Tag: ಪಬ್ಲಿಕ್ ಹೀರೋ

  • ಅಂದು ಗುತ್ತಿಗೆದಾರ, ಇಂದು ಪ್ರಗತಿಪರ ರೈತ- ಕಲಘಟಗಿಯ ಶಶಿಧರ್ ಗೊರವರ ಪಬ್ಲಿಕ್ ಹೀರೋ

    ಅಂದು ಗುತ್ತಿಗೆದಾರ, ಇಂದು ಪ್ರಗತಿಪರ ರೈತ- ಕಲಘಟಗಿಯ ಶಶಿಧರ್ ಗೊರವರ ಪಬ್ಲಿಕ್ ಹೀರೋ

    – ರಾಜ್ಯದಲ್ಲಿ ಮೊದ್ಲ ಬಾರಿಗೆ ಸ್ಟ್ರಾಬೆರಿ ಹಣ್ಣು ಬೆಳೆದ ರೈತ

    ಹುಬ್ಬಳ್ಳಿ: ಅವರು ಅಂದು ಗುತ್ತಿಗೆದಾರ, ಆದರೆ ಇಂದು ಪ್ರಗತಿಪರ ರೈತ. ರಾಜ್ಯದಲ್ಲಿ ಯಾವ ರೈತರೂ ಬೆಳೆಯದ ಸ್ಟ್ರಾಬೆರಿ ಬೆಳೆ ಬೆಳೆದು ಯಶಸ್ಸು ಗಳಿಸೋ ಮೂಲಕ ಲಕ್ಷ ಲಕ್ಷ ರೂಪಾಯಿ ಲಾಭ ಗಳಿಸುತ್ತಿರೋ ಮೂಲಕ ಶಶಿಧರ ಅವರು ಇದೀಗ ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

    ಸ್ಟ್ರಾಬೆರಿ ಹಣ್ಣುಗಳನ್ನು ನೋಡಿದ್ರೆ ಬಾಯಲ್ಲಿ ನೀರೂರುತ್ತೆ. ಚಿಲಿ ಮೂಲದ ಈ ಹಣ್ಣನ್ನು ಭಾರತದಲ್ಲಿ ಮಹಾರಾಷ್ಟ್ರದ ಮಹಾಬಳೇಶ್ವರದಲ್ಲಿ ಮಾತ್ರ ಬೆಳೆಯಲಾಗುತ್ತಿತ್ತು. ಇದೀಗ ರಾಜ್ಯದಲ್ಲಿ ಮೊದಲ ಬಾರಿಗೆ ಧಾರವಾಡ ಜಿಲ್ಲೆಯಲ್ಲಿ ಸ್ಟ್ರಾಬೆರಿ ಹಣ್ಣನ್ನು ಬೆಳೆಯಲಾಗ್ತಿದೆ. ಮೊದಲು ಗುತ್ತಿಗೆದಾರರಾಗಿದ್ದ ಶಶಿಧರ್ ಗೊರವರ್ ಈಗ ಆ ಕೆಲಸಕ್ಕೆ ಗುಡ್‍ಬೈ ಹೇಳಿ, ಕಲಘಟಗಿ ತಾಲೂಕಿನ ಹುಲ್ಲಂಬಿಯಲ್ಲಿ ಸ್ಟ್ರಾಬೆರಿ ಬೆಳೆದು ಲಾಭ ನೋಡ್ತಿದ್ದಾರೆ.

    ಮೂಲತ ಹಾವೇರಿಯ ಮೋಟೆಬೆನ್ನೂರಿನ ಶಶಿಧರ್, 20 ವರ್ಷದ ಹಿಂದೆ ಉದ್ಯೋಗ ಅರಸಿ ಮಹಾರಾಷ್ಟ್ರದ ಮಹಾಬಳೇಶ್ವರಕ್ಕೆ ಹೋಗಿದ್ದರು. ಅಲ್ಲಿಯೇ 20 ವರ್ಷ ಕೆಲಸ ಮಾಡಿ ಕ್ಲಾಸ್ ಒನ್ ಕಂಟ್ರಾಕ್ಟರ್ ಆಗಿದ್ದರು. ನಂತರ ಕೃಷಿಯತ್ತ ಮನಸ್ಸು ಮಾಡಿದ ಶಶಿಧರ್, ಮಹಾಬಳೇಶ್ವರದಲ್ಲೇ ಒಂದು ಎಕರೆ ಜಮೀನು ಗುತ್ತಿಗೆ ಪಡೆದು ಸ್ಟ್ರಾಬೆರಿ ಬೆಳೆದು ಸಕ್ಸಸ್ ಆಗಿದ್ದರು. ಇದೀಗ ಹುಲ್ಲಂಬಿಯಲ್ಲಿ 6 ಎಕರೆ ಜಮೀನು ಖರೀದಿಸಿರೋ ಶಶಿಧರ್ 1 ಎಕರೆಯಲ್ಲಿ ಸ್ಟ್ರಾಬೆರಿ ಬೆಳೆದಿದ್ದಾರೆ.

    ಕ್ಯಾಲಿಫೋರ್ನಿಯಾದಿಂದ 45 ರೂ.ಗೆ ಒಂದರಂತೆ 700 ಸ್ಟ್ರಾಬೆರಿ ಸಸಿ ತರಿಸಿ ನರ್ಸರಿ ಮೂಲಕ 35 ಸಾವಿರ ಸಸಿ ಮಾಡಿದ್ರು. ಆದರೆ ಕಳೆದ ವರ್ಷ ಉಂಟಾದ ಮಹಾ ಪ್ರವಾಹಕ್ಕೆ 10 ಸಾವಿರ ಸಸಿ ಹಾಳಾಗಿದ್ದವು. ಉಳಿದ 25 ಸಾವಿರ ಸಸಿಗಳನ್ನು 1 ಎಕರೆಯಲ್ಲಿ ನಾಟಿ ಮಾಡಿದರು. ಅದೀಗ ಫಲ ಕೊಡುತ್ತಿದೆ. ನಿತ್ಯ 150ರಿಂದ 250 ಕೆಜಿವರೆಗೂ ಹಣ್ಣು ಬೆಳೆಯುತ್ತಿದ್ದಾರೆ. ಕೆಜಿ ಹಣ್ಣು 150 ರೂ.ವರೆಗೂ ಬಿಕರಿ ಆಗ್ತಿದೆ. ನಿತ್ಯ ನೂರಾರು ರೈತರು ಶಶಿಧರ್ ಹೊಲಕ್ಕೆ ಬಂದು ಮಾಹಿತಿ ಪಡೆಯುತ್ತಾರೆ.

    ಶಶಿಧರ್ ಹೊಲದಲ್ಲಿ ನಿತ್ಯ 20ಕ್ಕೂ ಹೆಚ್ಚು ಮಂದಿ ಕೆಲಸ ಮಾಡ್ತಿದ್ದಾರೆ. ಮುಂದೆ ಜಾಮ್ ಫ್ಯಾಕ್ಟರಿ ಆರಂಭಿ ಇನ್ನಷ್ಟು ಮಂದಿಗೆ ಕೆಲಸ ಕಲ್ಪಿಸಲು ಚಿಂತನೆ ನಡೆಸಿದ್ದಾರೆ.

  • ಇಂಗ್ಲಿಷ್ ಬಾರದೇ ಪಿಯುಸಿಲಿ ಫೇಲ್- ಈಗ ಬೇರೆಯವ್ರಿಗೆ ಆಂಗ್ಲ ಹೇಳಿಕೊಡೋವಷ್ಟು ಬೆಳೆದ್ರು ಉಪ್ಪಾರಹಳ್ಳಿಯ ರಮೇಶ್

    ಇಂಗ್ಲಿಷ್ ಬಾರದೇ ಪಿಯುಸಿಲಿ ಫೇಲ್- ಈಗ ಬೇರೆಯವ್ರಿಗೆ ಆಂಗ್ಲ ಹೇಳಿಕೊಡೋವಷ್ಟು ಬೆಳೆದ್ರು ಉಪ್ಪಾರಹಳ್ಳಿಯ ರಮೇಶ್

    ಕೋಲಾರ: ಆತ ಪಿಯುಸಿಯಲ್ಲಿ ಇಂಗ್ಲಿಷ್‍ನಲ್ಲಿ ಫೈಲ್ ಆಗಿ ಎಲ್ಲಾ ರೀತಿಯ ಕೂಲಿ ಕೆಲಸ ಮಾಡಿ ಅಲ್ಲದೆ ಸಾಕಷ್ಟು ಅವಮಾನ ಸಹಿಸಲಾಗದೆ, ಜೀವನ ಬೇಸರಗೊಂಡ ಕೆಲಸದಿಂದ ಹೊರ ಬಂದಿದ್ದನು. ಬಳಿಕ ಮತ್ತೆ ಇಂಗ್ಲಿಷ್ ಕಲಿತು ತನ್ನ ಗುರುಗಳಿಗೆ ಇಂಗ್ಲಿಷ್ ಹೇಳಿಕೊಡುವ ಇಂಗ್ಲಿಷ್ ಪರ್ಸನ್ ಆಗಿದ್ದಾನೆ. ಇದೀಗ ಅಧಿಕಾರಿಗಳು ಸೇರಿದಂತೆ ಗಣ್ಯರಿಗೆ ಇಂಗ್ಲಿಷ್ ಕಲಿಸುತ್ತಿರುವ ಇಂಗ್ಲೀಷ್ ಸೋರ್ಸ್ ಪರ್ಸನ್ ಕೋಲಾರ ಜಿಲ್ಲೆಯ ರಮೇಶ್.

    ಹೌದು. 2012ರಲ್ಲಿ ಇಂಗ್ಲಿಷ್ ಬಾರದೇ ಪಿಯುಸಿ ಫೇಲ್ ಆಗಿದ್ದರು. ಕೂಲಿ ನಾಲಿ ಮಾಡಿ, ಜೀವನದಲ್ಲಿ ಬೇಸರಗೊಂಡರು. ಇಂಗ್ಲಿಷ್ ಕಲಿಯಲೇಬೇಕೆಂಬ ಹಠ ಹುಟ್ಟುತ್ತೆ. ಸಿಕ್ಕ ಸಿಕ್ಕ ಇಂಗ್ಲಿಷ್ ಪುಸ್ತಕ ಓದಲು ಶುರು ಮಾಡ್ತಾರೆ. ಮರದ ಜೊತೆ ಇಂಗ್ಲಿಷ್‍ನಲ್ಲಿ ಮಾತನಾಡಲು ತೊಡಗ್ತಾರೆ. ಬಸ್ಸಲ್ಲಿ, ಊರಲ್ಲಿ ಹೀಗೆ ಎಲ್ಲಾ ಕಡೆ ಇಂಗ್ಲಿಷ್‍ನಲ್ಲಿ ಮಾತನಾಡೋಕೆ ಶುರು ಮಾಡ್ತಾರೆ. ಜನ ಹುಚ್ಚ ಅಂತಾರೆ. ಕನ್ನಡ ಮಾತಾಡು ಅಂತ ಬೆದರಿಸ್ತಾರೆ. ಆದರೆ ರಮೇಶ್ ಮಾತ್ರ ಇದನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ.

    ಹೀಗೆ ಹಠ ಹಿಡಿದು ಇಂಗ್ಲಿಷ್ ಕಲಿತ ರಮೇಶ್, ಪಿಯುಸಿ ಪಾಸ್ ಮಾಡಿಕೊಳ್ತಾರೆ. ಡಿಗ್ರಿಯಲ್ಲಿ 98 ಪರ್ಸೆಂಟ್ ಮಾಕ್ರ್ಸ್ ಗಳಿಸ್ತಾರೆ. ಇಂದು ಇಂಗ್ಲಿಷನ್ನು 14 ದೇಶಗಳ ಶೈಲಿಯಲ್ಲಿ ನಿರರ್ಗಳವಾಗಿ ಮಾತಾಡುತ್ತಾರೆ. ಮಲೇಷಿಯಾ, ಸಿಂಗಾಪುರದಲ್ಲಿ 6 ತಿಂಗಳ ಕಾಲ ಟೂರಿಸ್ಟ್ ಗೈಡ್ ಆಗಿದ್ದ ರಮೇಶ್, ನಂತ್ರ ಊರಿಗೆ ಬಂದು ಸರ್ಕಾರಿ ಶಾಲಾ ಕಾಲೇಜುಗಳಿಗೆ ರಿಸೋರ್ಸ್ ಪರ್ಸನ್ ಆಗಿದ್ದಾರೆ. ತನಗೆ ಇಂಗ್ಲಿಷ್ ಹೇಳಿಕೊಟ್ಟ ಶಿಕ್ಷಕರಿಗೆ ಇಂದು ಇಂಗ್ಲಿಷ್ ಹೇಳಿಕೊಡ್ತಿದ್ದಾರೆ.

    ಅಷ್ಟೇ ಅಲ್ಲ, ಡ್ಯಾಫೋಡಿಲ್ಸ್ ಸ್ಪೋಕನ್ ಇಂಗ್ಲಿಷ್ ಸಂಸ್ಥೆ ಆರಂಭಿಸಿರೋ ರಮೇಶ್, ವಿದ್ಯಾರ್ಥಿಗಳು, ಉನ್ನತ ಅಧಿಕಾರಿಗಳು, ಶಿಕ್ಷಕರು, ಉಪನ್ಯಾಸಕರು, ಜನಪ್ರತಿನಿಧಿಗಳಿಗೆ 3 ತಿಂಗಳಲ್ಲಿ ಇಂಗ್ಲಿಷ್ ಹೇಳಿಕೊಡುವ ಕೆಲಸ ಮಾಡ್ತಿದ್ದಾರೆ. ವಾಯ್ಸ್ ಮಾಡ್ಯುಲೇಷನ್ ಹೇಳಿಕೊಡ್ತಾರೆ.

    ಒಟ್ಟಿನಲ್ಲಿ ಮನಸ್ಸಿದ್ದರೆ ಮಾರ್ಗ ಎಂಬುದನ್ನು ರಮೇಶ್ ಮತ್ತೊಮ್ಮೆ ನಿರೂಪಿಸಿದ್ದಾರೆ. ರಮೇಶ್‍ಗೆ ಈಗ ಭಾಷೆಯೇ ಬಂಡವಾಳವಾಗಿದೆ.

