Tag: ಪಬ್ಲಿಕ್ ಟಿವಿ. udupi

  • ಮೀಸಲಾತಿ ಕೇಳಿದ್ರೆ ತಪ್ಪೇನು – ಜಾತಿ ಹೋರಾಟಕ್ಕೆ ಸಿದ್ದರಾಮಯ್ಯ ಬೆಂಬಲ

    ಮೀಸಲಾತಿ ಕೇಳಿದ್ರೆ ತಪ್ಪೇನು – ಜಾತಿ ಹೋರಾಟಕ್ಕೆ ಸಿದ್ದರಾಮಯ್ಯ ಬೆಂಬಲ

    ಉಡುಪಿ: ಮೀಸಲಾತಿ ಕೇಳುವುದರಲ್ಲಿ ತಪ್ಪೇನಿಲ್ಲ. ಸಂವಿಧಾನಾತ್ಮಕವಾಗಿ ಅರ್ಹತೆ ಇರುವವರಿಗೆ ಮೀಸಲಾತಿ ಕೊಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಾತಿ ಹೋರಾಟಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಪರಿಶೀಲಿಸಿ ಶಿಫಾರಸು ಮಾಡಬೇಕು. ಹೊಸ ಸೇರ್ಪಡೆ ಮತ್ತು ಮೀಸಲಾತಿ ಕೈ ಬಿಡುವ ಬಗ್ಗೆ ಆಯೋಗ ಶಿಫಾರಸು ಮಾಡಬೇಕು. ರಾಜ್ಯದಲ್ಲಿ ಪ್ರತಿನಿತ್ಯ ಹೋರಾಟಗಳು ನಡೆಯುತ್ತಿದೆ. ಸರಕಾರ ಸಂವಿಧಾನಾತ್ಮಕವಾಗಿ ಶೀಘ್ರ ತೀರ್ಮಾನ ಕೈಗೊಳ್ಳಲಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

    ಐದು ಪೈಸೆ ಬಂದಿಲ್ಲ: ಐಎಂಎ ವಂಚಕ ಮನ್ಸೂರ್‍ಗೂ ನನಗೂ ಯಾವುದೇ ಸಂಬಂಧ ಇಲ್ಲ. ಯಾರಿಗೋ ದುಡ್ಡು ಕೊಟ್ಟು ನನಗೆ ಕೊಟ್ಟಿದ್ದಾನೆ ಎಂದರೆ ಏನು ಪ್ರಯೋಜನ? ಅವನು ಯಾರಿಗೆ ಕೊಟ್ಟಿದ್ದಾನೆ ಅವರಿಂದ ವಸೂಲಿ ಮಾಡಿ, ಅವನನ್ನು ವಿಚಾರಿಸಿ, ಐ ಡುನಾಟ್ ನೋ. ನಾನು ಯಾರಿಂದಲೂ 5 ಪೈಸೆ ಪಡೆದಿಲ್ಲ. ನನಗೆ ಮನ್ಸೂರ್ ನಿಂದ ಹಣ ಪಡೆಯುವ ಯಾವ ಅಗತ್ಯವೂ ಇಲ್ಲ ಎಂದು ಹೇಳಿದು

    ಅಯೋಧ್ಯೆ ನಿಧಿ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ರಾಮಮಂದಿರ ಬಗ್ಗೆ ನಾನೇನು ತಪ್ಪು ಹೇಳಿದ್ದೇನೆ. ಅಯೋಧ್ಯೆಗೆ ನಾನು ನಿಧಿ ಕೊಡುವುದಿಲ್ಲ. ನನ್ನ ಊರಿನ ರಾಮಮಂದಿರಕ್ಕೆ ಕೊಡುತ್ತೇನೆ. ನಾನು ಹೇಳಿದ್ದು ತಪ್ಪಾ? ನಮ್ಮೂರಿನಲ್ಲಿ ಆಗುತ್ತಿರುವುದು ರಾಮಮಂದಿರ ಅಲ್ವಾ? ನನ್ನ ಊರಿನಲ್ಲಿ ಕಟ್ಟುವುದು ದಶರಥ ಪುತ್ರ ರಾಮ ಮಂದಿರ ಅಲ್ವಾ? ನನ್ನ ಮಾತಿನಲ್ಲಿ ವಿವಾದ ಆಗುವಂಥದ್ದು ಏನಿದೆ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದರು.

    ಬಿಜೆಪಿಯಲ್ಲಿ ಒಬ್ಬರಿಗೂ ದೇಶ ನಿಷ್ಠೆ ಇಲ್ಲ, ಬಿಜೆಪಿಯಿಂದ ಯಾರು ದೇಶಕ್ಕಾಗಿ ಸತ್ತಿಲ್ಲ. ನಾನು ಯಾವ ಸ್ವಾಮಿಗಳ ಬಗ್ಗೆ ಕೂಡ ಮಾತನಾಡುವುದಿಲ್ಲ ಎಂದರು.

