನಾನೇನು ಹೇಳಲು ಹೋಗಲ್ಲ. ಇದರಲ್ಲಿ ಕಾಂಗ್ರೆಸ್ ಅವರು ಇದ್ದಾರಾ? ಜೆಡಿಎಸ್ ಅವರು ಇದ್ದಾರಾ? ಯಾರಿದ್ದಾರೆ ಅನ್ನೋದು ತನಿಖೆಯಿಂದ ಗೊತ್ತಾಗಲಿದೆ. ಡ್ರಗ್ಸ್, ಬಿಟ್ ಕಾಯಿನ್ ಬಗ್ಗೆ ನನಗೆ ಯಾರಿದ್ದಾರೆ ಅಂತಾ ಗೊತ್ತಿಲ್ಲ. ಅದಕ್ಕೆ ನಾನೇನು ಹೇಳೋಕೆ ಹೋಗಲ್ಲ. ಸಿಎಂ ಮಗನಿದ್ದಾರಾ? ಸಚಿವರ ಮಗನಿದ್ದಾರಾ? ಇದೆಲ್ಲ ಸಾರ್ವಜನಿಕ ಚರ್ಚೆಯಾದ್ರೆ ನಾನ್ಯಾಕೆ ಉತ್ತರಿಸಲಿ. ಪ್ರಸ್ತುತ ಈ ಕುರಿತು ತನಿಖೆಯಾಗ್ತಿದ್ದು, ನಂತರ ಈ ಹಿಂದೆ ಯಾರಿದ್ದಾರೆ ಅನ್ನೋದು ಗೊತ್ತಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗುಂಡು ಹಾರಿಸಿ ತಂದೆ, ಮಗನ ಹತ್ಯೆ – ನಿರ್ಲಕ್ಷ್ಯ ತೋರಿದ ಇಬ್ಬರು ಪೊಲೀಸರ ಅಮಾನತು

  • ಜನವರಿ 7ರವರೆಗೆ ಬ್ರಿಟನ್ ವಿಮಾನ ಸಂಚಾರ ರದ್ದು

    ಜನವರಿ 7ರವರೆಗೆ ಬ್ರಿಟನ್ ವಿಮಾನ ಸಂಚಾರ ರದ್ದು

    ನವದೆಹಲಿ: ಕೊರೊನಾ ರೂಪಾಂತರಿ ವೈರಸ್ ಹಿನ್ನೆಲೆ ಇಂಗ್ಲೆಂಡ್ ನಿಂದ ಆಗಮಿಸುವ ಎಲ್ಲ ವಿಮಾನ ಸೇವೆಯ ಜನವರಿ 7, 2021ರವರೆಗೆ ರದ್ದು ಮಾಡಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್‍ದೀಪ್ ಸಿಂಗ್ ಹೇಳಿದ್ದಾರೆ. ಈ ಮೊದಲು ಡಿಸೆಂಬರ್ 31ರವರೆಗೆ ವಿಮಾನ ಹಾರಾಟ ಬಂದು ಮಾಡಲಾಗಿತ್ತು. ಇದೀಗ ಆದೇಶವನ್ನ ಜನವರಿ 7ರವರೆಗೆ ವಿಸ್ತರಿಸಲಾಗಿದೆ.

    ದೇಶದಲ್ಲಿ ಕೊರೊನಾ ರೂಪಾಂತರಿ ಸ್ಫೋಟಗೊಂಡಿದ್ದು, ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಮಂಗಳವಾರ ಏಳು ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇಂದು ಮತ್ತೆ 13 ಜನರಲ್ಲಿ ಹೊಸ ಸೋಂಕು ತಗುಲಿರೋದು ದೃಢವಾಗಿದೆ. ಉತ್ತರ ಪ್ರದೇಶ 1, ತೆಲಂಗಾಣ 2, ಕರ್ನಾಟಕ 7, ದೆಹಲಿ 9 ಮತ್ತು ಪಶ್ಚಿಮ ಬಂಗಾಳದ ಓರ್ವರಲ್ಲಿ ಬ್ರಿಟನ್ ವೈರಸ್ ಕಂಡು ಬಂದಿದೆ.

    ನವೆಂಬರ್ 22ರಿಂದ ಡಿಸೆಂಬರ್ 22ರೊಳಗೆ ಸುಮಾರು 33 ಸಾವಿರ ಪ್ರಯಾಣಿಕರು ಭಾರತಕ್ಕೆ ಬಂದಿದ್ದಾರೆ. ಈ ಪ್ರಯಾಣಿಕರಲ್ಲಿ 114 ಜನರಿಗೆ ಕೊರೊನಾ ಸೋಂಕು ತಗುಲಿದೆ. ಎಲ್ಲರ ಸ್ಯಾಂಪಲ್ ಗಳನ್ನ ಜೀನೊಮ್ ಸೀಕ್ವೆನ್ಸ್ ಗೆ ರವಾನಿಸಲಾಗಿದೆ. ಪಾಸಿಟಿವ್ ಬಂದಿರೋ ಸೋಂಕಿತರು ಮತ್ತು ಅವರ ಸಂಪರ್ಕಿತರನ್ನ ಕ್ವಾರಂಟೈನ್ ಮಾಡಲಾಗಿದೆ.

  • ಬಸಿ ನೀರಿನಿಂದ ಮನೆಯೊಳಗೆ ಭೂಮಿ ಕುಸಿತ – ಗ್ರಾಮದ ನೆಮ್ಮದಿ ಕಸಿದುಕೊಂಡ ಗುಂಡಿಗಳು

    ಬಸಿ ನೀರಿನಿಂದ ಮನೆಯೊಳಗೆ ಭೂಮಿ ಕುಸಿತ – ಗ್ರಾಮದ ನೆಮ್ಮದಿ ಕಸಿದುಕೊಂಡ ಗುಂಡಿಗಳು

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಮಸೀದಪುರ ಗ್ರಾಮಕ್ಕೆ ಅದ್ಯಾವ ಶಾಪ ತಗುಲಿದೆಯೋ ಗೊತ್ತಿಲ್ಲ. ರಾತ್ರಿಯಾದ್ರೆ ಸಾಕು ಜನ ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವೇ ಇಲ್ಲ. ಅದ್ಯಾವಾಗ ಭೂಮಿ ಬಾಯಿ ತೆರೆದು ಯಾರನ್ನು ಬಲಿ ಪಡೆಯುತ್ತೋ ಅನ್ನೋ ಭಯ ಗ್ರಾಮಸ್ಥರನ್ನ ಕಾಡುತ್ತಿದೆ. ಗ್ರಾಮದಲ್ಲಿನ ಅಗೆವುಗಳ (ಕಣಜ) ಕುಸಿತದಿಂದ ಜನ ಕಂಗೆಟ್ಟು ಹೋಗಿದ್ದಾರೆ.

    ಇಲ್ಲಿ ಯಾವುದೇ ಮನೆಗೆ ಹೋದರೂ ಆತಂಕದಲ್ಲಿರುವ ಜನರೇ ಕಾಣಸಿಗುತ್ತಾರೆ. ಗ್ರಾಮ ಅರ್ಧದಷ್ಟು ಮನೆಗಳು ಬಾಯಿತೆರೆದು ಮನೆಯ ಸಾಮಾನುಗಳನ್ನೆಲ್ಲಾ ನುಂಗಿ ಹಾಕಿವೆ. ಗ್ರಾಮದಲ್ಲಿನ 500 ಮನೆಗಳಲ್ಲಿ 300ಕ್ಕೂ ಅಧಿಕ ಮನೆಗಳಲ್ಲಿ ಏಕಾಏಕಿ ಕೋಣೆಗಳಲ್ಲಿ ಕುಸಿತವಾಗಿವೆ. ಕಳೆದ ಹತ್ತು ವರ್ಷಗಳಿಂದ ಮನೆಗಳು ಕುಸಿಯುತ್ತಿದ್ದು ಈ ಬಾರಿ ಸುರಿದ ನಿರಂತರ ಮಳೆಯಿಂದಾಗಿ ಸುಮಾರು 20 ಮನೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಬಾಯ್ತೆರೆದ ಭೂಮಿಯೊಳಗೆ ಮಂಚ, ಪಾತ್ರೆ ಪಗಡೆಗಳು ಹಾಗೂ ದವಸ ಧಾನ್ಯಗಳು ಮುಚ್ಚಿಹೋಗಿವೆ.

    ಹಿಂದೆ ಹಿರಿಯರು ದವಸ ಧಾನ್ಯಗಳನ್ನ ಸಂಗ್ರಹಿಸಿಡಲು ಮನೆ ತಲೆಬಾಗಿಲು ಮುಂದೆ, ಕೋಣೆಯೊಳಗೆ, ಮನೆಯ ಅಂಗಳದಲ್ಲಿ ನಿರ್ಮಿಸಿದ್ದ ಅಗೆವುಗಳು ಈಗ ಕುಸಿಯುತ್ತಿವೆ. ಅಗೆವುಗಳನ್ನ ಮಣ್ಣಿನಿಂದ ಸಂಪೂರ್ಣ ಮುಚ್ಚಿದ್ದರೂ ಗ್ರಾಮದಲ್ಲಿ ಮಳೆ ನೀರಿನ ಬಸಿ ಹಾಗೂ ನೀರಾವರಿಯಿಂದಾಗಿ ಅಗೆವುಗಳು ಕುಸಿಯುತ್ತಿವೆ. ಇದರಿಂದ ಮನೆಯೊಳಗೆ 18 ರಿಂದ 20 ಅಡಿ ಆಳದ ದೊಡ್ಡ ಗುಂಡಿಗಳು ಬೀಳುತ್ತಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಗ್ರಾಮ ತಗ್ಗು ಪ್ರದೇಶದಲ್ಲಿದ್ದು ಮಳೆಗಾಲದಲ್ಲಿ ಪ್ರತಿ ವರ್ಷ ಇಲ್ಲಿನ ಮನೆಗಳಲ್ಲಿನ ಅಗೆವುಗಳು ಕುಸಿಯುತ್ತಿವೆ. ಗ್ರಾಮದಲ್ಲಿ ಸಾಕಷ್ಟು ಮನೆಗಳು ಕುಸಿದು ಬಿದ್ದಿವೆ. ಪ್ರತಿದಿನ ಪ್ರತಿಕ್ಷಣ ಜನ ಉಸಿರು ಬಿಗಿ ಹಿಡಿದೇ ಬದುಕಬೇಕಾದ ಪರಸ್ಥಿತಿಯಿದೆ. ಹೀಗಾಗಿ ಗ್ರಾಮವನ್ನ ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸುತ್ತಲೇ ಇದ್ದಾರೆ. ಆದ್ರೆ ಯಾವುದೇ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ತಲೆಕೆಡಿಸಿಕೊಂಡಿಲ್ಲ. ಮಳೆ ನಿಂತು ಒಂದು ವಾರ ಕಳೆದರೂ ಯಾವುದೇ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ. ಮುಂದೆ ಯಾವುದೇ ದೊಡ್ಡ ಅನಾಹುತ ಸಂಭವಿಸುವುದರೊಳಗೆ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಿದೆ. ಕುಸಿದ ಮನೆಗಳಲ್ಲೇ ಬದುಕು ನಡೆಸಿರುವ ಗ್ರಾಮಸ್ಥರು ಸರ್ಕಾರ ನಮಗೆ ಶಾಶ್ವತ ಪರಿಹಾರ ಒದಗಿಸಬೇಕು ಅಂತ ಮನವಿ ಮಾಡಿದ್ದಾರೆ.