  • ಕೇಸಿಂಗ್ ಪೈಪ್‍ನಲ್ಲಿ ಹಸುಗಳಿಗೆ ಕುಡಿಯೋವಷ್ಟು ಜಲ- ನೀರು ಪೋಲು ತಪ್ಪಿಸಲು ಆಟೋ ಡ್ರಿಂಕಿಂಗ್ ವ್ಯವಸ್ಥೆ

    ಕೇಸಿಂಗ್ ಪೈಪ್‍ನಲ್ಲಿ ಹಸುಗಳಿಗೆ ಕುಡಿಯೋವಷ್ಟು ಜಲ- ನೀರು ಪೋಲು ತಪ್ಪಿಸಲು ಆಟೋ ಡ್ರಿಂಕಿಂಗ್ ವ್ಯವಸ್ಥೆ

    – ದಾವಣಗೆರೆಯ ರೈತ ದ್ಯಾಮಪ್ಪ ಪಬ್ಲಿಕ್ ಹೀರೋ

    ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ ಮಾಡೋದು ಸುಲಭ ಅಲ್ಲ. ನೀರು, ಸೊಪ್ಪು ಹೀಗೆ ಹಲವು ಸಮಸ್ಯೆ ಎದುರಾಗುತ್ತವೆ. ಆದರೆ ಹೈನುಗಾರಿಕೆಯಲ್ಲಿ ತೊಡಗಿರುವ ದಾವಣಗೆರೆಯ ರೈತರೊಬ್ಬರು ತಂತ್ರಜ್ಞಾನ ಅಳವಡಿಸಿಕೊಂಡು, ಹಸುಗಳಿಗೆ ನೀರಿನ ಸಮಸ್ಯೆ ನೀಗಿಸುವ ಮೂಲಕ ಇದೀಗ ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

    ದಾವಣಗೆರೆಯ ಹಾಲುವರ್ತಿ ಗ್ರಾಮದ ರೈತ ದ್ಯಾಮಪ್ಪ, ಈ ಭಾಗದಲ್ಲಿ ಹೈಟೆಕ್ ಹೈನುಗಾರಿಕೆ ಮಾಡೋರು ಎಂದೇ ಹೆಸರು ಪಡೆದಿದ್ದಾರೆ. ಹನಿ ನೀರು ಸಹ ವೇಸ್ಟ್ ಆಗಬಾರದು ಎಂಬ ಕಾರಣಕ್ಕೆ ಹೈನುಗಾರಿಕೆಯಲ್ಲಿ ಹೈಟೆಕ್ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಹಸುಗಳ ಶೆಡ್‍ನಲ್ಲಿ ಆಟೋ ಡ್ರಿಂಕಿಂಗ್ ವ್ಯವಸ್ಥೆ ಮಾಡಿದ್ದಾರೆ. ಶೆಡ್ ಮೇಲೆ ದೊಡ್ಡ ಟ್ಯಾಂಕ್ ಇದ್ದು, ಅಲ್ಲಿಂದ ಒಂದು ಅಡಿ ಉದ್ದ, ಒಂದು ಅಡಿ ಅಗಲದ ನೀರಿನ ಟ್ಯಾಂಕ್‍ಗೆ ನೀರು ಹರಿಸಲಾಗುತ್ತದೆ. ಅಲ್ಲಿಂದ ಫುಟ್ ವಾಲ್ವ್ ಬಳಸಿ ಕೇಸಿಂಗ್ ಪೈಪ್‍ಗಳಿಗೆ ನೀರು ತುಂಬಿಸಲಾಗುತ್ತದೆ. ಹಸುವೊಂದು ಎಷ್ಟು ನೀರು ಕುಡಿದು ಖಾಲಿ ಮಾಡುತ್ತದೆಯೋ ಅಷ್ಟೂ ಮತ್ತೆ ಸಂಗ್ರಹವಾಗುತ್ತೆ.

    ಬರದ ನಾಡಾಗಿದ್ರೂ ದ್ಯಾಮಪ್ಪನ ತೋಟದಲ್ಲಿ ನೀರಿಗೆ ಬರ ಇಲ್ಲ. 10 ಗಂಟೆ ಜಾಗದಲ್ಲಿ ಹೊಂಡ ನಿರ್ಮಿಸಿ, ಮಳೆ ನೀರನ್ನು ಸಂಗ್ರಹಿಸುವ ದ್ಯಾಮಪ್ಪ ತಮ್ಮ 11 ಎಕರೆ ತೋಟಕ್ಕೆ ನೀರಿನ ಬರ ಇಲ್ಲದಂತೆ ನೋಡಿಕೊಂಡಿದ್ದಾರೆ. ಫಾರಂನಲ್ಲಿರುವ 20ಕ್ಕೂ ಹೆಚ್ಚು ಹಸುಗಳಿಗೂ ನೀರಿನ ಸಮಸ್ಯೆ ಇಲ್ಲದಂತೆ ಮಾಡಿದ್ದಾರೆ.

    ತಂತ್ರಜ್ಞಾನ ಬಳಸಿಕೊಂಡು ಒಂದು ಕಡೆ ಹಸುಗಳು, ಮತ್ತೊಂದು ಕಡೆ ತೋಟವನ್ನು ಹಸಿರಾಗಿಟ್ಟ ದ್ಯಾಮಪ್ಪ ಇತರ ರೈತರಿಗೆ ಮಾದರಿಯಾಗಿದ್ದಾರೆ.

  • ಇಳಿವಯಸ್ಸಿನಲ್ಲಿ ನೊಂದು ಬಂದವರಿಗೆ ಬೆಳಕಾದ್ರು ಸೋಮವಾರಪೇಟೆಯ ರಮೇಶ್

    ಇಳಿವಯಸ್ಸಿನಲ್ಲಿ ನೊಂದು ಬಂದವರಿಗೆ ಬೆಳಕಾದ್ರು ಸೋಮವಾರಪೇಟೆಯ ರಮೇಶ್

    – ಹೋಟೆಲ್, ಬೇಕರಿ ವ್ಯವಹಾರ ಸಂಪೂರ್ಣ ನಿಲ್ಲಿಸಿದ್ರು

    ಮಡಿಕೇರಿ: ಮಾನವನ ಕೊನೆಘಟ್ಟ ವೃದ್ಧಾಪ್ಯ. ಈ ಹಂತದಲ್ಲಿ ತಮ್ಮ ಮಕ್ಕಳು ಮೊಮ್ಮಕ್ಕಳೊಂದಿಗೆ ನೆಮ್ಮದಿಯಿಂದ ಕಾಲ ಕಳೆಯಬೇಕೆಂದು ಎಲ್ಲಾ ಹೆತ್ತವರು ಆಸೆ ಪಡುತ್ತಾರೆ. ಆದರೆ ಎಲ್ಲರಿಗೂ ಈ ಭಾಗ್ಯ ಸಿಗಲ್ಲ. ಅಂತಹ ಅನಾಥ ವೃದ್ಧರಿಗೆ ಇಲ್ಲೊಬ್ಬರು ಬೆಳಕಾಗುವ ಮೂಲಕ ಇದೀಗ ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

    ಅನಾಥ ವೃದ್ಧರಿಗೆ, ಮಕ್ಕಳಿಂದ ಕಡೆಗಣಿಸಲ್ಪಟ್ಟು ಇಳಿವಯಸ್ಸಲ್ಲಿ ಒಂದೊತ್ತು ಊಟಕ್ಕೂ ಪರದಾಡುತ್ತಿದ್ದ 25ಕ್ಕೂ ಹೆಚ್ಚು ವೃದ್ಧರಿಗೆ ಕೊಡಗು ಜಿಲ್ಲೆ ಸೋಮವಾರಪೇಟೆಯ ಗದ್ದೆಹಳ್ಳದ ರಮೇಶ್ ಆಶ್ರಯ ನೀಡಿದ್ದಾರೆ. ‘ವಿಕಾಸ್ ಜನಸೇವಾ ಟ್ರಸ್ಟ್’ ಹೆಸರಿನಲ್ಲಿ ಅನಾಥ ವಯೋವೃದ್ಧರನ್ನು ಆರೈಕೆ ಮಾಡಲಾಗುತ್ತಿದೆ.

    ಬೇಕರಿ, ಹೊಟೇಲ್ ಹೊಂದಿದ್ದ ರಮೇಶ್, ಆರು ವರ್ಷದ ಹಿಂದೆ ಬೆಂಗಳೂರಿನ ವಿಕಲಚೇತನರ ಶಾಲೆಗೆ ಭೇಟಿ ಕೊಟ್ಟಿದ್ದರು. ಅಲ್ಲಿ ದೃಷ್ಟಿ ದೋಷವಿದ್ದವರು ಶಾಲೆ ನಡೆಸುತ್ತಿದ್ದರು. ಇದನ್ನು ನೋಡಿ, ಚೆನ್ನಾಗಿರುವ ನಾವ್ಯಾಕೆ ಇಂತಹ ಸೇವೆ ಮಾಡಬಾರದು ಎಂದೆನಿಸಿ, ಎಲ್ಲಾ ವ್ಯಾಪಾರ ನಿಲ್ಲಿಸಿ 5 ವರ್ಷಗಳ ಹಿಂದೆ ಮಡಿಕೇರಿಯಲ್ಲಿ ಅನಾಥಾಶ್ರಮ ಆರಂಭಿಸಿದರು. ಆದರೆ ನಿರ್ವಹಣೆ ವೆಚ್ಚ ಅಧಿಕ ಎಂಬ ಕಾರಣಕ್ಕೆ ಒಂದು ವರ್ಷದ ಹಿಂದೆ ಇದನ್ನು ಸುಂಟಿಕೊಪ್ಪದ ಗದ್ದೆಹಳ್ಳಕ್ಕೆ ಶಿಫ್ಟ್ ಮಾಡಿದರು. ರಮೇಶ್ ಕುಟುಂಬ ಕೂಡ ಆಶ್ರಮದಲ್ಲೇ ವಾಸ್ತವ್ಯ ಹೂಡಿದೆ.

    150ಕ್ಕೂ ಹೆಚ್ಚು ವೃದ್ಧರ ಮಕ್ಕಳೊಂದಿಗೆ ಕೌನ್ಸೆಲಿಂಗ್ ನಡೆಸಿ ಅವರನ್ನು ಒಂದು ಮಾಡಿದ್ದಾರೆ. ಸ್ಥಳೀಯರು, ದಾನಿಗಳ ನೆರವಿನಿಂದ ಇದನ್ನು ರಮೇಶ್ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಗದ್ದೆಹಳ್ಳದ ಗ್ರಾಮಸ್ಥ ಜಾಹೀದ್ ಹೇಳುತ್ತಾರೆ. ಬಾಡಿಗೆ ಮನೆಯಲ್ಲೇ ರಮೇಶ್ ಈ ಆಶ್ರಮ ನಡೆಸುತ್ತಿದ್ದಾರೆ. ಇಲ್ಲಿ ಆಶ್ರಯ ಪಡೆದವರು ನೆಮ್ಮದಿಯಿಂದ ಕೊನೆಗಾಲದಲ್ಲಿ ಜೀವಿಸುತ್ತಿದ್ದಾರೆ.

  • ಮಕ್ಕಳಿಗೆ ಉಚಿತ ಟ್ಯೂಷನ್, ಯುವಕರಿಗೆ ಕೋಚಿಂಗ್ ಕ್ಲಾಸ್ – ಗ್ರಾಮೋದ್ಧಾರಕ್ಕೆ ಪಣ ತೊಟ್ಟ ಪೊಲೀಸ್ ಪೇದೆ

    ಮಕ್ಕಳಿಗೆ ಉಚಿತ ಟ್ಯೂಷನ್, ಯುವಕರಿಗೆ ಕೋಚಿಂಗ್ ಕ್ಲಾಸ್ – ಗ್ರಾಮೋದ್ಧಾರಕ್ಕೆ ಪಣ ತೊಟ್ಟ ಪೊಲೀಸ್ ಪೇದೆ

    ಚಾಮರಾಜನಗರ: ಪೋಲಿಸರು ಒಂದು ದಿನ ರಜೆ ಸಿಕ್ಕಿದರೆ ಸಾಕು ಫ್ಯಾಮಿಲಿ ಜೊತೆ ಕಾಲ ಕಳೆಯೋಣ, ರಿಲ್ಯಾಕ್ಸ್ ಆಗೋಣ ಎಂದು ಕಾದು ಕುಳಿತಿರುತ್ತಾರೆ. ಆದರೆ ಚಾಮರಾಜನಗರದ ಪೊಲೀಸ್ ಪೇದೆಯೊಬ್ಬರು ತಮಗೆ ಸಿಗುವ ರಜೆ ಸಮಯದಲ್ಲೂ ಕೂಡ ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಕ್ಕಳಿಗೆ ಉಚಿತ ಟ್ಯೂಷನ್, ನಿರುದ್ಯೋಗಿ ಯುವಕರಿಗೆ ಕೋಚಿಂಗ್ ಕ್ಲಾಸ್ ತೆಗೆದುಕೊಳ್ಳುವ ಮೂಲಕ ಪಬ್ಲಿಕ್ ಹೀರೋ ಆಗಿದ್ದಾರೆ.

    ಚಾಮರಾಜನಗರ ಎಸ್‍ಪಿ ಕಚೇರಿಯಲ್ಲಿ ಮೀಸಲು ಪೋಲಿಸ್ ಪಡೆಯ ಪೇದೆ ಆಗಿರೋ ಮಧುಸೂದನ್ ತಮ್ಮ ನಿಸ್ವಾರ್ಥ ಕೆಲಸದ ಮೂಲಕ ಪಬ್ಲಿಕ್ ಹೀರೋ ಆಗಿದ್ದಾರೆ. ಇವರು ಹರದನಹಳ್ಳಿಯವರಾಗಿದ್ದು, ತಮ್ಮ ಗ್ರಾಮದ ಮಕ್ಕಳಿಗೆ ನಿತ್ಯ ಬೆಳಗ್ಗೆ ಉಚಿತ ಟ್ಯೂಷನ್ ನೀಡುತ್ತಾರೆ.

    ಗ್ರಾಮದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ವಿವೇಕಾನಂದ ಪಾಠ ಶಾಲೆ ಹೆಸರಿನಲ್ಲಿ ಮಕ್ಕಳಿಗೆ ಉಚಿತ ಟ್ಯೂಷನ್ ತೆಗೆದುಕೊಳ್ಳುತ್ತಾರೆ. ಜೊತೆಗೆ ತಮ್ಮ ಊರಿನ ಯುವಕರು ಓದಲಿ, ಒಳ್ಳೆ ಕೆಲಸಕ್ಕೆ ಸೇರಲಿ ಎಂದು ಚಿಕ್ಕ ಗ್ರಂಥಾಲಯ ಕೂಡ ತೆರೆದಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ಕೋಚಿಂಗ್ ನೀಡುತ್ತಿದ್ದಾರೆ.

    ಅಷ್ಟೇ ಅಲ್ಲದೆ ಸ್ವಚ್ಛ ಭಾರತ್ ಅಭಿಯಾನವನ್ನು ತಮ್ಮೂರಲ್ಲಿ ಮಧುಸೂಧನ್ ನಡೆಸಿದ್ದಾರೆ. ಯುವಕರನ್ನು ಒಗ್ಗೂಡಿಸಿ ತಮ್ಮ ರಜೆ ಸಮಯವನ್ನು ಊರ ಸ್ವಚ್ಛತೆಗಾಗಿ ಮೀಸಲಿಟ್ಟಿದ್ದಾರೆ. ಕಲ್ಯಾಣಿ, ದೇಗುಲ, ಒಳಚರಂಡಿಯ ಸ್ವಚ್ಛ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಈ ಮೂಲಕ ಮೀಸಲು ಪೊಲೀಸ್ ಪಡೆಯ ಪೇದೆ ಮಧುಸೂಧನ್ ಗ್ರಾಮೋದ್ಧಾರಕ್ಕೆ ಪಣ ತೊಟ್ಟಿದ್ದಾರೆ. ಮಧುಸೂದನ್ ಅವರ ಈ ಸಾಮಜ ಸೇವೆ, ತಮ್ಮ ಊರಿನ ಮೇಲೆ ಅವರಿಟ್ಟಿರುವ ಪ್ರೀತಿ ಎಲ್ಲರ ಮನಗೆದ್ದಿದ್ದು, ಅವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ತುಂಡು ಭೂಮಿಯಲ್ಲಿ ಹತ್ತಾರು ವಿದೇಶಿ ಬೆಳೆ ಬೆಳೀತಿದ್ದಾರೆ ಆನೇಕಲ್‍ನ ಮುರುಗೇಶ್