  • ವಿಶ್ವ ಹಿಂದೂ ಪರಿಷತ್ ಪುಂಡು ಪೋಕರಿಗಳ ಸಂಸ್ಥೆ ಅಲ್ಲ: ಪೇಜಾವರ ಶ್ರೀ

    ವಿಶ್ವ ಹಿಂದೂ ಪರಿಷತ್ ಪುಂಡು ಪೋಕರಿಗಳ ಸಂಸ್ಥೆ ಅಲ್ಲ: ಪೇಜಾವರ ಶ್ರೀ

    ಉಡುಪಿ: ವಿಶ್ವ ಹಿಂದೂ ಪರಿಷತ್ ಪುಂಡು ಪೋಕರಿಗಳ ಸಂಸ್ಥೆಯಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪೇಜಾವರ ಶ್ರೀ ತಿರುಗೇಟು ಕೊಟ್ಟಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮಜನ್ಮಭೂಮಿ ಟ್ರಸ್ಟ್ ಬೇನಾಮಿ ಸಂಸ್ಥೆ ಅಲ್ಲ. ಟ್ರಸ್ಟ್ ನೋಂದಣಿಯಾಗಿರುವ ಸಂಸ್ಥೆ. ಟ್ರಸ್ಟ್ ನೊಂದಾವಣೆಗೆ ಅದರದ್ದೇ ಆದ ನೀತಿ ನಿಯಮಗಳಿವೆ. ದೇಣಿಗೆ ಸಂಗ್ರಹ ಮಾಡಲು ಅದರದ್ದೇ ಆದ ಕಾನೂನಿದೆ. ನಮಗೆ ಸಂವಿಧಾನವೇ ಅಧಿಕಾರ ಕೊಟ್ಟಿದೆ, ಪಾರರ್ದಶಕತೆ ಖಂಡಿತವಾಗಿ ಬೇಕೆ ಬೇಕು. ಸಂಶಯಗಳನ್ನು ಮುಂದಿಟ್ಟರೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿ ಮುಚ್ಚುಮರೆ ಮಾಡಲು ಯಾವುದೇ ವಿಷಯಗಳು ನಡೆಯುವುದಿಲ್ಲ. ಕಾನೂನಾತ್ಮಕವಾಗಿ ಅದಕ್ಕೆ ಬೇಕಾಗಿರುವಂತ ಪುರಾವೆಗಳನ್ನು ಕೊಡಲು ಸಾಧ್ಯವಿದೆ ಎಂದರು.

    ಯಾವುದೇ ಸಂಶಯಗಳನ್ನು ಇಟ್ಟು ಆರೋಪ ಮಾಡುವುದು ಸೂಕ್ತವಲ್ಲ. ರಾಮ ಜನ್ಮಭೂಮಿ ಟ್ರಸ್ಟ್ ನಂತೆ ಅಧಿಕೃತವಾಗಿರುವ ವಿಶ್ವ ಪರಿಷತ್ ಕಾರ್ಯಕರ್ತರು ದೇಣಿಗೆ ಸಂಗ್ರಹ ಮಾಡುತ್ತಿದೆ. ವಿಶ್ವ ಹಿಂದೂ ಪರಿಷತ್‍ನ ಕಾರ್ಯರ್ತರಿಗೆ ದೇಣಿಗೆ ಸಂಗ್ರಹದ ಜವಾಬ್ದಾರಿ ನೀಡಲಾಗಿದೆ. ವಿಹಿಂಪನ ಮುಖ್ಯಸ್ಥ ಆಯಾ ಊರಿನಲ್ಲಿ ಸಂಗ್ರಹ ನಿರತರಾಗಿದ್ದಾರೆ. ಹಿರಿಯ, ಮುಂದಾಳುಗಳ ನೇತೃತ್ವದಲ್ಲಿ ಕಾರ್ಯಕರ್ತರು ನಿಧಿ ಸಂಗ್ರಹ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

    ವಿಹಿಂಪ ಪುಂಡು ಪೋಕರಿಗಳ ಸಂಸ್ಥೆಯಲ್ಲ, ಇದು ಅಧಿಕೃತ ಸಂಸ್ಥೆ. ಹಾಗಾಗಿ ಇಂತಹ ಮಾತು ಬಳಸುವುದು ಯುಕ್ತವಲ್ಲ. ಸಂಶಯಕ್ಕೆ ಪರಿಹಾರ ಇದೆ. ಸಂಶಯ ಇದೆ ಎಂದು ಅರೋಪ ಮಾಡಿದರೆ, ಆರೋಪದಲ್ಲಿಯೇ ಮುಗಿಯುತ್ತದೆ. ಆರೋಪಕ್ಕೆ ಪ್ರತ್ಯಾರೋಪ ಸಿಗುತ್ತದೆ, ಪ್ರಶ್ನೆಗೆ ಉತ್ತರ ಸಿಗುವುದಿಲ್ಲ, ಪ್ರಶ್ನೆ ಮಾಡಿದರೆ ಉತ್ತರ ಕೊಡಬಹುದು ಎಂದು ಉಡುಪಿಯಲ್ಲಿ ಪೇಜಾವರ ಶ್ರೀ ಖಡಕ್ ಪ್ರತಿಕ್ರಿಯೆ ನೀಡಿದರು.

     

  • ರಾಜ್ಯೋತ್ಸವ ಕಪ್ ಮುಡಿಗೇರಿಸಿಕೊಂಡ ಕರಾವಳಿ ಪೊಲೀಸರು – ಎಸ್‍ಪಿ ಇಲೆವೆನ್‍ಗೆ ರನ್ನರ್ ಅಪ್

    ರಾಜ್ಯೋತ್ಸವ ಕಪ್ ಮುಡಿಗೇರಿಸಿಕೊಂಡ ಕರಾವಳಿ ಪೊಲೀಸರು – ಎಸ್‍ಪಿ ಇಲೆವೆನ್‍ಗೆ ರನ್ನರ್ ಅಪ್

    ಉಡುಪಿ: ಕರಾವಳಿ ಕಾವಲು ಪೊಲೀಸ್ ತಂಡ ಈ ಬಾರಿಯ ಉಡುಪಿ ಜಿಲ್ಲಾ ಗಣರಾಜ್ಯೋತ್ಸವ ಕ್ರಿಕೆಟ್ ಕಪ್ ಗೆದ್ದಿದೆ. ಎಸ್‍ಪಿ ನೇತೃತ್ವದ ಜಿಲ್ಲಾ ಪೊಲೀಸ್ ತಂಡ ರನ್ನರ್ ಅಪ್ ಪ್ರಶಸ್ತಿಗೆ ಭಾಜನವಾಗಿದೆ.