  • ಅನ್ನದಾಸೋಹ, ಸಮಾರಂಭ ಬಿಟ್ಟು ದೇವಸ್ಥಾನದಲ್ಲಿ ಎಲ್ಲಾ ಸೇವೆ ಆರಂಭ

    ಅನ್ನದಾಸೋಹ, ಸಮಾರಂಭ ಬಿಟ್ಟು ದೇವಸ್ಥಾನದಲ್ಲಿ ಎಲ್ಲಾ ಸೇವೆ ಆರಂಭ

    ಉಡುಪಿ: ಸೆಪ್ಟೆಂಬರ್ ಒಂದರಿಂದ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಸೇವೆ ಆರಂಭ ಆಗಲಿದೆ. ಅನ್ನ ದಾಸೋಹ ಮತ್ತು ಸಮಾರಂಭಗಳಿಗೆ ಅವಕಾಶವಿಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ದೇಗುಲದಲ್ಲಿ ಎಲ್ಲಾ ಸೇವೆ ಆರಂಭಿಸಲು ಅನುಮತಿ ಕೋರಿ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿದ್ದೇವೆ. ಸೆಪ್ಟೆಂಬರ್ 1ರಿಂದ ಸೇವೆ ಆರಂಭ ಮಾಡಬೇಕು ಎಂಬುದು ನಮ್ಮ ಗುರಿ. ರಾಜ್ಯ ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿದ್ದೇವೆ. ಒಳಾಂಗಣದ ಎಲ್ಲಾ ಸೇವೆ ಆರಂಭ ಮಾಡಿ ಎಂದು ಮನವಿ ಮಾಡಿದ್ದೇವೆ. ಸರ್ಕಾರದಿಂದ ಅಧಿಕೃತ ಮಾಹಿತಿ ಮತ್ತು ಅನುಮತಿ ಬರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಾಮಾಜಿಕ ಅಂತರ ಕಾಪಾಡುವ ಸೇವೆಗೆ ಮುಕ್ತ ಅವಕಾಶ ಇದೆ. ಕೊಲ್ಲೂರಿನ ಚಿನ್ನದ ರಥ ಸೇವೆ, ಬೆಳ್ಳಿರಥ ಸೇವೆ ಹೇಗೆ ಎಂಬ ಬಗ್ಗೆ ಚಿಂತನೆ ನಡೆಸುತ್ತೇವೆ. ಕೋವಿಡ್-19 ಗೈಡ್ ಲೈನ್ ಮೇಲೆ ಎಲ್ಲಾ ಸೇವೆ ಆರಂಭವಾಗುತ್ತದೆ ಎಂದು ಹೇಳಿದರು.

    ನೂರಾರು, ಸಾವಿರಾರು ಜನ ಸೇರಿ ಕೊಡುವ ಸೇವೆ ಸದ್ಯಕ್ಕೆ ಸಾಧ್ಯವಿಲ್ಲ. ಅಂತಹ ಸೇವೆಯನ್ನು ಹತ್ತು-ಹದಿನೈದು ಜನರು ಮಾಡಲು ಸಾಧ್ಯವೇ ಎಂಬ ಚಿಂತನೆ ನಡೆಸುತ್ತೇವೆ. ಕೋವಿಡ್ ನಿಯಮದ ಮಿತಿಯ ಒಳಗೆ ಎಲ್ಲಾ ಸೇವೆಗಳು ಇರುತ್ತದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

  • ಬೆಂಗ್ಳೂರು ಗಲಭೆ- ಕಿಡಿಗೇಡಿಗಳಿಗೆ ಬೊಮ್ಮಾಯಿ ವಾರ್ನಿಂಗ್

    ಬೆಂಗ್ಳೂರು ಗಲಭೆ- ಕಿಡಿಗೇಡಿಗಳಿಗೆ ಬೊಮ್ಮಾಯಿ ವಾರ್ನಿಂಗ್

    ಬೆಂಗಳೂರು: ಪುಲಿಕೇಶಿ ನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ಕಿಡಿಗೇಡಿಗಳ ದಾಳಿಯಾಗಿದೆ. ಸ್ಥಳೀಯ ಡಿಜೆ ಹಳ್ಳಿ ಪೊಲೀಸ್ ಠಾಣೆ ಮೇಲೆ ಕಿಡಿಗೇಡಿಗಳ ಮುತ್ತಿಗೆ ಹಾಕಿದ್ದು, ಪೊಲೀಸರ ಮೇಲೆ ಹಲ್ಲೆಗೆ ದುಷ್ಕರ್ಮಿಗಳು ಮುಂದಾಗಿದ್ದಾರೆ. ಈ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

    ಪುಂಡರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಡಿಜೆ ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಪುಂಡಾಟಿಕೆ ಗಮನಕ್ಕೆ ಬಂದಿದೆ. ಬೆಂಕಿ ಹಚ್ಚುವುದು, ಗಲಾಟೆ ಕಾನೂನು ಬಾಹಿರ ಕೃತ್ಯ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಹೆಚ್ಚುವರಿ ಪೊಲೀಸರನ್ನು ರವಾನೆ ಮಾಡಲಾಗಿದೆ. ಪೊಲೀಸರಿಗೆ ಸಂಪೂರ್ಣ ಅಧಿಕಾರವನ್ನು ಕೊಟ್ಟಿದ್ದೇನೆ. ಇದನ್ನೂ ಓದಿ: ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು 

    ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರುತ್ತಾರೆ ಎಂದರು. ತಪ್ಪು ಮಾಡಿದವರು ಎಷ್ಟೇ ದೊಡ್ಡವರಾಗಿದ್ದರೂ ಕಠಿಣ ಕ್ರಮ ಆಗಲಿದೆ ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದರು.

