Tag: ಪಬ್ಲಿಕ್ ಹಿರೋ

  • ಆಂಧ್ರದ ಗಡಿಭಾಗದಲ್ಲಿ ಆಳಿವಿನಂಚಿನಲ್ಲಿದ್ದ ಶಾಲೆಯಲ್ಲಿ ಕನ್ನಡದ ಕಹಳೆ ಮೊಳಗಿಸಿದ ಶಿಕ್ಷಕ

    ಆಂಧ್ರದ ಗಡಿಭಾಗದಲ್ಲಿ ಆಳಿವಿನಂಚಿನಲ್ಲಿದ್ದ ಶಾಲೆಯಲ್ಲಿ ಕನ್ನಡದ ಕಹಳೆ ಮೊಳಗಿಸಿದ ಶಿಕ್ಷಕ

    ಚಿಕ್ಕಬಳ್ಳಾಪುರ: ನಾನಾ ಕಾರಣಗಳನ್ನು ನೀಡಿ ಸ್ವತಃ ಸರ್ಕಾರವೇ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಾ ಸಾಗುತ್ತಿದೆ. ಆದರೆ ಆಂಧ್ರದ ಗಡಿಭಾಗದಲ್ಲಿ ತೆಲುಗು ಭಾಷೆಯ ಪ್ರಭಾವದಿಂದ ಮುಚ್ಚಿಹೋಗಬೇಕಿದ್ದ ಸರ್ಕಾರಿ ಶಾಲೆ ಮಾದರಿ ಶಾಲೆಯಾಗಿ ತಲೆ ಎತ್ತಿ ನಿಂತಿದೆ.

    ಸಹೃದಯಿ ದಾನಿಗಳ ಸಹಕಾರ, ಸ್ನೇಹಿತರ ಸಾಥ್ ನಿಂದ ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆಗಳಿಗೂ ಸೆಡ್ಡು ಹೊಡೆಯವಂತೆ ಮಾಡಿದ್ದಾರೆ ಈ ಶಾಲೆಯ ಶಿಕ್ಷಕ. ಇಡೀ ಗ್ರಾಮದಲ್ಲಿ ಕನ್ನಡದ ಕಂಪು ಸೂಸುವ ಮೂಲಕ ಕನ್ನಡ ಭಾಷೆ ಹಾಗೂ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಕಾಯಕ ಮಾಡಿದ ಅಪರೂಪದ ಶಿಕ್ಷಕ ಇವರು.

    ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಂಜಯ್ಯಗಾರಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಟಿಕೆ ನಾಗೇಶ್ ಅವರು ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಮೂಲತಃ ಹಾಸನದವರಾದ ನಾಗೇಶ್ ಕಳೆದ 11 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಕರ್ನಾಟಕದಲ್ಲೇ ಈ ಗ್ರಾಮವಿದ್ದರೂ ಇಲ್ಲಿನ ಜನರ ಆಡು ಭಾಷೆ ತೆಲುಗು. ಇಲ್ಲಿನ ಜನ ತಾವು ಆಂಧ್ರದವರೇ ಎನ್ನುವಷ್ಟು ಭಾವನೆಗಳಲ್ಲಿ ಬದುಕುತ್ತಿದ್ದರು. ಅಲ್ಲದೇ ಶಾಲೆಗೆ ಮೊದಲ ಬಾರಿ ಶಿಕ್ಷಕರಾಗಿ ನಾಗೇಶ್ ಬಂದಾಗ ಇಲ್ಲಿನ ಬಹುತೇಕ ಮಕ್ಕಳಿಗೆ ಕನ್ನಡ ಮಾತನಾಡಲು ಕೂಡ ಬರುತ್ತಿರಲಿಲ್ಲ. ಅಲ್ಲದೇ ಕನಿಷ್ಠ ಇಲ್ಲಿನ ಜನ ತಮ್ಮ ಮಕ್ಕಳನ್ನ ಶಾಲೆಗೆ ಕೂಡ ಕಳುಹಿಸುತ್ತಿರಲಿಲ್ಲ.

    ಆದರೆ ಮನಸ್ಸಿದ್ದರೆ ಮಾರ್ಗ ಎಂಬಂತೆ ಶಿಕ್ಷಕ ನಾಗೇಶ್ ಗ್ರಾಮದಲ್ಲೇ ವಾಸ ಮಾಡುವ ಮೂಲಕ ಗ್ರಾಮದ ಮನೆ ಮನೆಗೆ ತೆರಳಿ ಶಿಕ್ಷಣದ ಮಹತ್ವವನ್ನ ತಿಳಿಸಿದ್ದಾರೆ. ಪೋಷಕರ ಮನವೊಲಿಸಿ ಎಲ್ಲಾ ಮಕ್ಕಳನ್ನು ಶಾಲೆಗೆ ಕರೆತಂದು ಉತ್ತಮ ಶಿಕ್ಷಣ ನೀಡುವ ಕಾಯಕಕ್ಕೆ ಮುಂದಾಗಿದ್ದಾರೆ. ಪ್ರತಿ ವರ್ಷ ಶಾಲೆಯಲ್ಲಿ ಕನ್ನಡದ ನುಡಿ ಹಬ್ಬ ಆಚರಿಸುವ ಮೂಲಕ ಗ್ರಾಮಸ್ಥರಲ್ಲಿ ಕನ್ನಡದ ಕಂಪು ಸೂಸುವ ಕೆಲಸ ಮಾಡಿದ್ದಾರೆ. ತೆಲುಗು ಭಾಷೆಯ ಪ್ರಭಾವದಿಂದ ಕನ್ನಡವೇ ಬಾರದ ಮಕ್ಕಳ ಬಾಯಲ್ಲಿ ಕನ್ನಡದ ಕಿಚ್ಚು ಹಚ್ಚಿದ್ದಾರೆ. ಹತ್ತು ವರ್ಷಗಳಿಂದ ಒಂದಲ್ಲ ಒಂದು ರೀತಿ ಭಿನ್ನ ವಿಭಿನ್ನ ಪ್ರಯತ್ನಗಳಿಂದ ಇಡೀ ಶಾಲೆಯನ್ನ ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ.

    ಮೂಲಭೂತ ಸೌಲಭ್ಯಗಳಿಲ್ಲದೆ ಸೊರಗಿ ಹೋಗಿದ್ದ ಶಾಲೆಗೆ ಸಹೃದಯಿ ದಾನಿಗಳು ಹಾಗೂ ಸ್ನೇಹಿತರ ಬಳಗದಿಂದ ಸಕಲ ಸೌಲಭ್ಯಗಳನ್ನ ಪಡೆದುಕೊಳ್ಳುವಲ್ಲಿ ಶಿಕ್ಷಕ ನಾಗೇಶ್ ಯಶಸ್ವಿಯಾಗಿದ್ದಾರೆ. ದಾನಿಗಳ ನೆರವಿನಿಂದ ಪಡೆದ ಪ್ರೊಜೆಕ್ಟರ್ ಮೂಲಕ ಈ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಕೂಡ ನಡೆಸುತ್ತಿದ್ದಾರೆ. ಕಂಪ್ಯೂಟರ್ ಕಾಣದ ಮಕ್ಕಳ ಕೈ ಹಿಡಿದು ಕಂಪ್ಯೂಟರ್ ಶಿಕ್ಷಣ ನೀಡುತ್ತಿದ್ದಾರೆ. ಕನಿಷ್ಠ ಕನ್ನಡವೂ ಬಾರದ ಮಕ್ಕಳ ಬಾಯಲ್ಲಿ ಇಂದು ಪಟಪಟನೆ ಇಂಗ್ಲಿಷ್ ಮಾತನಾಡುವಷ್ಟರ ಮಟ್ಟಿಗೆ ಬೆಳೆಸಿದ್ದಾರೆ.

    ಈ ಹಿಂದೆ ವಿದ್ಯಾರ್ಥಿಗಳೇ ಇಲ್ಲದ ಈ ಶಾಲೆಯಲ್ಲಿ ಇಂದು 1 ರಿಂದ 7ನೇ ತರಗತಿಯವರೆಗೂ 114 ವಿದ್ಯಾರ್ಥಿಗಳು ವ್ಯಾಸಂಗ ಮಾಡುವಂತೆ ಮಾಡಿದ್ದಾರೆ. ಪ್ರತಿ ವರ್ಷ ತಮ್ಮ ಫೇಸ್‍ಬುಕ್ ಗೆಳೆಯರ ಬಳಗದಿಂದ ನೋಟ್ ಪುಸ್ತಕ, ಪೆನ್, ಪೆನ್ಸಿಲ್ ಸೇರಿದಂತೆ ಕಲಿಕಾ ಸಾಮಾಗ್ರಿಗಳನ್ನು ಸಹಾಯ ಪಡೆಯುವ ಮೂಲಕ ವರ್ಷ ಇಡೀ ಉಚಿತವಾಗಿ ನೀಡುತ್ತಾರೆ. ಬಿಸಿಯೂಟ ಆಡುಗೆಗೆ ಬೇಕಾದ ಗ್ರೈಂಡರ್, ತಟ್ಟೆ, ಲೋಟ, ವಾಟರ್ ಫಿಲ್ಟರ್ ಸೇರಿದಂತೆ ಶಾಲೆಗೆ ಬೇಕಾದ ಸಕಲ ಸೌಲಭ್ಯಗಳನ್ನ ದಾನ ಪಡೆದು ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಾರೆ.

    ವಿಶೇಷವಾಗಿ ಶಿಕ್ಷಕರ ಕೊರತೆ ಕಾರಣ ಖಾಸಗಿ ಶಾಲೆಯ ಶಿಕ್ಷಕರಾಗಿದ್ದ ತಮ್ಮ ಪತ್ನಿಯನ್ನು ಖಾಸಗಿ ಶಾಲೆ ಬಿಡಿಸಿ, ತಮ್ಮ ಶಾಲೆಯಲ್ಲಿ ಉಚಿತವಾಗಿ ಪಾಠ ಮಾಡಿಸುತ್ತಿದ್ದಾರೆ. ಪತಿಯ ಸಮಾಜಮುಖಿ ಕಾರ್ಯಕ್ಕೆ ಪತ್ನಿ ಶೈಲಜಾ ಕೂಡ ಸಾಥ್ ಕೊಟ್ಟಿದ್ದಾರೆ.

    ಆಂಧ್ರದ ಗಡಿಭಾಗ, ತೆಲುಗು ಭಾಷೆಯ ಪ್ರಭಾವ, ಪೋಷಕರ ಇಂಗ್ಲಿಷ್ ವ್ಯಾಮೋಹ ಸೇರಿದಂತೆ ಹಲವು ಕಾರಣಗಳಿಂದ ನಂಜಯ್ಯಗಾರಿಹಳ್ಳಿಯ ಸುತ್ತಮುತ್ತಲ ಐದು ಸರ್ಕಾರಿ ಶಾಲೆಗಳಿಗೆ ಸರ್ಕಾರ ಈಗಾಗಲೇ ಬೀಗ ಜಡಿದಿದೆ.

    ಆದರೆ ಶಿಕ್ಷಕ ನಾಗೇಶ್ ಅವರ ಸ್ವಂತ ಪರಿಶ್ರಮದಿಂದ ನಂಜಯ್ಯಗಾರಹಳ್ಳಿಯ ಈಗ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದೆ. ಇದಲ್ಲದೆ 4 ವರ್ಷದ ತಮ್ಮ ಮಗನನ್ನ ಕೂಡ ತಮ್ಮದೇ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿಸಲು ಮುಂದಾಗಿದ್ದಾರೆ ಈ ದಂಪತಿ.

    https://www.youtube.com/watch?v=UPD9JzGXBd0

  • ಗ್ರಾಮಸ್ಥರ, ಶಿಕ್ಷಕರ ಪರಿಶ್ರಮದಿಂದ ಸರ್ಕಾರಿ ಶಾಲೆಗೆ ಸಿಕ್ತು ಹೈಟಕ್ ಟಚ್

    ಗ್ರಾಮಸ್ಥರ, ಶಿಕ್ಷಕರ ಪರಿಶ್ರಮದಿಂದ ಸರ್ಕಾರಿ ಶಾಲೆಗೆ ಸಿಕ್ತು ಹೈಟಕ್ ಟಚ್

    ಹಾವೇರಿ: ಖಾಸಗಿ ಶಾಲೆಗಳ ಪ್ರಭಾವದಿಂದ ವರ್ಷದಿಂದ ವರ್ಷಕ್ಕೆ  ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಶಾಲೆಯ ದಾಖಲಾತಿ ಹೆಚ್ಚಳ ಹಾಗೂ ಉತ್ತಮ ಶಿಕ್ಷಣ ನೀಡಲು ಶಿಕ್ಷಕರ ಬಳಗ ಹೊಸ ಪ್ಲಾನ್ ಮಾಡಿದ್ದಾರೆ. ಗ್ರಾಮದ ದಾನಿಗಳ ಸಹಾಯ ಪಡೆದು ಕಂಪ್ಯೂಟರ್, ಸ್ಮಾರ್ಟ ಕ್ಲಾಸ್, ಡೆಸ್ಕ್ ಸೇರಿದಂತೆ ಮೂಲಭೂತ ಸೌಕರ್ಯವನ್ನ ಶಾಲೆಗೆ ಪಡೆದುಕೊಂಡಿದ್ದಾರೆ. ಈ ಮೂಲಕ ಖಾಸಗಿ ಶಾಲೆಯನ್ನು ಮೀರಿಸುವಂತೆ ಸರ್ಕಾರಿ ಶಾಲೆಯನ್ನು ಅಭಿವೃದ್ದಿ ಮಾಡಿದ್ದಾರೆ.

    ಹೌದು, ಇದು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹೊಸಕಟ್ಟಿ ಗ್ರಾಮದಲ್ಲಿ ಕಂಡು ಬಂದ ದೃಶ್ಯಗಳು. ಕಳೆದ ಒಂದು ವರ್ಷದಿಂದ ಸರ್ಕಾರಿ ಶಾಲೆಯ ಚಿತ್ರಣವೇ ಬದಲಾವಣೆಯಾಗಿದೆ. ಪುಟ್ಟಗ್ರಾಮ ಹೊಸಕಟ್ಟಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿ ವರೆಗೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

    ಕಳೆದ ಮೂರು ವರ್ಷಗಳಿಂದ ವರ್ಷದಿಂದ ವರ್ಷಕ್ಕೆ ಶಾಲೆಯ ದಾಖಲಾತಿ ಪ್ರಮಾಣ ಕಡಿಮೆಯಾಗಿತ್ತು. ಶಾಲೆಯ ಅಭಿವೃದ್ಧಿ ಪಡಿಸಲು ಶಿಕ್ಷಕರ ಬಳಗವು ಒಂದು ಹೊಸ ಪ್ಲಾನ್ ಮಾಡಿ, ಗ್ರಾಮದ ಮನೆ ಮನೆಗೆ ತೆರಳಿ ದಾನ ರೂಪದಲ್ಲಿ ಮೂಲಭೂತ ಸೌಕರ್ಯವನ್ನ ಕೇಳಿದ್ದಾರೆ. ಹೊಸಕಟ್ಟಿ ಗ್ರಾಮದ ಜನರಿಂದ 10 ರೂ. ನಿಂದ ಒಂದು ಸಾವಿರ ರೂ. ವರೆಗೂ ಹಣವನ್ನು ವಂತಿಕೆಯಾಗಿ ಸಂಗ್ರಹಿಸಿ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ.

    ಗ್ರಾಮದ ಜನರು ಇದುವರೆಗೆ ಐದು ಕಂಪ್ಯೂಟರ್, ಒಂದೂವರೇ ಲಕ್ಷ ರುಪಾಯಿ ಖರ್ಚು ಮಾಡಿ ಡಿಜಿಟಲ್ ಕ್ಲಾಸ್ ರೂಂ ನಿರ್ಮಿಸಿ, ಖಾಸಗಿ ಶಾಲೆಗಳಿಗಿಂತ ನಾವು ಕಮ್ಮಿ ಇಲ್ಲ ಎಂದು ತಂತ್ರಜ್ಞಾನ ಬಳಿಸಿ ಮಕ್ಕಳಿಗೆ ಪಾಠಭೋಧನೆ ಮಾಡುತ್ತಿದ್ದಾರೆ. ಶಿಕ್ಷಕರು ಹಾಗೂ ಗ್ರಾಮಸ್ಥರ ಈ ಕಾರ್ಯದಿಂದ ಹೊಸಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.

    ಪ್ರಸ್ತುತ ಗ್ರಾಮದ ಮಕ್ಕಳು ಖಾಸಗಿ ಶಾಲೆಗೆ ಹೋಗುವದನ್ನ ನಿಲ್ಲಿಸಿ, ಸರ್ಕಾರಿ ಶಾಲೆಯ ಕಡೆ ಬರುತ್ತಿದ್ದಾರೆ. 180 ಮಕ್ಕಳು ಇದ್ದ ಸಂಖ್ಯೆ ಈಗ 240 ಕ್ಕೆ ಏರಿಕೆಯಾಗಿದೆ. ಒಂಬತ್ತು ಜನ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕರು ಶನಿವಾರ ಮತ್ತು ಭಾನುವಾರು ಮಕ್ಕಳಿಗೆ ರಜೆ ನೀಡಿದ ಪ್ರತಿವಾರ ಒಬ್ಬರು ಸ್ಪೇಷಲ್ ಕ್ಲಾಸ್ ನೀಡುತ್ತಾರೆ. ಇದರಿಂದ ಸುತ್ತಮುತ್ತಲಿನ ಗ್ರಾಮದ ಮಕ್ಕಳು ಸರ್ಕಾರಿ ಶಾಲೆಯ ಪ್ರವೇಶ ಪಡೆಯುತ್ತಿದ್ದಾರೆ.

    ಇನ್ನು ಗ್ರಾಮದ ಜನರಿಗೆ ತಮ್ಮ ಕಾರ್ಯದ ಬಗ್ಗೆ ಮೆಚ್ಚುಗೆ ಇದ್ದು, ಶಾಲೆಯನ್ನ ಇನ್ನು ಹೆಚ್ಚು ಅಭಿವೃದ್ದಿ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನ ಕೊಡಿಸುತ್ತೆವೆ ಎನ್ನುತ್ತಿದ್ದಾರೆ. ಶಾಲೆಯ ಶಿಕ್ಷಕರ ಬಳಗದ ಪರಿಶ್ರಮ ಹಾಗೂ ಗ್ರಾಮದ ದಾನಿಗಳಿಗೆ ಬಡಮಕ್ಕಳು ಡಿಜಿಟಲ್ ಶಿಕ್ಷಣ ಸೇರಿದಂತೆ ಕಂಪ್ಯೂಟರ್ ಶಿಕ್ಷಣವನ್ನ ಪಡೆದು ಜಿಲ್ಲೆಯಲ್ಲಿ ಮಾದರಿ ಶಾಲೆಯಲ್ಲಿಗೆ. ಗ್ರಾಮದ ಸರ್ಕಾರಿ ಶಾಲೆಯನ್ನ ಅಭಿವೃದ್ದಿ ಮಾಡಿದ ಹೊಸಕಟ್ಟಿ ಗ್ರಾಮಸ್ಥರಿಗೆ ನಮ್ಮದೊಂದು ಸಲಾಂ.

    https://www.youtube.com/watch?v=o0_5VconZHU

  • ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಬೆಳೆಸಲು ಗ್ರಾಮವನ್ನೇ ದತ್ತು ಪಡೆದ್ರು

    ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಬೆಳೆಸಲು ಗ್ರಾಮವನ್ನೇ ದತ್ತು ಪಡೆದ್ರು

    ರಾಯಚೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಹಾಗೂ ಅಧ್ಯಾಪಕರ ಪರಿಶ್ರಮದಿಂದ ಮಾದರಿ ಕಾಲೇಜಾಗಿದೆ. ಜೊತೆಗೆ ಈ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಬೆಳೆಸಲು ಒಂದು ಗ್ರಾಮವನ್ನೇ ದತ್ತು ತೆಗೆದುಕೊಂಡಿದ್ದಾರೆ.

    ರಾಯಚೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದೀಗ ಖಾಸಗಿ ಕಾಲೇಜನ್ನೇ ಮೀರಿಸುವಂತೆ ನಿರ್ಮಾಣವಾಗಿದೆ. ಇದಕ್ಕೆಲ್ಲಾ ಕಾರಣ ಪ್ರಾಂಶುಪಾಲ ಪ್ರಾಣೇಶ್ ಕುಲಕರ್ಣಿ ಹಾಗೂ ಅಧ್ಯಾಪಕವೃಂದ. ವಿದ್ಯಾರ್ಥಿಗಳ ಸಮವಸ್ತ್ರದಿಂದ ಹಿಡಿದು ಸಿಸಿ ಕ್ಯಾಮೆರಾ, ವೈಫೈ ಅಳವಡಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಎಲ್ಲವೂ ಇಲ್ಲಿ ಇದೆ. ವಿದ್ಯಾರ್ಥಿಗಳಿಗಾಗಿ ಉಪನ್ಯಾಸಕರು ಆಸಕ್ತಿಯಿಂದ ಓವರ್ ಟೈಮ್ ಕೆಲಸ ಮಾಡ್ತಿದ್ದಾರೆ.

    ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಬೆಳೆಸಲು ರಾಯಚೂರು ತಾಲೂಕಿನ ಗೋನಾಳ ಗ್ರಾಮವನ್ನ ದತ್ತು ತೆಗೆದುಕೊಂಡಿದ್ದಾರೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈಗಾಗಲೇ ಉಪನ್ಯಾಸಕರೇ ತಮ್ಮ ಸ್ವಂತ ಖರ್ಚಿನಲ್ಲಿ ಶೌಚಾಲಯ ನಿರ್ಮಿಸಿ ಕೊಟ್ಟಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ ಗ್ರಾಮೀಣ ಭಾಗದ 80 ಯುವಕರಿಗೆ ಸ್ವಯಂ ಉದ್ಯೋಗ ತರಬೇತಿ ನೀಡುತ್ತಿದ್ದು, 80 ಜನರಿಗೆ ಉಪನ್ಯಾಸಕರೇ ತಮ್ಮ ಸ್ವಂತ ಖರ್ಚಿನಲ್ಲಿ `ಗುರು ಪ್ರಸಾದ’ ಹೆಸರಿನಲ್ಲಿ ಊಟದ ವ್ಯವಸ್ಥೆ ಮಾಡಿದ್ದಾರೆ.

    ಪುಸ್ತಕ ಜೋಳಿಗೆ ಕಾರ್ಯಕ್ರಮದ ಮೂಲಕ ಸಾಹಿತಿಗಳು, ಸಾರ್ವಜನಿಕರಿಂದ ಪುಸ್ತಕ ಸಂಗ್ರಹಿಸಿ ಗ್ರಂಥಾಲಯ ತುಂಬಿಸಿದ್ದಾರೆ.

  • ವಿಭಿನ್ನವಾಗಿ ಹಸಿ ಮೇವು ಬೆಳೆಸಿ ಹೈನುಗಾರಿಕೆಯಲ್ಲಿ ಯಶಸ್ವಿಯಾದ್ರು ಚಿತ್ರದುರ್ಗದ ಸುರೇಶ್

    ವಿಭಿನ್ನವಾಗಿ ಹಸಿ ಮೇವು ಬೆಳೆಸಿ ಹೈನುಗಾರಿಕೆಯಲ್ಲಿ ಯಶಸ್ವಿಯಾದ್ರು ಚಿತ್ರದುರ್ಗದ ಸುರೇಶ್

    ಚಿತ್ರದುರ್ಗ: ಇತ್ತೀಚಿನ ದಿನಗಳಲ್ಲಿ ಅನ್ನದಾತರ ದನ-ಕರುಗಳಿಗೆ ಒಣ ಮೇವು ಸಿಗೋದೇ ಕಷ್ಟ. ಇಂತಹ ಸಂದರ್ಭದಲ್ಲಿ ಪ್ರತಿ ನಿತ್ಯ ಜಾನುವಾರುಗಳಿಗೆ ವಿಭಿನ್ನ ರೀತಿಯಲ್ಲಿ ಹಸಿರು ಹುಲ್ಲು ನೀಡ್ತಾರೆ. ಅದೂ ಪೌಷ್ಠಿಕಾಂಶಯುಕ್ತ ಹುಲ್ಲು ಹಾಕ್ತಾರೆ ಚಿತ್ರದುರ್ಗದ ನಮ್ಮ ಪಬ್ಲಿಕ್ ಹೀರೋ.

    ಹೌದು. ಜಾನುವಾರುಗಳನ್ನ ಮಾರಾಟ ಮಾಡ್ತಾ ಇರೋ ರೈತರ ನಡುವೆ ಸ್ವಯಂ ಆವಿಸ್ಕರಿಸಿದ ಮೇವಿನಿಂದ ಹೈನು ಕೃಷಿಯಲ್ಲಿ ಗುರುತಿಸಿಕೊಂಡಿದ್ದಾರೆ ಚಿತ್ರದುರ್ಗದ ಸುರೇಶ್. ಜಿಲ್ಲೆ ಇದೀಗ ರಣಮಳೆಗೆ ಸಾಕ್ಷಿಯಾಗಿದೆ. ಮೊದಲೇ ಬರದ ನಾಡು. ಬೇಸಿಗೆಯಲ್ಲಿ ಇಲ್ಲಿ ಜಾನುವಾರುಗಳಿಗೆ ಹಸಿಮೇವು ಸಿಗೋದು ಕಷ್ಟ. ಹೀಗಾಗಿ ಚಳ್ಳಕೆರೆ ತಾಲೂಕಿನ ಗೊರ್ಲಕಟ್ಟೆಯ ಸುರೇಶ್ ಹೊಸ ದಾರಿ ಕಂಡ್ಕೊಂಡಿದ್ದಾರೆ.

    ಇವರು ಟ್ರೇಗಳಲ್ಲಿ ಮೇವು ಬೆಳೆಯುತ್ತಿದ್ದಾರೆ. ಮೊಳಕೆಯೊಡೆಸಿದ ಮೆಕ್ಕೆಜೋಳವನ್ನು ಟ್ರೇನಲ್ಲಿಟ್ಟು ಹೈಡ್ರೋಪೋನಿಕ್ಸ್ ಘಟಕದಲ್ಲಿ ಪೋಷಣೆ ಮಾಡಲಾಗುತ್ತದೆ. ಈ ವಿಧಾನದಲ್ಲಿ ನೀರು ಕಡಿಮೆ ಬೇಕಾಗುತ್ತದೆ. ಕೇವಲ 10 ದಿನಗಳಲ್ಲಿ ಹಸಿ ಮೇವು ಕೈಗೆ ಸಿಗುತ್ತದೆ. ಒಂದು ಟ್ರೇಯಿಂದ ಐದಾರು ಕೇಜಿ ಮೇವು ಉತ್ಪತ್ತಿಯಾಗುತ್ತದೆ. ಇದನ್ನ ಬೇರು ಸಮೇತ ಜಾನುವಾರುಗಳಿಗೆ ಹಾಕುತ್ತಾರೆ.

    ಸುಮಾರು ನಾಲ್ಕೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ 16 ಯೂನಿಟ್ ಮಾಡಿ 1075 ಟ್ರೇಗಳಲ್ಲಿ ಹಸಿ ಮೇವು ಬೆಳೆಯುತ್ತಿರುವ ಸುರೇಶ್, ನೂರಕ್ಕೂ ಹೆಚ್ಚು ಹಸುಗಳಿಗೆ ಇದೇ ಮೇವನ್ನು ನೀಡ್ತಿದ್ದಾರೆ. ಹೈನುಗಾರಿಕೆಯಲ್ಲಿ ಯಶೋಮಾರ್ಗ ಹಿಡಿದಿದ್ದಾರೆ.

    ಒಟ್ಟಿನಲ್ಲಿ ಸುರೇಶ್ ಕೇವಲ ಕೃಷಿಯಲ್ಲದೆ ಹೈನುಗಾರಿಕೆಯಿಂದಲೂ ಬರದ ನಾಡಿನಲ್ಲಿ ಉತ್ತಮ ಆದಾಯ ಪಡೀಬಹುದು ಅನ್ನೋದನ್ನ ಸಾಧಿಸಿ ತೋರಿಸಿದ್ದಾರೆ. ಇವರ ಮೇವು ಕೃಷಿ ಮೆಚ್ಚಲೆಬೇಕು ಎಂದು ಸ್ಥಳೀಯರು ಆಶೀಸುತ್ತಿದ್ದಾರೆ.

    https://www.youtube.com/watch?v=2xfB8A-_3Q0

  • ಎಂಜಿನಿಯರಿಂಗ್ ಓದಿದ್ರೂ ಗೋವು, ರೈತರ ರಕ್ಷಣೆಗೆ ನಿಂತ ಚಿಕ್ಕಮಗಳೂರಿನ ಶಿವಪ್ರಸಾದ್

    ಎಂಜಿನಿಯರಿಂಗ್ ಓದಿದ್ರೂ ಗೋವು, ರೈತರ ರಕ್ಷಣೆಗೆ ನಿಂತ ಚಿಕ್ಕಮಗಳೂರಿನ ಶಿವಪ್ರಸಾದ್

    ಚಿಕ್ಕಮಗಳೂರು: ನಿಜವಾದ ಗೋವು ರಕ್ಷಕ ಅಂದ್ರೆ ಇವತ್ತಿನ ಪಬ್ಲಿಕ್ ಹೀರೋ ಆದ ಚಿಕ್ಕಮಗಳೂರಿನ ಶಿವಪ್ರಸಾದ್. ಗಂಡು ಕರು ಅನ್ನೋ ಕಾರಣಕ್ಕೆ ಆ ಕರುವನ್ನ ಕಸಾಯಿಖಾನೆಗೆ ಕೊಡೋದನ್ನ ನೋಡಿ ಮನನೊಂದು ಅವತ್ತಿನಿಂದಲೇ ಗೋಶಾಲೆ ಆರಂಭಿಸಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಜ್ಜಂಪುರ ನಿವಾಸಿಯಾದ ಶಿವಪ್ರಸಾದ್ ಮೆಕಾನಿಕಲ್ ಎಂಜಿನಿಯರ್ ಓದಿದ್ದಾರೆ. ಆದ್ರೂ ಗೋವು ಹಾಗೂ ರೈತರ ರಕ್ಷಣೆಗೆ ನಿಂತಿದ್ದಾರೆ. ಗಂಡು ಕರು ಅನ್ನೋ ಕಾರಣಕ್ಕೆ ಕಸಾಯಿಖಾನೆಗೆ ಕರೆದೊಯ್ಯುತ್ತಿದ್ದದನ್ನ ಕಂಡು ಅತೀವವಾಗಿ ಮನನೊಂದು ಸ್ವಂತ ಖರ್ಚಿನಲ್ಲಿ ಗೋಶಾಲೆ ತೆರೆದಿದ್ದಾರೆ.

    ಈ ಗೋಶಾಲೆಗೆ ಯಾರು ಬೇಕಾದ್ರು ತಮ್ಮ ದನಕರುಗಳನ್ನ ತಂದು ಇಲ್ಲಿ ಬಿಡಬಹುದು. ಸದ್ಯಕ್ಕೆ ಇಲ್ಲಿ ಹತ್ತು ರಾಸುಗಳಿವೆ. ದೊಡ್ಡ ಪ್ರಮಾಣದಲ್ಲಿ ಗೋಶಾಲೆ ತೆರೆಯಬೇಕೆಂದೇ ತಮ್ಮ ಜಮೀನಿನಲ್ಲಿ ಒಂದು ಎಕರೆಯಷ್ಟು ಭೂಮಿಯನ್ನ ಮೀಸಲಿಟ್ಟಿದ್ದಾರೆ. ಹಾಗೆ ಗೋವಿನ ಸಗಣಿ ಹಾಗೂ ಗಂಜಲದಿಂದ 20ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳನ್ನ ಮಾಡಿ ಸ್ವಂತ ಕಂಪನಿಯೊಂದನ್ನ ನಿರ್ಮಿಸಿದ್ದಾರೆ.

    ಅಷ್ಟೇ ಅಲ್ಲ ರೈತರೊಂದಿಗೆ ಕೈಜೋಡಿಸಿ 128 ಎಕರೆಯಲ್ಲಿ ಸಾವಯವ ಗೊಬ್ಬರ ಮಾತ್ರ ಬಳಸಿ ತರಕಾರಿ ಬೆಳೆಯುತ್ತಿದ್ದಾರೆ. ಈ ತರಕಾರಿಯನ್ನ ಬೆಂಗಳೂರಿನ ದೊಡ್ಡ-ದೊಡ್ಡ ಅಪಾರ್ಟ್‍ಮೆಂಟ್‍ಗೆ ಪೂರೈಸ್ತಿದ್ದಾರೆ. ಮಾರ್ಕೆಟ್ ರೇಟ್‍ಗಿಂತ ಶೇ.25ರಷ್ಟು ಹೆಚ್ಚಿನ ಹಣವನ್ನ ರೈತರಿಗೆ ಕೊಟ್ಟು, ತಾವೂ ಬದುಕುತ್ತಿದ್ದಾರೆ. ಇವರ ಈ ಸಹಕಾರದ ಯೋಜನೆಯಿಂದ ಪಾಳುಬಿದ್ದ ಭೂಮಿ ಈಗ ಕೃಷಿ ಭೂಮಿಯಾಗಿದೆ. ಕೆಲಸಕ್ಕಾಗಿ ನಗರಗಳತ್ತ ಹೋಗ್ತಿದ್ದ ಯುವಕರು ಕೃಷಿಯತ್ತ ಮುಖಮಾಡಿದ್ದಾರೆ.

    ಒಟ್ಟಿನಲ್ಲಿ ಗೋವನ್ನ ಹಿಂಸಿಸದೆ ಪೋಷಿಸಿ ಹೀಗೂ ಬದುಕು ಕಟ್ಟಿಕೊಳ್ಳಬಹುದು ಅಂತ ತೋರಿಸಿರೋ ಶಿವಪ್ರಸಾದ್‍ಗೆ ನಮ್ಮದೊಂದು ಸಲಾಂ.

  • ಖಾಕಿ ತೊಟ್ಟರೂ ಮಕ್ಕಳಿಗೆ ಪಾಠ- ಸಾಮಾಜಿಕ ಅನಿಷ್ಠಗಳ ಬಗ್ಗೆ ಜಾಗೃತಿ

    ಖಾಕಿ ತೊಟ್ಟರೂ ಮಕ್ಕಳಿಗೆ ಪಾಠ- ಸಾಮಾಜಿಕ ಅನಿಷ್ಠಗಳ ಬಗ್ಗೆ ಜಾಗೃತಿ

    ಹಾವೇರಿ: ಇವತ್ತಿನ ದಿನಗಳಲ್ಲಿ ಮಕ್ಕಳಿಗೆ ಕಾನೂನು ಸುವ್ಯವಸ್ಥೆ, ಮೂಢನಂಬಿಕೆಗಳ ಬಗ್ಗೆ ತಿಳಿ ಹೇಳುವವರೇ ಕಡಿಮೆ. ಆದ್ರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಪೊಲೀಸ್ ಪೇದೆ ಅಶೋಕ್ ಎಂಬವರು ತಮ್ಮ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಕಾನೂನು ಜಾಗೃತಿ ಪಾಠ ಮಾಡುತ್ತಿದ್ದಾರೆ.

    ಹೌದು, ಅಶೋಕ್ ಕೊಂಡ್ಲಿ ಹಾವೇರಿಯ ಹಾನಗಲ್ ಪೊಲೀಸ್ ಠಾಣೆಯಲ್ಲಿ ಹವಾಲ್ದಾರರಾಗಿದ್ದಾರೆ. ಪೊಲೀಸ್ ಡ್ರೆಸ್‍ನಲ್ಲಿ ಇರೋವ್ರು ಹೀಗ್ಯಾಕೆ ಪಾಠ ಮಾಡ್ತಿದ್ದಾರೆ ಅಂತ ಅಚ್ಚರಿ ಪಡಬೇಡಿ. ಯಾಕಂದ್ರೆ ಇದು ಅವರ ಸಾಮಾಜಿಕ ಕಾಳಜಿಯಾಗಿದೆ.

    ಮೂಲತಃ ಧಾರವಾಡದ ಅಮ್ಮಿನಭಾವಿಯವರಾದ ಅಶೋಕ್ 1994ರಲ್ಲಿ ಪೊಲೀಸ್ ಪೇದೆ ಆಗಿ ಸೇರಿ 23 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಖಾಕಿ ತೊಟ್ಟಿದ್ದರೂ ಸಾಮಾಜಿಕ ಸೇವೆಯೆಡೆಗಿನ ತುಡಿತ ನಿಂತಿಲ್ಲ. ತಾವು ಸೇವೆ ಸಲ್ಲಿಸಿರೋ ಕಡೆಯಲ್ಲೆಲ್ಲಾ ಬಿಡುವಿನ ವೇಳೆ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಎರಡ್ಮೂರು ಗಂಟೆ ಮಕ್ಕಳಿಗೆ ಕಾನೂನು, ರಸ್ತೆ ನಿಯಮ, ಮೂಢನಂಬಿಕೆಗಳು, ಬಾಲ್ಯವಿವಾಹ, ದೌರ್ಜನ್ಯದಂತ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

    ಹೀಗೆ ಎರಡು ಸಾವಿರಕ್ಕೂ ಅಧಿಕ ಶಾಲೆ, ಸಭೆ, ಸಮಾರಂಭಗಳಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸಿದ್ದಾರೆ. ಅಶೋಕ್ ಕಾರ್ಯಕ್ಕೆ ಜಿಲ್ಲಾ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಇವರು ನಾ ಮರೆಯಲಿ ಹ್ಯಾಂಗ, ಹನಿಗವನಗಳು, ಮೋಡಗಳಿಲ್ಲದ ಮುಗಿಲು ಅಂತ ಮೂರು ಪುಸ್ತಕಗಳನ್ನ ಹೊರ ತಂದಿದ್ದಾರೆ. ಶೀಘ್ರವೇ ಕಾದಂಬರಿಯೊಂದನ್ನ ಹೊರತರಲಿದ್ದಾರೆ. ಜೊತೆಗೆ ಹಾಸ್ಯ ಕಲಾವಿದರೂ ಆಗಿದ್ದಾರೆ.

     

  • ಹಸಿರಿನ ಮಹತ್ವ ಸಾರುತ್ತಿದೆ ಸರ್ಕಾರಿ ಶಾಲೆ- ಶಾಲೆಯನ್ನ ಸಸ್ಯಕಾಶಿ ಮಾಡಿದ ಕೋಲಾರದ ಹೆಡ್‍ಮೇಷ್ಟ್ರು ರಮೇಶ್

    ಹಸಿರಿನ ಮಹತ್ವ ಸಾರುತ್ತಿದೆ ಸರ್ಕಾರಿ ಶಾಲೆ- ಶಾಲೆಯನ್ನ ಸಸ್ಯಕಾಶಿ ಮಾಡಿದ ಕೋಲಾರದ ಹೆಡ್‍ಮೇಷ್ಟ್ರು ರಮೇಶ್

    ಕೋಲಾರ: ಸರ್ಕಾರಿ ಶಾಲೆಗಳಿಗೆ ಒಂದ್ಕಡೆ ಖಾಸಗಿ ಶಾಲೆಗಳ ಪೈಪೋಟಿ, ಮತ್ತೊಂದು ಕಡೆ ಸರ್ಕಾರದಿಂದಲೇ ಉದಾಸೀನ. ಇದರ ನಡುವೆಯೂ ಕೋಲಾರದ ಮಾಲೂರು ತಾಲೂಕಿನ ಪುರ ಅನ್ನೋ ಗ್ರಾಮದ ಸರ್ಕಾರಿ ಶಾಲೆ ರಾಜ್ಯದ ಗಮನ ಸೆಳೆದಿದೆ. ಜಿಲ್ಲಾಮಟ್ಟದಲ್ಲಿ ಪರಿಸರ ಮಿತ್ರ ಶಾಲೆ ಅಂತ ಹ್ಯಾಟ್ರಿಕ್ ಪ್ರಶಸ್ತಿ ಪಡೆದಿದೆ. ಇದಕ್ಕೆ ಕಾರಣ ಹೆಡ್‍ಮೇಷ್ಟ್ರು ರಮೇಶ್.

    ಹೌದು. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪ್ರವೇಶ ಮಾಡ್ತಿದ್ದಂತೆ ಹಸಿರ ಸಿರಿ ಕಣ್ಮನಕ್ಕೆ ಮುದ ನೀಡುತ್ತೆ. ಮಾವು, ನೇರಳೆ, ಪಪ್ಪಾಯ, ಗಸಗಸೆ, ನುಗ್ಗೆ, ಟೀಕ್, ಸ್ವಿಲರ್ ಮರಗಳು ಸೇರಿದಂತೆ ವಿವಿಧ ಬಗೆಯ ಹೂ-ಹಣ್ಣಿನ ಮರ-ಗಿಡಗಳು ಇಲ್ಲಿವೆ. ದೊಡ್ಡಪತ್ರೆ, ಮೆಳೆಕಾಳು, ಲೋಳೆಸರ, ಶುಂಠಿ ಸೇರಿದಂತೆ ಔಷಧೀಯ ಸಸ್ಯಗಳ ಪರಿಮಳ ಬರುತ್ತೆ.

    ಕನ್ನಡ ಮಾಧ್ಯಮದ ಈ ಕಿರಿಯ ಶಾಲೆಯಲ್ಲಿ 1 ರಿಂದ 5 ನೇ ತರಗತಿವರೆಗೆ 62 ವಿದ್ಯಾರ್ಥಿಗಳಿದ್ದಾರೆ. ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಇರಬೇಕು ಅನ್ನೋದನ್ನ ಮನಗಂಡ ರಮೇಶ್ ಸರ್ ಮಕ್ಕಳು, ಸಹ ಶಿಕ್ಷಕರ ಜೊತೆ ಸೇರಿ ಶಾಲೆಯನ್ನ ಸಸ್ಯಕಾಶಿ ಮಾಡಿದ್ದಾರೆ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡುವ ಜಿಲ್ಲಾ ಮಟ್ಟದಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಗರಿಯನ್ನ ತನ್ನದಾಗಿಸಿಕೊಂಡಿದೆ.

    ಮಧ್ಯಾಹ್ನದ ಬಿಸಿಯೂಟಕ್ಕೆ ಇಲ್ಲಿನ ತರಕಾರಿಗಳನ್ನ ಬಳಸಲಾಗುತ್ತಿದೆ. ಇಂಗು ಗುಂಡಿ, ಮಳೆಕೊಯ್ಲು ಪದ್ಧತಿ ಮತ್ತು ತುಂತುರು ನೀರಾವರಿ ಪದ್ಧತಿ ಮೂಲಕ ಬರದಲ್ಲೂ ಶಾಲೆಯ ಆವರಣ ಹಸಿರಸಿರಿಯ ಹೊದಿಕೆ ಹೊಂದಿದೆ. ಇನ್ನು ಶಾಲಾ ಆವರಣದ ಕಸವನ್ನ ಗೊಬ್ಬರವಾಗಿ ಮರುಬಳಕೆ ಮಾಡುವಂತಹ ತಂತ್ರಜ್ಞಾನವನ್ನ ಅಳವಡಿಸಿದ್ದಾರೆ.

    ಬೃಹದಾಕಾರವಾಗಿ ಬೆಳೆದಿರುವ ಈ ಮರಗಳಲ್ಲಿ ಪಕ್ಷಿಗಳ ಕಲರವ ಸಹ ಇದೆ. ಶಾಲೆಯ ವಾತಾವರಣದಿಂದ ಮಕ್ಕಳು ಚಕ್ಕರ್ ಹಾಕದೆ ಶಾಲೆಗೆ ಬರ್ತಿದ್ದಾರೆ.

