Tag: ಪಬ್ಲಿಕ್ ಟಿವಿ. yadagiri

  • ವಕ್ಫ್ ಆಸ್ತಿ ಕಬಳಿಕೆ – ಪ್ರಶ್ನಿಸಿದ್ದಕ್ಕೆ ಪೊಲೀಸ್ ಠಾಣೆ ಎದುರೇ ನಾಲ್ವರಿಗೆ ಬಹಿಷ್ಕಾರ

    ವಕ್ಫ್ ಆಸ್ತಿ ಕಬಳಿಕೆ – ಪ್ರಶ್ನಿಸಿದ್ದಕ್ಕೆ ಪೊಲೀಸ್ ಠಾಣೆ ಎದುರೇ ನಾಲ್ವರಿಗೆ ಬಹಿಷ್ಕಾರ

    ಯಾದಗಿರಿ: ವಕ್ಫ್ ಆಸ್ತಿ ಕಬಳಿಕೆ ವಿಚಾರಕ್ಕೆ ದೂರು ನೀಡಲು ಹುಣಸಗಿ ಬಳಿ ಬಂದ ನಾಲ್ವರಿಗೆ ಪೊಲೀಸ್ ಸ್ಟೇಷನ್ ಎದುರಿನಲ್ಲಿಯೇ ಮುಸ್ಲಿಂ ಮುಖಂಡರು ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಹುಣಸಗಿ ಪಟ್ಟಣದ ಕೆಂಭಾವಿ ರಸ್ತೆ ಬಳಿಯ ಸರ್ವೆ ನಂಬರ್ 456 ಖಬರಸ್ಥಾನದಲ್ಲಿರುವ 6 ಎಕರೆ ಖಬರಾಸ್ತಾನ ಆಸ್ತಿಯಲ್ಲಿ 2 ಎರಡು ಎಕರೆಯನ್ನು ಸಯ್ಯದ್ ಮುರ್ತಜಾ ಖಾದ್ರಿ ಬೆಣ್ಣೂರು ಕುಟುಂಬಸ್ಥರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಕೆಲ ಮುಸ್ಲಿಂ ಸಮುದಾಯದ ಜನರು ಆರೋಪಿಸಿದ್ದಾರೆ.

    ಈ ವಿಚಾರವಾಗಿ ಪ್ರಶ್ನಿಸಿ ಬೆಣ್ಣೂರು ಕುಟುಂಬವರಾದ ದಾವಲ್ ಸಾಬ್ ಬೆಣ್ಣೂರು, ಹುಸೇನ್ ಸಾಬ್ ಗಾದಿ, ಸೂಫಿ ಸಾಬ್, ಹಸನ್ ಸಾಬ್ ಎಂಬವರು ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ಈ ವೇಳೆ ಪೊಲೀಸರು ಸಮಾಜದ ವಿಚಾರ ಸೂಕ್ತ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಲು ನಿರ್ದೇಶನದ ನೀಡಿದ್ದಾರೆ.

    ಸಯ್ಯದ್ ಮೊಹಮ್ಮದ್ ಹನಿಫ್ ಬೆಣ್ಣೂರು, ಮೊಹಮ್ಮದ್ ಇಲಿಯಾಸ್ ಮಾತಿಗೆ ಜನ ತಲೆಯಾಡಿಸಿದ್ದು, ಸಭೆ ಹೆಸರಲ್ಲಿ ಪೊಲೀಸ್ ಠಾಣೆ ಎದುರಲ್ಲೇ ನಾಲ್ವರಿಗೆ ಧಾರ್ಮಿಕ ಕಾರ್ಯ, ಸಾಮಾಜಿಕ ಕಾರ್ಯದಲ್ಲಿ ಭಾಗಿಯಾಗದಂತೆ ಬಹಿಷ್ಕಾರ ಹಾಕಿದ್ದಾರೆ ಹಾಗೂ ಸಮಾಜದವರ ಮದುವೆ ಸಮಾರಂಭಕ್ಕೂ ಕರೆಯದಂತೆ ಮುಖಂಡರು ತಾಕೀತು ಮಾಡಿದ್ದಾರೆ. ಸಾಮಾಜಿಕ ಬಹಿಷ್ಕಾರ ಹಾಕುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ.

