ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ 4 ರನ್ ಸೋಲು ಪಡೆಯಿತು. ಈ ಮೂಲಕ ಸರಣಿಯನ್ನು 2-1 ಅಂತರದಲ್ಲಿ ಸೋಲುಂಡಿತು. ಅಲ್ಲದೇ ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಟಿ20 ಸರಣಿಯನ್ನು ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತು.
213 ರನ್ ಗಳಿಸಿದ ಟೀಂ ಇಂಡಿಯಾ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 208 ರನ್ ಗಳಿಸಲಷ್ಟೇ ಶಕ್ತವಾಯಿತು. ಏಕದಿನ ಸರಣಿ ಸೋಲಿನ ಸೇಡು ತಿರಿಸಿಕೊಂಡ ಕಿವೀಸ್ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿತು.
ಕಿವೀಸ್ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ ಟೀಂ ಇಂಡಿಯಾಗೆ ಮೊದಲ ಓವರಿನಲ್ಲೇ ಧವನ್ ವಿಕೆಟ್ ಪಡೆಯುವ ಮೂಲಕ ಮಿಚೆಲ್ ಅಘಾತ ನೀಡಿದರು. ಆದರೆ ನಾಯಕ ರೋಹಿತ್ ಶರ್ಮಾರನ್ನು ಕೂಡಿಕೊಂಡ ಯುವ ಆಟಗಾರ ವಿಜಯ್ ಶಂಕರ್ ಬಿರುಸಿನ ಆಟವಾಡಿ ತಂಡದ ರನ್ ಗಳಿಕೆಗೆ ವೇಗ ತುಂಬಿದರು. ಇತ್ತ ರೋಹಿತ್ ರಕ್ಷಣಾತ್ಮಕ ಆಟವಾಡಿ ವಿಕೆಟ್ ಕಾಯ್ದುಕೊಂಡರು. ಈ ಜೋಡಿ 2ನೇ ವಿಕೆಟ್‍ಗೆ 75 ರನ್ ಗಳ ಜೊತೆಯಾಟ ನೀಡಿತು. ಆದರೆ 28 ಎಸೆತಗಳಲ್ಲಿ 43 ರನ್ ಗಳಿಸಿದ್ದ ಶಂಕರ್ ಭಾರೀ ಹೊಡೆತಕ್ಕೆ ಕೈ ಹಾಕಿ ಔಟಾಗುವ ಮೂಲಕ ಅರ್ಧ ಶತಕ ವಂಚಿತರಾದರು.
ಈ ಹಂತದಲ್ಲಿ ಕಣಕ್ಕೆ ಇಳಿದ ಪಂತ್ ಸ್ಫೋಟಕ ಆಟ ಪ್ರದರ್ಶಿಸಿದರು. ಕೇವಲ 12 ಎಸೆತಗಳಲ್ಲಿ 28 ರನ್ ಗಳಿಸಿದ ಪಂತ್ ರನ್ನು ಸ್ಕಾಟ್ ಕುಗೆಲಿಜಿನ್ ಪೆವಿಲಿಯನ್ ಗಟ್ಟಿದರು. ಈ ವೇಳೆಗೆ ಪಂತ್ 1 ಬೌಂಡರಿ ಹಾಗೂ ಭರ್ಜರಿ 3 ಸಿಕ್ಸರ್ ಸಿಡಿಸಿದ್ದರು. 9.2 ಓವರ ಗಳಲ್ಲೇ ಟೀಂ ಇಂಡಿಯಾ 100 ರನ್ ಗಡಿದಾಟಿತ್ತು.
ಇದರ ಬೆನ್ನಲ್ಲೇ 38 ರನ್ ಗಳಿಸಿದ್ದ ರೋಹಿತ್ ಕೂಡ ಔಟಾದರು. ಬಳಿಕ ಬಂದ ಹಾರ್ದಿಕ್ ಪಾಂಡ್ಯ ಕೂಡ ಬಿರುಸಿನ ಆಟಕ್ಕೆ ಮುಂದಾದರು. ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದ ಹಾರ್ದಿಕ್ ಗೆಲುವಿನ ಆಸೆ ಚಿಗುರುವಂತೆ ಮಾಡಿದರು. ಆದರೆ ಭಾರೀ ಹೊಡೆತಕ್ಕೆ ಕೈ ಹಾಕಿದ್ದ ವೇಳೆ ಬ್ಯಾಟ್ ಕೈಯಿಂದ ಜಾರಿದ ಪರಿಣಾಮ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಹಾರ್ದಿಕ್ 11 ಎಸೆತಗಳಲ್ಲಿ 2 ಸಿಕ್ಸರ್ 1 ಬೌಂಡರಿ ಸಿಡಿಸಿ 21 ರನ್ ಗಳಿಸಿದರು. ಬಳಿಕ ಬಂದ ಧೋನಿ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದರು ಕೂಡ ಕೇವಲ 2 ರನ್ ಗಳಿಸಿ ಔಟಾದರು.