  • ಬೆಂಗಳೂರಿನಿಂದ ಮುಂದುವರಿದ ವಲಸೆ- ಬೆಳ್ಳಂಬೆಳಗ್ಗೆ ವಾಹನ ದಟ್ಟಣೆ ಶುರು

    ಬೆಂಗಳೂರಿನಿಂದ ಮುಂದುವರಿದ ವಲಸೆ- ಬೆಳ್ಳಂಬೆಳಗ್ಗೆ ವಾಹನ ದಟ್ಟಣೆ ಶುರು

    ಬೆಂಗಳೂರು: ಇಂದು ರಾತ್ರಿ 8 ಗಂಟೆಯ ಬಳಿಕ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಇಂದು ಕೂಡ ಜನ ಬೆಂಗಳೂರು ತೊರೆಯುತ್ತಿದ್ದಾರೆ.

    ಕುಟುಂಬ ಸಮೇತ ಗಂಟು ಮೂಟೆ ಕಟ್ಟಿಕೊಂಡು ಜನರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಸೋಮವಾರಕ್ಕೆ ಹೋಲಿಕೆ ಮಾಡಿದರೆ ಇವತ್ತು ಗುಳೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಮೆಜೆಸ್ಟಿಕ್‍ನಿಂದ ಗುಳೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಒಂದು ವಾರ ಲಾಕ್‍ಡೌನ್ ಇದೆ. ಹೀಗಾಗಿ ಊರಲ್ಲಿ ಇದ್ದು ಬರೋಣ ಎಂದು ಅನೇಕರು ಬೆಂಗಳೂರಿನಿಂದ ಹೋಗುತ್ತಿದ್ದಾರೆ.

    ಬಸ್ ನಿಲ್ದಾಣದಲ್ಲಿ ಲಗೇಜ್ ಸಮೇತ ಊರಿಗೆ ತೆರಳಲು ನಿಂತಿದ್ದಾರೆ. ನಿನ್ನೆ ಬಸ್ ಇಲ್ಲದೆ ಪ್ರಯಾಣಿಕರು ಪರದಾಡಿದ್ದರು. ಹೀಗಾಗಿ ಪ್ರತಿ ಬಸ್ ಸ್ಟಾಂಡ್‍ಗಳಲ್ಲಿ ಹೆಚ್ಚುವರಿ ಬಸ್ ನಿಯೋಜನೆ ಮಾಡಲಾಗಿದೆ. ಗೊರಗೊಂಟೆಪಾಳ್ಯ, ಜಾಲಹಳ್ಳಿ ಕ್ರಾಸ್ ಬಸ್ ನಿಲ್ದಾಣಗಲ್ಲಿ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಇಂದು ಕೂಡ ಊರಿಗಳಿಗೆ ತೆರಳಲು ಜನರು ನಿಂತಿದ್ದಾರೆ.

    ಜಾಲಹಳ್ಳಿ ಕ್ರಾಸ್ ಬಸ್ ನಿಲ್ದಾಣದಲ್ಲಿ ಪ್ರತಿ ಪ್ರಯಾಣಿಕರಿಗೂ ಆರೋಗ್ಯ ಸಿಬ್ಬಂದಿ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಕಳುಹಿಸುತ್ತಿದ್ದಾರೆ. ಹೆಚ್ಚುವರಿ ಬಸ್‍ಗಳ ನಿಯೋಜನೆ ಹಿನ್ನೆಲೆ ಬಸ್ ನಿಲ್ದಾಣದಲ್ಲಿ ಜನಸಂದಣಿ ಕಡಿಮೆಯಾಗಿದೆ.

    ಮುಂಜಾನೆಯಿಂದಲೇ ನೆಲಮಂಗಲ ರಸ್ತೆಯ ನವಯುಗ ಟೋಲ್‍ನಲ್ಲಿ ವಾಹನ ದಟ್ಟಣೆ ಶುರುವಾಗಿದೆ. ರಾತ್ರಿಯಿಂದ ನವಯುಗ ಟೋಲ್ ಹಣ ಸಂಗ್ರಹ ಮಾಡುತ್ತಿಲ್ಲ. ಲಾಕ್‍ಡೌನ್ ಹಿನ್ನೆಲೆ ವಾಹನ ಸವಾರರಿಂದ ಯಾವುದೇ ಸುಂಕ ಕಲೆಕ್ಟ್ ಮಾಡುತ್ತಿಲ್ಲ. ಇಂದು ರಾತ್ರಿ 8 ಗಂಟೆಯವರೆಗೆ ಹಣ ಸಂಗ್ರಹ ಮಾಡದಿರಲು ಆದೇಶ ಬಂದಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಹೀಗಾಗಿ ನಿರಂತರವಾಗಿ ವಾಹನಗಳ ಓಡಾಡುತ್ತಿವೆ. ಇಂದು ಸಹ ಸ್ವಂತ ವಾಹನಗಳಲ್ಲಿ ಜನರು ಊರು ಬಿಟ್ಟು ಹೋಗುತ್ತಿದ್ದಾರೆ. ಲಗೇಜ್ ಆಟೋ, ಬೈಕ್, ಕಾರ್‌ಗಳ ಮೂಲಕ ಊರಿಗೆ ಹೋಗುತ್ತಿದ್ದಾರೆ.