  • ವೈದ್ಯನ ಕಿರುಕುಳಕ್ಕೆ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ

    ವೈದ್ಯನ ಕಿರುಕುಳಕ್ಕೆ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ

    ಯಾದಗಿರಿ: ಅಮ್ಮಾಪುರದ ಸರ್ಕಾರಿ ಆಸ್ಪತ್ರೆಯ ವೈದ್ಯರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿವೆ. ವೈದ್ಯ ರಾಹಿಲ್ ವಿರುದ್ಧ ಅಸಮಾಧಾನ ಹೊರ ಹಾಕಿರುವ ಸಿಬ್ಬಂದಿ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದ್ರೆ, ಕೆಲವರು ಕಣ್ಣೀರು ಸಹ ಹಾಕಿದ್ದಾರೆ.

    ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪೇಠ ಅಮ್ಮಾಪುರದ ವೈದ್ಯ ಡಾ.ಎಂ.ಎಂ.ರಾಹೀಲ್ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿವೆ. ಡಾ.ಎಂ.ಎಂ.ರಾಹೀಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಬದಲಾಗಿ ಸಹೋದ್ಯೋಗಿಗಳಿಗೆ ಬೇಕಂತಲೇ ಹಾಜರಾತಿ ಕಡಿಮೆ ಹಾಕುವುದು. ವಿಶೇಷ ಭತ್ಯೆ ಕಟ್ ಮಾಡುವ ಮೂಲಕ ಮಾನಸಿಕ ಕಿರುಕುಳ ನೀಡ್ತಾರೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಬಾಯಿ ಬಂದಂತೆ ನಿಂದಿಸುತ್ತಾರೆ. ರಾಹೀಲ್ ವರ್ತನೆಯಿಂದ ಆಸ್ಪತ್ರಗೆ ರೋಗಿಗಳು ಬರಲು ಭಯಪಡುತ್ತಾರೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

    ವೈದ್ಯ ರಾಹಿಲ್ ನಿರ್ಲಕ್ಷ್ಯ ಔಷಧಿ, ಸ್ಯಾನಿಟೆರಿ ಪ್ಯಾಡ್ ಗಳು ಹಂಚಿಕೆಯಾಗಿದೆ ಆಸ್ಪತ್ರೆಯ ಮೂಲೆಯಲ್ಲಿ ಸೇರಿವೆ. ಆಸ್ಪತ್ರೆಗೆಂದು ಮಂಜೂರಾಗಿರುವ ಬೆಲೆ ಬಾಳುವ ವೈದ್ಯಕೀಯ ಪೀಠೋಪಕರಣಗಳು, ಕಚೇರಿ ಬಳಕೆ ವಸ್ತುಗಳು ಸಹ ತುಕ್ಕು ಹಿಡಿಯುತ್ತಿವೆ. ಈ ಎಲ್ಲಾ ವಿಚಾರವಾಗಿ ಹಿರಿಯ ಅಧಿಕಾರಿಗಳಿಗೆ ಸಿಬ್ಬಂದಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.

  • ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಚಿರತೆ ದಾಳಿ – ರೈತರಿಗೆ ಗಾಯ

    ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಚಿರತೆ ದಾಳಿ – ರೈತರಿಗೆ ಗಾಯ

    ಯಾದಗಿರಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಮೀನಾಸಪುರದಲ್ಲಿ ನಡೆದಿದೆ.

    ಚಿರತೆ ದಾಳಿಯಿಂದ ಮೂವರು ರೈತರು ಗಾಯಗೊಂಡಿದ್ದು ಇದೀಗ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿರತೆ ದಾಳಿಗೆ ಒಳಗಾಗಿರುವವರು ಗ್ರಾಮದ ನಕ್ಕ ಚಂದ್ರಪ್ಪ ಮತ್ತು ಆತನ ಇಬ್ಬರೂ ಸ್ನೇಹಿತರು ಎಂದು ಹೇಳಲಾಗಿದೆ. ಚಿರತೆ ದಾಳಿಯಿಂದ ಮೂವರ ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮೀನಾಸಪುರ ಗ್ರಾಮ ಮೀಸಲು ಅರಣ್ಯ ಪ್ರದೇಶದ ಪಕ್ಕದಲ್ಲಿಯೇ ಇರುವುದರಿಂದ, ಅರಣ್ಯ ಪ್ರದೇಶದಿಂದ ಚಿರತೆ ಬಂದಿರುವ ಅನುಮಾನ ವ್ಯಕ್ತವಾಗಿದೆ.

    ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಚಿರತೆಯಿಂದ ಪ್ರಾಣಾಪಾಯ ಸಂಭವಿಸುವ ಮೊದಲೇ ಅದನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು, ಅರಣ್ಯ ಇಲಾಖೆ ಆಗ್ರಹಿಸಿದ್ದಾರೆ.

  • ಜ್ಞಾನದೀವಿಗೆ – ಯಾದಗಿರಿಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ಹಂಚಿಕೆ

    ಜ್ಞಾನದೀವಿಗೆ – ಯಾದಗಿರಿಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ಹಂಚಿಕೆ

    ಯಾದಗಿರಿ: ಪಬ್ಲಿಕ್ ಟಿವಿ ಮತ್ತು ರೋಟರಿ ಕ್ಲಬ್ ಸಂಯೋಗದಲ್ಲಿ ರಾಜ್ಯದ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಣೆಯ, ಜ್ಞಾನದೀವಿಗೆ ಕಾರ್ಯಕ್ರಮ ಇಂದು ಯಾದಗಿರಿ ಜಿಲ್ಲೆಯಲ್ಲಿ ನಡೆಯಿತು.

    ಜಿಲ್ಲೆಯ ಶಹಪುರ ತಾಲೂಕಿನ ಚಾಮನಾಳ ಪ್ರೌಢಶಾಲೆಯ ಹತ್ತನೇ ತರಗತಿಯ 94 ವಿದ್ಯಾರ್ಥಿಗಳಿಗೆ 48 ಟ್ಯಾಬ್ ಗಳನ್ನು ಹಂಚಿಕೆ ಮಾಡಲಾಯಿತು. ಶಹಪುರ ಕಾಂಗ್ರೆಸ್ ಶಾಸಕ ಶರಣಬಸಪ್ಪ ದರ್ಶನಾಪುರ ಪಬ್ಲಿಕ್ ಟಿವಿಯ ಜ್ಞಾನ ದೀವಿಗೆ ಅಭಿಯಾನಕ್ಕೆ ದೇಣಿಗೆ ನೀಡಿ ಕೈ ಜೋಡಿಸುವ ಮೂಲಕ ಗಿಡಕ್ಕೆ ನೀರು ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ತಮ್ಮ ಟ್ಯಾಬ್ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರೌಢಶಾಲಾ ಶಿಕ್ಷಣ ಇಲಾಖೆ ವತಿಯಿಂದ ವಿಷಯ ನಿರೀಕ್ಷ ಚಂದ್ರಕಾಂತ್ ಎಸ್‍ಡಿಎಂಸಿ ಅಧ್ಯಕ್ಷ, ರೇವಣ ಸಿದ್ದಪ್ಪ, ಮುಖ್ಯ ಶಿಕ್ಷಕ ಬಸವರಾಜ್ ಭಾಗಿಯಾಗಿದ್ದರು.

    ಚಾಮನಾಳ ಗ್ರಾಮದ ಪ್ರೌಢಶಾಲೆಯಲ್ಲಿ ಅಕ್ಕಪಕ್ಕದ ಸುಮಾರು 8 ಹಳ್ಳಿಗಳ ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ. ಇದರಲ್ಲಿ ಅತೀ ಹೆಚ್ಚು ತಾಂಡಗಳಿಂದ ಬರುವ ಮಕ್ಕಳಿದ್ದು, ಆನ್ ಲೈನ್ ಶಿಕ್ಷಣ ಎಂಬುವುದು ಈ ಶಾಲೆಯ ಮಕ್ಕಳಿಗೆ ಗಗನ ಕುಸುಮವಾಗಿತ್ತು. ಮನೆಯಲ್ಲಿನ ಬಡತನ ಎಸ್‍ಎಸ್‍ಎಲ್‍ಸಿ ಉತ್ತಮ ಫಲಿತಾಂಶದ ಕನಸಿಗೆ ನೀರು ಎರಚುತ್ತಿತ್ತು. ಆದರೆ ಪಬ್ಲಿಕ್ ಟಿವಿ ಈ ಮಕ್ಕಳ ಭವಿಷ್ಯಕ್ಕೆ ಈಗ ಆಸರೆಯಾಗಿದೆ. ಪಬ್ಲಿಕ್ ಟಿವಿಯ ಸಣ್ಣ ಪ್ರಯತ್ನ ನೂರಾರು ವಿದ್ಯಾರ್ಥಿಗಳ ಸುಂದರ ನಾಳೆಗಳನ್ನು ಬರೆಯುತ್ತಿದೆ.

    ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ದರ್ಶನಾಪುರ, ಕೊರೊನಾದಂತ ಕಷ್ಟದ ಸಮಯದಲ್ಲಿ ಪಬ್ಲಿಕ್ ಟಿವಿ ಬಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಂದು ಸರ್ಕಾರ ಮಾಡುವ ಕಾರ್ಯ ಮಾಡುತ್ತಿದೆ. ಇದರ ಜೊತೆಗೆ ಸರ್ಕಾರ ಸಾಕಷ್ಟು ಸೌಲಭ್ಯ ನಿಮಗೆ ನೀಡುತ್ತಿದೆ. ಇದರ ಪ್ರಯೋಜನ ಪಡೆದು ನಿಮ್ಮ ಸುಂದರ ಜೀವನ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

  • ಯಾದಗಿರಿಯಲ್ಲಿ ಹಣ ಕೊಟ್ರೆ ಮಾತ್ರ ‘ಅನ್ನಭಾಗ್ಯ’!

    ಯಾದಗಿರಿಯಲ್ಲಿ ಹಣ ಕೊಟ್ರೆ ಮಾತ್ರ ‘ಅನ್ನಭಾಗ್ಯ’!

    ಯಾದಗಿರಿ: ಸಿಎಂ ಸಿದ್ದರಾಮಯ್ಯ ಸರ್ಕಾರ ಬಡ ಜನರ ಹೊಟ್ಟೆ ತುಂಬಿಸಲು ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ. ಅನ್ನಭಾಗ್ಯ ಯೋಜನೆಯಿಂದ ಬಡಜನರಿಗೆ ಅನುಕೂಲವಾಗಿದೆ. ಆದ್ರೆ ನ್ಯಾಯಬೆಲೆ ಅಂಗಡಿ ಮಾಲೀಕರು ಉಚಿತ ಅಕ್ಕಿ ನೀಡುವ ಬದಲು ಬಡ ಜನರಿಂದ ಹಣ ಕೊಳ್ಳೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ.

    ಸರ್ಕಾರ 2013 ರಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದು ಮೊದಲು 1 ರೂ. ಕೊಟ್ಟು ಅಕ್ಕಿ ಪಡೆಯಬೇಕಾಗಿತ್ತು. ನಂತರ ಸರ್ಕಾರ ಕಳೆದ ವರ್ಷ ಮೇ ತಿಂಗಳಲ್ಲಿ ಪ್ರತಿ ಯುನಿಟ್ ಕಾರ್ಡ್‍ಗೆ 5 ಕೆಜಿ ಉಚಿತ ಅಕ್ಕಿ ನೀಡುವ ಯೋಜನೆ ಜಾರಿಗೆ ತಂದಿದೆ. ನಂತರ ಇದೇ ಏಪ್ರಿಲ್ 1 ರಿಂದ ಪ್ರತಿ ಯುನಿಟ್ ಕಾರ್ಡ್‍ನ ಒಬ್ಬ ಸದಸ್ಯನಿಗೆ 7 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲು ಆದೇಶ ಹೊರಡಿಸಿದೆ. ಆದ್ರೆ ಯಾದಗಿರಿ ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಅನ್ನಭಾಗ್ಯ ಯೋಜನೆಯಲ್ಲಿ ಬಡಜನರಿಂದ ಹಣ ದೋಚುವ ಹಗಲು ದರೋಡೆ ಕೆಲಸ ಮಾಡುತ್ತಿವೆ.

    ಉಚಿತವಾಗಿ 7 ಕೆಜಿ ಅಕ್ಕಿ ನೀಡುವ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿ ಕೂಡುತ್ತಿಲ್ಲ. ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಹಾಲಗೇರಾದಲ್ಲಿ ಮಾತ್ರವಲ್ಲ ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶದ ನ್ಯಾಯ ಬೆಲೆ ಅಂಗಡಿ ಮಾಲೀಕರು ಜನರಿಗೆ ಅಕ್ಕಿ ಕೊಟ್ಟು ಹಣ ಪಡೆಯುತ್ತಿದ್ದಾರೆ. ಕೆಲವು ಕಡೆ ಅಂಗಡಿ ಮಾಲೀಕರು 10 ರಿಂದ 50 ವರಗೆ ಹಣ ಪಡೆದು ಅನ್ನಭಾಗ್ಯ ಪಡಿತರ ಅಕ್ಕಿ ವಿತರಣೆ ಮಾಡುತ್ತಿದ್ದಾರೆ.

    ಈ ಬಗ್ಗೆ ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ಕೇಳಿದ್ರೆ, ಕೆಲವೊಮ್ಮೆ ಅಕ್ಕಿ ತೂಕದಲ್ಲಿ ಕಡಿಮೆ ಬರುತ್ತವೆ. ಹೀಗಾಗಿ ಹಣ ಪಡೆಯುತ್ತಿದ್ದೇವೆ ಎನ್ನುತ್ತಾರೆ.