    ತುಂಡು ಭೂಮಿಯಲ್ಲಿ ಹತ್ತಾರು ವಿದೇಶಿ ಬೆಳೆ ಬೆಳೀತಿದ್ದಾರೆ ಆನೇಕಲ್‍ನ ಮುರುಗೇಶ್

    – ವಿದೇಶಕ್ಕೆ ತರಕಾರಿ ರಫ್ತು, ಕೈ ತುಂಬಾ ಕಾಸು

    ಆನೇಕಲ್: ಇಂದು ರೈತರು ತಮ್ಮ ಮಕ್ಕಳನ್ನ ವ್ಯವಸಾಯಕ್ಕೆ ಇಳಿಸಲು ಹಿಂಜರೀತಾರೆ. ಸಾಲ ಮಾಡಿಯಾದರೂ ಮಕ್ಕಳನ್ನು ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳಲು ಕಳಿಸುತ್ತಾರೆ. ಈ ಮಧ್ಯೆ ತುಂಡು ಭೂಮಿಯಲ್ಲಿ ವಿದೇಶಿ ಕೃಷಿ ಮಾಡಿ ರೈತರೊಬ್ಬರು ಕೈ ತುಂಬಾ ಕಾಸು ಮಾಡುವ ಮೂಲಕ ಇದೀಗ ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

    ಹೌದು. ಆನೇಕಲ್ ತಾಲೂಕಿನ ಮೇಡಹಳ್ಳಿಯ ಪ್ರಗತಿಪರ ರೈತ ಮುರುಗೇಶ್, ತನಗಿರುವ ಕೇವಲ 23 ಗುಂಟೆ ಕೃಷಿ ಭೂಮಿಯಲ್ಲಿ ಏಕಕಾಲದಲ್ಲಿ ಹತ್ತಾರು ವಿದೇಶಿ ಬೆಳೆ ಬೆಳೆದು, ಕೈ ತುಂಬಾ ಕಾಸು ಮಾಡುತ್ತಿದ್ದಾರೆ. ಮುರುಗೇಶ್ ಓದಿದ್ದು 10 ನೇ ತರಗತಿವರೆಗೆ ಮಾತ್ರ. ಅಪ್ಪ-ಅಮ್ಮ ಓದಿಸ್ತೀನಿ ಅಂದ್ರೂ ಕೇಳದ ಮುರುಗೇಶ್, ಐದು ವರ್ಷದ ಹಿಂದೆ ಕೃಷಿ ಕೆಲಸಕ್ಕೆ ಇಳಿದರು. ಆದರೆ ಎಲ್ಲರಂತೆ ರಾಗಿ, ಭತ್ತ ಬೆಳೆಯಲು ಹೋಗದೇ ಇಂಟರ್ ನೆಟ್, ಪ್ರಗತಿಪರ ರೈತರ ನೆರವಿಂದ ವಿದೇಶಿ ಬೆಳೆ ಬೆಳೆಯಲು ನಿಂತರು. ಬ್ರೊಕೊಲ್ಲಿ, ಗ್ರೀನ್ ನೋಟಿಸ್, ರೋಮನ್ ನೋಟಿಸ್, ಚೈನೀಸ್ ಕ್ಯಾಬೇಜ್, ಎಲ್ಲೋ ಕ್ಯಾರೆಟ್, ಬ್ಲಾಕ್ ಕ್ಯಾರೆಟ್ ಹೀಗೆ ಹಲವು ಬೆಳೆ ಬೆಳೆದು, ವಿದೇಶಗಳಿಗೂ ರಫ್ತು ಮಾಡ್ತಿದ್ದಾರೆ.

    ಮುರುಗೇಶ್ ಕೃಷಿ ನೋಡಲು ಯಾವಗಲೂ ಸಂಘ ಸಂಸ್ಥೆಗಳು, ವಿದೇಶಿ ವ್ಯಕ್ತಿಗಳು ಆಗಮಿಸುತ್ತಿರುತ್ತಾರೆ. ಮುರುಗೇಶ್ ಎಲ್ಲರಿಗೂ ತಮ್ಮ ಬಳಿ ಇರುವ ಮಾಹಿತಿ ಹಂಚಿಕೊಳ್ಳುತ್ತಾರೆ. ಈ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದು ಮುರುಗೇಶ್ ಸ್ನೇಹಿತ ಕಾಂತರಾಜು ಹೇಳುತ್ತಾರೆ.

    ಅನಾದಿಕಾಲದ ಕೃಷಿ ಮಾಡುತ್ತಾ ಸಾಲ ತೀರಿಸಲಾಗದೆ ಒದ್ದಾಡ್ತಿರೋ ಕೃಷಿಕರ ನಡುವೆ ಯುವ ರೈತ ಮುರುಗೇಶ್ ವಿಭಿನ್ನವಾಗಿ ಕಾಣುತ್ತಾರೆ.

  • ಚಿಕ್ಕ ವಯಸ್ಸಲ್ಲೇ ಕುಟುಂಬದ ನೊಗ ಹೊತ್ರು- ಟ್ರ್ಯಾಕ್ಟರ್ ಓಡ್ಸಿ ಕೃಷಿ ಮಾಡೋಕೂ ಸೈ ಕೆರವಾಡಿಯ ಮಹಾದೇವಕ್ಕ

    ಚಿಕ್ಕ ವಯಸ್ಸಲ್ಲೇ ಕುಟುಂಬದ ನೊಗ ಹೊತ್ರು- ಟ್ರ್ಯಾಕ್ಟರ್ ಓಡ್ಸಿ ಕೃಷಿ ಮಾಡೋಕೂ ಸೈ ಕೆರವಾಡಿಯ ಮಹಾದೇವಕ್ಕ

    ಹಾವೇರಿ: ಕೃಷಿ ಕೆಲಸ ಅಂದ್ರೆ ಇತ್ತೀಚಿನ ದಿನಗಳಲ್ಲಿ ಪುರುಷರು ಸಾಕಪ್ಪ ಸಾಕು ಅಂತಿದ್ದಾರೆ. ಆದರೆ ಇಲ್ಲೊಬ್ಬ ಮಹಿಳೆ ತಂದೆಯ ಹೆಗಲಿಗೆ ಹೆಗಲು ಕೊಟ್ಟು, ಪುರುಷರನ್ನೂ ನಾಚಿಸುವಂತೆ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದಾರೆ. ಜಮೀನಿನಲ್ಲಿ ಬಂಪರ್ ಬೆಳೆ ತೆಗೆಯುತ್ತಿದ್ದಾರೆ. ಮದುವೆ ಆಗದೆ ತಂದೆ-ತಾಯಿ ಹಾಗೂ ತನ್ನ ಸಹೋದರಿಯನ್ನ ಸಾಕುತ್ತಿರೋ ಗಟ್ಟಿಗಿತ್ತಿ ಇದೀಗ ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

    ಹೌದು. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕು ಕೆರವಡಿ ಗ್ರಾಮದಲ್ಲಿ ಪುರುಷರನ್ನೇ ಮೀರಿಸುವ ಹಾಗೆ ಕೆಲಸ ಮಾಡೋ ಮಹಿಳೆಯ ಹೆಸರು ಮಹಾದೇವಕ್ಕ ಲಿಂಗದಹಳ್ಳಿ. 51 ವರ್ಷ ವಯಸ್ಸಾಗಿರೋ ಇವದ್ದು, ಮಹಿಳಾ ಪ್ರಧಾನ ಕುಟುಂಬ. ತಂದೆ ಬಸಪ್ಪನಿಗೆ ಐದು ಜನ ಹೆಣ್ಣುಮಕ್ಕಳು. ಐವರಲ್ಲಿ ಮಹಾದೇವಕ್ಕನೇ ಹಿರಿಯ ಮಗಳು. 12ನೇ ವಯಸ್ಸಿನಲ್ಲಿಯೇ ತಂದೆ ಜೊತೆಗೆ ಕೃಷಿ ಕೆಲಸಕ್ಕೆ ಹೋಗುತ್ತಿದ್ದರು. ತಂದೆಗೆ ಮಾತು ಬರಲ್ಲ. ತಾಯಿಗೆ ಸ್ವಲ್ಪ ಕಾಲಿನ ಸಮಸ್ಯೆ ಇತ್ತು. ಹೀಗಾಗಿ ಮಹಾದೇವಕ್ಕ ಮನೆಯ ಜವಾಬ್ದಾರಿಯನ್ನ ಹೊತ್ತುಕೊಂಡಿದ್ದಾರೆ. ಮೊದಲು ತಂದೆಯ ಜೊತೆಗೆ ಸೇರಿ ಎತ್ತು ಕಟ್ಟಿ ಕೃಷಿ ಮಾಡುತ್ತಾ ಬಂದರು. ಕಾಲಕ್ರಮೇಣ ತಂದೆಗೆ ವಯಸ್ಸಾದ ನಂತರ ಟ್ರ್ಯಾಕ್ಟರ್ ಖರೀದಿಸಿ ಅದರಲ್ಲಿಯೇ ಕೃಷಿ ಮಾಡುತ್ತಿದ್ದಾರೆ. ಮೊದಮೊದಲು ಟ್ರ್ಯಾಕ್ಟರ್ ಓಡಿಸಲು ಡ್ರೈವರ್ ಹುಡುಕಿ ಕೆಲಸ ಮಾಡಿಸುತ್ತಿದ್ದ ಮಹಾದೇವಕ್ಕ, ಡ್ರೈವರ್ ಸರಿಯಾದ ಸಮಯಕ್ಕೆ ಸಿಗದಿದ್ದಾಗ ತಾನೇ ಚಾಲನೆ ಮಾಡೋದನ್ನ ಕರಗತ ಮಾಡಿಕೊಂಡರು. ಅಲ್ಲದೆ ತನ್ನ ಜಮೀನಿನ ಕೆಲಸವನ್ನು ಟ್ರ್ಯಾಕ್ಟರ್ ಮೂಲಕವೇ ಮಾಡುತ್ತೇನೆ ಎಂದು ರೈತ ಮಹಿಳೆ ಹೇಳುತ್ತಾರೆ.

    ಕಳೆದ 15 ವರ್ಷಗಳಿಂದ ಮನೆಯ ಹಿರಿಯ ಮಗಳಾಗಿ ಜವಾಬ್ದಾರಿಯನ್ನ ತೆಗೆದುಕೊಂಡಿದ್ದಾರೆ. ಐದು ಎಕರೆ ಕೃಷಿ ಜಮೀನು ಹೊಂದಿರೋ ಮಹಾದೇವಕ್ಕ ತನ್ನ ಜಮೀನಿನಲ್ಲಿ ಭರ್ಜರಿ ಬೆಳೆಯನ್ನ ತೆಗೆಯುತ್ತಿದ್ದಾರೆ. ಪ್ರಸ್ತಕವರ್ಷ ನಿರಂತರ ಮಳೆಗೆ ಎಲ್ಲಾ ರೈತರ ಬೆಳೆ ಹಾನಿ ಸ್ವಲ್ಪ ಪ್ರಮಾಣದ ಇಳುವರಿ ಪಡೆದರೆ, ಮಹಾದೇವಕ್ಕ ಮೆಕ್ಕೆಜೋಳವನ್ನ ಉತ್ತಮ ಇಳುವರಿ ಪಡೆದುಕೊಂಡಿದ್ದಾರೆ. ತನ್ನ ಜಮೀನಿನಲ್ಲಿ ಮೂರು ಬೋರ್‍ವೆಲ್ ಹಾಕಿಸಿದ್ದು, ಜಮೀನಿನಲ್ಲಿ ಮೆಕ್ಕೆಜೋಳ, ಹತ್ತಿ, ರಾಗಿ, ನವಣಿ, ಅವರೆ, ಗೋಧಿ, ಕಡ್ಲಲೆ ಸೇರಿದಂತೆ ಸಿರಿಧ್ಯಾನಗಳನ್ನ ಬೆಳೆಯುತ್ತಿದ್ದಾರೆ. ತನ್ನ ಕುಟುಂಬದ ಸಂಬಂಧ ಮದುವೆಯನ್ನ ನಿರಾಕರಿಸಿ, ತಂದೆ-ತಾಯಿ ಹಾಗೂ ಎರಡು ಜನ ಸಹೋದರಿ ಮದುವೆ ಮಾಡಿದ್ದಾರೆ. ಮಹಾದೇವಕ್ಕ ಕೃಷಿನೋಡಿದ ಗ್ರಾಮದ ಹಿರಿಯರು, ಪುರುಷರನ್ನೇ ನಾಚಿಸುವಂತೆ ಕೃಷಿ ಮಾಡುತ್ತಿದ್ದಾಳೆ ಅಂತ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಕಳೆದ 15 ವರ್ಷಗಳಿಂದ ಕೃಷಿ ಮಾಡುತ್ತಿರೋ ಮಹಾದೇವಕ್ಕ ಜಮೀನಿನಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ. ಕೃಷಿ ಮಾಡುತ್ತಾ ಹೊಸಮನೆ ನಿರ್ಮಾಣ, ಜಾಗ ಖರೀದಿ ಹಾಗೂ ಇಬ್ಬರು ಸಹೋದರಿಯರ ಮದುವೆ ಮಾಡಿ ಸೈ ಅನಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಅನ್ನೋದನ್ನ ಮಹಾದೇವಕ್ಕ ಸಾಧಿಸಿ ತೋರಿಸಿದ್ದಾರೆ.

  • ನಿವೃತ್ತರಾದ್ರೂ ಉಚಿತ ಸೇವೆ- ನಿತ್ಯ ಬೆಂಗ್ಳೂರಿಂದ ಮಳವಳ್ಳಿಗೆ ಹೋಗಿ ಮಕ್ಕಳಿಗೆ ಪಾಠ

    ನಿವೃತ್ತರಾದ್ರೂ ಉಚಿತ ಸೇವೆ- ನಿತ್ಯ ಬೆಂಗ್ಳೂರಿಂದ ಮಳವಳ್ಳಿಗೆ ಹೋಗಿ ಮಕ್ಕಳಿಗೆ ಪಾಠ

    – ರಾಮಂದೂರಿನ ಸತ್ಯನಾರಾಯಣ್ ಪಬ್ಲಿಕ್ ಹೀರೋ

    ಮಂಡ್ಯ: ನನ್ನ ಸರ್ವಿಸ್ ಮುಗಿದ್ರೆ ಸಾಕು. ನಾನು ನನ್ನ ಕುಟುಂಬದ ಜೊತೆ ನೆಮ್ಮದಿಯಾಗಿ ಇರುತ್ತೇನೆ. ಅಲ್ಲದೆ ನಂಗೆ ಕೆಲಸ ಮಾಡಲು ಆಗ್ತಾ ಇಲ್ಲ. ಸ್ವಯಂ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹಲವು ಮಂದಿ ಸರ್ಕಾರಿ ನೌಕರರು ಅಂದುಕೊಳ್ಳುತ್ತಾರೆ. ಆದರೆ ಮಂಡ್ಯದ ಶಿಕ್ಷಕರೊಬ್ಬರು ನಿವೃತ್ತಿ ಆದರು ಸಹ ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಉಚಿತವಾಗಿ ಪಾಠ ಮಾಡುತ್ತಿದ್ದು, ಈ ಮೂಲಕ ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

    ಹೌದು. ಒಂದು ವರ್ಷದ ಹಿಂದಷ್ಟೇ ಶಿಕ್ಷಕ ವೃತ್ತಿಯಿಂದ ಪಿ.ಆರ್.ಸತ್ಯನಾರಾಯಣ್ ನಿವೃತ್ತರಾಗಿದ್ದಾರೆ. ಆದರೂ ಇವರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ರಾಮಂದೂರಿನ ಪ್ರಾಥಮಿಕ ಶಾಲೆಗೆ ನಿತ್ಯ ಬಂದು ಪಾಠ ಪ್ರವಚನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ತಾರೆ. ಇವರು ರಾಮಂದೂರಿಗೆ ಬರೋದು ಅಕ್ಕಪಕ್ಕದ ಹಳ್ಳಿಯಿಂದಲ್ಲ. ಬದಲಾಗಿ ಬೆಂಗಳೂರಿನಿಂದ.

    ಮೂಲತಃ ನಂಜನಗೂಡಿನ ಸತ್ಯನಾರಾಯಣ್ ಕುಟುಂಬ ಸದ್ಯ ಬೆಂಗಳೂರಲ್ಲಿ ವಾಸವಿದೆ. ಬೆಂಗಳೂರಿನಿಂದ ಮಂಡ್ಯಗೆ ನಿತ್ಯ ರೈಲಲ್ಲಿ ಬರುವ ಸತ್ಯನಾರಾಯಣ್, ಅಲ್ಲಿಂದ ಬೈಕಲ್ಲಿ ರಾಮಂದೂರಿಗೆ ಸೇರಿಕೊಳ್ಳುತ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಮಕ್ಕಳಿಗೆ ಪಾಠ, ಆಟ ಹೇಳಿಕೊಡ್ತಾರೆ. ಅಂದ ಹಾಗೇ, ಸತ್ಯನಾರಾಯಣ್ ನಿವೃತ್ತರಾಗಿದ್ದು ಇದೇ ಶಾಲೆಯಲ್ಲಿ. 100ಕ್ಕೂ ಹೆಚ್ಚು ಮಕ್ಕಳಿರೋ ಶಾಲೆಯಲ್ಲಿ ಸದ್ಯ ನಾಲ್ವರು ಶಿಕ್ಷಕರಷ್ಟೇ ಇದ್ದಾರೆ. ಮಕ್ಕಳ ಶಿಕ್ಷಣಕ್ಕೆ ತೊಂದ್ರೆ ಆಗಬಾರದು ಅನ್ನೋ ದೃಷ್ಟಿಯಿಂದ ಸತ್ಯನಾರಾಯಣ್ ಉಚಿತವಾಗಿ ಪಾಠ ಮಾಡೋದನ್ನು ಮುಂದುವರಿಸಿದ್ದಾರೆ.

    ಕಳೆದ ಒಂದು ವರ್ಷದಿಂದ ಯಾವುದೇ ಸಂಬಳ ತೆಗೆದುಕೊಳ್ಳದೇ ಕೆಲಸ ಮಾಡ್ತಿರುವ ಸತ್ಯನಾರಾಯಣ್, ಶಾಲೆಗೆ ಟಿವಿ, ಅಡುಗೆ ಉಪಕರಣಗಳು, ಸೈನ್ಸ್ ಲ್ಯಾಬ್‍ಗೆ ಬೇಕಾದ ವಸ್ತುಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಸತ್ಯನಾರಾಯಣ್ ಸೇವಾ ಮನೋಭಾವಕ್ಕೆ ಸಹದ್ಯೋಗಿ ಶಿಕ್ಷಕರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸ್ತಾರೆ.

    ಒಟ್ಟಿನಲ್ಲಿ ನಿವೃತ್ತರಾದರು ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಕಟಿಬದ್ಧರಾಗಿ ದುಡಿಯುತ್ತಿರುವ ಸತ್ಯನಾರಾಯಣ್ ಇತರರಿಗೆ ಮಾದರಿಯಾಗಿದ್ದಾರೆ.

  • ಹಸಿದವ್ರ ಪಾಲಿಗೆ ರಾಬಿನ್ ಹುಡ್- ನಿತ್ಯ ಆಹಾರ ಸಂಗ್ರಹಿಸಿ ನಿರ್ಗತಿಕರಿಗೆ ವಿತರಿಸ್ತಿದ್ದಾರೆ ಮೈಸೂರು ವಿದ್ಯಾರ್ಥಿಗಳು

    ಹಸಿದವ್ರ ಪಾಲಿಗೆ ರಾಬಿನ್ ಹುಡ್- ನಿತ್ಯ ಆಹಾರ ಸಂಗ್ರಹಿಸಿ ನಿರ್ಗತಿಕರಿಗೆ ವಿತರಿಸ್ತಿದ್ದಾರೆ ಮೈಸೂರು ವಿದ್ಯಾರ್ಥಿಗಳು

    ಮೈಸೂರು: ಸಿದ್ಧಾಂತದ ಹೆಸರಿನಲ್ಲಿ ಕ್ರಾಂತಿ ಮಾಡ್ತೀವಿ ಅಂತ ಬೀದಿಗೆ ಇಳಿಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗ್ತಿದೆ. ಆದರೆ, ಮೈಸೂರಿನಲ್ಲಿ ಇಬ್ಬರು ವಿದ್ಯಾರ್ಥಿನಿಯರು ಸದ್ದಿಲ್ಲದೆ ಬಡವರ ಹಸಿವು ನೀಗಿಸೋ ಕೆಲಸ ಮಾಡ್ತಿದ್ದಾರೆ. ಅನ್ನ ಧರ್ಮದ ಹೆಸರಿನಲ್ಲಿ ದೊಡ್ಡದೊಂದು ತಂಡವನ್ನೇ ಕಟ್ಟುವ ಮೂಲಕ ಪಬ್ಲಿಕ್ ಹೀರೋಗಳು ಎನಿಸಿಕೊಂಡಿದ್ದಾರೆ.

    ಆಹಾರವಿಲ್ಲದೆ ಅದೆಷ್ಟೋ ಜನ ಹಸಿದೇ ಮಲಗುತ್ತಾರೆ. ಇಂತವರ ಹಸಿವು ನೀಗಿಸೋ ಕೆಲಸವನ್ನು ಸ್ನಾತಕೋತ್ತರ ಮತ್ತು ಪಿಎಚ್‍ಡಿ ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿನಿಯರು ಮಾಡುತ್ತಿದ್ದಾರೆ. ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಪಿಎಚ್‍ಡಿ ಮಾಡುತ್ತಿರುವ ಸುಷ್ಮಾ ಹಾಗೂ ಮಹಾಜನ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿರುವ ಹರ್ಷಿತಾ ಅನ್ನಧರ್ಮವೇ ಮಿಗಿಲು ಎನ್ನುತ್ತಿದ್ದಾರೆ.