    72 ನೇ ಗಣರಾಜ್ಯೋತ್ಸವ ಪ್ರಯುಕ್ತ ಉಡುಪಿ ಜಿಲ್ಲಾಡಳಿತ ಮಣಿಪಾಲದ ಎಂಡ್ ಪಾಯಿಂಟ್ ಮೈದಾನದಲ್ಲಿ ಸೀಮಿತ ಓವರ್ ಗಳ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿತ್ತು. ಡಿಸಿ ಇಲೆವೆನ್, ಉಡುಪಿ ಜಿಲ್ಲಾ ಪೊಲೀಸ್, ಕರಾವಳಿ ಕಾವಲು ಪೊಲೀಸ್, ಜಿಲ್ಲಾ ಸರಕಾರಿ ವೈದ್ಯರ ತಂಡ, ಜಿಲ್ಲಾ ಪಂಚಾಯತ್ ಮತ್ತು ಪತ್ರಕರ್ತರ ತಂಡ ಕ್ರಿಕೆಟ್ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದವು.

    ನಿಗದಿತ 10 ಓವರ್ ಗಳ ಮೊದಲ ಪಂದ್ಯದಲ್ಲಿ ಕರಾವಳಿ ಪೊಲೀಸರ ತಂಡ ಜಿಲ್ಲಾ ವೈದ್ಯಾಧಿಕಾರಿಗಳ ತಂಡವನ್ನು ಸೋಲಿಸಿತು. ಡಿಸಿ ಇಲೆವೆನ್ ಮತ್ತು ಜಿಲ್ಲಾ ಪೊಲೀಸ್ ತಂಡಗಳ ನಡುವೆ ನಡೆದ ಜಿದ್ದಾಜಿದ್ದಿನ ಲೀಗ್ ಪಂದ್ಯದಲ್ಲಿ ಎಸ್ ಪಿ. ವಿಷ್ಣುವರ್ಧನ್ ನೇತೃತ್ವದ ತಂಡ ವಿಜಯಿಯಾಯಿತು. ಸೆಮಿ ಫೈನಲ್ ನಲ್ಲಿ ಪತ್ರಕರ್ತರ ತಂಡ ಜಿಲ್ಲಾ ಪೊಲೀಸ್ ತಂಡದ ಎದುರು ಸೋಲನ್ನು ಅನುಭವಿಸಿತು. ಸಿಇಒ ನವೀನ್ ಭಟ್ ನೇತೃತ್ವದ ಜಿಲ್ಲಾ ಪಂಚಾಯತ್ ತಂಡವನ್ನು ಸಿಎಸ್‍ಪಿ ತಂಡ ಮಣಿಸಿ ಫೈನಲ್ ಗೆ ಪ್ರವೇಶಿಸಿತು.

    ಕರಾವಳಿ ಕಾವಲು ಪೊಲೀಸ್ ತಂಡ ಉಡುಪಿ ಜಿಲ್ಲಾ ಪೊಲೀಸ್ ತಂಡವನ್ನು ಮಣಿಸಿ 2020 ಗಣರಾಜ್ಯೋತ್ಸವ ಕಪ್ ಗೆದ್ದಿದೆ. ಗೆಲ್ಲುವ ಹಾಟ್ ಫೇವರೆಟ್ ತಂಡವೆಂದು ಬಿಂಬಿತವಾಗಿದ್ದ ಜಿಲ್ಲಾ ಪೊಲೀಸ್ ತಂಡ ರೋಚಕ ತಿರುವು ಕಂಡು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಜಿಲ್ಲಾ ಪೊಲೀಸ್ ತಂಡದಲ್ಲಿ ಆಡಿದ ಪ್ರಶಾಂತ್ ಪಡುಕೆರೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು. ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್, ಎಸ್ಪಿ ವಿಷ್ಣುವರ್ಧನ್, ಕರಾವಳಿ ಕಾವಲು ಪೊಲೀಸ್ ಎಸ್ಪಿ ಚೇತನ್ ಕುಮಾರ್, ಜಿಲ್ಲಾ ಪಂಚಾಯತಿ ಸಿಇಓ ನವೀನ್ ಭಟ್, ಜಿಲ್ಲಾ ವೈದ್ಯಾಧಿಕಾರಿ ಡಾ. ಸುಧೀರ್ ಚಂದ್ರ ಚೂಡ ಕೊರೋನಾ ನೋಡಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ಜಿಲ್ಲೆಯ ಠಾಣೆಗಳ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಕ್ರಿಕೆಟ್ ಪಂದ್ಯಾಟದಲ್ಲಿ ಪಾಲ್ಗೊಂಡರು.

  • 2 ದಿನ ಸಿಎಂ ಉಡುಪಿ ಪ್ರವಾಸ- ಯಾವೆಲ್ಲ ಸ್ಥಳಕ್ಕೆ ಭೇಟಿ?

    2 ದಿನ ಸಿಎಂ ಉಡುಪಿ ಪ್ರವಾಸ- ಯಾವೆಲ್ಲ ಸ್ಥಳಕ್ಕೆ ಭೇಟಿ?

    ಉಡುಪಿ: ಬಿಜೆಪಿಯ ಸಚಿವಾಕಾಂಕ್ಷಿಗಳ ಅಸಮಾದನ ಮತ್ತು ಸಿಡಿ ಗದ್ದಲದ ನಡುವೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಎರಡು ದಿನ ಕರಾವಳಿಯ ಪ್ರವಾಸ ಕೈಗೊಂಡಿದ್ದಾರೆ. ಸೋಮವಾರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ.

    ಮುಖ್ಯಮಂತ್ರಿಯಾದ ನಂತರ ಎರಡನೇ ಬಾರಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಬಿಎಸ್‍ವೈ ಭೇಟಿ ನೀಡುತ್ತಿದ್ದು, ಪರ್ಯಾಯ ಪಂಚ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಠದ ಕಾರ್ಯಕ್ರಮ ನಂತರ ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಡುಪಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

    ಕರಂಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಗಳವಾರ ಬೆಳಗ್ಗೆ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಜೊತೆ ಸಿಎಂ ಬಿಎಸ್‍ವೈ ಆಗಮಿಸಲಿದ್ದಾರೆ. ಕಾಪು ತಾಲೂಕಿನ ಹೆಜಮಾಡಿ ಬಂದರಿಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿ ಮಧ್ಯಾಹ್ನ ಕುಂದಾಪುರ ತಾಲೂಕು ಕುಂಭಾಸಿ ಆನೆಗುಡ್ಡೆ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.

    ಸಿಎಂ ಆದ ನಂತರ ಬಿಎಸ್ ಯಡಿಯೂರಪ್ಪ ಅವರದ್ದು ಇದು ಉಡುಪಿಗೆ ನಾಲ್ಕನೇ ಭೇಟಿ. ಉಡುಪಿ ಜಿಲ್ಲೆಯ ಐದು ಬಿಜೆಪಿ ಶಾಸಕರು, ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.

  • ಪೇಜಾವರ ಶ್ರೀಗಳ ಪೂಜಾ ಸಾಮಾಗ್ರಿಗಳು ಬೆಂಗ್ಳೂರಿಗೆ ಶಿಫ್ಟ್

    ಪೇಜಾವರ ಶ್ರೀಗಳ ಪೂಜಾ ಸಾಮಾಗ್ರಿಗಳು ಬೆಂಗ್ಳೂರಿಗೆ ಶಿಫ್ಟ್

    ಉಡುಪಿ: ಪೇಜಾವರ ಮಠದ ಆವರಣದಲ್ಲಿರುವ ಅಧೋಕ್ಷಜ ಮಠದಲ್ಲಿ ಸದ್ಯ ವಿಶ್ವೇಶತೀರ್ಥ ಸ್ವಾಮೀಜಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಪೂಜಾ ಸಾಮಾಗ್ರಿಗಳನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ.

    ಪೇಜಾವರ ಶ್ರೀಗಳ ಪೂಜಾ ಸಾಮಾಗ್ರಿ, ಅವರ ಪೀಠ, ಶ್ರೀ ಕೃಷ್ಣನ ಪೂಜೆಗೆ ಉಪಯೋಗಿಸುತ್ತಿದ್ದ ಪೂಜಾ ಪರಿಕರವನ್ನು ಸಿಬ್ಬಂದಿ ವಾಹನದೊಳಗೆ ತುಂಬಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬೆಂಗಳೂರಿನ ವಿದ್ಯಾಪೀಠಕ್ಕೆ ಈ ಸಾಮಾಗ್ರಿಗಳು ಶಿಫ್ಟ್ ಆಗಲಿವೆ. ಕಿರಿಯ ಸ್ವಾಮೀಜಿಗಳು ಕೂಡ ಸಂಜೆ ವಿದ್ಯಾ ಪೀಠಕ್ಕೆ ತೆರಳಲಿದ್ದಾರೆ ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.

    ಈಗಾಗಲೇ ಶ್ರೀಗಳ ಸುಮಾರು 30 ಮಂದಿ ಶಿಷ್ಯರು ಶಿಫ್ಟ್ ಆಗಿದ್ದಾರೆ. 6 ಟಿಟಿಯಲ್ಲಿ ಪೂಜಾ ಸಾಮಾಗ್ರಿ ಹಾಗೂ ಶಿಷ್ಯವೃಂದದವರು ತೆರಳಿದ್ದಾರೆ. ಕಿರಿಯ ಶ್ರೀಗಳ ಪೂಜಾ ಸಾಮಾಗ್ರಿಗಳನ್ನು ಕೂಡ ಶಿಫ್ಟ್ ಮಾಡಲಾಗಿದೆ. ಸಂಜೆಯ ವೇಳೆಯ ಪೂಜೆ ವಿದ್ಯಾಪೀಠದಲ್ಲಿ ನಡೆಯುವ ಹಿನ್ನೆಲೆಯಲ್ಲಿ ಪೂಜಾ ಸಾಮಾಗ್ರಿಗಳನ್ನು ಶಿಫ್ಟ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