  • ಸಂಡೇ ಲಾಕ್‍ಡೌನ್‍ಗೆ ವರುಣನ ಸಪೋರ್ಟ್- ಬೆಳ್ಳಂಬೆಳಗ್ಗೆ ಹಲವೆಡೆ ಜಿಟಿಜಿಟಿ ಮಳೆ

    ಸಂಡೇ ಲಾಕ್‍ಡೌನ್‍ಗೆ ವರುಣನ ಸಪೋರ್ಟ್- ಬೆಳ್ಳಂಬೆಳಗ್ಗೆ ಹಲವೆಡೆ ಜಿಟಿಜಿಟಿ ಮಳೆ

    ಹಾಸನ: ಸಂಡೇ ಲಾಕ್‍ಡೌನ್ ಹಿನ್ನೆಲೆಯಲ್ಲಿ ಹಲವೆಡೆ ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ. ಈ ಮಧ್ಯೆ ಹಾಸನ ಮತ್ತು ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆ ಆರಂಭವಾಗಿದೆ.

    ಹಾಸನ ನಗರ ಸೇರಿದಂತೆ ಹಲವೆಡೆ ಬೆಳಗ್ಗೆಯಿಂದಲೇ ಸೋನೆ ಮಳೆ ಆರಂಭವಾಗಿದೆ. ಈ ಮೂಲಕ ಸಂಡೇ ಲಾಕ್‍ಡೌನ್‍ಗೆ ಹಾಸನದಲ್ಲಿ ಮಳೆ ಸಪೋರ್ಟ್ ನೀಡಿದಂತಾಗಿದೆ. ಬೆಳ್ಳಂಬೆಳಗ್ಗೆಯೇ ಜಿಟಿಜಿಟಿ ಮಳೆ ಆರಂಭವಾಗಿರುವುದರಿಂದ ಮನೆಯಿಂದ ಜನರು ಹೊರಬರುತ್ತಿಲ್ಲ. ಇನ್ನೂ ಅಗತ್ಯ ವಸ್ತುಕೊಳ್ಳಲು ಮನೆಯಿಂದ ಹೊರಬಂದವರು ಮಳೆಯಿಂದಾಗಿ ಅಂಗಡಿಗಳ ಬಳಿಯೇ ವಾಸ್ತವ್ಯ ಮಾಡುತ್ತಿದ್ದಾರೆ.

    ಕೆಲವರು ಮಳೆಯಿಂದಾಗಿ ನೀರು ಬೀಳದ ಜಾಗದಲ್ಲಿ ಆಶ್ರಯ ಪಡೆದಿದ್ದಾರೆ. ಇಂದು ಕರ್ಫ್ಯೂ ಜಾರಿಯಾಗಿರುವುದರಿಂದ ಬಹುತೇಕ ಹಾಸನದ ರಸ್ತೆಗಳು ಖಾಲಿ, ಖಾಲಿಯಾಗಿವೆ. ಆದರೂ ರಸ್ತೆಯಲ್ಲಿ ಅಲ್ಲೊಂದು ಇಲ್ಲೊಂದು ಕಾರು, ಆಟೋ, ಲಾರಿ ಓಡಾಡುತ್ತಿದೆ.

    ಇನ್ನೂ ಶಿವಮೊಗ್ಗದಲ್ಲಿ ಮುಂಜಾನೆಯೇ ಜಿಟಿಜಿಟಿ ಮಳೆ ಆರಂಭವಾಗಿದೆ. ಸಂಡೇ ಲಾಕ್‍ಡೌನ್ ಹಾಗೂ ಜಿಟಿಜಿಟಿ ಮಳೆ ಕಾರಣ ಮಲೆನಾಡಿನ ಜನರು ಮನೆಯಿಂದ ಹೊರಗೆ ಬರುತ್ತಿಲ್ಲ. ಈ ಮೂಲಕ ಸಂಡೇ ಲಾಕ್‍ಡೌನ್‍ಗೆ ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

  • ಯಾರೋ ಮೃತಪಟ್ಟಿರೋದಕ್ಕೂ, ಬೆಡ್ ಸಿಗದಿರುವುದಕ್ಕೂ ಸಂಬಂಧ ಇಲ್ಲ: ಸಿಎಂ

    ಯಾರೋ ಮೃತಪಟ್ಟಿರೋದಕ್ಕೂ, ಬೆಡ್ ಸಿಗದಿರುವುದಕ್ಕೂ ಸಂಬಂಧ ಇಲ್ಲ: ಸಿಎಂ

    ಬೆಂಗಳೂರು: ಇಂದು ಖಾಸಗಿ ಆಸ್ಪತ್ರೆಯವರು 750 ಬೆಡ್ ಕೊಡುತ್ತಿದ್ದಾರೆ. ಹೀಗಾಗಿ ಯಾರೋ ಮೃತಪಟ್ಟಿರುವುದಕ್ಕೂ ಬೆಡ್ ಸಿಗದೇ ಇರುವುದಕ್ಕೂ ಸಂಬಂಧ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

    ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಯಡಿಯೂರಪ್ಪ, ಸೋಮವಾರ ಖಾಸಗಿ ಆಸ್ಪತ್ರೆಗಳ ಜೊತೆ ಸಭೆ ಮಾಡಿದ್ದೇವೆ. ಹೀಗಾಗಿ ಖಾಸಗಿ ಆಸ್ಪತ್ರೆಯವರು 2 ಸಾವಿರ ಬೆಡ್‍ಗಳನ್ನು ಕೊಡಲು ಒಪ್ಪಿಕೊಂಡಿದ್ದಾರೆ. ಇಂದು 750 ಬೆಡ್‍ಗಳನ್ನು ಕೊಡುತ್ತಿದ್ದಾರೆ. ಯಾರೋ ಮೃತಪಟ್ಟಿರುವುದಕ್ಕೂ ಬೆಡ್ ಸಿಗದೇ ಇರುವುದಕ್ಕೂ ಸಂಬಂಧ ಇಲ್ಲ ಎಂದು ಗರಂ ಆದರು.