  • ಓದಿಸಿದ್ರೆ ಮಾತ್ರ ಮದುವೆಯಾಗ್ತೀನೆಂದು ಷರತ್ತಿಟ್ಟು ಎಂಜಿನಿಯರ್ ಆದ ಶಿವಮೊಗ್ಗದ ಕುಮುದಾ

    ಓದಿಸಿದ್ರೆ ಮಾತ್ರ ಮದುವೆಯಾಗ್ತೀನೆಂದು ಷರತ್ತಿಟ್ಟು ಎಂಜಿನಿಯರ್ ಆದ ಶಿವಮೊಗ್ಗದ ಕುಮುದಾ

    ಶಿವಮೊಗ್ಗ: ಮನಸಿದ್ದರೆ ಮಾರ್ಗ ಅಂತ ಸಾಧನೆ ಮಾಡಿದವರ ಬಗ್ಗೆ ಇದೇ ಪಬ್ಲಿಕ್ ಹೀರೋನಲ್ಲಿ ಹಲವು ಬಾರಿ ತೋರಿಸಿದ್ದೇವೆ. ಇವತ್ತು ಅಂಥದ್ದೇ ಸ್ಫೂರ್ತಿದಾಯಕ ಸ್ಟೋರಿ ಶಿವಮೊಗ್ಗದಿಂದ ಬಂದಿದೆ. ಹಕ್ಕಿಪಿಕ್ಕಿ ಜನಾಂಗದಲ್ಲಿ ಜನಿಸಿದ ಇವರು ತಮ್ಮ ಓದಿಗಾಗಿ ಮದುವೆಗೆ ಷರತ್ತು ಇಟ್ಟು ಎಂಜಿನಿಯರ್ ಆಗಿದ್ದಾರೆ. ಅಲ್ಲದೆ ತಮ್ಮ ಜನಾಂಗದ ಸಂಸ್ಕೃತಿ ಪಸರಿಸೋ ಕೆಲಸವನ್ನೂ ಮಾಡ್ತಿದ್ದಾರೆ.

    ಶಿವಮೊಗ್ಗದ ಸಾಗರ ತಾಲೂಕಿನ ಸದಾಶಿವಪುರ ಗ್ರಾಮದ ಹಕ್ಕಿಪಿಕ್ಕಿ ಜನಾಂಗದ ಕುಮುದಾ ಅವರು ಕುಗ್ರಾಮದಲ್ಲಿ ಹುಟ್ಟಿ ಜೋಪಡಿಗಳಲ್ಲಿ ವಾಸಿಸುತ್ತಲೇ ಹೈಸ್ಕೂಲ್ ಮುಗಿಸಿದ್ದರು. ಆದ್ರೆ ಮನೆಯವರು ಮದುವೆಗೆ ಯತ್ನಿಸಿದಾಗ ಓದಿಸುವ ಭರವಸೆ ನೀಡಿದ್ರೆ ಮಾತ್ರ ಮದುವೆ ಆಗುತ್ತೇನೆ ಎಂಬ ಷರತ್ತು ಇಟ್ಟರಂತೆ. ಕೊಟ್ಟ ಮಾತಿನಂತೆ ಪತಿ ಸುಶೀಲಪ್ಪ ಸಹಕಾರದಿಂದ ಕುಮುದಾ ಅವ್ರು ಎಂಜಿನಿಯರಿಂಗ್ ಓದಿ ಜೋಗದ ಕೆಪಿಟಿಸಿಎಲ್‍ನಲ್ಲಿ ಈಗ ಅಸಿಸ್ಟೆಂಟ್ ಎಂಜಿನಿಯರ್ ಆಗಿದ್ದಾರೆ.

    ಅಷ್ಟಕ್ಕೆ ಸುಮ್ಮನಾಗದೆ ಎಂಎ, ಎಂಫಿಲ್ ಮಾಡಿದ್ದಾರೆ. ಹಕ್ಕಿಪಿಕ್ಕಿ ಸೇರಿದಂತೆ ಅಲೆಮಾರಿ ಜನಾಂಗದ ಸಂಸ್ಕøತಿ ಅಧ್ಯಯನ ಮಾಡ್ತಿದ್ದಾರೆ. ಹಕ್ಕಿಪಿಕ್ಕಿ ಜನಾಂಗದ ಬಗ್ಗೆ ಈಗಾಗಲೇ ಮೂರು ಪುಸ್ತಕಗಳನ್ನೂ ಬರೆದಿದ್ದಾರೆ. ಇದಕ್ಕಾಗಿ ಒಡಿಶಾ, ತೆಲಂಗಾಣ ಇನ್ನಿತರ ರಾಜ್ಯಗಳಲ್ಲಿ ಸುತ್ತಾಡಿದ್ದಾರೆ. ಈಗ ಹಕ್ಕಿಪಿಕ್ಕಿ ಪದಕೋಶ ಸಿದ್ಧಪಡಿಸ್ತಿದ್ದಾರೆ. ನನ್ನಂತೆ ನಮ್ಮ ಸಮುದಾಯದ ಮಕ್ಕಳೂ ವಿದ್ಯಾಭ್ಯಾಸ ಮಾಡಿ, ಉತ್ತಮ ಜೀವನ ಕಟ್ಟಿಕೊಳ್ಳಬೇಕು ಅಂತಿರೋ ಕುಮುದಾ ಕಾರ್ಯಕ್ಕೆ ಹಕ್ಕಿಪಿಕ್ಕಿ ಜನಾಂಗ ಭೇಷ್ ಅಂತಿದೆ.

    ಕುಮುದಾ ಅವ್ರ ಈ ಕಾರ್ಯಕ್ಕೆ ಹಲವು ಪುರಸ್ಕಾರಗಳು ಬಂದಿವೆ. ಮತ್ತಷ್ಟು ಸಾಧನೆ ಮಾಡಬೇಕು ಅನ್ನೋ ಅದಮ್ಯ ಉತ್ಸಾಹ ಅವರದ್ದಾಗಿದೆ.

    https://www.youtube.com/watch?v=nvVWyOz6TbQ

  • ಕೈ, ಕಾಲು ಇಲ್ಲದಿದ್ರೂ ಸೂಪರ್ ಸ್ವಿಮ್ಮರ್- ರಷ್ಯಾದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ತಿಪ್ಪಣ್ಣ

    ಕೈ, ಕಾಲು ಇಲ್ಲದಿದ್ರೂ ಸೂಪರ್ ಸ್ವಿಮ್ಮರ್- ರಷ್ಯಾದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ತಿಪ್ಪಣ್ಣ

    ಬಳ್ಳಾರಿ: ದೇಹದ ಎಲ್ಲಾ ಅಂಗಗಳು ಸರಿಯಾಗಿದ್ರೂ ಕೂಡ ಕೆಲವರಿಗೆ ಹತ್ತು ನಿಮಿಷ ಈಜಾಡೋದು ಕಷ್ಟ. ಆದ್ರೆ ಇಲ್ಲೊಬ್ಬರು ಕೈ ಕಾಲು ಇಲ್ಲದಿದ್ರೂ ಒಂದು ಗಂಟೆಗೂ ಹೆಚ್ಚು ಕಾಲ ಈಜಾಡ್ತಾರೆ. ಈ ವಿಕಲಚೇತನ ಈಜುಪಟು ರಷ್ಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.

    ಹೌದು. ಇವರ ಹೆಸರು ತಿಪ್ಪಣ್ಣ. ಮೂಲತಃ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನವರು. ಜೆಸ್ಕಾಂನಲ್ಲಿ ಲೈನ್‍ಮನ್ ಆಗಿದ್ದಾರೆ. ಹೆಂಡತಿ ಹಾಗೂ ಇಬ್ಬರು ಮಕ್ಕಳ ಸಂಸಾರವಿದೆ. 7 ವರ್ಷಗಳ ಹಿಂದೆ ಕೆಲಸ ಮಾಡುವಾಗ ವಿದ್ಯುತ್ ಅವಘಡದಲ್ಲಿ ಎರಡೂ ಕಾಲು ಮತ್ತು ಒಂದು ಕೈ ಕಳೆದುಕೊಂಡ್ರು. ಮತ್ತೊಂದು ಕೈಯನ್ನು ಜೋಡಿಸಿದ್ದಾರೆ. ಆದ್ರೆ ಅದು ಶಕ್ತಿಹೀನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಿಪ್ಪಣ್ಣ ಅವರು ಎದೆಗುಂದದೇ ದೊಡ್ಡ ಈಜುಪಟುವಾಗಿ ಬೆಳೆದಿದ್ದಾರೆ.

    ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಬನಶಂಕರಿ ಬಳಿಯ ಜ್ಯೋತಿ ಕೇಂದ್ರಿಯ ಶಾಲೆಯಲ್ಲಿ ಈಜು ತರಬೇತಿ ಪಡೆಯುತ್ತಿದ್ದಾರೆ. 2015ರಲ್ಲಿ ರಷ್ಯಾದಲ್ಲಿ ನಡೆದ ವಿಶ್ವ ವಿಕಲಚೇತನರ ಈಜು ಸ್ಪರ್ಧೆಯಲ್ಲಿ ಭಾರತವನ್ನ ಪ್ರತಿನಿಧಿಸಿ ಕಂಚಿನ ಪದಕ ಗೆದ್ದಿದ್ದಾರೆ.

    ತಿಪ್ಪಣ್ಣ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದಿದ್ದಾರೆ. ಈ ವರ್ಷ ನಡೆಯಲಿರುವ ವಿಶ್ವ ವಿಕಲಚೇತನರ ಕ್ರೀಡಾ ಸ್ಪರ್ಧೆಯಲ್ಲಿ ಭಾರತದ ಪ್ಯಾರಾ ಈಜುಪಟುವಾಗಿ ಭಾಗವಹಿಸಲಿದ್ದಾರೆ. ತಿಪ್ಪಣ್ಣ 2020ರಲ್ಲಿ ನಡೆಯುವ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಭಾರತವನ್ನ ಪ್ರತಿನಿಧಿಸಲಿದ್ದಾರೆ. ಇವರ ಕನಸು ನನಸಾಗಲಿ ಅನ್ನೋದು ನಮ್ಮ ಆಶಯ.

  • ಎಂಜಿನಿಯರಿಂಗ್ ಓದಿದ್ರೂ ಕಬ್ಬಿನ ಹಾಲು ಮಾರಾಟ: ಕೆಲ್ಸ ಸಿಗದಿದ್ರೂ ಹಮ್ಮು, ಬಿಮ್ಮಿಲ್ಲದ ಸರದಾರ!

    ಎಂಜಿನಿಯರಿಂಗ್ ಓದಿದ್ರೂ ಕಬ್ಬಿನ ಹಾಲು ಮಾರಾಟ: ಕೆಲ್ಸ ಸಿಗದಿದ್ರೂ ಹಮ್ಮು, ಬಿಮ್ಮಿಲ್ಲದ ಸರದಾರ!

    ಬಳ್ಳಾರಿ: ಎಂಜಿನಿಯರಿಂಗ್ ಓದಿದವರು ಎಂಜಿನಿಯರೇ ಆಗ್ಬೇಕು ಅಂತಾ ಆಸೆ ಪಡ್ತಾರೆ. ಕೆಲಸ ಸಿಗದಿದ್ರೆ ಕೆಲವರು ಬೇಸರ ಮಾಡಿಕೊಂಡು, ಆತ್ಮಹತ್ಯೆ ಹಾದಿ ಹಿಡೀತಾರೆ. ಆದರೆ ಬಳ್ಳಾರಿಯ ಈ ನಮ್ಮ ಹೀರೋ ಕೆಲಸ ಸಿಗದಿದ್ರೂ ಪರವಾಗಿಲ್ಲ ಅಂತಾ ಕಬ್ಬಿನ ಹಾಲು ಮಾರಿ ಬದುಕು ಕಟ್ಟಿಕೊಂಡಿದ್ದಾರೆ.

    ಇವರ ಹೆಸರು ಗೋಪಾಲ ದಾಸರ. ಶ್ರೀಕೃಷ್ಣ ಪರಮಾತ್ಮನಿಗೆ ಹಾಲು, ಬೆಣ್ಣೆ ಅಂದ್ರೆ ಎಷ್ಟು ಇಷ್ಟವೋ ಇವರಿಗೂ ಸಹ ಕಬ್ಬಿನ ಹಾಲು ಅಂದ್ರೆ ಅಷ್ಟೇ ಇಷ್ಟ. ಅದಕ್ಕೆ ಕಬ್ಬಿನ ಹಾಲು ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ.

    ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದ ಗೋಪಾಲ ದಾಸರ ಡಿಪ್ಲೊಮೋ ಜೊತೆ ಸಿವಿಲ್ ಎಂಜಿನಿಯರಿಂಗ್ ಓದಿದ್ರೂ ಕೆಲಸ ಸಿಕ್ಕಿಲ್ಲ. ಹಾಗಂತ ಇವರು ಬೇಜಾರು ಮಾಡಿಕೊಳ್ಳಲಿಲ್ಲ. ಅಪ್ಪ, ಅಮ್ಮ ಶುರು ಮಾಡಿದ್ದ ಕಬ್ಬಿನ ಹಾಲಿನ ವ್ಯಾಪಾರವನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

    ಅಮ್ಮನ ಹೆಸರಿನಲ್ಲಿ 50 ಸಾವಿರ ರೂಪಾಯಿ ಸಾಲ ಮಾಡಿ ಹೊಸ ಯಂತ್ರ ಖರೀದಿ ಮಾಡಿದ್ದಾರೆ. ಈಗ ಕಾಂಕ್ರೀಟ್ ಟೆಕ್ನಾಲಜಿಯಲ್ಲಿ ಎಂಟೆಕ್ ಮಾಡಬೇಕೆಂಬ ಆಸೆಯಲ್ಲಿದ್ದಾರೆ. ಜೊತೆಗೆ ಕೆಎಎಸ್ ಅಥವಾ ಐಎಎಸ್ ಮಾಡುವ ಉತ್ಸಾಹ ಹೊಂದಿದ್ದಾರೆ.

    ಗೋಪಾಲ ತಾವಷ್ಟೇ ಅಲ್ಲ, ಬಿಕಾಂ ಓದಿರೋ ತನ್ನ ಸಹೋದರ ಶ್ರೀನಿವಾಸಗೂ ಕಬ್ಬಿನ ಹಾಲು ಮಾರಾಟ ಮಾಡೋದನ್ನ ಕಲಿಸಿಕೊಟ್ಟು ಜೀವನ ರೂಪಿಸಿದ್ದಾರೆ. ಇವರ ಈ ಸಾಧನೆ ನಿರುದ್ಯೋಗಿಗಳಿಗೆ ಮಾದರಿಯಾಗಿದೆ.

    ನಾನು ತುಂಬಾ ಓದಿದ್ದೀನಿ. ಸಣ್ಣ ಪುಟ್ಟ ಕೆಲಸ ಬೇಡ ಅನ್ನೋ ನೂರಾರು ಯುವಕರಿಗೆ ಗೋಪಾಲ ಮಾದರಿಯಾಗಿದ್ದಾರೆ. ಇಂಥ ಸ್ವಾವಲಂಬಿಗೆ ನಮ್ಮದೊಂದು ಸಲಾಂ.