Tag: ಪಬ್ಲಿಕ್ ಟಿವಿ v.Somanna

  • ಮಾಹಿತಿ ಇಲ್ಲದೇ ಕಾರ್ಯಕ್ರಮಕ್ಕೆ ಬಂದ ಅಧಿಕಾರಿಗಳಿಗೆ ವಿ.ಸೋಮಣ್ಣ ಕ್ಲಾಸ್

    ಮಾಹಿತಿ ಇಲ್ಲದೇ ಕಾರ್ಯಕ್ರಮಕ್ಕೆ ಬಂದ ಅಧಿಕಾರಿಗಳಿಗೆ ವಿ.ಸೋಮಣ್ಣ ಕ್ಲಾಸ್

    ರಾಯಚೂರು: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣನವರು ರಾಯಚೂರು ಜಿಲ್ಲಾ ಪಂಚಾಯತಿ ಸಿಇಓ ಹಾಗೂ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಗರದ ಕೃಷಿ ವಿವಿ ಆವರಣದಲ್ಲಿ ನಡೆದಿದೆ.

    ಗ್ರಾಮ ಪಂಚಾಯ್ತಿಗಳಿಗೆ ಕಸ ನಿರ್ವಹಣೆಯ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾಹಿತಿ ಇಲ್ಲದೆ, ಅಧಿಕಾರಿಗಳು ಬಂದಿದ್ದರಿಂದ ಸಚಿವ ಸೋಮಣ್ಣ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದುವರೆಗೂ ಮಂಜೂರು ಮಾಡಿದ ವಾಹನಗಳ ಸಂಖ್ಯೆ ಹಾಗೂ ತಗುಲಿದ ವೆಚ್ಚದ ಬಗ್ಗೆಯೂ ಮಾಹಿತಿ ಇಲ್ಲದೇ ಅಧಿಕಾರಿಗಳು ಬಂದಿದ್ದರು. ಹೀಗಾದರೆ ನನ್ನದೇ ಸ್ಟೈಲ್ ನಲ್ಲಿ ಮಾತನಾಡಬೇಕಾಗುತ್ತದೆ ಹುಷಾರ್ ಎಂದು ಕಿಡಿಕಾರಿದ್ದಾರೆ.

    ಸೋಮಣ್ಣನವರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಂತೆ ಅಧಿಕಾರಿಗಳು ತಬ್ಬಿಬ್ಬಾದರು. ಕಾರ್ಯಕ್ರಮದಲ್ಲಿ 35 ವಾಹನಗಳನ್ನು ಲೋಕಾರ್ಪಣೆ ಮಾಡಲಾಯಿತು. ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ಬರುವಾಗ ಕನಿಷ್ಠ ಮಾಹಿತಿ ಇಲ್ಲದೆ, ಬರುವುದು ನಿಮ್ಮ ಆಡಳಿತದ ರೀತಿ ತೋರಿಸುತ್ತದೆ. ಜಿಲ್ಲೆಯಲ್ಲಿ ಮೊದಲು ಆಡಳಿತ ವ್ಯವಸ್ಥೆ ಸರಿಮಾಡಬೇಕಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಮುಂದೊಂದು ದಿನ ನರೇಂದ್ರ ಮೋದಿ ಸ್ಟೇಡಿಯಂಗೆ ಅಮಿತಾ ಶಾ ಪುತ್ರನ ಹೆಸರಿಡಬಹುದು: ಟಿಎಂಸಿ ಸಂಸದ

  • ಮನೆಗಳ ಬಿಲ್ ಆಗ್ತಿಲ್ಲ, ಸಮಸ್ಯೆ ಬಗೆಹರಿಸಿ ಅಂದಿದ್ದಕ್ಕೆ, ವಸತಿ ಸಚಿವ ಸೋಮಣ್ಣ ಗರಂ

    ಮನೆಗಳ ಬಿಲ್ ಆಗ್ತಿಲ್ಲ, ಸಮಸ್ಯೆ ಬಗೆಹರಿಸಿ ಅಂದಿದ್ದಕ್ಕೆ, ವಸತಿ ಸಚಿವ ಸೋಮಣ್ಣ ಗರಂ

    ಗದಗ: ಸಮಸ್ಯೆ ಹೇಳಿಕೊಂಡು ಫೋನ್ ಮಾಡಿದ ಜಿಲ್ಲೆಯ ಸವಡಿ ಗ್ರಾಮ ಪಂಚಾಯತಿ ಸದಸ್ಯರಿಗೆ ಸಚಿವ ವಿ.ಸೋಮಣ್ಣ ಖಾರವಾಗಿ ಮಾತನಾಡಿದ್ದಾರೆ. ಗ್ರಾಮ ಪಂಚಾಯತ್ ಮೇಂಬರ್ ಆದರೆ ನೀನೇನು ದೇವ್ರೆನಪ್ಪ ಅಂತಾ ಸಿಟ್ಟಿನಲ್ಲಿ ಉತ್ತರಿಸಿದ್ದಾರೆ.

    ಸವಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಯೋಜನೆಯಡಿ ನೂರಾರು ಮನೆಗಳು ನಿರ್ಮಾಣವಾಗುತ್ತಿವೆ. ಅವುಗಳಿಗೆ 3 ಹಂತದಲ್ಲಿ ಬಿಲ್ ಆಗಬೇಕು. ಮನೆಗಳು ಪೂರ್ಣ ಹಂತಕ್ಕೆ ಬಂದರೂ ಬಿಲ್ ಆಗಿರಲಿಲ್ಲ. ಈ ಬಗ್ಗೆ ಫಲಾನುಭವಿಗಳು ಗ್ರಾಮ ಪಂಚಾಯತ್ ಸದಸ್ಯರನ್ನು ಪದೇ ಪದೇ ಕೇಳುತ್ತಿದ್ದರು. ಗ್ರಾಮ ಪಂಚಾಯತ್ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯರದ್ದಾಗಿದೆ. ಕೋವಿಡ್ ನೆಪದಲ್ಲಿ ಅಧಿಕಾರಿಗಳು ಇತರೆ ಅಭಿವೃದ್ಧಿ ಕೆಲಸಗಳಿಗೆ ಒತ್ತು ಕೊಡುತ್ತಿಲ್ಲ. ಮನೆಗಳ ಬಿಲ್ ಬಗ್ಗೆ ಕೇಳಲು ಹೋದರೆ, ಸರ್ಕಾರದಿಂದ ಇನ್ನೂ ಹಣ ಬಂದಿಲ್ಲ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ.

    ಇದರಿಂದ ಗ್ರಾಮ ಪಂಚಾಯತಿ ಸದಸ್ಯ ಮೊಹ್ಮದ್ ರಫಿಕ್ ಕರ್ನಾಚಿ ಎಂಬವರು ಸಚಿವ ಸೋಮಣ್ಣ ಅವರಿಗೆ ಫೋನ್ ಮಾಡಿದ್ದಾರೆ. ಆರಂಭದಲ್ಲಿ ಚೆನ್ನಾಗಿಯೇ ಮಾತಾಡಿದ ಸಚಿವರು, ನಾನು ಗ್ರಾಮ ಪಂಚಾಯತಿ ಸದಸ್ಯ ಅಂತಾ ಮೊಹ್ಮದ್ ಹೇಳಿದ ಕೂಡಲೇ ಗರಂ ಆಗಿ, ಮೇಂಬರ್ ಆದರೆ ನೀನೇನು ದೇವ್ರಾ ಅಂತಾ ಗದರಿ, ಬಿಲ್ ಬರಲಿಲ್ಲ ಅಂದರೆ ಪಿಡಿಓ ಕೇಳುತ್ತಾರೆ. ನೀನಲ್ಲಾ, ಫೋನ್ ಪಿಡಿಓ ಕೈನಲ್ಲಿ ಕೊಡು ಅಂತಾ ಏಕವಚನದಲ್ಲಿಯೇ ಮಾತಾನಾಡಿದ್ದಾರೆ.

    ನಾವು ಯಾವುದನ್ನು ಪೆಂಡಿಂಗ್ ಇಟ್ಟುಕೊಂಡಿಲ್ಲ. ಎಲ್ಲಾ ಕೆಲಸ ಮಾಡುತ್ತಿದ್ದೇವೆ. ಪಿಡಿಓಗೆ ಫೋನ್ ಕೊಡು ಅಂದಿದ್ದಾರೆ. ಪಿಡಿಓ ಅವರು ಸರಿಯಾಗಿ ಬರುತ್ತಿಲ್ಲ ಅಂದ ಕೂಡಲೇ, ಅದೇನಿದೆ ರಿಪೋರ್ಟ್ ಹಾಕು ತನಿಖೆ ಮಾಡಿಸುತ್ತೇನೆ ಎಂದು ಗರಂ ಮಾತುಗಳನ್ನಾಡಿದರು. ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದೆ. ಸಂಕಷ್ಟದಲ್ಲಿರುವ ಜನರ ಪರವಾಗಿ ನಿಂತ ಗ್ರಾಮ ಪಂಚಾಯತ್ ಸದಸ್ಯನಿಗೆ ಸಚಿವರು ಹೀಗೆ ಮಾತಾನಾಡಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆ ಈಗ ಸಾರ್ವಜನಿಕರಲ್ಲಿ ಮೂಡಿದೆ. ಇದನ್ನೂ ಓದಿ: ಉರುಳಾದ ಜೋಕಾಲಿ – ಕ್ಷಣಾರ್ಧದಲ್ಲಿ ಹೋಯ್ತು ಬಾಲಕನ ಜೀವ

  • ಸ್ವಾತಂತ್ರ್ಯ ದಿನದಂದು ಬೆಂಗಳೂರಿನಲ್ಲಿ 5 ಸಾವಿರ ಮನೆ ವಿತರಣೆ

    ಸ್ವಾತಂತ್ರ್ಯ ದಿನದಂದು ಬೆಂಗಳೂರಿನಲ್ಲಿ 5 ಸಾವಿರ ಮನೆ ವಿತರಣೆ

    – 1 ಲಕ್ಷ ಮನೆ ಮಂಜೂರಾತಿಗಾಗಿ ಬುಧವಾರದಿಂದ ಅರ್ಜಿ
    – ಆಹ್ವಾನ ಪ್ರಕ್ರಿಯೆ ಆರಂಭ – ವಿ.ಸೋಮಣ್ಣ

    ಬೆಂಗಳೂರು: ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಬಡ ಜನರಿಗೆ ವಿತರಿಸಲು ಬೆಂಗಳೂರು ನಗರ ಜಿಲ್ಲೆಯಲ್ಲಿ ನಿರ್ಮಾಣ ಮಾಡುತ್ತಿರುವ 1 ಲಕ್ಷ ಬಹುಮಹಡಿ ಮನೆಗಳ ಮಂಜೂರಾತಿಗೆ ಸಂಬಂಧಿಸಿದಂತೆ ಮುಂದಿನ ಬುಧವಾರದಿಂದ ಅರ್ಜಿಗಳನ್ನು ಆಹ್ವಾನಿಸುವ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಆಗಸ್ಟ್ 15ರಂದು ಮುಖ್ಯಮಂತ್ರಿಗಳು 5000 ಮನೆಗಳನ್ನು ವಿತರಿಸಲಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

    ಸಚಿವರು ಇಂದು 1 ಲಕ್ಷ ಬಹುಮಹಡಿ ಮನೆಗಳ ಯೋಜನೆಯ ಅನುಷ್ಟಾನ ಕುರಿತಂತೆ ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಈ ವಿಷಯ ಪ್ರಕಟಿಸಿದರು.

    ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೀಮಿತವಾಗಿದ್ದ ಸೌಲಭ್ಯವನ್ನು ಬೆಂಗಳೂರು ನಗರ ಜಿಲ್ಲೆಗೆ ವಿಸ್ತರಿಸಲಾಗಿದ್ದು, ವಾರ್ಷಿಕ ಆದಾಯದ ಮಿತಿಯನ್ನು 87,600 ರೂ.ಗಳಿಂದ 3 ಲಕ್ಷಕ್ಕೆ ಏರಿಸಲಾಗಿದೆ, ಹಿಂದೆ ನಗರದಲ್ಲಿ ಒಂದಿಂಚು ಭೂಮಿಯನ್ನು ಹೊಂದದೆ, ಮನೆಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿತ್ತು, ಹೀಗಾಗಿ ಈ ಹಿಂದೆ ಸ್ವೀಕರಿಸಿದ್ದ ಅರ್ಜಿಗಳನ್ನು ರದ್ದುಪಡಿಸಿ, ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ ಎಂದು ಸಚಿವರು ಹೇಳಿದರು. ಈ ಹಿಂದೆ ಅರ್ಜಿ ಸಲ್ಲಿಸಿದ್ದವರು ಈಗ ಹೊಸದಾಗಿ ಅರ್ಜಿ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದರು.

    ಪ್ರಧಾನಮಂತ್ರಿಗಳ ಆಶಯದಂತೆ ಬಡವರಿಗೆ ಮನೆಗಳನ್ನು ವಿತರಿಸುವ ಈ ಯೋಜನೆಗಾಗಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ ಹಾಗೂ ಇನ್ನಿತರ ಸರ್ಕಾರಿ ಸಂಸ್ಥೆಗಳಿಂದ 515 ಎಕರೆ ಭೂಮಿಯನ್ನು ಪಡೆಯಲಾಗಿದೆ. ಮೊದಲ ಹಂತದಲ್ಲಿ 46,998 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದ್ದು, 42,361 ಮನೆಗಳ ನಿರ್ಮಾಣ ಕಾರ್ಯ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ. 2022ರ ನವೆಂಬರ್ ವೇಳೆಗೆ 80,000 ಮನೆಗಳನ್ನು ನಿರ್ಮಿಸಿ ಅರ್ಹರಿಗೆ ವಿತರಿಸಲಾಗುವುದು ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.

    ಮನೆ ನಿರ್ಮಾಣ ಹಾಗೂ ವಿತರಣೆ ಕಾರ್ಯ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದ್ದು, ವಾಸ ಮಾಡಲು ಮನೆಯನ್ನು ಹೊಂದಿರದ ಬಡವರು ಹಾಗೂ ಆಶಕ್ತರು ಸ್ವಂತ ಸೂರು ಹೊಂದಬೇಕೆಂಬುದೆ ತಮ್ಮ ಬದ್ಧತೆಯಾಗಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

    ಸಭೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಸವರಾಜ್, ಮುಖ್ಯ ಎಂಜನಿಯರ್‍ಗಳು ಹಾಗೂ ಅಧಿಕಾರಿಗಳು ಹಾಜರಿದ್ದರು. ಇದನ್ನೂ ಓದಿ: ಹತ್ತು ಲಕ್ಷ ಹಣದೊಂದಿಗೆ ಸುದ್ದಿಗೋಷ್ಠಿ ನಡೆಸಿದ ಹೆಚ್‍ಡಿ.ರೇವಣ್ಣ, ಶಿವಲಿಂಗೇಗೌಡ