    ನಮ್ಮ ಶಕ್ತಿ ಮೀರಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇವೆ. ಇಡೀ ದೇಶದಲ್ಲಿ ಕೊರೊನಾ ನಿಯಂತ್ರಿಸಲು ಇಷ್ಟೊಂದು ಕ್ರಮವನ್ನು ಯಾರೂ ಕೈಗೊಂಡಿಲ್ಲ, ನಾವು ಮಾಡುತ್ತಿದ್ದೇವೆ. ಇನ್ನೂ ಮಾಡಬೇಕಾದ ಕೆಲಸಗಳು ಬೇಕಾದಷ್ಟಿದೆ. ಈಗಾಗಲೇ ಖಾಸಗಿ ಆಸ್ಪತ್ರೆಯವರು ಬೆಡ್ ಕೊಡಲು ಒಪ್ಪಿಕೊಂಡಿದ್ದಾರೆ. ಇಂದು 750 ಬೆಡ್ ಕೊಡುತ್ತಿದ್ದಾರೆ ಎಂದು ಸಿಎಂ ಹೇಳಿದರು.

    ಬೆಂಗಳೂರಿನ 52 ವರ್ಷದ ನಗರದ ಪೇಟೆ ನಿವಾಸಿಯೊಬ್ಬರು ಶನಿವಾರ ಸಂಜೆ ತೀವ್ರ ಜ್ವರ ಉಸಿರಾಟದಿಂದ ಬಳಲುತ್ತಿದ್ದರು. ನಗರದ ಪ್ರಮುಖ ಆಸ್ಪತ್ರೆ ಸೇರಿದಂತೆ 18 ಆಸ್ಪತ್ರೆಗಳಲ್ಲಿ ಅಡ್ಮಿಟ್ ಮಾಡಿಕೊಳ್ಳವಂತೆ ಮನವಿ ಮಾಡಿದ್ದರು. ಯಾವುದೇ ಆಸ್ಪತ್ರೆಯಲ್ಲೂ ಈ ವ್ಯಕ್ತಿಯನ್ನು ಆಡ್ಮಿಟ್ ಮಾಡಿಕೊಂಡಿಲ್ಲ. ಭಾನುವಾರ ಸಂಜೆ ಹೊತ್ತಿಗೆ ಮತ್ತೆ ತೀವ್ರ ಉಸಿರಾಟದ ಸಮಸ್ಯೆ ಆದ ನಂತರ ಕನ್ನಿಂಗ್ ಹ್ಯಾಮ್ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಹೋಗುವಷ್ಟರಲ್ಲಿ ವ್ಯಕ್ತಿ ಸಾವನ್ನಪ್ಪಿದ್ದರು.

  • ಜಿಂದಾಲ್ ಕಾರ್ಖಾನೆಯನ್ನ ಲಾಕ್ ಮಾಡದಿದ್ರೆ ದಂಗೆ- ಸರ್ಕಾರಕ್ಕೆ ಬಳ್ಳಾರಿ ಜನರ ವಾರ್ನಿಂಗ್

    ಜಿಂದಾಲ್ ಕಾರ್ಖಾನೆಯನ್ನ ಲಾಕ್ ಮಾಡದಿದ್ರೆ ದಂಗೆ- ಸರ್ಕಾರಕ್ಕೆ ಬಳ್ಳಾರಿ ಜನರ ವಾರ್ನಿಂಗ್

    ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಸದ್ಯ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 610 ತಲುಪಿದೆ. ಇದರಲ್ಲಿ ಮುಕ್ಕಾಲು ಭಾಗ ಜಿಂದಾಲ್ ಕಾರ್ಖಾನೆಯದ್ದೆ. ಹೀಗಾಗಿ ಜಿಂದಾಲ್ ಕಾರ್ಖಾನೆಯನ್ನು ಲಾಕ್‍ಡೌನ್ ಮಾಡಲು ಒತ್ತಾಯ ಹೆಚ್ಚಾಗಿ ಕೇಳಿ ಬರುತ್ತಿದೆ.

    ಕಳೆದ ಮೈತ್ರಿ ಸರ್ಕಾರದಲ್ಲಿ ಜಿಂದಾಲ್‍ಗೆ 3,600 ಎಕರೆ ಜಮೀನು ಪರಭಾರೆ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಇದೇ ವಿಚಾರಕ್ಕೆ ಈಗಿನ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ರಾಜೀನಾಮೆ ಸಹ ನೀಡಿದ್ದರು. ಆದರೆ ಈ ವರ್ಷ ಜಿಂದಾಲ್‍ನಲ್ಲಿ ಕೊರೊನಾ ಹೆಚ್ಚಾಗುತ್ತಿದ್ದರೂ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಕೊರೊನಾ ತಡೆ ನಿಯಮಗಳನ್ನ ಗಾಳಿಗೆ ತೂರಿರುವ ಜಿಂದಾಲ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಂದಾಲ್ ಮುಂದೆ ಧರಣಿ ಕೂರುವುದಾಗಿ ಹೋರಾಟಗಾರರು ಎಚ್ಚರಿಸಿದ್ದಾರೆ.

    ಬಳ್ಳಾರಿ ಕೂಡ ಬಹುದೊಡ್ಡ ಕೊರೊನಾ ಹಾಟ್‍ಸ್ಪಾಟ್ ಆಗುತ್ತಿದೆ. ಯಾಕಂದರೆ ಬಳ್ಳಾರಿ ಜಿಲ್ಲೆಯಲ್ಲಿ 610ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳಿವೆ. ಅದರಲ್ಲಿ ಜಿಂದಾಲ್‍ನಲ್ಲಿಯೇ 350ಕ್ಕೂ ಹೆಚ್ಚು ಸೋಂಕಿತರಿದ್ದಾರೆ. ಜಿಂದಾಲ್‍ನಲ್ಲಿ ಕೇವಲ 21 ದಿನಗಳಲ್ಲೇ 356ಕ್ಕೂ ಹೆಚ್ಚು ಪ್ರಕರಣ ಬಂದಿವೆ. ಅಷ್ಟೇ ಅಲ್ಲದೇ ಜಿಂದಾಲ್‍ನಲ್ಲಿ ಸೋಂಕು ಹರಡುವ ಪ್ರಮಾಣ ಶೇ. 15.70 ರಷ್ಟಿದೆ. ಹೀಗಿದ್ದರೂ ಸರ್ಕಾರ ನೀಡಿದ ಮಾರ್ಗಸೂಚಿಗಳನ್ನ ಜಿಂದಾಲ್ ಪಾಲಿಸುತ್ತಿಲ್ಲ ಎಂದು ಸ್ಥಳೀಯ ಹೋರಾಟಗಾರ ಹೇಳಿದರು.