  • ನೋಟಾ ಪರ ಅಭಿಯಾನ ಮಾಡಿದ್ರೆ ಬೀಳುತ್ತೆ ಕೇಸ್

    ನೋಟಾ ಪರ ಅಭಿಯಾನ ಮಾಡಿದ್ರೆ ಬೀಳುತ್ತೆ ಕೇಸ್

    ಉಡುಪಿ: ನೋಟಾಕ್ಕೆ ಮತ ಹಾಕುವಂತೆ ಪ್ರಭಾವ ಬೀರುವುದು ಅಪರಾಧ. ಆದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪಕ್ಷ ಅಥವಾ ವ್ಯಕ್ತಿ ವಿರುದ್ಧ ನೋಟಾ ಅಭಿಯಾನ ಮಾಡಿದರೆ ಅವರ ಮೇಲೆ ಕೇಸ್ ದಾಖಲಾಗುತ್ತದೆ ಎಂದು ಉಡುಪಿ ಡಿಸಿ ಹೆಪ್ಸಿಬಾ ರಾಣಿ ಕೊರ್ಲಾಪಾಟಿ ಎಚ್ಚರಿಕೆ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೋಟಾ ಬಗ್ಗೆ ಮಾಹಿತಿ ನೀಡುವುದು ತಪ್ಪಲ್ಲ. ಆದ್ರೆ ನೋಟಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಕೊಡುವಂತಿಲ್ಲ. ನೋಟಾ ಒಂದು ಆಯ್ಕೆ ಮಾತ್ರ. ಇದು ದೇಶದ ಮತದಾರರ ವೈಯಕ್ತಿಕ ಹಕ್ಕು. ಹೀಗಾಗಿ ನೋಟಾಕ್ಕೆ ಮತಹಾಕಿ ಎಂದು ಪ್ರಚಾರ ಮಾಡುವುದು ಕಾನೂನು ಬಾಹಿರ. ಸಾಮಾಜಿಕ ಜಾಲತಾಣದಲ್ಲಿ ನೋಟಾ ಅಭಿಯಾನ ಮಾಡುವಂತಿಲ್ಲ. ನೋಟಾ ಬಗ್ಗೆ ಯಾರೂ ಎಲ್ಲೂ ಪ್ರಚಾರ ಕೊಡಬಾರದು. ನೋಟಾ ಬಗ್ಗೆ ಮಾಹಿತಿ ನೀಡುವ ಅವಕಾಶ ಇದೆ. ಆದ್ರೆ ಅದನ್ನೇ ರಾಜಕೀಯಕ್ಕೆ ಬಳಸುವಂತಿಲ್ಲ. ಹೀಗೆ ಮಾಡಿ ಕಾನೂನು ಉಲ್ಲಂಘಿಸಿದರೆ ಅವರ ಮೇಲೆ ಪ್ರಕರಣ ದಾಖಲಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಲೋಕಸಭಾ ಚುನಾವಣೆಗೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಂಸದೆ ಶೋಭಾ ಕರಂದ್ಲಾಜೆ ಅವರು ಕಣಕ್ಕಿಳಿದಿದ್ದಾರೆ. ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಬಿಜೆಪಿ ಬೆಂಬಲಿತ ವ್ಯಕ್ತಿಗಳು ನೋಟಾ ಒತ್ತುವಂತೆ ಪ್ರಚಾರ ಮಾಡುತ್ತಿದ್ದಾರೆ.

    ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್ ಅಡಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದಕ್ಕೆ ಕಾಂಗ್ರೆಸ್ಸಿನಲ್ಲೇ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಕೆಲ ಕಾಂಗ್ರೆಸ್ ನಾಯಕರು ನೋಟಾ ಒತ್ತುವಂತೆ ಪ್ರಚಾರ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನೋಟಾದ ಬಗ್ಗೆ ಭಾರೀ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಈ ಎಚ್ಚರಿಕೆ ನೀಡಿದ್ದಾರೆ.

  • ಕಾರುಗಳ ಮೇಲೆ ಚೌಕಿದಾರ್ ಸ್ಟಿಕ್ಕರ್- ಉಡುಪಿಯಲ್ಲಿ ಜೋರಾಗಿದೆ ಎಲೆಕ್ಷನ್ ವಾರ್

    ಕಾರುಗಳ ಮೇಲೆ ಚೌಕಿದಾರ್ ಸ್ಟಿಕ್ಕರ್- ಉಡುಪಿಯಲ್ಲಿ ಜೋರಾಗಿದೆ ಎಲೆಕ್ಷನ್ ವಾರ್

    ಉಡುಪಿ: ಲೋಕಸಭಾ ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಕಣ ರಂಗೇರುತ್ತಿದೆ. ಪ್ರಚಾರದ ಅಬ್ಬರ ಜಾಸ್ತಿಯಾಗುತ್ತಿದ್ದಂತೆ ಕಾರ್ಯಕರ್ತರ ನಡುವೆ ಸ್ಟಿಕ್ಕರ್ ವಾರ್ ಶುರುವಾಗಿದೆ.

    ರಾಜ್ಯದಲ್ಲಿ ಬಿಜೆಪಿ “ಮೆ ಬೀ ಚೌಕಿದಾರ್” ಅಂದರೆ, ಮೈತ್ರಿ ಪಕ್ಷಗಳು “ಚೌಕಿದಾರ್ ಚೋರ್ ಹೇ” (ಕಾವಲುಗಾರ ಕಳ್ಳ) ಅಂತ ಪ್ರಚಾರ ಶುರು ಮಾಡಿದೆ. ಸಂಸತ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ, ನಾನು ದೇಶದ ಚೌಕಿದಾರ, ದೇಶದಲ್ಲಿ ಭ್ರಷ್ಟಾಚಾರ ನಡೆಯದಂತೆ ಹಾಗೂ ಶತ್ರುರಾಷ್ಟ್ರಗಳಿಂದ ದೇಶವನ್ನು ಕಾವಲುಗಾರನಂತೆ ರಕ್ಷಣೆ ಮಾಡುತ್ತೇನೆ ಎಂದಿದ್ದರು. ಅಂದಿನಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚೌಕಿದಾರ್ ಶಬ್ದವನ್ನು ಫೋಕಸ್ ಮಾಡಿ ಮೋದಿ ವಿರುದ್ಧ ಪ್ರಚಾರಕ್ಕೆ ಹೋದಲ್ಲಿ ಬಂದಲ್ಲಿ “ಚೌಕಿದಾರ್ ಚೋರ್ ಹೇ” ಎಂದಿದ್ದರು. ಅಲ್ಲದೆ ರಫೇಲ್, ನೀರವ್ ಮೋದಿ ಬ್ಯಾಂಕ್ ಗೋಲ್ ಮಾಲ್, ಅದಾನಿ ಅಂಬಾನಿ ವಿಚಾರದ ಪ್ರತಿಭಟನೆಗಳಲ್ಲಿ ಚೌಕಿದಾರ್ ಚೋರ್ ಎಂಬ ಘೋಷವಾಕ್ಯ ಬಳಸಲಾಗಿತ್ತು.

    ಆದರೇ 2019 ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಇದನ್ನೇ ಅಸ್ತ್ರವಾಗಿ ಬಳಸಿ ರಾಹುಲ್ ಗಾಂಧಿಗೆ ತಿರುಗೇಟು ನೀಡಲು ಮುಂದಾಗಿದೆ. ದೇಶಾದ್ಯಂತ “ಮೇ ಬಿ ಚೌಕಿದಾರ್” ಹೆಸರಲ್ಲೇ ಅಭಿಯಾನ ನಡೆಸುತ್ತಿದೆ. ಈ ನಡುವೆ ಉಡುಪಿಯಲ್ಲಿ ಬಿಜೆಪಿ ನಾಯಕರು “ಮೆ ಬೀ ಚೌಕಿದಾರ್” ಸ್ಟಿಕ್ಕರನ್ನು ಕಾರಿಗೆ ಅಂಟಿಸಿ ಪ್ರಚಾರ ಮಾಡುತ್ತಿದ್ದರು. ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ವಾಹನಗಳಲ್ಲಿ ಚೌಕಿದಾರ್ ಸ್ಟಿಕ್ಕರ್ ಹಾಕಿ ಓಡಾತ್ತಿರುವುದನ್ನು ನೋಡಿದ ಮೈತ್ರಿ ಕಾರ್ಯಕರ್ತರು ಈ ಕ್ಯಾಂಪೇನ್‍ಗೆ ಟಾಂಗ್ ನೀಡಲು ಮುಂದಾಗಿದೆ.

    “ಚೌಕಿದಾರ್ ಚೋರ್ ಹೇ” ಸ್ಟಿಕ್ಕರ್‍ಗಳನ್ನು ಕಾರಿಗೆ ಅಂಟಿಸಿ ಮೈತ್ರಿ ಪಕ್ಷದ ಕಾರ್ಯಕರ್ತರು ಓಡಾಡುತ್ತಿದ್ದಾರೆ. ಎರಡೂ ಪಕ್ಷಗಳ ನಾಯಕರು ಸ್ಟಿಕ್ಕರ್ ಮೂಲಕವೇ ಪ್ರಚಾರದ ಕಾವು ಹೆಚ್ಚಿಸಿದ್ದಾರೆ. ಈ ಬಗ್ಗೆ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಮಾತನಾಡಿ, ಚೌಕಿದಾರ ಕೊಳ್ಳೆ ಹೊಡೆಯಲು ಬಿಡುತ್ತಿದ್ದಾನೆ. ರಫೇಲ್ ಡೀಲ್ ಮಾಡಿ ಅಂಬಾನಿಯ ಜೊತೆಗೆ ಸಾವಿರಾರು ಕೋಟಿ ರೂಪಾಯಿ ಗುಳುಂ ಮಾಡಿದ್ದಾನೆ. ಬ್ಯಾಂಕ್ ಅವ್ಯವಹಾರ ನಡೆಯುತ್ತಿದ್ದರೂ ಕಾವಲುಗಾರ ಕಳ್ಳರನ್ನು ಹಿಡಿಯಲಿಲ್ಲ ಎಂದು ಆರೋಪಿಸಿದರು.

    ಚೌಕಿದಾರ್ ಚೋರ್ ಅಂದಿರುವ ಕಾಂಗ್ರೆಸ್ ಜೆಡಿಎಸ್ ವಿರುದ್ಧ ಕಮಲ ಪಕ್ಷ ಗರಂ ಆಗಿದೆ. ಈ ಬಗ್ಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಉದಯಕುಮಾರ್ ಶೆಟ್ಟಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯ ಜನ ಬೆಂಬಲ, ಬಿಜೆಪಿಯ ಅಬ್ಬರದ ಪ್ರಚಾರಕ್ಕೆ ಮೈತ್ರಿ ಪಕ್ಷ ನಲುಗಿದೆ. ನಮ್ಮ ಪ್ರಚಾರ ವಾಕ್ಯ, ಘೋಷ ವಾಕ್ಯದ ವಿರುದ್ಧ ಪ್ರಚಾರ ಮಾಡುವುದರಲ್ಲೇ ತಲ್ಲೀನರಾಗಿದ್ದಾರೆ. ಇದನ್ನೆಲ್ಲ ಬಿಟ್ಟು ತೋರ್ಪಡಿಕೆಗಾದರೂ ಮೈತ್ರಿಯ ಬಗ್ಗೆ, ಪಕ್ಷದ ಚಿಹ್ನೆಯ ಬಗ್ಗೆ, ಅಭ್ಯರ್ಥಿಯ ಬಗ್ಗೆ ಪ್ರಚಾರ ಮಾಡಿ ಎಂದು ತಿರುಗೇಟು ನೀಡಿದ್ದಾರೆ.

  • ಅರ್ಧ ಮುಖಕ್ಕೆ ಮಸಿ, ಎರಡು ಕಿವಿಗೂ ಹೂವು- ಉಡುಪಿಯಲ್ಲಿ ವಿಭಿನ್ನ ಪ್ರತಿಭಟನೆ

    ಅರ್ಧ ಮುಖಕ್ಕೆ ಮಸಿ, ಎರಡು ಕಿವಿಗೂ ಹೂವು- ಉಡುಪಿಯಲ್ಲಿ ವಿಭಿನ್ನ ಪ್ರತಿಭಟನೆ

    ಉಡುಪಿ: ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳು ಕೈಗೊಂಡಿರುವ ಭಾರತ್ ಬಂದ್ ನ ಎರಡನೇ ದಿನ ಉಡುಪಿಯಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆದಿದೆ.