    ದೆಹಲಿ ಮೂಲದ ರಾಬಿನ್ ಹುಡ್ ಆರ್ಮಿ ಎಂಬ ಎನ್‍ಜಿಓ ಸಂಘಟನೆಯನ್ನು ಈ ವಿದ್ಯಾರ್ಥಿನಿಯರು ಮೈಸೂರಿನಲ್ಲಿ ಬೆಳೆಸುತ್ತಿದ್ದಾರೆ. ಮೈಸೂರು ನಗರದಲ್ಲಿನ ಅನೇಕ ಹೋಟೆಲ್, ಕಲ್ಯಾಣಮಂಟಪಗಳಿಂದ ಪ್ರತಿ ರಾತ್ರಿ ಆಹಾರ ಸಂಗ್ರಹಿಸಿ ಬಡವರು, ನಿರ್ಗತಿಕರ ಹಸಿವು ನೀಗಿಸುತ್ತಿದ್ದಾರೆ.

    ವಾಟ್ಸಪ್ ಗ್ರೂಪ್ ರಚಿಸಿಕೊಂಡು ಆರಂಭದಲ್ಲಿ ಇವರಿಬ್ಬರೇ ಆಹಾರ ಸಂಗ್ರಹಿಸಿ ಜನರಿಗೆ ನೀಡ್ತಿದ್ದರು. ಆದರೆ ಇದೀಗ 50 ಜನ ಸ್ವಯಂಸೇವಕರಿದ್ದಾರೆ. ವಾಟ್ಸಪ್ ಗ್ರೂಪಲ್ಲಿ ತಮ್ಮಲ್ಲಿ ಉಳಿದ ಆಹಾರದ ಬಗ್ಗೆ ಹೋಟೆಲ್ ಮಾಲೀಕರು, ಕಲ್ಯಾಣಮಂಟಪದವರು ಗ್ರೂಪ್ ಸದಸ್ಯರಿಗೆ ಮಾಹಿತಿ ನೀಡ್ತಾರೆ. ಆಗ, ಆಹಾರವನ್ನು ಸಂಗ್ರಹಿಸಿ ವಿತರಿಸುವ ಕಾರ್ಯ ನಡೆಯುತ್ತೆ ಎಂದು ರಾಬಿನ್ ಹುಡ್ ಆರ್ಮಿ ಸದಸ್ಯೆ ಹರ್ಷಿತಾ ಹೇಳುತ್ತಾರೆ.

    ಒಟ್ಟಿನಲ್ಲಿ ನಿರ್ಗತಿಕರು, ಬಡವರ ಹಸಿವು ನೀಗಿಸೋ ಕೆಲಸವನ್ನು ರಾಬಿನ್ ಹುಡ್ ಆರ್ಮಿ ಹೀಗೆ ಮುಂದುವರಿಸಲಿ ಎಂಬುದೇ ಎಲ್ಲರ ಆಶಯವಾಗಿದೆ.

  • ಹೆಣ್ಣು ಎಂದು ಸುಮ್ಮನೆ ಮನೆಯಲ್ಲಿ ಕೂರಲಿಲ್ಲ-ಪೌರಾಣಿಕ ನಾಟಕ ಕಲಿಸುವ ಮೇಷ್ಟ್ರು ಆದ್ರು

    ಹೆಣ್ಣು ಎಂದು ಸುಮ್ಮನೆ ಮನೆಯಲ್ಲಿ ಕೂರಲಿಲ್ಲ-ಪೌರಾಣಿಕ ನಾಟಕ ಕಲಿಸುವ ಮೇಷ್ಟ್ರು ಆದ್ರು

    -ನೇರಲೇಕೆರೆಯ ಸವಿತಾ ನಮ್ಮ ಪಬ್ಲಿಕ್ ಹೀರೋ

    ಹಾಸನ: ಪುರುಷ ಪ್ರಧಾನ ಸಮಾಜದಲ್ಲಿ ಹಲವು ಮಹಿಳೆಯರು ವಿಶೇಷ ಸಾಧನೆ ಮೂಲಕ ಗಮನ ಸೆಳೆದಿದ್ದಾರೆ. ಅದೇ ರೀತಿ ಹಾಸನದ ಮಹಿಳೆಯೊಬ್ಬರು ಬಡತನವನ್ನು ಮೆಟ್ಟಿನಿಂತು ಕೆಲಸ ಗಿಟ್ಟಿಸಿದ್ದಲ್ಲದೆ, ಬಿಡುವಿನ ಸಮಯದಲ್ಲಿ ಪುರುಷರಂತೆ ಹಾರ್ಮೋನಿಯಂ ನುಡಿಸುತ್ತ, ಹಳ್ಳಿಗಳಲ್ಲಿ ಪೌರಾಣಿಕ ನಾಟಕ ಕಲಿಸುತ್ತ ಕಲಾ ಸೇವೆ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯ ಎನ್ನುವವರಿಗೆ ಸ್ಪೂರ್ತಿ ಆಗಿದ್ದಾರೆ.

    ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ ನೇರಲೇಕೆರೆಯ ನಿವಾಸಿ ಸವಿತಾ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಹಿಂದಿ ಬಿಎಡ್ ಪದವಿಧರೆಯಾಗಿರುವ ಸವಿತಾ ಅವರು ಪ್ರಾಥಮಿಕ ಕೃಷಿ ಸಹಕಾರ ಪತ್ತಿನಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿಕೊಂಡಿದ್ದಾರೆ. ಬಿಡುವಿನ ವೇಳೆ ಪೌರಾಣಿಕ ನಾಟಕ ಕಲಿಸುತ್ತಾರೆ. ಚಿಕ್ಕಂದಿನಿಂದಲ್ಲೂ ಸವಿತಾ ಅವರಿಗೆ ಪೌರಾಣಿಕ ನಾಟಕ ಅಂದ್ರೆ ಇಷ್ಟ. ಹಾರ್ಮೋನಿಯಂ ಕಲಿಬೇಕೆಂಬುದು ಅಪಾರ ಆಸೆ. ಅದರಂತೆ ತಮ್ಮ ಕೆಲಸದ ಬಿಡುವಿನಲ್ಲಿ ಹಾರ್ಮೋನಿಯಂ ಕಲಿತರು. ಕುರುಕ್ಷೇತ್ರ, ರಾಜ ಸತ್ಯವ್ರತ ನಾಟಕಗಳನ್ನು ಕರಗತ ಮಾಡಿಕೊಂಡರು. ಇದೀಗ ರಾಮಾಯಣ ನಾಟಕವನ್ನು ಅಭ್ಯಾಸ ಮಾಡುತ್ತಿದ್ದಾರೆ. ತಾವು ಸಂಪೂರ್ಣವಾಗಿ ಕಲಿತ ನಾಟಕಗಳನ್ನು ಇತರರಿಗೆ ಕಲಿಸುವ ಮೂಲಕ ಕಲಾಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

    ನಾಟಕ ಕಲಿಸಲು ಹಳ್ಳಿಯ ಜನ ಇವರಿಗೆ ಹಣ ನೀಡುತ್ತಾರಾದರೂ ಅವರು ನೀಡುವ ದುಡ್ಡು ಸವಿತಾರ ಓಡಾಟಕ್ಕೆ ಸಾಕಾಗುತ್ತದೆ. ಕೆಲವೊಮ್ಮೆ 50 ಕಿಲೋಮೀಟರ್ ವರೆಗೂ ತಮ್ಮ ಸ್ಕೂಟರ್ ನಲ್ಲಿ ಹೋಗಿ ನಾಟಕ ಕಲಿಸಿದ್ದುಂಟು. ಹಣಕ್ಕಾಗಿ ನಾನು ನಾಟಕ ಕಲಿಸುತ್ತಿಲ್ಲ. ಇದೊಂದು ಕಲಾ ಸೇವೆ ಎಂದು ಸವಿತಾ ಹೇಳುತ್ತಾರೆ.