    ಜೊತೆಗೆ ಜಿಂದಾಲ್ ಬಗ್ಗೆ ಮೃದು ಧೋರಣೆ ತಾಳಿರುವ ಉಸ್ತುವಾರಿ ಸಚಿವ ಅನಂದ್ ಸಿಂಗ್ ರಾಜಿನಾಮೆಗೆ ಸಹ ಒತ್ತಾಯಿಸಿದ್ದರು. ಅಲ್ಲದೇ ಕ್ಷಣಕ್ಷಣಕ್ಕೆ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಜಿಂದಾಲ್ ಕಾರ್ಖಾನೆಯಿಂದಾಗಿ ಇಡೀ ಬಳ್ಳಾರಿ ಜನ ಆತಂಕಗೊಂಡಿದ್ದಾರೆ. ಜಿಂದಾಲ್‍ಗೆ ಲಾಕ್‍ಡೌನ್ ಮಾದರಿಯ ನಿಯಮ ಹೇರಿ ಕಾರ್ಖಾನೆ ಒಳಗಿನಿಂದ ಯಾರು ಬರದಂತೆ ನೋಡಿಕೊಳ್ಳಲಾಗುವುದು ಅಂತ ಜಿಲ್ಲಾಡಳಿತ ಹೇಳಿತ್ತು. ಆದರೆ ಅದಕ್ಕೂ ಕ್ಯಾರೇ ಎನ್ನದ ಜಿಂದಾಲ್, ಒಳ, ಹೊರ ಹೋಗುವ ಪ್ರಕ್ರಿಯೆ ರಾಜಾರೋಶವಾಗಿಯೇ ನಡೆಯುತ್ತಿದೆ. ಈಗಲಾದರೂ ಸರ್ಕಾರ ಎಚ್ಚೆತ್ತು ಕ್ರಮ ಕೈಗೊಳ್ಳದಿದ್ದರೇ ನಾವೇ ಜಿಂದಾಲ್ ಮುಂದೇ ಧರಣಿ ನಡೆಸೋದಾಗಿ ಸ್ಥಳೀಯ ಹೋರಾಟಗಾರರು ಎಚ್ಚರಿಸಿದ್ದಾರೆ.

    ಜಿಂದಾಲ್ ಕಾರ್ಖಾನೆಯಲ್ಲಿ ಕೇವಲ 21 ದಿನಗಳಲ್ಲಿ 356ಕ್ಕೂ ಹೆಚ್ಚು ಕೊರೊನಾ ಪ್ರಕರಣ ಬಂದಿದ್ದರೂ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿರುವುದಕ್ಕೆ ಸ್ಥಳೀಯ ಹೋರಾಟಗಾರು ಸರ್ಕಾರಕ್ಕೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

  • ಮೋದಿ 500 ರೂ. ಖಾತೆಗೆ ಹಾಕಿದ್ದಾರೆಂದು 30 ಕಿ.ಮೀ ನಡೆದ ಮಹಿಳೆ- ಬರಿಗೈಲಿ ವಾಪಸ್

    ಮೋದಿ 500 ರೂ. ಖಾತೆಗೆ ಹಾಕಿದ್ದಾರೆಂದು 30 ಕಿ.ಮೀ ನಡೆದ ಮಹಿಳೆ- ಬರಿಗೈಲಿ ವಾಪಸ್

    – ಬಾಗಿದ ಬೆನ್ನುಮೂಳೆಯಿಂದ ಬಳಲುತ್ತಿರೋ ಮಹಿಳೆ
    – 15 ಗಂಟೆಯಲ್ಲಿ 60 ಕಿ.ಮೀ ನಡೆದ ಮಹಿಳೆ

    ಲಕ್ನೋ: 50 ವರ್ಷದ ಮಹಿಳೆ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿಯಲ್ಲಿ 500 ರೂಪಾಯಿ ಪಡೆದುಕೊಳ್ಳಲು ಬರೋಬ್ಬರಿ 30 ಕಿಲೋ ಮೀಟರ್ ದೂರದವರೆಗೂ ನಡೆದುಕೊಂಡು ಹೋಗಿದ್ದಾರೆ. ಆದರೆ ವಾಪಸ್ ಬರಿಗೈಯಲ್ಲಿ ಬಂದಿರುವಂತಹ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ರಾಧಾ ದೇವಿ ಉತ್ತರ ಪ್ರದೇಶದ ಆಗ್ರಾದಿಂದ ಫಿರೋಜಾಬಾದ್‍ಗೆ 30 ಕಿ.ಮೀ ನಡೆದುಕೊಂಡು ಹೋಗಿದ್ದಾರೆ. ರಾಧಾ ದೇವಿ ಈಗಾಗಲೇ ಬಾಗಿದ ಬೆನ್ನುಮೂಳೆಯಿಂದ ಬಳಲುತ್ತಿದ್ದಾರೆ. ಮೂಲತಃ ಫಿರೋಜಾಬಾದ್ ಜಿಲ್ಲೆಯ ಹಿಮ್ಮರ್ ಪುರ್ ಗ್ರಾಮದ ನಿವಾಸಿ. ಆದರೆ ಆಗ್ರಾದ ಶಂಭು ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದು, ಸುಮಾರು 20 ವರ್ಷದಿಂದ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