    ಜಿಲ್ಲಾ ಕೇಂದ್ರದಲ್ಲಿರುವ ಹೆಡ್ ಪೋಸ್ಟ್ ಆಫೀಸ್ ಆವರಣದಲ್ಲಿ ಅಂಚೆ ಇಲಾಖೆ ಸಿಬ್ಬಂದಿಯೊಬ್ಬರು ಪುಟ್ಗೋಸಿ ಕಟ್ಟಿಕೊಂಡು ಪ್ರತಿಭಟನೆ ಮಾಡಿದ್ದಾರೆ. ಪ್ಯಾಂಟಿನ ಮೇಲೆ ಪುಟ್ಗೋಸಿ ತೊಟ್ಟು ವಿನೂತನ ರೀತಿಯಲ್ಲಿ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿದರು. ಅರ್ಧ ಮುಖಕ್ಕೆ ಮಸಿ ಬಳಿದುಕೊಂಡು, ಎರಡೂ ಕಿವಿಗೆ ಹೂವು ಇಟ್ಟು ತಮ್ಮ ಆಕ್ರೋಶ ಹೊರಹಾಕಿದರು.

    ಸರ್ಕಾರ ನಮ್ಮನ್ನು ಪುಟ್ಗೋಸಿಯಲ್ಲಿ ನಿಲ್ಲಿಸಿದೆ. ಕಿವಿಗೆ ಹೂವಿಟ್ಟಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ನಮ್ಮ ಹಿರಿಯ ಅಧಿಕಾರಿಗಳು ಅಂಚೆ ಕಚೇರಿಯೊಳಗೆ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಮೂಲಕ ಸಂದೇಶ ಸಾರುವುದು ಈ ಪುಟ್ಗೋಸಿ ಪ್ರತಿಭಟನೆಯ ಉದ್ದೇಶವಾಗಿತ್ತು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. ಅಲ್ಲದೇ ಪ್ರಧಾನಿ ಮೋದಿಯವರನ್ನು ಕಟು ಮಾತಿನಲ್ಲಿ ಟೀಕಿಸಿದರು.

    ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಪ್ರತಿಭಟನಾಕಾರ ರಾಘವೇಂದ್ರ ಬೆಳ್ವೆ, ಅಂಚೆ ಇಲಾಖೆಯಲ್ಲಿ 20 ವರ್ಷ ಸೇವೆ ಸಲ್ಲಿಸಿದ್ದೇನೆ. 2004ರ ಇಲಾಖಾ ನಿಯಮದನ್ವಯ ಹಳೆಯ ಪಿಂಚಣಿಯನ್ನು ರದ್ದುಗೊಳಿಸಿ ಅದು ಬರೀ ಸಂಸದ ಹಾಗೂ ಶಾಸಕರಿಗೆ ಇನ್ನೂ ಕೂಡ ಅನ್ವಯವಾಗಿದೆ. ನಮಗೆಲ್ಲ ಬಿಕಾರಿಗಳಂತೆ ಹೊಸ ಪಿಂಚಣಿ ಸೇವೆಯನ್ನು ಆರಂಭಿಸಿದ್ದಾರೆ. ನಾವು ನಿವೃತ್ತಿ ಹೊಂದಿದ ಬಳಿಕ ಅದು ಜಾರಿಗೆ ಬರುವಾಗ ಅದರ ಬಿಸಿ ನಮಗೆ ತಟ್ಟಿತ್ತು. ಆಗಲೇ ನಮ್ಮ ಹಾಗೂ ವಿವಿಧ ಸಂಘಟನೆಗಳು ಹಳೆಯ ಪಿಂಚಣಿ ಬೇಕು ಅಂತ ಕೇಂದ್ರ ಸರ್ಕಾರದ ವಿರುದ್ಧ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಕಿವುಡು ಧೋರಣೆ ತೋರುತ್ತಿದೆ ಅಂತ ಕಿಡಿಕಾರಿದ್ದಾರೆ.

    ನಾಲ್ಕೂವರೆ ವರ್ಷದಲ್ಲಿ ನಮಗೆ ಕೇಂದ್ರ ಸರ್ಕಾರ ನಮ್ಮ ಎರಡು ಕಿವಿಗೆ ಬಣ್ಣ ಬಣ್ಣದ ಹೂವಿಟ್ಟಿದೆ. ತಿಂಗಳಿಗೆ 500-600 ಪಿಂಚಣಿ ನೀಡಿದ್ರೆ ನಾವು ಹೆಂಡತಿ ಮಕ್ಕಳನ್ನು ಸಾಕುವುದು ಹೇಗೆ? ಅವರಿಗೂ ಜೀವನ ಭದ್ರತೆಯಿಲ್ಲ. ಹೀಗಾಗಿ ಮಿನಿಮಮ್ ಹಳೆಯ ಪಿಂಚಣಿ ಏನಿದೆಯೋ ಅದನ್ನೇ ದಯಪಾಲಿಸಿ ಅಂತ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ರು.

    https://www.youtube.com/watch?v=-N2AwKLSx9g

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಡುಪಿಯಲ್ಲಿ ತಪ್ತಮುದ್ರಾಧಾರಣೆ – ಭಕ್ತರಿಗೆ ಇಂದು ಮತ್ತೆ ನೆನಪಾದ್ರು ಶಿರೂರು ಶ್ರೀ

    ಉಡುಪಿಯಲ್ಲಿ ತಪ್ತಮುದ್ರಾಧಾರಣೆ – ಭಕ್ತರಿಗೆ ಇಂದು ಮತ್ತೆ ನೆನಪಾದ್ರು ಶಿರೂರು ಶ್ರೀ

    ಉಡುಪಿ: ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ದೈಹಿಕವಾಗಿ ಎಲ್ಲರ ನಡುವೆ ಇಲ್ಲದಿದ್ದರೂ ಅವರ ನೆನಪುಗಳು ಮಾತ್ರ ಹಾಗೇ ಉಳಿದುಕೊಂಡಿದೆ. ಈ ಪೈಕಿ ತಪ್ತ ಮುದ್ರಾಧಾರಣೆಯೂ ಒಂದು. ಕಾರಣ ಇಂದು ತಪ್ತ ಮುದ್ರಾಧಾರಣೆ.

    ಮುದ್ರಾಧಾರಣೆ ಅಂದ ತಕ್ಷಣ ಉಡುಪಿಲ್ಲಿರುವ ಶ್ರೀಕೃಷ್ಣ ಭಕ್ತರಿಗೆ ಮೊದಲು ನೆನಪಾಗೋದು ಶಿರೂರು ಸ್ವಾಮೀಜಿ. ಎಲ್ಲಾ ಮಠಗಳಿಗಿಂತ ಮೊದಲು ಶಿರೂರು ಮಠದಲ್ಲಿ ಮುದ್ರಾಧಾರಣೆ ಶುರುವಾಗುತ್ತಿತ್ತು. ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ಹೋಗುವವರಿಗೆ ಸಮಸ್ಯೆಯಾಗಬಾರದು ಅಂತ ಶಿರೂರು ಸ್ವಾಮೀಜಿ ಬೇರೆ ಮಠಗಳಿಗಿಂತ ಮೊದಲೇ ಮುದ್ರಾಧಾರಣೆ ಶುರುಮಾಡುತ್ತಿದ್ದರು. ಈ ಬಾರಿ ತಪ್ತಮುದ್ರಾಧಾರಣೆ ಮತ್ತೆ ಬಂದಿದೆ. ಆದ್ರೆ ಶಿರೂರು ಶ್ರೀ ನೆನಪು ಮಾತ್ರ.

    ತಪ್ತ ಮುದ್ರಾಧಾರಣೆಯಂದು ಜನಜಂಗುಳಿಯಿಂದ ತುಂಬಿಕೊಳ್ಳುತ್ತಿದ್ದ ಶಿರೂರು ಮಠ ಈ ಬಾರಿ ತಣ್ಣಗಿದೆ. ಪೊಲೀಸರು ಮಠವನ್ನು ಸುಪರ್ಧಿಗೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಶಿರೂರು ಶ್ರೀಗಳ ಭಕ್ತರು, ಅಭಿಮಾನಿಗಳಿಗೆ ಈ ದಿನ ಬಹಳ ಕಾಡಲಿದೆ.

    ಇಲ್ಲಿನ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢವಾಗಿ ಮೃತಪಟ್ಟು ಐದು ದಿನಗಳು ಕಳೆದಿದೆ. ಪ್ರಕರಣ ತನಿಖೆ ಇನ್ನೂ ತನಿಖೆ ಹಂತದಲ್ಲಿದೆ.

  • ಮಾಧ್ಯಮಗಳಿಗೆ ಕೈಮುಗಿದು ಬೇಡಿಕೊಂಡ ಸಚಿವ ಆರ್ ವಿ   ದೇಶಪಾಂಡೆ

    ಮಾಧ್ಯಮಗಳಿಗೆ ಕೈಮುಗಿದು ಬೇಡಿಕೊಂಡ ಸಚಿವ ಆರ್ ವಿ ದೇಶಪಾಂಡೆ

    ಉಡುಪಿ: ಶಾಸಕರ ಅಸಮಾಧಾನಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ, ಕಂದಾಯ ಸಚಿವ ಆರ್ ವಿ ದೇಶಪಾಡೆ ನಮ್ಮ ಮನೆಯೊಳಗಿನ ಸಮಸ್ಯೆಯನ್ನು, ನಮ್ಮ ಮನೆಯ ಸದಸ್ಯರೇ ಸೇರಿ ಬಗೆಹರಿಸಿಕೊಳ್ಳುತ್ತೇವೆ. ನೀವು ತಲೆ ಕೆಡಿಸಿಕೊಳ್ಳಬೇಡಿ ಅಂತ ಮಾಧ್ಯಮಗಳಿಗೆ ಕೈಮುಗಿದು ಬೇಡಿಕೊಂಡಿದ್ದಾರೆ.

    ಉಡುಪಿಯ ಉದ್ಯಾವರದಲ್ಲಿ ಮಳೆಹಾನಿಯಾದ ಸ್ಥಳಗಳಿಗೆ ದೇಶಪಾಂಡೆ ಮತ್ತು ಖಾದರ್ ಭೇಟಿ ನೀಡಿ, ಉದ್ಯಾವರ ಪಂಚಾಯತ್ ನಲ್ಲಿ ಪರಿಹಾರ ಮೊತ್ತ ವಿತರಿಸಿದರು. ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದರು.

    ಎಚ್.ಕೆ ಪಾಟೀಲ್, ಎಂ.ಬಿ ಪಾಟೀಲ್ ನಮ್ಮ ಕುಟುಂಬದ ಸದಸ್ಯರು. ರಾಜಕೀಯದಲ್ಲಿ ಭಿನ್ನಮತದಂತಹ ಸಮಸ್ಯೆಗಳು ಬರುವುದು ಸಾಮಾನ್ಯ. ರಾಜಕಾರಣ ಅಂದ ಮೇಲೆ ಇಂತದ್ದೆಲ್ಲವನ್ನು ಎದುರಿಸಬೇಕು. ಶಾಸಕರುಗಳು ಮಂತ್ರಿಸ್ಥಾನ ಅಪೇಕ್ಷೆ ಪಡುವುದು ತಪ್ಪಲ್ಲ. ಹಾಗಾಗಿ ಮನೆಯ ಸಮಸ್ಯೆಯನ್ನು ಮನೆಯೊಳಗೆ ಬಗೆಹರಿಸುತ್ತೇವೆ. ನೀವು ಮಾಧ್ಯಮಗಳು ಅನಾವಶ್ಯಕವಾಗಿ ತಲೆಕೆಡಿಸ್ಕೋಬೇಡಿ ಎಂದು ಕ್ಯಾಮರಾ ಮುಂದೆ ಕೈ ಮುಗಿದು ಬೇಡಿಕೊಡರು