Tag: ಪಬ್ಲಿಕ್ ಟಿವಿ Suresh Kumar

  • ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಪರಿಹಾರಕ್ಕೆ ಕ್ರಮ: ಸುರೇಶ್ ಕುಮಾರ್

    ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಪರಿಹಾರಕ್ಕೆ ಕ್ರಮ: ಸುರೇಶ್ ಕುಮಾರ್

    ಬೆಂಗಳೂರು: ಬದಲಾದ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕಾ ನಿರಂತರತೆಗೆ ಅನುಕೂಲವಾಗುವಂತೆ ಅಂತರ್ಜಾಲ ನೆಟ್‍ವರ್ಕ್ ಸಮಸ್ಯೆಯನ್ನು ಪರಿಹರಿಸುವ ಸಂಬಂಧದಲ್ಲಿ ಸೋಮವಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ರಾಜ್ಯದ ಮುಖ್ಯಕಾರ್ಯದರ್ಶಿಯವರ ಜೊತೆ ಸುದೀರ್ಘವಾಗಿ ಚರ್ಚಿಸಿದ್ದಾರೆ.

    ಈಗಾಗಲೇ ರಾಜ್ಯದ ಮಾಹಿತಿ ತಂತ್ರಜ್ಞಾನ ಸಚಿವರಾದ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಮತ್ತು ಮುಖ್ಯ ಕಾರ್ಯದರ್ಶಿಯವರ ಸೂಚನೆಯಂತೆ ರಾಜ್ಯದಲ್ಲಿ ಮೊಬೈಲ್ ನೆಟ್‍ವರ್ಕ್ ಪೂರೈಕೆದಾರ ಕಂಪನಿಗಳೊಂದಿಗೆ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿಯವರು ಚರ್ಚಿಸಿದ್ದು, ಅವರೆಲ್ಲಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಈ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿಯವರು ಸಚಿವರ ಗಮನಕ್ಕೆ ತಂದಿದ್ದಾರೆ.

    ಪ್ರಸ್ತುತ ಮಳೆಗಾಲವಾದ್ದರಿಂದ ರಾಜ್ಯದ ಮಲೆನಾಡು ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆಯಿಂದಾಗಿ ಮಕ್ಕಳ ಪರ್ಯಾಯ ಬೋಧನಾ ಕ್ರಮಗಳಾದ ಆನ್‍ಲೈನ್ ಬೋಧನಾ ಕ್ರಮ ಇಲ್ಲವೇ ದೂರದರ್ಶನ ಚಂದನಾ ಪಾಠಗಳಿಗೆ ತೊಂದರೆಯಾಗಿರುವುದರಿಂದ ಈ ಕುರಿತು ತ್ವರಿತವಾಗಿ ಗಮನ ಹರಿಸುವುದರ ಅಗತ್ಯವಿದ್ದು, ಮಕ್ಕಳ ಬೋಧನಾ ವಿಧಾನದ ಗುಣಮಟ್ಟವನ್ನು ಕಾಪಾಡಬೇಕಾಗಿದೆ ಎಂದು ತಿಳಿಸಿದ್ದಾರೆ.

    ಕೊರೊನಾ ಕಾಲಘಟ್ಟದಂತಹ ಪರಿಸ್ಥಿತಿಯಲ್ಲಿ ಭೌತಿಕ ಶಾಲಾ ತರಗತಿಗಳು ಆರಂಭವಾಗುತ್ತಿರುವುದು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಪರ್ಯಾಯ ಬೋಧನಾ ಕ್ರಮಗಳನ್ನೇ ಅವಲಂಬಿಸಬೇಕಾಗಿದೆ. ಎಲ್ಲ ಮಕ್ಕಳಿಗೂ ಉತ್ತಮ ಗುಣಮಟ್ಟದ ಬೋಧನೆ ದೊರಕಿಸಿ ಕೊಡುವ ನಿಟ್ಟಿನಲ್ಲಿ ನಾವು ಆನ್‍ಲೈನ್ ವ್ಯವಸ್ಥೆಯನ್ನೇ ನೆಚ್ಚಿಕೊಂಡಿರುವಂತಹ ಸಂದರ್ಭದಲ್ಲಿ ಮೊಬೈಲ್ ನೆಟ್‍ವರ್ಕ್‍ನನ್ನು ಬಲಪಡಿಸುವುದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೂ ಎಲ್ಲರಂತೆ ಶಿಕ್ಷಣ ದೊರೆತು ಕಲಿಕಾ ನಿರಂತರತೆಯಲ್ಲಿ ಅವರನ್ನು ತೊಡಗಿಸಬೇಕಾಗಿದೆ ಎಂದು ಹೇಳಿದ್ದಾರೆ.

    ಈ ಕುರಿತು ಮುಖ್ಯಮಂತ್ರಿಯವರೂ ಸಹ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಯುದ್ಧೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ಮೈಶುಗರ್ ಖಾಸಗೀಕರಣದಲ್ಲಿ ಅಂಧ್ರದ ಕಂಪನಿಯೊಂದಿಗೆ ಬಿಎಸ್‍ವೈ ಕುಟುಂಬ ಶಾಮೀಲು: ಎಎಪಿ

    ಗ್ರಂಥಾಲಯಗಳಲ್ಲಿ ಪಾಠ:
    ಡಿಜಿಟಲ್ ಶಿಕ್ಷಣ ಇಲ್ಲವೇ ಆನ್‍ಲೈನ್‍ನಂತಹ ಪರ್ಯಾಯ ವ್ಯವಸ್ಥೆಯ ಮೂಲಕವೇ ಪ್ರಸ್ತುತ ಪರಿಸ್ಥಿತಿಯಲ್ಲಿ ಮಕ್ಕಳನ್ನು ತಲುಪಬೇಕಾಗಿರುವ ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿಯೂ ಈ ಸೌಲಭ್ಯ ವಂಚಿತ ಮಕ್ಕಳಿಗೆ ಶಿಕ್ಷಣ ಒದಗಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ನುಡಿದಿದ್ದಾರೆ.

    ಈ ಸಂಬಂಧ ಸೋಮವಾರ ಮುಖ್ಯಮಂತ್ರಿಗಳ ಸಲಹೆಗಾರರಾದ ಪ್ರಶಾಂತ್ ಪ್ರಕಾಶ್ ಮತ್ತು ರಾಜ್ಯ ಸರ್ಕಾರದ ಶೈಕ್ಷಣಿಕ ಸಲಹೆಗಾರರಾದ ಪ್ರೊ. ದೊರೆಸ್ವಾಮಿಯವರೊಂದಿಗೆ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಚರ್ಚಿಸಿದ ಸಚಿವರು, ರಾಜ್ಯದಲ್ಲಿರುವ 5,766 ಗ್ರಾಮಪಂಚಾಯತಿ ಗ್ರಂಥಾಲಯಗಳನ್ನು ಬಳಸಿಕೊಂಡು ಅಲ್ಲಿ ಡಿವೈಸರ್ ಅಳವಡಿಸುವ ಮೂಲಕ ದೂರದರ್ಶನ ಇಲ್ಲವೇ ಮೊಬೈಲ್ ವಂಚಿತ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಚರ್ಚಾ ಪ್ರಕ್ರಿಯೆಗಳು ಚಾಲನೆಯಲ್ಲಿವೆ ಎಂದು ತಿಳಿಸಿದ್ದಾರೆ.

    ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಗ್ರಾಮೀಣ ಮಕ್ಕಳ ಶಿಕ್ಷಣ ಮುಂದುವರಿಕೆ ಮತ್ತು ಕಲಿಕಾ ನಿರಂತರತೆಗೆ ಅನುಕೂಲವಾಗುವಂತಹ ಕ್ರಮಗಳನ್ನು ಕೈಗೊಳ್ಳಲು ಇಲಾಖೆ ಮುಂದಾಗಿದೆ ಎಂದಿದ್ದಾರೆ.

    ಶಾಲೆಗಳಲ್ಲಿನ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಉತ್ತಮಗೊಳಿಸುವುದು ಸೇರಿದಂತೆ ಪರಿಣಾಮಕಾರಿ ಶಿಕ್ಷಣ ವ್ಯವಸ್ಥೆ ರೂಪಿಸುವ ಕುರಿತಂತೆ ಎಸ್‍ಎಸ್‍ಎಲ್‍ಸಿ ಪರೀಕ್ಷಾವಧಿ ಮುಗಿದ ಕೂಡಲೇ ಆರ್.ಡಿ.ಪಿ.ಆರ್. ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಶಿಕ್ಷಣ ಇಲಾಖೆಯ ಟಾಸ್ಕ್ ಫೋರ್ಸ್ ಈ ಎಲ್ಲ ಅಂಶಗಳನ್ನು ಅವಲೋಕಿಸಿ ಪ್ರಾಯೋಗಿಕ ಕ್ರಮಗಳ ಕುರಿತಂತೆ ಕ್ರಿಯಾಯೋಜನೆ ರೂಪಿಸಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಇಂದಿನಿಂದ ಅಬ್ಬೆ ಜಲಪಾತ ಪ್ರವಾಸಿಗರಿಗೆ ಮುಕ್ತ

    
    
  • ಚಾಮರಾಜನಗರದಲ್ಲಿ ಮಕ್ಕಳಿಗಾಗಿ 100 ಹಾಸಿಗೆಯುಳ್ಳ ಆಸ್ಪತ್ರೆ ಸಿದ್ಧಪಡಿಸಿ -ಸುರೇಶ್ ಕುಮಾರ್

    ಚಾಮರಾಜನಗರದಲ್ಲಿ ಮಕ್ಕಳಿಗಾಗಿ 100 ಹಾಸಿಗೆಯುಳ್ಳ ಆಸ್ಪತ್ರೆ ಸಿದ್ಧಪಡಿಸಿ -ಸುರೇಶ್ ಕುಮಾರ್

    ಕೋವಿಡ್ ಕ್ಯಾಪ್ಟನ್ ಆಂದೋಲನಕ್ಕೆ ಚಾಲನೆ

    ಚಾಮರಾಜನಗರ: ಕೋವಿಡ್ 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಆರೋಗ್ಯ ಸಮಸ್ಯೆಗಳು ಉದ್ಭವವಾಗಬಹುದೆಂಬ ತಜ್ಞರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವ ಸಚಿವ ಎಸ್.ಸುರೇಶ್ ಕುಮಾರ್, ಚಾಮರಾಜನಗರದಲ್ಲಿ ಮಕ್ಕಳಿಗಾಗಿ 100 ಹಾಸಿಗೆಯುಳ್ಳ ಆಸ್ಪತ್ರೆಯನ್ನು ಕೂಡಲೇ ಸಿದ್ಧ ಪಡಿಸಬೇಕೆಂದು ನಿರ್ದೇಶನ ನೀಡಿದರು.

    ಇಂದು ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಮಕ್ಕಳ ಆರೋಗ್ಯಕ್ಕೆ ಸಮಸ್ಯೆಯಾಗಬಾರದು. ತಜ್ಞರ ಸಲಹೆಗಳನ್ನು ಆಡಳಿತ ಯಂತ್ರ ಗಂಭೀರವಾಗಿ ಪರಿಗಣಿಸಬೇಕು. ಈಗಿನಿಂದಲೇ ಸಿದ್ಧತೆ ಆರಂಭಿಸಬೇಕು ಎಂದರು.

    ಕೋವಿಡ್ ಕ್ಯಾಪ್ಟನ್: ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಸೋಂಕು ತಡೆಗಾಗಿ, ಸೋಂಕಿತರು ಕೋವಿಡ್ ಕೇರ್ ಕೇಂದ್ರಗಳಿಗೆ ಕಡ್ಡಾಯವಾಗಿ ದಾಖಲಾಗುವ ಕ್ರಮಗಳನ್ನು ಜಾರಿಯಲ್ಲಿಡಬೇಕೆಂದು ಸೂಚನೆ ನೀಡಲಾಗಿದೆ ಎಂದ ಸಚಿವರು, ಜಿಲ್ಲೆಯ 130 ಗ್ರಾಮ ಪಂಚಾಯಿತಿಗಳಲ್ಲಿ ಪರಿಣಾಮಕಾರಿಯಾಗಿ ಕೋವಿಡ್ ಮುಕ್ತ ಗ್ರಾಮ ಗುರಿಗೆ ಕೋವಿಡ್ ಕ್ಯಾಪ್ಟನ್ ಆಂದೋಲನಕ್ಕೆ ಇಂದಿನಿಂದ ಚಾಲನೆ ನೀಡಲಾಗಿದೆ ಎಂದು ಹೇಳಿದರು.

    ಜಿಲ್ಲೆಯ 130 ಗ್ರಾಮ ಪಂಚಾಯಿತಿಗಳಿಗೂ ಕೋವಿಡ್ ಕ್ಯಾಪ್ಟನ್‍ಗಳನ್ನಾಗಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರನ್ನು ನೇಮಕ ಮಾಡಲಾಗಿದೆ. ಇವರೊಂದಿಗೆ ವೈದ್ಯಾಧಿಕಾರಿಗಳು, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಜೊತೆಗಿದ್ದು, ಈ ಎಲ್ಲಾ ತಂಡಗಳ ಸೂಪರ್ ಕ್ಯಾಪ್ಟನ್ ಆಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಉಸ್ತುವಾರಿ ವಹಿಸಲಿದ್ದಾರೆ. ತಂಡಗಳು ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಯ ಗ್ರಾಮಗಳಲ್ಲಿ ವಾಹನಗಳ ಮೂಲಕ ಸಂಚಾರ ಮಾಡಿ ಸೋಂಕಿತರನ್ನು ಕೋವಿಡ್ ಕೇರ್ ಕೇಂದ್ರಕ್ಕೆ ಕರೆತರುವಿಕೆ, ಜಾಗೃತಿ, ಮುನ್ನೆಚ್ಚರಿಕೆ ಕ್ರಮಗಳು, ಸ್ಯಾನಿಟೈಜೇಷನ್ ಬಗ್ಗೆ ನಿಗಾ ವಹಿಸಲಿದ್ದಾರೆ. ಇಂದು ಜಿಲ್ಲಾಮಟ್ಟದಲ್ಲಿ ಕೋವಿಡ್ ಕ್ಯಾಪ್ಟನ್ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ನಾಳೆಯಿಂದ ತಾಲೂಕು ಮಟ್ಟದಲ್ಲಿಯೂ ಕೋವಿಡ್ ಕ್ಯಾಪ್ಟನ್ ಆಂದೋಲನಕ್ಕೆ ಚಾಲನೆ ನೀಡಲು ನಿರ್ಧಾರ ಕೈಗೊಳ್ಳಲಾಯಿತು ಎಂದು ನುಡಿದರು.

    ಮೂರನೇ ಅಲೆಯ ಕುರಿತಂತೆ ಅಧ್ಯಯನ: 3ನೇ ಅಲೆಯ ಸಂದರ್ಭವನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸಿದ್ದತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಚಾಮರಾಜನಗರದ ವೈದ್ಯಕೀಯ ಕಾಲೇಜಿನ ಡೀನ್ ಅವರು, ಮಕ್ಕಳ ತಜ್ಞರೊಂದಿಗೆ 3ನೇ ಅಲೆಯ ಕುರಿತು ವಿವರವಾಗಿ ಅಧ್ಯಯನ ಮಾಡಿ ಮುಂದಿನ ಟಾಸ್ಕ್ ಪೋರ್ಸ್ ಸಭೆಯ ವೇಳೆಗೆ ಸ್ಪಷ್ಟ ಚಿತ್ರಣ ನೀಡುವಂತೆ ಸೂಚಿಸಲಾಗಿದೆ. ಅವರ ಅಧ್ಯಯನ ವರದಿಯ ಪ್ರಕಾರ ಮುಂದಿನ ನೀತಿ ನಿರೂಪಣೆಗೆ ಮುಂದಾಗುತ್ತೇವೆ ಎಂದು ಸಚಿವರು ಹೇಳಿದರು.

    ಮಕ್ಕಳ ವಿಭಾಗಕ್ಕೆ ವೈದ್ಯಕೀಯ ಕಾಲೇಜು: ವೈದ್ಯಕೀಯ ಕಾಲೇಜಿನ ನೂತನ ಆಸ್ಪತ್ರೆಯ ಕಟ್ಟಡಕ್ಕೆ ಹೆರಿಗೆ ಶಿಶು ಆರೈಕೆ ವಿಭಾಗ ಸ್ಥಳಾಂತರವಾಗುತ್ತಿದೆ. ಈ ಕಟ್ಟಡದ ಮೇಲ್ಭಾಗದಲ್ಲಿಯೇ 100 ಹಾಸಿಗೆಗಳ ಮಕ್ಕಳ ವಿಭಾಗವನ್ನು ಸಿದ್ದಪಡಿಸಬಹುದಾಗಿದೆ. ಇದರ ಜೊತೆಗೆ ಮಕ್ಕಳಿಗಾಗಿಯೇ ಕೋವಿಡ್ ಕೇರ್ ಕೇಂದ್ರವನ್ನು ಮಾಡುವ ಸಂಬಂಧ ಕ್ರಮ ವಹಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

    ಸೋಂಕು ತಡೆಗಾಗಿ ಹೋಂ ಐಸೋಲೇಷನ್‍ಗೆ ಅವಕಾಶ ನೀಡದೇ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸಬೇಕೆಂಬ ಮಹತ್ವರ ತೀರ್ಮಾನವನ್ನು ಕಳೆದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಕೈಗೊಂಡ ಪರಿಣಾಮ 400 ಹಾಸಿಗೆಗಳಷ್ಟೇ ಭರ್ತಿಯಾಗಿದ್ದ ಕೋವಿಡ್ ಕೇರ್ ಸೇಂಟರ್‍ಗಳಲ್ಲಿ ಇಂದು ಪ್ರಸ್ತುತ 1 ಸಾವಿರಕ್ಕೂ ಹೆಚ್ಚು ಸೋಂಕಿತರಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಶೇ. 70ರಷ್ಟು ಸೋಂಕು ಹರಡುತ್ತಿದ್ದು, ನಗರ ಪ್ರದೇಶಗಳಲ್ಲಿ ಸೋಂಕಿತರ ಪ್ರಮಾಣ ಶೇ. 30ರಷ್ಟಿದೆ. ಹೀಗಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಹೋಂ ಐಸೋಲೇಷನ್‍ಗೆ ಅವಕಾಶ ನೀಡದೇ ಕಡ್ಡಾಯವಾಗಿ ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲು ಮಾಡುವ ಪ್ರಕ್ರಿಯೆಯನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಅನುಸರಿಸಬೇಕೆಂಬ ಒಮ್ಮತದ ನಿರ್ಧಾರವನ್ನು ಕಾರ್ಯಪಡೆ ಕೈಗೊಂಡಿತು ಎಂದು ಹೇಳಿದರು.

    ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕು ವ್ಯಾಪಿಸುವುದನ್ನು ಪರಿಣಾಮಕಾರಿಯಾಗಿ ತಡೆಯಲು ಲಾಕ್ ಡೌನ್ ಅನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಲು ಹಾಗೂ ಜನಸಂದಣಿ ತಪ್ಪಿಸಲು ಹಣ್ಣು, ತರಕಾರಿ ಮಾರಾಟ ಅವಧಿಯನ್ನು ತಗ್ಗಿಸಲು ಸಹ ಕಾರ್ಯಪಡೆ ಸಮಿತಿ ತೀರ್ಮಾನ ತೆಗೆದುಕೊಂಡಿದೆ ಎಂದು ಸಚಿವರು ಹೇಳಿದರು.

    ಶಾಸಕರಾದ ಆರ್. ನರೇಂದ್ರ, ಎನ್. ಮಹೇಶ್, ಸಿ.ಎಸ್. ನಿರಂಜನಕುಮಾರ್ ರವರು ಮಾತನಾಡಿ ಕೋವಿಡ್ ನಿಯಂತ್ರಣ ಸಂಬಂಧ ವಿಸ್ತøತವಾಗಿ ತಮ್ಮ ಅಭಿಪ್ರಾಯ, ಸಲಹೆಗಳನ್ನು ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಅವರು ವಿವರಿಸಿ ಲಾಕ್‍ಡೌನ್ ವೇಳೆ ಹಲವಾರು ಬಿಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ 2,400 ವಾಹನಗಳನ್ನು ಜಪ್ತಿ ಮಾಡಲಾಗಿದೆ. 199 ಎಫ್.ಐ.ಆರ್ ದಾಖಲು ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದ ವಿರುದ್ಧ 250 ಪ್ರಕರಣ ದಾಖಲು ಮಾಡಲಾಗಿದೆ ಎಂದರು.

    ಸಭೆಯಲ್ಲಿ ಕೋವಿಡ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ವಿವರವಾಗಿ ಚರ್ಚೆ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ವೈದ್ಯಕೀಯ ಕಾಲೇಜಿನ ಡೀನ್ ಡಾ. ಸಂಜೀವ್, ನೋಡಲ್ ಅಧಿಕಾರಿಗಳಾದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ಬಿ.ಆರ್.ಟಿ ಕ್ಷೇತ್ರ ನಿರ್ದೇಶಕರಾದ ಡಾ. ಸಂತೋಷ್‍ಕುಮಾರ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ, ತಹಶೀಲ್ದಾರ್ ರವಿಶಂಕರ್ ಸೇರಿದಂತೆ ಇತರೆ ಅಧಿಕಾರಿಗಳು ಪಾಲ್ಗೊಂಡರು.