    ಈ ಏರಿಯಾದಲ್ಲಿ ಕಳೆದ ಎರಡು ದಿನಗಳಿಂದ ಪ್ರಧಾನಿ ಮೋದಿ ಬಡವರಿಗೆ 500 ರೂಪಾಯಿ ಹಣ ಹಾಕುತ್ತಾರೆ ಎಂದು ಹೇಳಲಾಗಿದೆ. ಇದನ್ನು ನಂಬಿದ ರಾಧಾ ದೇವಿ ಫಿರೋಜಾಬಾದ್‍ನಲ್ಲಿರುವ ಬ್ಯಾಂಕಿಗೆ ತನ್ನ 15 ವರ್ಷದ ಮಗನ ಜೊತೆಗೆ ನಡೆದುಕೊಂಡು ಹೋಗಿದ್ದಾರೆ. ಎಸ್‍ಬಿಐ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ರಾಧಾ ದೇವಿ ಅಲ್ಲಿನ ಸಿಬ್ಬಂದಿ ಬಳಿ 500 ರೂಪಾಯಿ ವಿತ್‍ಡ್ರಾ ಮಾಡುವ ಬಗ್ಗೆ ಕೇಳಿದ್ದಾರೆ. ಆದರೆ ರಾಧಾ ದೇವಿ ಬ್ಯಾಂಕ್ ಖಾತೆಯಲ್ಲಿ ಝೀರೋ ಬ್ಯಾಲೆನ್ಸ್ ತೋರಿಸುತ್ತಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಅಲ್ಲದೆ ನಿಮ್ಮ ಬ್ಯಾಂಕ್ ಖಾತೆ ಜನ್ ಧನ್ ಅಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಇದರಿಂದ ಬೇಸರಗೊಂಡ ರಾಧಾ ದೇವಿ ಮತ್ತೆ 30 ಕಿ.ಮೀ ನಡೆದುಕೊಂಡು ತನ್ನೂರಿಗೆ ಬರಿಗೈಲಿ ವಾಪಸ್ ಬಂದಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಯಾವುದೇ ವಾಹನಗಳ ಓಡಾಟ ಇಲ್ಲ, ಹೀಗಾಗಿ ಇವರಿಬ್ಬರು ಕಾಲ್ನಡಿಗೆಯಲ್ಲಿ ಒಟ್ಟು 60 ಕಿ.ಮೀ ನಡೆದಿದ್ದಾರೆ. ರಾಧಾ ದೇವಿ 15 ಗಂಟೆಯಲ್ಲಿ 60 ಕಿಲೋ ಮೀಟರ್ ನಡೆದಿದ್ದಾರೆ. ಕೆಲವು ಕಡೆಗಳಲ್ಲಿ ಕುಳಿತು ವಿಶ್ರಾಂತಿ ಪಡೆದುಕೊಂಡು ನಡೆದುಕೊಂಡು ಊರನ್ನು ತಲುಪಿದ್ದಾರೆ.

    ಈ ಬಗ್ಗೆ ಮಾತನಾಡಿದ ರಾಧಾ ದೇವಿ, ಪ್ರದಾನ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ಬಡವರ ಬ್ಯಾಂಕ್ ಖಾತೆಗೆ ತಲಾ 500 ರೂ. ಹಾಕಿದ್ದಾರೆ ಎಂದು ಹೇಳುತ್ತಿದ್ದರು. ಹೀಗಾಗಿ ನಾನು ಎಸ್‍ಬಿಐ ಬ್ಯಾಂಕ್‍ಗೆ ಹೋಗಲು ನಿರ್ಧರಿಸಿದೆ. ಆದರೆ ಲಾಕ್‍ಡೌನ್ ಕಾರಣ ನಾನು ನನ್ನ 15 ವರ್ಷದ ಮಗನೊಂದಿಗೆ ನಡೆದುಕೊಂಡು ಹೋಗಿದ್ದೆ. ಆದರೆ ನನ್ನ ಖಾತೆಯಲ್ಲಿ ಝೀರೋ ಬ್ಯಾಲೆನ್ಸ್ ಇರುವುದು ಗೊತ್ತಾಯಿತು. ಹೀಗಾಗಿ ವಾಪಸ್ ನಡೆದುಕೊಂಡು ಬಂದೆವು. ಜನ್ ಧನ್ ಖಾತೆಯ ಬಗ್ಗೆ ನನಗೆ ತಿಳಿದಿರಲಿಲ್ಲ. ನಾನು ಕಳೆದ ಎರಡು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಹೀಗಾಗಿ ಕೂಲಿ ಕೆಲಸ ಮಾಡುವುದನ್ನು ನಿಲ್ಲಿಸಿದ್ದೇನೆ. ನನ್ನ ಪತಿ ಮತ್ತು ಮಕ್ಕಳು ಕುಟುಂಬಕ್ಕಾಗಿ ದುಡಿಯುತ್ತಿದ್ದಾರೆ ಎಂದು ತಮ್ಮ ನೋವನ್ನು ಹೇಳಿಕೊಂಡರು.

    ಖಾತೆಯಲ್ಲಿ ಹಣ ಇಲ್ಲ ಎಂದು ತಿಳಿದು ರಾಧಾ ದೇವಿ ತುಂಬಾ ಬೇಸರ ಮಾಡಿಕೊಂಡಿದ್ದರು. ಆದರೆ ಮಾನವೀಯ ದೃಷ್ಟಿಯಿಂದ ನನ್ನ ಕೈಲಾದ ಸಹಾಯ ಮಾಡಿದೆ. ಅವರು ವಾಪಸ್ ನಡೆದುಕೊಂಡು ಆಗ್ರಾಗೆ ಹೋಗಿದ್ದಾರೆ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ.