Tag: ಪಬ್ಲಿಕ್ ಟಿವಿ Woman

  • ನಾವು ರಾಗಿ ಮುದ್ದೆ ತಿನ್ನೋರು, ನಮಗೆ ಯಾವ ರೋಗ ಬರಲ್ಲ – ಆದಿವಾಸಿ ಮಹಿಳೆ

    ನಾವು ರಾಗಿ ಮುದ್ದೆ ತಿನ್ನೋರು, ನಮಗೆ ಯಾವ ರೋಗ ಬರಲ್ಲ – ಆದಿವಾಸಿ ಮಹಿಳೆ

    ಮೈಸೂರು: ಆರೋಗ್ಯ ತಪಾಸಣೆ ಮಾಡಲು ಬಂದ ಅಧಿಕಾರಿಗಳಿಗೆ ಮಹಿಳೆಯೊಬ್ಬಳು ನಾವು ರಾಗಿ ಮುದ್ದೆ ತಿನ್ನುವವರು, ನಮಗೆ ಯಾವ ರೋಗ ಬರುವುದಿಲ್ಲ ಎಂದು ಅವಾಜ್ ಹಾಕಿದ್ದಾರೆ.

    ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡು ಸಮೀಪದ ಬೀರತಮ್ಮನ ಹಳ್ಳಿ ಗಿರಿಜನ ಹಾಡಿಯಲ್ಲಿ ಮಹಿಳೆಯೊಬ್ಬಳು ನೀವು ನಮ್ಮ ಹಾಡಿಗೆ ಕಾಲು ಇಡುವುದು ಬೇಡ, ನೀವು ಹಾಡಿಯಿಂದ ಹೋಗಿ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

    ನಾವು ರಾಗಿ ಮುದ್ದೆ ತಿನ್ನುವವರು, ನಮಗೆ ಯಾವ ರೋಗನೂ ಇಲ್ಲ. ನೀವೇನು ನಮಗೆ ಟೆಸ್ಟ್ ಮಾಡಿ ರೋಗ ಕಂಡು ಹಿಡಿಯುವುದು ಬೇಡ. ರೋಗ ಬಂದರೆ ನಾವೇ ವಾಸಿ ಮಾಡಿಕೊಳ್ಳುತ್ತೇವೆ ಎಂದು ಆರೋಗ್ಯ ತಪಾಸಣೆ ನಡೆಸಲು ಮುಂದಾಗಿದ್ದ ಅಧಿಕಾರಿಗಳ ಜೊತೆ ಮಹಿಳೆ ವಾಗ್ವಾದ ನಡೆಸಿದ್ದಾರೆ.  ಇದನ್ನು ಓದಿ: ಜುಲೈ ಮಧ್ಯ, ಆಗಸ್ಟ್ ಆರಂಭದಲ್ಲಿ ದಿನಕ್ಕೆ 1 ಕೋಟಿ ಲಸಿಕೆ ಲಭ್ಯ – ಕೇಂದ್ರ

    ಬೀರತಮ್ಮನಹಳ್ಳಿ ಆದಿವಾಸಿ ಹಾಡಿಯಲ್ಲಿ ಒಟ್ಟು 50ಕ್ಕೂ ಹೆಚ್ಚು ಕುಟುಂಬಗಳಿವೆ. 250ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಹಾಡಿ ಇದ್ದಾಗಿದ್ದು, ಈ ಪೈಕಿ ಕೇವಲ 7 ಮಂದಿ ಮಾತ್ರ ತಪಾಸಣೆಗೆ ಒಳಗಾಗಿದ್ದಾರೆ.

     

  • ಬೈಕ್ ಬಿಟ್ಟು ಬಿಡಿ – ಡಿವೈಎಸ್ಪಿ ಕಾಲಿಗೆ ಬಿದ್ದು ಮಹಿಳೆ ಕಣ್ಣೀರು

    ಬೈಕ್ ಬಿಟ್ಟು ಬಿಡಿ – ಡಿವೈಎಸ್ಪಿ ಕಾಲಿಗೆ ಬಿದ್ದು ಮಹಿಳೆ ಕಣ್ಣೀರು

    ಯಾದಗಿರಿ: ನಿಷೇಧವಿದ್ದರೂ ಊರು ಸುತ್ತಲು ನಗರಕ್ಕೆ ಬಂದು, ಪೊಲೀಸರ ಕೈಗೆ ಸಿಲುಕಿದ ಓರ್ವ ಮಹಿಳೆ ಡಿವೈಎಸ್ಪಿ ಕಾಲಿಗೆ ಬಿದ್ದು ಬೈಕ್ ಬಿಟ್ಟು ಬಿಡಿ ಅಂತ ಕಣ್ಣೀರು ಹಾಕಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಯಾದಗಿರಿ ಸಂಪೂರ್ಣ ಲಾಕ್ ಡೌನ್ ಹಿನ್ನೆಲೆ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿಷೇಧವಿದೆ. ಹೀಗಿದ್ದರೂ ಜನ ಮಾತ್ರ ಕುಂಟು ನೆಪ ಹೇಳಿ ನಗರಕ್ಕೆ ಬರುತ್ತಿದ್ದಾರೆ. ಹೀಗಾಗಿ ಡಿವೈಎಸ್ಪಿ ಸಂತೋಷ್ ಬನ್ನಹಟ್ಟಿ ಯಾದಗಿರಿ ನಗರದ ಹಳೆ ಬಸ್ ನಿಲ್ದಾಣದ ಬಳಿ ವಿಶೇಷ ರೈಡ್ ನಡೆಸಿ, ಎಂಟ್ರಿ ನೀಡುವ ವಾಹನಗಳನ್ನು ಸೀಜ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ತನ್ನ ಸಂಬಂಧಿ ಜೊತೆಗೆ ಬೈಕ್ ಮೇಲೆ ಬಂದ ಮಹಿಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಆಗ ಪೊಲೀಸರು ಮಹಿಳೆ ಜೊತೆಗೆ ಬಂದ ವ್ಯಕ್ತಿಯನ್ನು ಮತ್ತು ಬೈಕ್‍ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಪೋಲಿಸರ ಕೈಗೆ ಸಿಕ್ಕಬಿದ್ದ ಕೂಡಲೇ ನಾಟಕ ಮಾಡತೊಡಗಿದ ಮಹಿಳೆ ಡಿವೈಎಸ್ಪಿ ಸಂತೋಷ್ ಬನ್ನಹಟ್ಟಿ ಕಾಲಿಗೆ ಬಿದ್ದಿದ್ದಾಳೆ. ಇದರಿಂದಾಗಿ ಕೆಂಡಾಮಂಡಲವಾದ ಡಿವೈಎಸ್ಪಿ ಸಂತೋಷ್ ಮಹಿಳೆಗೆ ಬುದ್ಧಿ ಹೇಳಿ ರಸ್ತೆಪಕ್ಕದಲ್ಲಿ ನಿಲ್ಲುವಂತೆ ಹೇಳಿದರು. ಸದ್ಯ ಬೈಕ್ ಸೀಜ್ ಮಾಡಿ ಠಾಣೆಗೆ ತೆಗೆದುಕೊಂಡು ಹೋಗಲಾಗಿದೆ.

  • ಮಾಸ್ಕ್ ಧರಿಸದ್ದಕ್ಕೆ ಮಹಿಳೆಯನ್ನು ರಸ್ತೆ ಮಧ್ಯೆ ಎಳೆದಾಡಿದ ಪೊಲೀಸರು

    ಮಾಸ್ಕ್ ಧರಿಸದ್ದಕ್ಕೆ ಮಹಿಳೆಯನ್ನು ರಸ್ತೆ ಮಧ್ಯೆ ಎಳೆದಾಡಿದ ಪೊಲೀಸರು

    ಭೋಪಾಲ್: ಕೋವಿಡ್-19 ಸಾಂಕ್ರಾಮಿಕ ರೋಗ ಮಧ್ಯೆ ತರಕಾರಿ ತರಲು ಮಾಸ್ಕ್ ಧರಿಸದೇ ಹೋಗಿದ್ದ ಕಾರಣ ಮಹಿಳೆಯನ್ನು, ಕೆಲವು ಪೊಲೀಸ್ ಸಿಬ್ಬಂದಿ ರಸ್ತೆ ಮಧ್ಯೆ ಎಳೆದಾಡಿದ ವಿಡಿಯೋ ವೈರಸ್ ಆಗಿದೆ.

    ಮಧ್ಯಪ್ರದೇಶದ ರಾಹ್ಲಿ ಪಟ್ಟಣದಲ್ಲಿ ಸೋಮವಾರ ನಡೆದ ಈ ಘಟನೆಯ ವೀಡಿಯೋ ವೈರಲ್ ಆದ ಬಳಿಕ, ಮಹಿಳೆ ಮೊದಲಿಗೆ ಪೊಲೀಸರ ಮೇಲೆ ಹಲ್ಲೆ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮಹಿಳೆ ಮತ್ತು ಮಗಳು ಮಾಸ್ಕ್ ಧರಿಸದೇ ಹೋಗುತ್ತಿದ್ದರಿಂದ ಸೋಮವಾರ ಬೆಳಗ್ಗೆ ಪೊಲೀಸರು ತಡೆದಿದ್ದಾರೆ. ನಂತರ ಶಿಕ್ಷೆ ನೀಡುವುದಾಗಿ ತಿಳಿಸಿ ಜೀಪಿನೊಳಗೆ ಮಹಿಳೆಯನ್ನು ಕರೆದೊಯ್ಯಲು ಪ್ರಯತ್ನಿಸಿದಾಗ ಮಹಿಳೆ ಮತ್ತು ಆಕೆಯ ಮಗಳು ವಿರೋಧಿಸಿದ್ದಾರೆ. ಈ ವೇಳೆ ಪೊಲೀಸರು ಮಹಿಳೆ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಬಂದಿದೆ.

    ಮಹಿಳಾ ಪೊಲೀಸ್ ಸೇರಿದಂತೆ ಕೆಲವು ಪೊಲೀಸ್ ಸಿಬ್ಬಂದಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಕೆಳಕ್ಕೆ ತಳ್ಳಿರುವುದು ಮತ್ತು ಆಕೆಯ ಕೂದಲನ್ನು ಎಳೆದಾಡಿರುವ ದೃಶ್ಯ ವಿಡಿಯೋದಲ್ಲಿದೆ.

    ರಾಹ್ಲಿಯ ಉಪ-ವಿಭಾಗೀಯ ಪೊಲೀಸ್ ಕಮಲ್ ಸಿಂಗ್‍ರವರು, ಈ ವೀಡಿಯೋದಲ್ಲಿ ಅರ್ಧದಷ್ಟು ಘಟನೆಯನ್ನು ಮಾತ್ರ ತೋರಿಸಲಾಗಿದೆ. ಮಹಿಳೆ ಮೊದಲು ಮಹಿಳಾ ಪೊಲೀಸ್‍ಗೆ ಹೊಡೆದಿದ್ದಾಳೆ. ನಂತರ ಆಕೆಯ ಉಗುರುಗಳಿಂದ ಪೊಲೀಸ್ ಮುಖದ ಮೇಲೆ ಹಾನಿಗೊಳಿಸಿದ್ದಾಳೆ ಎಂದು ಹೇಳಿದ್ದಾರೆ.

  • ಮಕ್ಕಳಾಗದ ಕೊರಗು – 58ರ ಮಹಿಳೆ ಆತ್ಮಹತ್ಯೆ

    ಮಕ್ಕಳಾಗದ ಕೊರಗು – 58ರ ಮಹಿಳೆ ಆತ್ಮಹತ್ಯೆ

    ಚಿಕ್ಕಮಗಳೂರು: ಮಕ್ಕಳಾಗಿಲ್ಲ ಎಂದು ಮನನೊಂದು 58 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬಿಳುವಾಲ ಗ್ರಾಮದಲ್ಲಿ ನಡೆದಿದೆ.

    ಮೃತ ಮಹಿಳೆಯನ್ನ 58 ವರ್ಷದ ಮಲ್ಲಿಗಮ್ಮ ಎಂದು ಗುರುತಿಸಲಾಗಿದೆ. ಮೃತ ಮಲ್ಲಿಗಮ್ಮ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹುಂಡಿಗನಾಳು ಗ್ರಾಮದ ಮಹಾದೇವಪ್ಪ ಎಂಬವರೊಂದಿಗೆ ಸುಮಾರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಮಕ್ಕಳಾಗಿರಲಿಲ್ಲ. ಮಕ್ಕಳಾಗದ ಹಿನ್ನೆಲೆಯಲ್ಲಿ ದಂಪತಿ ನಡುವೆ ಆಗಾಗ ವೈವಾಹಿಕ ಜೀವನದಲ್ಲಿ ಬಿರುಕು ಕಂಡಿತ್ತು. ಜಗಳ ಕೂಡ ನಡೆಯುತ್ತಿತ್ತು. ಒಂದೆಡೆ ಮಕ್ಕಳಾಗಿಲ್ಲ. ಮತ್ತೊಂದೆಡೆ ಗಂಡನ ಜೊತೆ ಜಗಳದಿಂದ ಮನನೊಂದು ಮಲ್ಲಿಗಮ್ಮ ಕಳೆದ ನಾಲ್ಕು ವರ್ಷಗಳಿಂದ ಬಿಳುವಾಲ ಗ್ರಾಮದ ತಂಗಿ ಮನೆಗೆ ಬಂದು ವಾಸವಿದ್ದರು.

    ಗುರುವಾರ ಗ್ರಾಮದ ಸಮೀಪವಿರುವ ಗುಡ್ಡೆಕಲ್ಲು ಹತ್ತಿರ ಬಟ್ಟೆ ತೊಳೆಯಲು ಹೋಗಿದ್ದ ಮಲ್ಲಿಗಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಮಲ್ಲಿಗಮ್ಮನ ತಂಗಿ ಮಗ ಶಿವರಾಜ್‍ಕುಮಾರ್ ಕಡೂರು ಠಾಣೆಗೆ ದೂರು ನೀಡಿದ್ದಾರೆ. ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಶೌಚಾಲಯದಲ್ಲಿ ಪಾರ್ಟಿ ಡ್ರಿಂಕ್ ತಯಾರಿಸಿ ಸ್ನೇಹಿತರಿಗೆ ಕೊಟ್ಟ ಮಹಿಳೆ

    ಶೌಚಾಲಯದಲ್ಲಿ ಪಾರ್ಟಿ ಡ್ರಿಂಕ್ ತಯಾರಿಸಿ ಸ್ನೇಹಿತರಿಗೆ ಕೊಟ್ಟ ಮಹಿಳೆ

    ಹಿಳೆಯೊಬ್ಬಳು ಟಾಯ್ಲೆಟ್ ಬೌಲ್‍ನಲ್ಲಿ ಪಾರ್ಟಿ ಡ್ರಿಂಕ್ ತಯಾರಿಸಿ ತನ್ನ ಸ್ನೇಹಿತರಿಗೆ ನೀಡಿರುವ ವೀಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ಮಹಿಳೆ ಟಾಯ್ಲೆಟ್ ಬೌಲ್‍ಗೆ ಡ್ರೈ ಫ್ರೂಟ್ಸ್, ಕ್ಯಾಂಡಿ ಮತ್ತು ಐಸ್ ಕ್ರೀಂನನ್ನು ಹಾಕುತ್ತಾಳೆ. ಬಳಿಕ ಫ್ಲಾಶ್‍ನನ್ನು ತೆರೆದು ಸೋಡಾ ಮತ್ತು ಫಂಟಾ, ಸ್ಪ್ರೈಟ್ ಹಾಗೂ ಹಣ್ಣಿನ ರಸವನ್ನು ಬೆರೆಸುತ್ತಾಳೆ. ನಂತರ ಫ್ಲಶ್‍ನನ್ನು ಪ್ರೆಸ್ ಮಾಡಿದಾಗ ಪಾರ್ಟಿ ಡ್ರಿಂಕ್ ಟಾಯ್ಲಟ್ ಬೌಲ್‍ನಲ್ಲಿದ್ದ ಪದಾರ್ಥಗಳ ಜೊತೆ ಮಿಶ್ರಿತವಾಗುತ್ತದೆ. ನಂತರ ಆ ಪಾನೀಯವನ್ನು ಗ್ಲಾಸ್‍ಗೆ ಹಾಕಿ ತನ್ನ ಸ್ನೇಹಿತರಿಗೆ ನೀಡಲು ಮುಂದಾಗುತ್ತಾಳೆ.

    ಮಹಿಳೆ ತನ್ನ ಸ್ನೇಹಿತರಿಗೆ ಇದನ್ನು ತಯಾರಿಸುವ ಮುನ್ನ ತಾನು ಟಾಯ್ಲೆಟ್‍ನನ್ನು ಕ್ಲೀನ್ ಮಾಡಿದ ಬಗ್ಗೆ ಕೂಡ ವಿವರಿಸಿದ್ದಾಳೆ. ಇದನ್ನು ಕೇಳಿದ ಎಲ್ಲರೂ ಗ್ಲಾಸ್‍ನನ್ನು ತ್ಯಜಿಸುತ್ತಾರೆ. ಆದರೆ ಒಬ್ಬರು ಅದನ್ನು ತೆಗೆದುಕೊಂಡು ಹೋಗಿ ಟಾಯ್ಲೆಟ್ ಬೌಲ್ ಒಳಗೆ ಸುರಿಯುತ್ತಾರೆ.

    ಎರಡೂವರೆ ನಿಮಿಷವಿರುವ ಈ ವೀಡಿಯೋವನ್ನು ‘ದಿ ಅನ್ನಾ ಶೋ’ ಎಂಬ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇತರ ಸಾಮಾಜಿಕ ಮಾಧ್ಯಮ ವೈರಲ್ ಆಗುತ್ತಿದೆ. ಈವರೆಗೂ ಈ ವೀಡಿಯೋಗೆ 6.7 ಮಿಲಿಯನ್ ವಿವ್ಸ್ ಬಂದಿದ್ದು, ಸಾವಿರಕ್ಕೂ ರೀಟ್ವೀಟ್ ಹಾಗೂ ಕಾಮೆಂಟ್‍ಗಳು ಬಂದಿವೆ.

  • ಮೃತ ಮಹಿಳೆಯ ಅಂಗಾಂಗದಿಂದ ಉಳಿಯಿತು 3 ಜನರ ಪ್ರಾಣ

    ಮೃತ ಮಹಿಳೆಯ ಅಂಗಾಂಗದಿಂದ ಉಳಿಯಿತು 3 ಜನರ ಪ್ರಾಣ

    ನವದೆಹಲಿ: ಮೆದುಳು ಸತ್ತ 57 ವರ್ಷದ ಮಹಿಳೆಯೊಬ್ಬರು ತಮ್ಮ ಅಂಗಾಂಗವನ್ನು ದಾನ ಮಾಡುವ ಮೂಲಕ 3 ಮಂದಿಯ ಪ್ರಾಣವನ್ನು ಉಳಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಮಹಿಳೆ ತೀವ್ರವಾಗಿ ತಲೆಗೆ ಗಾಯಗೊಂಡು ಮಾರ್ಚ್ 28ರಂದು ಚಿಕಿತ್ಸೆಗಾಗಿ ದ್ವಾರಕಾದ ಆಕಾಶ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ವೈದ್ಯರು ರೋಗಿಯ ಮೆದುಳು ಸತ್ತಿದೆ ಎಂದು ಘೋಷಿಸಿದ್ದರು. ಬಳಿಕ ಆಸ್ಪತ್ರೆಯ ಸಿಬ್ಬಂದಿ ಮಹಿಳೆಯ ಅಂಗಾಂಗಗಳನ್ನು ದಾನ ಮಾಡುವುದಾಗಿ ಕುಟುಂಬಸ್ಥರಿಗೆ ಕೇಳಿದಾಗ ಒಪ್ಪಿಕೊಂಡಿದ್ದಾರೆ.

    ಬಳಿಕ ಮಹಿಳೆಯ ಅಂಗಾಂಗಗಳನ್ನು ದೇಹದಿದಂದ ಹೊರತೆಗೆದು ಮಾರ್ಚ್ 29ರಂದು ಬೆಳಗ್ಗೆ 5 ಗಂಟೆಗೆ ವರ್ಗಾಯಿಸಲಾಗಿತು. ಆಕೆಯ ಕಿಡ್ನಿವೊಂದನ್ನು ದ್ವಾರಕಾದ ಆಕಾಶ್ ಹೆಲ್ತ್‌ಕೇರ್‌ನಲ್ಲಿರುವ 52 ವರ್ಷದ ವ್ಯಕ್ತಿಗೆ ನೀಡಲಾಗಿದ್ದು, ಮಹಿಳೆಯ ಲೀವರ್‌ನನ್ನು ಗುರ್ಗಾಂವ್‍ನ ಮೆಡಂತಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ 71 ವರ್ಷದ ವ್ಯಕ್ತಿಗೆ ನೀಡಲಾಗಿದೆ ಎಂದು ಆಕಾಶ್ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಮಹಿಳೆಯ ಕಾರ್ನಿಯಾಗಳನ್ನು ಶ್ರಾಫ್ ಕಣ್ಣಿನ ಕೆಂದ್ರದಲ್ಲಿರುವ ಕಣ್ಣಿನ ಬ್ಯಾಂಕ್‍ನಲ್ಲಿ ಸಂರಕ್ಷಿಸಲಾಗಿದ್ದು, ಮಹಿಳೆಯ ಅಂಗಾಂಗಗಳನ್ನು ಕಸಿ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸುಮಾರು 20 ಗಂಟೆಗಳ ಕಾಲ ಬೇಕಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

  • ತಂದೆಗೆ ಮದ್ಯ ಕುಡಿಸಿ ಬೆಂಕಿ ಹಚ್ಚಿ ಕೊಂದ ಮಗಳು

    ತಂದೆಗೆ ಮದ್ಯ ಕುಡಿಸಿ ಬೆಂಕಿ ಹಚ್ಚಿ ಕೊಂದ ಮಗಳು

    ಕೋಲ್ಕತ್ತಾ: 22 ವರ್ಷದ ಮಹಿಳೆಯೊಬ್ಬಳು 56 ವರ್ಷದ ತಂದೆಯನ್ನು ಊಟಕ್ಕೆಂದು ಕರೆದೊಯ್ದು ಮದ್ಯ ಕುಡಿಸಿ ಬೆಂಕಿ ಹಚ್ಚಿ ಕೊಂದಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

    ಈ ಕುರಿತಂತೆ ಪೊಲೀಸರು, ಮಹಿಳೆ ಕ್ರಿಸ್ಟೋಫರ್ ರಸ್ತೆ ಬಳಿಯ ಪಾರ್ಕ್ ಸರ್ಕಸ್ ನಿವಾಸಿಯಾಗಿದ್ದು, ಭಾನುವಾರ ರಾತ್ರಿ ತನ್ನ ತಂದೆಯೊಂದಿಗೆ ರೆಸ್ಟೋರೆಂಟ್‍ಗೆ ತೆರಳಿ ಮದ್ಯ ಕುಡಿಸಿದ್ದಾಳೆ. ಬಳಿಕ ಇಬ್ಬರು ಹೂಗ್ಲಿ ನದಿಯ ದಡದಲ್ಲಿರುವ ಬೆಂಚಿನ ಮೇಲೆ ಕುಳಿತುಕೊಂಡಿದ್ದರು. ಈ ವೇಳೆ ತಂದೆ ನಿದ್ರೆಗೆ ಜಾರಿದ ನಂತರ ಮಹಿಳೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ಕುರಿತಂತೆ ವಿಚಾರಣೆ ವೇಳೆ ಮಹಿಳೆ, ತಾನು ಚಿಕ್ಕವಳಿದ್ದಾಗಲೆ ತಾಯಿ ತೀರಿಕೊಂಡಿದ್ದು, ನಂತರ ತಂದೆ ಮಹಿಳೆ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲು ಆರಂಭಿಸಿದರು ಮತ್ತು ಭಾವನಾತ್ಮಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿದ್ದಾಳೆ.

    ಮಹಿಳೆ ಮದುವೆ ನಂತರ ಹಿಂಸೆ ನೀಡುವುದನ್ನು ನಿಲ್ಲಿಸಿದ್ದ ತಂದೆ, ಮದುವೆ ಮುರಿದು ಮಹಿಳೆ ಮನೆಗೆ ಹಿಂದಿರುಗಿದ ಬಳಿಕ ಮತ್ತೆ ಕಿರುಕುಳ ನೀಡಲು ಆರಂಭಿಸಿದರು ಎಂದು ತಿಳಿಸಿದ್ದಾಳೆ. ಸದ್ಯ ಮಹಿಳೆಯ ಚಿಕ್ಕಪ್ಪ ಘಟನೆ ವಿಚಾರವಾಗಿ ನೀಡಿದ ದೂರಿನ ಮೇರೆಗೆ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದೀಗ ಮಹಿಳೆ ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದು, ಆಕೆಯನ್ನು ಮಾರ್ಚ್ 29ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

  • ಮದ್ಯದ ಮತ್ತಿನಲ್ಲಿ ಮಾಸ್ಕ್ ಧರಿಸಲು ಮಹಿಳೆ ನಿರಾಕರಣೆ – ವಿಮಾನದಿಂದ ಹೊರ ಹಾಕಿದ ಅಧಿಕಾರಿ

    ಮದ್ಯದ ಮತ್ತಿನಲ್ಲಿ ಮಾಸ್ಕ್ ಧರಿಸಲು ಮಹಿಳೆ ನಿರಾಕರಣೆ – ವಿಮಾನದಿಂದ ಹೊರ ಹಾಕಿದ ಅಧಿಕಾರಿ

    – ವಿಮಾನ ಏರುವ ಮುನ್ನ ಮದ್ಯ ಸೇವನೆ
    – ಸೀಟ್ ಬೆಲ್ಟ್ ಹಾಕಲು ಒಪ್ಪದ ಮಹಿಳೆ

    ಲಂಡನ್: ಕೊರೊನಾ ಮಹಾಮಾರಿ ಇಡೀ ಜೀವನಶೈಲಿಯನ್ನೇ ಬದಲಾಯಿಸಿದೆ. ಹಲವು ಕುಟುಂಬ ಹಾಗೂ ಜೀವನವನ್ನು ನಾಶ ಮಾಡಿದೆ. ಆದರೂ ಕೊರೊನಾ ವಿಚಾರವಾಗಿ ಜನ ಎಚ್ಚರಿಕೆಗೊಳ್ಳುತ್ತಿಲ್ಲ. ಇತ್ತೀಚೆಗೆ ಕುಡಿದ ಮತ್ತಿನಲ್ಲಿ ಮಾಸ್ಕ್ ಧರಿಸಲು ನಿರಾಕರಿಸಿದ 34 ವರ್ಷದ ಮಹಿಳೆಯೊಬ್ಬಳನ್ನು ರಯಾನ್‍ಏರ್ ವಿಮಾನದಿಂದ ಹೊರಹಾಕಲಾಗಿದೆ.

    ಹೇಲಿ ಬಾಕ್ಸ್ ಎಂಬ ಮಹಿಳೆ ವೃತ್ತಿಯಲ್ಲಿ ಬ್ಯೂಟಿಷಿಯನ್ ಆಗಿದ್ದು, ಮೃತಪಟ್ಟ ಸ್ನೇಹಿತನ ಪ್ರೀತಿಪಾತ್ರರಿಗೆ ಸಾಂತ್ವನ ಹೇಳಲು ಇಬಿಜಾಗೆ ತೆರಳುತ್ತಿದ್ದಳು. ವಿಮಾನ ಹತ್ತುವ ಮೊದಲು ಹೇಲಿ ಬಾಕ್ಸ್ ಮ್ಯಾಂಚೆಸ್ಟರ್ ವಿಮಾನ ನಿಲ್ದಾಣದ ಕ್ಲೇಟನ್ ಹೋಟೆಲ್‍ನಲ್ಲಿ ಒಂದು ವೈನ್ ಬಾಟಲ್ ಪೂರ್ತಿ ಕುಡಿದು, ಒಂದು ಗಂಟೆ ಮಲಗಿದ್ದಳು. ಬಳಿಕ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಗ್ಲಾಸ್ ವೈನ್ ಕುಡಿದು ವಿಮಾನ ಏರಿದ್ದಾಳೆ. ತನ್ನ ಸೀಟ್ ಮೇಲೆ ಮಹಿಳೆ ಕುಳಿತ ನಂತರ ಫ್ಲೈಟ್ ಅಟೆಂಡರ್‍ಗಳು ಪದೇ ಪದೇ ಮಾಸ್ಕ್ ಹಾಕಿಕೊಳ್ಳಲು ತಿಳಿಸಿದ್ದಾರೆ.

    ಕೊನೆಗೆ ಕ್ಯಾಬಿನ್ ಮ್ಯಾನೆಜರ್ ಮಾಸ್ಕ್ ಧರಿಸದೇ ಇದ್ದರೆ ಪೊಲೀಸರ ಬಳಿ ಕರೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆದರೆ ಹೇಲಿ ಬಾಕ್ಸ್ ಇದ್ಯಾವುದಕ್ಕೂ ಕಿವಿ ಕೊಡದೇ ಸೀಟ್ ಬೆಲ್ಟ್ ಧರಿಸಲು ಕೂಡ ನಿರಾಕರಿಸಿದ್ದಾಳೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ನಂತರ ಅದೇ ವಿಮಾನದಲ್ಲಿ ಹೇಗಾದರೂ ಪ್ರಯಾಣಿಸಲು ಹೇಲಿ ಬಾಕ್ಸ್‍ಪ್ರಯತ್ನಿಸಿದಳು. ಆದರೆ ಫ್ಲೈಟ್‍ನ ಅಧಿಕಾರಿಗಳು ಹಾಗೂ ಸಿಬ್ಬಂದಿ ಅವಳನ್ನು ವಿಮಾನದಿಂದ ಹೊರಹಾಕಿದ್ದಾರೆ.

    ಈ ಕುರಿತಂತೆ ಪ್ರಾಸಿಕ್ಯೂಟರ್ ರಾಚೆಲ್ ಡಿಕ್ಸನ್, ಮೊದಲಿಗೆ ಕ್ಯಾಬಿನೆಟ್ ಮ್ಯಾನೇಜರ್ ಸೂಚನೆಗಳನ್ನು ಪಾಲಿಸುವಂತೆ ಸಮಾಧಾನದಿಂದ ಕೇಳಿದ್ದಾರೆ. ಹೇಲಿ ಬಾಕ್ಸ್ ಪಾಸ್‍ಪೋರ್ಟ್ ನೀಡುವಂತೆ ಹಲವಾರು ಬಾರಿ ವಿನಂತಿಸಿದ್ದಾರೆ. ಆದರೆ ಇದ್ಯಾವುದಕ್ಕೂ ಮಹಿಳೆ ಕಿವಿಕೊಡಲಿಲ್ಲ. ಕೊನೆಗೆ ಕ್ಯಾಬಿನೆಟ್ ಮ್ಯಾನೇಜರ್ ಆಕೆಯನ್ನು ವಿಮಾನದಿಂದ ಹೊರಹಾಕಲು ನಿರ್ಧರಿಸಿದರು ಎಂದು ಸೋಮವಾರ ತಿಳಿಸಿದ್ದಾರೆ.

    ನಂತರ ಘಟನೆ ವಿಚಾರವಾಗಿ ಹೇಲಿ ಬಾಕ್ಸ್, ನನಗೆ ಯಾವುದು ಕೂಡ ನೆನಪಾಗುತ್ತಿಲ್ಲ. ನಿದ್ರೆಯ ಕೊರತೆಯಿಂದ ಹಾಗೂ ಆಹಾರವನ್ನು ಸೇವಿಸದೇ ಬೆಳಗ್ಗೆಯೇ ವೈನ್ ಸೇವಿಸಿದ್ದರಿಂದ ಘಟನೆ ನಡೆದಿದೆ ಎಂದು ಪ್ರತಿಕ್ರಿಯಿಸಿದ್ದಾಳೆ.

  • ದುಷ್ಕರ್ಮಿಗಳಿಂದ ಚಿಂದಿ ಆಯುವ ಮಹಿಳೆ ಮೇಲೆ ಮಾನಭಂಗಕ್ಕೆ ಯತ್ನ

    ದುಷ್ಕರ್ಮಿಗಳಿಂದ ಚಿಂದಿ ಆಯುವ ಮಹಿಳೆ ಮೇಲೆ ಮಾನಭಂಗಕ್ಕೆ ಯತ್ನ

    ವಿಜಯಪುರ: ಚಿಂದಿ ಆಯುತ್ತಿದ್ದ ಮಹಿಳೆಯ ಮಾನಭಂಗಕ್ಕೆ ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಪಟ್ಟಣದಲ್ಲಿ ನಡೆದಿದೆ. ವಿವಾಹಿತ ಮಹಿಳೆ ಮೇಲೆ ಮೂವರು ಯುವಕರು ಮಾನಭಂಗಕ್ಕೆ ಯತ್ನಿಸಿದ್ದಾರೆ.

    ನಸುಕಿನಲ್ಲಿ ಇನ್ನೂ ಕತ್ತಲೆ ಇರುವಾಗಲೇ ಚಿಂದಿ ಆಯಲು ಮಹಿಳೆ ಹೊರಟಿದ್ದಳು. ಈ ವೇಳೆ ದುಷ್ಟರು ಮಹಿಳೆಯ ಮೈ ಮೇಲಿನ ಬಟ್ಟೆ ಹರಿದು, ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ.

    ಆರೋಪಿಗಳನ್ನು ಅಕ್ಬರ್ ಮಕಾನದಾರ, ಸಲೀಮ ನದಾಫ, ಸೋಯೆಲ್ ಹಡಗಲಿ ಎಂದು ಗುರುತಿಸಲಾಗಿದ್ದು, ಇದೀಗ ನೊಂದ ಮಹಿಳೆ ಆರೋಪಿಗಳ ವಿರುದ್ಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸದ್ಯ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಮರ್ಮಾಂಗವನ್ನೇ ಕುಡುಗೋಲಿನಿಂದ ಕತ್ತರಿಸಿದ ಮಹಿಳೆ!

    ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಮರ್ಮಾಂಗವನ್ನೇ ಕುಡುಗೋಲಿನಿಂದ ಕತ್ತರಿಸಿದ ಮಹಿಳೆ!

    ಭೋಪಾಲ್: 45 ವರ್ಷದ ಮಹಿಳೆಯೊಬ್ಬಳು ಅತ್ಯಾಚಾರ ಎಸಗಲು ಪ್ರಯತ್ನಿಸಿದ ವ್ಯಕ್ತಿಯ ಮರ್ಮಾಂಗ ಕತ್ತರಿಸಿರುವ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆಯು ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಉಮಾರಿಹಾ ಗ್ರಾಮದಲ್ಲಿ ಗುರುವಾರ ರಾತ್ರಿ 11 ಗಂಟೆಗೆ ಜರುಗಿದ್ದು, ಈ ಕುರಿತಂತೆ ಮಹಿಳೆ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

    ಮಹಿಳೆಯ ಪತಿ ಮನೆಯಲ್ಲಿರದನ್ನು ನೋಡಿಕೊಂಡು 45 ವರ್ಷದ ವ್ಯಕ್ತಿ ಮನೆಗೆ ಬಂದಿದ್ದಾನೆ. ಈ ವೇಳೆ ಮಹಿಳೆ ತನ್ನ 13 ವರ್ಷದ ಮಗನೊಂದಿಗೆ ಮನೆಯೊಳಗೆ ಇದ್ದಳು. ವ್ಯಕ್ತಿ ಮನೆಗೆ ಬಂದಿದ್ದನ್ನು ನೋಡಿ ಗಾಬರಿಯಿಂದ ಬಾಲಕ ಕಳ್ಳನೆಂದು ಭಾವಿಸಿ ಮನೆಯಿಂದ ಹೊರಗೆ ಓಡಿ ಹೋಗಿದ್ದಾನೆ.

    ಇದೇ ವೇಳೆ ಆರೋಪಿ, ಮಹಿಳೆ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಮಹಿಳೆ ಹಾಸಿಗೆ ಕೆಳಗಿದ್ದ ಕುಡುಗೋಲನ್ನು ಎತ್ತಿಕೊಂಡು ಆರೋಪಿಯ ಮರ್ಮಾಂಗವನ್ನು ಕತ್ತರಿಸಿದ್ದಾಳೆ. ಬಳಿಕ ಆತನಿಂದ ತಪ್ಪಿಸಿಕೊಂಡು ಮಹಿಳಾ ಪೊಲೀಸ್ ಔಟ್ ಪೋಸ್ಟ್‍ಗೆ ತಲುಪಿ, ನಡೆದ ಎಲ್ಲಾ ಘಟನೆಯನ್ನು ಪೊಲೀಸರಿಗೆ ವಿವರಿಸಿ ದೂರು ದಾಖಲಿಸಿದ್ದಾಳೆ.

    ಘಟನೆ ಕುರಿತಂತೆ ಮಾತನಾಡಿದ ಸಬ್ ಇನ್ಸ್ ಪೆಕ್ಟರ್ ಧಮೇಂದ್ರ ಸಿಂಗ್ ರಜಪೂತ್, ಆರೋಪಿ ವಿರುದ್ಧ ಶುಕ್ರವಾರ ಬೆಳಗ್ಗೆ 1.30ರ ಸುಮಾರಿಗೆ ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಇದೀಗ ಆರೋಪಿಯನ್ನು ಸಂಜಯ್ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.