ದಿನೇಶ್ ಹೋರಾಟ ವ್ಯರ್ಥ: ಅಂತಿಮ 25 ಎಸೆತಗಳಲ್ಲಿ ಟೀಂ ಇಂಡಿಯಾಗೆ ಗೆಲ್ಲಲ್ಲು 60 ಗಳಿಸುವ ಒತ್ತಡ ಸಮಯದಲ್ಲಿ ಕ್ರಿಸ್ ಎಂಟ್ರಿ ಕೊಟ್ಟ ದಿನೇಶ್ ಕಾರ್ತಿಕ್ ಮತ್ತೆ ತಮ್ಮ ಹಿಂದಿನ ಆಟವನ್ನು ನೆನಪು ಮಾಡುವಂತೆ ಮಾಡಿದರು. ಅಲ್ಲದೇ ಕಾರ್ತಿಕ್ ಗೆ ಕೃಣಾಲ್ ಪಾಂಡ್ಯ ಕೂಡ ಸಾಥ್ ನೀಡಿ ತಂಡ ಗೆಲುವಿನ ಸನಿಹ ಆಗಮಿಸಲು ಕಾರಣರಾದರು. ಆದರೆ ಅಂತಿಮವಾಗಿ ಕಾರ್ತಿಕ್ 16 ಎಸೆತಗಳಲ್ಲಿ 4 ಸಿಕ್ಸರ್ ಸಮೇತ 33 ರನ್ ಹಾಗೂ 13 ಎಸೆತಗಳಲ್ಲಿ ಕೃಣಾಲ್ ಪಾಂಡ್ಯ 2 ಸಿಕ್ಸರ್ ಸಿಡಿಸಿ 26 ರನ್ ಗಳಿಸಿದರು.

ಅಂತಿಮ 25 ಎಸೆತ: 17ನೇ ಓವರಿನಲ್ಲಿ ಸಿಕ್ಸರ್ ಸಮೇತ 11 ರನ್, 18ನೇ ಓವರಿನಲ್ಲಿ 2 ಬೌಂಡರಿ, 1 ಸಿಕ್ಸರ್ ಸಮೇತ 18 ರನ್ ಬಂತು. ಅಂತಿಮ 12 ಎಸೆತಗಳಲ್ಲಿ ಟೀಂ ಇಂಡಿಯಾಗೆ 30 ರನ್ ಗಳ ಅಗತ್ಯವಿತ್ತು. ಸ್ಕಾಟ್ ಕುಗೆಲಿಜಿನ್ ಈ ಹಂತದಲ್ಲಿ ಬಿಗಿ ಬೌಲಿಂಗ್ ದಾಳಿ ನಡೆಸಿದರೂ ಕೂಡ 2 ಸಿಕ್ಸರ್ ಸಮೇತ 14 ರನ್ ಹರಿದು ಬಂತು. ಆದರೆ ಅಂತಿಮ ಓವರ್ ನಲ್ಲಿ 10 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಮೂಲಕ ನಿಗದಿತ 20 ಓವರ್ ಗಳಲ್ಲಿ 208 ರನ್ ಗಳಿಸಿ ಟೀಂ ಇಂಡಿಯಾ 4 ರನ್ ಗಳ ಸೋಲುಂಡಿತು.
ಕಿವೀಸ್ ಪರ ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡದ ಮನ್ರೋ (72 ರನ್, 40 ಎಸೆತ) ಹಾಗೂ ಸಿಫಿರ್ಟ್ (43 ರನ್, 25 ಎಸೆತ) ಬಿರುಸಿನ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 212 ರನ್‍ಗಳ ಸವಾಲಿನ ಮೊತ್ತ ಗಳಿಸಿತ್ತು. ಕಿವೀಸ್ ಪರ ಭರ್ಜರಿ ಆರಂಭ ನೀಡಿದ ಸಿಫರ್ಟ್, ಮನ್ರೋ ಜೋಡಿ ಮೊದಲ ವಿಕೆಟ್‍ಗೆ 80 ರನ್ ಗಳ ಜೊತೆಯಾಟ ನೀಡಿತು. ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ 26 ರನ್ ನೀಡಿ 2 ವಿಕೆಟ್ ಪಡೆದರೆ, ಖಲೀಲ್ ಅಹ್ಮದ್, ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv